ಇರುವುದೆಲ್ಲವ ಬಿಟ್ಟು..

ಶಾಲೆಯಲ್ಲಿ ಭಾವಗೀತೆ ಸ್ಪರ್ಧೆ. ಭಾಗವಹಿಸಿದವರು ಕೆಲವರಾದರೂ ಎಲ್ಲರೂ ಕುಳಿತು ಕೇಳುವ ಅವಕಾಶ. ಒಬ್ಬೊಬ್ಬರೇ ಹಾಡುತ್ತಾ ಹಾಡುತ್ತಾ ಕುಳಿತವರು ಪಿಸುಗುಡುತ್ತಾ ತಮ್ಮ ಲೋಕದಲ್ಲಿ ವಿಹರಿಸುವಾಗಲೇ ಅವಳು ಹಾಡಲು ಶುರುಮಾಡಿದ್ದಳು. ಯಾವ ಮೋಹನ ಮುರಳಿ ಕರೆಯಿತು ಎನ್ನುವಾಗ ಸಣ್ಣಗೆ ಮೌನ ಹಬ್ಬಲು ಶುರುವಾಗಿತ್ತು. ಇರುವುದೆಲ್ಲವ ಬಿಟ್ಟು ಇರದುದರೆಡೆಗೆ ತುಡಿವುದೇ ಜೀವನ ಎನ್ನುವಾಗ ಜೀವನ ಅಂದ್ರೆ ಏನು ಅದರರ್ಥ ನಿಜವಾಗಲು ಏನು ಎಂದು ಗೊತ್ತಾಗದ ವಯಸ್ಸಿನಲ್ಲೂ ಕಣ್ಣಂಚು ಸಣ್ಣಗೆ ಒದ್ದೆಯಾಗಿತ್ತು. ನಿಗೂಢ ಮೌನ ಆವರಿಸಿತ್ತು. ಅದೆಷ್ಟು ಆಳವಾಗಿ ಮನಸ್ಸಿನಲ್ಲಿ ಕುಳಿತಿತ್ತು ಎನ್ನುವುದು ಗೊತ್ತಾಗಿದ್ದು ಪದೇ ಪದೇ ಆ ಸಾಲುಗಳನ್ನು ಗುನುಗುಣಿಸುವಾಗಲೇ..

ಬದುಕಿನ ಮೂಲ ಗುಣವೇ ಅದೇನೋ ಇರುವುದೆಲ್ಲವ ಬಿಟ್ಟು ಮತ್ತೇನನ್ನೋ ಧ್ಯಾನಿಸುವುದು ಹಾಗೂ ಮೋಹನ ಮುರುಳಿಗೆ ಕಾಯುವುದು. ಮೋಹ ಆವರಿಸುವುದಕ್ಕೆ ಏನೋ ಮೋಹನ ಮುರುಳಿ ಅಂತನೇ ಪ್ರಸಿದ್ಧಿ ನೋಡು ಗೆಳತಿ ತುಂಗೆಯ ದಡದಲ್ಲಿ ಕುಳಿತು ಪಿಸುಗುಟ್ಟಿ ನಕ್ಕಿದ್ದಳು. ಒಂದು ಕ್ಷಣ ತುಂಗೆ ಯಮುನೆಯಾಗಿ, ನಾವು ಗೋಪಿಕೆಯರಾಗಿ ಕೇಳಿಸದ ಮುರುಳಿಗೆ ಮೈಯೆಲ್ಲಾ ಕಿವಿಯಾಗಿ ಅಲ್ಲೆಲ್ಲೋ ರೇಡಿಯೋದಲ್ಲಿ ಇರುವುದೆಲ್ಲವ ಬಿಟ್ಟು ಸಾಲು ಕೇಳಿ ಮತ್ತೆ ವಾಸ್ತವಕ್ಕೆ ಮರಳಿ ನೀರಲ್ಲಿ ಇಳಿಬಿಟ್ಟ ಕಾಲು ಎತ್ತಿ ವಾಪಾಸಾಗಿದ್ದೆವು. ರವೀಂದ್ರ ನಾಯಕ್ ಅವರ ಕವನ ಸಂಕಲನ "ಇರುವುದೆಲ್ಲವ ಬಿಟ್ಟು" ಓದುವಾಗ ಮತ್ತೆ ಇದು ನೆನಪಾಯಿತು. ಇರುವುದು ಇದ್ದಲ್ಲೇ ಸಿಕ್ಕುವಾಗ ಅದಕ್ಯಾಕೆ ಹಪಹಪಿಸಬೇಕು ಯಾವಾಗಲೂ ಅಷ್ಟೇ ಬೆರಳ ತುದಿಯಲಿ ಲಭ್ಯವಾಗುವುದಕ್ಕೆ ಅಷ್ಟೇ ಬೆಲೆ ಅಲ್ಲವಾ... ಹಾಗಾದರೆ ಬದುಕು ಲಭ್ಯವಾಗಬೇಕಾ ಅಲಭ್ಯವಾಗಬೇಕಾ ಮನದೊಳಗೆ ಯಮುನೆಯ ಹರಿವು.. ಅಲಭ್ಯವಾದರೆ ತುಡಿತ ಜಾಸ್ತಿಯಾ ಹಾಗಾಗಿಯೇ ಕೃಷ್ಣ ರಾಧೆಗೆ ಅಲಭ್ಯನಾದನಾ? ಅವನು ಅಲಭ್ಯ ನಾಗಿದ್ದಕ್ಕೆ ರಾಧೇ ಅವನಿಗಾಗಿ ಕಾಯುತ್ತಿದ್ದಳಾ... ಯಮುನೆ ಸಾಕ್ಷಿಯಾಗಿ ಹರಿಯುತ್ತಿದ್ದಳಾ...

ಇಡೀ ಕವನ ಸಂಕಲನದಲ್ಲಿ ಒಂದು ಹರಿವು ಇದೆ. ಅದು ಗುಪ್ತಗಾಮಿನಿಯಾಗಿ, ಕೆಲವೊಮ್ಮೆ ಪ್ರತ್ಯಕ್ಷವಾಗಿ ಹರಿಯುತ್ತಲೇ ಇದೆ. ಯಾರಿಗೋ ಕಾಯುತ್ತಿದೆ. ದಕ್ಕಲಾರದು ಎನ್ನುವ ವೇದನೆಯಿದೆ. ಆ ವೇದನೆಯಲ್ಲಿ ಕಾಯುವ ತಪನೆಯಿದೆ. ಬಾರದ ಕೃಷ್ಣನಿಗಾಗಿ ಕಾಯುವ ರಾಧೆಯ ಹರಿವ ಪ್ರೀತಿಯಿದೆ. ಎಲ್ಲೋ ಹುಟ್ಟಿ ಎಲ್ಲೋ ಹರಿದು ಸಮುದ್ರ ಸೇರುವ ನದಿಯ ಸಾರ್ಥಕ ಹರಿವಿದೆ. ಹರಿಯುವಾಗ ಎದುರಿಸಿದ, ಎದುರಿಸಬೇಕಾದ ಸಂಕಷ್ಟದ, ಬಿಟ್ಟು ಮುಂದಕ್ಕೆ ಹೋಗಬೇಕಾದ ಅನಿವಾರ್ಯತೆಯ ನೋವೂ ಇದೆ. ಹಾಗಾಗಿಯೇ ಆ ಅನಿವಾರ್ಯತೆ ಎದುರಾದಾಗ "ಹೇ ಬದುಕೇ ಯಾವ ಆಯ್ಕೆಯನ್ನೂ ನಮ್ಮೆದುರು ಮತ್ತೆ ಇಡದಿರು, ಅನಿವಾರ್ಯತೆಯನ್ನು ಎಂದೋ ಒಪ್ಪಿಕೊಂಡು ಬಿಟ್ಟಿದ್ದೇವೆಇದೆ" ಎನ್ನುವ ಸತ್ಯದರಿವಿನ ಶರಣಾಗತಿಯೂ ಇದೆ. ತಕ್ಷಣ ಸಧ್ಗುರುವಿನ ಮಾತು ನೆನಪಾಯಿತು. ಜಗತ್ತನ್ನು ನಿಮ್ಮಿಷ್ಟದ ಹಾಗೆ ಬದಲಾಯಿಸಲು ಸಾಧ್ಯವಿಲ್ಲ. ಇರುವುದನ್ನು ಒಪ್ಪಿಕೊಳ್ಳಲು ಕಲಿತಾಗ ಚಲನೆ ಸುಗಮವಾಗುತ್ತದೆ.

ಇರುವುದೆಲ್ಲವ ಬಿಟ್ಟು ಇನ್ಯಾವುದಕ್ಕೋ ಹಾತೊರೆದಾಗ ಏನಾಗುತ್ತದೆ? ಇರುವುದನ್ನು ಒಪ್ಪಿಕೊಳ್ಳಲು, ಜೊತೆ ಜೊತೆಗೆ ನೆಮ್ಮದಿಯಾಗಿ ಸಾಗಲು ಕಷ್ಟವಾಗುತ್ತದೆ. ಅದು ದೊರಕದ ಇದು ಇಷ್ಟವಾಗದ ಎತ್ತಲೂ ಸಲ್ಲದವರು ಆಗಿಬಿಡುತ್ತೇವೆ. ಸೇತುವೆಯನ್ನು ಕಟ್ಟಿ ಯಾರದೋ ಹೆಜ್ಜೆಗೆ ಕಾತರಿಸಿ ಕಾಯುವಾಗ ಉಳಿದೆಲ್ಲ ಮರೆತಾಗ ಏನಾಗುತ್ತದೆ? "
ಹೆಜ್ಜೆ ಮೂಡದ ಸೇತುವೆಯ ಕೆಳಗೆ
ಸದ್ದಿಲ್ಲದೇ ಹರಿಯುತ್ತಿದೆ ನೀರಿನ ಬಿಲ್ಲು
ಮತ್ತು ಮೇಲೆ ಚಿಗುರುತ್ತಿದೆ ಗರಿಕೆ ಹುಲ್ಲು.
ಎಷ್ಟೊಂದು ಜೀವಂತಿಕೆ ಅರಳುವುದು ಕಳೆದುಕೊಂಡು ಬಿಡುತ್ತೇವೆ. ಬದುಕಿನ ಸಂಬಂಧಗಳಲ್ಲೂ ಹೀಗೆ ಅಲ್ಲವಾ.. ಹತ್ತಿರದವರಿಗೆ ದೂರವಾಗಿ, ಯಾರೋ ದೂರದವರಿಗೆ ಹತ್ತಿರವಾಗಲು ಪ್ರಯತ್ನಿಸುತ್ತಾ ತ್ರಿಶಂಕು ಸ್ಥಿತಿ ತಲುಪುತ್ತೇವಾ. ಹಾಗಾಗ ಬಾರದು ಎಂದರೆ ಏನು ಮಾಡಬೇಕು. ಇದ್ದದ್ದು ಇದ್ದ ಹಾಗೆ ನೋಡುವುದು ಕಲಿಯಬೇಕು. ಹಾಗೆ ನೋಡಬೇಕಾದರೆ ಪೂರ್ವಾಗ್ರಹ ಎಂಬ ಕನ್ನಡಕ ಕಿತ್ತು ಬಿಸುಡಬೇಕು. 
ತೊಟ್ಟ ಪೊರೆ ಕಳಚಿದರೆ ಮಾತ್ರ
ಬದುಕಿಲ್ಲಿ ಹೊಚ್ಹ ಹೊಸದು
ಇದೀಗ ಕನ್ನಡಕ ತೆಗೆದಿರಿಸಿದ್ದೇನೆ  ಎನ್ನುವ ಕವಿಯ ಸಾಲು ಬದುಕನ್ನು ಎದುರಿಸಲು ಸಿದ್ಧವಾಗುವ ಹೊತ್ತಿಗೆ ಮುಂದೊಮ್ಮೆ ಅದನ್ನು ಧರಿಸುವ ಮನಸ್ಸಾಗಬಹುದು, ಇಲ್ಲವೇ ಕುತೂಹಲಕ್ಕೆ ಮಗ ಅದನ್ನು ಧರಿಸಿ ಜಗವ ಕಾಣಬಹುದು ಎನ್ನುವ ಆತಂಕ. ಹಾಗಗಿಯೇ ಅದನ್ನು "ನನ್ನ ಮಗನಿಗೆ ಸಿಗದ ಹಗೆ ದೂರ ಎಸೆದಿದ್ದೇನೆ" ಎನ್ನುತ್ತಾನೆ. ನಮ್ಮ ಅಭಿಪ್ರಾಯ, ನಮ್ಮ ಆಲೋಚನೆ, ಎಲ್ಲವೂ ನಮ್ಮ ಸ್ವಂತದ್ದು. ಅವರವರ ಸತ್ಯ ಅವರವರೆ ಕಂಡು ಕೊಳ್ಳಬೇಕು ಹೇರಬಾರದು ಅದು ತನ್ನದೇ ರಕ್ತದ ಕುಡಿಯಾದರೂ.. ನಮ್ಮ ಸಂಸ್ಕೃತಿ ಹೇಳುವುದೇ ಇದನಲ್ಲವಾ.. ಆದರೆ ಕಿತ್ತೊಗೆಯುವುದು ಅಷ್ಟು ಸುಲಭವಾ.

ಖಂಡಿತ ಇಲ್ಲ ಯಾಕೆಂದರೆ  ಪರಿಮಳವ ಹೊತ್ತು ತಂದ ಗಾಳಿಯಲ್ಲಿ ಹೂವ ಅರಸುವವರು ನಾವು,  ಬಿಲ್ಲಾಗದೆ ಬಾಣವಾಗಿ ಬತ್ತಳಿಕೆಯಲಿ ಸುಖವಾಗಿ ಇರಲು ಬಯಸುವವರು. ರಾಧೆಯ ಕಾಯುವ ತಾಳ್ಮೆ, ತಪಸ್ಸು ನಮಗಿನ್ನೂ ಬಂದಿಲ್ಲ. ಹರಿಯುವುದು ನಿರಂತರ ಪ್ರಕ್ರಿಯೆಯಾಗಿ ಅಭ್ಯಾಸವಾಗಿಲ್ಲ. ಅನಿವಾರ್ಯವಾಗದ ಹೊರತು ಯಾವುದನ್ನೂ ಆಯ್ಕೆ ಮಾಡಿಕೊಳ್ಳುವ ಚುರುಕುತನ ಮೈಗೂಡಿಸಿಕೊಂಡಿಲ್ಲ, ಮುಂದಿನ ಗುರಿಗಾಗಿ ಗೋಕುಲಕ್ಕೆ ಹೋಗುವ ಧೈರ್ಯ ಒಗ್ಗೂಡಿಲ್ಲ. ಇವೆಲ್ಲವೂ ಸಿದ್ಧಿಸಿಕೊಳ್ಳಬೇಕು. ಹಾಗಾಗಬೇಕು ಎಂದರೆ ಯಮುನೆಯಂತೆ ಸದಾ ಹರಿಯುತ್ತಿರಬೇಕು.

ಅಷ್ಟಕ್ಕೂ ಈ ಮೋಹದ ಲೋಕದಲ್ಲಿ
ಗೊಲ್ಲನೊಬ್ಬ
ಕೃಷ್ಣನಾಗುವುದೆಂದರೆ
ಅದು ಅಷ್ಟು ಸುಲಭದ ಮಾತಲ್ಲ ಬಿಡಿ...
ಇರುವುದೆಲ್ಲ ಬಿಟ್ಟು ಹಾಗಾದರೆ ಇಲ್ಲಿ ತುಡಿಯುವುದು ಯಾವುದಕ್ಕೆ ಜೀವನದ ಸತ್ಯಕ್ಕೆ, ಕೃಷ್ಣನಿಗೆ... ಹಾಗಾಗಿಯೇ ಇಲ್ಲಿ ಇಡೀ ಸಂಕಲನದಲ್ಲಿ ಕೃಷ್ಣ ಇದ್ದಾನೆ. ಕೃಷ್ಣ ಸಿಕ್ಕ ಮೇಲೆ ಇನ್ನೆನಕ್ಕೆ ತಾನೇ ಮನಸ್ಸು ತುಡಿಯುತ್ತದೆ ಹೇಳಿ....  

Comments

Popular posts from this blog

ಮಾತಂಗ ಪರ್ವತ

ರಂಜದ ಹೂ

ಬರಿದೆ ಆಡುವ ಮಾತಿಗರ್ಥವಿಲ್ಲ...