ಜಸ್ಟ್ ಮಾತ್ ಮಾತಲ್ಲಿ

ಈ ಆಟೋದವರು ಸರಿಯಿಲ್ಲ ಅನ್ನೋದು ಸಾಮಾನ್ಯವಾಗಿ ಎಲ್ಲರೂ ಹೇಳುವ ಮಾತು. ಇದು ನಿಜವಾ ಎಂದು ಆಲೋಚಿಸಿದರೆ ಈ ಡಾಕ್ಟರ್ ಗಳು, ಇಂಜಿನಿಯರ್ ಗಳು, ಸಿನಿಮಾದವರು, ಕೊನೆಗೆ ಈ ಗಂಡಸರು ಸರಿಯಿಲ್ಲ ಅನ್ನುವ ಜನರಲ್ ಸ್ಟೇಟ್ಮೆಂಟ್ ಗಳು ಸದ್ದು ಮಾಡುತ್ತಲೇ ಇರುತ್ತದೆ. ಎಲ್ಲರೂ ಮನುಷ್ಯರೇ. ಪ್ರತಿಯೊಬ್ಬರಿಗೂ ಅವರವರದೇ ಆದ ದೌರ್ಬಲ್ಯ ಇದ್ದೆ ಇರುವ ಹಾಗೆ ಒಳ್ಳೆಯತನವೂ ಇದ್ದೆ ಇರುತ್ತದೆ. ಯಾರೂ ಸಂಪೂರ್ಣ ಕೆಟ್ಟವರಾಗಲು ಹೇಗೆ ಸಾಧ್ಯವಿಲ್ಲವೋ ಹಾಗೆ ಸಂಪೂರ್ಣ ಒಳ್ಳೆಯವರಾಗಿರಲೂ ಸಹ ಸಾಧ್ಯವಿಲ್ಲ.

ಪ್ರತಿಯೊಬ್ಬ ಮನುಷ್ಯನಿಗೂ ಒಂದೊಂದು ಕತೆಯಿರುತ್ತದೆ. ಅದರಲ್ಲಿ ಅನೂಹ್ಯ ತಿರುವುಗಳು ಇರುತ್ತವೆ. ನೋಡುವ, ಕೇಳಿಸಿಕೊಳ್ಳುವ ತಾಳ್ಮೆ, ಮನಸ್ಸು ನಮಗಿರಬೇಕು. ಅಲ್ಲೊಂದು ವೇವ್ ಲೆಂತ್ ಹೊಂದಿಕೆಯಾಗಬೇಕು. ಹೀಗೆ ಯೋಚಿಸುವಾಗ ಪಕ್ಕನೆ ತಿರುಮಲೇಶ್ ಸರ್ ಅವರ ಕವಿತೆ ನೆನಪಾಗುತ್ತದೆ.
ಓದಿರಿ, ಬರೆಯಿರಿ ಚಿತ್ರಿಸಿರಿ ಹಾಡಿರಿ
ಮುಟ್ಟಬೇಕು ಜನರನ್ನು
ಮುಟ್ಟದಿದ್ದರೆ ನಿಷ್ಪ್ರಯೋಜಕ
ಏನು ಮಾಡಿದರೂ...
ಇಲ್ಲಿ ಮುಟ್ಟುವುದು ಎಂದರೆ ದೈಹಿಕವಾಗಿ ಮುಟ್ಟುವುದಲ್ಲ, ಅವರ ಮನಸ್ಸನ್ನು ಮುಟ್ಟುವ ಸೂಕ್ಷ್ಮತೆ. ಹಾಗೆ ಮುಟ್ಟಿದಾಗ ಮಾತ್ರ ಅವರು ಬಿಚ್ಚಿಕೊಳ್ಳುತ್ತಾರೆ. ಹಾಗೆ ಬಿಚ್ಚಿಕೊಂಡಾಗ ಮಾತ್ರ ಅರ್ಥವಾಗುತ್ತಾರೆ. ಜಸ್ಟ್ ಮಾತ್ ಮಾತಲ್ಲಿ ಓದುವಾಗ ಈ ಮುಟ್ಟುವಿಕೆಯು ಅರಿವಿಗೆ ಬರುತ್ತದೆ.

ನೋಟದಿಂದ, ಯಾವುದೋ ಒಂದು ವರ್ತನೆಯಿಂದ ಮನುಷ್ಯರನ್ನು ಸುಲಭವಾಗಿ ಅಳೆದು ಬಿಡುತ್ತೇವೆ. ನದಿಯ ಆಳ ತಿಳಿಯುವುದು ಇಳಿದಾಗ, ಮನುಷ್ಯ ಸ್ವಲ್ಪವಾದರೂ ಅರ್ಥವಾಗುವುದು ಅವನ ಜೊತೆ ಕಾಲ ಕಳೆದಾಗ, ಮಾತು ಆಡಿದಾಗ. ಬೆಂಗಳೂರಿನ ಜೀವಂತಿಕೆಯಲ್ಲಿ ಈ ಆಟೋದವರ ಪಾತ್ರವೂ ದೊಡ್ಡದು. ಆಟೋದಲ್ಲಿ ಹೋಗುವಾಗ ಅವರೊಡನೆ ಮಾತಾಡುತ್ತಾ ಆ ಪ್ರಪಂಚವನ್ನು ಬಿಚ್ಚಿಡುತ್ತಾ ಹೋಗುವ ಭಾರತಿ ಅವರು ನಮ್ಮೊಳಗನ್ನು ಬಿಚ್ಚಿಡುತ್ತಾ ಹೋಗುತ್ತಾರ... ಅದು ಓದುತ್ತಾ ಓದುತ್ತಾ ಹೋದಾಗಲೇ ಅರ್ಥವಾಗುತ್ತಾ ಹೋಗುತ್ತದೆ.

ನಿತ್ಯ ನೂರಾರು ಪ್ರಯಾಣಿಕರ ನೋಡುವ ಅವರೊಡನೆ ಸಂಚರಿಸುವ ಈ ಆಟೋದವರು ಒಂದು ರೀತಿಯಲ್ಲಿ ನಡೆದಾಡುವ ಪುಸ್ತಕವೇ. ಆದರೆ ಎಷ್ಟೋ ಸಲ ಅವರೂ ಮನುಷ್ಯರೇ ಅನ್ನುವುದು ಮಾತ್ರ ನಾವು ಮರೆತು ಬಿಡುತ್ತೇವೆ. ಪ್ರತಿ ಮನುಷ್ಯನಿಗೂ ಪ್ರತಿ ಸ್ಪಂದನೆ ಬೇಕು. ಸ್ಪಂದನೆ ದೊರಕಿದಾಗ ಸಹಜವಾಗಿ ಬದುಕು ಜೀವಂತಿಕೆ ತುಂಬಿಕೊಳ್ಳುತ್ತದೆ. ಬೆಚ್ಚನೆಯ ಸ್ಪರ್ಶದಂತೆ ಮನಸ್ಸು ಪುಳಕಿತವಾಗುತ್ತದೆ. ಸಹಜೀವಿಗೆ ಮನುಷ್ಯ ಕೊಡಬಹುದಾದ ಮುಖ್ಯ ಸಂಗತಿಗಳಲ್ಲಿ ಇದೂ ಒಂದು ಅಂತ ಅನ್ನಿಸುವುದು ಈ ಪುಸ್ತಕ ಓದಿ ಕೆಳಗಿಡುವಾಗ.

ಯಾವುದೋ ಕ್ಷಣದಲ್ಲಿ ಆಡುವ ಯಾವುದೋ ಒಂದು ಮಾತು ಕುಸಿಯುವ ಹಾಗೆ ಮಾಡುವ ಹಾಗೆ ಶಕ್ತಿಯನೂ ತುಂಬಬಲ್ಲದು. "ಸಂಬಂಧ ಅಂದ್ರೆ ಹಾಗೆ ಅಲ್ಲವಾ ಸುಮ್ಸುಮ್ನೆ ಬಿಡಕ್ಕಾದದಾ ಯಾರೋ ಒಬ್ಬರು ಇತ್ಕಡೆಯಿಂದ, ಇನ್ಯಾರೋ ಒಬ್ರು ಅತ್ಕಡೆಯಿಂದ ಹೆಜ್ಜೆ ಹಾಕಾಕ್ತಾ ಮಧ್ಯೆ ಎಲ್ಲೋ ಸೇರ್ಕೋಬೇಕಲ್ವಾ" ಅನ್ನುವ ಮಾತಗಳು ಸಜಹವಾದ ಮಾತು ಅನ್ನಿಸಿದರು ಕೇಳಿದ ಸಂದರ್ಭ, ಇದ್ದ ಸನ್ನಿವೇಶ ಅದಕ್ಕೊಂದು ಬೇರೆಯದೇ ಅರ್ಥ ಕೊಡಬಹುದು. ಯಾವುದೋ ಭಾರವನ್ನು ಇಳಿಸಿ ನಿರಾಳವಾಗುವ ಹಾಗೆ ಮಾಡಬಹುದು. ಮತ್ಯಾವುದೋ ಸಂದರ್ಭದಲ್ಲಿ ನೆನಪಾದಾಗ ಇನ್ಯಾವುದೋ ಕೊಂಡಿಯನ್ನು ಬೆಸೆಯಬಹುದು, ಕಡಿದು ಹೋಗದಂತೆ ತಡೆಯಬಹುದು. ಬದುಕಿನ ಪಯಣದಲ್ಲಿ ಯಾವುದು ಯಾವಾಗ ಉಪಯೋಗಕ್ಕೆ ಬರಬಹುದು ಎಂದು ಹೇಳುವುದು ಹೇಗೆ ಎಂದು ಯೋಚಿಸುವಾಗಲೆಲ್ಲ ನಿಂತ ಗಡಿಯಾರವೂ ದಿನದಲ್ಲಿ ಎರಡು ಬಾರಿ ಸರಿಯಾದ ಸಮಯ ತೋರಿಸುತ್ತೆ ಅನ್ನುವ ಸಾಲು ನೆನಪಾಗುತ್ತದೆ.

ಹಾಗಾದರೆ ಇಲ್ಲೂ ಚಾಲಾಕಿಗಳು, ಮೋಸಗಾರರು ಇಲ್ಲವಾ ಅಂದರೆ ಖಂಡಿತ ಇದ್ದಾರೆ. ಅವರು ಎಲ್ಲಿಲ್ಲ?  ಪ್ರತಿ ಮನುಷ್ಯನೊಳಗೂ ಎಲ್ಲಾ ದುರ್ಗಣಗಳು ಇದ್ದೆ ಇರುತ್ತವೆ. ಕೆಲವು ಸಮಯ ಸಿಕ್ಕಾಗ ಹೊರಬರಬಹುದು. ಇನ್ನು ಕೆಲವರು ಅದುಮಿಡಬಹುದು. ಅದು ವ್ಯಕ್ತಿಯ ವೈಯುಕ್ತಿಕ ಸಂಸ್ಕಾರದ ಮೇಲೆ ಆಧಾರಪಡುತ್ತದೆಯೇ ಹೊರತು ಯಾವುದೋ ಒಂದು ವೃತ್ತಿಯ ಮೇಲೋ, ಗುಂಪಿನ ಮೇಲೋ ಅಲ್ಲ. ಹಾಗಾಗಿ ಯಾವುದೇ ಗುಣವನ್ನು ಸಾರಾಸಗಟಾಗಿ ಆರೋಪಿಸುವುದು ನಮ್ಮ ಅಲ್ಪಮತಿಯ ತೀರ್ಮಾನವೇ ಹೊರತು ಬೇರೇನಲ್ಲ.

ಅಲ್ಲಲ್ಲಿ ನಗಿಸುತ್ತಾ, ಕೆಲವೊಮ್ಮೆ ಕಂಪನ ಹುಟ್ಟಿಸುತ್ತಾ, ನಮ್ಮ ತೀರ್ಮಾನಗಳನ್ನು ಇನ್ನೊಮ್ಮೆ ಪರಿಶೀಲಿಸುವ ಹಾಗೆ ಯೋಚನೆಗೆ ಹಚ್ಚುತ್ತಾ, ಒಳಗನ್ನು ಚಿಂತನೆಗೆ ಒಡ್ಡುತ್ತಾ ಹೋಗುವ ಪುಸ್ತಕ ಕೆಳಗಿಡುವ ಮುನ್ನ ನಮ್ಮೊಳಗಿನ ಸಾರ್ವತ್ರಿಕ ತಪ್ಪು ಅಭಿಪ್ರಾಯ ಬದಲಿಸುವ ಹಾಗೆ ಮಾಡುತ್ತದೆ. ಮುದುಡಿ ಕೂರುವ ಮನಸ್ಸಿಗೆ ಚಿಕ್ಕ ನಗುವನ್ನು ಬೀರುವ ಹಾಗೆ ಮಾಡುತ್ತದೆ. ಅವರೂ ಮನುಷ್ಯರೇ ಎನ್ನುವ ನೋಟವನ್ನು ಕಲಿಸುತ್ತದೆ. ಅನುಭವದ್ದೇನು ಬಿಡಿ ಅದು ಅವರವರ ಪಾಲಿನದು, ಅವರವರಿಗೆ ದಕ್ಕಿದ್ದು.

ಇದು ಅವರಿಗೆ ಯಾಕೆ ಆಗುತ್ತೆ ಅನ್ನೋದು ಜನರಲ್ ಆಗಿ ಏಳುವ ಪ್ರಶ್ನೆ... ತಾಕಲು ಕಲಿತಾಗ ನಮಗೂ ಆಗುತ್ತೆ ಅನ್ನೋದು ನಂಗೆ ಸಿಕ್ಕಿದ ಉತ್ತರ. ಮನುಷ್ಯ ಮನುಷ್ಯನನ್ನು ತಾಕಲು ಕಲಿತ ಕ್ಷಣ ಹೊಸದೊಂದು ಲೋಕದ ಅನಾವರಣ ಖಂಡಿತ ಆಗಿಯೇ ಆಗುತ್ತದೆ. ತಾಕುತ್ತೇವಾ... ಹೇಗೆ ತಾಕುತ್ತೇವೆ ಅನ್ನೋದು ಮಾತ್ರ ನಮ್ಮ ನಮ್ಮ ಅಂತಕರಣ ಹಾಗೂ ವ್ಯಕ್ತಿತ್ವಕ್ಕೆ ಬಿಟ್ಟ ಪ್ರಶ್ನೆ. ಅದು ನಮಗೆ ನಾವೇ ಉತ್ತರಿಸಿಕೊಳ್ಳಬೇಕಾದ ಪ್ರಶ್ನೆ..

Comments

Popular posts from this blog

ಮಾತಂಗ ಪರ್ವತ

ರಂಜದ ಹೂ

ಬರಿದೆ ಆಡುವ ಮಾತಿಗರ್ಥವಿಲ್ಲ...