ದೀಪ

ಕಾರ್ತಿಕ ಮಾಸವೆಂದರೆ ದೀಪಗಳ ಮಾಸ, ದೀಪೋತ್ಸವದ ಮಾಸ. ತಿಂಗಳು ಬೆಳಕಿನಲ್ಲಿ ಬೆಳಗುವ ದೀಪಗಳ ಸಾಲು. ಒಟ್ಟಿನಲ್ಲಿ ಬೆಳಕಿನ ತಿಂಗಳು. ಹೊತ್ತಿಗೆ ಮುಂಚೆ ಕತ್ತಲು ಬಂದು ಇಳೆಯ ಅಪ್ಪುವ ಹೊತ್ತಿಗೆ ಅಂಗಳದ ತುಳಸಿಯ ಎದುರು ಹಚ್ಚಿಟ್ಟ ಹಣತೆಯ ತಂಪು ಬೆಳಕಿನ ಜೊತೆ ಜೊತೆಗೇ ತಣ್ಣನೆಯ ಚಳಿಯೂ ಬಂದು ಮೈ ಮನಸ್ಸು ಆವರಿಸುವ ಕಾಲ. ಈ ತಿಂಗಳ ಇನ್ನೊಂದು ವಿಶೇಷವೆಂದರೆ ಆರಂಭದಲ್ಲಿ ಹಚ್ಚಿಟ್ಟ ಹಣತೆಯು ನೂರು ಸಾವಿರ ಲಕ್ಷವಾಗಿ ದೀಪೋತ್ಸವವಾಗಿ ಬೆಳಕು ಹಬ್ಬುವ ಪರಿ. ಅದರಲ್ಲೂ ಶಿವನ ದೇವಾಲಯದಲ್ಲಿ ಜರುಗುವ ದೀಪೋತ್ಸವ ಉಳಿದ ದೇವಸ್ಥಾನಗಳಲ್ಲಿ ಮಾರ್ಗಶಿರದಲ್ಲೂ ಮುಂದುವರೆದು ಬೆಳಕು ಪಸರಿಸುವ ರೀತಿ, ಮಾಗಿಯ ಚಳಿಗೆ ಬೆಚ್ಚಗಿನ ಅನುಭೂತಿ ಕೊಡುತ್ತದೆ.

ಬಾಲ್ಯದಲ್ಲಿ ಕರ್ಣಾನಂದಕರವಾಗಿ ಕೇಳುವ ಮಾತುಗಳಲ್ಲಿ ನಾಡಿದ್ದಿನಿಂದ ಗಣಪತಿ ದೇವಸ್ಥಾನದಲ್ಲಿ ದೀಪ ಶುರು ಅನ್ನುವ ಮಾತೂ ಒಂದೂ. ಕೇಳುತ್ತಿದ್ದ ಹಾಗೆ ಅಲ್ಲೊಂದು ಸಂಭ್ರಮ, ಸಡಗರ ಗುಬ್ಬಚ್ಚಿ ಗೂಡು ಕಟ್ಟುವ ಹಾಗೆ ನಿಧಾನಕ್ಕೆ ಕಟ್ಟುತಿತ್ತು. ಅದರ ಮೊದಲ ಹಂತವಾಗಿ ದೇವಸ್ಥಾನ ಅಂಗಳ ಕೆತ್ತುವ ಕೆಲಸ ಶುರುವಾಗುತ್ತಿತ್ತು. ಮಳೆಗಾಲದ ಮಳೆಗೆ ತೋಯ್ದು, ಹಸಿ ಹಸಿಯಾಗಿ ಒಡಲ ತುಂಬಾ ಹುಲ್ಲು, ಗಿಡಗಳಿಗೆ ಜನ್ಮಕೊಟ್ಟು, ಹಸಿರು ಹಾಸುಂಬೆಯ ಪತ್ತಲ ಉಟ್ಟ ಅಂಗಳವನ್ನು ಹಾರೆ ತಂದು ಹೆರಸುವುದರ ಜೊತೆಗೆ ನೀರು ಹರಿದು ಉಬ್ಬು ತಗ್ಗುಗಳಾಗಿ ಮಾರ್ಪಾಡಾದ ಜಾಗವನ್ನು ಆದಷ್ಟು ಮಟ್ಟಿಗೆ ಸಮತಟ್ಟು ಮಾಡುವ ಕೆಲಸ ಸುಲಭದ್ದೇನಾಗಿರಲಿಲ್ಲ. ಇಬ್ಬರೋ ಮೂವರೋ ಎಲೆ ಅಡಿಕೆ ಜಗಿಯುತ್ತಾ, ಆಗಾಗ ಬೆವರು ಒರೆಸಿಕೊಂಡು ಅಷ್ಟು ದೂರ ಹೋಗಿ ಅದನ್ನು ಉಗಿಯುತ್ತಾ ಹೆರಸಿದ ಮಣ್ಣು, ಜಡ್ಡು ಗಳನ್ನೂ ತೆಗೆದು ಸಂಜೆಯ ಒಳಗೆ ಅಂಗಳಕ್ಕೊಂದು ಹೊಸ ರೂಪ ಕೊಡುತ್ತಿದ್ದರು.

ಆಮೇಲೆ ಸಗಣಿ ಹೊತ್ತು ತಂದು ಇಡೀ ಅಂಗಳವನ್ನು ಕಣ್ಣೀರುಹೊಡೆದು ಸರಿ ಮಾಡಿದರೆ ದೀಪದ ಹಲಗೆ ಇಡುವ ಜಾಗದಲ್ಲಿ ಮಾತ್ರ ಕಪ್ಪುಮಸಿಯನ್ನು ಸೇರಿಸಿ ಬಳಿದು ಚೆಂದ ಮಾಡಲಾಗುತ್ತಿತ್ತು. ಎರಡು ದೀಪದ ಹಣತೆಯ ಸಾಲುಗಳ ಮಧ್ಯದಲ್ಲಿ ವರ್ಣರಂಜಿತ ರಂಗೋಲಿಗೆ ಜಾಗ. ದೇವಸ್ಥಾನದ ಬಲೆ ತೆಗೆದು ಸ್ವಚ್ಛಗೊಳಿಸಿ, ಪ್ರದಕ್ಷಿಣೆ ಬರಲು ಅಲ್ಲೆಲ್ಲಾ ಕೆತ್ತಿ ಸರಿ ಮಾಡಿ, ಮಧ್ಯದಲ್ಲಿ ಒಂದು ಚಪ್ಪರ ಹಾಕಿ ಗಂಟೆ, ಜಾಗಂಟೆ ಆರತಿಗಳನ್ನು ತೊಳೆದು ತಿಕ್ಕಿ ಫಳ ಫಳ ಹೊಳೆಯುವ ಹಾಗೆ ಮಾಡಿದರೆ ದೇವಸ್ಥಾನ ಅನ್ನೋದು ಮದುವೆಗೆ ತಯಾರಾದ ನವವಧುವಿನಂತೆ ಕಾಣಿಸುತ್ತಿತ್ತು. ಸಡಗರಕ್ಕೆ ಸಜ್ಜಾಗಿ ನಿಂತಿರುತ್ತಿತ್ತು.

ಇಳಿ ಸಂಜೆಕಾಲಿಡುವ ಹೊತ್ತಿಗೆ ಗಡಿಬಿಡಿಯೂ ಶುರು. ಹಣತೆಗಳನ್ನು ತಂದು ಇಕ್ಕೆಲಗಳಲ್ಲಿ ಜೋಡಿಸಬೇಕು. ಬತ್ತಿ ಕಟ್ಟು ಎಣ್ಣೆಯಲ್ಲಿ ನೆನಸಿ ಒಂದೊಂದಕ್ಕೆ ಎರಡು ಬತ್ತಿಗಳಂತೆ ಹಾಕುತ್ತಾ ಹೋಗಬೇಕು, ಆಮೇಲೆ ಚೂರೂ ಚೆಲ್ಲದಂತೆ, ಹಚ್ಚುವಾಗ ತುಳುಕಿ ಹೋಗದಂತೆ ಎಣ್ಣೆ ಹಾಕಬೇಕು. ಇಷ್ಟು ಮಾಡುವಾಗ ಕತ್ತಲು ಧಾಪುಗಾಲಿಕ್ಕಿ ಬಂದು ನಿಂತಾಗಿರುತಿತ್ತು. ವಿದ್ಯುತ್ ದೀಪಗಳಿಲ್ಲದ ಕಾಲದಲ್ಲಿ ಗ್ಯಾಸ್ ಲೈಟ್ ಗಳದ್ದೇ ಭರಾಟೆ. ಅದನ್ನು ಹಚ್ಚಲು ಎಲ್ಲರಿಗೂ ಬರುತ್ತಿರಲಿಲ್ಲವಾದ್ದರಿಂದ ಊರಿನಲ್ಲಿ ಅದನ್ನು ಹಚ್ಚುವ ಒಬ್ಬರೋ ಇಬ್ಬರೋ ಇದ್ದರೆ ಅವರಿಗೆ ಮುಖ್ಯ ಆಹ್ವಾನ. ಅವರೋ ಗತ್ತಿನಲ್ಲಿ ಬಂದು ಯಾರ್ಯಾರದ್ದೋ ಮನೆಯಿಂದ ಬಂದ ಅವುಗಳನ್ನು ಹಚ್ಚುವ ಕೆಲಸ ಮಾಡುತ್ತಿದ್ದರೆ ಅದಾಗಲೇ ಬಂದ ಮಕ್ಕಳು ಸುತ್ತಲೂ ಕುಳಿತು ಬಿಟ್ಟ ಕಣ್ಣುಗಳಿಂದ ಅದನ್ನು ನೋಡುತ್ತಿದ್ದರು. ಪಂಪ್ ಹೊಡೆದು ಅದನ್ನು ಹೊತ್ತಿಸಿ ಚಪ್ಪರದ ಮಾಡಿಗೆ ಇಳಿಬಿಟ್ಟ ತಂತಿಗೆ ಅದನ್ನು ಸಿಕ್ಕಿಸುವಾಗ ಸ್ನಾನ ಮಾಡಿ ಮಡಿಯುಟ್ಟ ಕೇಶುವಣ್ಣ ಬರುತ್ತಿದ್ದರು.

ದೀಪದ ಹೊತ್ತಿಗೆ ವಿಧ ವಿಧವಾದ ಆರತಿಗಳಿಗೆ ಬಿಡುಗಡೆಯ ಸಂಭ್ರಮ. ಅಟ್ಟದಲ್ಲಿ ಕಟ್ಟಿಟ್ಟ ತರತರಹದ ಆರತಿಗಳು ಆಗ ಹೊರಗೆ ಬಂದು ಸಾಲಾಗಿ ಕುಳಿತಿರುತ್ತಿದ್ದವು. ಏಕಾರತಿ, ಎರಡು, ಮೂರು, ಕಣ್ಣಿನ ಆರತಿ, ಸರ್ಪದ ಹೆಡೆಯಾಕಾರದ ಆರತಿ, ತೇರು ಹೂವಿನಂತ ಆರತಿ,  ಕುಂಕುಮಾರತಿ, ತಾಮ್ರದ ತಟ್ಟೆಯಲ್ಲಿ ಎಣ್ಣೆಯ ಬತ್ತಿಯಿಂದ ರಂಗೋಲಿ ಬಿಡಿಸಿ ಅದಕ್ಕೆ ಅರಿಸಿನವೋ, ಕುಂಕುಮವೋ ಹಾಕಿ ಜಾಲಿಸಿದಾಗ ಬಣ್ಣವಾದ ತಟ್ಟೆಗೆ ಸಾಲು ಬತ್ತಿಗಳನ್ನು ಜೋಡಿಸಿ ಮಾಡಿದ ಆರತಿ, ಕೊನೆಯಲ್ಲಿ ಕದಲಾರತಿ. ಹೀಗೆ ಹತ್ತಾರು ತರದ ಆರತಿಗಳಿಗೆ ಬತ್ತಿ ಹಾಕಿ ಅವರು ಪೂಜೆಗೆ ತಯಾರಾಗುವ ವೇಳೆಗೆ ಜನರೂ ಒಬ್ಬೊಬ್ಬರಾಗಿ ಬಂದು ಸೇರುತ್ತಿದ್ದರು.

ಚಳಿ ಆವರಿಸಿಕೊಳ್ಳುವ  ರಾತ್ರಿಯಲ್ಲಿ ಒಂದು ಬ್ಯಾಟರಿ ಹಿಡಿದು, ಬೆಚ್ಚಗಿನ ಬಟ್ಟೆ ಧರಿಸಿ ಗದ್ದೆ ಅಂಚು ದಾಟಿ, ಕಾಡಿನ ದಾರಿಯಲ್ಲಿ ನಡೆದು, ಗುಡ್ಡ ಹತ್ತಿಳಿದು ಕಲ್ಲು ಮಣ್ಣುಗಳ ತುಳಿದು ಗವ್ವೆನ್ನುವ ಕತ್ತಲಿನಲ್ಲಿ ಜನರನ್ನು ಬರುವ ಹಾಗೆ ಮಾಡುತ್ತಿದ್ದಾದರೂ ಯಾವುದು?  ಅಲ್ಲೊಂದು ಇಲ್ಲೊಂದು ಮನೆಯಿರುವ ಊರಿನಲ್ಲಿ ಮೈಲು ಗಟ್ಟಲೆ ನಡೆದು ಜನ ಬರುವುದಕ್ಕೆ ಇದ್ದ ಆಕರ್ಷಣೆಯಾದರೂ ಯಾವುದು? ಮಲೆನಾಡಿನಲ್ಲಿ ಅಡಿಕೆ ಕೊಯ್ಲು ಶುರುವಾದಾಗ ಮೈ ಕೈ ತುರಿಸಿಕೊಳ್ಳಲೂ ಪುರುಸೊತ್ತು ಇಲ್ಲದಷ್ಟು ಕೆಲಸ. ದಿನವಿಡೀ ದುಡಿದೂ ಸುಸ್ತಾದರೂ ಆ ರಾತ್ರಿಯಲ್ಲಿ ನಿದ್ದೆ ಹೋಗದೆ ಜನ ಬರುತ್ತಿದ್ದದ್ದು ಹೇಗೆ?  ಎನ್ನುವುದು ಇವತ್ತಿಗೂ ಉತ್ತರಸಿಗದ ಪ್ರಶ್ನೆಯೇ.. ಬೆಳಕಿನ ಸೆಳೆತವೇ ಅಂಥಹುದಾ...

ಕಾರ್ತಿಕ ಮಾಸದಲ್ಲಿ ಒಂದು ದೀಪ ಹಚ್ಚಿದರೆ ನೂರು ದೀಪ ಹಚ್ಚಿದಂತೆ ಅನ್ನೋದು ವಾಡಿಕೆಯ ಮಾತು. ಅದು ದೀಪೋತ್ಸವಕ್ಕೂ ಸಲ್ಲುತಿತ್ತು. ಹಾಗಾಗಿ ಭಯ ಭಕ್ತಿಯಿಂದ ದೀಪವನ್ನು ಜನ ಹಚ್ಚುತ್ತಿದ್ದರು. ತಾವೊಂದು ಹಚ್ಚಿ ಇನ್ನೊಬ್ಬರಿಗೆ ಹಚ್ಚಲು ಅವಕಾಶ ಮಾಡಿಕೊಡುತ್ತಿದ್ದರು. ಪುಣ್ಯತಾನು ಮಾತ್ರ ಸಂಪಾದಿಸುವುದಲ್ಲ ಉಳಿದವರೂ ಸಂಪಾದಿಸಲಿ ಅನ್ನುವುದು, ಬಿಟ್ಟು ಕೊಡುವುದು, ಅವಕಾಶ ಕೊಡುವುದು ಏನೆಲ್ಲಾ ಇತ್ತು...  ಕತ್ತಲೆಯ ಕಾನನದ ನಡುವೆಯ ದೇವಸ್ಥಾನದಲ್ಲಿ ದೀಪಗಳು ಬೆಳಗಿ ಇಡೀ ವಾತಾವರಣಕ್ಕೆ ಒಂದು ದಿವ್ಯ ಪ್ರಭೆ ಉಂಟಾಗುತ್ತಿತ್ತು. ನಂತರದ ಮಂಗಳಾರತಿಯ ಸೊಬಗೆ ಮತ್ತೊಂದು ರೀತಿಯದು.

ತರತರಹದ ಹತ್ತಾರು ಆರತಿಗಳನ್ನು ಹಚ್ಚಿ ಕೊಡಲು ಒಬ್ಬರು ಇದ್ದರೂ ಅವುಗಳನ್ನೆಲ್ಲವನ್ನೂ ಆರತಿ ಎತ್ತುವುದು ಅಷ್ಟು ಸುಲಭದ ಕೆಲಸವಲ್ಲ. ತಾಮ್ರದ ಭಾರದ ಆರತಿಯನ್ನು ದೇವರಿಗೆ ಎತ್ತುವುದು ಒಂದು ಕಲೆ. ಆ ಬೆಳಕಿನಲ್ಲಿ ಅಲಂಕಾರದಲ್ಲಿ ಕಂಗೊಳಿಸುವ ವಿಗ್ರಹವೂ ಕೆಲವೊಮ್ಮೆ ನಸು ನಕ್ಕಂತೆ, ಮಂದಹಾಸ ಬೀರಿದಂತೆ ಸಂಪ್ರೀತಿಗೊಂಡಂತೆ ಕಾಣುವಾಗ ಎಷ್ಟೋ ಜನರ ಮುಖದಲ್ಲಿ ಧನ್ಯತೆ, ಕಣ್ಣಲ್ಲಿ ನೀರೂ ಎರಡೂ ತುಂಬುತ್ತಿತ್ತು. ಅಷ್ಟೂ ಆರತಿಗಳನ್ನು ಮಾಡುವ ಕೈ ಸಾಕಷ್ಟು ಶಕ್ತಿಯನ್ನು ಬೇಡಿದರೂ ನಸು ನಗುತ್ತಲೇ ಎತ್ತುತ್ತಿದ್ದ ಕೇಶುವಣ್ಣ ಕೊನೆಯ ಕದಲಾರತಿ ಮಾಡುವಾಗಿನ ಸಂತೃಪ್ತಿಯೇ ಗಣಪತಿಯ ಮುಖದಲ್ಲೂ ಪ್ರತಿಫಲಿಸುತಿತ್ತಾ..... ಗಂಟೆ ಜಾಗಟೆಗಳ ತಾಳ ಬದ್ದ ಸದ್ದು, ದೀಪಗಳ ಮಂದ ಬೆಳಕು, ಮಂತ್ರಗಳ ಶೃತಿಬದ್ಧ ಸ್ವರ, ತಂದು ನಾ ಇರಿಸಿರುವೆ ಎಂದು ಭಾವಪೂರ್ಣವಾಗಿ ಹಾಡುತಿದ್ದ ಆಂಟಿಯ ಹಾಡಿನಲ್ಲಿ  ಇಡೀ ವಾತಾವರಣವೇ ಮುಳುಗಿ ಹೋಗುವಾಗ ಚಳಿ ಅದ್ಯಾವಾಗಲೋ ಕಳೆದೇಹೋಗಿರುತಿತ್ತು. ಗಣಪತಿಯೂ ಕಳೆದು ಹೋಗಿರುತ್ತಿದ್ದನೇನೋ..

ಆರತಿ ಮುಗಿದ ನಂತರ ನಮ್ಮ ಕಣ್ಣು ಕಿವಿಗಳು ಕಾಯುತ್ತಿದ್ದದ್ದು ನೈವೇದ್ಯ ಮುಗಿಯುವುದನ್ನ.. ಅದಾಗಲೇ ತಂದಿಟ್ಟ ಪನಿವಾರದ ಸುವಾಸನೆ ಗರ್ಭ ಗುಡಿಯಿಂದ ಹೊರಟು ಬಂದವರ ನಾಸಿಕದ ಸಮೀಪ ನೃತ್ಯ ಆರಂಭಿಸಿದರೆ ಅದರಲ್ಲೇ ಯಾರೋ ಎಲ್ಲರಿಗೂ ಕತ್ತರಿಸಿ ಒರೆಸಿಟ್ಟ ಬಾಳೆಎಲೆಯನ್ನು ಹಂಚುತ್ತಿದ್ದರು. ಅದನ್ನು ಎರಡೂ ಕೈಯಲ್ಲಿ ಚೆಲ್ಲದಂತೆ ಹಿಡಿದರೆ ಒಂದೊಂದಾಗಿ ಪನಿವಾರ ಅದರಲ್ಲಿ ಬಂದು ಜಾಗ ಆಕ್ರಮಿಸುತಿತ್ತು. ಗಣಪತಿಗೆ ಇಷ್ಟವಾದ ಪಂಚಕಜ್ಜಾಯ ಮೊದಲು ಅದರ ಹಿಂದೆ ಉಸುಳಿಯೋ, ಸಿಹಿ ಅವಲಕ್ಕಿಯೋ, ಬಾಳೆ ಹಣ್ಣಿನ ಸೀಕರಣೆಯೋ ಸಾಲಾಗಿ ಬಂದು ಸೇರುತ್ತಿದ್ದವು. ಪುಟ್ಟ ಬಾಳೆಎಲೆಯಲ್ಲಿ ಅವೆಲ್ಲವೂ ಒಂದಕ್ಕೊಂದು ಹೊಂದಿಕೊಂಡು ವಿಶಿಷ್ಟ ರುಚಿಯನ್ನು ದಯಪಾಲಿಸುತ್ತಿದ್ದವು.

ಅಲ್ಲಿಯವರೆಗೆ ಅಲ್ಲೆಲ್ಲೋ ಅಡಗಿದ್ದ ಚಳಿ ಮತ್ತೆ ಮುತ್ತಿಕ್ಕಿ ಹಲ್ಲುಗಳು ಕಟಕಟ ಸದ್ದು ಹೊರಡಿಸುವ ಹೊತ್ತಿಗೆ ಹಬೆಯಾಡುವ ಉಸುಳಿ ಅದಕ್ಕೆ ಸಮಾಧಾನ ಮಾಡಿ ಕಾಲುಗಳು ನಿಧಾನಕ್ಕೆ ಹೊರಟು ಮನೆಯ ಸೇರುವ ಹೊತ್ತಿಗೆ ಮೈ ಮರಗಟ್ಟುವುದು ಬಾಕಿಯಿರುತಿತ್ತು. ಕೊಂಡುಹೋದ ಪನಿವಾರವನ್ನು ಸ್ವಲ್ಪ ಉಳಿಸಿ ಎತ್ತಿಟ್ಟು ಊಟವೂ ಬೇಡ ಏನೂ ಬೇಡಾ ಎಂದು ಕಂಬಳಿ ಹೊದ್ದು ಮಲಗಿದರೆ ಬೆಳಗ್ಗೆಯವರೆಗೆ ಗಡದ್ದು ನಿದ್ದೆಯೇ.. ಶಾಲೆಗೇ ಹೊರಡುವಾಗ ನೆನಪಿನಿಂದ ಉಳಿಸಿದ ಪನಿವಾರದ ಪ್ರಸಾದವನ್ನು ಪಾಟಿ ಚೀಲಕ್ಕೆ ಸೇರಿಸಿ ಹೊರಟರೆ ಅದೇನೋ ನೆಮ್ಮದಿ. ಅಲ್ಲಿ ಎಲ್ಲರಿಗೂ ಹಂಚಿ ತಿಂದರೆ ಅದೇನೋ ಖುಷಿ. ಕಾಯುವ ಅವರು, ಕೊಂಡು ಹೋಗುವ ನಾವು, ದೀಪ ಮಾಡಿಸಿದವರು, ಪನಿವಾರ ಮಾಡಿದವರು, ಪೂಜೆ ಮಾಡಿದವರು ಊರವರು ಹೀಗೆ ಎಲ್ಲರನ್ನೂ ಒಂದು ದೀಪ ಎನ್ನುವ ಮಾಂತ್ರಿಕ ಒಟ್ಟಿಗೆ ಹೇಗೆ ಸೇರಿಸುತಿದ್ದ, ಸೇರಿಸಿ ಏನು ಮಾಡುತಿದ್ದ?  ಎಂದು ಇಲ್ಲಿ ಒಬ್ಬಳೇ ಕುಳಿತು ಆಲೋಚಿಸುವಾಗಳೆಲ್ಲಾ ದೀಪ ಮುಗಿಸಿ ಬಂದವರು ವಾಪಾಸು ಹೋಗುವಾಗಿನ ಮುಖಭಾವ ನೆನಪಾಗುತ್ತದೆ...ಆ ಬೆಳಕು ಇಲ್ಲೆಲ್ಲಾ ಪ್ರತಿಫಲಿಸಿ ಲಕ್ಷ ದೀಪೋತ್ಸವ ಜರುಗಿದ ಹಾಗಾಗುತ್ತದೆ.

ಆ ರಾತ್ರಿಯಲ್ಲಿ ಹಚ್ಚಿದ ದೀಪ ಕಳೆಯುತ್ತಿದ್ದದ್ದು ಕೇವಲ ಹೊರಗಿನ ಕತ್ತಲನ್ನಾ....

Comments

Popular posts from this blog

ಮಾತಂಗ ಪರ್ವತ

ರಂಜದ ಹೂ

ಬರಿದೆ ಆಡುವ ಮಾತಿಗರ್ಥವಿಲ್ಲ...