pulwama Hosadiganta


ಇನ್ನೂ ಪುಲ್ವಾಮದ ಘಟನೆಯಲ್ಲಿ ಬಲಿದಾನವಾದ ಸೈನಿಕರ ಚಿತೆ ಆರಿಲ್ಲ, ಬಿಸಿ ಇಳಿದಿಲ್ಲ ಅದರ ಮುನ್ನವೇ ರಣಹದ್ದುಗಳ ಕೇಕೆ ಶುರುವಾಗಿದೆ. ಗಡಿರೇಖೆಯಲ್ಲಿನ ಉಗ್ರರು ನಿರ್ನಾಮವಾಗುವ ಹೊತ್ತಿಗೆ ಇಲ್ಲೇ ಗಡಿ ಒಳಗಿನ ಉಗ್ರರ ಮುಖವಾಡ ಕಳಚಿ ಬೀಳುತ್ತಿದೆ. ದೇಶಕ್ಕೆ ದೇಶವೇ ಒಂದಾಗಿ ನಿಲ್ಲುವ ಸಮಯದಲ್ಲಿ ನಿಂತವರ ಸ್ಥೈರ್ಯ ಕುಗ್ಗಿಸುವ, ಮೋದಿಯನ್ನು ಹಣಿಯಲು ಅವಕಾಶ ಸಿಕ್ಕಿತೆಂದು ದೇಶದ ಮಾನವನ್ನೇ ಹರಾಜು ಹಾಕುತ್ತಿರುವ ಪಡೆ ಅಟ್ಟಹಾಸ ಮಾಡುತ್ತಿದೆ. ಯೋಧರ ಬಲಿದಾನವನ್ನು ಅವಮಾನ ಮಾಡಿ ಉಗ್ರನ ಸಾವಿಗೆ ಸಂತಾಪ ಸೂಚಿಸುತ್ತಿದೆ. ಗಡಿ ಆಚೆಯ ಶತ್ರುಗಳನ್ನು ಎದುರಿಸಬಹುದು ಈ ಒಳಗಿನ ಶತ್ರುಗಳದ್ದೇ ಕಷ್ಟ.

ಆಗೆಲ್ಲಾ ಇಸ್ರೇಲ್ ನೆನಪಾಗುತ್ತದೆ. ಪುಟ್ಟ ದೇಶದ ಸ್ವಾಭಿಮಾನ ಕಣ್ಣೆದೆರು ಕಾಣಿಸುತ್ತದೆ, ಜೊತೆ ಜೊತೆಗೆ ನಮಗ್ಯಾಕೆ ಸಾಧ್ಯವಿಲ್ಲ ಅನ್ನುವ ಪ್ರಶ್ನೆಯೂ ಕಾಡುತ್ತದೆ. ಇಡೀ ಜಗತ್ತಿನಲ್ಲಿ ಅಧಿಕ ಶಸ್ತ್ರಾಸ್ತ ಖರೀದಿಸುವ ಪಟ್ಟಿಯಲ್ಲಿ ಜಾಗ ಪಡೆದು ಭಾರತ ಯಾಕೆ ಸುಮ್ಮನಿದೆ ಎನ್ನುವ ರೋಷವೂ, ಯುದ್ಧ ನಡೆಸಿ ಪಾಕಿಸ್ತಾನವನ್ನು ಧೂಳಿಪಟ ಮಾಡಬಾರದೆ ಅನ್ನುವ ಆಕ್ರೋಶವೂ ಸಾಮಾನ್ಯರನ್ನು ಕಾಡುವ ಹೊತ್ತಿಗೆ, ರಕ್ತ ಕುದಿಯುವ, ಸಂಕಟ ಉರಿಯುವ ಸಮಯದಲ್ಲೇ ಅದಕ್ಕೆ ತುಪ್ಪ ಸುರಿಯುವಂತೆ ಮಾಡುವುದು  ಉಗ್ರರನ್ನು ಯೋಧರಿಗೆ, ಯೋಧರನ್ನು ಉಗ್ರರಿಗೆ ಹೋಲಿಸಿ ಮಾತಾಡುವವರ ದೊಡ್ಡ ಪಡೆಯೇ ಇದೆ. ಮತ್ತು ಅವರೆಲ್ಲರೂ ಉನ್ನತ ಹುದ್ದೆಗಳಲ್ಲಿ , ರಾಜಕೀಯ ಪಕ್ಷದಲ್ಲಿ, ಬೋಧಿಸುವ ಸ್ಥಾನದಲ್ಲಿ, ಸೆಲೆಬ್ರಿಟಿ ಎಂದು ಹೆಸರು ಮಾಡಿರುವ ಪಟ್ಟಿಯಲ್ಲಿ ಇರುವವರೇ. ಅದನ್ನು ನೋಡುತ್ತಿದ್ದ ಹಾಗೆ ಯಾಕೆ ನಮಗೆ ಇಸ್ರೇಲ್ ನಂತೆ ಆಗಲು ಸಾಧ್ಯವಿಲ್ಲ ಎನ್ನುವುದು ಅರ್ಥವಾಗಿ ಬಿಡುತ್ತದೆ.

ಘಟನೆ ನಡೆದು ದೇಶಕ್ಕೆ ದೇಶವೇ ಸಾವರಿಸಿಕೊಳ್ಳುವ ಮುನ್ನವೇ. ಉಗ್ರ ಸಂಘಟನೆ ಇದು ತನ್ನದೇ ಹೊಣೆ ಎಂದು ಒಪ್ಪಿಕೊಂಡ ನಂತರವೂ, ಉಗ್ರ ತಾನು ಸ್ವತ ಮಾಡಿದ ವೀಡಿಯೊ ನೋಡಿದ ಬಳಿಕವೂ ಇದು ಮೋದಿಯ ವೈಫಲ್ಯವೇ ಒಪ್ಪಿಕೊಳ್ಳಿ ಎಂದು, ಚುನಾವಣಾ ತಯಾರಿಗಾಗಿ ಮೋದಿಯೇ ಮಾಡಿಸಿದ್ದಾರೆ ಎಂದು ಬಾಯಿ ಬಡಿದುಕೊಳ್ಳುವ ಜನರನ್ನು ನೋಡಿದಾಗಲೆಲ್ಲ ಪಾಕಿಸ್ತಾನದಲ್ಲಿರುವ ಉಗ್ರರಿಗಿಂತ ನಮ್ಮಲ್ಲೇ ಜಾಸ್ತಿ ಇದ್ದಾರೆ ಅನ್ನಿಸುತ್ತದೆ. ನಿನ್ನೆ ನಡೆದ ಸೈನ್ಯದ ಕಾರ್ಯಾಚರಣೆ ವೇಳೆ ಕಲ್ಲು ತೂರಾಟ ಮಾಡಿ ಅವರನ್ನು ತಡೆಯುವ ಜನರನ್ನು ಗಮನಿಸಿದರೆ ಗೊತ್ತಾಗುವುದಿಲ್ಲವೇ ವೈಫಲ್ಯ ಎಲ್ಲಿತ್ತು ಎಂಬುದು? ಮೋದಿಯನ್ನು ಹಣಿಯಲು ಅವಕಾಶ ಸಿಕ್ಕಿತು ಎಂದು ಬೊಬ್ಬೆ ಹೊಡೆಯುವವರಿಗೆ ತಾವು ಬಯಲಿಗೆ ಬಂದು ಬೆತ್ತಲಾಗುತ್ತಿರುವುದು ಅರಿವಿಗೆ ಬರುತ್ತಿಲ್ಲ. ಈಗ ಬುಧ್ಹಿಜೀವಿಗಳು ಏನು ಹೇಳಿದರೂ ಕೇಳುವ ನಂಬುವ ಜನ ಮೊದಲಿನಷ್ಟು ಇಲ್ಲ. ಹಾಗಾಗಿಯೇ ಅವರಿಗೆ ಮೋದಿ ಮತ್ತೊಮ್ಮೆ ಬಂದರೆ ತಮ್ಮ ಅಸ್ತಿತ್ವವೇ ಕಳೆದು ಹೋದರೆ ಅನ್ನುವ ಅಭದ್ರತೆ ಕಾಡುತ್ತಿದೆಯಾ? ಈ ವೈಯುಕ್ತಿಕ ಅನುಭವವನ್ನೇ ಸಾರ್ವತ್ರಿಕಗೊಳಿಸಿ ರಕ್ಷಣೆ ಇಲ್ಲ ಎಂದು ಬೊಬ್ಬಿರಿಯುತ್ತಿರುವುದಾ...

ಎಲ್ಲಿಯ 56 ಇಂಚು ಮೋದಿಯ ಎದೆ ಅನ್ನುವುವರದೂ ಇದೇ ಪಾಡು. ಮೊನ್ನೆ ನಡೆದ ಧಾಳಿ ಚುನಾವಣ ಗಿಮಿಕ್ ಆದರೆ ಹಿಂದೆ ನಡೆದ ಧಾಳಿಗಳ ಉದ್ದೇಶವೂ ಅದೇ ಆಗಿರಬಹುದಲ್ಲವೇ? ಕಾರ್ಗಿಲ್ ಅಲ್ಲಿ ನಡೆದದ್ದು ಅತಿಕ್ರಮಣ ಅನ್ನೋದೂ ತಿಳಿಯದ ಇವರು ಇದು ಗಿಮಿಕ್ ಎನ್ನುವ ಮಟ್ಟಕ್ಕೆ ಹೋಗಿದ್ದಾರೆ ಎಂದರೆ ಮೋದಿಯನ್ನು ಹಣಿಯಲು, ಅವರ ವೈಫಲ್ಯ ಎಂದು ಬಿಂಬಿಸಿ ಅಸಮರ್ಥ ಎಂದು ನಿರೂಪಿಸಲು ಅವರೇ ಮಾಡಿರಬಹುದು ಎನ್ನುವ ಸಂದೇಹವೂ ಬರುವುದಿಲ್ಲವೇ... ಪ್ರತಿಕಾರ ಸಿದ್ಧ ಎನ್ನುವ ಪ್ರಧಾನಿಯ ಮಾತು ಬಂದ ಕೊಡಲೇ ಶಾಂತಿಗಾಗಿ, ಮಾತುಕತೆಯ ಮೂಲಕ ಪರಿಹಾರ ಮಾಡಿಕೊಳ್ಳಲು, ಜನಮತ ಸಂಗ್ರಹಿಸಲು ಹೇಳುವುದು ನೋಡಿದರೆ ಇನ್ನಷ್ಟು ಪುರಾವೆ ಸಿಗುವುದಿಲ್ಲವೇ? ಪ್ರತಿಯೊಬ್ಬರ ರಕ್ತವೂ ಕುದಿಯುವಾಗ  ಸತ್ತ ಸೈನಿಕರ ಜಾತಿ ಹುಡುಕುವ ಇವರೇ ಜಾತ್ಯಾತೀತದ ಬಗ್ಗೆ ಪುಂಖಾನುಪುಂಖವಾಗಿ ಭಾಷಣ ಬಿಗಿಯುವುದು.

ಇದರ ಮುಂದುವರಿದ ಭಾಗವಾಗಿ ಬಂದಿದ್ದೆ ಜನಮತ ಸಂಗ್ರಹ ಅನ್ನುವ ಸಲಹೆ. ಯಾರ ಜನಮತ ಎಂದು ಕೇಳಿನೋಡಿ ಅದಕ್ಕೆ ಉತ್ತರ ಸರಿಯಾಗಿ ಬರುವುದಿಲ್ಲ. ಒಂದು ಕಾಲದ ಮೂಲ ನಿವಾಸಿಗಳಾಗಿದ್ದ ಕಾಶ್ಮೀರಿ ಪಂಡಿತರನ್ನು ಅಲ್ಲಿಂದ ಚಿತ್ರಹಿಂಸೆ ಕೊಟ್ಟು ಓಡಿಸಿ ಕೊಂದು ಜಾಗವನ್ನು ಆಕ್ರಮಿಸಿದವರ ಮತ ಯಾರ ಪರವಾಗಿ ಬರುತ್ತದೆ ಎಂದು ಅರಿಯದಷ್ಟು ಸರ್ಕಾರ ಮೂರ್ಖವೇ? ಸೈನ್ಯದ ದಬ್ಬಾಳಿಕೆಯಿಂದ ನೊಂದು ಉಗ್ರರಾದರು ಎಂದು ಹೇಳುವ ಇವರ ಮಾತೆ ನಂಬುವುದಾದರೆ ಪಂಡಿತರು ಇನ್ಯಾವ ಪ್ರಮಾಣದಲ್ಲಿ ಉಗ್ರರಾಗಬೇಕಿತ್ತು ಎಂದು ಕೇಳಿ ಉಸಿರುಎತ್ತುವುದಿಲ್ಲ. ಅಲ್ಲಿಗೆ ಇವರ ಕಾಳಜಿ, ಅನುಕಂಪ ಎಲ್ಲವೂ ಯಾರ ಪರ ಎಂದು ಅರ್ಥವಾಗಿ ಹೋಗುತ್ತದೆ. ಈ ಜನಮತ ನಾಟಕದ ಹಿಂದಿನ ಉದ್ದೇಶ ಗೊತ್ತಾಗಿಬಿಡುತ್ತದೆ.

ಸತ್ತವರ ಜಾತಿ ಹುಡುಕಿ ಎಲ್ಲಿ ಬ್ರಾಹ್ಮಣರು ಎಲ್ಲಿದ್ದಾರೆ ಎಂದು ಬರೆದುಕೊಳ್ಳುವ ಜನಗಳಿಗೆ ಅಲ್ಲಿ ಜಾತಿ ಆಧಾರಿತವಾಗಿ ಬಸ್ ನಲ್ಲಿ ಕೂರಿಸಿ ಕಳಿಸಿಲ್ಲ ಅನ್ನುವ ಸತ್ಯ ಗೊತ್ತಿಲ್ಲವೇ ಎಂದರೆ ಗೊತ್ತು, ಪ್ರತಿಯೊಬ್ಬನೂ ಗುರುತಿಸುವುದು ಯೋಧ ಎಂದೇ ಹೊರತು ಜಾತಿಯಿಂದಲ್ಲ ಅನ್ನುವುದೂ ಗೊತ್ತಿದೆ. ಆದರೆ ಯಾವುದೋ ಋಣವೋ ಅಥವಾ ಭಯವೋ  ಹಾಗೆ ಮಾತಾಡುವ ಹಾಗೆ ಪ್ರೇರಪಿಸುತ್ತಿದೆಯಾ.. ಉಗ್ರರಿಗೆ ಕರುಣೆ ತೋರಿ ಶಾಂತಿ ಸಮಾಧಾನ ಮಾತಾಡಬೇಕು ಸೈನಿಕರ ಸಾವು ತಡೆಯಬೇಕು ಎಂದು ಹೇಳುವ ಇವರು ಒಳಗಿನ ಜನರಲ್ಲಿ ಹುಟ್ಟು ಹಾಕುವುದು ಮಾತ್ರ ಅಶಾಂತಿಯೇ. ಭಯೋತ್ಪಾದನೆಗೆ ಧರ್ಮವಿಲ್ಲ ನಿಜ ಆದರೆ ಭಯೋತ್ಪಾದಕರು ಮಾತ್ರ ಒಂದೇ ಕೋಮಿಗೆ ಸೇರಿದವರಲ್ಲವೇ ಎಂದರೆ ಯಾರೋ ಮಾಡುವ ತಪ್ಪಿಗೆ ಒಂದಿಡೀ ಕೋಮು ಹಳಿಯುವುದು ತಪ್ಪು ಎನ್ನುವ ಇವರು ಮಾತ್ರ ಇಡೀ ಒಂದು ಜಾತಿಯನ್ನು ಹಳಿಯಬಹುದು. ಒಂದು ಪಕ್ಷವನ್ನು ಹೊಣೆ ಮಾಡಬಹುದು.

ಪ್ರತಿಯೊಬ್ಬ ಸೈನಿಕನ್ನೂ ಕೆಲಸ ಮಾಡುವುದು ದೇಶಕ್ಕಾಗಿ. ಯಾವ ಪಕ್ಷವೂ, ಸಿದ್ಧಾಂತವೂ ಅವನನ್ನು ಕಾಡುವುದಿಲ್ಲ. ಆದರೆ ಒಂದು ಪಕ್ಷವನ್ನೋ, ವ್ಯಕ್ತಿಯನ್ನೋ, ಸಿದ್ಧಾಂತವನ್ನೋ ಸಮರ್ಥಿಸುವ ಅನಿವಾರ್ಯತೆಗೆ ಸಿಲುಕಿ ದೇಶದ ವಿರುದ್ಧ ಮಾತಾಡುವವರ ಕಂಡಾಗ ಈ ದೇಶಕ್ಕೆ ಸ್ವತಂತ್ರ ಬಂದರೂ ಗುಲಾಮಿತನ ಮಾತ್ರ ಹೋಗಿಲ್ಲ ಎನ್ನುವ ಸತ್ಯ ಅರಿವಾಗುತ್ತದೆ. ಕುತಂತ್ರಿಗಳಿಗೆ ತಂತ್ರ ಮಾಡುವ ಹಕ್ಕಿದ್ದರೆ ಈಶ್ವರನಿಗೆ ಲೋಕತಂತ್ರದ ಹಕ್ಕಿಲ್ಲವೇ ಎಂದು ಕೇಳಿದವನು ಶ್ರೀ ಕೃಷ್ಣ. ಎಲ್ಲಾ ಸಮಯದಲ್ಲೂ ದಯೆ, ಕರುಣೆ ಅಹಿಂಸೆ ಉತ್ತರವಲ್ಲ, ಉತ್ತರವಾಗಬಾರದು ಕೂಡಾ.  ನಾಯಕನಾದವನು ಹೂವಿನಂತೆ ಮೃದುವಾಗಿದ್ದರಷ್ಟೇ ಸಾಲದು ವಜ್ರದಂತೆ ಕಠಿಣನೂ ಆಗಿರಬೇಕು. ಯಾರಿಗೆ ಯಾವ ಭಾಷೆಯಲಿ ಹೇಳಿದರೆ ಅರ್ಥವಾಗುತ್ತದೋ ಆ ಭಾಷೆಯಲ್ಲಿಯೇ ಉತ್ತರಿಸುವುದು ಉತ್ತಮ ನಾಯಕನ ಲಕ್ಷಣ. ಅದನ್ನು ಬೆಂಬಲಿಸುವುದು ನಮ್ಮೆಲ್ಲರ ಕರ್ತವ್ಯ.

ವೈಫಲ್ಯವನ್ನು ಪ್ರಶ್ನಿಸುವುದಕ್ಕೂ , ಟೀಕಿಸುವುದಕ್ಕೂ ವ್ಯತ್ಯಾಸ ಬಹಳವಿದೆ. ಮನೆಯಲ್ಲೊಂದು ದುರಂತ ನಡೆದಾಗ ಮೊದಲು ಬಾಗಿಲು ಭದ್ರಪಡಿಸಿ ನೊಂದವರ, ಗಾಯಗೊಂಡವರ ಆರೈಕೆ ಮಾಡಬೇಕೆ ವಿನಃ ಬೀದಿಯ ಬಾಗಿಲು ತೆರೆದು ಅಂದು ಎಂದೋ ಬೈದ ಯಜಮಾನನನ್ನು ಟೀಕಿಸುವುದಲ್ಲ. ಅದಕ್ಕೆ ಸಮಯವಿದೆ. ಯಾವ ಸಮಯದಲ್ಲಿ ಹೇಗೆ ವರ್ತಿಸಬೇಕು ಎನ್ನುವುದು ತಿಳಿಯದವರೂ ಮಾನವೀಯತೆ ಪಾಠ ಮಾಡುವಾಗ ಮಾತ್ರ ಕೋಪದ ಜೊತೆಗೆ ನಗುವೂ ಬರುತ್ತದೆ. ಸಿದ್ಧಾಂತ, ಅಭಿಪ್ರಾಯ ಭೇಧಗಳು ದೇಶದ ಐಕ್ಯತೆಗೆ ಮಾರಕವಾಗಬಾರದು ಎನ್ನುವುದೂ ತಿಳಿಯದ ಜನರನ್ನು ಕಂಡಾಗ ನಾವು ಕೇವಲ ನರಸತ್ತ ಇತಿಹಾಸವನ್ನು ಮಾತ್ರ ಓದುತ್ತಿಲ್ಲ ನರಸತ್ತ ವ್ಯಕ್ತಿತ್ವವನ್ನು ಬೆಳಸಿಕೊಳ್ಳುತ್ತಿದ್ದೇವೆ ಎನ್ನುವುದು ಅರಿವಾಗಿ ಮೈ ನಡುಕ ಹುಟ್ಟುತ್ತದೆ. ಅಲ್ಲೆಲ್ಲೋ ಶಿಕ್ಷಕಿಯೇ ಶತ್ರು ದೇಶದ ವಿರುದ್ಧ ಜೈಕಾರ ಹಾಕುತ್ತಾಳೆ ಎಂದಾಗ ಅದಕ್ಕೆ ಉದಾಹರಣೆ ಸಿಕ್ಕಿ ಇನ್ನಷ್ಟು ಭಯವಾಗುತ್ತದೆ.

ಯುದ್ಧ ಯಾರಿಗೂ ಬೇಕಿಲ್ಲ, ಅಮಾಯಕರ ಸಾವು ಯಾರೂ ಬಯಸುತ್ತಿಲ್ಲ. ಆದರೆ ಒಂದು ಕೆನ್ನೆಗೆ ಹೊಡೆದರೆ ಇನ್ನೊಂದು ಕೆನ್ನೆಯನ್ನು ತೋರಿಸುವುದು ಒಳ್ಳೆಯತನವಲ್ಲ ಹೇಡಿತನ. ನಮ್ಮನ್ನು ನಾವು ರಕ್ಷಿಸಿಕೊಂಡಾಗ, ಬದುಕಿದಾಗ ಮಾತ್ರ ದಯೆ ಅನುಕಂಪ ಮಾನವೀಯತೆ ಅನ್ನುವ ಪದಗಳ ಬಳಸಲು ಸಾಧ್ಯವೇ ಹೊರತು ನಾವೇ ಇಲ್ಲವಾದಾಗ ಅಲ್ಲ. ಇದು ಕ್ಷಾತ್ರತ್ವದ ನೆಲ. ಇನ್ನೊಬ್ಬರ ಮೇಲೆ ಧಾಳಿ ಮಾಡದೆ ಹೋದರೂ ತನ್ನ ಮೇಲೆ ಧಾಳಿ ಮಾಡಿದವರ ಹುಟ್ಟು ಅಡಗಿಸಿದ ನೆಲ. ನಾವದನ್ನ ನಮ್ಮ ಸೈನಿಕರಿಗೆ ಬಿಟ್ಟರೆ ಸಾಕು ಅವರು ಅವರ ಕೆಲಸ ನಿರ್ವಹಿಸುತ್ತಾರೆ. ಸಾಧ್ಯವಾದರೆ ಅವರ ಸ್ಥೈರ್ಯ ಹೆಚ್ಚಿಸುವ ಕೆಲಸ ಮಾಡಿದರೆ ಅವರು ಇನ್ನಷ್ಟು ಹುಮ್ಮಸ್ಸಿನಿಂದ ನೆಮ್ಮದಿಯಿಂದ ಪ್ರಾಣ ಒತ್ತೆಯಿಟ್ಟು ಮುಂದಕ್ಕೆ ನುಗ್ಗುತ್ತಾರೆ.

ಕಾಶ್ಮೀರದಲ್ಲಿ ಇಬ್ಬರು ಉಗ್ರರನ್ನು ಹೊಡೆದು ಉರುಳಿಸಿದ ಸೇನೆ ಎನ್ನುವ ಸುದ್ದಿ ಓದಿ ನಿರಾಳವಾಗುವುದೋ ಇಲ್ಲಾ ದೇಶದೊಳಗಿನ ಉಗ್ರರ ಮುಖವಾಡ ಕಳಚಿ ಬೀಳುತ್ತಿರುವುದಕ್ಕೆ ಬೆಚ್ಚಿ ಬೀಳುವುದು ಅನ್ನುವ ಸಂದಿಗ್ಧ ಜಗತ್ತಿನಲ್ಲಿ ಕೇವಲ ಭಾರತೀಯರಿಗೆ ಮಾತ್ರ ಕಾಡುವುದೇನೋ? ಈ ದೇಶಕ್ಕೆ ಹೊರಗಿನ ಶತ್ರುಗಳಿಗಿಂತ ಹಿತ ಶತ್ರುಗಳದ್ದೆ ಅಪಾಯ ಜಾಸ್ತಿ. ಇದು ಅನಾದಿಕಾಲದಿಂದಲೂ ನಡೆದು ಬಂದಿದೆಯಾದರೂ ಈಗ ಸ್ವಲ್ಪ ಹೆಚ್ಚಿದೆಯೇನೋ ಅನ್ನಿಸುತ್ತದೆ. ಒಂದೋ ಜವಾಬ್ದಾರಿಯಿರಬೇಕು ಇಲ್ಲಾ ಭಯವಿರಬೇಕು ಆಗ ಮಾತ್ರ ಸಮಾಜ ಸ್ವಸ್ಥವಾಗಿರಲು ಸಾಧ್ಯ. ಜವಾಬ್ದಾರಿ, ಸ್ವಂತ ಬುದ್ಧಿ ಎರಡೂ ಇಲ್ಲದವರಿಗೆ ಭಯ ಒಂದೇ ಪರಿಹಾರ ಮತ್ತದು ಎಷ್ಟು ಸತ್ಯ ಅನ್ನಿಸಿದ್ದು ಸೈನಿಕರ ಬಗ್ಗೆ ಅವಹೇಳನ ಮಾಡಿ ಬರೆದುಕೊಂಡವರ ಮಾಹಿತಿ ಸಂಗ್ರಹಿಸಿ ಅದನ್ನು ಆಯಾಯ ಮುಖ್ಯಸ್ಥರಿಗೆ ತಲುಪಿಸಿ ಅವರು ಅರೆಸ್ಟ್ ಆದಾಗ, ಹಾಗೂ ಉದ್ಯೋಗ ಕಳೆದುಕೊಂಡಾಗ. ಇಂತಹದೊಂದು ಅಪೂರ್ವ ಘಟನೆ ನಡೆದಿದ್ದು ಬದಲಾಗುತ್ತಿರುವ ಭಾರತಕ್ಕೆ ಸಾಕ್ಷಿಯಾಗಿದೆ.

ಭಾರತ ಬದಲಾಗುವುದು ಎಷ್ಟು ಮುಖ್ಯವೋ ಪಾಕಿಸ್ತಾನಿ ಮನಸ್ಥಿತಿ ಅಳಿಯುವುದೂ ಅಷ್ಟೇ ಮುಖ್ಯ... ಹೊರಗಿನ ಶತ್ರುಗಳ ಜೊತೆಜೊತೆಗೆ ಒಳಗಿನ ಶತ್ರುಗಳೂ ಅಳಿದರೆ ಮಾತ್ರ ನೆಮ್ಮದಿ ಸಾಧ್ಯ. ಜಗತ್ತು ಇರುವತನಕ ಉಗ್ರವಾದವೂ ಇದ್ದೆ ಇರುತ್ತದೆ. ಅದನ್ನು ನಾಶ ಮಾಡಲು ಸಾಧ್ಯವಿಲ್ಲ ನಿಜ ಆದರೆ ನಿಯಂತ್ರಣದಲ್ಲಿ ಖಂಡಿತ ಇಡಬಹುದು.  

Comments

Popular posts from this blog

ಮಾತಂಗ ಪರ್ವತ

ರಂಜದ ಹೂ

ಬರಿದೆ ಆಡುವ ಮಾತಿಗರ್ಥವಿಲ್ಲ...