ಸದ್ಗುರು

ಏನನ್ನೋ ಹುಡುಕುವಾಗ ಎಲ್ಲವೂ ಒಳಗಿನಿಂದಲೇ ಬಂದರೂ ಹೊರಗನ್ನು ಸರಿ ಮಾಡುವತ್ತಲೇ ಗಮನ ಹರಿಸುತ್ತೇವೆ, ಒಳಗನ್ನು ಮರೆತು ಬಿಡುತ್ತೇವೆ ಎನ್ನುವರ್ಥದ ಸಾಲು ಕಣ್ಣಿಗೆ ಬಿದ್ದು ಹುಡುಕಾಟಕ್ಕೆ ಪೂರ್ಣವಿರಾಮ ಬಿದ್ದು ಅದರೊಳಗೆ ಹೋಗಿದ್ದೆ. ಅಂದು ಹೋದವಳು ಆಮೇಲೆ ಅಲ್ಲಿಂದ ಬಿಡಿಸಿಕೊಳ್ಳುವ ಹೊರಬರುವ ಯಾವ ಇಚ್ಛೆಯೂ ಇಲ್ಲದೆ ಮತ್ತೆ ಮತ್ತೆ ಮುಳುಗುತ್ತಾ, ಬೇಕಾದ್ದನ್ನು ಬೇಕಾದ ಸಮಯದಲ್ಲಿ ಪಡೆಯುತ್ತಾ ಮನಸ್ಸು ಬದುಕು ಎರಡೂ ತಹಬಂದಿಗೆ ತರುವ ಪ್ರಯತ್ನ ನಿರಂತರವಾಗಿ ಜಾರಿಯಲ್ಲಿದೆ. ಆ ಶಕ್ತಿ ಮತ್ತು ವ್ಯಕ್ತಿಯೇ ಸದ್ಗುರು.

ಸದ್ಯಕ್ಕೆ ಜಗತ್ತಿನ ಅತ್ಯುನ್ನತ ಸಂಗತಿ ಹಾಗೂ ಬಹು ದುಬಾರಿಯಾದ ಸಂಗತಿಯೆಂದರೆ ಶಾಂತಿ. ಹಾಗೆಂದು ಎಲ್ಲಾ ಮಠಧಿಶರು, ಸ್ವಾಮಿಗಳು, ಗುರುಗಳು ಎಂದು ಕರೆಸಿಕೊಳ್ಳುವವರು ಹೇಳುತ್ತಾರೆ. ಆದರೆ ಶಾಂತಿಯಿಲ್ಲದೆ ಯಾವ ಕೆಲಸವಾದರೂ ಮಾಡಲು ಸಾಧ್ಯವೇ. ತಿನ್ನಲೂ ಮನಸ್ಸು ಶಾಂತಿಯಿಂದರಬೇಕಲ್ಲವೇ.. ಹಾಗೆ ಶಾಂತಿ ಬದುಕಿನ ಅಂತಿಮ ಗುರಿಯಲ್ಲ ಬದುಕಿನ ಮೂಲಭೂತ ಆವಶ್ಯಕತೆ ಎಂದಾಗಲೇ ಈ ಮನುಷ್ಯ ವಾಸ್ತವದಲ್ಲಿ ಬದುಕುವವರು ಎಂದು ಅರ್ಥವಾಗಿತ್ತು. ಯಾವ ಪೂಜೆ, ದೇವರು, ಜಪ, ತಪ ಯಾವುದನ್ನೂ ಒತ್ತಾಯಿಸದ ಕೇವಲ ತನ್ನನ್ನು ತಾನು ಅರಿತುಕೊಳ್ಳುವ ಅದೂ ಎಲ್ಲರಿಗೂ ಸುಲಭಕ್ಕೆ ಅರ್ಥವಾಗುವ ರೀತಿಯಲ್ಲಿ ತಿಳಿಸುವ ಸದ್ಗುರು ಸದ್ಯಕ್ಕೆ ಯುವಜನತೆಯ ಆಶಾಕಿರಣ.

ಸಾಮಾನ್ಯವಾಗಿ ನಮ್ಮ ಭಯಕ್ಕೆ ಕಾರಣಗಳು ಏನಿರುತ್ತೆ? ಒಂದೋ ಆಗಿ ಹೋದ ಘಟನೆ ಇಲ್ಲವೋ ಹೀಗಾಗುತ್ತೇನೋ ಅನ್ನುವ ಕಲ್ಪನೆ. ಇಲ್ಲದಿರುವ ಬಗ್ಗೆ ಕಲ್ಪಿಸಿಕೊಂಡೆ ಭಯ ಪಡುತ್ತೇವೆ ಎಂದು ಕೇಳಿದಾಗ ಅರೆ ಹೌದಲ್ಲಾ ಅನ್ನಿಸಿತ್ತು. ಆಮೇಲೆ ನನ್ನ ಭಯದ ಮೂಲವನ್ನು ಹುಡುಕುವ ಕೆಲಸ ಶುರುಮಾಡಿದರೆ ಅದೆಷ್ಟು ಸತ್ಯ ಅನ್ನಿಸಿಬಿಟ್ಟಿತು. ಭಯ ನಮ್ಮ ಕಲ್ಪನೆಯಲ್ಲಿ ಬದುಕುವಷ್ಟು ವಾಸ್ತವದಲ್ಲಿ ಇರುವುದಿಲ್ಲ. ಹಾಗಾಗಿ ವಾಸ್ತವ ಬದುಕು ಕಲ್ಪನೆಯಷ್ಟು ಭಯಾನಕವಲ್ಲ. ನಾಳೆ ಹೇಗೋ ಎನ್ನುವ ತಿಳಿಯದ ನಾಳಿನ ಬಗ್ಗೆಯ ಭಯದಲ್ಲಿ, ಹಿಂದಿನ ನೆನಪುಗಳಲ್ಲಿ ಇಂದನ್ನು ಬದುಕುವುದನ್ನೇ ಮರೆತು ಬಿಡುತ್ತೇವೆ. ಹಾಗೆ ಮರೆಯುತ್ತಲೇ ನಾಳಿನ ಭವಿಷ್ಯವನ್ನು ಅಡಿಪಾಯವಿಲ್ಲದೆ ಕಟ್ಟುತ್ತೇವೆ. ಇಲ್ಲದಿರುವ ಬಗ್ಗೆ ನಡೆಯದಿರುವುದರ ಬಗ್ಗೆ ಅನಾವಶ್ಯಕವಾಗಿ ಭಯ ಪಟ್ಟು ಬದುಕುವ ನಾವು ನಾರ್ಮಲ್ ಮನುಷ್ಯರಾ..  ಒಂದು ಕ್ಷಣ ಈ ಕ್ಷಣದಲ್ಲಿ ಬದುಕಿದರೆ ಭಯ ಕಡಿಮೆಯಾಗಬಹುದಾ... ನಾಳಿನ ಬದುಕು ಹೆಚ್ಚು ಅರ್ಥಪೂರ್ಣವಾಗಬಹುದಾ... ಅದನ್ನುಹಾಗೆ ಬದುಕಿಯೇ ನೋಡಬೇಕು.

ಹಣ್ಣಿದ್ದ ಮರಕ್ಕೆ ಕಲ್ಲು ಜಾಸ್ತಿ, ಒಳ್ಳೆಯ ಮನುಷ್ಯನಿಗೆ ಕಷ್ಟ ಜಾಸ್ತಿ ಅನ್ನುವ ಮಾತುಗಳು ಹಾಗಿದ್ದರೆ ಒಳ್ಳೆಯವರಾಗಿರೋದೆ ತಪ್ಪಾ ಅನ್ನುವ ಭಾವ ಹುಟ್ಟುಹಾಕುವುದು ಸುಳ್ಳೇನಲ್ಲ. ಈ ಒಳ್ಳೆಯತನ ಹಾಗೂ ಕೆಟ್ಟತನ ವ್ಯಾಖ್ಯಾನಿಸುವುದು ಸ್ವಲ್ಪ ಕಷ್ಟವೇ. ಕಾಲದಿಂದ ಕಾಲಕ್ಕೆ, ದೇಶದಿಂದ ದೇಶಕ್ಕೆ, ಮನುಷ್ಯರಿಂದ ಮನುಷ್ಯರಿಗೆ ಇದು ಬದಲಾಗತ್ತಾ ಹೋಗಬಹುದು. ಯಾರೂ ಸಂಪೂರ್ಣ ಒಳ್ಳೆಯವರಲ್ಲ, ಯಾರೂ ಸಂಪೂರ್ಣ ಕೆಟ್ಟವರೂ ಅಲ್ಲ. ದಿನದ ಇಪ್ಪತ್ತನಾಲ್ಕು ಗಂಟೆ ಯಾರೂ ಒಳ್ಳೆಯವರಾಗಲು ಸಾಧ್ಯವಿಲ್ಲ ಹಾಗೆ ಕೆಟ್ಟವರಾಗಲು. ಈ ಒಳ್ಳೆಯತನ ಅನ್ನೋದು ನಿರ್ಧಾರವಾಗೋದು ಹೇಗೆ ಅಂದರೆ ಇನ್ನೊಬ್ಬರ ಕೆಟ್ಟತನದ ಹೋಲಿಕೆಯ ಮೇಲೆ. ಹಾಗಾಗಿ ಇದ್ಯಾವುದರ ಹಂಗಿಲ್ಲದೇ ಆ ಕ್ಷಣಕ್ಕೆ ಯಾವುದು ಸೂಕ್ತವೋ ಹಾಗೆ ಬದುಕುವುದು ಒಳ್ಳೆಯದಲ್ಲವೇ. 

ಯಾವುದಾದರೂ ಒಳ್ಳೆಯ ಕೆಲಸ ನಡೆದಾಗ, ಏನನ್ನಾದರೂ ಸಾಧಿಸಿದಾಗ ನಾವೆಷ್ಟು ಶ್ರಮವಹಿಸಿದೆವು ಅನ್ನುವುದನ್ನ ಹೇಳಿಕೊಂಡಷ್ಟು ಮುಗಿಯದು. ಮತ್ತೆ ಮತ್ತೆ ನಮ್ಮ ಪಾತ್ರದ ಬಗ್ಗೆ ಮಾತಾಡಿ ಹೆಮ್ಮೆ ಪಡುತ್ತಿರುತ್ತೇವೆ. ಅದೇ ಸೋಲಾಯಿತು, ವಿಫಲವಾಯಿತು ಎಂದಾಗ ಅದಕ್ಕೆ ಬೇರೆಯವರನ್ನ, ಬೇರೆಯದನ್ನ ಕಾರಣವಾಗಿಸಿ ಹೊಣೆಗಾರಿಕೆಯಿಂದ ಕಳಚಿಕೊಳ್ಳಲು ಯತ್ನಿಸುತ್ತೇವೆ. ಜಯಶೀಲರಾದರೆ ನಾವು ಹೊಣೆ, ವಿಫಲರಾದರೆ ಪರಿಸ್ಥಿತಿ ಹೊಣೆ. ಬಯಸಿದಂತೆ ನಡೆದರೆ ಅದು ನನ್ನ ಜವಾಬ್ದಾರಿ, ನಡೆಯದಿದ್ದರೆ ಮತ್ತೇನೋ ಕಾರಣ. ಯಾವಾಗ ನಮ್ಮ ಸಾಮರ್ಥ್ಯ ಹಾಗೂ ಅಸಾಮರ್ಥ್ಯಕ್ಕೆ ನಾವೇ ಹೊಣೆ ಎನ್ನುವ ಜವಾಬ್ದಾರಿ ಅರ್ಥ ಮಾಡಿಕೊಳ್ಳುತ್ತೇವೋ ಆಗ ಏನು ಮಾಡಬೇಕು, ಏನು ಮಾಡಬಾರದು ನಮ್ಮ ಸಾಮರ್ಥ್ಯ ಎಲ್ಲವೂ ತಿಳಿಯುತ್ತದೆ. ಬದುಕು ಗೆಲುವಿನ ಹಾದಿಯಲ್ಲಿ ಹೆಜ್ಜೆ ಇಡುತ್ತದೆ. ಜವಾಬ್ದಾರಿಯ ಬಗ್ಗೆ ಇಷ್ಟು ಚೆಂದವಾಗಿ ಬೇರೆ ಯಾರೂ ಹೇಳಿದ್ದು ಕೇಳಿರಲಿಲ್ಲ.

ಇಲ್ಲೇ ಹುಟ್ಟಿ ಬೆಳೆದ ಯೋಗವನ್ನು ಕೊನೆಯಸಾಲಿಗೆ ದೂಡುವುದು ಮಾತ್ರವಲ್ಲ ಅದರ ಮಹತ್ತನ್ನೇ ಕುಗ್ಗಿಸಿ ಅದನ್ನೊಂದು ದೈಹಿಕ ಕಸರತ್ತು ಎನ್ನುವ ಮಟ್ಟಕ್ಕೆ ತಂದಿದ್ದು ನಾವೇ ಅನ್ನೋದು ನಾಚಿಕೆಯ ಸಂಗತಿಯಾದರೂ ಅದೇ ಯೋಗವನ್ನು ಇವತ್ತು ಅದರ ಜಾಗಕ್ಕೆ ತರಲು ಪ್ರಯತ್ನಿಸುತ್ತಿರುವವ ಸಾಲಿನಲ್ಲಿ ಈಶಾ ಅಗ್ರಸ್ಥಾನದಲ್ಲಿದೆ. ನಾವು ಉಸಿರಾಡಿ ಬಿಡುವ ಗಾಳಿ ಪ್ರಕೃತಿಯಲ್ಲಿ ಇರುವ ಗಾಳಿಯೊಂದಿಗೆ ಸೇರಿಹೋಗುತ್ತದೆ. ಅದನ್ನೇ ಮತ್ತೆ ಎಳೆದುಕೊಂಡಾಗ ಒಳಗೇ ಬರುತ್ತದೆ. ಅಲ್ಲಿಗೆ ಹೊರಗಿರುವ ಒಳಗಿರುವ ಗಾಳಿ ಒಂದೇ, ಹೊರಗಿರುವ ಒಳಗಿರುವ ನೀರು ಒಂದೇ, ಈ ದೇಹ ಆಗಿರುವುದೇ ಪಂಚಭೂತಗಳಿಂದ, ಮತ್ತದು ಹೋಗಿ ಸೇರುವುದು ಅಲ್ಲಿಗೇ. ಹಾಗಾಗಿ ಇಲ್ಲಿ ಎಲ್ಲವೂ ಒಂದೇಆಗಿದೆ, ಪ್ರತಿಯೊಂದು ಸಂಯೋಗಗೊಂಡಿದೆ. ಈ ಸಂಯೋಗದ ಅರಿವು ಮೂಡಿಸುವುದೇ ಯೋಗ. ಯೋಗವೆಂದರೆ ದೈಹಿಕ ಕಸರತ್ತು ಅಲ್ಲ, ವ್ಯಾಯಾಮವೂ ಅಲ್ಲ ಅದೊಂದು ಜೀವನ ಪದ್ಧತಿ, ಒಂದಾಗುವ ರೀತಿ ಎನ್ನುವುದನ್ನ ತೋರಿಸಿಕೊಡುತ್ತಿದೆ. ಇನ್ನರ್ ಇಂಜಿನಿಯರಿಂಗ್ ಇವತ್ತು ಬಹಳಷ್ಟು ಜನರಿಗೆ ವರದಾನವಾಗಿದೆ. ಯೋಗದ ಬಗ್ಗೆ ದೃಷ್ಟಿಕೋನ ಬದಲಾಗುವುದು ಮಾತ್ರವಲ್ಲ ಬದುಕಿನ ಭಾಗವಾಗುವಂತೆ ಮಾಡುತ್ತದೆ. ಪ್ರತಿಯೊಂದು ಅನುಭವವೂ ಒಳಗಿನಿಂದಲೇ ಆಗುತ್ತದೆ. ಪ್ರತಿಕ್ರಿಯೆಯೂ ಒಳಗಿನಿಂದಲೇ ಬರುತ್ತದೆ. ಹಾಗಾಗಿ ಯಾವಾಗ ಒಳಗನ್ನು ಚೆಂದವಾಗಿ ನಮ್ಮ ನಿಯಂತ್ರಣದಲ್ಲಿ ಇಟ್ಟುಕೊಳ್ಳುತ್ತೆವೋ ಆಗ ಹೊರಗಿನ ಯಾವುದೇ ಸನ್ನಿವೇಶಗಳು, ಘಟನೆಗಳು ಪ್ರಭಾವ ಬೀರುವುದಿಲ್ಲ ಎನ್ನುವುದನ್ನ ಇದು ಅರ್ಥ ಮಾಡಿಸುತ್ತದೆ. ಬದುಕಿನಲ್ಲಿ ಬದಲಾವಣೆ ತರುತ್ತದೆ.

ಈ ದೇಶದ ಅಂತಶಕ್ತಿ ಇಲ್ಲಿನ ಶಿಕ್ಷಣ ಪದ್ಧತಿ. ಜಗತ್ತಿನಲ್ಲಿ  ನಾಗರಿಕತೆ ಇನ್ನೂ ಕಣ್ಣು ಬಿಡುವ ವೇಳೆಗೆ ಭಾರತ ಜಗದ್ಗುರುವಿನ ಸ್ಥಾನದಲ್ಲಿತ್ತು. ಭಾರತವನ್ನು ಅದರ ಅಂತಶಕ್ತಿಯನ್ನು ನಾಶ ಮಾಡುವ ಏಕೈಕ ಸುಲಭ ಉಪಾಯವೆಂದರೆ ಅದರ ಶಿಕ್ಷಣ ಪದ್ದತಿಯ ನಾಶ ಎಂದು ತಿಳಿದ ಬ್ರಿಟಿಷರು ಅದನ್ನು ಬದಲಾಯಿಸುವಲ್ಲಿ ಯಶಸ್ವಿಯಾದರು. ಅದರ ಪರಿಣಾಮವೇ ಇವತ್ತಿಗೂ ತನ್ನತನದ ಬಗ್ಗೆ ಗೌರವವಿಲ್ಲದ, ಕಿಂಚಿತ್ತೂ ಸ್ವಾಭಿಮಾನ ಇಲ್ಲದ ಒಂದು ಜನರೇಶನ್. ಸ್ವಾತಂತ್ರ್ಯಕ್ಕಾಗಿ ಜೀವವನ್ನೇ ತ್ಯಾಗ ಮಾಡಿದವರನ್ನು ಭಯೋತ್ಪಾದಕ ಎಂದು ಕರೆಯುವ ಮನಸ್ಥಿತಿ ಬರಬೇಕಾದರೆ ನಮ್ಮ ನೈತಿಕತೆ ಹಾಗೂ ಆತ್ಮಾಭಿಮಾನ ಯಾವ ಮಟ್ಟಕ್ಕೆ ಕುಸಿದಿದೆ ಎನ್ನುವುದು ಅರ್ಥವಾಗುತ್ತದೆ. ತಮಿಳುನಾಡಿನಲ್ಲಿ ಸಾವಿರಾರು ಶಾಲೆಗಳನ್ನು ದತ್ತು ತೆಗೆದುಕೊಂಡು ಅಲ್ಲಿ ನಿಜವಾದ ಇತಿಹಾಸವನ್ನು, ಈ ಮಣ್ಣಿನ ಸತ್ವವನ್ನು ಪರಿಚಯಿಸುವ ಕೆಲಸ ಮಾಡುತ್ತಿದೆ ಈಶಾ. ತನ್ನದೇ ಆದ ಶಾಲೆಯೊಂದನ್ನು ತೆರೆದು ಗುರುಕುಲಪದ್ದತಿಯ ಶಿಕ್ಷಣವನ್ನು ಕೊಡುತ್ತಿದ್ದಾರೆ. ಹಳೆ ಬೇರು ಹೊಸ ಚಿಗುರು ಅಲ್ಲಿ ನಳನಳಿಸುತ್ತಿದೆ.

ಆಗೆಲ್ಲಾ ಶಾಲೆ ಮುಗಿದ ನಂತರ ಎಲ್ಲರೂ ಸೇರಿ ಆಡುವ ಸಂಪ್ರದಾಯವಿತ್ತು. ಸಂಜೆಯ ವೇಳೆಗೆ ದೊಡ್ಡವರು ಬಯಲಿನಲ್ಲಿ ಸೇರಿ ಆಟವನ್ನು ಆಡುತ್ತಿದ್ದರು. ದೇಹಾರೋಗ್ಯಕ್ಕೆ ಮುಖ್ಯವಾದ ಅಂಶವೆಂದರೆ ಆಟ. ದೇಹ ಆರೋಗ್ಯವಾಗಿದ್ದಾಗ ಮನಸ್ಸಿನ ಆರೋಗ್ಯವೂ ಉತ್ತಮವಾಗಿರುತ್ತದೆ. ಆಡುತ್ತಾ ಆಡುತ್ತಾ ಒಂದಾಗುವ, ಹೊಂದಿಕೊಂಡು ಹೋಗುವ ಗುಣ ಕಲಿಯುತ್ತಿದ್ದರು. ಏನೇ ಭಿನ್ನಾಭಿಪ್ರಾಯಗಳು ತಲೆದೋರಿದರೂ ಒಟ್ಟಿಗೆ ಸೇರಿದಾಗ, ಮುಖಾಮುಖಿಯಾದಾಗ ಅದನ್ನು ಬಗೆಹರಿಸಿಕೊಂಡು ಇಲ್ಲಾ ಮರೆತು ಮುಂದೆ ಸಾಗುತ್ತಿದ್ದರು. ಆಡಬೇಕಾದರೆ ಪಕ್ಕದವರನ್ನು ಭಿನ್ನಾಭಿಪ್ರಾಯ ಮರೆತು  ಜೊತೆಗೆ ಸೇರಿಸಿಕೊಳ್ಳಲೇ ಬೇಕು. ದಿನ ಬೆಳಗಾದರೆ ಒಬ್ಬರ ಮುಖ ಒಬ್ಬರು ನೋಡಲೇಬೇಕಾದ ಸಮಯದಲ್ಲಿ ಯಾರೂ ಯಾವುದನ್ನೂ ಬೆಳಸಿಕೊಂಡು ಹೋಗುತ್ತಿರಲಿಲ್ಲ. ಪ್ರತಿ ಆಟವೂ ಸಾಂಘಿಕ ಶಕ್ತಿಯನ್ನು ಬೇಡುತಿತ್ತು. ಆಟಗಳು ಮರೆಯಾದಂತೆ ಸಂಬಂಧಗಳ ಬಿಗಿತನವೂ ಮಾಯವಾಗುತ್ತಿದೆ. ಗ್ರಾಮೀಣ ಆಟಗಳು ಕೇವಲ ಮಾನಸಿಕವಾಗಿ ಒಗ್ಗೂಡಿಸುತ್ತಿರಲಿಲ್ಲ, ದೈಹಿಕ ಕ್ಷಮತೆಯನ್ನೂ ಹೆಚ್ಚಿಸುತಿತ್ತು. ಉತ್ತಮ ಆರೋಗ್ಯವನ್ನೂ ದಯಪಾಲಿಸುತಿತ್ತು. ಅಂತ ಸಂಪ್ರದಾಯ ಮರೆಯಾಗಿ ಮಾಯವಾಗುವ ಹೊತ್ತಿನಲ್ಲಿ ಈಶಾ ಮತ್ತೆ ಅದನ್ನೊಂದು ಉತ್ಸವದ ಮೂಲಕ ಸ್ಪರ್ಧೆಯನ್ನು ನಡೆಸುವುದರ ಮೂಲಕ ಜೀವಂತಗೊಳಿಸುತ್ತಿದೆ. ಈ ಗ್ರಾಮೀಣ ಕ್ರೀಡಾಕೂಟ ದಲ್ಲಿ ಲಕ್ಷಾಂತರ ಜನರು ಭಾಗವಹಿಸುತ್ತಾರೆ. ಆಟ ನಮ್ಮಲ್ಲಿ ಮೊದಲು ಮೂಡಿಸುವುದು ಬಾಲ್ಯದ ನೆನಪುಗಳನ್ನು. ಬಾಲ್ಯದ ನೆನಪುಗಳು ಕೇವಲ ನೆನಪುಗಳನ್ನು ಆರ್ದವಾಗಿಸುವುದಿಲ್ಲ, ಮನಸ್ಸಿಗೆ ಆಹ್ಲಾದತೆಯನ್ನುನ್ನು ತುಂಬುತ್ತದೆ. ಬದುಕಿನ ಕನಸು ಗುರಿ ಅದೇ ತಾನೇ ಸಂತೋಷ.. ಒಂದು ಕೆಲಸಕ್ಕೆ ಒಂದಾಗುವ ಗುಣ ಎಷ್ಟು ಸಹಜವಾಗಿ ಆಟ ಕಲಿಸುತಿತ್ತು. ಇದನ್ನೇ ಸದ್ಗುರು ಪ್ರತಿಪಾದಿಸುತ್ತಾರೆ. ಸಾವಿರ ಗಂಟೆಗಳ ಅಧ್ಯಾತ್ಮಿಕ ಭೋಧನೆಗಿಂತ, ಮತ ಪ್ರಚಾರ ಮಾಡುವುದಕ್ಕಿಂತ ದಿನ ಒಂದು ಗಂಟೆ ಆಟವಾಡಿ ಅದು ಎಲ್ಲರನ್ನೂ ಒಂದುಗೂಡಿಸುತ್ತದೆ.

ನಿನ್ನೆಯೆಂಬುದು ಕಳೆದು ಹೋಗಿದೆ. ಮತ್ತದನ್ನು ತರಲಾಗುವುದಿಲ್ಲ. ನಾಳೆ ಎನ್ನುವುದು ಕನಸು. ಈ ಕ್ಷಣ ಮಾತ್ರ ಸತ್ಯ. ಹಾಗಾಗಿ ವರ್ತಮಾನದಲ್ಲಿ ಸಂಪೂರ್ಣವಾಗಿ ಬದುಕಿಬಿಡಬೇಕು. ಕಳೆದು ಹೋದ ಕ್ಷಣವನ್ನು ಏನೇ ಮಾಡಿದರೂ ತರಲಾಗುವುದಿಲ್ಲ. ಮುಂದಿನ ಸಾವೂ ಬದಲಾಯಿಸಲಾಗುವುದಿಲ್ಲ. ವರ್ತಮಾನದಲ್ಲಿ ನಾವು ಎಷ್ಟು ಪ್ರಜ್ಞಾಪೂರ್ವಕವಾಗಿ ಬದುಕುತ್ತೇವೆ ಅನ್ನುವುದರ ಮೇಲೆ ನಮ್ಮ ಭವಿಷ್ಯ ನಿರ್ಧಾರವಾಗುತ್ತದೆ. ನಿನ್ನೆಯ ಯೋಚನೆಯಲ್ಲಿ, ನಾಳೆಯ ಭಯದಲ್ಲಿ ನಾವು ಇವತ್ತನ್ನು ಬದುಕುವುದೇ ಇಲ್ಲ. ಯಾರನ್ನಾದರೂ ಕೇಳಿದರೆ ಅವರಿಗೆ ಖುಷಿ ಕೊಡುವುದು ಬಾಲ್ಯ. ಮತ್ತೆ ಮತ್ತೆ ನೆನಪಿಸಿಕೊಳ್ಳುವುದೂ ಕೂಡ ಬಾಲ್ಯವನ್ನೇ. ಯಾಕೆ ಹಾಗೆ? ಯಾಕೆಂದರೆ ಬಾಲ್ಯದಲ್ಲಿ ನಮಗೆ ವರ್ತಮಾನಕಾಲವೊಂದೇ ಗೊತ್ತಿರುತ್ತದೆ. ಕೇವಲ ವರ್ತಮಾನ ಕಾಲದಲ್ಲಿ ಮಾತ್ರ ಬದುಕಿರುತ್ತೇವೆ. ಪೂರ್ಣವಾಗಿ ತೊಡಗಿಸಿಕೊಂಡಿರುತ್ತೇವೆ. ಹಾಗಾಗಿಯೇ ಅದು ಅಪ್ಯಾಯಮಾನ. ಈ ಕ್ಷಣವನ್ನೂ ನಾವು ಅಷ್ಟೇ ಪ್ರಜ್ಞಾಪೂರ್ವಕವಾಗಿ ಕಳೆದರೆ ನಾಳಿನ ಬದುಕು ಅಷ್ಟೇ ಸುಂದರವಾಗಿರುತ್ತದೆ. ಹಾಗೆ ಬದುಕಲು ಕಲಿಸಲು ಯೋಗ ನೆರವಾಗುತ್ತದೆ.

ಭೂಮಿಯ ಬಹುಭಾಗ ಹೇಗೆ ನೀರು ಆವರಿಸಿಕೊಂಡಿದೆಯೋ ಹಾಗೆ  ದೇಹದ ಬಹುಭಾಗವನ್ನು ನೀರು ಆವರಿಸಿಕೊಂಡಿದೆ. ನದಿಗಳು ನಾಗರಿಕತೆಯ ತೊಟ್ಟಿಲು ಎಂದು ಕರೆದಿದ್ದಾರೆ. ಹಾಗಿರುವ, ನೀರಿಲ್ಲದೆ ಬದುಕಲಾರದ ಮನುಷ್ಯ ನೀರಿನ ಹರಿವನ್ನು ನದಿಯನ್ನು ಹೇಗೆ ಕಾಪಾಡಿಕೊಳ್ಳುತ್ತಿದ್ದಾರೆ ಎಂದು ಗಮನಿಸಿದರೆ ಬೆಚ್ಚಿ ಬೀಳುವ ಹಾಗಾಗುತ್ತದೆ. ಇಂದು ನದಿಗಳು ಕಲುಷಿತಗೊಳ್ಳುತ್ತಿವೆ. ಬಹಳಷ್ಟು ನದಿಗಳು ಒಣಗುತ್ತಿವೆ. ಈಗಾಗಲೇ ಶೇಕಡಾ 60 ರಷ್ಟು ನದಿಗಳು ಸೊರಗಿವೆ. ಮುಂದೊಂದು ದಿನ ನೀರಿಗಾಗಿಯೇ ಯುದ್ಧ ನಡೆಯಬಹುದು. ಅಕ್ಕಪಕ್ಕದ ರಾಜ್ಯಗಳಲ್ಲೇ ಈಗ ನೀರಿಗಾಗಿ ವ್ಯಾಜ್ಯ ಮಾಡುವುದನ್ನು ನೋಡಿದ್ದೇವೆ. ಬಳಸುವ ನಾವು ಉಳಿಸುವ ಯೋಚನೆಯನ್ನೇ ಮಾಡುವುದಿಲ್ಲ.  ಪ್ರಕೃತಿಯನ್ನು ಬಳಸಿಕೊಳ್ಳು ವುದಷ್ಟೇ ಮಾಡುವ ಮನುಷ್ಯ ಅದನ್ನು ಮುಂದಿನ ಪೀಳಿಗೆಗೆ ಸುಸ್ಥಿತಿಯಲ್ಲಿಡುವ ಜವಾಭ್ದಾರಿ ಅವನದು ಎನ್ನುವುದು ಮರೆತೇ ಬಿಟ್ಟಿದ್ದಾನೆ. ಹಾಗಾಗಿ ನದಿಗಳನ್ನು ಉಳಿಸುವ ಅವುಗಳನ್ನು ಕಾಪಾಡಿಕೊಳ್ಳಲು ಸದ್ಗುರು ನಡೆಸಿದ ಪ್ರಯತ್ನ ಹಾಗೂ ಜಾಗೃತಿ ಕಾರ್ಯವೇ Rally for Rivers. ಮೊದಲ ಹಂತವಾಗಿ ಕನ್ಯಾಕುಮಾರಿಯಿಂದ ಹಿಡಿದು ದೇಶದ ರಾಜಧಾನಿವರೆಗೆ ಸಂಚರಿಸಿ ಪ್ರಧಾನಿಗೆ ಮನವಿ ಸಲ್ಲಿಸಿದ್ದಾರೆ. ಹೇಗೆ ಕಾಪಾಡಿಕೊಳ್ಳಬಹುದು ಎನ್ನುವ ಸಲಹೆಯನ್ನೂ ನೀಡಿದ್ದಾರೆ. ಇಂತಹದೊಂದು ಕಾರ್ಯಕ್ಕೆ ಪ್ರಧಾನಿಯೂ ಸ್ಪಂದಿಸಿದ್ದಾರೆ. ಯಾವುದನ್ನೇ ಆಗಲಿ ಸರಿಯಾಗಿ ಬಳಕೆ ಮಾಡುವುದು ಹಾಗೂ ಮುಂದಿನ ಪೀಳಿಗೆಗೆ ಸುಸ್ಥಿತಿಯಲ್ಲಿ ಉಳಿಸಿಹೋಗುವುದು ನಮ್ಮ ಜವಾಬ್ಧಾರಿ ಎನ್ನುವುದು ತಮ್ಮ ಭಾಷಣಗಳಲ್ಲಿ, ಯಾತ್ರೆಯಲ್ಲಿ ತಿಳಿಸುತ್ತಾ ಹೋಗಿದ್ದಾರೆ. ಉಳಿಸುವ ಜವಾಬ್ಧಾರಿ ಕೇವಲ ಸರ್ಕಾರದ್ದ್ದು ಮಾತ್ರವಲ್ಲ ನಾಗರೀಕರದ್ದು ಕೂಡ.

ಯುವಜನತೆಯ ಪ್ರಶ್ನೆಗಳಿಗೆ ಅವರಿಗೆ ಸಮಾಧಾನ ಕೊಡುವ ರೀತಿಯಲ್ಲಿ ಉತ್ತರಿಸಲು ಗೊತ್ತಿಲ್ಲದೇ ಇರುವುದೇ ಅನೇಕ ಸಮಸ್ಯೆಗಳಿಗೆ ಮೂಲ ಕಾರಣವಾಗುತ್ತದೆ. ಆಧುನಿಕತೆಯ ಹುಡುಗರಿಗೆ ಶಾಸ್ತ್ರಬದ್ಧವಾದ ಉತ್ತರಗಳು ರುಚಿಸುವುದಿಲ್ಲ. ಹಾಗೆಯೇ ಅವರಿಗೆ ಸಮಾಧಾನಕರ ಉತ್ತರ ದೊರಕದೆ ಇದ್ದಾಗ, ಸೂಕ್ತ ಮಾರ್ಗದರ್ಶನ ಸಿಕ್ಕದೆ ಇದ್ದಾಗ ದಾರಿ ತಪ್ಪುವ ಎಲ್ಲಾ ಸಾಧ್ಯತೆಗಳೂ ಹೆಚ್ಚಳವಾಗಿರುತ್ತದೆ. ಅದನ್ನು ಕಣ್ಣಾರೆ ನೋಡುತ್ತಲೂ ಇದ್ದೇವೆ. ಈ ನಿಟ್ಟಿನಲ್ಲಿ ಯುವಜನತೆಯ ಜೊತೆಗೆ ಸಂಪರ್ಕ ಸಾಧಿಸಲು ಸದ್ಗುರು ಯೂಥ್ ಅಂಡ್ ಟ್ರುಥ್ ಅನ್ನುವ ಹೊಸ ಕಲ್ಪನೆಯೊಂದನ್ನು ಜಾರಿಗೆ ತಂದರು. ಲಕ್ಷ ಲಕ್ಷ ಯುವಜನರು ತಮ್ಮ ಗೊಂದಲಗಳನ್ನು, ಪ್ರಶ್ನೆಗಳನ್ನು ನೇರವಾಗಿ ಕೇಳುವ ಮೂಲಕ ತಮ್ಮ ಗೊಂದಲ ಪರಿಹರಿಸಿಕೊಂಡಿದ್ದಾರೆ. ಗೊಂದಲವಿಲ್ಲದಿದ್ದಾಗ ದಾರಿ ಸುಗಮವಾಗುತ್ತದೆ. ರೇಗದೆ, ಉಪದೇಶ ಮಾಡದೆ, ಸಂಪ್ರದಾಯದ ಹೆಸರು ಹೇಳದೆ ಅವರನ್ನು ಅರ್ಥಮಾಡಿಕೊಂಡು ಮತ್ತು ಅವರಿಗೆ ಅರ್ಥವಾಗುವ ಹಾಗೆ ಹೇಳುವ ಕಲೆ ಅವರಿಗಿದೆ. ಕೇಳುವವರಿಗೂ ನೆಮ್ಮದಿ ಕೊಡುವ ಉತ್ತರ  ಸಿಗುತ್ತಿದೆ.

ದೇಹವನ್ನು ಚೆನ್ನಾಗಿರಿಸಿಕೊಳ್ಳಬೇಕು ಎಂದು ಪ್ರತಿಯೊಬ್ಬರೂ ಆಲೋಚಿಸುತ್ತಾರೆ. ಅದರ ಬಗ್ಗೆ ಗಂಟೆಗಟ್ಟಲೆ ಮಾತಾಡುತ್ತಾರೆ. ಆದರೆ ಎಷ್ಟು ಜನ ಅದನ್ನು ತಪ್ಪದೆ ಪಾಲಿಸುತ್ತಾರೆ? ನಾಳೆ ಎನ್ನುವುದು ಎಲ್ಲರಿಗೂ ತುಂಬಾ ಅಪ್ಯಾಯಮಾನವಾದ ಮಾತು. ಆ ನಾಳೆ ಎನ್ನುವುದು ನಿಶ್ಚಿತವೇ? ನಾಳೆ ಎಂಬುದು ವಾಸ್ತವವಾಗಿ ಎಂದೂ ಬರದ ದಿನ. ನಾವು ನಾಳೆ ಎಂದಾಗ ಆರೋಗ್ಯವೂ ನಾಳೆ ಎಂದು ಟಾಟ ಮಾಡಿ ಮುಂದೆ ಹೋಗುತ್ತದೆ. ಹಾಗಾದರೆ ಆರೋಗ್ಯಕ್ಕೆ ಏನು ಮಾಡಬೇಕು? ಎಂದು ಸದ್ಗುರು ಎಷ್ಟು ಚೆಂದವಾಗಿ ಹೇಳುತ್ತಾರೆ ನೋಡಿ.

ದಿನವೊಂದಕ್ಕೆ 25 ಅಥವಾ 30 ನಿಮಿಷಗಳು ನಿಮಗಾಗಿ ಮೀಸಲಿಡಲು ಸಿದ್ಧವಾಗಬೇಕು. ಶೇ 70ರಷ್ಟು ರೋಗಗಳು ಮನುಷ್ಯನೇ ಸೃಷ್ಟಿಸಿಕೊಂಡಿರುವಂತವು. ಎಲ್ಲವನ್ನೂ ಮಾಡುವ ಮನುಷ್ಯ ತನಗಾಗಿ ಒಂದು ಅರ್ಧ ಗಂಟೆ ವಿನಿಯೋಗಿಸಲು ಹಿಂಜರಿಯುವುದು ಯಾಕೆ? ನಮ್ಮ ಇಚ್ಚಾ ಶಕ್ತಿ ಎಷ್ಟು ದುರ್ಬಲ ಅನ್ನೋದು ಅರಿವಾದರೂ ಅದನ್ನು ಸರಿಪಡಿಸಿಕೊಳ್ಳುವ ಆಸಕ್ತಿ ಯಾಕೆ ಬರುವುದೇ ಇಲ್ಲ. ದೇಹವನ್ನು ಒಂದು ಅಭ್ಯಾಸಕ್ಕೆ ಒಳಪಡಿಸಿದರೆ ಕ್ರಮೇಣ ದೇಹ ಅದಕ್ಕೆ ಒಗ್ಗುತ್ತದೆ. ಮತ್ತು ಅದನ್ನು ಬೇಡುತ್ತದೆ. ಎಲ್ಲವಕ್ಕೂ ದೇಹ ಮೂಲಾಧಾರ. ಈ ಬದುಕು ಇದ್ದರೇ ಮಾತ್ರ ಸಂಸಾರ, ಕೆರಿಯರ್ ಇನ್ನೊಂದು ಮತ್ತೊಂದು ಸಾಧ್ಯ. ಹಾಗಾಗಿ ಪ್ರತಿಯೊಬ್ಬರೂ ದಿನದಲ್ಲಿ ಕೆಲವು ಕ್ಷಣವಾದರೂ ತಮ್ಮ ಬಗ್ಗೆ ಸಮಯ ಕೊಡಬೇಕು. ಸಮಯ ಕಳೆಯಬೇಕು. ಇಷ್ಟು ಮಾಡಿದರೆ ಎಷ್ಟೋ ಸಮಸ್ಯೆಗಳು ಪರಿಹಾರವಾಗುತ್ತದೆ. ಯಾವತ್ತೂ ನಮ್ಮದೇ ಬದುಕನ್ನು ನಾವು ಗ್ರಾಂಟೆಡ್ ಆಗಿ ತೆಗೆದುಕೊಳ್ಳಬಾರದು.

ದೇಹದ ಆರೋಗ್ಯ ಎಷ್ಟು ಮುಖ್ಯವೋ ಮನಸ್ಸಿನ ಆರೋಗ್ಯ ಕೂಡಾ ಅಷ್ಟೇ ಮುಖ್ಯ. ಎರಡೂ ಒಂದಕ್ಕೊಂದು ಪೂರಕವಾದರೂ ಸದ್ಯದ ಪರಿಸ್ಥಿತಿಯಲ್ಲಿ ಮಾನಸಿಕ ಒತ್ತಡ ಎನ್ನುವುದು ಜಗತ್ತಿನ ಅತಿ ದೊಡ್ಡ ಸಮಸ್ಯೆ ಆಗಿದೆ. ಮಾನಸಿಕ ಒತ್ತಡವನ್ನು ಬಗೆಹರಿಸಿಕೊಳ್ಳುವ ದಾರಿ ತಿಳಿಯದೆ ಜನ ಮಾದಕವಸ್ತುಗಳ ಮೊರೆ ಹೋಗುತ್ತಿದ್ದಾರೆ. ನಾವು ಚಿಕ್ಕವರಿದ್ದಾಗ ಕುಡಿತ ಅನ್ನೋದು ಎಲ್ಲೋ ಕೆಲವು ಜನರು ಮಾತ್ರ ಮಾಡುತ್ತಿದ್ದರು. ಅವರಿಗೆ ಊರಿನಲ್ಲಿ ಗೌರವ ಕೂಡ ಕೊಡುತ್ತಿರಲಿಲ್ಲ. ಅದೇ ಈಗ ಒಮ್ಮೆ ನೋಡಿದರೆ ಅದರ ಪರ್ಸಂಟೇಜ್ ದುಪ್ಪಟ್ಟು ಮೂರು ಪಟ್ಟು ಜಾಸ್ತಿ ಆಗಿದೆ. ಅದಕ್ಕೊಂದು ಸೋಶಿಯಲ್ ಡ್ರಿಂಕರ್ ಅನ್ನುವ ಸುಂದರ ಹೆಸರೂ ಕೂಡಾ ಕೊಡಲಾಗಿದೆ. ಧೂಮಪಾನ ಮಾಡದಿರುವವರು ಈ ಕಾಲಕ್ಕೆ ಸಲ್ಲದವರು ಅನ್ನುವ ಮನೋಭಾವ ನಿಧಾನಕ್ಕೆ ಬೆಳೆಯುತ್ತಿದೆ. ಇದರ ಜೊತೆಗೆ ಡ್ರಗ್ಸ್ ಎನ್ನುವ ಮಹಾಮಾರಿ ತನ್ನ ಕಬಂಧ ಬಾಹುಗಳನ್ನು ಚಾಚಿ ಜನರನ್ನು ಅದರಲ್ಲೂ ಯುವ ಜನಾಂಗವನ್ನು ತೆಕ್ಕೆಗೆ ಸೆಳೆದುಕೊಳ್ಳುತ್ತಿದೆ. ಕ್ರಿಸ್ಮಸ್ ಸಮಯದಲ್ಲಿ ಲಂಡನ್ ನಲ್ಲಿ ಜನ ಕೇವಲ ಕುಡಿದು ಮತ್ತೇರಿ ಗಲಾಟೆ ಮಾಡುತ್ತಾರೆಯೇ ಹೊರತು ಅವರಿಗೆ ಹಬ್ಬದ ಸಂಭ್ರಮ ಅನ್ನುವ ಭಾವವೇ ಇರುವುದಿಲ್ಲ ಹೀಗೆ ಮಾಡುವುದರಲ್ಲಿ ಯುವಜನರೇ ಜಾಸ್ತಿ ಅನ್ನುವ ವರದಿಯೊಂದು ಸದ್ದು ಮಾಡಿತ್ತು. ಹೀಗೆ ಮುಂದುವರಿದರೆ ಆತ್ಮಹತ್ಯೆ ಮಾಡಿಕೊಳ್ಳುವ ಯುವಕರ ಸಂಖ್ಯೆ ಹೆಚ್ಚಳವಾಗುವುದರಲ್ಲಿ ಸಂದೇಹವೇ ಇಲ್ಲ ಎನ್ನುವ ಸದ್ಗುರುವಿನ ಮಾತು ಎಚ್ಚರಿಕೆಯ ಗಂಟೆಯೇ ಹೌದು.

ದೇಹದ ಒಳಗೆ ನಡೆಯುವ ಪ್ರತಿಯೊಂದು ಕ್ರಿಯೆಯೂ ಕೂಡ ರಾಸಾಯನಿಕ ಕ್ರಿಯೆಗಳಂತೆ. ಹಾಗಾಗಿ ರೋಗವನ್ನೋ, ಉನ್ಮಾದವನ್ನೋ ನಿಯಂತ್ರಿಸಲು ಅದನ್ನು ತಡೆಯುವಂತ ರಾಸಾಯನಿಕ ಮಿಶ್ರಣದಿಂದ ಕೂಡಿದ ಔಷಧಿಗಳನ್ನು ಬಳಸುತ್ತಾರೆ. ಮಾನಸಿಕ ದುಃಖವನ್ನು ನಿಯಂತ್ರಿಸಿಕೊಳ್ಳಲು ತಿಳಿಯದವರು ಮಾದಕ ವಸ್ತುಗಳ ಮೊರೆ ಹೋಗುತ್ತಾರೆ.  ಒಳಗಿನ ಕ್ರಿಯೆಯನ್ನು ಹತೋಟಿಯಲ್ಲಿಟ್ಟು ಕೊಳ್ಳಲು ಕಲಿತರೆ ರೋಗವನ್ನು ಹತೋಟಿಯಲ್ಲಿಟ್ಟು ಕೊಂಡ ಹಾಗೆ. ಹಾಗಾಗಿ ನಮ್ಮ ಒಳಗನ್ನು ಗಮನಿಸಲು ಕಲಿಯಬೇಕು. ಹಾಗೆ ಪ್ರತಿ ಭಾವದ ಸಮಯದಲ್ಲೂ ದೇಹವನ್ನು ಒಳಗನ್ನು ಗಮನಿಸುತ್ತಾ ಹೋದರೆ ಅಲ್ಲಾಗುವ ಬದಲಾವಣೆ ಅರಿವಿಗೆ ಬರುತ್ತಾ ಹೋಗುತ್ತದೆ. ಕೋಪ ಬಂದಾಗ ದೇಹ ಬಿಸಿಯಾಗುವುದು, ಉಸಿರು ತೀವ್ರವಾಗುವುದು ಗಮನಕ್ಕೆ ಬರುತ್ತದೆ. ಹಾಗಾಗಿಯೇ ಕೋಪ ಬಂದಾಗ ಉಸಿರಾಟ ದೀರ್ಘವಾಗಿ ಮಾಡಿ ಎಂದು ಡಾಕ್ಟರ್ ಸಲಹೆ ಕೊಡುತ್ತಾರೆ. ಒಮ್ಮೆ ನಮ್ಮನ್ನು ನಾವು ಗಮನಿಸಿಕೊಳ್ಳಲು ಕಲಿತಾಗ ಬದಲಾವಣೆ ಹಾಗೂ ಅದನ್ನು ನಿಯಂತ್ರಿಸುವ ಕಲೆ ಕರಗತವಾಗುತ್ತದೆ. ಒಮ್ಮೆ ನಮ್ಮನ್ನು ನಾವು ನಿಯಂತ್ರಿಸಿಕೊಳ್ಳಲು ಕಲಿತ ಮೇಲೆ ಇನ್ನೇನಿದೆ?

ಪ್ರತಿ ಅನುಭವವೂ ಒಳಗಿನಿಂದಲೇ ಅನುಭವವಾಗುವುದು. ಪ್ರತಿ ಪ್ರತಿಕ್ರಿಯೆಯೂ ಒಳಗೇ ಹುಟ್ಟುವುದು. ಪ್ರತಿ ಪಂಚೇಂದ್ರಿಯಗಳ ಅನುಭವವೂ ಒಳಗೇ ಅರಿವಿಗೆ ಬರುವುದು. ಪ್ರೀತಿಯೋ, ದ್ವೇಷವೋ, ಕೋಪವೋ, ವಿಷಾದವೋ ಪ್ರತಿಯೊಂದು ಹುಟ್ಟುವುದು ಒಳಗೇ.  ಹಾಗಾಗಿಯೇ ಪ್ರತಿಯೊಂದು ಜರುಗುವುದು ಒಳಗೇ. ಇಂಥ ನಮ್ಮೊಳಗನ್ನು ಸರಿ ಪಡಿಸಿಕೊಳ್ಳದೆ ಹೊರಜಗತ್ತನ್ನು ಸರಿಪಡಿಸಲು ಹೋಗುವುದು ನಾವು ಮಾಡುವ ಮೊದಲ ತಪ್ಪು. ಯಾವುದೇ ಭಾವವಾಗಲಿ ಅದರ ಹುಟ್ಟು ಒಳಗೇ ಎಂದಾದ ಮೇಲೆ ಅದರ ನಿಯಂತ್ರಣ ನಮ್ಮ ಕೈಯಲ್ಲೇ ಇದೆಯಲ್ಲವೇ. ಈ ಒಳಗನ್ನು ಸರಿ ಪಡಿಸಿಕೊಳ್ಳುವ ಕ್ರಿಯೆಯೇ ಇನ್ನರ್ ಇಂಜೀನಿಯರಿಂಗ್. ಒಮ್ಮೆ ಒಳಗನ್ನು ಸಿದ್ಧವಾಗಿಸಿ ಕೊಂಡರೆ ಒಪ್ಪವಾಗಿಸಿ ಕೊಂಡರೆ ಹೊರಗಿನ ಯಾವ ಬದಲಾವಣೆಯೂ ನಮ್ಮ ಮೇಲೆ ಪ್ರಭಾವ ಬೀರುವುದಿಲ್ಲ, ತಲ್ಲಣಗೊಳಿಸುವುದಿಲ್ಲ. ನಮ್ಮ ಮನಸ್ಸನ್ನೇ ನಮಗೆ ಸರಿಪಡಿಸಿಕೊಳ್ಳಲು ಬರುವುದಿಲ್ಲವಾದರೆ  ಹೊರಜಗತ್ತನ್ನು ಸರಿಪಡಿಸಲು ಸಾಧ್ಯವಿಲ್ಲ.  ಒಳಗನ್ನು ನಮಗೆ ಬೇಕಾದ ಹಾಗೆ ಒಪ್ಪವಾಗಿಸಿಕೊಳ್ಳುವ ಶಕ್ತಿ ನಮಗಿದೆ. ಆ ಶಕ್ತಿಯನ್ನು ಇನ್ನಷ್ಟು ಬಲಪಡಿಸಲು ಯೋಗ ಸಹಕಾರಿಯಾಗಿದೆ. ಸಮಸ್ಯೆಯ ಉಗಮ ಬೇರೆ ಯಾರೋ ಅಲ್ಲ. ಅದಕ್ಕೆ ಪರಿಹಾರ ಕಂಡುಕೊಳ್ಳದ ನಮ್ಮ ಮನಸ್ಸೇ ಮೂಲ ಕಾರಣ. ಹಾಗಾಗಿಯೇ ಈಶಾ ದ ಇನ್ನರ್ ಇಂಜಿನಿಯರಿಂಗ್ ಇಂದು ವಿಶ್ವಾದ್ಯಂತ ಪ್ರಸಿದ್ಧಿಯಾಗಿದ್ದು ಮಾತ್ರವಲ್ಲ ಹಲವರ ಬದುಕಿಗೆ ದಾರಿ ದೀಪವಾಗಿದೆ.

ಮರವಾಗಲಿ, ಕೀಟವಾಗಲಿ ಅಥವಾ ಪ್ರಕೃತಿಯ ಇನ್ಯಾವುದೇ ಜೀವಿಯಾಗಲಿ ತನ್ನ ಅಭಿಪ್ರಾಯವನ್ನು ಇನ್ನೊಬ್ಬರ ಮೇಲೆ ಹೊರಲು ಹೋಗುವುದಿಲ್ಲ. ಅದನ್ನು ಮಾಡುವುದು ಮನುಷ್ಯ ಮಾತ್ರ. ಅದಕ್ಕೆ ಸಮ್ಮತಿ ನೀಡದವರ ಮೇಲೆ ಅವನ ಹೋರಾಟ ಶುರುವಾಗುತ್ತದೆ. ಅದು ಕೋಪವೋ, ದ್ವೇಷವೋ ವ್ಯಂಗ್ಯವೋ ಮತ್ಯಾವುದೋ ರೂಪದಲ್ಲಿ ವ್ಯಕ್ತವಾಗುತ್ತಾ ಹೋಗುತ್ತದೆ. ಮತ್ತು ಅವನ ಪ್ರತಿ ವರ್ತನೆಯಲ್ಲೂ ತಕ್ಕಡಿ ಹಿಡಿದು ತೂಗಲು ಶುರುಮಾಡುತ್ತಾನೆ. ನಾನಿಷ್ಟು ಮಾಡಿದೆ ಅವನು ಅಷ್ಟು ಮಾಡಲಿಲ್ಲ, ನಾನು ಎಷ್ಟೆಲ್ಲಾ ಒಳ್ಳೆಯದು ಮಾಡಿದೆ ಅವನು ಮಾತ್ರ ಅನ್ಯಾಯ ಮಾಡಿದ. ಪ್ರೀತಿಯನ್ನು ಲೆಕ್ಕಾಚಾರದ ತಕ್ಕಡಿಯಲ್ಲಿ ತೂಗಿ ನೋಡುತ್ತಾನೆ. ನಮ್ಮ ನಿರೀಕ್ಷೆಗೆ ಹೊಂದಿಕೆಯಾಗುವ ಹಾಗೆ ನಡೆದು ಕೊಳ್ಳದವರು ಕೆಟ್ಟವರ ಹಾಗೆ ಕಾಣಿಸುತ್ತಾರೆ. ಪ್ರತಿಯೊಬ್ಬರಿಗೂ ಅವರದೇ ಅದ ಗುಣ ಸ್ವಭಾವಗಳಿವೆ. ಪ್ರಕೃತಿಯಲ್ಲಿ ಪ್ರತಿಯೊಬ್ಬರೂ ಭಿನ್ನವೇ. ನಾವಂದು ಕೊಂಡ ಹಾಗೆ ಅವರು ಯೋಚಿಸಬೇಕು, ನಮಗಿಷ್ಟ ಬಂದ ಹಾಗೆ ಅವರು ನಡೆದುಕೊಳ್ಳಬೇಕು, ನಮಗೆ ನೋವಾಗದ ಹಾಗೆ ಅವರ ವರ್ತನೆಯಿರಬೇಕು ಎನ್ನುವ ಮನೋಭಾವ ಅವರನ್ನು ಡಾಮಿನೇಟ್ ಮಾಡಿದ ಹಾಗೆ ಅಲ್ಲವೇ. ಪ್ರೀತಿಯೆಂದರೆ ಅವರಿದ್ದ ಹಾಗೇ ಅವರನ್ನು ಒಪ್ಪಿಕೊಳ್ಳುವುದು, ಇದ್ದದ್ದನ್ನ ಇದ್ದ ಹಾಗೆ ಒಪ್ಪಿಕೊಳ್ಳುವುದು, ನಿಮ್ಮ ಮನಸ್ಸನ್ನು ಗಾಯಗೊಳಿಸಿದವರು ವಾಸ್ತವದಲ್ಲಿ ನಿಮ್ಮ ಬುದ್ಧಿವಂತಿಕೆಯನ್ನು ತೀಕ್ಷ್ಣಗೊಳಿಸಲು ಪ್ರಯತ್ನಿಸಿದವರು  ಎನ್ನುವ ಸದ್ಗುರುವಿನ ಮಾತು ಅರ್ಥವಾದರೆ ಬದುಕಿನ ಭಾಗವಾದರೆ  ಬೆನ್ನ ಮೇಲಿನ ಅದೆಷ್ಟು ಹೊರೆ ಕಡಿಮೆಯಾಗುತ್ತದೋ..

ನಾವು ನೆನೆದಂತೆ ಪ್ರಪಂಚ ನಡೆಯಬೇಕು, ಬೇರೆಯವರು ನಾನು ಯೋಚಿಸಿದಂತೆ ನಡೆಯಬೇಕು ಎಂದು ನಿರೀಕ್ಷಿಸುವ ನಮ್ಮ ಅಹಂಕಾರ ಹೋಗದಿದ್ದರೆ ಇಡುವ ಪ್ರತಿ ಹೆಜ್ಜೆಯೂ ನೋವು ಕೊಡುತ್ತದೆ. ಒಂದೊಂದು ತಿರುವಿನಲ್ಲೂ ಅಭದ್ರತೆ ಕಾಡುತ್ತದೆ.ನಂಬಿಕೆ ಕಡಿಮೆಯಾಗುತ್ತಾ ಮನಸ್ಸು ಸೊರಗುತ್ತದೆ. ಹೀಗೆ ಮನಸ್ಸು ಸೊರಗಿದಾಗಲೆಲ್ಲ ಬೇರೆಯವರ ಬಗ್ಗೆ ಕೋಪಗೊಳ್ಳುವುದನ್ನು ನಿಲ್ಲಿಸಿ ಅವುಗಳನ್ನು ಜೀವನದ ಪಾಠಗಳೆಂದು ಸ್ವೀಕರಿಸಿದರೆ ಮನಸ್ಸು ಹದಗೊಳ್ಳುತ್ತದೆ. ವಂಚನೆ ಜರುಗುವುದು ನಮ್ಮ ನಿರೀಕ್ಷೆಯ ಮೇಲೆಯೇ. ಹಾಗಾಗಿ ಯಾವುದನ್ನೂ ಎದುರಿಸಲು ಹೋಗದೆ ಇದ್ದ ಹಾಗೆ ಸ್ವೀಕರಿಸುವುದು ಕಲಿತಾಗ ಮನಸ್ಸು ಮತ್ತಷ್ಟು ಮಾಗುತ್ತದೆ.

ಓದಿದ ಮೇಲೆ ಒಂದು ಕೆಲಸ ಹಿಡಿಯುವುದು ಆಮೇಲೆ ಮದುವೆ ಆಗುವುದು ಬದುಕಿನ ಅನಿವಾರ್ಯ ಕರ್ಮಗಳು ಎಂದು ಒಪ್ಪಿಕೊಂಡು ಬಿಟ್ಟಿದ್ದೇವೆ. ಈಗ ಮದುವೆ ಆಗುವುದು ಆಮೇಲೆ ಹೊಂದಿಕೆಯಾಗಿಲ್ಲವೆಂದು ಬಿಡುವುದು ಎರಡೂ ತೀರಾ ಸಹಜ ಅನ್ನಿಸುವ ಮನೋಭಾವಕ್ಕೆ ಹೊಂದಿಕೊಂಡು ಬಿಟ್ಟಿದ್ದೇವೆ. ಈ ದೇಶದಲ್ಲಿ ವಿಚ್ಚೇದನ ಅನ್ನೋದು ಬಳಕೆಯಲ್ಲೇ ಇರಲಿಲ್ಲ. ಮದುವೆ ಆಗಲೇಬೇಕು ಎನ್ನುವ ಅನಿವಾರ್ಯತೆಯೂ. ಮದುವೆ ಎಂದರೆ ಎರಡು ಜೀವಗಳ ನಡುವಿನ ಹೊಂದಾಣಿಕೆ. ಅದರಲ್ಲೂ ಮಗು ಎಂದಾಗ ಅದನ್ನೊಂದು ಪ್ರಾಜೆಕ್ಟ್ ಎಂದು ಭಾವಿಸಬೇಕು.   ಕೊನೆಯಪಕ್ಷ ಇಪ್ಪತ್ತು ವರ್ಷಗಳ ಕಾಲ ಪ್ರಾಜೆಕ್ಟ್ ನಿರ್ವಹಿಸುವ ತಾಳ್ಮೆ, ಸಾಮರ್ಥ್ಯ ಇದ್ದಾಗ ಮಾತ್ರ ಅದನ್ನು ಅನುಷ್ಠಾನಕ್ಕೆ ತರುವ ಯೋಚನೆ ಮಾಡಬೇಕು ಹಾಗೂ ಅದಕ್ಕೆ ಬದ್ಧರಾಗಿರಬೇಕು. ಇಲ್ಲವಾದಲ್ಲಿ ಅದನ್ನು ಕೈಗೊಳ್ಳದಿರುವ ಎಲ್ಲಾ ಅವಕಾಶಗಳು, ಸ್ವಾತಂತ್ರ್ಯವೂ ಇದೆ. ಅಲ್ಲಿ ಹಾನಿಯಾಗುವುದು ಮೂರು ಜೀವಗಳಿಗೆ. ಅರಿಯದ ಮಗುವಿನ ಭವಿಷ್ಯವನ್ನು ಅಭದ್ರಗೊಳಿಸುವ ಯಾವ ಹಕ್ಕೂ ಇರುವುದಿಲ್ಲ. ಯಾಕೆಂದರೆ ಅದು ಕೇವಲ ಮಗುವಲ್ಲ, ಮುಂದಿನ ಪೀಳಿಗೆ. ಸಮಾಜದ ಭಾಗ. ಎನ್ನುವ ಮಾತು ಎಷ್ಟು ಪ್ರಸ್ತುತ.

ಒಂದೊಂದು ಭಂಗಿಗೂ ಒಂದೊಂದು ಭಾವವಿದೆ.  ನಮಗೆ ದುಃಖವಾದಾಗ, ಸಂತೋಷವಾದಾಗ, ಕೋಪಬಂದಾಗ ದೇಹದ ಭಂಗಿಯನ್ನು ಗಮನಿಸಬೇಕು. ಬೇಸರವಾದಾಗ ಉಗುರು ಕಚ್ಚುವ ಅಭ್ಯಾಸವಿದ್ದರೆ ಸುಮ್ಮನೆ ಉಗುರು ಕಚ್ಚಿದರೂ ಮನಸ್ಸಿಗೇನೋ ವಿಷಾದಭಾವ ತಂತಾನೇ ಆವರಿಸುತ್ತದೆ. ಮನಸ್ಸು ದೇಹವನ್ನು ಪ್ರಶಾಂತವಾಗಿ ಆಹ್ಲಾದಕರವಾಗಿ ಇಟ್ಟುಕೊಳ್ಳಲು ಕಲಿತಾಗ ಎಲ್ಲವೂ ಸುಂದರವೆನಿಸ ತೊಡಗುತ್ತದೆ. ಹಾಗೆ ಮಾಡಲು ಕೆಲವು ಪದ್ದತಿಗಳಿವೆ. ಹೊರಗಿನ ಜಗತ್ತು ನಾವಂದುಕೊಂಡ ಹಾಗೆ ನಡೆಯಲು ಸಾಧ್ಯವಿಲ್ಲ. ಆದರೆ ಒಳಗಿನ ಪ್ರಪಂಚ ಶೇಕಡಾ ನೂರು ನಾವಂದುಕೊಂಡ ಹಾಗೆ ನಡೆಯುತ್ತದೆ. ಅದನ್ನು ಹ್ಯಾಂಡಲ್ ಮಾಡುವುದು ಕಲಿಯಬೇಕು ಅಷ್ಟೇ. ಪ್ರತಿ ಮನುಷ್ಯನ ಬಯಕೆ ಕನಸು ಎಲ್ಲವೂ ಸಂತೋಷವೇ. ವಾತಾವರಣ ಬೇರೆಯ ಹಲವು ಕಾರಣಗಳ ಮೇಲೆ ಅವಲಂಬಿಸಿರುತ್ತದೆ. ಆದರೆ ಒಳಗು ಕೇವಲ ನಮ್ಮನ್ನು ಮಾತ್ರ ಅವಲಂಬಿಸಿರುತ್ತದೆ. ಕೊನೆಯ ಪಕ್ಷ ನಮ್ಮ ಮಾತನ್ನು ನಮ್ಮ ಮನಸ್ಸು ಕೇಳಬೇಕಲ್ಲವೇ ?

ಪ್ರತಿಯೊಬ್ಬ ಮನುಷ್ಯನೂ ವಿಶೇಷ ವ್ಯಕ್ತಿಯೇ. ಚಿಕ್ಕವರಿದ್ದಾಗ ಗಮನಿಸಿ ಬದುಕು ಅದೆಷ್ಟು ಸಂತೋಷದಲ್ಲಿ ಇರುತ್ತದೆ. ಬೆಳೆಯುತ್ತಾ ಬಂದ ಹಾಗೆ ಆ ಸಂತೋಷವೂ ಬೆಳೆಯಬೇಕಲ್ಲವೇ. ಅದೇಕೆ ಕಡಿಮೆಯಾಗುತ್ತದೆ?  ಇಡೀ ಸೃಷ್ಟಿಯಲ್ಲಿ ಪ್ರಜ್ಞಾಪೂರ್ವಕ ವಾಗಿ ಮಾಡುವ ಶಕ್ತಿಯಿರುವುದು ಕೇವಲ ಮನುಷ್ಯನಿಗೆ ಮಾತ್ರ. ಮಾಡುವ ಪ್ರತಿ ಕೆಲಸವನ್ನು ಉದಾಹರಣೆಗೆ ಉಸಿರಾಟವನ್ನೂ ಪ್ರಜ್ಞಾಪೂರ್ವಕವಾಗಿ ಮಾಡಲು ಕಲಿತಾಗ ಬದುಕಿನ ಗತಿಯೇ ಬದಲಾಗುತ್ತದೆ. ಮ್ಯಾಜಿಕ್ ಸಂಭವಿಸುತ್ತದೆ. ಪ್ರಕೃತಿ ಕೊಟ್ಟ ಈ ವರವನ್ನು ನಾವು ನಿರ್ಲಕ್ಷ್ಯ ಮಾಡಿದ್ದೇವೆ.

ಪ್ರತಿ ಪೀಳಿಗೆಯೂ ತಮ್ಮ ಹಿಂದಿನವರಿಗಿಂತ ಒಂದು ಹೆಜ್ಜೆ ಮುಂದೆ ಹೋಗಲು ಬಯಸುತ್ತದೆ. ಅದು ಸಹಜ. ಇವತ್ತಿನ ಟೆಕ್ನಾಲಜಿ ಜತ್ತನ್ನೇ ಅಂಗೈಯಲ್ಲಿ ತಂದಿಟ್ಟಿದೆ. ಮಾಹಿತಿಗಳ ಹೊಳೆಯೇ ಹರಿಯುತ್ತಿದೆ. ಎಲ್ಲವನ್ನೂ ತಿಳಿದ ಮೇಲೆ ಕುತೂಹಲವಾಗಲಿ, ಆಸಕ್ತಿಯಾಗಲಿ ಎಲ್ಲಿಂದ. ನಾವು ಚಿಕ್ಕವರಿದ್ದಾಗ ಒಂದು ಆಟಿಕೆಯನ್ನು ಅದೆಷ್ಟು ಕಷ್ಟದಲ್ಲಿ ಪಡೆಯುತ್ತಿದ್ದೆವು. ಹಾಗೆ ಪಡೆದಿದ್ದನ್ನು ಅದೆಷ್ಟು ಜೋಪಾನವಾಗಿ ಇಟ್ಟುಕೊಳ್ಳುತ್ತಿದ್ದೆವು. ಈಗ ಎಲ್ಲವೂ ಕ್ಷಣಮಾತ್ರದಲ್ಲಿ ಲಭ್ಯವಿದೆ. ಸಿಕ್ಕಷ್ಟೇ ವೇಗವಾಗಿ ಅದರ ಬಗ್ಗೆ ಆಸಕ್ತಿಯೂ ಕಮರುತ್ತಿದೆ. ಯಾವುದು ಕುತೂಹಲ ಹುಟ್ಟಿಸುತ್ತಲೇ ಇಲ್ಲ. ಜಗತ್ತನ್ನೇ ಕೈಯಲ್ಲಿರುವ ಮೊಬೈಲ್ ನಲ್ಲಿ ನೋಡುವ ಅವಕಾಶವಿದೆ. ಎಲ್ಲವನ್ನೂ ನೋಡಿಕೊಂಡು ಬೆಳೆದು ಬಿಡುವ ಯುವಜನಾಂಗ ಇಪ್ಪತ್ತೈದರ ಹೊಸ್ತಿಲಿಗೆ ಬರುವಾಗ ಇನ್ನೇನು ಎಂದು ಅರಸುವ ಹಾಗಾಗುತ್ತದೆ. ಬೇಸರ ಎನ್ನುವುದು ತಾನೇ ತಾನಾಗಿ ಆವರಿಸುತ್ತಿದೆ. ಇವತ್ತು ಜಗತ್ತಿನಲ್ಲಿ ಆತ್ಮಹತ್ಯೆ ಮಾಡಿಕೊಳ್ಳುವವರ ಸಂಖ್ಯೆ ಹಿಂದೆ ಯುದ್ದ ಪ್ರಕೃತಿ ವಿಕೋಪಗಳಲ್ಲಿ ಸತ್ತವರ ಸಂಖ್ಯೆಗಿಂತಲೂ ಹೆಚ್ಚಿದೆ. ಮಾಹಿತಿಗಳಲ್ಲೇ ಕಳೆದುಹೋಗುವ ನಾವು ಅದನ್ನು ಪ್ರಾಯೋಗಿಕವಾಗಿ ಅನುಭವಿಸಲು, ಪರೀಕ್ಷೆ ಮಾಡಲು ಹೋಗುವುದೇ ಇಲ್ಲ. ಅದ್ಯಾವುದೋ ದೂರದ ಗೆಲಾಕ್ಷಿಯ ಹೆಸರು ಕ್ಷಣಮಾತ್ರದಲ್ಲಿ ಉಸುರುವ ನಾವು ನೆರೆಮನೆಯಲ್ಲಿ ಯಾರಿದ್ದಾರೆ ಎಂದು ಹೇಳಲು ತಡಬಡಾಯಿಸುತ್ತೇವೆ. ಯಾವ ಮಾಹಿತಿ ಎಷ್ಟು ಯಾವಾಗ ಬೇಕು ಎನ್ನುವುದು ತಿಳಿದೇ ಇಲ್ಲ. ಅರಸುವ ಕಷ್ಟವೂ ಇಲ್ಲ. ಎಲ್ಲವೂ ಬೆರಳ ತುದಿಯಲ್ಲೇ ಲಭ್ಯ.

ಮನುಷ್ಯನಿಗೆ ತಾನು ಶಾಶ್ವತ ಅನ್ನುವ ಭ್ರಮೆ. ಕಳೆದು ಹೋದ ಕಾಲ ಮತ್ತೆ ಸಿಗುವುದಿಲ್ಲ, ಈ ಜೀವವೂ ಶಾಶ್ವತವಲ್ಲ ಎಂದು ಅರಿವಿಗೆ ಬಂದರೆ ಜಗಳಕ್ಕೆ, ದ್ವೇಷಕ್ಕೆ, ಅಸಮಾಧಾನಕ್ಕೆ ಸಮಯವೆಲ್ಲಿಂದ. ಇರುವಷ್ಟು ಸಮಯ ಸಂತೋಷವಾಗಿ ಅರ್ಥಪೂರ್ಣವಾಗಿ ಬದುಕಲು ಶುರು ಮಾಡುತ್ತೇವೆ. ಏನೇ ಮಾಡಿದರೂ ಅದನ್ನು ಪ್ರಜ್ಞಾಪೂರ್ವಕವಾಗಿ ಮಾಡುತ್ತೇವೆ. ನಾವು ಬಂದಿದ್ದು ಎಲ್ಲಿಂದ ಹೇಗೆ? ಹೋಗುವುದು ಎಲ್ಲಿಗೆ ಹೇಗೆ? ಎನ್ನುವುದು ಪ್ರಜ್ಞೆಗೆ ಇಳಿದ ಕ್ಷಣ ಎಲ್ಲಾ ನಾಟಕಗಳು ಮುಕ್ತಾಯವಾಗುತ್ತದೆ.ನಾವು ಸಂತೋಷವಾಗಿದ್ದಾಗ ಸಮಯ ವೇಗವಾಗಿ ಸರಿದುಹೊಗುವಂತೆ ಕಾಣುತ್ತದೆ.  ಜೀವನ ಸಣ್ಣದು.


ಈಗಿನ ಸಾಧುಗಳಂತೆ ಕಾವಿ ತೊಡದೆ, ದೇವರು ಧರ್ಮ, ಪೂಜೆ ಎನ್ನದೆ ಕೇವಲ ನಿನ್ನನ್ನು ನೀನು ಅರಿತುಕೊ ಎನ್ನುವ ಸದ್ಗುರು ಎತ್ತರದ ಸ್ಥಾನದಲ್ಲಿ ನಿಲ್ಲುತ್ತಾರೆ. ಯಾವುದೇಗಡಿಯನ್ನು ಹಾಕಿಕೊಳ್ಳದೇ ಬದುಕಿನ ಎಲ್ಲೆಯನ್ನು ವಿಸ್ತರಿಸಿಕೊಳ್ಳುವ ಪ್ರತಿ ಅವಕಾಶವನ್ನೂ ಉಪಯೋಗಿಸಿಕೊಳ್ಳುತ್ತಾರೆ. ಹಾಗೆ ಬದುಕಲು ಸ್ಪೂರ್ತಿಯಾಗುತ್ತಾರೆ. ಯೋಗದ ವೈಜ್ಞಾನಿಕ ಪರಿಣಾಮಗಳನ್ನು ಹೇಳುತ್ತಲೇ ಅದನ್ನು ಬದುಕಿನ ಭಾಗವಾಗಿಸಿ ಕೊಳ್ಳಲು ಸಹಾಯಮಾಡುತ್ತಾರೆ. ಗೆಳೆಯನಂತೆ ನಮ್ಮ ತಲ್ಲಣಗಳನ್ನು, ಸಂದೇಹಗಳನ್ನು ಕೇಳಿಸಿಕೊಳ್ಳುತ್ತಾ ಸೂಕ್ತವಾದ ಪರಿಹಾರ ನೀಡುತ್ತಾರೆ. ಹಾಗೆ ನೀಡುವಾಗಲೂ ಅಲ್ಲಿ ಬಲವಂತವಿಲ್ಲ. ಸ್ವೀಕರಿಸುವ, ಬಿಡುವ ಸ್ವಾತಂತ್ರ್ಯ ನಮಗೆ ಬಿಡುತ್ತಾರೆ. ನಿನ್ನ ಬದುಕಿನ ಶಿಲ್ಪಿ ನೀನೆ ಎನ್ನುತ್ತಲೆ ಜವಾಬ್ಧಾರಿ ಅರಿವು ಎರಡೂ ಮೂಡಿಸುತ್ತಾರೆ. ಬದುಕಿನಲ್ಲಿ ಸಾಹಸ ಬೇಕು ಎನ್ನುತ್ತಾ ಎಲ್ಲಾ ರೀತಿಯ ಪ್ರಯೋಗಗಳನ್ನು ಸ್ವತಃ ತಾವೂ ಮಾಡುತ್ತಾ ಉಳಿದವರಿಗೂ ಪ್ರೇರಕ ಶಕ್ತಿಯಾಗುತ್ತಾರೆ. ಪೂರ್ಣ ಮನಸ್ಸಿನಿಂದ ಪ್ರಜ್ಞಾಪೂರ್ವಕವಾಗಿ  ಮಾಡಿದರೆ ಯಾವುದೂ ಅಸಾಧ್ಯವಲ್ಲ ಅನ್ನುವ ಆತ್ಮಶಕ್ತಿ ಅರಳುವ ಹಾಗೆ ಮಾಡುತ್ತಾರೆ. ಏಕಕಾಲದಲ್ಲಿ ಗುರು, ಆತ್ಮಬಂಧು, ಗೆಳೆಯ, ಹಿರಿಯ ಎಲ್ಲವೂ ಆಗಬಲ್ಲ ಸಾಮರ್ಥ್ಯ ಪ್ರೀತಿ ಇರುವ ವ್ಯಕ್ತಿ ಸದ್ಗುರು.

ಬರೆದಷ್ಟೂ ಕಡಿಮೆಯೆನಿಸುವ ವ್ಯಕ್ತಿತ್ವ ಇವರದು.
ಸಮುದ್ರದ ಒಂದು ಬಿಂದುವನ್ನು ಹಿಡಿದಿಡುವ ಪ್ರಯತ್ನವಷ್ಟೇ ನನ್ನದು.




.



Comments

Popular posts from this blog

ಮಾತಂಗ ಪರ್ವತ

ರಂಜದ ಹೂ

ಬರಿದೆ ಆಡುವ ಮಾತಿಗರ್ಥವಿಲ್ಲ...