ಅಮ್ಮಯ್ಯ ಮಗಳು ಹೆರಿಗೆಗೆ ಬರ್ತಾಳೆ. ಬಾಣಂತನ ನೀವೇ ಮಾಡ್ಬೇಕು ಅಂತ ಯಾರಾದರೂ ಕೇಳಿದರೆ ಕ್ಷಣ ಮಾತ್ರವೂ ಆಲೋಚಿಸದೆ ಅದಕ್ಕೇನು ಆಯ್ತು ಯಾವಾಗ ಹೇಳಿ ಎನ್ನುತ್ತಿದ್ದಳು ಅವಳು. ನನಗೋ ಮೂಗಿನ ತುದಿಯಲ್ಲಿ ಸಿಟ್ಟು. ಮನೆ ಕೆಲಸ ಎಲ್ಲಾ ಬಿಟ್ಟು ಹೊರಡ್ತಾಳೆ ಅನ್ನೋದಕ್ಕಿಂತ ನಾನು ಬಂದಾಗ ಅವಳು ಇರೋಲ್ಲ ಅನ್ನೋದು ಹೆಚ್ಚು ಬಾಧೆಯ ವಿಷಯವಾಗಿರುತ್ತಿತ್ತು. ಅಲ್ಲಿಂದ ಅವಳ ಕೆಲಸ ಶುರುವಾಗುತ್ತಿತ್ತು. ಅದ್ಯಾವುದು ಕಾಯಿ, ನಾರು, ಬೇರು ಸಂಗ್ರಹ ಮಾಡೋದು ಖಾರ ಮಾಡೋದು ಆ ಘಮ ಒಂಥರಾ ಹಿತವಾಗಿದ್ದರೂ ಯಾರು ಕರೆದರೂ ಹೂ ಅಂತ ಹೊರಡ್ತಿಯಲ್ಲ ನಿಂಗೆ ಬುದ್ಧಿ ಇಲ್ವಾ ಎಂದು ರೇಗುತ್ತಿದ್ದೆ.

ಪುಟ್ಟಿ ಹೆರಿಗೆ ಅನ್ನೋದು ಸೃಷ್ಟಿ ಕ್ರಿಯೆ ಕಣೆ.  ಅದಕ್ಕೆ ಬೇಕಾದ ಆರೈಕೆ ಮಾಡೋ ಅವಕಾಶ ಸಿಕ್ಕಿದ್ರೆ ಅದಕ್ಕಿಂತ ಪುಣ್ಯದ ಕೆಲಸ ಇನ್ನೇನಿದೆ ಹೇಳು ಅನ್ನುತ್ತಿದ್ದಳು. ಅವಳು ಮಗುವಿಗೆ ಎಣ್ಣೆ ನೀರು ಹಾಕುವುದು, ಆರೈಕೆ ಮಾಡುವುದು ಬಾಣಂತನದ ಖಾರ ಮಾಡುವುದರಲ್ಲಿ ಎತ್ತಿದ ಕೈ. ಎಷ್ಟೋ ಸಲ ಎಲ್ಲಿಯದಾರೂ ಸಿಕ್ಕವರು ತಮ್ಮ ಮಕ್ಕಳನ್ನೋ, ಮೊಮ್ಮಕ್ಕಳನ್ನೋ ಕರೆದುಕೊಂಡು ಬಂದು ನಮಸ್ಕಾರ ಮಾಡಲು ಹೇಳಿ ನಿಂಗೆ ಎಣ್ಣೆ ನೀರು ಹಾಕಿದವರು ಇವರೇ ಕಣೋ ಅನ್ನೋವಾಗ ಅವಳ ಕಣ್ಣಂಚು ತೇವವಾಗುತಿತ್ತು. ನಂಗೆ ನಗು ಬರುತಿತ್ತು. ನಿಮ್ಮ ಕೈಯಲ್ಲಿ ಬಾಣಂತನ ಮಾಡಿಸಿಕೊಂಡ ಮೇಲೆ ಕೇಳಬೇಕಾ ಆರಾಮಾಗಿ ಇದಾಳೆ ಅವಳು ಅಂತ ಯಾರಾದರೂ ಹೇಳುವಾಗ ಇವಳಿಗೆ ನೆಮ್ಮದಿ. ಹಾಗಾಗಿ ಎಷ್ಟೇ ಕೆಲಸವಿದ್ದರೂ ತೊಂದರೆಯಿದ್ದರೂ ಒಂದು ತಿಂಗಳು ಮಗುವಿಗೆ ಎಣ್ಣೆ ನೀರು ಹಾಕುವುದು ಖಾರ ಮಾಡಿಕೊಡುವುದು ಮಾತ್ರ ಬಿಡುತ್ತಿರಲಿಲ್ಲ.

ನೋಡು ಪುಟ್ಟಿ ಎಷ್ಟೋ ಜನರಿಗೆ ಬಾಣಂತನ ಮಾಡಿದಿನಿ ಹೌದು. ಇನ್ನು ವಯಸ್ಸಾಯ್ತು. ಕೈಯಲ್ಲಿ ಕೂಡುವುದಿಲ್ಲ. ನಿಂದೊಂದು ಬಾಣಂತನ ಮಾಡಿ ಇನ್ನು ಅಲ್ಲಿಗೆ ಮುಗಿಸ್ತೀನಿ ಅನ್ನುವಳ ದನಿಯಲ್ಲಿ ಕಂಡೂ ಕಾಣದ ಸಂಕಟ. ಹೇಳಿ ಮುಗಿಸಿದವಳು ಸುಮ್ಮನಿರುತ್ತಾಳೆ ಅಂದರೆ ಉಹೂ ಅವಳಾಗಲೇ ಖಾರಕ್ಕೆ ಬೇಕಾಗುವ ಸಾಮಾನಿನ ಹುಡುಕಾಟದಲ್ಲಿ ಬ್ಯುಸಿ ಆಗಿ ಹೋಗಿದ್ದಳು. ಅಂತೂ ಅವಳ ಆಸೆಯಂತೆ ಅಹಿ ಹುಟ್ಟಿ ಒಂದು ತಿಂಗಳು ಕಟ್ಟು ನಿಟ್ಟಿನ ಬಾಣಂತನ ಮುಗಿದಿತ್ತು. ಒಂದು ದಿನ ತಲೆಗೆ ನೀರು ಹಾಕಿಕೊಂಡು ಒಳಗೆ ಬರುವಾಗ ಪುಟ್ಟಿ ಅನ್ನುವ ಸಣ್ಣ ಸ್ವರ. ಏನೇ ಅಂದರೆ ನಿನ್ನ ಮಗು ಉದ್ದ ಕಣೆ ನನ್ನ ಕಾಲು ಹಿಡಿಸೋಲ್ಲ. ನಾಳೆಯಿಂದ ಅಮ್ಮನೋ ಚಿಕ್ಕಿನೋ ಸ್ನಾನ ಮಾಡಿಸ್ತಾರೆ ಆಯ್ತಾ ಅನ್ನುವಾಗ ಕಣ್ಣು ಹನಿಯುತ್ತಿತ್ತು. ಅಷ್ಟೇ ತಾನೇ ಮಾರಾಯ್ತಿ ಅದಕ್ಯಾಕೆ ಬೇಜಾರು ಎಂದರೂ ಮನಸ್ಸಿನಲ್ಲದ ಮನಸ್ಸಿನಿಂದಲೇ ಬಿಟ್ಟುಕೊಟ್ಟಿದ್ದಳು. ಹೇಳಿದ ಹಾಗೆ ಅಲ್ಲಿಗೆ ಅವಳ ಬಾಣಂತನ ಮಾಡುವ ಕೆಲಸಕ್ಕೆ ಪೂರ್ಣ ವಿರಾಮ ಬಿದ್ದಿತ್ತು. ಕಷ್ಟ ತಪ್ಪಿತಲ್ಲ ಬಿಡೆ ಎಂದರೂ ಅವಳಿಗೆ ಏನೋ ಬೇಜಾರು, ಸಂಕಟ. ಅರ್ಥವಾಗಿರಲಿಲ್ಲ ಇಷ್ಟೊಂದು ಭಾವನಾತ್ಮಕವಾಗಿ ಯೋಚಿಸೋದು ಏನಿದೆ ಅನ್ನೋದೇ ಮನಸ್ಸಿನಲ್ಲಿ ಮೂಡಿದ ಪ್ರಶ್ನೆ.

ಒಂದು ದಿನ ಇದ್ದಕ್ಕಿದ್ದ ಹಾಗೆ ಫೋನ್ ಮಾಡಿದವಳು ಖಾರಕ್ಕೆ ಏನೇನು ಬೇಕು ಅಂತ ಬರೆಸಿ ಇಟ್ಟಿದಿನಿ ನೀನು ಊರಿಗೆ ಬಂದಾಗ ತಗೊಂಡು ಹೋಗು ಎಂದಿದ್ದಳು. ಒಳ್ಳೆ ಕೆಲಸ ಮಾಡಿದ್ದಿ ಮಾರಾಯ್ತಿ. ಹೇಗೂ ನೀನಿದ್ದಿ ಅಂತ ಇಷ್ಟು ದಿನ ಅದನ್ನು ಕೇಳಬೇಕು ಅಂತಲೇ ಅನ್ನಿಸ್ತಾ ಇರಲಿಲ್ಲ ನೋಡು ಅಂತ ನಕ್ಕಿದ್ದೆ ಅವಳು ನಕ್ಕಿರಲಿಲ್ಲ. ಅದೇನೋ ನಾನು ಹೈ ಸ್ಕೂಲ್ ಗೆ ಬರುವ ಹೊತ್ತಿಗೆ ದನಗಳ ಬಾಣಂತನ ಮಾಡೋದು ಹೇಳಿಕೊಟ್ಟಿದ್ದಳು. ಆಗ ಹುಟ್ಟಿದ ಚಿಕ್ಕಿಯ ಮಗುವಿಗೆ ಸ್ನಾನ ಮಾಡಿಸುವುದು ಹೇಳಿಕೊಟ್ಟು ಮಾಡಿಸಲು ಹೇಳುತ್ತಿದ್ದಳು. ಅವೆಲ್ಲವೂ ಅಸ್ಪಷ್ಟ ನೆನಪಾಗಿ ಮನಸ್ಸಿನಲ್ಲಿ ಹುದುಗಿಹೋಗಿತ್ತು. ಮೂರು ನಾಲ್ಕು ವರ್ಷದ ಹಿಂದೆ ಫ್ರೆಂಡ್ ಒಬ್ಬರ ಹೆಂಡತಿಗೆ ಮಗು ಹುಟ್ಟಿದಾಗ ನೋಡಲು ಹೋದವಳು maid ಬಂದು ಸ್ನಾನ ಮಾಡಿಸುವ ರೀತಿ ನೋಡಿದಾಗ ನನ್ನೊಳಗಿನ ಅಮ್ಮಯ್ಯ ಎಚ್ಚರ ಆಗಿದ್ದಳು. ತುಸು ಹಿಂಜರಿಕೆಯಿಂದಲೇ ನಾನು ಮಾಡಿಸಲಾ ಎಂದು ಕೇಳಿದ್ದೆ.

ವರ್ಷಗಳ ನಂತರ ಪುನಃ ಮಾಡುವುದು ಒಂದು ರೀತಿಯ ಹಿಂಜರಿಕೆ ಇದ್ದರೂ ಒಂದೇ ದಿನ ಅವೆಲ್ಲವೂ ಮಾಯವಾಗಿತ್ತು. ನೋಡಿ ಇವತ್ತು ಮಗು ಒಳ್ಳೆ ನಿದ್ದೆ ಮಾಡಿದೆ, ಎಣ್ಣೆ ನೀರು ಹಾಕಿದ್ರೆ ಹೀಗೆ ಹಾಕಬೇಕು ಅಂತ ಇನ್ನೊಬ್ಬರು ಮನೆಯ ಕೆಲಸದ ಸಹಾಯಕಿ ಹೇಳುವಾಗ ಅರಿವಿಲ್ಲದೆ ಕಣ್ಣು ಒದ್ದೆಯಾಗಿತ್ತು. ಅಜ್ಜಿ ಆಗ ಅರ್ಥವಾಗಿದ್ದಳು. ಅದಾಗಿ ಒಂದು ವರ್ಷದ ನಂತರ ಮಗುವಿನ ಹುಟ್ಟಿದ ಹಬ್ಬಕ್ಕೆ ಕರೆಯಲು ಬಂದವರು ಮಿಸ್ ಮಾಡ್ಬೇಡಿ ನೀವು ಎಣ್ಣೆ ನೀರು ಹಾಕಿದ ಮಗು ಎಂದಾಗ ಊರು ಬದಲಾದರೇನು ಮನಸ್ಥಿತಿ ಒಂದೇ ಅಲ್ಲವ ಅನ್ನಿಸಿ ಖುಷಿ. ದೀಪು ಬಾಣಂತನ ನೀನೆ ಮಾಡು ನಂಗೆ ನೆಮ್ಮದಿ ಅಂತ ಚಿಕ್ಕಿ ಕಿಚಾಯಿಸುವಾಗ ಏನೋ ಹೆಮ್ಮೆ.

ಈ ಸಲ ಲಾಕ್ ಡೌನ್ ನೆಪದಲ್ಲಿ ಊರಿನಲ್ಲಿ ತಿಂಗಳು ಗಟ್ಟಲೆ ಝಾಂಡ ಉರಿದಾಗ ಸಮಯ ಕಳೆಯಲು ಅಲ್ಲಿ ಚಿಕ್ಕ ಮಗಳಿದ್ದಳು. ಸುಜಿತ್ ತಮ್ಮನ ಮಗು ಆಗಷ್ಟೇ ಊರಿಗೆ ಬಂದಿತ್ತು. ಐದು ತಿಂಗಳ ಮಗುವನ್ನು ನೋಡಿದಾಗ ಮತ್ತೆ ಅಮ್ಮಯ್ಯ ಜಾಗೃತಳಾಗಿದ್ದಳು. ಅದಕ್ಕೆ ಎಣ್ಣೆ ಹಚ್ಚುವುದು, ಸ್ನಾನ ಮಾಡಿಸುವುದು, ಸಣ್ಣ ಪುಟ್ಟ ಮನೆ ಔಷಧಿ ಮಾಡುವುದು ಅದೆಷ್ಟು ನೆಚ್ಚಿನ ಕೆಲಸವಾಗಿತ್ತು ಎಂದರೆ ಬೆಳಗ್ಗು ರಾತ್ರಿ ಆಗುವುದೇ ತಿಳಿಯುತ್ತಿರಲಿಲ್ಲ.  ಒಂದು ದಿನ ಅನಿವಾರ್ಯವಾಗಿ ಎಣ್ಣೆ ಹಚ್ಚದೆ ಅಜ್ಜಿ ಹಚ್ಚುವಾಗ ಅತ್ತಿತ್ತ ನೋಡಿದ  ಆಗಷ್ಟೇ ದನಿ ಹೊರಡಿಸುತ್ತಿದ್ದ ಅದು ಅಮ್ಮಾ ಎಂದು ಕೂಗಿದ್ದು ಬದುಕಿನ ಆಪ್ಯಾಯಮಾನ ಕ್ಷಣಗಳಲ್ಲಿ ಒಂದು ಅನ್ನಿಸುವ ಹೊತ್ತಿಗೆ ಬಾಣಂತನ ಮಾಡಲು ಆಗೋಲ್ಲ ಎನ್ನುವ ಅಜ್ಜಿಯ ಸಂಕಟಕ್ಕೆ, ಯಾರಾದರೂ ನೀವು ಎಣ್ಣೆ ನೀರು ಹಾಕಿದ ಮಗು ಅನ್ನುವಾಗ ಕಣ್ಣಂಚು ಒದ್ದೆಯಾಗುವುದಕ್ಕೆ ಕಾರಣ ಏನು ಎನ್ನುವುದು ಅರ್ಥವಾಗಿತ್ತು. ಕಣ್ಣು ಒರೆಸಿಕೊಳ್ಳುತ್ತಲೇ ಅಮ್ಮಯ್ಯ ನೀನು ಎಷ್ಟು ಜೀವಂತ ನೋಡು ಎಂದರೆ ಈಗ ಅರ್ಥವಾಯ್ತ ಅನ್ನಲು ಅವಳಿಲ್ಲ ಅನ್ನುವುದು ಮರೆತುಹೋಗಿತ್ತು.




Comments

Popular posts from this blog

ಮಾತಂಗ ಪರ್ವತ

ರಂಜದ ಹೂ

ಬರಿದೆ ಆಡುವ ಮಾತಿಗರ್ಥವಿಲ್ಲ...