ಶಿವಾಜಿ

ಯಕಶ್ಚಿತ್ ಸಾಮಂತನ ಮಗ ನನ್ನನ್ನೇ ಎದುರಿಸುವ ನನ್ನ ರಾಜ್ಯವನ್ನೇ ವಶಪಡಿಸಿಕೊಳ್ಳುವ ಮಟ್ಟಕ್ಕೆ ಬೆಳೆದು ಬಿಟ್ಟನಲ್ಲ, ಅಂದೇ ಬಾಲಕನಾಗಿದ್ದಾಗ ತಂದೆ ಮುಜುರೆ ಮಾಡಿದರೂ ದಿಟ್ಟಿಸಿ ನೋಡುತ್ತಾ ನಿಂತ ಬಾಗದ ಅವನನ್ನು ಅರ್ಥಮಾಡಿಕೊಳ್ಳಬೇಕಿತ್ತು. ಏನೋ ಹುಡುಗುತನ ಎಂದು ಸುಮ್ಮನಾಗಿದ್ದಕ್ಕೆ ಇಷ್ಟು ದೊಡ್ಡ ಬೆಲೆ ತೆರಬೇಕಾಗುತ್ತದೆ ಎಂದು ಅಂದೇ ಗೊತ್ತಿದ್ದರೆ ಅಲ್ಲೇ ಆ ಸಭೆಯಲ್ಲಿಯೇ ಹೊಸಕಿ ಹಾಕಬಹುದಿತ್ತು. ನಂತರವೂ ಒಂದೆರೆಡು ಕೊಂಡಗಳನ್ನು ವಶಪಡಿಸಿಕೊಂಡಾಗ ಏನೋ ವಯಸ್ಸಿನ ಪುಂಡಾಟ ಎಂದು ಸುಮ್ಮನಿರಬಾರದಿತ್ತು ಈ ಶಿವಾಜಿ ನನ್ನನ್ನೇ ಮೀರಿಸುವ ಹಾಗೆ ಬೆಳೆದುದಲ್ಲದೆ ಈಗ ದೆಹಲಿಯ ನವಾಬರಿಗೆ ಹತ್ತಿರವಾಗುತ್ತಿದ್ದಾನೆ ಇನ್ನು ಸುಮ್ಮನಿರುವುದು ಹೇಡಿತನ ಮಾತ್ರವಲ್ಲ ಎಲ್ಲವನ್ನೂ ಕಳೆದುಕೊಳ್ಳುವ ಮುನ್ಸೂಚನೆ ಕೂಡಾ ಬಿಜಾಪುರದ ಸುಲ್ತಾನ ತನ್ನೊಳಗೆ ಕುದಿಯುತ್ತಿದ್ದ, ದಾರಿಗಾಗಿ ಹುಡುಕುತ್ತಿದ್ದ.

ಸುಲ್ತಾನ ಹೀಗೆ ಯೋಚಿಸುತ್ತಿರುವಾಗಲೇ ಅತ್ತ ಅವನ ಮಲತಾಯಿ ಉಲಿಯಾ ಬಡಿಯಾ ಬೇಗಂ ಸರ್ಪಿಣಿಯಾಗಿದ್ದಳು. ಶಿವಾಜಿಯ ಪುಂಡಾಟ ಅಡಗಿಸಲು ಕ್ರಮ ಕೈಗೊಳ್ಳುವ ಹಾದಿಯಲ್ಲಿದ್ದಳು. ಅದರ ಮೊದಲ ಸೂಚನೆ ಎಂಬಂತೆ ಶಹಾಜಿಗೆ ಪತ್ರ ಬರೆದು ಮಗನನ್ನು ಹದ್ದುಬಸ್ತಿನಲ್ಲಿಡಲು ತಪ್ಪಿದರೆ ಭೀಷಣ ಕ್ರಮದ ಬೆದರಿಕೆ ಒಡ್ಡಿದ್ದಳು. ಪತ್ರವನ್ನು ಓದಿದ ಶಹಾಜಿ ಭಯಗೊಂಡಿರಲಿಲ್ಲ. ಮಗನ ಪ್ರತಾಪದ ಬಗ್ಗೆ ಹೆಮ್ಮೆ ಪಟ್ಟಿದ್ದ. ತನ್ನ ತಲೆಗೆ ಈ ಸಾಮಂತ ಪಟ್ಟ ಕೊನೆಯಾಗಲಿ ಎಂದು ಬಯಸಿದ್ದ. ಯಾವಾಗ ಮೊದಲ ಪ್ರಯತ್ನ ಹುಸಿಯಾಯಿತೋ ಆಗ ಬೇಗಂ ವಿಶೇಷ ದರ್ಬಾರು ಸೇರಿಸಿದಳು.ಎಲ್ಲಾ ಪ್ರಮುಖ ವೀರರು ಹಿಂದೂ ಮುಸಲ್ಮಾನ ಎನ್ನದೆ ಬಂದು ಸೇರಿದರು. ಶಿವಾಜಿಯ ಸದ್ದು ಅಡಗಿಸುವ ವೀರ ಬಂದು ಅಲ್ಲಿದ್ದ ರಣವೀಳ್ಯ ಸ್ವೀಕರಿಸಿ ಎಂದು ಬೇಗಂ ಆಹ್ವಾನ ನೀಡಿದಳು.

ಹೆಸರು ಕೇಳುತ್ತಲೇ ಸಭೆಯ ಸದ್ದು ಅಡಗಿತು. ಎಲ್ಲರ ತಲೆ ಕೆಳಕ್ಕೆ ಬಾಗಿ ಮೌನ ಆವರಿಸಿತು. ಇಡೀ ಸಭೆಯನ್ನು ಮಂಕು ಕವಿಯಿತು. ಆ ಪುಂಡನನ್ನು ಹಿಡಿದು ತರುವ ಒಬ್ಬನೇ ಒಬ್ಬ ವೀರ ಸಾಮ್ರಾಜ್ಯದಲ್ಲಿ ಇಲ್ಲವೇ ಎಂದು ಬೇಗಂ ಯೋಚಿಸುವ ಹೊತ್ತಿಗೆ ಸಭೆಯ ಮಧ್ಯದಿಂದ ಪರ್ವತಾಕಾರದ ಶರೀರ ಎದ್ದು ನಿಂತಿತು. ನಾನು ಶಿವಾಜಿಯನ್ನು ಹಿಡಿದು ತರುವೆ ಎಂದು ಘೋಷಿಸಿ ವೀಳ್ಯ ಸ್ವೀಕರಿಸಿದ ಆ ವ್ಯಕ್ತಿಯನ್ನು ನೋಡುತ್ತಲೇ ಬೇಗಂ ಸಮಾಧಾನದ ನಿಟ್ಟುಸಿರು ಬಿಟ್ಟಳು, ಹೋದ ಕೆಲಸ ಆದ ಹಾಗೆ ಎಂದು ಸಮಾಧಾನ ಪಟ್ಟುಕೊಂಡಳು. ಅದು ಕ್ರೂರತೆಗೆ ಇನ್ನೊಂದು ಹೆಸರು ಎನ್ನುವಂತಿದ್ದ ಅಫಜ್ಹಲ ಖಾನ್, ಅವನ ಹೆಸರು ಕೇಳಿದರೆ ಸುತ್ತಮುತ್ತಲಿನ ರಾಜರು ಯುದ್ಧ ಮಾಡದೆ ಶರಣಾಗತಿ ಬರುತ್ತಿದ್ದರು. ಸ್ವತಃ ಔರಂಗಜೆಬ್ ಸಹ ಅವನೆದುರು ಒಮ್ಮೆ ಮಂಡಿಯೂರಿದ್ದ. ಇಂಥ ಖಾನ್ ಗೆ  ಬೇಗಂ  ಗೆ ಸರ್ವ ಅಧಿಕಾರವನ್ನೂ ಕೊಟ್ಟು ಜಯಶಾಲಿಯಾಗು ಎಂದು ಹರಸಿದಳು.

ಖಾನ್ ತನ್ನ ಪ್ರಚಂಡ ತಯಾರಿ ಆರಂಭಿಸಿದ್ದ. ಸ್ನೇಹದ ಸೋಗು ಹಾಕಿ ಅವನನ್ನು ಕೊಂದು ಬಿಡು ಎಂದು ಸುಲ್ತಾನ್ ಹಾಗೂ ಬೇಗಂ ಅವನನ್ನು ಹುರಿದುಂಬಿಸಿದ್ದರು. ಸುಲ್ತಾನನಂತೂ ಸ್ವಂತದ ವಜ್ರ ಖಚಿತ  ಕಠಾರಿಯನ್ನೇ ಕೊಟ್ಟಿದ್ದ. ಪಠಾಣ, ಅರಬ್ಬೀ, ಮರಾಠ ಸರದಾರರೂ ಅವನೊಂದಿಗೆ ಶಿವಾಜಿಯನ್ನು ಹಣಿಯಲು ಹೊರಟಿದ್ದರು. ಸೇನಾಪತಿಯ ಉತ್ಸಾಹ ಹೆಚ್ಚಿಸಲು ಸುಲ್ತಾನ್ ತನ್ನ ಮೆಚ್ಚಿನ ಆನೆಯನ್ನೂ ಕೊಟ್ಟಿದ್ದ. ಹೀಗೆ ಸರ್ವ ಸಿದ್ಧತೆಯನ್ನೂ ಮಾಡಿಕೊಂಡು ಖಾನ್ ಹೊರಟಿದ್ದ.  ಹೋಗುವ ಮುನ್ನ ಒಂದು ವಾರ ಅಖಂಡ ವಿಲಾಸದಲ್ಲಿ ಮುಳುಗಿದ್ದ ಅವನು ತಾನೇನಾದರೂ ಹಿಂದುರಿಗದೆ ಹೋದರೆ ತನ್ನ ಬೇಗಂ ಗಳ ಪರಿಸ್ಥಿತಿ ಏನಾಗಬಹುದು ಎಂದು ಯೋಚಿಸಿ, ಅವರು ಪರಪುರಷರ ಕೈಗೆ ಸಿಕ್ಕು ತೊಂದರೆ ಅನುಭವಿಸ ಬಾರದು ಎಂದು ನಿರ್ಧರಿಸಿ ತನ್ನ 64 ಹೆಂಡತಿಯರನ್ನು ಕೊಂದಿದ್ದ. ಕೊನೆಯವಳು ತಪ್ಪಿಸಿಕೊಂಡು ಜೀವ ಉಳಿಸಿಕೊಳ್ಳಲು ಓಡುವಾಗ ಅವಳನ್ನು ಬೆನ್ನಟ್ಟಿ ಸದ್ಗತಿ ಕರುಣಿಸಿದ್ದ. ಇವತ್ತಿಗೂ ಆ ಗೋರಿಗಳನ್ನು ನೋಡಬಹುದು. ಅಂತ ಕರುಣಾಮಯಿ ಅಫಜಲ್ ಖಾನ್.

ಬೆಟ್ಟದ ಮೇಲಿನ ದುರ್ಗಮ ಕೋಟೆಗಳಲ್ಲಿ ಶಿವಾಜಿಯನ್ನು ಎದುರಿಸುವುದು ಕಷ್ಟ ಎಂದು ತಿಳಿದಿದ್ದ ಖಾನ್ ಅವನನ್ನು ಬಯಲಿಗೆ ಎಳೆದು ತರಲು ಯೋಜನೆಯನ್ನು ಸಿದ್ಧಪಡಿಸಿದ್ದ. ಶಿವಾಜಿಯನ್ನು ಕೆರಳಿಸಲು ಇರುವ ಮಾರ್ಗ ಎಂದರೆ ದೇವಸ್ಥಾನಗಳ ನಾಶ. ಹಾಗಾಗಿಯೇ ದಾರಿಯಲ್ಲಿ ಸಿಕ್ಕ ದೇವಾಲಯಗಳನ್ನು ಒಡೆಯುತ್ತಾ ಅಲ್ಲಿ ಮಸೀದಿಯನ್ನು ನಿರ್ಮಿಸುತ್ತಾ ಅವನು ಕಾಲಿಟ್ಟಿದ್ದು ಶಿವಾಜಿಯ ಮನೆದೇವರಾದ ತುಳುಜಾ ಭವಾನಿ ಗುಡಿಗೆ. ಅಲ್ಲಿಯ ಗುಡಿಯನ್ನು ದ್ವಂಸ ಮಾಡಿ ಗರ್ಭಗುಡಿಯೊಳಗೆ ಗೋವು ಕಡಿದು ಅದರ ರಕ್ತದಿಂದ ಅಭಿಷೇಕ ಮಾಡಿ ಅಟ್ಟಹಾಸ ಮಾಡಿ ನಕ್ಕರೂ ಶಿವಾಜಿ ಕೆಳಗೆ ಇಳಿದು ಬಂದಿರಲಿಲ್ಲ. ಅಲ್ಲಿಂದ ಮುಂದೆ ಪಂಡರಾಪುರಕ್ಕೂ ಇದೆ ದುರ್ಗತಿ. ಕೋಪದಿಂದ ಕುದಿಯುತ್ತಿದ್ದರೂ ಶಿವಾಜಿ ಸ್ಥಿಮಿತ ಕಳೆದುಕೊಂಡಿರಲಿಲ್ಲ. ಅಸಂಖ್ಯ ಸೇನೆಯ ಖಾನ್ ಅನ್ನು ಬಯಲಿನಲ್ಲಿ ತನ್ನ ಪುಟ್ಟ ಸೇನೆ ಎದುರಿಸಲಾರದು ಎನ್ನುವ ಸತ್ಯ ಅವನಿಗೆ ತಿಳಿದಿತ್ತು. ಅದು ಸರ್ವ ಸನ್ನದ್ಧವಾದ, ಎಲ್ಲಾ ರೀತಿಯ ಆಯುಧಗಳಿಂದ ಕೂಡಿದ ಬೃಹತ್ ಸೈನ್ಯ ತನ್ನದೋ ಗುಡ್ಡಗಾಡು ಜನರ ಪುಟ್ಟ ಸೈನ್ಯ. ಒಂದು ಕ್ಷಣ ತಾಳ್ಮೆ ಕಳೆದುಕೊಂಡು ಕೆಳಗೆ ಇಳಿದರೆ ಭಗ್ನವಾಗುವುದು ಕೇವಲ ಭವಾನಿ ವಿಗ್ರಹ ಮಾತ್ರವಲ್ಲ ಸ್ವರಾಜ್ಯದ ಕನಸೂ ಎನ್ನುವ ಸತ್ಯ ಅರ್ಥವಾಗಿತ್ತು.

ಶಿವಾಜಿಯನ್ನು ಬಯಲಿಗೆ ಎಳೆಯುವ ಎಲ್ಲಾ ಪ್ರಯತ್ನಗಳೂ ವಿಫಲವಾಗಿ ಮಳೆಗಾಲ ಶುರುವಾಗಿತ್ತು. ಮಳೆಗಾಲದಲ್ಲಿ ಸಹ್ಯಾದ್ರಿಯಲ್ಲಿ ಸಂಚರಿಸುವ ಕಷ್ಟ ಅರಿತಿದ್ದ ಖಾನ್ ಜಾವಳಿಗೆ ಸಮೀಪದಲ್ಲಿದ್ದ ವಾಯಿಯಲ್ಲಿ ಬಿಡಾರ ಹೂಡಿದ. ತನ್ನ ದೂತ ಕೃಷ್ಣಾಜಿ ಪಂಥ್ ನನ್ನು ಶಿವಾಜಿಯ ಬಳಿಗೆ ಕಳುಹಿಸಿದ. ತನ್ನ ಸವಿ ಮಾತುಗಳಿಂದಲೇ ಖಾನ್ ನನ್ನು ಹೊಗಳುತ್ತಾ ಬಂದು ಅವರನ್ನು ಕಾಣುವಂತೆ ಶಿವಾಜಿಗೆ ಆತ  ಕೇಳಿಕೊಂಡ. ನಿಮ್ಮ ಕೈಯಲಿರುವ ಕೋಟೆ ಕೊತ್ತಲ ನಿಮ್ಮ ಪಾಲಿಗೆ ಬಿಡುತ್ತಾರೆ ಎನ್ನುವ ಆಶ್ವಾಸನೆ ಸಹ ಕೊಟ್ಟ. ಶಿವಾಜಿಗೆ ಖಾನ್ ನ ತಂತ್ರ ಅರ್ಥವಾಗಿತ್ತು. ಅವನಿಗೆ ಬೇಕಾದದ್ದು ತಾನು ಮಾತ್ರವೇ ಎನ್ನುವ ಸತ್ಯದ ಅರಿವಿತ್ತು. ಹಾಗಾಗಿಯೇ ಉಪಾಯದಿಂದಲೇ ತನ್ನ ಚಾಣಾಕ್ಷ, ನಂಬಿಕಸ್ಥ, ಬುದ್ಧಿವಂತ ವ್ಯಕ್ತಿಯಾದ ಗೋಪಿನಾಥ್ ಪಂತರನ್ನು ರಾಯಭಾರಿಯಾಗಿ ಕಳುಹಿಸಿದರು. ಅವರು ಶಿವಾಜಿ ಭಯಭೀತನಾಗಿರುವುದರಿಂದ ಮತ್ತು ತಪ್ಪಿತಸ್ಥ ಭಾವ ಕಾಡುತ್ತಿರುವುದರಿಂದ ಖಾನ್ ರೆ ಅವನ ಬಳಿಗೆ ತೆರಳಿ ಧೈರ್ಯ ತುಂಬುವಂತೆ ಕೇಳಿಕೊಂಡರು. ಹಾಗೆ ಕೇಳಿಕೊಳ್ಳುತ್ತಲೇ ಇಡೀ ಸೈನ್ಯದ ಲೆಕ್ಕಾಚಾರ ಹಾಕಿದರು. ತಾವು ತಂದಿದ್ದ ಉಡುಗೊರೆಗಳನ್ನು ಸೈನ್ಯದ ಮುಖ್ಯ ಸರದಾರರಿಗೆ ಕೊಡುತ್ತಲೇ ಬೇಕಾದ ರಹಸ್ಯ ಕಲೆಹಾಕಿದರು.

ಖಾನ್ ಜಾವಳಿಗೆ ಬರಲು ಒಪ್ಪಿದ್ದ. ತನ್ನ ಸರ್ವ ಸೈನ್ಯದೊಡನೆ ಪ್ರಯಾಣ ಹೊರಟ. ಪ್ರತಾಪ ಗಡದ ಬುಡದಲ್ಲಿ ಭೇಟಿಯ ನಿರ್ಧಾರವಾಯಿತು. ಇಡೀ ಶಿವಾಜಿಯ ಪರಿವಾರ ಮೈಯೆಲ್ಲಾ ಕಣ್ಣಾಗಿ ಎಚ್ಚರದಿಂದಿತ್ತು. ಶಿವಾಜಿಗೆ ಕನಸಿನಲ್ಲಿ ಮಾತಾ ಭವಾನಿಯ ಆಶೀರ್ವಾದ ಸಿಕ್ಕಿತ್ತು. ಮೈಗೆ ಉಕ್ಕಿನ ಕವಚ ತೊಟ್ಟ ಅವರು ಭೇಟಿಗಾಗಿ ಹೊರಟರು.ಹೊರಡುವ ಮುನ್ನ ಖಾನ್ ಮೋಸ ಮಾಡಿದರೆ ಯುದ್ಧ ಮಾಡಲು ಸೈನ್ಯ ತಯಾರಾಗಿ ಕತ್ತಲಿನಲ್ಲಿಯೇ ಕಾಡಿನಲ್ಲಿ ಅವಿತು ಕುಳಿತಿತ್ತು. ಸಿದ್ಧಪಡಿಸಿದ್ದ ಡೇರೆಯೊಳಗೆ ಇಬ್ಬರೂ ಒಬ್ಬರನೊಬ್ಬರು ಸಂಧಿಸಿದರು. ಖಾನ್ ಶಿವಾಜಿಯನ್ನು ಆಲಂಗಿಸಲು ಮುಂದಾದ. ಅಜಾನುಭಾಹು ದೇಹದ ಖಾನ್ ಎಡರು ಶಿವಾಜಿ ಗುಬ್ಬಚ್ಚಿ ಮರಿಯಂತಿದ್ದರು. ಅವರ ಶಿರ ಖಾನ್ ನ ಎದೆಗೆ ತಗಲುತಿತ್ತು. ಆಲಂಗಿಸುವ ನೆಪದಲ್ಲಿ ಶಿವಾಜಿಯ ಕತ್ತು ಹಿಸುಕಿ ತಮ್ಮ ಕೈಯಲ್ಲಿದ್ದ ಕಠಾರಿಯಿಂದ ತಿವಿದು ಕೊಲ್ಲಲು ಖಾನ್ ಯತ್ನಿಸಿದ. ಇದನ್ನು ಶಿವಾಜಿಯ ಕವಚ ಹರಿಯಿತು. ತಕ್ಷಣವೇ ಶಿವಾಜಿ ತಮ್ಮ ಬಿಚುವಾದಿಂದ ಅವನ ಹೊಟ್ಟೆ ಸೀಳಿದರು.ಕರುಳನ್ನು ಒಳಗೆ ತಳ್ಳಿ ತಪ್ಪಿಸಿಕೊಳ್ಳಲು ತಮ್ಮ ಸೈನ್ಯ ಕರೆಯಲು ಓಡುತ್ತಿದ್ದ ಖಾನ್ ಕತ್ತು ಕತ್ತರಿಸಿ ಅವರ ಶಿರವನ್ನು ಹಿಡಿದು ವೇಗವಾಗಿ ಮೇಲಕ್ಕೆ ಓಡಿದರು ಶಿವಾಜಿ. ಕೆಲವೇ ಹೊತ್ತಿನಲ್ಲಿ ಫಿರಂಗಿ ಸಿಡಿಯಿತು. ಬಿಜಾಪುರದ ಸೈನ್ಯ ಅದು ತಮ್ಮ ಸೇನಾಧಿಪತಿಯ ಗೌರವಾರ್ಥ ಎಂದು ತಿಳಿದು ಮೈ ಮರೆಯಿತು. ಶಸ್ತ್ರ ಹಿಡಿದು ಕಾಡಿನಲ್ಲಿ ಅವಿತಿದ್ದ ಶಿವಾಜಿಯ ಸೈನ್ಯ ಆ ಸೂಚನೆ ಅರ್ಥ ಮಾಡಿಕೊಂಡು ಬಿಜಾಪುರದ ಸೈನ್ಯದ ಮೇಲೆ ಮುಗಿಬಿದ್ದು ಸಂಹರಿಸಿತು. ಅಣ್ಣನ ಹತ್ಯೆಯ ಅವಮಾನ ತೀರಿಸಿಕೊಳ್ಳಲು ಶಿವಾಜಿ ಖಾನ್ ಶಿರವನ್ನು ತಮ್ಮ ತಾಯಿಗೆ ಕಳುಹಿಸಿದರು.

ಇಂಥಾ ಶಿವಾಜಿಯ ಹುಟ್ಟಿದ ದಿನವಂತೆ ಇದು. ಅವರ ಶೌರ್ಯದ ಕತೆ ಕೇಳಿದ ಯಾರೊಬ್ಬರು ಗುಲಾಮಿತನನ್ನು ಒಪ್ಪಿಕೊಳ್ಳಲಾರರು ಎನ್ನುವ ಹಮ್ಮು ನನ್ನದು.

Comments

Popular posts from this blog

ಮಾತಂಗ ಪರ್ವತ

ರಂಜದ ಹೂ

ಬರಿದೆ ಆಡುವ ಮಾತಿಗರ್ಥವಿಲ್ಲ...