ಜೀರಿಗೆ ಮೆಣಸು

ನಾಳೆ ರಜೆ ಇದೆಯಲ್ಲ ತೋಟಕ್ಕೆ ಹೋಗಿ ಜೀರಿಗೆ ಮೆಣಸು ಕುಯ್ಕೊಂಡು ಬರಬೇಕು ಅಂತ ಅಜ್ಜಿ ಹೇಳಿದ ಕೂಡಲೇ ಕೋಪ ಸರ್ರಂತ ಮೇಲೆರುತಿತ್ತು. ಯಾಕಾದ್ರೂ ಈ ಗಿಡ ಹುಟ್ಟುತ್ತೇನೋ ಅನ್ನುವ ಕೋಪ. ಮೈತುಂಬಾ ಹಸಿರು, ಕೆಂಪಗಿನ ಕಾಯಿ ಬಿಟ್ಟು ಮುಗಿಲ ಕಡೆ ಮುಖ ಮಾಡಿ ನಿಂತಿರುತಿದ್ದ ಅದು ಶತ್ರುವಿನಂತೆ ಭಾಸವಾಗುತಿತ್ತು. ಕಳೆ ಸವರುವವರು ಇದನ್ನಾದರೂ ಸವರಬಾರದಿತ್ತಾ ಅಂತ ಗೊಣಗುಟ್ಟುತ್ತಲೇ ತೋಟದ ಕಡೆ ಸವಾರಿ ಹೊರಡುತಿದ್ದೆ. ಪುಟ್ಟ ಪುಟ್ಟ ಕಾಯಿಗಳನ್ನು ಬಿಡಿಸುವುದು ರೇಜಿಗೆಯ ಕೆಲಸವಾಗಿತ್ತು. ಅದೂ ಒಂದೆರೆಡೆ ಉಹೂ ಲೆಕ್ಕವಿಲ್ಲದಷ್ಟು ಹಗುರ ಕಾಯಿಗಳು.

ತೋಟದಲ್ಲಿ ಅಡಿಕೆ ಮರದ ನೆರಳಿನಲ್ಲಿ ಹುಟ್ಟಿ ನಗುತಿದ್ದ ಈ ಸುಂದರಿ ಯಾರ ಗಮನವನ್ನೂ ಸೆಳೆಯದೆ ಬೆಳೆಯುತ್ತಿದ್ದಳು. ಯಾರ ಆರೈಕೆ ಬೇಡದೆ, ಯಾವುದೇ ವಿಶೇಷ ಗಮನವಿಲ್ಲದೆ ತನ್ನಷ್ಟಕ್ಕೆ ತಾನು ಸೊಂಪಾಗಿ ಬೆಳೆಯುತ್ತಿದ್ದಳು. ತೋಟದ ಕಳೆಗಳ ಮಧ್ಯದಲ್ಲಿ ಕೆಲವೊಮ್ಮೆ ಕಾಣಿಸದೆ ಇರುವ ಸಂದರ್ಭಗಳೂ ಇತ್ತು. ಹಾಗಾಗಿ ಕೆಲವೊಮ್ಮೆ ಕಳೆ ಸವರುವ ಭರದಲ್ಲಿ ಕತ್ತಿಯ ಆಲಿಂಗನಕ್ಕೆ ಸಿಲುಕಿ ಅಡಿಕೆಯ ಮರದ ಬುಡಕ್ಕೋ ಇಲ್ಲಾ ದನಗಳ ಹೊಟ್ಟೆಗೋ ಸೇರಿ ಅಕಾಲಿಕ ಮರಣಕ್ಕೆ ಈಡಾಗುತ್ತಿದ್ದಳು. ಬಚಾವಾಗಿ ಬದುಕುಳಿದರೆ ಮೈತುಂಬಾ ಹೂವರಳಿಸಿ ಕೊಂಡು ಎಲೆಯೂ ಕಾಣದಂತೆ ಕಾಯಿ ಬಿಟ್ಟು ನೋಡುಗರ ಕಣ್ಮನ ಸೆಳೆಯುತ್ತಿದ್ದಳು.

ಕಾಯಿ ಪುಟ್ಟದಾದರೂ ಖಾರ ಬಹಳ. ಹಾಗಾಗಿಯೇ ಮಲೆನಾಡಿನ ಕಡೆ ತುಂಬಾ ಚುರುಕಾಗಿರುವವರಿಗೆ ಅಯ್ಯೋ ಅವಳಾ/ನಾ ಜೀರಿಗೆಮೆಣಸಿನ ಕಾಯಿ ಹಂಗೆ ಅನ್ನೋದು ಮಾಮೂಲು. ಒಂದಿಂಚೂ ಇರದ ಇದರ ಖಾರ ಮಾತ್ರ ಅಳತೆಗೋಲಿಗೆ ಸಿಗುತ್ತಿರಲಿಲ್ಲ. ಆದರೆ ಕೆಲವು ಅಡುಗೆಗಳಿಗೆ ಮಾತ್ರ ಇದಿಲ್ಲದೇ ರುಚಿಸುತ್ತಲೇ ಇರಲಿಲ್ಲ. ಪೇಟೆ ದೂರವಿರುವ ಹಳ್ಳಿ ಮನೆಗಳಿಗೆ  ಚಟ್ನಿಗೆ ಇನ್ನೊಂದಕ್ಕೆ ಮತ್ತೊಂದಕ್ಕೆ ಇದೆ ಆಪತ್ತಿಗೆ ಒದಗುವ ನೆಂಟ.  ವಿಪರಿತ ಖಾರವಾದರೂ ಇದು ಹಸಿಮೆಣಸಿನ ಕಾಯಿಯ ಹಾಗೆ ಉಷ್ಣವಲ್ಲ, ಜಾಸ್ತಿ ತಿಂದರೆ ಗ್ಯಾಸ್ಟ್ರಿಕ್ ಅನ್ನೋ ಸಮಸ್ಯೆಯೂ ಇಲ್ಲಾ. ಹಾಗಾಗಿ ಬಾಣಂತಿಯರಿಗೂ ಇದನ್ನ ಉಪಯೋಗಿಸುತ್ತಿದ್ದರು. ಕಾಯಿ ಹೇಗೆ ಸಣ್ಣವೋ ಅದರ ಭಾರ ಹೊತ್ತ ಗಿಡವೂ ತೀರಾ ದೊಡ್ಡದಲ್ಲ. ಅಷ್ಟೇ ಮೃದು. ಕಾಯಿ ಕೀಳುವ ರಭಸಕ್ಕೆ ಅದರ ಹೆರೆ ಕಿತ್ತು ಬರುವುದೂ ಉಂಟು. ಖಾರವಾದ ಮಾತ್ರಕ್ಕೆ ಕಠಿಣವಾಗಿರಬೇಕು ಎಂದೇನಿಲ್ಲವಲ್ಲ.

ಒಂದು ಎರಡೋ ಅಡಿಯಷ್ಟು ಉದ್ದ ಬೆಳೆಯುವ ಈ ಗಿಡದ ತುಂಬಾ ಕಾಯಿ,  ಬಿಡಿಸೋದು ಸುಲಭವಲ್ಲ. ಒಂದೊಂದೇ ಜೋಪಾನವಾಗಿ ಕಿತ್ತರೆ ಇಡೀ ದಿನ ಕಿತ್ತರೂ ಮುಗಿಯದಷ್ಟೂ ಇರುತಿತ್ತು. ಹಣ್ಣಾದರಂತೂ ಕೆಂಪು ಕೆಂಪಾಗಿ ಬಾಲ ಸೂರ್ಯನನ್ನೂ ನಾಚಿಸುವಷ್ಟು ಚೆಂದ. ಕಾಯಿಯಾದರೆ ಎಲೆಯ ಬಣ್ಣದ ಜೊತೆಗೆ ಸ್ಪರ್ಧಿಸುತಿತ್ತು. ಹತ್ತಿರ ಹೋಗದ ಹೊರತು ಕಾಣಿಸುತ್ತಲೇ ಇರಲಿಲ್ಲ.  ಮೂರ್ತಿ ಚಿಕ್ಕದಾದರೂ ಅವಳ ಮಡಿಲು ದೊಡ್ಡದು. ಹಾಗಾಗಿ ಒಂದೊಂದೇ ಬಿಡಿಸಲು ಆಗದೆ ಎಷ್ಟೋ ಸಲ ರೆಂಬೆಯನ್ನೇ ಕಿತ್ತು ತಂದು ಮನೆಯಲ್ಲಿ ಎಲ್ಲರೂ ಕುಳಿತು  ನಿಧಾನಕ್ಕೆ ಬಿಡಿಸುತ್ತಿದ್ದೆವು.
ಹಸಿ ಕಾಯಿಗಳನ್ನು ದಿನದ ಅಡುಗೆಗೆ ಬಳಸಿಕೊಂಡು ಹಣ್ಣಾದವುಗಳನ್ನು, ಹೆಚ್ಚಾದ ಕಾಯಿಗಳನ್ನು  ಅದರ ತೊಟ್ಟು ಬಿಡಿಸಿ ಬಿಸಿಲಲ್ಲಿ ಒಣಗಿಸಿ ಗಾಳಿಯಾಡದ  ಡಬ್ಬಿಗೆ ತುಂಬಿ ಅದಕ್ಕೊಂದು ಪಂಚೆಯ ತುಂಡು ಸುತ್ತಿ ಕಟ್ಟಿ ಅಟ್ಟದ ಮೇಲೆ ಇಟ್ಟರೆ ಎಷ್ಟು ದಿನಗಳಾದರೂ ಹಾಳಾಗುತ್ತಿರಲಿಲ್ಲ, ಖಾರವೂ  ಕಡಿಮೆಯಾಗುತ್ತಿರಲಿಲ್ಲ. ಬೇಕಾದ ಹಾಗೆ ತಂದು ಬಳಸಬಹುದಿತ್ತು. ದಿನ ಕಳೆದ ಹಾಗೆ ಶಕ್ತಿ ಕ್ಷೀಣಿಸಲು ಅದೇನು ನರಮನುಷ್ಯನೇ.. ಹಸಿಯೋ, ಒಣವೋ ತನ್ನ ಸ್ವಭಾವಮಾತ್ರ ಬದಲಾಯಿಸಿಕೊಳ್ಳುತ್ತಿರಲಿಲ್ಲ.

ಉಪ್ಪಿನಕಾಯಿಗೆ, ದಿಂಡಿನಕಾಯಿ ಗೊಜ್ಜಿಗೆ, ಹುರಳಿ ಸಾರಿಗೆ, ಕೆಸುವಿನ ಸೊಪ್ಪಿನ ಪಲ್ಯಕ್ಕೆ  ಜೀರಿಗೆ ಮೆಣಸಿನದು ಪ್ರಮುಖ ಪಾತ್ರ. ಅದಿಲ್ಲದೆ ಇವ್ಯಾವುದೂ ರುಚಿಗಟ್ಟುವುದಿಲ್ಲ. ಹಾಗಾಗಿ ಇದು ಮಲೆನಾಡಿನ ಮಹಾರಾಜ. ಹಲಸಿನ ಹಪ್ಪಳಕ್ಕಂತು ಇದರ ಜೊತೆ ಬೇಕೇ ಬೇಕು. ಒಂದೆರೆಡು ಈ ಮೆಣಸು ಜಜ್ಜಿ ಉಪ್ಪು ಸೇರಿಸಿ ಕಲೆಸಿದರೆ ಸೌತೆಕಾಯಿಗೆ, ಪೇರಳೆ ಹಣ್ಣಿಗೆ ಒಳ್ಳೆಯ ಜೊತೆ. ಬಕಾಸುರನೂ ನಾಚಿಸುವಷ್ಟು ತಿನ್ನಬಹುದಿತ್ತು.   ಗಿಡದ ಕುಡಿಯನ್ನು ತಂದು ತಂಬುಳಿಯೋ ಅಥವಾ ಬೇರೆ ಸೊಪ್ಪಿನ ಜೊತೆ ಸೇರಿಸಿ ಹುಳಿಯೋ ಮಾಡುವುದೂ ಉಂಟು. ಖಾರ ತಿನ್ನುವವರಿಗೆ ಇದರ ಕಾಯಿರಸ ಅತ್ಯಂತ ಪ್ರೀತಿ ಪಾತ್ರವಾದ ಅಡುಗೆ. ಬಾಣಂತಿಯರ ಅಡುಗೆಗೆ ಇದು ಪ್ರಧಾನ ಪಾತ್ರ ವಹಿಸುತ್ತಿತ್ತು.

ನಾಲಿಗೆ ಚುರುಗಟ್ಟಿಸುವ ಖಾರ ಹೊಂದಿದ ಇದು ಜೀರ್ಣಾಂಗಗಳ ಕಾರ್ಯವನ್ನು ಚುರುಕುಗೊಳಿಸುತಿತ್ತು. ನಾಲಿಗೆಯ ಅಗ್ರವನ್ನು ಕರಗಿಸಿ ದಪ್ಪ ನಾಲಿಗೆಯನ್ನೂ ಚುರುಕಾಗುವ ಹಾಗೆ ಮಾಡುತಿತ್ತು. ಮಾತಿನ ಕಟುತನವನ್ನು ಇದರ ಖಾರಕ್ಕೆ ಹೊಲಿಸುವುದೂ ಇದೆ.  ಉದ್ದಕ್ಕೆ ನಗುವ ಹಸಿಮೆಣಸನ್ನು ಖಾರದಲ್ಲಿ, ಸೌಂದರ್ಯದಲ್ಲಿ ಯಾವತ್ತೋ ಹಿಂದಕ್ಕೆ ಹಾಕಿ ನಮ್ಮ ಜೀರಿಗೆ ಮೆಣಸು ವಿಶ್ವಸುಂದರಿ ಪಟ್ಟ ಪಡೆದಾಗಿದೆ. ಮತ್ತು ಇವತ್ತಿಗೂ ತನ್ನ ಸ್ಥಾನವನ್ನು ಕಾಯ್ದುಕೊಂಡಿದೆ. ತುಂಬಾ ಕಾಲ ಒಂದು ಸ್ಥಾನವನ್ನು ಕಾಪಾಡಿಕೊಳ್ಳುವುದು ಎಂದರೆ ಅದು ಸುಲಭದ ಕೆಲಸವಲ್ಲ.  ಜೊತೆಗೆ ಆರೋಗ್ಯಕ್ಕೂ ಸಹಕಾರಿಯಾಗಿ, ರುಚಿಗೆ ಜೊತೆಯಾಗಿ ತನ್ನ ಘನತೆ ಹೆಚ್ಚಿಸಿಕೊಂಡಿದೆ.

ಎಲ್ಲೋ ತೋಟದಲ್ಲಿ ತನ್ನಷ್ಟಕ್ಕೆ ತಾನು ಬೆಳೆಯುವ ಈ ಸುಂದರಿ ಯಾರ ಸಹಾಯದ ಆರೈಕೆಯ ನೀರಿಕ್ಷೆಯಿಲ್ಲದೆ ಬೆಳೆಯುತ್ತಾಳೆ ಅಂದ ಮಾತ್ರಕ್ಕೆ ಅವಳಿಗೆ ಬೆಲೆಯಿಲ್ಲ ಅಂತ ಭಾವಿಸೋದು ತಪ್ಪು. ಕೆ.ಜಿ.ಗೆ ಸಾವಿರದ ಗಡಿ ದಾಟಿ ಓಡುವುದೂ ಉಂಟು. ಅವಳ ಖಾರಕ್ಕೆ ಮನಸೋತವರು, ಒಮ್ಮೆ ಅವಳ ಮೋಹಕ್ಕೆ ಒಳಗಾದವರು ಬೇರೆಡೆ ಮುಖ ಮಾಡುವುದು ಕಡಿಮೆಯೇ. ಆ ಮಟ್ಟಿಗೆ ಇಂದಿಗೂ ಅವಳು ಆಕರ್ಷಣೆ ಉಳಿಸಿಕೊಂಡಿದ್ದಾಳೆ. ಹಾಗೆಂದು ಈ ಪುಟ್ಟ ಕಾಯಿ ಒಣಗಿಸಿದಷ್ಟೂ ಹತ್ತಿಯಂತೆ ಹಗುರ. ಕೊಯ್ಯುವುದು, ಒಣಗಿಸುವುದು ತುಂಬು ತಾಳ್ಮೆಯನ್ನು ಬೇಡುತ್ತದೆ. ಖಾರ ಬೇಕು ಎಂದರೆ ತಾಳ್ಮೆ ಬೇಕು. ಎಂಥಾ ವಿರೋಧಾಭಾಸ ಅನ್ನಿಸುವಾಗಲೇ ಕಾದಷ್ಟು ಹರಿತ ಜಾಸ್ತಿ ಎನ್ನುವ ಸತ್ಯ ಅರಿವಾಗುತ್ತದೆ. 

ಅದಕ್ಕಿಂತ ಹೆಚ್ಚಾಗಿ ಅವಳು ಯಾರ ಆರೈಕೆಯ ನೀರೀಕ್ಷೆ ಇಲ್ಲದೆ ತನ್ನಷ್ಟಕ್ಕೆ ತಾನು ಹುಟ್ಟಿ ಬೆಳೆಯುತ್ತಾಳೆ. ಯಾರ ಗಮನವೂ ಬೇಡದೆ ಭದ್ರವಾಗಿ ಬೇರೂರುತ್ತಾಳೆ.  ಮುರಿದಷ್ಟೂ ಮತ್ತಷ್ಟು ಚಿಗುರಿ ನಗುತ್ತಾಳೆ. ಕೊಯ್ದಷ್ಟೂ  ಮಡಿಲ ತುಂಬಾ ಕಾಯಿ ಬಿಟ್ಟು ಸವಾಲು ಹಾಕುತ್ತಾಳೆ. ಸಹನೆ ಶಕ್ತಿ ಎರಡನ್ನೂ ಪರೀಕ್ಷೆ ಮಾಡುತ್ತಾಳೆ. ಸುತ್ತಲಿನ ಫಲವತ್ತತೆಯನ್ನು ಹೀರಿಕೊಂಡು ಸಮೃದ್ಧವಾಗುತ್ತಾಳೆ. ರುಚಿಯೆಂದು ಜಾಸ್ತಿ ತಿಂದರೆ ಉರಿ ಹತ್ತಿಸುತ್ತಾಳೆ.  ತಿಂದ ಪ್ರತಿ ಕಾಯಿಗೂ ಲೆಕ್ಕ ಚುಕ್ತ ಮಾಡುವ ಹಾಗೆ ಮಾಡುತ್ತಾಳೆ. ಘಾಟಿತನ ಇಷ್ಟವಾದರೆ ಸಾಲದು ಅದನ್ನು ದಕ್ಕಿಸಿಕೊಳ್ಳುವ ಸಾಮರ್ಥ್ಯವೂ ಬೇಕು ಎಂದು ಪಿಸುಗುಡುತ್ತಾಳೆ.

ಊರಿಂದ ಬರುವಾಗ ಅವಳನ್ನು ಕರೆದು ತಂದು ಬಾ ಪಟ್ಟಣ ನೋಡು ಅಂತ ಪಾಟ್ ಅಲ್ಲಿ ಹಾಕಿದ್ದೆ. ಸ್ವಚಂದ ಪರಿಸರದಲ್ಲಿ , ನಿಶಬ್ದಃ ವನ್ನೇ ಉಸಿರಾಡುವವಳು ಇಲ್ಲಿಯ ಗೌಜಿಗೆ, ಸಣ್ಣ ಜಾಗಕ್ಕೆ ಹೊಂದಿಕೆಯಾಗಬಲ್ಲಳಾ ಅನ್ನೋ ಸಂದೇಹದಲ್ಲಿ ದಿನಾ ನೀರುಣಿಸುತಿದ್ದೆ. ಜಾಗ ಯಾವುದಾದರೇನು, ಹೇಗಿದ್ದರೇನು ಬದುಕುವುದಷ್ಟೇ ನನ್ನ ಗುರಿ ಎಂದು ಹಚ್ಹ ಹಸಿರಾಗಿ ಚಿಗುರೊಡೆದು ಮೈತುಂಬಾ ಹೂವರಳಿಸಿ ನಗುತಿದ್ದಾಳೆ ಚೆಲುವೆ. ಅಹಿ ಒಂಚೂರು ಕಾಯಿಕುಯ್ದುಕೊಂಡು ಬಾರೆ ಅಂದರೆ ಮುಖವುಬ್ಬಿಸಿಕೊಂಡು ನಂಗಾಗಲ್ಲ ಅನ್ನುವ ಅವಳನ್ನು ನೋಡಿದಾಗ ನೋಡಿದ್ಯಾ ನಿನ್ನ ಬಾಲ್ಯವನ್ನು ಹೇಗೆ ಮರಳಿ ತಂದೆ ಅಂತ  ಮುಗುಳ್ನಗುವ ಹಾಗೆ ತಲೆದೂಗುವ ಗಿಡ ಮತ್ತೆ ತವರು, ಬಾಲ್ಯ ಎಲ್ಲವನ್ನೂ ನೆನಪಿಸುತ್ತಿದೆ.

ಖಾರವಾದರೂ ಹಿತವಾಗಿರಬೇಕು ಅನ್ನುವ, ನಿನ್ನ ಶಕ್ತಿಯಲ್ಲಿ ಮಾತ್ರ ಭರವಸೆಯಿಟ್ಟು ಬದುಕು ಎಂದು ಪಿಸುಗುಡುವ, ಏನೇ ಆದರೂ ಸ್ವಭಾವ ಬದಲಾಯಿಸದಿರುವ ಗಟ್ಟಿತನ ಕಲಿಸುವ, ಮೃದುವಾಗಿಯೇ ಚುರುಕು ಮುಟ್ಟಿಸುವ, ಸದಾ ಮುಗಿಲ ಕಡೆ ಮುಖ ಮಾಡಿ ಮೇಲಕ್ಕೆ ಏರು ಎಂದು ಸಾರುವ  ಈ ಜೀರಿಗೆ ಮೆಣಸಿನಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದು. ಮೃದುವಾದರೂ ಗಟ್ಟಿತನ ಹಿರಿದು.

Comments

Popular posts from this blog

ಮಾತಂಗ ಪರ್ವತ

ರಂಜದ ಹೂ

ಬರಿದೆ ಆಡುವ ಮಾತಿಗರ್ಥವಿಲ್ಲ...