ಚಂದ್ರಿ

ನಾನು ಈ ಭೂಮಿಗೆ ಬರುವ ಅವಸರದಲ್ಲಿದ್ದಾಗಲೇ ಕೊಟ್ಟಿಗೆಯಲ್ಲಿದ್ದ ಚಂದ್ರಿಗೂ ಪ್ರಸವ ವೇದನೆ. ಇಬ್ಬರು ತುಂಬು ಗರ್ಭಿಣಿಯರ ಹೊಣೆ ಹೊತ್ತ ಅಜ್ಜಿಗೆ ಯಾರಿಗೆ ಮೊದಲು ಪ್ರಸವವಾಗುತ್ತೋ ಅನ್ನುವುದಕ್ಕಿಂತ ಇಬ್ಬರಿಗೂ ಸಸೂತ್ರವಾಗಿ ಹೆರಿಗೆಯಾಗಲಿ ಅನ್ನೋ ಯೋಚನೆ. ಕೊಟ್ಟಿಗೆಯಲ್ಲಿ ಹೆಣ್ಣು ಹುಟ್ಟಿದರೆ ಮನೆಯಲ್ಲಿ ಗಂಡು ಅನ್ನೋ ನಂಬಿಕೆ ಪ್ರಚಲಿತವಿದ್ದ ಕಾಲ. ಹಾಗಾಗಿ ಸಣ್ಣ ಕುತೂಹಲ ಕೂಡ. ಆದರೆ ಅಮ್ಮ ಚಂದ್ರಿ ಇಬ್ಬರೂ ಹೆತ್ತಿದ್ದೂ ಹೆಣ್ಣು. ಹಾಗಾಗಿ ದನಕರುಗಳ ಜೊತೆಗೆ ಬಾಂಧವ್ಯ ಹುಟ್ಟಿದ ಮೇಲೆ ಜೊತೆಯಾಗಿದ್ದಾ, ಹುಟ್ಟುತ್ತಲೇ ಜೊತೆಯಾಗಿದ್ದಾ ಅನ್ನೋದೂ ಇವತ್ತಿಗೂ ಗೊಂದಲವೇ.

ಬಾಲ್ಯದ ಆಟ ಶುರುವಾಗಿದ್ದೇ ಅವುಗಳ ಜೊತೆಗೆ. ಅಮ್ಮನ ಜೊತೆ ಜೊತೆಗೆ ಚಂದ್ರಿಯೂ ಹಾಲು ಉಣಿಸಿದ್ದಳು. ಹಾಗಾಗಿ ಬದುಕಿಗೆ ಇಬ್ಬರು ತಾಯಂದಿರು. ಕೇವಲ ಮನುಷ್ಯರಿಗೆ ಮಾತ್ರ ಈ ಪುಣ್ಯವೇನೋ. ನನ್ನೊಂದಿಗೆ ಬೆಳೆದ ಕೆಂಪಿಗೂ ನನಗೂ ಅವಿನಾಭಾವ ಸಂಬಂಧ ಬೆಳೆದಿತ್ತು. ಒಂದರ್ಥದಲ್ಲಿ ಒಂದೇ ತಾಯಿಯ ಹಾಲು ಕುಡಿದು ಬೆಳೆದ ಇಬ್ಬರೂ ಅಕ್ಕ ತಂಗಿಯರೇ. ಬೆಳಗ್ಗಿನ ಅಲಾರಂ ಅವುಗಳ ಅಂಬಾ ಅನ್ನೋ ದನಿಯೇ. ಬೆಳಿಗ್ಗೆ ಎದ್ದು ಹಸುವಿನ ಮುಖ ನೋಡಿದರೆ ಶುಭ ಅನ್ನೋ ನಂಬಿಕೆಯೂ ಇದ್ದಿದ್ದರಿಂದ ಹಾಗೂ ಕೊಟ್ಟಿಗೆ ಮತ್ತು ಬಚ್ಚಲು ಒಟ್ಟಿಗೆ ಇದ್ದಿದ್ದರಿಂದ ಅವುಗಳ ಮುಖ ದರ್ಶನವಿಲ್ಲದೆ ದಿನ ಆರಂಭವಾಗುತ್ತಲೇ ಇರಲಿಲ್ಲ.

ನಾವು ಏಳುವ ವೇಳೆಗಾಗಲೇ ಅಜ್ಜಿ ಕೊಟ್ಟಿಗೆಯಲ್ಲಿ ಅವುಗಳಿಗೆ ಕುಡಿಯಲು ಕೊಡುತ್ತಲೋ ಇಲ್ಲಾ ಹಾಲು ಕರೆಯುತ್ತಲೋ ಇರುತ್ತಿದ್ದಳು. ಅದಾಗಲೇ ಅಲ್ಲಿ ಗದ್ದಲ ಶುರುವಾಗಿರುತಿತ್ತು. ಅವುಗಳ ಕೊರಳಿನ ಗಂಟೆ ಗಗ್ಗರದ ದನಿ, ದರಗು ತುಳಿಯುವ ಅವುಗಳ ಹೆಜ್ಜೆಯ ಸದ್ದು, ಅಂಬಾ ಅನ್ನೋ ಕೂಗು, ಬಾಲದಲ್ಲಿ ನೊಣವನ್ನೋ ನುಸಿಯನ್ನೋ ಓಡಿಸುವಾಗ ಅಕ್ಕ ಪಕ್ಕದ ದಬ್ಬೆಗೆ ತಾಗಿ ಬರುವ ಸಪ್ಪಳ, ಕೋಡಲ್ಲಿ ಕಂಬವನ್ನು ಕೆರೆಯುವ ಸದ್ದು ಹೀಗೆ ಇಡೀ ವಾತಾವರಣದಲ್ಲೇ ಅನುರುಣಿತವಾಗುತಿದ್ದ ಸದ್ದು ಬೆಳಗಾಯಿತು ಎಂಬುದನ್ನು ಸಾರಿ ಹೇಳುವ ಹಾಗಿರುತಿತ್ತು. ಮುಖ ತೊಳೆದು ಬರುವ ವೇಳೆಗೆ ಇದ್ದಿನ ಒಲೆಯಲ್ಲಿ ಕೆಂಡದ ಮೇಲೆ ಹದವಾಗಿ ಕಾದ ಹಾಲಿನ ಪರಿಮಳಕ್ಕೆ ಹಸಿವು ತಾಂಡವವಾಡುತಿತ್ತು. ಕಾಡಲ್ಲಿ ಸೊಪ್ಪು ಸದೆಗಳನ್ನು ಮೇದು ಬರುವ ಅವುಗಳ ಹಾಲಿನದು ವಿಶಿಷ್ಟ ಪರಿಮಳ, ಅಪರಿಮಿತ ಸ್ವಾದ.

ಅವುಗಳನ್ನು ಮೇಯಲು ಬಿಡುವುದು ಒಂಥರಾ ಸಂಭ್ರಮವೇ. ಯಾವುದು ಕರು ಹಾಕುವ ಹಾಗಿದೆ ನೋಡಬೇಕು, ಮಂದೆ ತಪ್ಪಿಸಿ ಗದ್ದೆಗೋ, ತೋಟಕ್ಕೋ ನುಗ್ಗುವ ತುಂಡು ಜಾನುವಾರಿಗೆ ಕೊರಳಿಗೆ ಒಂದು ಪುಟ್ಟ ಕಂಬ ಕಟ್ಟಬೇಕು. ಕೆಲವಕ್ಕೆ ಗಗ್ಗರ, ಬಾಣಂತಿಯಾದರೆ ಬಿಡುವ ಹಾಗಿಲ್ಲ, ಪುಟ್ಟ ಕರುಗಳನ್ನು ಮಂದೆಗೆ ಹೊಡೆಯುವ ಹಾಗಿಲ್ಲ, ದೂರ ನಡೆಯಲಾರವು ಹಾಗೂ ತಪ್ಪಿಸಿಕೊಂಡಾವು ಅನ್ನೋ ಭಯ. ಒಮ್ಮೆ ಮಂದೆ ತಪ್ಪಿದರೆ ಮನೆಗೆ ಬರುವ ದಾರಿ ಗೊತ್ತಿದ್ದರೆ ಸರಿ ಇಲ್ಲವಾದರೆ ಕಾಡಿನ ನಡುವೆ ಹೊಂಚು ಹಾಕುವ ಅರ್ಬುಕಗಳು ಸಾಕಷ್ಟು ಇದ್ದು ಅವುಗಳ ಬಾಯಿಗೆ ತುತ್ತಾಗುವ ಸಾಧ್ಯತೆಯೂ ಇತ್ತು. ಹಾಗಾಗಿ ಎಲ್ಲವನ್ನೂ ಗಮನಿಸಿ ಆಮೇಲೆ ಅವುಗಳನ್ನು ಬಿಡಬೇಕಿತ್ತು.

ಹೀಗೆ ಒಮ್ಮೆ ದೊಡ್ಡವರೆಲ್ಲಾ ಹೊರಗೆ ಹೊರಟರೆಂದರೆ ಆಮೇಲೆ ಚಿಕ್ಕವರ ಸಾಮ್ರಾಜ್ಯ. ಕೊಟ್ಟಿಗೆಯ ಬಾಗಿಲು ಹಾಕಿ ಇವುಗಳನ್ನು ಬಿಟ್ಟರೆ ಅಂಗಳ, ಕಣದಲ್ಲಿ ಓಟ, ಹಾರಾಟ, ಆಟ ಎಲ್ಲವೂ ನಡೆಯುತ್ತಿತ್ತು. ಅದರಲ್ಲೂ ಎಳೆಯ ಕರುಗಳಾದರೆ ಮುಗಿದೇ ಹೋಯಿತು. ಬಾಲವನ್ನು ಎತ್ತಿ ಇತ್ತಿಂದ ಅತ್ತ ಅತ್ತಿಂದ ಇತ್ತ ಓಡುವ ಸೊಗಸೇ ಚೆಂದ. ಈಗಲೂ ಎರ್ರಾಬಿರ್ರಿ ಓಡುವವರನ್ನು ನೋಡಿದಾಗ ಕಿವಿಗೆ ಗಾಳಿ ಹೊಕ್ಕ ಕರುವಿನಂತೆ ಅನ್ನೋ ಗಾದೆಮಾತು ಅಚಾನಕ್ಕಾಗಿ ಬಾಯಿಯಿಂದ ಹೊರಬೀಳುತ್ತದೆ. ಅವುಗಳನ್ನು ಹಿಡಿಯುವ ವ್ಯರ್ಥ ಪ್ರಯತ್ನ ಮಾಡಿ ಸುಸ್ತಾಗಿ ಆಮೇಲೆ ಕರು ಮತ್ತು ನಾವು ಇಬ್ಬರೂ ಯಾವುದೋ ಮರದ ನೆರಳಲ್ಲೋ, ಹುಲ್ಲಿನ ಮೇಲೋ ಕುಳಿತು ತಣ್ಣನೆಯ ಗಾಳಿಗೆ ಅಲ್ಲೇ ನಿದ್ರೆ ಹೋಗುತ್ತಿದ್ದದ್ದೂ ಸರ್ವೇ ಸಾಮಾನ್ಯ.

ಇನ್ನೂ ಹಾಲು ಕುಡಿಯುವ, ಮೇಯಲು ಬಾರದ ಪುಟ್ಟ ಕರುಗಳಿಗೆ ಅವುಗಳ ಅಮ್ಮ ಬರುವುದು ಸಂಜೆಯಾದ್ದರಿಂದ ಹಸಿವಾಗುತ್ತದೆ ಎಂದು ಅಜ್ಜಿ ಮಧ್ಯಾನ ಅನ್ನವನ್ನು ಮೆತ್ತಗೆ ಕಲಸಿ ಅದಕ್ಕೆ ಬಸಿದ ಗಂಜಿಯನ್ನೋ ಹಾಲನ್ನೂ ಹಾಕಿಕೊಂಡು ಬರುತ್ತಿದ್ದಳು. ಅದನ್ನು ಚೂರೇ ಚೂರು ತೆಗೆದುಕೊಂಡು ಪುಟ್ಟ ಬಾಯನ್ನು ಮೃದುವಾಗಿ ತೆರೆದು ಇಷ್ಟೇ ಇಷ್ಟು ಹಾಕಿದರೆ ಅವೂ ನಮ್ಮಂತೆಯೇ ಉಗಿದೋ, ತಿನ್ನಲೋ ಇಷ್ಟವಿಲ್ಲದೆಯೋ ತಮ್ಮ ಅಸಹಕಾರ ತೋರಿಸುತ್ತಿದ್ದವು. ಮೂಗನ್ನು ಒತ್ತಿ ಹಿಡಿದು ಮಕ್ಕಳಿಗೆ ಕುಡಿಸುವಂತೆ ಅದರ ಬಾಯನ್ನು ಒತ್ತಿ ತಿನ್ನುವವರೆಗೂ ಹಿಡಿದು ಒಟ್ಟಿನಲ್ಲಿ ಅಷ್ಟನ್ನೂ ತಿನ್ನಿಸಿ ಹೋಗುತ್ತಿದ್ದಳು. ಅಥವಾ ಉಗುರು ಬೆಚ್ಚಗಿನ ಹಾಲನ್ನು ಬಿದಿರಿನ ಒಳಲೆಯಲ್ಲಿ ಅದರ ಬಾಯಿಗೆ ಹಾಕಿ ಕುಡಿಸುತ್ತಿದ್ದಳು. ಎಳೆಯ ಕರು ಹಾಗೂ ಎಳೆಯ ಕೂಸು ಇವುಗಳ ನಡುವೆ ಬಹಳ ಭೇಧ ಇರದಿದ್ದ ಕಾಲವದು.

ಸಂಜೆಯಾಗುತ್ತಿದ್ದಂತೆ ಇನ್ನೊಂದು ತರಹದ ಸಡಗರ. ಅಲ್ಲಿಂದಲೇ ಕೂಗುತ್ತಾ ಬರುವ ಅಮ್ಮ, ಇಲ್ಲಿಂದ ಓಗೊಡುವ ಕರು. ಹಾಲು ಕೊಡುವ ಅವಸರದಲ್ಲಿ ಧಾವಿಸಿ ಬಂದು ಕಣ್ಣು ತಪ್ಪಿಸಿ ಯಾವುದೋ ಮಾಯದಲ್ಲಿ ಹಾಲು ಕೊಡುವುದನ್ನ ನೋಡುವುದೇ ಚೆಂದ. ಇಳಿ ಸಂಜೆಯ ಹೊತ್ತಿಗೆ ಗೊರಸಿನ ಸದ್ದು ಮಾಡುತ್ತಾ ಧೂಳು ಚಿಮ್ಮುತ್ತಾ ಹಸುವಿನ ಮಂದೆ ಕೊಟ್ಟಿಗೆಗೆ ಬರುತ್ತಿದ್ದರೆ ಅದರ ಕಾಲಿನ ಧೂಳೆ ಅಗಸಕ್ಕೇರಿ ಕೆಂಪಾಯಿತೇನೋ ಅನ್ನಿಸುವ ಹಾಗೆ ಆಗುತಿತ್ತು. ಎಲ್ಲವೂ ಬಂದು ಶಿಸ್ತಿನಲ್ಲಿ ತಮ್ಮ ಜಾಗದಲ್ಲಿ ನಿಂತರೆ ಯಾರೋ ಒಬ್ಬರು ಹೋಗಿ ಕಟ್ಟುತ್ತಿದ್ದರು. ಕಟ್ಟದಿದ್ದರೂ ಅವು ತಮ್ಮ ತಮ್ಮ ಜಾಗದಲ್ಲಿ ಮಲಗಿ ಬಿಡುತ್ತಿದ್ದವು. ಎಲ್ಲರೂ ಬಂದ ಮೇಲೆ ಕೊಟ್ಟಿಗೆಯ ಬಾಗಿಲು ಭದ್ರಪಡಿಸಿ ಅದಕ್ಕೊಂದು ಬಿಳಿಯ ಪಂಚೆ ಕಟ್ಟುತ್ತಿದ್ದರು ಅಜ್ಜ. ಕೆಲವೊಮ್ಮೆ ಹಸಿದ ಹುಲಿ ವಾಸನೆಯ ಜಾಡು ಹಿಡಿದು ಕೊಟ್ಟಿಗೆಯವರೆಗೂ ಬರುವ ಸಂದರ್ಭವೂ ಇರುತಿತ್ತು. ಹಾಗೆ ದನಗಳೂ ಕೂಡ ಸದ್ದು ಮಾಡದೆ ಮಲಗಿ ಬಿಡುತ್ತಿದ್ದವು. ಅಲ್ಲೆಲ್ಲೋ ಕೇಳುವ ಗರ್ಜನೆ ಇನ್ನಷ್ಟು ನಿಶಬ್ದವಾಗುವ ಹಾಗೆ ಮಾಡುತಿತ್ತು.

ನಾನು ಬೆಳೆಯುತ್ತಾ, ಕೆಂಪಿಯೂ ಬೆಳೆಯುತ್ತಾ ಹೋದಂತೆ ಕೊಟ್ಟಿಗೆಯೊಡಗಿನ ಬಾಂಧವ್ಯವೂ ಬೆಳೆದಿತ್ತು. ಅವುಗಳಿಗೆ ಕುಡಿಯಲು ಕೊಡುವುದು, ಹುಲ್ಲು ಹಾಕುವುದು ಬಿಡುವುದು, ಕಟ್ಟುವುದು ಮಾಡುವುದರ ಜೊತೆ ಜೊತೆಗೆ ಹಾಲು ಕರೆಯುವುದು ಅವುಗಳ ಬಾಣಂತನ ಮಾಡುವುದೂ ಕೂಡಾ ಸಹಜವಾಗಿ ಅಭ್ಯಾಸವಾಗುತ್ತಾ ಹೋಗಿತ್ತು. ಅವುಗಳ ಜೊತೆ ಮಾತುಕತೆ, ತಮ್ಮದೇ ರೀತಿಯಲ್ಲಿ ಅವುಗಳು ಭಾವ ವ್ಯಕ್ತಪಡಿಸುವ ರೀತಿ ಗೊತ್ತಾಗುತ್ತಾ ಹೋದಂತೆ ಬಂಧ ಬಿಗಿಯಾಗುತಿತ್ತು. ದನಗಳಿಗೆ ಅರ್ಥಮಾಡಿಕೊಳ್ಳುವ ಶಕ್ತಿಯಿದೆ. ನಮ್ಮ ಕೋಪ, ದುಃಖ, ಸಂತೋಷ, ಎಲ್ಲವೂ ಅರ್ಥವಾಗುತ್ತದೆ. ಕೆಲವೊಮ್ಮೆ ಏನೋ ಕೆಡಕು ಸಂಭವಿಸುವ ಮುನ್ನ ಒಳ ಮನಸ್ಸು ತಳಮಳ, ಸಂಕಟ ಅನುಭವಿಸುತ್ತದಲ್ಲ ಅದು ದನಗಳಿಗೂ ಆಗುತ್ತೆ ಕಣೆ ನಮಗಿಂತ ಮೊದಲು ಅವುಗಳಿಗೆ ಗೊತ್ತಾಗುತ್ತೆ ಎಂದು ಅಜ್ಜಿ ಹೇಳುವಾಗಲೆಲ್ಲ ನಗು ಬಂದರೂ ಆಮೇಲಾಮೇಲೆ ಅರ್ಥವಾಗ ತೊಡಗಿತ್ತು.

ಅಲ್ಲೊಂದು ಇಲ್ಲೊಂದು ಮನೆಗಳಿದ್ದ,  ಜನ ವಿರಳವಾಗಿರುತಿದ್ದ ಆಗೆಲ್ಲಾ ಮಾತಿಗೆ, ಸಮಯ ಕಳೆಯಲು ಕೊಟ್ಟಿಗೆಯೇ ಮುಖ್ಯ ಸಂಗಾತಿ. ಎಲ್ಲಿಗೂ ಹೋಗಲೂ ಬರಲೂ ಆಗದ ಬೇಡಿಯೂ ಹೌದು. ಹಾಗಾಗಿ ನನ್ನ ನೋವಿಗೆ, ನಲಿವಿಗೆ, ಬೇಸರಕ್ಕೆ ಎಲ್ಲವಕ್ಕೂ ಕೊಟ್ಟಿಗೆಯೇ ಮದ್ದು. ಚಂದ್ರಿಯದೋ, ಕೆಂಪಿಯದೋ ಕೊರಳು ತಬ್ಬಿ ಮಾತಾಡುತ್ತಿದ್ದರೆ ಕಾಲ ಸರಿಯುವುದು ಪರಿವೆಗೆ ಬರುತ್ತಿರಲಿಲ್ಲ. ಚಂದ್ರಿ ಕಣ್ಣಿರು ನೆಕ್ಕಿದರೆ ಅದೆಷ್ಟು ಬೇಗ ಅದು ಅವಿಯಾಗುತಿತ್ತು ಗೊತ್ತೇ ಆಗುತ್ತಿರಲಿಲ್ಲ.  ಒಂಟಿತನ ಎಂದೂ ಕಾಡುತ್ತಿರಲಿಲ್ಲ. ನಂಗೆ ಮಾತ್ರ ಕೊಟ್ಟಿಗೆ ಇರೋ ಮನೆಯೇ ಬೇಕು ಎನ್ನುವಾಗಲೆಲ್ಲ ಮನೆಯಲ್ಲಿ ನಗುತ್ತಿದ್ದರು. ಕೋಡು ಕಣ್ಣಿಗೆ ತಾಗಿತು ಕಣೆ ಎಂದು ಅಜ್ಜಿ ಆಗಾಗ ಎಚ್ಚರಿಸುತ್ತಲೇ ಇರುತ್ತಿದ್ದಳು ನನ್ನ ಹುಚ್ಚಾಟ ನೋಡುವಾಗಲೆಲ್ಲ.

ಹೀಗಿರುವಾಗ ಮನೆಗೆ ಬರುವ ಅವಸರದಲ್ಲಿ ಒಮ್ಮೆ ಚಂದ್ರಿ ಜಾರಿ ಬಿದ್ದು ಕಾಲು ಮುರಿದುಕೊಂಡಳು. ಅದೇನು ಔಷಧಿ ಮಾಡಿದರೂ ಏಳಲು ಆಗದೆ ಮಲಗಿಯೇ ಇರುತ್ತಿದ್ದಳು. ಆಗಾಗ ಸುರಿಯುವ ಕಣ್ಣೀರು.  ಅವಳ ಜೊತೆ ಕುಳಿತು ಕೊರಳು ತಬ್ಬಿ ಮಾತಾಡಿ ಎದ್ದು ಬರುವಾಗ ದೈನ್ಯ ನೋಟ. ಅವಳನ್ನು ಸರಿಸಿ ಸ್ವಚ್ಛ ಮಾಡುವಾಗ ಅದೇನೋ ಹಿಂಸೆ ಅನುಭವಿಸುತ್ತಿದ್ದಳು. ಮೈ ಒರೆಸಿದರಂತೂ ನೆಕ್ಕಿ ಕೃತಜ್ಞತೆ ಸೂಸುತ್ತಿದ್ದಳು. ಅವಳ ಜೊತೆ ಇದ್ದಷ್ಟು ಹೊತ್ತು ಕಣ್ಣಲ್ಲಿ ಮಿಂಚು. ಅವಳು ಹೊರಟುಹೋದ ದಿನ ಮಾತ್ರ ಖಾಲಿತನ ಆವರಿಸಿತ್ತು. ಇವತ್ತಿಗೂ ಮತ್ತಾ ಖಾಲಿತನ ತುಂಬಲೆ ಇಲ್ಲ.

ಮೊನ್ನೆ ಎಪ್ಪತ್ತರ ದಶಕದ ಅತ್ತೆ ಊರಿನಿಂದ ಬಂದಿದ್ದ್ದರು. ಸಂಜೆಯಾಗುತ್ತಿದ್ದ ಹಾಗೆ ಅವರಿಗೇನೋ ತಳಮಳ, ಕುಳಿತಲ್ಲಿ ಕೂರಲಾಗದೆ ಒದ್ದಾಟ. ಏನೆಂದು ವಿಚಾರಿಸಿದರೆ ಮಗ ದನ ಕಟ್ಟಿದನೋ ಇಲ್ಲವೋ ಅನ್ನೋ ಆತಂಕ. ಕಟ್ಟದೇ ಇದ್ದರೂ ಕೊಟ್ಟಿಗೆಯಲ್ಲಿ ಇರುತ್ತೆ ಬಿಡಿ ಅಂದರೆ ಇಲ್ಲ ಕಣೆ ಕಟ್ಟದೆ ಇದ್ದರೆ ಅದು ರಾತ್ರಿ ಹೊರಗೆ ಹೋದರೆ ಬಂದು ಹಿಡಿದುಕೊಂಡು ಹೋಗ್ತಾರೆ ಅಂತ ಸಂಕಟ ಪಟ್ಟು ಕೊಂಡರು. ಈ ವಯಸ್ಸಿನಲ್ಲಿ ಯಾಕೆ ಬೇಕು ಇವೆಲ್ಲ ಆರಾಮಾಗಿರಬಾರದ ಎಂದರೆ ಒಂದೆರೆಡು ದಿನ ಎಲ್ಲೋ ಹೋಗುವ ಹುಚ್ಚಿಗೆ ಇಡೀ ವರ್ಷ ಒಂಟಿಯಾಗಿ ಇರೋದು ಹೇಗೆ? ಅವಿದ್ದರೆ ಸಮಯ ಕಳೆಯೋದು ಗೊತ್ತಾಗೊಲ್ಲ, ಮಾತಾಡೋಕೂ ಜೊತೆ ಅಂದರು. ಊರು ಬಿಟ್ಟು ಬದುಕು ಕಟ್ಟಿಕೊಳ್ಳಲು ಯುವಜನತೆ ಪಟ್ಟಣ ಸೇರಿದಾಗ ಒಂಟಿತನ ಕಾಡದಿರಲು, ಸಮಯ ಕಳೆಯಲು ಮತ್ತದೇ ಹಸುಗಳು ಹೆಗಲಾಗಿವೆ. ವೃದ್ಧಾಪ್ಯ ಕಾಡದಂತೆ ಜೊತೆಯಾಗಿವೆ.

ಮನೆ ಅದರಲ್ಲೂ ಹಳ್ಳಿ ಮನೆಯಿಂದರೆ ಕೊಟ್ಟಿಗೆ ಅವಿಭಾಜ್ಯ ಅಂಗ ಅನ್ನೋ ಹಾಗಿದ್ದ ಕಾಲ ಈಗ ಬದಲಾಗಿದೆ. ಕೊಟ್ಟಿಗೆ ಭಾರವಾಗ ತೊಡಗಿದೆ. ಬಾಂಧವ್ಯವೂ ಭಾರವಾಗುತ್ತಿದೆಯಾ....? ಹಾಲು ಪ್ಯಾಕೆಟ್ ಗಳಲ್ಲಿ ಸುಲಭವಾಗಿ ಸಿಗುತ್ತಿರುವಾಗ ಕಷ್ಟಪಟ್ಟು ದನ ಸಾಕುವುದು ವ್ಯರ್ಥ ಅನ್ನಿಸ ತೊಡಗಿದೆ. ಅದಕ್ಕೆ ಕಾರಣಗಳೂ ಹಲವು ಇವೆ. ಮೊದಲೆಲ್ಲಾ ಮನೆಯ ಅಂತಸ್ತನ್ನು ಕೊಟ್ಟಿಗೆ ಹೇಗಿದೆ ಅನ್ನುವುದರ ಮೇಲೆ ಅಳೆಯುವುದಿತ್ತು.  ಆದರೂ ಅಲ್ಲೊಂದು ಇಲ್ಲೊಂದು ಇನ್ನೂ ಮರೆಯಾಗದೆ ಉಳಿದಿದೆ. ಅಹಿ ಹುಟ್ಟುವ ವೇಳೆಗೂ ಮತ್ತದೇ ಸಂಭ್ರಮ. ಅಲ್ಲಿ ಕೊಟ್ಟಿಗೆಯಲ್ಲಿ, ಇಲ್ಲಿ ಆಸ್ಪತ್ರೆಯಲ್ಲಿ ಏಕಕಾಲಕ್ಕೆ ಪ್ರಸವ ವೇದನೆ. ಇತಿಹಾಸ ಮರುಕಳಿಸಿತು ಎಂಬಂತೆ ಎರಡು ದೇವತೆಗಳು ಭೂಮಿಗೆ ಇಳಿದರು. ಮತ್ತದೇ ಬಾಂಧವ್ಯದ ಕೊಂಡಿ ಮುಂದುವರೆಯಬಹುದಾ ಎಂಬ ಸಣ್ಣ ಆಸೆಯ ಬೀಜವೊಂದು ಮನದಲ್ಲಿ ಹುದುಗಿತ್ತು.

ಅದಾಗಿ ಅವಳು ನಡೆಯಲು ಕಲಿತ ಮೇಲೆ ಒಮ್ಮೆ ಊರಿಗೆ ಹೋದಾಗ ಪುಟ್ಟ ಪುಟ್ಟ ಹೆಜ್ಜೆ ಇಟ್ಟು ಅವಳು ಹೋದದ್ದೇ ಕೊಟ್ಟಿಗೆಗೆ. ಗಲೀಜು ಅನ್ನಿಸಿದರೆ ಕಾಲು ಕೆಳಗಿಡದ ಅವಳು ಕೊಟ್ಟಿಗೆಯಲ್ಲಿ ದರಗಿನ ಮೇಲೆ ಪುಟ್ಟ ಕರುವಿನ ಜೊತೆ ಚಕ್ಕಳ ಮುಕ್ಕಳ ಹಾಕಿ ಕುಳಿತು ಕೆಲವೊಮ್ಮೆ ಅದರ ಜೊತೆ ಮಲಗಿ ಮಾತಾಡುತ್ತಾಳೆ.  ಪುಟ್ಟ ಬುಟ್ಟಿಯಲ್ಲಿ ದರಗು ತಂದು ಹಾಕಿ ಪುಟ್ಟ ಕರುವಿನ ಬಾಯಿಯನ್ನು ತೆಗೆದು ತುಪ್ಪ ಹಚ್ಚಿದ ದೋಸೆಯ ತುಂಡೊಂದು ಇಟ್ಟು ತುಪ್ಪ ಸಾಕಾ ಚಟ್ನಿಯೂ ಬೇಕಾ ಎಂದು ಕೇಳುವಾಗ ಅದು ತಲೆ ಅಲ್ಲಾಡಿಸಿ ಹೇಳುವುದನ್ನ ಅರ್ಥ ಮಾಡಿಕೊಳ್ಳುವುದು ನೋಡಿದಾಗ ಚಂದ್ರಿ ಮತ್ತೆ ಹುಟ್ಟಿ ಬಂದಳೇನೋ ಅನ್ನಿಸಿತು..

ಮನೆಯಲ್ಲಿ ಹಸುವಿದ್ದರೆ ಹಾಲಿಗೆ ಮಾತ್ರವಲ್ಲ ಪ್ರೀತಿಗೂ ಬರವಿಲ್ಲ.
ವೃದ್ಧಾಪ್ಯ ಬಾಧಿಸುವುದೂ ಇಲ್ಲ...
ಒಂಟಿತನದ ಪರಿಚಯ ಇರುವುದೇ ಇಲ್ಲ...

ವಯಸ್ಸಾದ ಗೋವಿಗೆ ಬದುಕುವ ಅರ್ಹತೆ ಇಲ್ಲವೆಂದ ಮೇಲೆ ಮನುಷ್ಯರಿಗೆ ಇದೆಯೇ ?

Comments

Popular posts from this blog

ಮಾತಂಗ ಪರ್ವತ

ರಂಜದ ಹೂ

ಬರಿದೆ ಆಡುವ ಮಾತಿಗರ್ಥವಿಲ್ಲ...