ದೀಪಾವಳಿ


ದೀಪಾವಳಿ ಅಂದರೆ ಸಾಲು ಸಾಲು ಹಬ್ಬ. ಯಾವುದೇ ಶುಭಕಾರ್ಯ ನಡೆಯಬೇಕಾದರೆ ಸ್ವಚ್ಛವಾಗಬೇಕು. ಅದು ಅಂತರಿಕ ಹಾಗೂ ಬಾಹ್ಯ ಕರ್ತವ್ಯವಾದರೂ ಈ ಹಬ್ಬ ಮಾತ್ರ ಅದನ್ನೂ ಆಚರಣೆಯಲ್ಲೂ ತೋರಿಸುವ ಹಬ್ಬ. ಹಾಗಾಗಿ ಎಲ್ಲವನ್ನೂ ತೊಳೆಯುವ ಕೆಲಸ ಇದರ ಮೊದಲ ಘಟ್ಟ. ಹಾಗಾಗಿ ತ್ರಯೋದಶಿಯ ದಿನ ನೀರು ತುಂಬುವ ಹಬ್ಬ. ತುಂಬುವ ಮೊದಲು ಖಾಲಿಯಾಗಬೇಕು. ಖಾಲಿಯಾದ ಮೇಲೆ ತೊಳೆಯಬೇಕು. ತೊಳೆಯುವಿಕೆ ನಡೆಯುವುದೇ ಬಚ್ಚಲಿನಲ್ಲಿ.  ತೊಳೆಯುವ ಶಕ್ತಿ ಇರುವುದು ಗಂಗೆಗೆ. ಅವಳು ಎಲ್ಲವನ್ನೂ ತೊಳೆಯುತ್ತಾನೆ. ಪಾಪವನ್ನೂ..

ಅಂದು ಹಂಡೆಯನ್ನು ತಿಕ್ಕಿ ತೊಳೆಯುವ ಕೆಲಸ. ಬಾಹ್ಯ ಶುದ್ಧಿಗಿಂತಲೂ ಅಂತರಿಕ ಶುದ್ಧಿ ಮುಖ್ಯ ಹೌದಾದರೂ ಮೊದಲು ಸೆಳೆಯುವುದು ಬಾಹ್ಯರೂಪ. ಬಾಹ್ಯ ಆಕರ್ಷಿಸದೆ ಅಂತರ್ಯವನ್ನು ಯಾರೂ ಹಣುಕಿನೋಡುವುದಿಲ್ಲ. ಹಾಗಾಗೀ ಎರಡೂ ಶುದ್ಧವಾಗಬೇಕು. ಹುಣಸೇಹುಳಿಯನ್ನು ಹಾಕಿ ಹಂಡೆಯನ್ನು ತಿಕ್ಕಿ ತೊಳೆದು ಫಳಫಳವಾಗಿಸಿ ತಂಬಿಗೆ,ಉಳಿದ ಸಾಮಗ್ರಿಗಳನ್ನೂ ಹೊಳೆಯುವಂತೆ ತೊಳೆದರೆ ಅಲ್ಲಿಗೆ ಅರ್ಧ ಕೆಲಸ ಮುಗಿದಂತೆ. ಮನುಷ್ಯ ಇವುಗಳನ್ನು ತೊಳೆಯುತ್ತಾನೆ ಆದರೆ ಮನುಷ್ಯನನ್ನು ತೊಳೆಯುವವಳು ಗಂಗೆ. ಅವಳನ್ನು ಕರೆತರಬೇಕು. ಹಾಗಾಗಿ ಬಾವಿಗೆ ಹೋಗಿ ಗಂಗೆಯನ್ನು ಪೂಜಿಸಿ ನೀರು ತಂದು ಹಂಡೆಗೆ ತುಂಬಿಸಬೇಕು.

ಆಮೇಲೆ ಅದಕ್ಕೆ ಹಿಂಡಲೇಕಾಯಿಯ ಬಳ್ಳಿಯನ್ನು ಸುತ್ತಿ ಕೆಮ್ಮಣ್ಣು ಬಳಿದರೆ ಹಂಡೆ ನವವಧುವಿನಂತೆ ಕಾಣಿಸುತ್ತಿತ್ತು.  ಅದರ ಮುಂದೆ ಸಗಣಿಯ ಮುದ್ದೆಯನ್ನು ಇಟ್ಟುಅದಕ್ಕೆ ನಾಲ್ಕು ಗರಿಕೆಯನ್ನು ಸಿಕ್ಕಿಸಿದರೆ ಕೆರಕನ ಪ್ರತಿಷ್ಟಾಪನೆ ಆದಂತೆ. ಅದಾದ ಮೇಲೆ ಯಾರನ್ನಾದರೂ ಕರೆದಾಗ ಅವರು ಆ ಅಂದರೆ ಕೆರಕ ಎಂದು ಹೇಳಿ ದೊಡ್ಡವರ ಕೈಲಿ ಬೈಸಿಕೊಂಡು ಯಾರು ಜಾಸ್ತಿ ಕೆರಕ ಹೇಳಿದ್ದು ಅಂತ ಲೆಕ್ಕ ಮಾಡಿಕೊಂಡು ಗೆದ್ದವೆಂದು ಬೀಗುವ ಜೊತೆ ಜೊತೆಗೆ ಸೋಲದಿರುವ ಎಚ್ಚರ ಕೂಡ ಇರುತಿತ್ತು. ಅಲ್ಲಿಗೆ ತ್ರಯೋದಶಿ ಸಂಪನ್ನವಾದಂತೆ. ಮತ್ತೆ ಮರುದಿನ ಬೆಳಗಿನವರೆಗೆ ಹಂಡೆಯ ನೀರು ಮುಟ್ಟುವಂತಿಲ್ಲ. ಸರ್ವಾಲಂಕಾರ ಭೂಷಿತೆಯಾದ ಹಂಡೆ ಮುಟ್ಟಲು ಆಹ್ವಾನಿಸಿದರೂ ಸರ್ವಸಂಗ ಪರಿತ್ಯಾಗಿಗಳಂತೆ ಪಕ್ಕದಲ್ಲಿದ್ದ ಬಕೆಟ್ ನಲ್ಲಿದ್ದ ನೀರನ್ನು ಬಳಸಿ ಬರುತಿದ್ದೆವು. ಆಮಿಷಗಳಿಗೆ ಬಲಿಯಾಗದಿರುವಂತೆ ಮನಸ್ಸನ್ನು ಆಚರಣೆಗಳು ಗಟ್ಟಿಗೊಳಿಸುತ್ತಿದ್ದವಾ...

ರಾತ್ರಿ  ಅಜ್ಜಿ ಹರಳೆಣ್ಣೆ, ಸೀಗೆಪುಡಿ, ಗರಿಕೆ ಎಲ್ಲವನ್ನೂ ದೇವರ ಮುಂದೆ ಜೋಡಿಸಿ ಮಲಗಲು ಹೋಗುತ್ತಿದ್ದಳು. ಬೇರೆಯ ದಿನವೆಲ್ಲಾ ಏಳಲು ಒದ್ದಾಡುತ್ತಿದ್ದ ನಾವುಗಳು ಅವತ್ತು ಮಾತ್ರ ನಾಳೆ ನನ್ನ ಮೊದಲು ಎಬ್ಬಿಸು ಎಂದು ಅವಳಿಗೆ ನೆನಪಿಸಿ ನಿದ್ರೆ ಹೋಗುತ್ತಿದ್ದೆವು. ಯಾರು ಮೊದಲು ಸ್ನಾನ ಮಾಡುತ್ತಾರೆ ಅನ್ನುವುದು ಮುಖ್ಯವಾಗಿತ್ತು. ಹಾಗಾಗಿ ಅವಳು ಕರೆಯುತ್ತಿದ್ದ ಹಾಗೆ ತಟಕ್ಕನೆ ನಿದ್ದೆಕಣ್ಣಿನಲ್ಲಿ ಎದ್ದು ಕುಳಿತರೆ ಅವಳು ದೇವರ ಮುಂದೆ ಕೂರಿಸಿ ಎಣ್ಣೆಯ ಶಾಸ್ತ್ರ ಮಾಡುತ್ತಿದ್ದಳು. ತಲೆಗೆ ಎಣ್ಣೆ ಒತ್ತಿ ಹಗುರಾಗಿ ತಟ್ಟುತ್ತಿದ್ದರೆ ಹಾಗೆ ಜೋಲಿ ಹೊಡೆಯುತ್ತಿದ್ದೆವು. ಪೂರಾ ನಿದ್ದೆ ಹೋಗುವ ಮೊದಲು ಎಬ್ಬಿಸಿ ಬಚ್ಚಲಿಗೆ ಕಳುಹಿಸಿದರೆ ತೆರೆದ ಬಾಗಿಲಿನಿಂದ ಸಣ್ಣಗೆ ಬೀಸುತ್ತಿದ್ದ ಚಳಿ ಗಾಳಿ ಮೈ ನಡುಕು ಹುಟ್ಟಿಸಿ ನಿದ್ದೆಯೆಲ್ಲಾ ಹೋಗಿ ಓಡುವ ಹಾಗಾಗುತಿತ್ತು.

ಬಚ್ಚಲಿಗೆ ಹೋಗುವಾಗಲೇ ನೀರು ಸುಯ್ ಎಂದು ಕಾದ ಶಬ್ದ, ಉರಿಯುವ ಬೆಂಕಿ ಸ್ವಾಗತಿಸಿ ಅದರ ಎದುರು ಮುದುರಿ ಕುಳಿತರೆ ಕೈಗೆ ಎಣ್ಣೆಯ ಬಟ್ಟಲು ಕೊಟ್ಟು ಮೈಗೆಲ್ಲಾ ಹಚ್ಚಿಕೊಳ್ಳಲು ಹೇಳುತ್ತಿದ್ದಳು. ನಂತರ ದಬದಬನೆ ನೀರು ಸುರಿದು ಚಳಿ ಮಾಯವಾಗುವ ಮೊದಲೇ ತಣ್ಣನೆಯ ಗುಳ ನೆತ್ತಿಯಿಂದ ಹಾವಿನಂತೆ ಇಳಿದು ಬರುತಿತ್ತು. ಆಮೇಲೆ ಸೀಗೆ ಪುಡಿ ಹಾಕಿ ಗಸಗಸನೆ ಉಜ್ಜುವಾಗ ನಿದ್ದೆ ಎನ್ನುವುದು ಕೊಳೆಯ ಹಾಗೆ ಎದ್ದೂ ಬಿದ್ದೂ ಓಡಿ ಎಲ್ಲಿ ಮಾಯವಾಗುತಿತ್ತೋ. ಅಭ್ಯಂಜನ ಮುಗಿಸಿ ಹೊರಗೆ ಬರುವಾಗ ಮೈ ಕೈಯೆಲ್ಲಾ ಹಗುರ. ಸ್ವಚ್ಛಗೊಳಿಸಿಕೊಳ್ಳುವ ಪ್ರಕ್ರಿಯೆ ಸ್ವಲ್ಪ ಕಷ್ಟ ನಿಜ. ಆದರೆ ಅದು ಅಮೇಲಿನ ನಿರಾಳತೆಯನ್ನು ನೋಡಿದಾಗ ಸಹಿಸಿಕೊಳ್ಳುವುದು ಇಷ್ಟವಾಗುತ್ತದೆ. ಬದುಕು ಸಹಿಸಿಕೊಳ್ಳಲು ಕಲಿತಾಗ ಮಾತ್ರ ಹಗುರವಾಗುತ್ತದೇನೋ..

ತೆಗೆದುಕೊಳ್ಳುವ ಹಾಗೆ ಕೊಡುವುದೂ ಅಭ್ಯಾಸವಾಗಬೇಕು. ಎರಡೂ ಒಂದಕ್ಕೊಂದು ಪೂರಕವಾಗಿರಬೇಕು. ಹಾಗಾಗಿ ಸ್ನಾನ ಮಾಡಿ ಬರುವಾಗ ಹಂಡೆಗೆ ನೀರು ತುಂಬಿ ಬರಬೇಕು ಅನ್ನೋದು ಹಿರಿಯರು ಮಾಡಿದ ನಿಯಮ. ಸ್ನಾನ ಮುಗಿಸಿ ಬಂದಾಗ ಯುದ್ಧ ಗೆದ್ದ ಉತ್ಸಾಹವಿದ್ದರೂ ಕಿವಿತೆರೆದು ಕೇಳುವ ಸದ್ದಿಗಾಗಿ ಕಾಯುತ್ತಿದ್ದೆವು. ಸ್ನಾನ ಮುಗಿಸಿ, ಗಡಿಬಿಡಿಯಲ್ಲಿ  ಹೊಸಬಟ್ಟೆ ಧರಿಸಿ, ದೇವರಿಗೆ ಎಲ್ಲರಿಗೂ ನಮಸ್ಕರಿಸಿ ಕಾಫಿ ಅನ್ನುತ್ತಿದ್ದರೂ ಅವತ್ತು ಮಾತ್ರ ಹೊರಗೆ ಓಡಿ ಬರುತ್ತಿದ್ದೆವು ಪಟಾಕಿಯ ಜೊತೆಗೆ. ಅಲ್ಲಿಯವರೆಗೂ ನಮ್ಮ ಕಿವಿ ನಾಯಿಯ ಕಿವಿಗಿಂತ ಚುರುಕಾಗಿ ಶಬ್ದ ಗ್ರಹಿಸುತಿತ್ತು.

ಪಟಾಕಿ ಹಚ್ಚುವಾಗ ಯಾರಾದರೂ ಹಿಂದಿನಿಂದ ಡಂ ಎಂದರೆ ಹಿಂದಕ್ಕೆ ಹಾರಿ ಬಿಡುತ್ತಿದ್ದೆವು. ಅಂತೂ ಎರಡನೆಯದೋ ಮೂರನೆಯದೋ ಪ್ರಯತ್ನದ ನಂತರ ಪಟಾಕಿ ಸಿಡಿಯುತ್ತಿತ್ತು. ಅದೇ ಮೊದಲ ಶಬ್ಧವಾದರೆ ಅಂದಿನ ವಿಜೇತರು ನಾವೇ.  ಪಟಾಕಿ ಡಂ ಸದ್ದೇ ನಮ್ಮ ವಿಜಯಘೋಷ. ಆಮೇಲೆ ಗಡಿಬಿಡಿಯಲ್ಲಿ ಉಳಿದ ಪಟಾಕಿ ಹಚ್ಚಿ ಕೊನೆಯ ನಕ್ಷತ್ರ ಕಡ್ಡಿಯ ಬೆಳಕು ಆರುವ ಮುನ್ನ ಬಾನಂಚಿನಲ್ಲೂ ದೀಪಾವಳಿಯ ರಂಗು ಮೂಡುತಿತ್ತು.  ನರಕಚತುರ್ದಶಿ ಶುಭಾರಂಭವಾಗುತ್ತಿದ್ದದ್ದು ಹೀಗೆ. ಹಾಗೂ ಯಾರ ಮನೆಯಲ್ಲಿ ಮೊದಲು ಸ್ನಾನ ಆಗಿದೆ ಎಂದು ಗೊತ್ತಾಗುತಿದ್ದದ್ದು. ಮಕ್ಕಳ ನಡುವೆ ಈ ಅಘೋಷಿತ ಪಂದ್ಯವೊಂದು ಸದಾ ಚಾಲ್ತಿಯಲ್ಲಿರುತಿತ್ತು. ಹಾಗಾಗಿ ಮೊದಲು ಪಟಾಕಿ ಆಮೇಲೆ ಕಾಫಿ. ಕಾಫಿ ಕುಡಿದು ಲೋಟ ಕೆಳಗಿಡುವ ಹೊತ್ತಿಗೆ ಸೂರ್ಯನೂ ಹಾಜರಿ ಹಾಕಿರುತಿದ್ದ.

ಅದು ಕೃಷ್ಣ ನರಕಾಸುರನನ್ನು ವಧಿಸಿದ ದಿನವಂತೆ. ಹಾಗಾಗಿಯೇ ಇದು ನರಕಚತುರ್ದಶಿ. ಯುದ್ಧ ಮಾಡಿ ಬಸವಳಿದ ಕೃಷ್ಣ ಅಭ್ಯಂಜನ ಮಾಡಿ ಕೊಳೆ , ಸುಸ್ತು ಎರಡೂ ತೊಳೆದುಕೊಂಡನಂತೆ. ನಮ್ಮೊಳಗಿನ ಅಸುರನನ್ನು ನಾವೂ ವಧಿಸಬೇಕು ಎಂದು ನೆನಪಿಸುವ ದಿನವಾಗಿ ಇಂದಿಗೂ ಇದು ಆಚರಣೆಯಲ್ಲಿದೆ. ನರಕಾಸುರ ತನ್ನ ಸೆರೆಯಲ್ಲಿಟ್ಟ ಹದಿನಾರು ಸಾವಿರ ಹೆಂಗಳೆಯರನ್ನು ಇಂದು ಕೃಷ್ಣ ಬಿಡಿಸಿದನಂತೆ. ಅಂದಿಗೂ ಇಂದಿಗೂ ಎಂದಿಗೂ ಕಾಲ ಒಂದೆಯೇನೋ.. ಹಾಗೆ ದೈಹಿಕ ಬಂಧನದಿಂದ ಅವರು  ಮುಕ್ತರಾದರೂ ಮಾನಸಿಕ ಬಂಧನ ಹಾಗೆ ಇತ್ತಲ್ಲ. ಒಮ್ಮೆ ಪರಪುರುಷನ ಬಂಧನಕ್ಕೆ ಒಳಗಾದ ಮೇಲೆ ಸಮಾಜದಲ್ಲಿ ಗೌರವವಿಲ್ಲ, ಅವಳನ್ನು ಅದೇ ಘನತೆಯಿಂದ ಸ್ವೀಕರಿಸುವವರು ಯಾರೂ ಇಲ್ಲ. ಹಾಗಾಗಿ ಅವರಿಗೆ ಎಲ್ಲಿಗೆ ಹೋಗಬೇಕು ಎನ್ನುವ ಭಯ ಕಾಡಿತಂತೆ. ಅತ್ತ ಸೆರೆಮನೆಯೂ ಇಲ್ಲದೆ, ಇತ್ತ ಮನೆಯೂ ಸಿಗದೇ  ಸಾವೇ ವಾಸಿ ಅನ್ನಿಸಿತೇನೋ. ಆಗ ಕೃಷ್ಣ ಅವರಿಗೆ ಪತ್ನಿಯರ ಸ್ಥಾನ ಕೊಟ್ಟನಂತೆ. ಕೃಷ್ಣ ಪತ್ನಿಯರು ಅಂದ ಮೇಲೆ ಸಮಾಜದಲ್ಲಿ ಗೌರವ, ನೆಮ್ಮದಿಯ ಬದುಕು ಎರಡೂ ದಕ್ಕಿ ಅವರ ಬದುಕಿನ ಅಂಧಕಾರ ಹರಿಯಿತಂತೆ. ಬೆಳಕು ಮೂಡಿತಂತೆ. ದೀಪಾವಳಿ ಅನ್ನೋದು ಹೀಗೆ ಅರ್ಥವತ್ತಾಗಿ ಆಚರಣೆಗೆ ಬಂದಿತಂತೆ. ಬೆಳಗು... ಬದುಕು ಬೆಳಗುವ ಬೆಳಕು. ಆ ಬೆಳಕಿನ ಮೂಲ ಕೃಷ್ಣ.

ಚತುರ್ದಶಿಯ ದಿನ ಅಸುರ ಸಂಹಾರ ಅನ್ನೋದು ಮರೆಯಾಗಿ ಅಭ್ಯಂಜನವಷ್ಟೇ ಉಳಿದಿದೆ. ಬಾಹ್ಯದ ಕೊಳಕು ತೊಳೆದಂತೆ ಅಂತರ್ಯದ ಕೊಳೆ ತೆಗೆಯುವ ಪ್ರಕ್ರಿಯೆ ಕಡೆಗೆ ಮನಸ್ಸು ಸಾಗುವುದೇ ಈ ಹಬ್ಬದ ಆಶಯ. ಅವತ್ತು ಮಲೆನಾಡಿನ ಮನೆ ಮನೆಯಲ್ಲಿ ಚೀನಿಕಾಯಿ ಕಡುಬು ಮಾಡಲಾಗುತ್ತದೆ. ಹೀಗೆ ಶುದ್ಧಿಗೊಳ್ಳುವುದರ ಮೂಲಕ ಹಬ್ಬದ ಶುಭಾರಂಭವಾಗುತ್ತದೆ. ಮರುದಿನ ಅಮಾವಾಸ್ಯೆ. ಅವತ್ತು ಲಕ್ಷ್ಮೀ ಪೂಜೆ. ಅಂಗಡಿಗಳಲ್ಲಿ ಮನೆ ಮನೆಗಳಲ್ಲಿ ಅಂದು ಮುಸ್ಸಂಜೆಯಲ್ಲಿ ಲಕ್ಷ್ಮೀಪೂಜೆ ನಡೆಯುತ್ತದೆ. ಆಗಷ್ಟೇ ಅಡಿಕೆ ಕೊಯ್ಲು ಪ್ರಾರಂಭವಾಗಿರುತ್ತದೆ. ಹಳ್ಳಿಗಳಲ್ಲಿ ಲಕ್ಷ್ಮಿಯನ್ನು ಕೈಯಲ್ಲಿ ಹಿಡಿದು ನೋಡುವ ಭಾಗ್ಯ ರೈತರಿಗೆ ಸಿಗುವುದು ಈ ಅಡಿಕೆಯಿಂದ ಮಾತ್ರ. ಹಾಗಾಗಿ ತಟ್ಟೆಯಲ್ಲಿ ಅಡಿಕೆ, ದುಡ್ಡು ಎಲ್ಲವನ್ನೂ ಜೋಡಿಸಿ ದೇವರ ಎದುರು ಇಟ್ಟು ಲಕ್ಷ್ಮಿಯ ಕೃಪಾ ಕಟಾಕ್ಷಕ್ಕೆ ಪ್ರಾರ್ಥಿಸುತ್ತಾರೆ.

ಮರುದಿನ ದೀಪಾವಳಿಯ ಪ್ರಮುಖ ಘಟ್ಟ. ಬಲಿಪಾಡ್ಯಮಿ. ಅಂದು ಗೋ ಪೂಜೆ ಹಾಗೂ ದೀಪಾರಾಧನೆ ಬಹು ಪ್ರಮುಖವಾದ ಅಂಶ. ಅಂದೇ ಕಾರ್ತಿಕ ಮಾಸದ ಆರಂಭ ಕೂಡ. ಇಡೀ ಕಾರ್ತಿಕ ಮಾಸದಲ್ಲಿ ಪ್ರತಿದಿನ ದೀಪ ಬೆಳಗಿಸಲಾಗುತ್ತದೆ. ದೇವಸ್ಥಾನಗಳಲ್ಲಿ ದೀಪೋತ್ಸವಗಳೂ ಜರುಗುತ್ತವೆ. ಇಡೀ ಮಾಸ ದೀಪಗಳ ಹಬ್ಬ. ಎಲ್ಲೆಲ್ಲೂ ಬೆಳಕು. ಹಣತೆಗಳ ಸಾಲು ಸಾಲು. ಆಗೆಲ್ಲಾ ಜಿ ಎಸ್. ಶಿವರುದ್ರಪ್ಪನವರ ಪದ್ಯ ನೆನಪಾಗುತ್ತದೆ.

ಹಣತೆ ಹಚ್ಚುತ್ತೇನೆ ನಾನೂ
ಈ ಕತ್ತಲನ್ನು ಗೆದ್ದು ನಿಲ್ಲುತ್ತೇನೆಂಬ ಜಿದ್ದಿನಿಂದಲ್ಲ
ಲೆಕ್ಕವೇ ಇರದ ದೀಪಾವಳಿಯ ಇದರಲ್ಲಿ ಮುಳುಗಿ ಕರಗಿರುವಾಗ
ನಾನು ಹಚ್ಚುವ ಹಣತೆ ಶಾಶ್ವತವೆಂಬ ಭ್ರಾಂತಿ ನನಗಿಲ್ಲ.

ಬೆಳಕು ಕತ್ತಲು ಎರಡೂ ಶಾಶ್ವತ ಹಾಗೂ ಒಂದಕ್ಕೊಂದು ಪೂರಕ. ಕತ್ತಲಿನ ಮುಸುಕು ಸರಿಸಿ ಬೆಳಗುವ ಪುಟ್ಟ ಹಣತೆಯದು ಮಂದ ಬೆಳಕು. ಅದು ಕತ್ತಲನ್ನು ಸಂಪೂರ್ಣವಾಗಿ ಓಡಿಸುತ್ತದಾ ಎಂದರೆ ಇಲ್ಲ. ಆದರೆ ಕಣ್ಣು ಚುಚ್ಚುವುದಿಲ್ಲ. ಆದರೆ ದಾರಿ ತೋರಿಸುತ್ತದೆ. ಕೃಷ್ಣ ಹದಿನಾರು ಸಾವಿರ ವನಿತೆಯರಿಗೆ ದಾರಿ ತೋರಿದ ಹಾಗೆ. ಕತ್ತಲಿಂದ ಬೆಳಕಿಗೆ, ಬೆಳಕಿಂದ ಕತ್ತಲೆಗೆ ಅಸ್ತಿತ್ವ. ಹಾಗಾಗಿ ಅಸ್ತಿತ್ವವನ್ನು ನಿರಾಕರಿಸದೆ, ಇನ್ನೊಂದನ್ನು ನಾಶ ಮಾಡದೇ ತನ್ನ ದಾರಿ ತಾನು ಹಿಡಿದು ಹೋಗುವುದನ್ನು ಹಣತೆ ಕಲಿಸುತ್ತದಾ... ಗುರಿ, ನಡೆಯುವ ದಾರಿ ಮಾತ್ರವೇ ಮುಖ್ಯವೆಂದು ಬೆಳಕು ಸೂಚಿಸುತ್ತದಾ....  ಯಾರನ್ನೂ ಬಲವಂತ ಮಾಡದೆ, ತನ್ನ ಅಭಿಪ್ರಾಯ ಹೇರದೆ ಆ ಹೆಂಗಳೆಯರಿಗೆ ಕೃಷ್ಣ ಬದುಕು ಕಟ್ಟಿಕೊಟ್ಟ ಹಾಗೇ.. ಬೆಳಕಾಗುವುದು ಎಂದರೆ ಹೀಗಾ..

ಇಡೀ ಜಗತ್ತಿನ ಕತ್ತಲನ್ನು ತೊಡೆಯುವುದು ಸಾಧ್ಯವಿಲ್ಲ. ಅದರ ಬಾಯಾರಿಕೆ ನಿಲ್ಲುವುದೂ ಇಲ್ಲ. ಹಾಗಾದರೆ ಹಣತೆ ಹಚ್ಚುವುದಾದರೂ ಏತಕ್ಕೆ? ಎಡವದಂತೆ ದಾರಿ ಸಾಗಲು.ಪಕ್ಕದಲ್ಲಿರುವವರನ್ನು ಗುರುತಿಸಲು. ಎಲ್ಲೋ ದೂರದಲ್ಲಿ ಇರುವುದು ಕಾಣಲೇ ಬೇಕು ಎಂದಿಲ್ಲ. ಹತ್ತಿರದಲ್ಲಿರುವರು ಬೇಕು. ಅವರು ಕಾಣಬೇಕು. ಜೊತೆಯಾಗಬೇಕು. ಹತ್ತಿರವಿದ್ದೂ ದೂರ ನಿಲ್ಲುವುದು ಬೇಡ.  ಹಾಗಾಗಿ  ಅವರವರ ಹಣತೆ ಅವರವರೆ ಹಚ್ಚಿಕೊಳ್ಳಬೇಕು. ಅವರವರ ದಾರಿ ಅವರೇ ನಡೆಯಬೇಕು. ಮಂದ ಬೆಳಕು ಎಷ್ಟು ಬೇಕೋ ಅಷ್ಟನ್ನು ತೋರಿಸುತ್ತದೆ. ಎಲ್ಲವನ್ನೂ ತಿಳಿಯುವ ಹಂಬಲ ಬೇಕಿಲ್ಲ. ಸಾಗುವ ದಾರಿ ಗೊತ್ತಿದ್ದರೆ ಸಾಕು. ತಿಳಿಸುವಷ್ಟು ಅದು ತಿಳಿಸುತ್ತದೆ. ಕತ್ತಲೆಯ ಜೊತೆ ಜೊತೆಗೆ ಬೆಳಕನ್ನೂ ಹೊತ್ತು ಸಾಗುವುದನ್ನ ಅದು ಕಲಿಸುತ್ತದೆ. ಯಾವುದನ್ನೂ ನಿರಾಕರಿಸದೆ ಇದ್ದದ್ದು ಇದ್ದ ಹಾಗೆ ಒಪ್ಪಿಕೊಳ್ಳಲು ಕಲಿತಾಗಲೇ ಬಾಳು ನಿರಾಳವಾಗುತ್ತದೆ.

ಮರೆವು ಮನುಷ್ಯನ ಸಹಜ ಗುಣ. ಹಾಗಾಗಿ ಇದನ್ನ ನೆನಪಿಸಲೆಂದೇ ಮತ್ತೆ ಮತ್ತೆ ಬರುತ್ತದಾ ದೀಪಾವಳಿ....  ಹಣತೆಯನ್ನು ಹಚ್ಚುತ್ತಾ ಹಚ್ಚುತ್ತಾ ಬೆಳಕು ತುಂಬಿಕೊಳ್ಳುತ್ತಾ ಮತ್ತಷ್ಟು ದೂರ ಸಾಗಲು ಅನುವು ಮಾಡಿಕೊಡುತ್ತದಾ...  ದೀಪದಿಂದ ದೀಪವ ಹಚ್ಚಬೇಕು ಮಾನವ ಎಂದಿದ್ದು ಇದಕ್ಕೇನಾ...ಯಾರನ್ನೋ ಗೆಲ್ಲುವುದು ಮುಖ್ಯವಲ್ಲ ತನ್ನನ್ನು ತಾನು ಗೆಲ್ಲಬೇಕು ಎನ್ನುವುದನ್ನು ಸೂಚಿಸುತ್ತದಾ...

ಹಚ್ಚೋಣ ಹಣತೆ, ಒಬ್ಬರನೊಬ್ಬರು ನೋಡಿ ಕೊಳ್ಳೋಣ..
ಬೇಕಾದಷ್ಟೇ ತಿಳಿಯೋಣ, ನೋಡಬೇಕಾಗಿದ್ದಷ್ಟೇ ನೋಡೋಣ .
ಜೊತೆ ಜೊತೆಗೆ ಹೆಜ್ಜೆ ಇಡೋಣ... ದೀಪಾವಳಿಯ ಶುಭಾಶಯಗಳು.





















Comments

Popular posts from this blog

ಮಾತಂಗ ಪರ್ವತ

ರಂಜದ ಹೂ

ಬರಿದೆ ಆಡುವ ಮಾತಿಗರ್ಥವಿಲ್ಲ...