ಹಲಸಿನ ಹಣ್ಣು

ಹಲಸಿನ ಹಣ್ಣು ಮುಚ್ಚಿಟ್ರೂ ಊರಿಗೆಲ್ಲಾ ತಿಳಿಯುತ್ತೆ ಅನ್ನೋಳು ಅಜ್ಜಿ ಏನಾದರೂ ಸಂದರ್ಭ ಬಂದಾಗ. ಆ ಸಂದರ್ಭ ಸನ್ನಿವೇಶ ಅರ್ಥವಾಗದ ವಯಸ್ಸು ಅದಾದರೂ ಈ ಹಾಳಾದ್ದು ಹಲಸಿನ ಹಣ್ಣಿನ ವಾಸನೆ ಬಚ್ಚಿಡೋಕೆ ಆಗೋಲ್ಲ ಅನ್ನೋದು ಗೊತ್ತಾಗ್ತಾ ಇದ್ದಿದ್ದು ಕೆಲಸ ಮುಗಿಸಿ ಹೋಗುವವರು ಓ ಹಲಸಿನ ಹಣ್ಣು ಆದ ಹಾಗಿದೆ ಅನ್ನುವಾಗ. ಈ ಹಣ್ಣನ್ನು ಇಷ್ಟಪಡದ ಜನವೇ ವಿರಳ. ಅದರಲ್ಲೂ ಮಲೆನಾಡಿಗರಿಗೆ ಅದು ಬದುಕಿನ ಒಂದು ಅವಿಭಾಜ್ಯ ಅಂಗ.

ಈ ಹಲಸು ಒಂಥರಾ ಕಾಡು ನಾಡು ಅನ್ನೋ ಭೇಧವಿಲ್ಲದೆ ಎಲ್ಲಾ ಕಡೆಯಲ್ಲೂ ಹೊಂದಿಕೊಂಡು ಹೋಗುತ್ತದೆ. ದೊಡ್ಡ ಮರ ಅಗಲವಾಗಿ ಹರಡಿಕೊಂಡು ಒಳ್ಳೇ ನೆರಳು ಕೊಡುತ್ತದೆ. ಬೇಸಿಗೆಯಲ್ಲಿ ಅದರಡಿಯ ಕಲ್ಲಿನ ಮೇಲೆ ಕುಳಿತರೆ ಆ ತಂಪಿಗೆ ಅಲ್ಲೇ ನಿದ್ರೆ ಹೋಗುವ ಹಾಗಾಗುತ್ತದೆ. ಹಬ್ಬಕ್ಕೋ ಹರಿದಿನಕ್ಕೋ ಮಾವಿನ ಎಲೆಯಜೊತೆ ಇದರ ಎಲೆಯೂ ಬೇಕಾಗಿದ್ದರಿಂದ ಜನಗಳಿಗೂ ಅದು ಹತ್ತಿರವಿದ್ದಷ್ಟೂ ಅಪ್ಯಾಯಮಾನ.  ಉಪಕಾರವಿದ್ದರೆ ಮಾತ್ರ ಹತ್ತಿರಕ್ಕೆ ಬಿಟ್ಟು ಕೊಳ್ಳುವ ಮನುಷ್ಯ ಸ್ವಭಾವ ಹೊಸದೇನಲ್ಲ ಬಿಡಿ ಆದರೂ ಈ ಹಲಸು ಒಂಥರಾ ಅಬಾಲವೃದ್ಧರಾದಿಯಾಗಿ ಎಲ್ಲರಿಗೂ ಪ್ರಿಯವಾಗಿದ್ದಂತೂ ಹೌದು. ಹಲಸು ಮಾವು ಎರಡೂ ಶುಭಕಾರ್ಯಗಳಿಗೆ ಪ್ರಮುಖವಾಗಿದ್ದರಿಂದಲೋ ಏನೋ ಅವೆರೆಡು ಒಟ್ಟಿಗೆ ಇದ್ದರೆ ಒಳ್ಳೆಯದು ಅನ್ನೋ ನಂಬಿಕೆಯೂ ಇದೆ. ಆದರೆ ಹಾಗಿರೋದೂ ಕೂಡಾ ಅಪರೂಪವೆ.


ಹಲಸು ಬಡವರ ಪಾಲಿನ ವರ ಅನ್ನೋದು ಹಿಂದಿನಿದಲೂ ಬಂದ ನಂಬಿಕೆ. ವಿಟಮಿನ್, ಹಾಗೂ ಖನಿಜಾಂಶಗಳ ಗಣಿ ಇದು. ಗಾತ್ರ  ದೊಡ್ದದಿದ್ದಂತೆ ಇದರ ಉಪಯೋಗವೂ ಹಿರಿದು. ಅನಾವಶ್ಯಕ ಅನ್ನೋದು  ಯಾವುದೂ ಇದ್ರಲ್ಲಿ ಇಲ್ಲವೇನೋ ಅನ್ನುವಷ್ಟು ಉಪಕಾರಿ. ಕೇವಲ ಹಣ್ಣು ಮಾತ್ರ ಬಡವರ ವರ ಅಲ್ಲ ಮರವೂ ಕೂಡ. ಮನೆಯ ಹೆಬ್ಬಾಗಿಲು ಒಳ್ಳೆಯ ಜಾತಿಯ ಮರದ್ದೇ ಆಗಬೇಕು ಅನ್ನೋದು ನಂಬಿಕೆ. ಬೀಟೆ, ತೇಗ ತಾರಲು ಶಕ್ತಿಯಿಲ್ಲದವರು ಈ ಹಲಸಿನ ಮರವನ್ನೇ ಹೆಬ್ಬಾಗಿಲಿಗೆ ಬಳಸುತ್ತಿದ್ದರು. ದೇವರ ಮನೆಗಂತೂ ಇದರದ್ದೇ ಬಾಗಿಲು. ತಿಳಿ ಅರಿಶಿನ ಬಣ್ಣದ ಈ ಹಲಗೆಯನ್ನು ಕೊಯ್ಯುವಾಗ ಬಿಟ್ಟ ಕಣ್ಣು ಬಿಟ್ಟಂತೆ ನೋಡುತ್ತಾ ಕೂರುತಿದ್ದೆವು.

ಬೇಸಿಗೆಯ ಬಿಸಿಲಿಗೆ ಅಂಗಳದ ತುದಿಯಲ್ಲೋ, ಕೊಟ್ಟಿಗೆಯ ಹಿಂಬಾಗದಲ್ಲೋ ಇರುತಿದ್ದ ಮರದ ನೆರಳು ಹಾದಿಹೋಕರನ್ನು ತಂಪಾಗಿಸಿದರೆ ಅದಕ್ಕೊಂದು ಹಗ್ಗ ಕಟ್ಟಿ ಮಾಡಿಕೊಂಡ ಜೋಕಾಲಿ ಮಕ್ಕಳನ್ನು ಬ್ಯುಸಿ ಯಾಗಿ ಇಡುವುದರಲ್ಲಿ ಸಹಕಾರಿಯಾಗಿರುತಿತ್ತು. ಉದುರಿದ ಎಲೆಗಳು ಕೊಟ್ಟಿಗೆಯನ್ನು ಸೇರಿ ದನಗಳಿಗೆ ಮೃದು ಹಾಸಿಗೆಯಾಗಿ ಆಮೇಲೆ ಗೊಬ್ಬರವಾಗಿ ಗದ್ದೆಯನ್ನೋ ತೋಟವನ್ನೂ ಸೇರುತ್ತಿತ್ತು. ಇದ್ಯಾವುದೂ ಅಂತ ಆಸಕ್ತಿ ಕೆರಳಿಸುವ ವಿಷಯ ಅಲ್ಲವೇನೋ ಅನ್ನಿಸಿದರೂ ಮುಖ್ಯವೆನಿಸುತಿದ್ದದ್ದು ಅದು ಕಾಯಿ ಬಿಡಲು ಶುರುಮಾಡಿದಾಗ.

ಚಿಕ್ಕ ಕಾಯಿ ಹುಳಿಗೋ, ಪಲ್ಯಕ್ಕೋ ಉಪಯೋಗಕ್ಕೆ ಬಂದರೆ ಕೊಂಚ ಬಲಿತ ಆದರೆ ಹಣ್ಣಾಗದ ಕಾಯಿಯದೆ ಇನ್ನೊಂದು ವೈಭೋಗ. ಅದನ್ನು ತಂದು ಹೆಚ್ಚಿ ಸೊಳೆ ಬಿಡಿಸಿ ಅದನ್ನು ತೆಳುವಾಗಿ ಹೆಚ್ಚಿ ಎಣ್ಣೆಯಲ್ಲಿ ಕರಿದ ಚಿಪ್ಸ್ ಬಾಯಲ್ಲಿ ನೀರೂರಿಸುತ್ತದೆ. ಅದನ್ನು ಕೆತ್ತಿ ಸೊಳೆ ಬಿಡಿಸಿ ಇಡ್ಲಿ ಪಾತ್ರೆಯಲ್ಲಿ ಬೇಯಿಸಿ ಅದಕ್ಕೊಂದಿಷ್ಟು ಜೀರಿಗೆ ಮೆಣಸು, ಉಪ್ಪು ಹಾಕಿ ಒನಕೆಯಲ್ಲಿ ಹದವಾಗಿ ಕುಟ್ಟಿ ಉಂಡೆ ಮಾಡಿ ಲಟ್ಟಿಸಿ ಬಿಸಿಲಿಗೆ ಒಣಗಿಸಿದರೆ ಹಪ್ಪಳ ರೆಡಿಯಾಗುತ್ತದೆ. ಹಾಗೆ ಕುಟ್ಟಲು ತೋಳಿಗೆ ಬಲವಿರಬೇಕು. ಚುರುಕಿನ ಜೀರಿಗೆ ಮೆಣಸು ಜೊತೆಯಾಗಬೇಕು. ಲಟ್ಟಿಸಿ ಕೊಟ್ಟಾಗ ಕೊಂಡು ಹೋಗಿ ಒಣಗಿಸಲು ಮಕ್ಕಳು ಮನೆಯಲ್ಲಿರಬೇಕು. ಹಾಕಲು ಅಜ್ಜಿಯ ಸೀರೆ ಬೇಕು. ಆಗಾಗ ಕೋಲು ಹಿಡಿದು ಕಾಗೆಯನ್ನು ಓಡಿಸಲು ಒಬ್ಬ ಕಾವಲುಗಾರ ಅಜ್ಜ ಇರಲೇಬೇಕು. ಒಂದು ಹಲಸು ಹೇಗೆ ಮನೆಮಂದಿಯನ್ನೆಲ್ಲಾ ಬೆಸೆಯುತ್ತಿತ್ತು.

ಹೀಗೆ ಮಾಡಲು ಯಾವ ಮರದ ಕಾಯಿ ಚೆಂದ ಅನ್ನೋದು ಗೊತ್ತಿರಬೇಕು. ಎಲ್ಲಾ ಹಲಸು ಸರಿಯಾಗುವುದಿಲ್ಲ. ಎಲ್ಲಾ ಮನುಷ್ಯರು ಉಪಕಾರ ಮಾಡುವುದಿಲ್ಲ. ಹಾಡ್ಯದ ಆ ಮತ್ತಿ ಮರದ ಪಕ್ಕದ ಹಲಸಿನ ಕಾಯಿ ಹಪ್ಪಳಕ್ಕೆ ಭಾರಿ ಚೆಂದವಾದರೆ, ಇಲ್ಲೇ ಗೇಟ್ ನ ಪಕ್ಕದ ಮೈತುಂಬಾ ಕಾಯಿ ಬಿಟ್ಟ ಹಲಸು ಅಷ್ಟು ರುಚಿಸುವುದಿಲ್ಲ. ಹದ ಹಿಡಿಯುವುದಿಲ್ಲ. ಹಾಗೆ ಹುಡುಕಿ ಅದು ಮುಕ್ಕಾಗದಂತೆ ಕೊಯ್ದು ಹೊತ್ತು ತರಬೇಕು. ಕೈಗಿಷ್ಟು ಎಣ್ಣೆ ಹಚ್ಚಿಕೊಂಡು ಅದನ್ನು ಹೆಚ್ಚಿ ತೊಳೆ ಬಿಡಿಸಬೇಕು. ಇಲ್ಲವಾದಲ್ಲಿ ಮೇಣ ಕೈಗೆ ಹತ್ತುತ್ತದೆ. ಬೆರಳುಗಳು ಅಂಟಿಕೊಳ್ಳುತ್ತದೆ. ಅಂಟಿಕೊಳ್ಳದೆ ಇದ್ದಾಗ ಮಾತ್ರ ಹಲಸು ಬಿಡಿಸಲು ಆಗುತ್ತದೆ.

ಮೈತುಂಬಾ ಮುಳ್ಳು ಹೊತ್ತ ಇದು ನೋಡಲು ಒರಟು, ತೀರಾ ಹತ್ತಿರಕ್ಕೆ ಬಿಟ್ಟು ಕೊಳ್ಳದೇ ಧಿಕ್ಕರಿಸಿ, ಬಂದವರನ್ನು ಚುಚ್ಚಿ ದೂರ ಇಡುತ್ತದೆ. ಅಷ್ಟಾಗಿಯೂ ತಾಳಿಕೊಂಡು ತಂದು  ಅದನ್ನು ಹೆಚ್ಚಿದರೆ ಒಳಗಿನ ಮೇಣ ಮೈ ಕೈಗೆಲ್ಲಾ ಮೆತ್ತಿಕೊಳ್ಳುತ್ತದೆ. ಅವೆಲ್ಲವನ್ನೂ ದಾಟಿ ಮುಂದೆ ಹೋದಾಗ ಸಿಹಿಯಾದ ತೊಳೆ ಕಣ್ಮನ ಸೆಳೆಯುವುದು ಮಾತ್ರವಲ್ಲ ಉದರವನ್ನು ತೃಪ್ತಿಗೊಳಿಸುತ್ತದೆ. ಹಾಗಾಗಿ ತಾಳ್ಮೆ ಬೇಕು, ಮುಗಿಸುವ ದೃಢ ಮನಸ್ಸು ಇರಬೇಕು. ಅವರೆಡೂ ಇದ್ದಾಗ ಹಲಸು ಬಿಚ್ಚಿಕೊಳ್ಳುತ್ತದೆ. ಬಾಯಿ ಸಿಹಿ ಮಾಡುತ್ತದೆ. ಈ ಹಲಸಿನ ಹಣ್ಣು ಏನೆಲ್ಲಾ ಹೇಳುತ್ತಿತ್ತು. ಆದರೆ ಆಗ ಕೇಳಿಸಿಕೊಳ್ಳುವುದಕ್ಕಿಂತ ತಿನ್ನುವುದೇ ಮುಖ್ಯವಾಗಿತ್ತು.

ಬಕ್ಕೆ, ಚಂದ್ರಬಕ್ಕೆ ಹಣ್ಣಾದಾಗ ತಿನ್ನಲು ಸೊಗಸು.ಬಿಳುವ ಸಿಹಿ ಜಾಸ್ತಿ ಆದರೆ ತಿನ್ನಲು ಕಷ್ಟ. ತೀರಾ ಮೆದುವಾದ ಅದರ ಸೊಳೆ ಗಂಟಲಿಗೆ ಸಿಕ್ಕಿ ಹಾಕಿಕೊಳ್ಳುತ್ತದೆ. ತುಂಬು ಮೃದುವಾದ ಮನುಷ್ಯ ಬದುಕಿನ ಸಿಕ್ಕುಗಳಲ್ಲಿ ಸಿಲುಕಿಕೊಂಡ ಹಾಗೇ .. ಹಣ್ಣು ಹೆಚ್ಚಿ ಭಾಗ ಮಾಡಿ ಒಂದೊಂದೇ ಸೊಳೆಯನ್ನು ಬಿಡಿಸಿ ತಿನ್ನುತಿದ್ದರೆ ಅಂತ ದೊಡ್ಡ ಹಣ್ಣೂ ಕ್ಷಣಮಾತ್ರದಲ್ಲಿ ಖಾಲಿ ಆಗುತ್ತದೆ. ಜೊತೆಗೆ ಜೇನುತುಪ್ಪ ಇದ್ದರಂತೂ ಮುಗಿದೇ ಹೋಯಿತು. ಬರೀ ತಿನ್ನಲಷ್ಟೇ ಅಲ್ಲ ಇದರಿಂದ ತಿಂಡಿಯೂ ಮಾಡಬಹುದು. ಹಲಸಿನ ಹಣ್ಣಿನ ದೋಸೆ, ಇಡ್ಲಿ, ಕೊಟ್ಟೇ ಕಡಬು,ಮೂಳಕ ಹೀಗೆ ಬಗೆಬಗೆಯ ತಿಂಡಿಗಳೂ ಇದರಿಂದ ತಯಾರಾಗುತ್ತವೆ. ಅಡುಗೆ ಮನೆಯ ಪಕ್ಕದಲ್ಲೋ, ಕೊಟ್ಟಿಗೆಯ ಮಾಡಿನ ಬದಿಯಲ್ಲೋ ಕುಳಿತು ಹಣ್ಣು ಹೆಚ್ಚುತ್ತಿದ್ದರೆ ನಮ್ಮಷ್ಟೇ ಅವಸರ ದನಕರುಗಳಿಗೂ..

ಹೆಚ್ಚುವ ಸದ್ದು ಕಿವಿಗೆ, ಪರಿಮಳ ಮೂಗಿಗೆ ತಲುಪುತ್ತಿದ್ದಂತೆ ಅವೂ ಎದ್ದು ಸದ್ದು ಮಾಡುತ್ತಿದ್ದವು. ಅಲ್ಲೇ ತಿರುಗಾಡಿ ಏನೂ ಉತ್ತರ ಬರದಿದ್ದರೆ ಕೂಗಿ ಕರೆಯುತ್ತಿದ್ದವು. ಹಾಗಾಗಿ ಹಣ್ಣು ಭಾಗ ಮಾಡಿ ಬಿಡಿಸಿ ಸ್ಯಾಡೆ ಖಾಲಿ ಆಗುತ್ತಿದ್ದಂತೆ ಅದನ್ನು ಕೊಟ್ಟಿಗೆ ಹಾಕಿದರೆ ಮುಗಿಯಿತು. ದನಗಳು ಕುಣಿದು ಖುಷಿಯಿಂದ ನಮ್ಮ ತರಹವೇ ಗುದ್ದಾಡಿಕೊಂಡು ತಿನ್ನುತ್ತಿದ್ದವು. ಹೊರಗೆ ಮೇಯಲು ಹೋದಾಗ ಹಣ್ಣಾಗಿ ಬಿದ್ದ ಅವುಗಳನ್ನು ದೊಗೆದು ತಿಂದು ಹೊಟ್ಟೆ ತುಂಬಿಸಿಕೊಂಡು ಬರುತಿದ್ದವು. ಶಾಲೆಗೇ ಹೋಗುವ ನಮ್ಮ ಸ್ಥ್ತಿತಿಯೂ ಇದಕ್ಕಿಂತ ಭಿನ್ನವಾಗಿರಲಿಲ್ಲ. ಊಟದ ವೇಳೆಯಲ್ಲೋ ವಾಪಾಸ್ ಬರುವಾಗಲೋ ಹಣ್ಣು ಕಂಡರೆ ಅದನ್ನು ಕೆಡವಿ ಬಗೆದು ತಿಂದು ಬರುತ್ತಿದ್ದೆವು. ಹಾಗಾಗಿ ಮಳೆಗಾಲದಲ್ಲಿ, ಹಣ್ಣಿನ ಸೀಸನ್ ನಲ್ಲಿ ವಾಸನೆ ಕೇವಲ ಹಣ್ಣಿನಿಂದಲೋ, ತಿಂಡಿಯಿಂದಲೋ ಮಾತ್ರ ಬರುತ್ತಿರಲಿಲ್ಲ. ಕುಡಿಯುವ ಕಾಫಿಯಲ್ಲೂ ಅದರ ಘಮ ಹೊಗೆಯಾಡುತ್ತಿರುತ್ತಿತ್ತು. ದನದ ಹಾಲು  ಕರೆದು  ಕಾಯಿಸುವಾಗ ಹಣ್ಣಿನ ಪರಿಮಳವೇ ಬರುತಿತ್ತು. ಹಾಗಾಗಿ ಇಡೀ ಪರಿಸರ  ಸರ್ವಂ ಹಲಸು ಮಯಂ ಅನ್ನೋ ಹಾಗಿರುತಿತ್ತು.

ಹೀಗೆ ಮನುಷ್ಯರು, ಪ್ರಾಣಿಗಳು ಅನ್ನದೆ ಎಲ್ಲರನ್ನೂ ಒಂದಾಗಿಸುವ ಶಕ್ತಿ ಹಲಸಿಗಿದೆ. ಎಷ್ಟು ತಿಂದರೂ ಬೋರ್ ಹೊಡೆಸದ ಇರುವ ಶಕ್ತಿಯೂ ಇದಕ್ಕೆ. ಒಂದಿನ ದೋಸೆ, ಇನ್ನೊಂದು ದಿನ ಕಡುಬು ಹೀಗೆ ರೂಪಾಂತರ ಹೊಂದುತ್ತಾ ಏಕತಾನತೆ ಮೀರುವ ಸಾಮರ್ಥ್ಯವೂ ಅದಕ್ಕಿದೆ. ಯಾವುದೇ ರಾಸಾಯನಿಕ ಬಳಸದೆ ನೈಸಗಿರ್ಕವಾಗಿ ಬೆಳೆಯುತ್ತದೆ ಅನ್ನೋ ಕೋಡೂ ಜೊತೆಗಿತ್ತು. ಇವೆಲ್ಲದರ ಜೊತೆಗೆ ವಿಟಮಿನ್, ಖನಿಜಾಂಶಗಳ ಒಳಗೊಂಡಿದೆ ಅನ್ನೋ ಹೆಸರೂ ಇತ್ತು. ಸೊಳೆ ತಿಂದು ಒಳಗಿನ ಬೀಜವನ್ನು ಜಗುಲಿಯ ಮೂಲೆಯಲ್ಲೋ ಪತ್ತಾಸಿನ ಮೇಲೆ ಹರಡಿದರೆ ಮುಗಿಯಿತು. ತನ್ನ ಪಾಡಿಗೆ ತಾನು ಒಣಗಿಕೊಳ್ಳುತಿತ್ತು.

ಹೀಗೆ ಒಣಗಿದ ಹಲಸಿನ ಬೀಜ ಸುರಿವ ಮಳೆಯಲ್ಲಿ ಕೆಂಡದಲ್ಲಿ ಸುಟ್ಟು ಪಾಟೀ ಚೀಲಕ್ಕೆ ತುಂಬಿಕೊಂಡು ಹೊರಟರೆ ದಾರಿ ಸಾಗಿದ್ದೂ ತಿಳಿಯುತ್ತಿರಲಿಲ್ಲ. ಸೌತೆಕಾಯಿಯಯ ಜೊತೆಗೆ ಹಾಕಿ ಹುಳಿ ಮಾಡಲೂ ಬರುತಿತ್ತು. ಧೋ ಎಂದು ಸುರಿವ ಮಳೆಯಲ್ಲಿ, ಬಚ್ಚಲ ಒಲೆಯ ಮುಂದೆ ಕುಳಿತು ಚಳಿ ಕಾಯಿಸುತ್ತಾ, ಇದನ್ನು ಸುಟ್ಟುಕೊಂಡು ತಿನ್ನುತ್ತ ಜಗತ್ತಿನ ವಿಷಯಗಳೆಲ್ಲಾ ಬಂದು ಹೋಗುತ್ತಿದ್ದವು. ಹೀಗೆ ತನ್ನ ಅಣುಅಣುವನ್ನೂ ಇನ್ನೊಬ್ಬರ ಉಪಯೋಗಕ್ಕೆ ಬಿಟ್ಟುಕೊಡುವ ದಿವ್ಯ ಸ್ವಭಾವ ಮೈ ತುಂಬಾ ಮುಳ್ಳುಗಳಿದ್ದ ಹಣ್ಣು ಹೊಂದಿರುತಿತ್ತು. ನೋಟದಿಂದ ಯಾವುದನ್ನೂ ಅಳೆಯದಿರು ಅನ್ನೋದನ್ನ ಪ್ರಕೃತಿ ಹೀಗೆ ಕಲಿಸುತಿತ್ತೇನೋ..

ಈಗ ರಸ್ತೆ ಬದಿಯಲ್ಲಿ ಒಂದು ಸೊಳೆಗೆ ಕೆಲವೊಮ್ಮೆ ಇಪ್ಪತ್ತು ರುಪಾಯಿ ಕೊಟ್ಟು ತೆಗೆದುಕೊಳ್ಳುವಾಗ ಮೈ ತುಂಬಾ ಹಣ್ಣು ಹೊತ್ತು ಕಾಯುತ್ತಿದ್ದ ಬೇಲಿಯ ಬುಡದ ಮರ ನೆನಪಾಗುತ್ತದೆ. ಮೈತುಂಬಾ ಕಾಯಿ ಬಿಟ್ಟರೂ ತಿನ್ನಲು ಜನವಿಲ್ಲದ ಊರಿನಲ್ಲಿ ಅದು ಏಕಾಂಗಿತನ ಅನುಭವಿಸುತ್ತಿರಬಹುದಾ ಅನ್ನೋ ಆಲೋಚನೆ ಸುಳಿದು ಹೋಗುತ್ತದೆ. ತಿನ್ನಲು ದನಗಳೂ ಈಗ ಇಲ್ಲದ ಕಾರಣ ಹಣ್ಣಾಗಿ ಬಿದ್ದು ಅಲ್ಲೇ ಕೊಳೆತು ನುಸಿಯಾಡುತ್ತೆ ವಾಸನೆ ಇಲ್ಲಿಯವರೆಗೂ ಬರುತ್ತೆ ಅನ್ನುವ ಅಜ್ಜಿಯ ದನಿಯಲ್ಲಿ ಸಣ್ಣ ನೋವು ಹರಿದು ಬರುತ್ತದೆ. ಘಮವಾಗಿದ್ದೆ ಕಾಲ ಕಳೆದಂತೆ ವಾಸನೆಯಾಗಿ ಬದಲಾಗುವುದು ಪ್ರಕೃತಿಯಲ್ಲಿ ಸಹಜವೇನೋ.... ಒಪ್ಪಿಕೊಳ್ಳಲು ಮಾತ್ರ ಅಸಹಜ ಅನ್ನಿಸುತ್ತಿದೆ ಅಷ್ಟೇ..

Comments

Popular posts from this blog

ಮಾತಂಗ ಪರ್ವತ

ರಂಜದ ಹೂ

ಬರಿದೆ ಆಡುವ ಮಾತಿಗರ್ಥವಿಲ್ಲ...