ದೇವಸ್ಥಾನ ರಾಜಕೀಯ

ಪುರಾಣ ಪ್ರಸಿದ್ಧ ದೇವಸ್ಥಾನ, ಶಾಸ್ತ್ರೋಕ್ತವಾಗಿ  ತ್ರಿಕಾಲ ಪೂಜೆ ನಡೆಯುವ ಸ್ಥಳ. ತನ್ನದೇ ಆದ ಸ್ಥಳ ಮಹಾತ್ಮೆ, ಒಂದು ಶಕ್ತಿ ಕೇಂದ್ರವಾಗಿ ತನ್ನ ಪಾವಿತ್ರ್ಯವನ್ನು ಉಳಿಸಿಕೊಂಡ ಬಂದ ಆ ದೇವಸ್ಥಾನ ಇರುವುದು ಪುಟ್ಟ ಹಳ್ಳಿಯಲ್ಲಿ, ಕುಗ್ರಾಮ ಎಂದರೂ ತಪ್ಪಿಲ್ಲ. ಒಂದೋ ಎರಡೋ ಬಸ್ ಗಳು ಬಿಟ್ಟರೆ ಬೇರೇನಿಲ್ಲ. ಹಾಗಾಗಿ ಯಾವುದೇ ಗಜಿಬಿಜಿ ಇಲ್ಲದೆ ತನ್ನ ಪಾವಿತ್ರ್ಯವನ್ನು ಉಳಿಸಿಕೊಂಡು ಬಂದ ಕೆಲವರಿಗೆ ನೆಮ್ಮದಿ ಕೊಡುವ ತಾಣವಾಗಿ ಉಳಿದಿತ್ತು. ಪ್ರಕೃತಿಯ ಮಡಿಲಲ್ಲಿ ತಣ್ಣಗಿತ್ತು.

ಎಲ್ಲವನ್ನೂ ಅಭಿವೃದ್ಧಿ ಮಾಡುತ್ತೇವೆ ಅನ್ನೋ ಹಮ್ಮು ಮನುಷ್ಯನಿಗೆ. ಎಲೆಮರೆಯ ಕಾಯಿಯಂತೆ ಇದ್ದ ಅದನ್ನೂ ಅಭಿವೃದ್ಧಿ ಮಾಡಲು ಯೋಜನೆಗಳು, ಅದಕ್ಕೊಂದು ಕಮಿಟಿ ಎಲ್ಲವೂ ಆಗಿ ಮೊದಲ ಹೆಜ್ಜೆಯಾಗಿ ನಿತ್ಯ ಅನ್ನದಾನ ಮಾಡುವ ಯೋಜನೆ ಜಾರಿಗೆ ಬಂದಿತು. ದೇವಸ್ಥಾನಕ್ಕೆ ಹೆಸರಿತ್ತು ನಿಜ ಆದರೆ ಹಣವಿರಲಿಲ್ಲ. ಹಾಗಾಗಿ ನಿತ್ಯ ಅನ್ನದಾನ ಎಂದರೆ ಅದಕ್ಕೆ ಹಣ ಹೊಂದಿಸಬೇಕು. ಒಂದಷ್ಟು ಫಂಡ್ ಬೇಕು. ಒಮ್ಮೆ ಶುರುಮಾಡಿದ ಮೇಲೆ ನಿಂತರೆ ನಗೆಪಾಟಲು. ಹಾಗಾಗಿ ಫಂಡ್ ಸಂಗ್ರಹಿಸಲು ದಾನಿಗಳ ಹುಡುಕುವ ಜೊತೆಜೊತೆಗೇ ಬಂದ ಭಕ್ತರು ತಮ್ಮ ಶಕ್ತ್ಯಾನುಸಾರ ಹಣ ಕೊಟ್ಟು ರಸಿತಿ ಪಡೆಯಬಹುದು ಎಂದಾಯಿತು. ರಸೀತಿ ಕೊಡಲು ಒಬ್ಬರ ನೆಮಕವೂ ಆಯಿತು. ಹೆಸರು ಪುಗಸಟ್ಟೆ ಬಂದರೆ ಸರಿ ಆದರೆ ಕೆಲಸ ಪುಗಸಟ್ಟೆ ಮಾಡೋದು ಹೇಗೆ ಅದಕ್ಕಿಷ್ಟು ಸಂಬಳ, ಕೂರಲು ಕುರ್ಚಿ ಅದಕ್ಕೊಂದು ಹುದ್ದೆಯ ಹೆಸರು ಎಲ್ಲವೂ ಆಯಿತು. ಸನ್ಯಾಸಿಯ ಸಂಸಾರ ಅನ್ನೋ ಕತೆ ಕೆಳಿದ್ದಿರಷ್ಟೇ, ಇದು ಕೂಡ ಅದಕ್ಕಿಂತ ಏನೂ ಭಿನ್ನವಾಗಿರಲಿಲ್ಲ ಬಿಡಿ.

ಏನೇ ವೈಜ್ಞಾನಿಕತೆ ಮಣ್ಣು ಮಸಿ ಅಂದರೂ ನಮ್ಮ ದೇಶದಲ್ಲಿ ಭಕ್ತರಿಗೆ ಕೊರತೆಯಿಲ್ಲ. ಅದರಲ್ಲೂ ಪಾಪ ಪರಿಹಾರ ಆಗುತ್ತೆ ಅಂದರೆ ಎಷ್ಟು ಹಣ ಕೊಡಲೂ ಹಿಂದೆ ಮುಂದೆ ನೋಡುವುದಿಲ್ಲ. ಇಂತಿಷ್ಟು ಹಣ ಕೊಟ್ಟರೆ ವರ್ಷಕ್ಕೊಮ್ಮೆ ಅವರ ಹೆಸರಿನಲ್ಲಿ ಅನ್ನದಾನ ನಡೆಯುತ್ತದೆ ಹಾಗೂ ಅವರ ಹೆಸರು ಬೋರ್ಡ್ ನಲ್ಲಿ ಬರುತ್ತದೆ ಅಂದ ಮೇಲೆ ಕೊಡುವವರ ಸಂಖ್ಯೆಯೂ ಹೆಚ್ಚಿತು.  ಹೀಗೊಂದು ಒಳ್ಳೆಯ ಕಾರ್ಯ ನಡೆಯುವಾಗ ತಮ್ಮದೊಂದು ಅಳಿಲು ಸೇವೆ ಇರಲಿ ಎಂದು ಯೋಚಿಸಿ ಹಣ ಕೊಟ್ಟವರು ಸಾವಿರಾರು ಜನ. ಒಮ್ಮೆ ದೇವಸ್ಥಾನಕ್ಕೆ ಹಣ ಹರಿದು ಬರಲು ಶುರು ಮಾಡಿದ ಮೇಲೆ ಅಲ್ಲಿ ದೇವರಿಂದ ನಾನು ಎನ್ನುವುದು ಹೋಗಿ ನನ್ನಿಂದ ದೇವರು ಎನ್ನುವುದು ಆರಂಭವಾಗುತ್ತದೆ. ಇಲ್ಲಿರುವುದು ಮನುಷ್ಯರೇ ತಾನೇ ಇಲ್ಲೂ ಶುರುವಾಯಿತು.

ಯಾವುದೇ ಒಳ್ಳೆಯ ಕೆಲಸ ಮಾಡಲು ಹೊರಟರು ಅಲ್ಲಿ ಒಬ್ಬರೋ ಇಬ್ಬರೋ ಇರುತ್ತಾರೆ. ಅವರಿಗೆ ತಮ್ಮ ವರ್ಚಸ್ಸು, ಅಧಿಕಾರ ತೋರಿಸಬೇಕು ಅನ್ನೋ ಮನಸ್ಥಿತಿ. ಎಲ್ಲವೂ ನನ್ನಿಂದ ಎಂಬ ಅಹಂಕಾರ. ಆ ಅಧಿಕಾರ ಪಡೆಯಲು ಕುಟಿಲ ಕಾರ್ಯಾಚರಣೆ ಕುತ್ಸಿತ ಬುದ್ಧಿ. ಐವತ್ತು ವರ್ಷಗಳಿಂದ ನಡೆದು ಬಂದು ಒಂದೇ ಒಂದು ಕಪ್ಪು ಚುಕ್ಕೆಯೂ ಇಲ್ಲದಂತೆ ಕಾರ್ಯ ನಿರ್ವಹಿಸಿದ ಜೀರ್ಣೋದ್ಧಾರ ಮಂಡಳಿಯ ಉಪ ಮಂಡಳಿಯಾಗಿ ನೇಮಕವಾದ ಅನ್ನದಾನ ಸಮಿತಿಯಲ್ಲಿ   ಅಂತ ಬೆರಳೆಣಿಕೆಯಷ್ಟು ಜನ ಕಮಿಟಿಯ ಒಳಗೆ ನುಸುಳಿ ತಮ್ಮ ವೈಯುಕ್ತಿಕ ಸ್ಥಾನ, ಮಾನ ಹೆಚ್ಚಿಸಿಕೊಲ್ಲುವುದರ ಬಗ್ಗೆ ಮಾತ್ರ ಯೋಚಿಸಿ ವಾತಾವರಣ ಹಾಳಾದರೂ ಪರವಾಗಿಲ್ಲ ಅನ್ನೋ ಪರಮ ಸ್ವಾರ್ಥವನ್ನು ಧ್ಯೇಯವಾಗಿಸಿಕೊಂಡರು. ದೇವಸ್ಥಾನದ ವಹಿವಾಟು  ಬೆಳೆಯುತ್ತಾ ಹೋದಂತೆ ರಾಜಕೀಯವೂ ಬಲಗಾಲಿಟ್ಟು ಒಳ ಪ್ರವೇಶಿಸಿ ಶೀತಲ ಸಮರ, ಒಳಗೊಳಗೇ ಕತ್ತಿಮಸೆತ ಶುರುವಾಗಿ ಅಲ್ಲಿ ನಿಷ್ಠರಾದವರನ್ನು ಹಣಿಯುವ ಸಂಚಿನ ಬೀಜಾಂಕುರವಾಯಿತು. ಬೆರಳು ಕೊಟ್ಟರೆ ಹಸ್ತವನ್ನೇ ನುಂಗುವಂತವರ ರಾಕ್ಷಸ ಹಸಿವಿಗೆ ದೇವಸ್ಥಾನ ತುತ್ತಾಗುತ್ತಾ ಹೋಯಿತು.

ನಿತ್ಯ ಅನ್ನದಾನ ಎಂದ ಮೇಲೆ ಸಾಮಾನು ಬೇಕು. ಮತ್ತದನ್ನು ಅಂಗಡಿಯಿಂದ ತರಬೇಕು. ಹಾಗೆ ತರಲು ಊರಿನದೇ ಆದರೆ ಅವರಿಗೂ ವ್ಯಾಪಾರ. ಹಾಗಾಗಿ ಹತ್ತಿರದ ಕಟ್ಟೆಹಕ್ಕಲಿನ ಅಂಗಡಿಯೊಂದರಿಂದ ತರಲು ಶುರುವಾಯಿತು. ಕ್ರಮೇಣ ಊರಿನ ಹುಡುಗನೊಬ್ಬನ ಅಂಗಡಿ ಅಲ್ಲೇ ದೇವಸ್ಥಾನದ ಹತ್ತಿರದಲ್ಲೇ ಆದಾಗ ನಮ್ಮೂರಿನ ಹುಡುಗ ಇಲ್ಲಿಂದಲೇ ತರಬಹುದಾದರೂ ಮೊದಲಿಂದ ತಂದ ಅವರೂ ಬೇಸರ ಪಡುವುದು ಬೇಡವೆಂದು ಇಬ್ಬರಿಗೂ ಸಮಪಾಲು ಕೊಡಲು ಸಭೆಯೊಂದರಲ್ಲಿ ನಿರ್ಧರಿಸಿ ಅದನ್ನು ಅನುಷ್ಠಾನಗೊಳಿಸಲಾಯಿತು. ಇದರ ಲಾಭವನ್ನು ಪಡೆಯಲು ನಿರ್ಧರಿಸಿದ ಕುತ್ಸಿತ ಮನಸ್ಥಿತಿಯ ಸದಸ್ಯರೊಬ್ಬರು ಕಟ್ಟೆಹಕ್ಕಲಿನ ಆ ಅಂಗಡಿಯವರ ಬಳಿಗೆ ಹೋಗಿ ನಿಮ್ಮ ಅಂಗಡಿಯಿಂದ ತರಬಾರದು ಅಂತ ಪ್ಲಾನ್ ಮಾಡಿ ಹೀಗೆ ಮಾಡಿದ್ದು ಎಂದು ಹೇಳಿ ಮೊದಲ ವಿಷ ಬೀಜ ಬಿತ್ತಿದರು.

ಪುಟ್ಟ ಊರಿನಲ್ಲಿ ಗುಟ್ಟುಗಳು ಬಹಳ ಕಾಲ ನಿಲ್ಲುವುದಿಲ್ಲ. ಇಲ್ಲೂ ಆ ವಿಷಯ ಒಬ್ಬರ ಬಾಯಿಂದ ಇನ್ನೊಬ್ಬರ ಬಾಯಿಗೆ ಹಬ್ಬಿ ವಾತಾವರಣ ಪೂರ್ಣ ಹದಗೆಡುವ ಮೊದಲು ವಿಷ ಕ್ರಿಮಿಗಳನ್ನು ನಿವಾರಿಸಿಕೊಳ್ಳುವುದು ಒಳ್ಳೆಯದು ಎಂದು ನಿರ್ಧರಿಸಿದ ಸಮಿತಿ ಅವರಿಂದ ರಾಜಿನಾಮೆ ಪಡೆಯಿತು. ದಿನದಲ್ಲಿ ಒಂದೆರೆಡು ಗಂಟೆಯ ಕೆಲಸಕ್ಕೆ ಬರುತಿದ್ದ ಸಾವಿರಾರು ರುಪಾಯಿ ಸಂಬಳ ನಿಂತು ಹೋದರೆ ಹೇಗೆ ತಡೆದುಕೊಳ್ಳುವುದು? ನರಿಯಂತ ಮನುಷ್ಯ ತನ್ನ ಬುದ್ಧಿವಂತಿಕೆಯಿಂದ ಇದನ್ನು ಕಾಂಗ್ರೆಸ್ ವರ್ಸಸ್ ಬಿ ಜೆ ಪಿ ಎಂಬ ಬಣ್ಣ ಕಟ್ಟಿ ಚುನಾವಣೆ ಸಮಯದಲ್ಲಿ   ಒಳಗೆ ಹೊಗೆಯಾಡುತಿದ್ದ ದ್ವೇಷದ ಬೆಂಕಿಗೆ ಇದನ್ನು ತುಪ್ಪವಾಗಿಸಿ ಗಲಾಟೆ ನಡೆಸುವ ಉಳಿದ ಸದಸ್ಯರಿಗೆ ಹೊಡೆಯುವ ಪ್ಲಾನ್ ಒಂದು ತಯಾರಾಯಿತು.

ನಡೆದ ಕಾರ್ಯಕಾರಿ ಸಭೆಯ ದಿನ ಕೆಟ್ಟ ಕೆಟ್ಟ ಶಬ್ಧಗಳಿಂದ, ಅವ್ಯಾಚ್ಯ ಮಾತುಗಳಿಂದ ಅದೊಂದು ದೇವಸ್ಥಾನವೆಂದೂ ಲೆಕ್ಕಿಸದೆ, ಅಲ್ಲಿರುವ ಹಿರಿಯರಿಗೂ ಬೆಲೆಕೊಡದೆ ಗಲಾಟೆಯಾಗಿ ಕೈ ಕೈ ಮಿಲಾಯಿಸಿ ಹೊಡೆದಾಟ ನಡೆದು. ಇಲ್ಲದ ದಲಿತ ಜಗಳವನ್ನು ಆರೋಪಿಸಿ ಕೇಸ್ ಕೂಡಾ ಮಾಡಿಸಿ ವಿಜಯದ ನಗೆ ಬೀರಿದರು. ಸರ್ಕಾರ ಅವರದೆ ಆಗಿರುವುದರಿಂದ ಬೆಂಗಳೂರಿನಿಂದ ಹೋದ ಫೋನ್ ಕಾಲ್ ಗಳು ಅಲ್ಲಿಯ ನಿಜ ಸ್ಥಿತಿ, ನ್ಯಾಯ ಎರಡೂ ಮರೆತು ಕಾರ್ಯ ನಿರ್ವಹಿಸುವ ಹಾಗೆ ಆದೇಶ ನೀಡಿತು. ನ್ಯಾಯ ನಿಮ್ಮ ಕಡೆ ಇದ್ದರೇನು ಕಾನೂನು ಸರ್ಕಾರ ಯಾವ ಕಡೆಗಿದೆ ಅನ್ನೋದು ಮುಖ್ಯ ಅದೇ ಸತ್ಯ ಅನ್ನುವ ಘೋಷವಾಕ್ಯ ಕೇಳಿ ಕಂಗಾಲಾಗಿರುವ ಉಳಿದವರನ್ನು ಈಗ ಆ  ಮಲ್ಲಿಕಾರ್ಜುನನೇ ಕಾಪಾಡಬೇಕು.

ಮೃಗವಧೆಯಂತಹ ಒಂದು ಪುಟ್ಟ ಊರಿನಲ್ಲಿ ಒಂದು ಸಣ್ಣ ದೇವಸ್ಥಾನದ ಪರಿಸ್ಥಿತಿಯೇ ಹೀಗಿರುವಾಗ, ಕೇವಲ ಸ್ಥಾನ, ಅಧಿಕಾರಕ್ಕಾಗಿ ಜನ ಯಾವ ಮಟ್ಟಕ್ಕೂ ಇಳಿಯಲು ತಯಾರಿರುವಾಗ  ತನ್ನ ಪಕ್ಷವೆಂದ ಕೂಡಲೇ ಸರ್ಕಾರವೇ ಖುದ್ಧು ನಿಂತು ಅನ್ಯಾಯವನ್ನು ಬೆಂಬಲಿಸುವಾಗ ದೇವರು, ನ್ಯಾಯ ನೀತಿ ಅನ್ನೋದು ನಮ್ಮ ಮೂರ್ಖತನವೋ, ಅಸಹಾಯಕತೆಯೋ ಗೊತ್ತಾಗುತ್ತಿಲ್ಲ ಅನ್ನೋದು ಊರಿನ ಜನರ ನೋವಿನ ಮಾತು.

Comments

Popular posts from this blog

ಮಾತಂಗ ಪರ್ವತ

ರಂಜದ ಹೂ

ಬರಿದೆ ಆಡುವ ಮಾತಿಗರ್ಥವಿಲ್ಲ...