ಇಪ್ಪತೆಂಟು ಹಣತೆಗಳು.

ದೀಪಾವಳಿ ಬರುತ್ತಿದ್ದಂತೆ ಮನಸ್ಸಿನಲ್ಲಿ ಏನೋ ಪುಳಕ, ಸಂಭ್ರಮ. ಪಟಾಕಿ ಹೊಡೆಯಬಹುದು ಅನ್ನೋದು ಒಂದು ಕಾರಣವಾದರೂ ಅದಕ್ಕಿಂತಲೂ ಹೆಚ್ಚು ಅವ್ಯಕ್ತ ಆನಂದ ಕೊಡುತ್ತಿದ್ದದ್ದು ಬಲಿ ಪಾಡ್ಯಮಿಯಂದು ಗೋಧೂಳಿ ಸಮಯದಲ್ಲಿ ಗೋವಿಗೆ ಆರತಿ ಎತ್ತಿ ಮನೆ ತುಂಬಾ ಹಚ್ಚುತ್ತಿದ್ದ ಹಣತೆಗಳು. ಅವತ್ತು ಮಾತ್ರ ಕಣ್ಣು ಕೋರೈಸುವ ಬೆಳಕು ಇಲ್ಲದೆ ಇಡೀ ಮನೆ ಹಣತೆಯ ಬೆಳಕಲ್ಲಿ ಮಿಂದಿರುತಿತ್ತು. ಅಂಗಳದ ಕತ್ತಲ ಸೆರಗಿನಲ್ಲಿ ನಿಂತು ನೋಡುವಾಗಲಂತೂ ಮಂದ ಬೆಳಕಿನಲ್ಲಿ ಮನೆ ಅಪೂರ್ವವಾಗಿ ಕಾಣಿಸುತ್ತಿತ್ತು. ಮನಸಿಗೆ ಏನೋ ಅವ್ಯಕ್ತ ಆನಂದ. ದಿವ್ಯ ಸಂತೋಷ.

ಬೆಳಕು ಅತಿಯಾದರೆ ಕಣ್ಣಿಗೆ ಚುಚ್ಚುತ್ತದೆ. ಬೇಕಾದದ್ದು ಬೇಡವಾದದ್ದು ಎಲ್ಲವೂ ಕಣ್ಣಿಗೆ ರಾಚಿ ಮನಸ್ಸಿನ ಚೀಲ ತುಂಬಿ ಭಾರವಾಗುತ್ತದೆ. ಕಡಿಮೆಯಾದರೆ ಯಾವುದೂ ಕಾಣಿಸುವುದಿಲ್ಲ, ಸ್ಪಷ್ಟವಾಗುವುದಿಲ್ಲ. ಈ ಮಂದ ಬೆಳಕು ಹಾಗಲ್ಲ ಏನು ಬೇಕೋ ಅದನ್ನ ಕಣ್ಣು ರೆಪ್ಪೆ ಹಿಗ್ಗಿಸಿ ಸ್ವಲ್ಪವೂ ಆಯಾಸವಿಲ್ಲದೆ ತುಂಬಿ ಕೊಳ್ಳುವ ಹಾಗೆ ಮಾಡುತ್ತದೆ. ಗರ್ಭಗುಡಿಯಲ್ಲಿ ನಂದಾದೀಪದ ಬೆಳಕಿನಲ್ಲಿ ಶೋಭಿಸುವ ವಿಗ್ರಹ ಮನಸ್ಸಿಗೆ ದಿವ್ಯತೆ ತುಂಬುವುದು, ಶಾಂತತೆ ಆವರಿಸುವುದು ಇದೇ ಕಾರಣಕ್ಕೆನೋ.. ಕೋರೈಸುವ ಬೆಳಕು ಕಣ್ಣು ಚುಚ್ಚಬಹುದೇ ವಿನಃ ಒಳಕ್ಕೆ ಇಳಿಯುವುದಿಲ್ಲ, ಇಳಿಯದೇ ಇದ್ದದ್ದು ಉಳಿಯುವುದಿಲ್ಲ.

ತೀರ್ಥರಾಮ ವಳಲಂಬೆಯವರು ಬರೆದ ಇಪ್ಪತ್ತೆಂಟು ಹಣತೆಗಳು ಎಂಬ ಪುಸ್ತಕವೂ ಹೀಗೆ.  ಹಣತೆಯ ಬೆಳಕಿನಂತೆ ಸೌಮ್ಯ, ಶಾಂತವಾದರೂ ಓದುತ್ತಾ ಹೋದಂತೆ ಬೆಳಕು ತಣ್ಣಗೆ ಒಳಗೆ ಆವರಿಸುತ್ತದೆ. ಯಾವ ಬದಲಾವಣೆಯೂ ತಕ್ಷಣಕ್ಕೆ ಘಟಿಸುವುದಿಲ್ಲ, ಘಟಿಸಲೂಬಾರದು. ರೂಪಾಂತರ ಅನ್ನೋದು ಹಂತಹಂತವಾಗಿ ಬದಲಾಗುತ್ತಾ ಹೋದಾಗಲೇ ಅರ್ಥವಾಗುತ್ತಾ, ಅನುಭವವಾಗುತ್ತಾ ಹೋಗುತ್ತದೆ. ಬದುಕಿನ ಭಾಗವೇ ಆಗುತ್ತದೆ. ಹಾಗಾಗದೆ ಹೋದಾಗ ಅದು ಪ್ರಭಾವ ಮಾತ್ರ. ಅದರ ಆಯಸ್ಸೂ ಅಷ್ಟೇ ಕ್ಷಣಿಕ. ವೇಗವಾಗಿ ಬಂದಿದ್ದು ವೇಗವಾಗಿಯೇ ಹೋಗುತ್ತದೆ ಎನ್ನುತ್ತಿದ್ದದ್ದು ಇದಕ್ಕೆ ಏನೋ..

ಹಾಗಾದರೆ ಯಾವುದೂ ಶಾಶ್ವತವಲ್ಲವಾ ಎಂದರೆ ಉತ್ತರ ಹೌದು. ಅನುಭವ, ಅಭಿರುಚಿಗಳು ಕಾಲಕಾಲಕ್ಕೆ ಬದಲಾಗುವುದರಿಂದ ವರ್ತಮಾನದ ನಮ್ಮ ನಿಲುವುಗಳು ಶಾಶ್ವತ ಎಂದು ತಿಳಿಯುವಂತಿಲ್ಲ.  ಪ್ರತಿಯೊಂದು ಇಲ್ಲಿ ಭಿನ್ನವೇ. ಹಾಗಾಗಿ ಭಿನ್ನ ಆಲೋಚನೆಗಳೂ ಸಹಜವೇ. ನಮ್ಮ ಬಹುತೇಕ ವರ್ತನೆಗಳು, ಭಾವಗಳು ಆ ಕ್ಷಣದ, ಸನ್ನಿವೇಶದ, ಸಂದರ್ಭದ ಮೇಲೆ ಅವಲಂಬಿತವಾಗಿರುತ್ತದೆಯೇ ಹೊರತು ಬೇರೇನಲ್ಲ. ಹಾಗಾಗಿ ಯಾವುದೇ ವ್ಯಕ್ತಿ, ಪ್ರಾಣಿ ಇನ್ನೊಂದು ಕ್ಷಣಕ್ಕೆ ಹೀಗೆ ವರ್ತಿಸಬಹುದು ಎಂದು ಹೇಳುವುದು ಕಷ್ಟ. ಹಾಗಾಗಿಯೇ ಕೋಪವೋ, ಪ್ರೀತಿಯೋ, ಸ್ನೇಹವೋ, ದ್ವೇಷವೋ ಇವು ಆ ಕ್ಷಣದಲ್ಲಿ ಹುಟ್ಟಿದ ಭಾವಗಳು. ಅದು ಹಾಗೆ ಇರತ್ತದೆ ಎಂದು ನಿರ್ಧರಿಸಬಾರದು, ಮುಂದುವರಿಸಲೂ ಬಾರದು. ಅದನ್ನು ಹಾಗೆ ಉಳಿಸಿಕೊಳ್ಳುವ ಪ್ರೌಢತೆಯಾಗಲಿ, ಸಮಚಿತ್ತತೆಯಾಗಲಿ ನಮ್ಮಲ್ಲಿ ಇರುವುದಿಲ್ಲ. ಹಾಗಾಗಿ ವರ್ತಮಾನದಲ್ಲಿ ನಮ್ಮತನ ಕಳೆದುಕೊಳ್ಳಬಾರದು. ನಾವು ಸರಿ ಎಂದು ಹೇಳಲು ಇನ್ನೊಬ್ಬರು ತಪ್ಪು ಎಂದು ಸಮರ್ಥಿಸಲೂ ಬಾರದು. ಇದ್ದದ್ದನ್ನು ಇದ್ದ ಹಾಗೆ ಒಪ್ಪಿಕೊಳ್ಳಲು ಕಲಿತಾಗ ಮಾತ್ರ ಬದುಕು ಸುಂದರವಾಗುತ್ತದೆ.

ಮನಸ್ಸಿನಲ್ಲಿ ಭಿನ್ನ ಭಿನ್ನ ಆಲೋಚನೆಗಳು ಸುಳಿದು ಮಾಯವಾಗುತ್ತಿರುತ್ತದೆ. ಹಾಗೆ ಮಾಯವಾದವು ಎಂದು ಕೊಳ್ಳುತ್ತೇವೆ ಆದರೆ ಪಂಚೆಂದ್ರಿಯಗಳಿಂದ ಗ್ರಹಿಸಿದ ಅಂದರೆ ನೋಡಿದ, ಕೇಳಿದ, ಆಘ್ರಾಣಿಸಿದ, ಸ್ಪರ್ಶಿಸಿದ, ರುಚಿಸಿದ ಪ್ರತಿಯೊಂದು ಮನಸ್ಸಿನ ಒಳಪದರದಲ್ಲಿ ಚಿತ್ರದ ರೂಪದಲ್ಲಿ  ದಾಖಲಾಗುತ್ತಾ ಹೋಗುತ್ತದೆ. ಅವುಗಳ ಆಧಾರದ ಮೇಲೆಯೇ ನಮ್ಮ ವರ್ತನೆಗಳೂ, ನಂಬಿಕೆಗಳೂ, ಆಲೋಚನೆಗಳೂ ರೂಪುಗೊಳ್ಳುತ್ತಾ ಹೋಗುತ್ತದೆ. ಇದನ್ನೇ ನಮ್ಮ ಹಿಂದಿನವರು ಯಮಲೋಕದಲ್ಲಿ ಚಿತ್ರಗುಪ್ತ ನಮ್ಮೆಲ್ಲಾ ಲೆಕ್ಕವನ್ನು ಬರೆದಿಡುತ್ತಾನೆ ಎಂದು ಹೇಳುತ್ತಿದ್ದದ್ದು.  ಹಾಗಾಗಿಯೇ ಮನುಷ್ಯನ ಯಾವ ಕ್ರಿಯೆಯೂ ವ್ಯರ್ಥವಲ್ಲ. ಈ ಜಗತ್ತಿಗೆ ನಾವು ಏನನ್ನು ಕೊಡುತ್ತೆವೆಯೋ ಅದೇ ವಾಪಾಸು ಬರುತ್ತದೆ. ಅದಕ್ಕೆ ನಮ್ಮ ಹಿರಿಯರು ಒಳ್ಳೆಯದು ಮಾಡಬೇಕು, ಒಳ್ಳೆಯದನ್ನೇ ಯೋಚಿಸಬೇಕು ಎನ್ನುತ್ತಿದ್ದದ್ದು.  ನ್ಯೂಟನ್ನನ ಪ್ರತಿ ಕ್ರಿಯೆಗೂ ಅದರ ತಕ್ಕುದಾದ ಪ್ರತಿಕ್ರಿಯೆ ಇರತ್ತದೆ ಅನ್ನುವುದಕ್ಕೂ ಇದಕ್ಕೂ ಎಷ್ಟೊಂದು ಸಾಮ್ಯ. ಸಾಗುವ ದಾರಿ ಗೊತ್ತಿರಬೇಕು ಅನ್ನೋದು, ಅದರ ಕಡೆ ಗಮನ, ಎಚ್ಚರ  ಇರಬೇಕು ಅನ್ನೋದು ಇದಕ್ಕೇನಾ....

ಯಾವುದೇ ಸಿದ್ಧಾಂತದೊಂದಿಗೆ ವಾದ ಪದ ಸೇರಿದಾಗ ಅಲ್ಲಿ ಸಿದ್ಧಾಂತದ ಮಹತ್ವ ಬದಿಗೊತ್ತಲ್ಪಟ್ಟು ಇತರರ ದೋಷಗಳನ್ನು ಎತ್ತಿ ಹಿಡಿಯುವ ಚಾಳಿ ಬೆಳೆದು ಬಿಡುತ್ತದೆ. ನಾನು ನನ್ನ ನಂಬಿಕೆ, ಸಿದ್ಧಾಂತ ನಡೆನುಡಿ ಇವಿಷ್ಟು ಮಾತ್ರ ಸರಿ ಎನ್ನಲು ಈ ವಾದ ಅಗತ್ಯ ಹಾಗೂ ಅನಿವಾರ್ಯವೇ ಹೊರತು ಇದರಿಂದ ಬೇರೇನೂ ಉಪಯೋಗವಿಲ್ಲ. ಹೀಗೆ ವಾದ ಮಾಡುವಾಗ ನಾನು ಸರಿಯೇನ್ನುವುದಕ್ಕಿಂತ ನೀನು ತಪ್ಪು ಎನ್ನುವುದೇ ಪ್ರಮುಖವಾಗಿ ಬಿಡುತ್ತದೆ. ಅಲ್ಲಿ ಬೆಳವಣಿಗೆ ಇಲ್ಲ. ಇನ್ನೊಬ್ಬರು ತಪ್ಪು ಎಂದ ಮಾತ್ರಕ್ಕೆ ನಾನು ಸರಿಯೆಂದಲ್ಲ. ಒಬ್ಬರನ್ನು ಹೊಗಳಲು ಇನ್ನೊಬ್ಬರನ್ನು ತೆಗಳುವ ಅನಿವಾರ್ಯತೆ ಇಲ್ಲ. ನಮ್ಮ ನಂಬಿಕೆ, ಸಿದ್ಧಾಂತದಲ್ಲಿ ಬಲವಿಲ್ಲದಾಗ, ನಮಗದು ಅರ್ಥವಾಗದೆ ಹೋದಾಗ ಮಾತ್ರ ಹೀಗೆ ಹೋಲಿಕೆ ಮಾಡುವ ಅಗತ್ಯ ನಿರ್ಮಾಣವಾಗುತ್ತದೆ. ಹಾಗಾಗಿ ಮುಂದಕ್ಕೆ ಹೋಗುವುದರ ಬಗ್ಗೆ ಗಮನ ಇರಬೇಕು.  ಎಲ್ಲಿಯವರೆಗೆ ನಾವು ನಮ್ಮ ಸಾಧನೆಯನ್ನು ಹೇಳಕೊಳ್ಳಲು ಹೋಲಿಕೆಯನ್ನು ಉಪಯೋಗಿಸುತ್ತೇವೋ ಅಲ್ಲಿಯವರೆಗೂ ನಾವು ಸ್ವತಂತ್ರರಾಗಿಲ್ಲ ಎಂದೇ ಅರ್ಥ...

ಬದುಕಿನಲ್ಲಿ ಮಹತ್ತರವಾದುದನು ಸಾಧಿಸಬೇಕಾದರೆ ಮೊದಲು ನಾವು ನಮ್ಮ ಗುರಿಯನ್ನು ನಿರ್ಧರಿಸಿಕೊಳ್ಳಬೇಕು. ಅದರ ಬಗ್ಗೆ ಆಲೋಚಿಸಬೇಕು, ಕಾರ್ಯ ನಿರತವಾಗಬೇಕು. ಆಗ ಪ್ರಕೃತಿಯೂ ಅದಕ್ಕೆ ಪೂರಕವಾಗಿ ಸ್ಪಂದಿಸುತ್ತಾ ಹೋಗುತ್ತದೆ. ಬೆಳಿಗ್ಗೆ ಇಷ್ಟು ಹೊತ್ತಿಗೆ ಏಳಬೇಕು ಎಂದು ಸಂಕಲ್ಪ ಮಾಡಿ ಮಲಗಿದರೆ ಆ ಸಮಯಕ್ಕೆ ಎಚ್ಚರವಾಗುವವ ಹಾಗೆ ದೇಹ ಮಾಡುತ್ತದೆ. ಪ್ರಕೃತಿಯಲ್ಲಿ ಪ್ರತಿಯೊಂದು ಸಂವಹನ ನಡೆಸುವುದು ತರಂಗಗಳ ಮೂಲಕ. ಹಾಗಾಗಿಯೇ ಒಳ್ಳೆಯ ಯೋಚನೆ ಮಾಡಬೇಕು, ಒಳ್ಳೆಯ ಮಾತು ಆಡಬೇಕು ಇಲ್ಲವಾದಲ್ಲಿ ಅಸ್ತು ದೇವತೆಗಳು ಅಸ್ತು ಎನ್ನುತ್ತಾರೆ ಹಾಗೆ ಆಗುತ್ತೆ ಅಂತ ಹಿರಿಯರು ಹೇಳುತಿದ್ದದ್ದು.  ಏಕಾಗ್ರ ಚಿತ್ತದಿಂದ ಮಾಡಿದ ಕೆಲಸ ಹಾಗೂ ಮಾತು ಎರಡಕ್ಕೂ ತುಂಬಾ ಶಕ್ತಿ ಇದೆ. ಇಲ್ಲಿ ಯಾವುದೂ ವ್ಯರ್ಥವಲ್ಲ.ಪ್ರತಿಯೊಂದು ತನ್ನ ಛಾಪು ಉಳಿಸಿಯೇ ಹೋಗುತ್ತದೆ.

ದೇವರ ಚಿತ್ರಗಳಲ್ಲಿ ಹಿಂದೆ ಒಂದು ಪ್ರಭಾವಲಯದ ಚಿತ್ರ ಇರುತ್ತದೆ. ವಾಸ್ತವವಾಗಿ ಪ್ರತಿಯೊಬ್ಬ ಮನುಷ್ಯನಿಗೂ ಒಂದು ಪ್ರಭಾವಲಯ ಇರುತ್ತದೆ ಮತ್ತದು ನಮ್ಮ ಆಲೋಚನೆಯನ್ನು ಅವಲಂಬಿಸಿರುತ್ತದೆ. ನಾವು ಮನದಲ್ಲೇ ಏನೋ ಆಲೋಚಿಸುತ್ತೇವೆ, ಯಾಕೋ ದುಃಖಿಸುತ್ತೇವೆ,  ನಮ್ಮ ನೋವಿಗೆ ಕಾರಣರಾದವರನ್ನು ಶಪಿಸಿಬಿಡುತ್ತೇವೆ. ಮತ್ತೆ ಮರೆತು ಬಿಡುತ್ತೇವೆ. ಆದರೆ ಅದರ ಪ್ರಭಾವ ಆ ಪರಿಸರದಲ್ಲಿ ಉಳಿದು ಬಿಡುತ್ತದೆ.  ಆದ್ದರಿಂದಲೇ ಕೆಲವು ಜಾಗ, ವ್ಯಕ್ತಿಗಳು ನಮಗೆ ಕಿರಿಕಿರಿಯಾಗುವ ಹಾಗಾದರೆ ಇನ್ನು ಕೆಲವು ಹಿತವಾದ ಅನುಭೂತಿ ಉಂಟುಮಾಡುತ್ತದೆ. ಶುಭಕಾರ್ಯಗಳಲ್ಲಿ ಬಂಧು ಮಿತ್ರರನ್ನು ಆಹ್ವಾನಿಸಿ ಅಲ್ಲೊಂದು ಒಳ್ಳೆಯ ವಾತಾವರಣ ಸೃಷ್ಟಿಯಾಗುವ ಹಾಗೆ ಮಾಡುವುದರ ಹಿಂದಿನ ಉದ್ದೇಶವೂ ಇದೇ ಆಗಿದೆ. ಶುಭಸಂದರ್ಭಗಳಲ್ಲಿ ಹಿರಿಯರ ಆಶೀರ್ವಾದ ಪಡೆಯುವುದೂ ಸಹ ಇದೆ ಕಾರಣಕ್ಕಾಗಿ.  ಯಾರಿಗೂ ನೊಂದು ಶಾಪ ಹಾಕಬಾರದು ಅನ್ನುತ್ತಿದ್ದದ್ದೂ ಕೂಡಾ ಇದಕ್ಕೆ ಏನೋ..

ಇಂತವುಗಳನ್ನೆಲ್ಲಾ ಹೇಳಿದರೆ ಪಾಲಿಸುವುದಿಲ್ಲ ಎನ್ನುವ ಕಾರಣದಿಂದಲೇ ಕೆಲವು ಕಟ್ಟುಪಾಡುಗಳನ್ನೂ ನಮ್ಮ ಹಿರಿಯರು ಮಾಡಿದ್ದರು. ಮನುಷ್ಯ ಭಯಕ್ಕೆ ಹೆದರಿ ನಿಯಮ ಪಾಲಿಸುವಷ್ಟು ತಂತಾನೇ ಪಾಲಿಸುವುದಿಲ್ಲ. ಹಾಗಾಗಿ ಸಂಪ್ರದಾಯ ಎಂದ ಕೂಡಲೇ ಮೂಗು ಮುರಿದು ಅದೆಲ್ಲ ಮೂಢನಂಬಿಕೆ ಮಾತ್ರ ಎಂದು ಕಡೆಗಣಿಸುವುದು ಕೂಡಾ ಮೂಢನಂಬಿಕೆಯೇ ಆಗುತ್ತದೆ. ಪ್ರತಿಯೊಂದಕ್ಕೂ ತನ್ನದೇ ಆದ ಹಿನ್ನಲೆ ಹಾಗೂ ಕಾರಣಗಳು ಇದ್ದೆ ಇರುತ್ತದೆ. ನಂಬಿಕೆ ಅನ್ನೋದು ಬದುಕಿನ ಮೂಲಾಧಾರ. ಅದನ್ನು ಖಂಡಿಸುವ ಮುನ್ನ ಅಂತಹುದೇ ಇನ್ನೊಂದು ಸಶಕ್ತವಾದ ನಂಬಿಕೆಯನ್ನು ಅವರಿಗೆ ಕಟ್ಟುಕೊಡಬೇಕು. ಇಲ್ಲವಾದಲ್ಲಿ ಬದುಕು ಕುಸಿಯುತ್ತದೆ. ನನಗೆ ಗೊತ್ತಿಲ್ಲ ಎಂದ ಮಾತ್ರಕ್ಕೆ ಅದಿಲ್ಲವೆಂದಲ್ಲ.

ಪ್ರಕೃತಿಗೆ ತನ್ನದೇ ಆದ ಚಲನೆಯಿದೆ. ಅದಕ್ಕೊಂದು ಕ್ರಮವಿದೆ. ಎಲ್ಲವೂ ನಮ್ಮ ಅರಿವಿಗೆ ದಕ್ಕುವುದಿಲ್ಲ. ಇಲ್ಲಿ ಯಾವುದೂ ಅನಿರೀಕ್ಷಿತವಾಗಿ ಜರುಗುವುದಿಲ್ಲ, ಕಾರಣವಿಲ್ಲದೆ ಯಾವುದೂ ಘಟಿಸುವುದೂ ಇಲ್ಲ. ನಾವು ತಿಳಿದುಕೊಳ್ಳುಲು ಪ್ರಯತ್ನಪಟ್ಟಷ್ಟು ಪ್ರಕೃತಿ ನಿಗೂಢವಾಗುತ್ತಾ ಹೋಗುತ್ತದೆ. ಹಾಗೆ ನಿಗೂಢವಾಗಿದ್ದಕ್ಕೆ ಬದುಕು ಆಸಕ್ತಿ ಹುಟ್ಟಿಸಿದೆ. ಎಲ್ಲವೂ ಗೊತ್ತಿದ್ದರೆ ಅಲ್ಲಿ ಆಸಕ್ತಿ ಇರಲಿ ಬದುಕುವ ಆಸೆಯೂ ಹೋಗಬಹುದು. ಕಾಲಕಾಲಕ್ಕೆ ಏನು ಬೇಕು ಅದನ್ನು ತಿಳಿಸುತ್ತಾ ಹೋಗುವ ಪ್ರಕೃತಿಗಿಂತ ಬೇರೆ ಗುರುವಿಲ್ಲ. ಈ ಸತ್ಯವನ್ನು ಅರ್ಥಮಾಡಿಸುವುದರಲ್ಲಿ  ಈ ಪುಸ್ತಕ ಹಣತೆಯಂತೆ ಕೆಲಸ ಮಾಡುತ್ತದೆ. ಓದಿ ಮುಗಿಸುವಾಗ ನಂದಾದೀಪವೊಂದು ಎದೆಯಲ್ಲಿ ಉರಿಯುತ್ತಿರುತ್ತದೆ. ಮನದ ಅಂಗಳದಲ್ಲೆಲ್ಲಾ ತಂಪು ಬೆಳಕು ಚೆಲ್ಲಾಡುತ್ತದೆ.  ನಾವು ನಾವಾಗಿಯೇ ಬದುಕುವ ದಾರಿ ಆ ಬೆಳಕಿನಲ್ಲಿ ಗೋಚರಿಸುತ್ತದೆ.

 ಅಂತಿಮವಾಗಿ ನಡೆಯುವುದು ನಮ್ಮ ಕಾಲಿನ ಕಸುವಿಗೆ ಬಿಟ್ಟ ವಿಚಾರ ಅಲ್ಲವೇ... ಅವರವರ ನಡುಗೆ ಅವರವರೆ ನಡೆಯಬೇಕು..





Comments

Popular posts from this blog

ಮಾತಂಗ ಪರ್ವತ

ರಂಜದ ಹೂ

ಬರಿದೆ ಆಡುವ ಮಾತಿಗರ್ಥವಿಲ್ಲ...