KGF

ಒಂದು ವಾರದ ಬಳಿಕ ಅಂತೂ ಟಿಕೆಟ್ ಸಿಕ್ಕಿ KGF ನೋಡೋ ಹಾಗಾಯ್ತು. ಅದೂ ಒಟ್ಟಿಗೆ ಸಿಗದೇ ಇತ್ತ ಸ್ವಲ್ಪ ಜನ ಅತ್ತ ಸ್ವಲ್ಪ ಜನ ಕುಳಿತು ಅಡ್ಜಸ್ಟ್ ಮಾಡ್ಕೊಂಡು ಕುಳಿತಿದ್ದಾಯ್ತು. ಸಿನೆಮಾ ಶುರುವಾಗಿ ಒಂದು ಹತ್ತು ನಿಮಿಷಕ್ಕೆ ಕಣ್ಣು ಇನ್ನಷ್ಟು ದೊಡ್ಡಕ್ಕೆ ಬಿಟ್ಟುಕೊಂಡು ನೋಡಲು ಶುರುಮಾಡಿದಳು ಅಹಿ. ಅಬ್ಬಾ ಅಂತ ನಾನೂ ಉಸಿರುಬಿಟ್ಟು ನೆಮ್ಮದಿಯಾಗಿ ನೋಡಲು ಶುರುಮಾಡಿದೆ.
ಸಿನಿಮಾವನ್ನು ಸಿನೆಮಾವಾಗಿ ನೋಡೋ ಅಭ್ಯಾಸ ನನ್ನದು. ಹಾಗಾಗಿ ಅದರಲ್ಲಿ ತರ್ಕ ಹುಡುಕುವ ಟೆನ್ಶನ್ ಇಲ್ಲದೆ ನಿರಾಳವಾಗಿ ನೋಡಬಹುದು. ಇನ್ನು ಶಾಲೆಯಲ್ಲೇ ಪಾಠ ಕಲಿತದ್ದು ಕಡಿಮೆ ಇನ್ನು ಸಿನೆಮಾದಲ್ಲೇ ಏನು ಕಲಿಯೋದು ಹಾಗಾಗಿ ಆ ತಲೆನೋವು ಇರಲಿಲ್ಲ. ನೋಡಿ ಅಸ್ವಾದಿಸುವುದಷ್ಟೇ ಇದ್ದಿದ್ದು. ಹೇಗೂ ಕಣ್ಮನ ಸೆಳೆಯುವ ಮಾಂತ್ರಿಕ ಶಕ್ತಿಯಂತೂ ಅದಕ್ಕಿತ್ತು. ಹಾಗಾಗಿ ಕಳೆದು ಹೋಗಲು ಇನ್ನೇನು ಬೇಕು.

ಕಳೆದುಹೊಗುವವರನ್ನು ಬಡಿದೆಬ್ಬಿಸುವ ಡೈಲಾಗ್... ರೆಪ್ಪೆ ಮುಚ್ಚಿದರೆ ಯಾವುದು ಹೋಗಿ ಬಿಡುತ್ತೋ ಎಂದು ಭಾಸವಾಗುವ ದೃಶ್ಯಕಾವ್ಯ, ಅನಾಮತ್ತಾಗಿ ಹಿಂದಿನ ಕಾಲಕ್ಕೆ ತೆಗೆದುಕೊಂಡು ಹೋಗುವ ಹಾಗಿನ ಪರಿಸರ, ಮಾತಿನ ನಡುವಿನ ಮೌನ ಹಾಗೂ ಮೌನದ ಚಿಪ್ಪೊಡೆದು ಬರುವ ಮಾತು, ಆರ್ದತೆಯಲ್ಲೊಂದು ನಿರ್ದಯತೆ, ನಿರ್ದಯತೆಯಲ್ಲೊಂದು ಆರ್ದತೆ, ಒಂದು ಡೈಲಾಗ್ ಮಿಸ್ ಆದರೂ ಏನೋ ಆಗಿಬಿಡುತ್ತೇನೋ ಅನ್ನೋ ಕಾತುರ, ಅಂತೂ ಇಡೀ ಸಿನೆಮಾ ನೋಡುಗರನ್ನು ಹಿಡಿದಿಟ್ಟು ಕೊಳ್ಳುವುದರಲ್ಲಿ ಯಶಸ್ವಿಯಾಗುತ್ತೆ.

ಅಲ್ಲು ಅರ್ಜುನ್ ಸ್ಟೈಲ್, ಜೂನಿಯರ್ ಎನ್ ಟಿ ಅರ್ ಕೊಚ್ಚುವ ಕಲೆ, ಮಹೇಶ್ ಬಾಬು ನಿರ್ಲಿಪ್ತ ಫೈಟ್, ಕೊಂಚ ಪ್ರಭಾಸ್ ಮ್ಯಾನರಿಸಂ ಎಲ್ಲಾ ಮಿಕ್ಷಿ ಮಾಡಿ ಎರಕ ಹೊಯ್ದಂತ ಪಾತ್ರವೇನೂ ಯಶ್ ದು ಅನ್ನಿಸಿ ಮತ್ತಷ್ಟು ಇಷ್ಟವಾಗಿ ಬಿಟ್ಟ. ಅಹಿ ಅಂತೂ ಅಮ್ಮಾ ಯಶ್ ಆ ರೌಡಿ ಗೆ ಹೊಡೆದು ಅವನ ಕೈಯಲ್ಲಿ ತಲೆ ಕೂದಲು ಸರಿ ಮಾಡಿಕೊಳ್ಳೋ ಸೀನ್ ಸುಪರ್ಬ್ ಅಲ್ವೇನೆ ಅಂತ ಎಕ್ಷೈಟ್ ಆಗಿ ಆಲ್ಮೋಸ್ಟ್ ಕಿರುಚಿಕೊಳ್ಳುವ ಹಾಗಾಗಿದ್ದಳು. ಒಂದು ವಾರ ಆಗಿದ್ದಕ್ಕೋ ಅಥವಾ ಬಂದವರು ನಮ್ಮ ಹಾಗೆ ಲೋಕಲ್ ಆಗಿದ್ದಕ್ಕೋ ಆಗೊಂದು ಈಗೊಂದು ಸಿಳ್ಳೆ, ಕೂಗು ಕೇಳಿ ಥಿಯೇಟರ್ ಜೀವಂತಿಕೆ ತುಂಬಿಕೊಂಡಿತ್ತು.

ನೋಡಿ ಹೊರಬರುವಾಗ ರಾಧಿಕಾ ಮಗು ಜೊತೆ ಬಂದು ನೋಡಿ ಖುಷಿ ಪಟ್ಟಿರಬಹುದು ಅಲ್ವೇನೆ ಅಮ್ಮಾ ಬಾಹುಬಲಿ ತರಹ ಇದರದ್ದೂ ಪಾರ್ಟ್ ಟೂ ಬರುತ್ತೆ ಅನ್ಸುತ್ತೆ, ನನಗಂತೂ ಯಶ್ ಇಷ್ಟವಾದ ಅವ್ರ ಮಗಳು ಸ್ವಲ್ಪ ದೊಡ್ಡವಳು ಆಗಿದ್ರೆ ಎಷ್ಟು ಪ್ರೌಡ್ ಫೀಲ್ ಮಾಡ್ಕೋತಾ ಇದ್ಲೋ  ಅಂತ ಅಹಿಯೂ, ದೊದ್ದಮ್ಮಾ ಯಾವುದೋ ಭಾಷೆ ಫಿಲಂ ನೋಡಿದ ಹಾಗನ್ನಿಸುತ್ತೆ ಅಲ್ವಾ ಅಂತ ಅವನಿಯೂ ತಾವೇ ಏನೋ ಸಾಧಿಸಿದ ಖುಷಿಯಲ್ಲಿ ಮಾತಾಡುವಾಗ, ಸಂಭ್ರಮ ಪಡುವಾಗ ಯಶ್ ಮತ್ತಷ್ಟು ಇಷ್ಟವಾಗಿಬಿಟ್ಟಿದ್ದಂತೂ ಹೌದು. ಅಂತೂ ಕನ್ನಡ ಚಿತ್ರರಂಗ ಹೆಮ್ಮೆ ಪಡುವ ಗರ್ವದಿಂದ ಬೀಗುವ ಹಾಗೆ ಈ ಫಿಲಂ ಮಾಡಿದ್ದಂತೂ ನಿಜ. ಕತೆ ಹೇಳುವ ಅನಂತ್ ಪಾತ್ರವಾಗಿ ಮುಳುಗುವ ಆ ಸರ್ವ್ ಮಾಡುವವ ಇಬ್ಬರೂ ಹೊರಗೆ ಬಂದಮೇಲೂ ಮನಸ್ಸಿನಲ್ಲಿ ಉಳಿದು ಬಿಡುತ್ತಾರೆ.

Comments

Popular posts from this blog

ಮಾತಂಗ ಪರ್ವತ

ರಂಜದ ಹೂ

ಬರಿದೆ ಆಡುವ ಮಾತಿಗರ್ಥವಿಲ್ಲ...