ಯುದ್ಧ ತಡೆಯುವ ಕೊನೆಯ ಪ್ರಯತ್ನಕ್ಕಾಗಿ ಕೃಷ್ಣ ಸಂಧಾನಕ್ಕೆ ಹೊರಟಿದ್ದ. ಸಂಧಾನ ಸಭೆ ವಿಫಲವಾದ ನಂತರ ಆತಿಥ್ಯ ಸ್ವೀಕರಿಸಲು ಕಾಯುತ್ತಿದ್ದ ಭೀಷ್ಮನ ಕಡೆ ಕಣ್ಣೆತ್ತಿಯೂ ನೋಡದೆ ವಿದುರನ ಮನೆಗೆ ತೆರಳಿದ್ದ. ಭೀಷ್ಮನಿಗೆ ಸಂಕಟವಾಗಿತ್ತು. ಕೃಷ್ಣನ ಈ ನಡೆಯ ಅರ್ಥ ತಿಳಿಯಲು ಅವನನ್ನೇ ಮನದಲ್ಲೇ ಧ್ಯಾನಿಸಿದಾಗ ಅವನು ಪ್ರತ್ಯಕ್ಷನಾದಾಗ ಭೀಷ್ಮ ತನ್ನ ಪ್ರಶ್ನೆ ಕೇಳುತ್ತಾನೆ. ಆಗ ಕೃಷ್ಣ ತಾತ ರಾಜನೀತಿಯ ನಿಯಮಗಳಂತೆ ನಡೆಯುವುದು ಅರಸರಿಗೆ, ಅರಸು ಬಾಂಧವರಿಗೆ ಎಷ್ಟು ಭಾಧ್ಯವೋ ಜಗದೀಶ್ವರನೇ ಅವತರಿಸಿ ಬಂದರೂ ಅವನಿಗೆ ಅಷ್ಟೇ ಭಾಧ್ಯ ಅನ್ನುತ್ತಾನೆ. ದ್ವೇಷಿಗಳ ಮನೆಯಲ್ಲಿ ಉಣ್ಣಬಾರದು ಎನ್ನುವ ರಾಜನೀತಿಯ ಅರ್ಥ ಭೀಷ್ಮನಿಗೆ ಅರಿವಾದರೂ ತನ್ನನ್ನು ಆ ಸಾಲಿಗೆ ಸೇರಿಸಿದ ಕೃಷ್ಣನ ಮೇಲೆ ಕೋಪವೂ ದುಃಖವೂ ಎರಡೂ ಉಂಟಾಗಿ ಇಬ್ಬರಿಗೂ ಸಮನಾದ ನನ್ನನ್ನು ಒಂದು ಗುಂಪಿಗೆ ಸೀಮಿತ ಗೊಳಿಸುವುದು ತರವೇ ಎಂದು ಮತ್ತೆ ಪ್ರಶ್ನಿಸುತ್ತಾನೆ. ಅವನಿಗೆ ತನ್ನನ್ನು ತಾನು ಶೋಧಿಸಿಕೊಳ್ಳಲು ಹೇಳುತ್ತಲೇ ಕೃಷ್ಣ ಉತ್ತರಿಸುತ್ತಾನೆ. ನಾನು ನಿನ್ನ ಪಾಂಡವ ಪ್ರೀತಿಯನ್ನು ಪ್ರಶ್ನಿಸುತ್ತಿಲ್ಲ, ಪ್ರಶ್ನಿಸುತ್ತಿರುವುದು ನಿನ್ನ ಮಿತಿಮೀರಿದ ಕೌರವ ಪ್ರೀತಿಯನ್ನು ಎನ್ನುತ್ತಲೇ ದುಷ್ಟರನ್ನು ತುಷ್ಟಿಗೊಳಿಸಲು ಯತ್ನಿಸುವ ಎಲ್ಲರೂ ನಿನ್ನಂತೆ ಕರ್ಮಬಂಧನಕ್ಕೆ, ಬುದ್ಧಿಮಾಂದ್ಯಕ್ಕೆ, ಮಾನಸಿಕ ಅಸ್ವಸ್ಥತೆಗೆ ಒಳಗಾದಾರೂ ಎನ್ನುತ್ತಾನೆ...

ದೀಪಿಕಾ ಪಡುಕೋಣೆ JNU ಗೆ ಭೇಟಿಕೊಟ್ಟ ಬಗ್ಗೆ ಅದನ್ನೊಂದು ಸಹಜ ಪ್ರಕ್ರಿಯೆ, ಜೀವಪರ ನಡುವಳಿಕೆ ಎಂದು ಸಮರ್ಥಿಸುವವರ, ಅದನ್ನು ವಿರೋಧಿಸುವವರನ್ನು ಕಂಡು ಟೀಕಿಸುವವರ ಕಂಡಾಗ ಈ ಘಟನೆ ನೆನಪಾಯಿತು. ದೀಪಿಕಾ ಪಡುಕೋಣೆ ಸಾಮಾನ್ಯ ವ್ಯಕ್ತಿ ಖಂಡಿತ ಅಲ್ಲ. ಸೆಲೆಬ್ರಿಟಿ. ಉನ್ನತ ಸ್ಥಾನ ಪಡೆದುಕೊಂಡವರು, ಗಳಿಸಿಕೊಂಡವರ ಪ್ರತಿ ನಡೆ ಅವರ ವೈಯುಕ್ತಿಕ ಅಭಿಪ್ರಾಯ, ಅಭಿವ್ಯಕ್ತಿ ಸ್ವಾತಂತ್ರವಾದರೂ ಅವರನ್ನು ಅಭಿಮಾನಿಸುವ, ಗಮನಿಸುವ ಒಂದು ದೊಡ್ಡ ವರ್ಗದ ಮೇಲೆ ಅದು ಪ್ರಭಾವ ಬೀರುವುದರಲ್ಲಿ ಸಂದೇಹವಿಲ್ಲ. ಹಾಗಿರುವಾಗ ಪ್ರತಿ ನಡತೆಯೂ ವೈಯುಕ್ತಿಕವಾದರೂ ಅಲ್ಲಿ ಸಾಮಾಜಿಕ ಜವಾಬ್ದಾರಿಯಿರುತ್ತದೆ. ಆ ಜವಾಬ್ದಾರಿಯಿದ್ದಾಗ ಪ್ರಬುದ್ಧವಾಗಿ ವರ್ತಿಸುವುದು ಅನಿವಾರ್ಯವಾಗುತ್ತದೆ. ಯಾರೋ ಜನ ಸಾಮಾನ್ಯರು ಅಲ್ಲಿಗೆ ಹೋಗಿ ಯಾರನ್ನೇ ಭೇಟಿ ಮಾಡಿದರೂ ಅದು ಸುದ್ದಿಯಾಗುವುದಿಲ್ಲ, ಸದ್ದೂ ಮಾಡುವುದಿಲ್ಲ. ಹಾಗಾಗಿಯೇ ಪರ ವಿರೋಧ ಅಭಿಪ್ರಾಯಗಳು ಸರ್ವೇ ಸಾಮಾನ್ಯ.

ಕೆಲವೊಮ್ಮೆ ಯಾವುದೋ ಮುಲಾಜಿಗೆ ಒಳಗಾಗಿ  ಇಷ್ಟವೋ, ಕಷ್ಟವೋ ಪ್ರತಿಕ್ರಿಯೆ ನೀಡಲೇ ಬೇಕಾದ ಅನಿವಾರ್ಯತೆ ಎದುರಾಗುತ್ತದೆ. ಅಲ್ಲಿಗೆ ಹೋಗಿಯೂ ಏನೂ ಮಾತಾಡದೆ ಬಂದ ದೀಪಿಕಾ ನಡೆ ನೋಡಿದರೆ ಅನಿವಾರ್ಯತೆಯಾ ಎನ್ನುವ ಸಂದೇಹ ಮೂಡಿ ಅವರ ಮೌನ ಅದಕ್ಕೆ ಪುಷ್ಟಿ ನೀಡುತ್ತದೆ. ಹಾಗಾದಾಗ ಯಾರ ಮುಲಾಜಿನಲ್ಲಿ ಯಾರಿದ್ದಾರೆ, ಆ ಮುಲಾಜು ಎಷ್ಟು ಅನಿವಾರ್ಯ ಅನ್ನುವುದರ ಲೆಕ್ಕಾಚಾರ ಸ್ಪಷ್ಟವಾಗಿ ಗೊತ್ತಿರಬೇಕು. ಒಂದಿಡೀ ಸಮೂಹಕ್ಕೆ ಅದರಿಂದ ಹೋಗುವ ಸಂದೇಶ ಯಾವ ರೀತಿಯದ್ದಾಗಿರುತ್ತದೆ ಎನ್ನುವುದರ ಅರಿವಿರಬೇಕು, ಎದುರಾಗುವ ಪರಿಸ್ಥಿತಿಯನ್ನು ನಿಭಾಯಿಸುವ ಸಾಮರ್ಥ್ಯವಿರಬೇಕು. ಎಲ್ಲಕ್ಕಿಂತ ಮುಖ್ಯವಾಗಿ ತನ್ನ ಸ್ಥಾನಕ್ಕೆ ಅರ್ಹವಾದದ್ದು ತಾನು ಮಾಡುತ್ತಿದ್ದೆನಾ ಎನ್ನುವುದು ಆಲೋಚಿಸಲೇ ಬೇಕು. ಉದ್ದೇಶ ಒಳ್ಳೆಯದೇ ಆದರೂ ಯಾವ ಸಂದರ್ಭದಲ್ಲಿ, ಎಲ್ಲಿ, ಯಾರು ಎನ್ನುವುದು ಬಹು ಮುಖ್ಯವಾಗುತ್ತದೆ.

ಜಗತ್ತಿನ ಪ್ರತಿಯೊಂದಕ್ಕೂ ಎರಡು ಮುಖಗಳು. ಪರ ವಿರೋಧ ಎರಡೂ ಎಲ್ಲಾ ಕಡೆಯಲ್ಲೂ, ಎಲ್ಲಾ ಕಾಲದಲ್ಲೂ ಸರ್ವೇ ಸಾಮಾನ್ಯ. ಎಲ್ಲರನ್ನೂ ಮೆಚ್ಚಿಸಲು ಜಗದೀಶ್ವರನಿಂದಲೂ ಸಾಧ್ಯವಿಲ್ಲ ಎನ್ನುವುದು ಪ್ರಚಲಿತ ಗಾದೆ ಹಾಗೂ ವಾಸ್ತವ ಕೂಡಾ. ಆದರೆ ಆ ಕಾಲಕ್ಕೆ ಯಾವುದು ಸೂಕ್ತವೋ, ಯಾವುದು ಧರ್ಮವೋ ಅದನ್ನು ಮಾಡಬೇಕಾಗಿರುವುದು ಕರ್ತವ್ಯ. ಅದರಲ್ಲೂ ಎತ್ತರದಲ್ಲಿ ನಿಂತವರು ವಿವೇಚನೆಯಿಂದ ನಡೆದುಕೊಳ್ಳಬೇಕಾಗುತ್ತದೆ. ಪ್ರತಿಯೊಬ್ಬರಿಗೂ ಅವರದೇ ಆದ ಅಭಿವ್ಯಕ್ತಿ ಸ್ವಾತಂತ್ರ್ಯ ಇದೆ ಎನ್ನುವುದು ಎಷ್ಟು ನಿಜವೋ ಅದನ್ನು ವ್ಯಕ್ತ ಪಡಿಸುವ ರೀತಿಯಲ್ಲಿ ನಮ್ಮ ಸಂಸ್ಕಾರ ವ್ಯಕ್ತವಾಗುತ್ತದೆ ಎನ್ನುವುದೂ ಅಷ್ಟೇ ನಿಜ. ಯಾರನ್ನೋ, ಹೊಗಳುವ ಇಲ್ಲಾ ತೆಗಳುವ ಭರದಲ್ಲಿ ನಮ್ಮ ವ್ಯಕ್ತಿತ್ವವೂ ಅನಾವರಣವಾಗುತ್ತಾ ಹೋಗುತ್ತದೆ ಎನ್ನುವ ಅರಿವಿದ್ದಾಗ ನಮ್ಮ ವರ್ತನೆ ನಿಯಂತ್ರಣದಲ್ಲಿರುತ್ತದೆ.

ಲಕ್ಷಣ ರೇಖೆಯಿಂದ ಹೊರಬಂದ ಮೇಲೆ ಕೇವಲ ರಾವಣನನ್ನು ತೆಗೆಳುವುದು ತಪ್ಪು..... 

Comments

Popular posts from this blog

ಮಾತಂಗ ಪರ್ವತ

ರಂಜದ ಹೂ

ಬರಿದೆ ಆಡುವ ಮಾತಿಗರ್ಥವಿಲ್ಲ...