ಮೀಸೆ.

ಆಗಿನ್ನೂ ಚಿಕ್ಕವರು. ಟಿ.ವಿ ಯಿನ್ನೂ ಎಲ್ಲಾ ಕಡೆಗೂ ಹೆಜ್ಜೆ ಇಟ್ಟಿರಲಿಲ್ಲ. ಆಗೆಲ್ಲಾ ರೇಡಿಯೋ ಬಲು ದೊಡ್ಡ ಮಾಧ್ಯಮ. ಮನರಂಜನೆ, ವಾರ್ತೆ, ಎಲ್ಲವಕ್ಕೂ ಅದೇ. ಆಗ ಮಧ್ಯಾನ ಚಿತ್ರಗೀತೆ ಪ್ರಸಾರವಾಗುತಿತ್ತು. ತಮ್ಮ ಮೆಚ್ಚಿನ ಗೀತೆ ಹಾಕಿ ಅಂತ ಕಾಗದ ಬರೆಯುತಿದ್ದರು. ಹಾಡು ಕೇಳಬೇಕು ಎಂದಾಗ ಹೀಗೆ ಕಾಗದ ಬರೆದು ಪ್ರತಿದಿನ ರೇಡಿಯೋ ಕಿವಿ ತಿರುಪಿ ನಮ್ಮ ಕಿವಿ ಅದಕ್ಕೆ ಕೊಟ್ಟು ಕೇಳಬೇಕಿತ್ತು. ಆಗೆಲ್ಲಾ ಒಂದಷ್ಟು ಹಾಡುಗಳು ಪದೇ ಪದೇ ಪ್ರಸಾರವಾಗುತಿತ್ತು. ಅದರಲ್ಲಿ ಮೀಸೆ ಹೊತ್ತ ಗಂಡಸಿಗೆ ಡಿಮ್ಯಾಂಡ್ ಅಪ್ಪೋ ಡಿಮ್ಯಾಂಡ್ ಅನ್ನೋದೂ ಒಂದು. ಆಗ ಕೇವಲ ಆಡಿಯೋ ಇದ್ದ ಕಾರಣ ಹೇಳುವವರಿಗಾಗಲಿ, ನಟಿಸಿದವರಿಗಾಗಲಿ ಮೀಸೆ ಇತ್ತಾ, ಆ ಮೀಸೆಯ ಮೇಲೆ ಕೈಯಾಡಿಸಿಕೊಂಡೆ ಹೇಳುತ್ತಿದ್ದಾರ ಎಂದು ಕಾಣಿಸದಿದ್ದರೂ ನಾವು ಭಾವಿಸುತಿದ್ದೆವು.

ಒಂದು ಹೆಣ್ಣಿಗೆ ಒಂದು ಗಂಡು ಅನ್ನೋದು ಕೇವಲ ಮಾತಿನಲ್ಲಿದ್ದ ಕಾಲವದು. ವರದಕ್ಷಿಣಿ ಅನ್ನೋ ಭೂತ ತನ್ನ ರುದ್ರನರ್ತನ ಮಾಡುತಿತ್ತು. ಗಂಡಸು ಅದರಲ್ಲೂ ಮೀಸೆ ಇದ್ದ ಗಂಡಸು ಅಂದರೆ ಮುಗಿಯಿತು. ಪಾಳೆಯಗಾರ ಇದ್ದ ಹಾಗೆ. ಅದರಲ್ಲೂ ಅಳಿಯನಾಗಿ ಬರುವವನಾದರೆ ಮುಗಿದೇ ಹೋಯಿತು. ನಡುಬಗ್ಗಿಸಿ, ಮೈ ಹಿಡಿಯಾಗಿಸಿ ನಿಂತು ಅವರ ದರ್ಪದ ಮಾತಿಗೆ ಕಿವಿಯಾಗಿ ಕೇಳಬೇಕಿತ್ತು. ಆಗೆಲ್ಲಾ ಛೆ ಗಂಡಾಗಿ ಹುಟ್ಟಬೇಕು ಅನ್ನೋ ಆಸೆ ಸುಪ್ತವಾಗಿ ಹುಟ್ಟಿ ಒಳಗೆ ಮಾಯವಾಗುತಿತ್ತು. ಹೆಣ್ಣಾಗಿ ಹುಟ್ಟಿದವೆಲ್ಲಾ ಅನ್ನೋ ಕೀಳರಿಮೆ ಕೂಡಾ. ಆದರೆ ಅವನೆದುರು ಬಾಗಿ ನಿಂತವನು ಮೀಸೆ ಹೊತ್ತ ಗಂಡಸೇ ಅಲ್ಲವಾ ಅನ್ನೋದು ಅರಿವಿಗೆ ಬರುತ್ತಲೇ ಇರಲಿಲ್ಲ ಯಾಕೋ... ಮುಳ್ಳನ್ನು ಮುಳ್ಳಿನಿಂದ ತೆಗೆಯುವಂತೆ ಮೀಸೆಯನ್ನು ಮೀಸೆಯೇ ಬಾಗಿಸುವುದು ಅಂದರೆ ಹಾಗೇನಾ.... 

ಅದರಲ್ಲೂ ತರಾನುತರಹದ ಮೀಸೆ. ತೆಳು ಮೀಸೆ, ದಪ್ಪ ಮೀಸೆ, ಪೋಗಸ್ತಾದ ಮೀಸೆ, ಪೈಲ್ವಾನ್ ಮೀಸೆ, ವೀರಪ್ಪನ್ ಮೀಸೆ,  ಕುಡಿ ಮೀಸೆ ಹೀಗೆ ತರಾವರಿ ಮೀಸೆಗಳು ಇದ್ದರೂ ಗಿರಿಜಾ ಮೀಸೆ ಅನ್ನೋ ಹೆಸರು ಹೆಚ್ಚು ಮನಸೆಳೆಯುತಿತ್ತು. ಗಂಡಸರ ಮೀಸೆಗೆ ಹೆಂಗಸರ ಹೆಸರು ಯಾಕಿತ್ತು ಅನ್ನೋದು ಇವತ್ತಿಗೂ ಉತ್ತರ ಸಿಗದ ಪ್ರಶ್ನೆಯೇ. ಗಡ್ಡ ಬಿಡದಿದ್ದರೂ ಮೀಸೆ ಬಿಡಲೇಬೇಕು ಅನ್ನೋ ಅಲಿಪ್ತ ನಿಯಮ. ಮೀಸೆ ಇಲ್ಲದ ನಿನ್ಯಾವ ಸೀಮೆ ಗಂಡಸೋ ಎನ್ನೋ ಮಾತು ಕೇಳಿ ಮೀಸೆ ಬಿಟ್ಟರೆ ಮಾತ್ರ ಗಂಡಸಾಗಲು ಅರ್ಹತೆ ಎಂದುಕೊಂಡು ಬಿಟ್ಟಿದ್ದೆ. ಹಾಗಾಗಿ ನಮ್ಮ ವಯಸ್ಸಿನ ಯಾರಾದರೂ ನಾನು ಹುಡುಗ ಅಂತೆನಾದಾರೂ ಗಾಂಚಾಲಿ ಮಾಡಿದರೆ ನಿನಗಿನ್ನೂ ಮೀಸೆ ಬಂದೇ ಇಲ್ಲ ಕಿಚಾಯಿಸಿ ಅವರ ಮುಖ ಸಣ್ಣಗಾಗುವುದು ಖುಷಿ ಕೊಡುವುದಕ್ಕಿಂತಲೂ ಆಮೇಲೆ ಅವರು ನಮ್ಮ ಸುದ್ಧಿಗೆ ಬರುತ್ತಿರಲಿಲ್ಲ ಅನ್ನೋದೇ ಖುಷಿ ಕೊಡುತ್ತಿತ್ತು. ಹಾಗಾಗಿ ಇಷ್ಟವೋ ಕಷ್ಟವೋ ಮೀಸೆ ಬಿಡಲೇ ಬೇಕಾದ ಅನಿವಾರ್ಯತೆ ಗಂಡಸರಿಗೆ. ದೇಹ ಸಣಕಲಾದರೂ ಮೀಸೆ ಮಾತ್ರ ದಪ್ಪಗಿರಲೇ ಬೇಕು ಅನ್ನುವ ಮೂಢನಂಬಿಕೆ ಕೂಡಾ. ಅಥವಾ ಬಲಹೀನತೆಯನ್ನು ಮೀಸೆಯಡಿ ಮುಚ್ಚಿಕೊಳ್ಳುವ ಪ್ರಯತ್ನವೋ ಗೊತ್ತಿಲ್ಲ.

ಸಣ್ಣ ಮೀಸೆ ಇದ್ದವರು ನೋಡೋಕೆ ಆಕರ್ಷಕ ಅನ್ನಿಸಿದರೂ ದಪ್ಪ ಮೀಸೆಯವರನ್ನು ನೋಡಿ ಭಯವಾಗುತ್ತಿತ್ತು. ದಪ್ಪ ಮೀಸೆ ಇರುವ ವಿಲನ್ ಗಳನ್ನ ಸಿನೆಮಾದಲ್ಲಿ ನೋಡಿ ನೋಡಿ ದಪ್ಪ ಮೀಸೆ ಬಿಟ್ಟವರೆಲ್ಲಾ ಕೆಟ್ಟವರು, ಖದೀಮರು ಎಂದು ಬಲವಾಗಿ ನಂಬಿ ಅವರನ್ನು ನೋಡಿದರೆ ನಡುಗುತ್ತಿದ್ದೆವು. ಅದರಲ್ಲೂ ಮೀಸೆ ತಿರುಗಿಸುವ ಗಂಡಸರ ನೋಡಿದರಂತೂ ಮುಗಿಯಿತು ಅವರು ವಿಲನ್ನೇ ಎಂದು ನಂಬುವುದು ಮಾತ್ರವಲ್ಲ ಫರ್ಮಾನು ಹೊರಡಿಸಿ ಅವರಿಂದ ಒಂದು ಅಂತರ ಕಾಯ್ದುಕೊಳ್ಳುತ್ತಿದ್ದೆವು. ಅಮ್ಮಂದಿರು ಅಷ್ಟೇ ನೋಡು ಇವರಿಗೆ ಹಿಡಿದು ಕೊಡ್ತೀನಿ ಅಂದರಂತು ಮುಗಿದೇ ಹೋಯಿತು ಅವರು ನಮ್ಮ ಪಾಲಿನ ರಾಕ್ಷಸರು. ಅದರಲ್ಲೂ ವೀರಪ್ಪನ್ ಮೀಸೆ ನೋಡಿದರಂತೂ ಮಾತು ಕತೆ ಚೇಷ್ಟೆ ಎಲ್ಲವೂ ಬಂದ್ ಆಗಿ ತೆಪ್ಪಗೆ ತಣ್ಣಗಾಗುತ್ತಿದ್ದೆವು. ಮಕ್ಕಳು ಸದ್ದಿಲ್ಲದೇ ತುತ್ತು ಇಳಿಸುತ್ತಿದ್ದರು.ಹಾಗಾಗಿ ಮೀಸೆ ಎಂದರೆ ಭಯ ಹೊರತು ಅಪ್ಯಾಯತೆ ಬಂದಿರಲೇ ಇಲ್ಲ. 

ಮನೆಯಲ್ಲಿ ಹಿರಿಯರು  ಹೇಳಿದ ಮಾತು ಕೇಳದ, ಎದುರುತ್ತರ ಕೊಡುವ ಹದಿವಯಸ್ಸಿನ ಗಂಡು ಮಕ್ಕಳನ್ನು ಬೈಯುವಾಗ ಮೀಸೆ ಬರುವಾಗ ಜಗತ್ತು ಕಾಣೋದು ಹೇಗೆ ಹೇಳು ಅಂತ ಗುರುಗುಟ್ಟುವಾಗ ಛೆ ಪಾಪ ಸದ್ಯ ನಂಗೆ ಮೀಸೆ ಬಂದಿಲ್ಲದಿದ್ದದ್ದೇ ಒಳ್ಳೆದಾಯ್ತು ಕಣ್ಣು ಕಾಣಿಸುತ್ತೆ ಅಂತ ಮುಖದ ಮೇಲೆ ಕೈಯಾಡಿಸಿ ಸಮಾಧಾನ ಪಟ್ಟುಕೊಳ್ಳುತ್ತಿದ್ದೆವು. ಮುಖದ ಎದುರಿಗೆ ಕೈ ಬೆರಳು ಹಿಡಿದು ಇದೆಷ್ಟು ಹೇಳು ಅಂತ ಕೇಳಿ ಉರಿದುಕೊಂಡು ಅವರು ಏನೇನೋ ಹೇಳಿ  ಬೈಸಿಕೊಂಡಾಗ ಕೋಪ ಬರುವುದರ ಬದಲಾಗಿ ಪಾಪ ನಿಜ ಕಣ್ಣು ಕಾಣೋಲ್ಲ ಇವರಿಗೆ ಅಂತ ಲೋಚಗುಟ್ಟು ಆಚೆ ಹೋಗುತ್ತಿದ್ದೆವು. ಎಷ್ಟು ಕಷ್ಟ ಅಲ್ವಾ ಅಂತ ಮರುಗುತ್ತಲೇ ಮತ್ತೆ ನಾನು ತಿಂಡಿ ತೆಗೆದಿದ್ದು ಇವನಿಗೆ ಹೇಗೆ ಕಾಣಿಸ್ತು ಅಂತ ತಲೆ ಕೆರೆದುಕೊಳ್ಳುವಾಗಲೇ ಅದು ಮರೆತೂ ಹೋಗುತಿತ್ತು.

ಸ್ವಲ್ಪ ದೊಡ್ಡವರಾಗಿ ನಮಗೆ ಬುದ್ಧಿ ಬಂತು ಅಂತ ನಾವೇ ಘೋಷಿಸಿಕೊಳ್ಳುವ ಹೊತ್ತಿಗೆ ಮೀಸೆಯ ಮೇಲೆ ಸಣ್ಣಗಿನ ವ್ಯಾಮೋಹ. ಅದರಲ್ಲೂ ಮೀಸೆ ತಿರುಗಿಸುವ ಭಂಗಿಯ ಚಂದ್ರಶೇಖರ್ ಆಜಾದ್ ಮೋಹ ಹುಟ್ಟಿಸಿದ್ದು ಅವನ ಮೇಲಾ ಮೀಸೆಯಾ ಮೇಲಾ ಅನ್ನೋ ಗೊಂದಲ ಈಗಲೂ. ಅಷ್ಟೊತ್ತಿಗೆ ಬಂದ ಅರವಿಂದ ಸ್ವಾಮೀ ಇನ್ನಷ್ಟು ಮುದ್ದು ಅನ್ನಿಸಿ ಮೀಸೆ ಈಗ ಮೋಹಕ ಅನ್ನಿಸತೊಡಗಿತ್ತು. ಹೀಗೆ ಹುಟ್ಟಿದ ಮೋಹ  ಯಾರ ಮೀಸೆ ಹೇಗಿದೆ ಅಂತ ನೋಡುವ, ಹೋಲಿಸುವ ಸಿ ಬಿ ಐ ಕೆಲಸ ಮಾಡಲು ಕಲಿಸಿತ್ತು.  ಅದರಲ್ಲೂ ಮೇಷ್ಟರ ಮೀಸೆ ನೋಡಿಯೇ ಅವರ ಸ್ವಭಾವ ಹೀಗೆ ಅಂತ ಹೇಳುವ ಕಲೆಯೂ ಕರಗತವಾಗಿತ್ತು. ಆಮೇಲೆ ಮೀಸೆಯಲ್ಲೂ ಮೀಸಲಾತಿ ಶುರುವಾಗಿ ಆ ಮೀಸೆಯವರು ಒಳ್ಳೆಯವರು, ಈ ಮೀಸೆಯವರು ಸರಿಯಿಲ್ಲ, ಅದೋ ಆ ತರಹದ ಮೀಸೆಯವರಂತೂ ಕೆಟ್ಟವರು ಎಂದು ವಿಭಾಗಿಸಿ ಜಾತಿ ಬೇರೆ ಮಾಡಿಬಿಟ್ಟಿದ್ದೆವು. ಜಾತಿಗೆ ತಕ್ಕ ಹಾಗೆ ನಮ್ಮ ವರ್ತನೆಯೂ.

ನಾವಿನ್ನೂ ಈ ಗೊಂದಲದಲ್ಲಿ ಇರುವಾಗಲೇ ಮೀಸೆ ಇರದ ಚಾಕಲೇಟ್ ಬಾಯ್ ಗಳ ಮೆರವಣಿಗೆ ಶುರುವಾಗಿತ್ತು. ಖಾನ್ ತ್ರಯರು ಮೀಸೆಯಿಲ್ಲದೆ ಬಂದು ಹುಡುಗಿಯರ ಹುಚ್ಚು ಹೆಚ್ಚಿಸಿದರೂ ನಾವೊಂದಷ್ಟು ಜನ ಆಗತಾನೆ ಹುಟ್ಟಿದ ಮೋಹದಿಂದ ಕಳಚಿಕೊಳ್ಳಲು ತಯಾರಿಲ್ಲದೆ ಒಳ್ಳೇ ಹುಡುಗಿಯರ ತರಹ ಕಾಣ್ತಾರೆ ಅಂತ  ಇನ್ನೆರೆಡು ಅರವಿಂದ ಸ್ವಾಮಿಯ ಫೋಟೋ ಕತ್ತರಿಸಿ ಇಟ್ಟುಕೊಂಡು ಅಂದು ಸಮಾಧಾನ ಪಟ್ಟುಕೊಂಡಿದ್ದೆವು. ಅದೇನೇ ಜಂಬ ಕೊಚ್ಚಿಕೊಂಡರೂ ಕಹೋನಾ ಪ್ಯಾರ್ ಎಂದು ಬಂದ ಹೃತಿಕ್ ಮಾತ್ರ ನಮ್ಮನ್ನು ಹೈಜಾಕ್ ಮಾಡಿ ಬಿಟ್ಟಿದ್ದ. ಎಲ್ಲರಿಗೂ ಚೆಂದ ಕಾಣೋಲ್ಲ ಇವನೋಬ್ಬನಿಗೆ ಮಾತ್ರ ಮೀಸೆ ಇಲ್ಲದಿದ್ದರೂ ಒಪ್ಪುತ್ತ್ತೆ ಅಂತ ಅಡಿ ಬಿದ್ದರೂ ಮೀಸೆ ಮಣ್ಣಾಗಿಲ್ಲ ಎಂದು ನಮ್ಮ ವಾದವನ್ನು ಸಮರ್ಥನೆ ಮಾಡಿಕೊಂಡಿದ್ದೂ ಉಂಟು. ಆದರೂ ಲೇಟ್ ಆಗಿ ಬಂದಾಗಲೋ, ಇನ್ನೇನೋ ತಂಟೆ ಮಾಡಿದಾಗಲೋ ಅವನಾದರೆ ಮೀಸೆ ಹೊತ್ತ ಗಂಡಸು ನಿಮಗೇನಾಗಿದೆ ಎನ್ನುವ ಯಾರದ್ದೋ ಮಾತಿಗೆ ಸಣ್ಣ ಸಂಕಟವಾಗಿದ್ದೂ, ಮೀಸೆಯ ಮೇಲೆ ಕೋಪ ಬಂದಿದ್ದೂ ಉಂಟು. ಒಂದು ಮೀಸೆಗೆ ಇಷ್ಟೊಂದು ಶಕ್ತಿ ಸ್ವಾತಂತ್ರ್ಯ ಉಂಟಾ ಅನ್ನೋ ಹೊಟ್ಟೆಕಿಚ್ಚು ಕೂಡಾ.

ಅದೇನೇ ಗೊಂದಲಗಳು, ಸಿಟ್ಟು  ಇದ್ದರೂ ಮನೆಯಲ್ಲಿ ಗಡ್ಡ ಮೀಸೆ ಮಾಡಿಕೊಳ್ಳುವ ದಿನವಂತೂ ಎಲ್ಲಿಲ್ಲದ ಸಂಭ್ರಮ. ಚಿಕ್ಕದಾದ ಬಾಕ್ಸ್. ಅದರೊಳಗಿನ ಪುಟ್ಟ ಕತ್ತರಿ. ಹೊಸ ಬ್ಲೇಡ್. ಬ್ರಷ್. ಅದ್ಯಾವುದೋ ಕ್ರೀಂ. ಅವರು ಅದೇನೋ ತಿಜೋರಿಯೇನೋ ಎನ್ನುವಂತೆ ಅದನ್ನು ಹೊತ್ತು ತಂದು ಬಿಸಿ ನೀರು ತಂದುಕೊಡು ಅಂತ ಆರ್ಡರ್ ಮಾಡುವಾಗ ಅವರು ರಾಜರು, ನಾವು ಸೇವಕರೇನೋ ಅನ್ನೋ ಫೀಲಿಂಗ್.  ಆ ವೈಭವ ನೋಡುವ ಆಸೆಯನ್ನು ಮೀರಲಾಗದೆ ಅವರು ಹೇಳಿದ್ದನ್ನ ತೆಪ್ಪಗೆ ತಂದುಕೊಟ್ಟು ಕೂರುತಿದ್ದೆ. ನಂಗೂ ಮೀಸೆ ಇದ್ದಿದ್ದರೆ ನಿನಗೂ ಹಾಗೆ ಮಾಡ್ತಾ ಇದ್ದೆ ಅಂತ ಒಳಗೊಳಗೇ ಬೈದುಕೊಳ್ಳುತ್ತಲೇ ಅವರು ತೆಗದಿಡುವ ವಸ್ತುಗಳನ್ನು ಬಿಟ್ಟ ಕಣ್ಣು ಬಿಟ್ಟ ಹಾಗೆ ಎವೆ ಮುಚ್ಚದೆ ನೋಡುತ್ತಾ ಕುಳಿತು ಬಿಡುತ್ತಿದ್ದೆವು.

ಚಕ್ಕಳಮುಕ್ಕಳ ಹಾಕಿ ಕೂತು ಎದುರಿಗೆ ಒಂದು ಕನ್ನಡಿ ಇಟ್ಟುಕೊಂಡು ಒಂದು ಸಲ ಕೆನ್ನೆಯನ್ನು ಒದ್ದೆ ಮಾಡಿಕೊಂಡು   ಪುಟ್ಟ ಬ್ರಷ್ ಮೇಲೆ ಅದ್ಯಾವುದೋ ಕ್ರೀಂ ಹಾಕಿ ಅದನ್ನು ನಯವಾಗಿ ಕೆನ್ನೆಯ ಮೇಲೆ ಆಡಿಸಿ ಫಳಫಳ ಹೊಳೆಯುವ ಬ್ಲೇಡ್ ಅನ್ನು ರೇಜರ್ ಗೆ ಹಾಕಿ ಏನೋ ದೊಡ್ಡ ಸಾಧನೆ ಮಾಡುವವರಂತೆ ಅವರು ಶೋ ಕೊಡುತ್ತಿದ್ದರೆ ಬಿಟ್ಟ ಕಣ್ಣುಗಳಿಂದ ಅಯ್ಯೋ ಬ್ಲೇಡ್ ಹಾಕ್ತಿಯಲ್ಲ ಗಾಯ ಆಗೋಲ್ವ, ರಕ್ತ ಬರೋಲ್ವಾ ಅಂತ ಕೇಳುತ್ತಾ ನೋಡುತ್ತಾ ಎಲ್ಲವನ್ನೂ ಮರೆತು ಕುಳಿತುಬಿಡುತ್ತಿದ್ದದ್ದು ಅದೆಷ್ಟು ಸಲವೋ.. ಅದರಲ್ಲೂ ಅವರು ನಾಲಿಗೆಯನ್ನು ಎರಡು ಬದಿಗೆ ಹೊರಳಿಸಿ ಕೆನ್ನೆ ಉಬ್ಬಿಸಿ ಮುಖ ಮಾಡುವಾಗಲೆಲ್ಲ ಮುಂದಕ್ಕೆ ಬಗ್ಗಿ ನೋಡುವಾಗ ಬೀಳುವುದು ಅದೆಷ್ಟು ಸಲವೋ.  ಪುಟ್ಟ ಕತ್ತರಿ ಹಿಡಿದು ಮೀಸೆ ಟ್ರಿಮ್ ಮಾಡುವಾಗ ಅದನ್ನು ನೋಡುವ ಭರದಲ್ಲಿ ಬಗ್ಗಿ ನಮ್ಮ ತಲೆ ಅವರ  ಕೈಗೆ ತಾಗಿ ಅದು ದಿಕ್ಕು ಬದಲಿಸಿ ಒಂದು ಕಡೆ ಮೀಸೆ ಕತ್ತರಿಸಿ ಹೋಗುವುದೋ, ನುಣ್ಣಗೆ ಆಗುವುದೋ ಇತ್ತು. ಹೀಗೆ ಆಕಸ್ಮಿಕ ಅಫಘಾತ ಆದ ಮೇಲಿನ ನೋವು, ಗಾಯ ಯಾಕೆ ಹೇಳೋದು ಬಿಡಿ...

ಅಷ್ಟಾದರೂ ನೋಡುವುದು ಬಿಡುತ್ತಿರಲಿಲ್ಲ. ಕೈ ಚಲನೆ, ಗಾಯವಾಗದಂತೆ ಹೆರೆದುಕೊಳ್ಳುವ ರೀತಿ, ಅದನ್ನು ಬಿಸಿ ನೀರಲ್ಲಿ ಮುಳುಗಿಸಿ ಕ್ಲೀನ್ ಮಾಡುವ ಪರಿ, ಬ್ರಷ್ ಮಾಡುವ ಸೊಗಸು, ಕತ್ತರಿಯನ್ನು ಆಡಿಸುವ ರೀತಿ, ತುಂಟಾಟ ಮಾಡುವ ಮೀಸೆಯನ್ನು ಕತ್ತರಿಸಿ ಅದಕ್ಕೊಂದು ಶೇಪ್ ಕೊಡುವ ಜಾಣ್ಮೆ, ಕೊಂಚವೂ ಎಡವಟ್ಟು ಆಗದಂತೆ ವಹಿಸುವ ಜಾಗ್ರತೆ.. ಆಮೇಲೆ ಅವೆಲ್ಲ ಸಲಕರಣೆಗಳನ್ನೂ ತೊಳೆದು ಒರೆಸಿ ಅದನ್ನು ಒಂದು ಬಾಕ್ಸ್ ಅಲ್ಲಿ ಹಾಕಿಟ್ಟು ಜೋಪಾನ ಮಾಡುವ ರೀತಿ ಆಹಾ ಅದೊಂದು ತಪಸ್ಸು. ನಾವು ನಿತ್ಯ ಪ್ರೇಕ್ಷಕರು. ಪ್ರತಿ ಸಲವೂ ಅಷ್ಟೇ ಆಸಕ್ತಿಯಿಂದ ಕೊಟ್ಟಿಗೆಯ ಜಾಗದಲ್ಲಿ ಗೋಣಿಯ ಮೇಲೆ ಕೂತು ನೋಡುತ್ತಿದ್ದೆವು. ಅವರ ಬಗ್ಗೆ ಅಸೂಯೆ ಹುಟ್ಟುತ್ತಿತ್ತು ಅನ್ನಿ.

ಅಷ್ಟಾದರೆ ಪರವಾಗಿಲ್ಲ. ಅವರು ಮಾಡಿಕೊಳ್ಳುವ ಹಾಗೆ ಮಾಡುವ ಆಸೆಯಾಗಿ ಒಮ್ಮೆ ಬ್ರಷ್ ತೆಗೆದು ಕೆನ್ನೆಯ ಮೇಲಾಡಿಸಿ ಇನ್ನೇನು ಬ್ಲೇಡ್ ಕೈಗೆತ್ತಿಕೊಳ್ಳಬೇಕು ಅದೇನೋ ಡಬ್ ಅನ್ನೋ ಸದ್ದು. ಸದ್ದಿನ ಹಿಂದೆಯೇ ಬೆನ್ನು ಉರಿ . ತಿರುಗಿ ನೋಡಿದರೆ ಕಣ್ಣು ಕೆಂಪಗೆ ಮಾಡಿಕೊಂಡ ಅಜ್ಜಿ. ಹಾಳಾದವಳೇ ಕೆನ್ನೆ ಕಿತ್ತು ಹೋಗ್ತಾ ಇತ್ತು. ಒಂದ್ಸಲ ಬ್ಲೇಡ್ ತಾಗಿಸಿದರೆ ಕೂದಲು ಮತ್ತೆ ಮತ್ತೆ ಹುಟ್ಟುತ್ತೆ. ನಿಂಗೆ ಗಡ್ಡ ಮೀಸೆ ಬೇಕಾ, ಅದೇನು ಹೆಣ್ಣು ಅಂತ ಹುಟ್ಟಿದ್ಯೋ ಪೂರಾ ಗಂಡು ಬುದ್ಧಿ ಅಂತ ಬಡಬಡನೆ ಒಂಚೂರು ಟೈಮ್ ಕೊಡದೆ ಅರ್ಚನೆ ಶುರುಮಾಡಿದ್ದಳು.

ಅರ್ಚನೆ, ಮಹಾ ಮಂಗಳಾರತಿ, ಪ್ರಸಾದ ವಿನಿಯೋಗ ಎಲ್ಲಾ ಮುಗಿದರೂ ಖುಷಿಯಾಗಿದ್ದು ಅದು ಪದೇ ಪದೇ ಬರುತ್ತೆ ಹಾಗೂ ಚುಚ್ಚುತ್ತೆ ಅನ್ನೋ ವಿಷ್ಯ ಗೊತ್ತಾಗಿ. ಏನು ಮೀಸೆ ಇದ್ದರೇನು ಆಗಾಗ ಅದನ್ನು ಕತ್ತರಿಸ್ತಾ ಇರ್ಬೇಕು ಇಲ್ಲಾಂದ್ರೆ ಕಷ್ಟ, ಆ ಕಷ್ಟ ತೋರಿಸಿಕೊಳ್ಳಲು ಇಷ್ಟವಿಲ್ಲದೆ ಇಷ್ಟೆಲ್ಲಾ ನಾಟಕ ಮಾಡ್ತಾರೆ ಯಪ್ಪಾ ದೇವ್ರೇ ಸದ್ಯ ನನ್ನ ಹೆಣ್ಣು ಮಾಡಿದ್ಯಲ ಅಂತ ಹೊಗಳಿ ಒಳಗೆ ಬಂದರೆ ಆಗಷ್ಟೇ ಕಾಫಿ ಕುಡಿದ ಅಜ್ಜನ ಮೀಸೆಯ ಮೇಲೆ ಅಂಟಿಕೊಂಡ ಕೆನೆ ಕಾಣಿಸಿ ಕಿಸಕ್ಕನೆ ನಗು ಉಕ್ಕಿಬಂದಿತ್ತು. ನುಣುಪಾದ ನನ್ನ ಕೆನ್ನೆಯ ಮೇಲೆ, ಕದ್ದು ತಿಂದರೂ ಏನೂ ತೋರಿಸದ ಗಲ್ಲದ ಮೇಲೆ ಹೆಮ್ಮೆ ಮೂಡಿತ್ತು. ಈಗಂತೂ ಬಿಡಿ  ಹೆಚ್ಚಿನ ಹುಡುಗರೂ ಮೀಸೆ ಬೋಳಿಸಿಕೊಂಡು ನುಣ್ಣನೆ ಮುಖ ಮಾಡಿಕೊಂಡು ನಮ್ಮನ್ನೇ ಫಾಲೋ ಮಾಡುವದರ ಬಗ್ಗೆ ಗರ್ವವೂ. 

Comments

Popular posts from this blog

ಮಾತಂಗ ಪರ್ವತ

ರಂಜದ ಹೂ

ಬರಿದೆ ಆಡುವ ಮಾತಿಗರ್ಥವಿಲ್ಲ...