ಅಡಿಕೆ ಕೊಯ್ಲು. (ಹಸಿರುವಾಸಿ)

ಭಾದ್ರಪದ ಅಡಿಯಿಟ್ಟು ಬರುವಾಗ ಸೂರ್ಯನೂ ಹೊರಗೆ ಬರುವುದು ವಾಡಿಕೆ. ಆಗೊಮ್ಮೆ ಈಗೊಮ್ಮೆ ಬಂದು ಹೋಗುವ ಮಳೆರಾಯನೂ ಓಡಾಟವನ್ನು ನಿಲ್ಲಿಸಿ ಮನೆಗೆ ಮರಳುವ  ಸಮಯ. ಹಾಗಾಗಿ ಅಂಗಳ ಒಣಗಿರುತ್ತದೆ. ನೆಂದು ತೊಪ್ಪೆಯಾಗಿ ಮೈತುಂಬಾ ಪಾಚಿ ಕಟ್ಟಿಕೊಂಡ ಕಲ್ಲುಕಂಬಗಳೂ ಬಿಸಿಲಿಗೆ ಒಣಗಿ ಸುಧಾರಿಸಿಕೊಳ್ಳುವಾಗಲೇ ವಿಜಯದಶಮಿ ಬಂದಾಗಿರುತ್ತದೆ. ಅವತ್ತು ಅಡಿಕೆ ಕೊನೆ ತೆಗೆಯುವ ಮುಹೂರ್ತ ಮಾಡಿದರೆ ಮುಗಿಯಿತು. ಆಮೇಲೆ ಯಾವಾಗ ಬೇಕಾದರೂ ತೆಗೆಯಬಹುದು. ಹಾಗೆ ತೆಗೆಯುವ ಮೊದಲು ಚಪ್ಪರ ಹಾಕಬೇಕು.

ನವರಾತ್ರಿಯಿಂದ ಶಿವರಾತ್ರಿಯವರೆಗೆ ಮಲೆನಾಡು ವಿಪರೀತ ಬ್ಯ್ಸುಸಿ. ಅಡಿಕೆ ಕೊಯ್ಲು ಅಂದರೆ ಮೈ ತುರಿಸಿಕೊಳ್ಳಲು ಪುರುಸೊತ್ತು ಇಲ್ಲದಷ್ಟು ಕೆಲಸ. ಚುಮುಚುಮು ಚಳಿಯಲ್ಲಿ ಮಾಡಿದಷ್ಟೂ ಮುಗಿಯದ ಕೆಲಸ ರೇಜಿಗೆ ಹುಟ್ಟಿಸಿದರೂ ಗಡಿಯಾರ ವೇಗವಾಗಿ ಚಲಿಸಿದಂತೆ ಭಾಸವಾಗುತ್ತದೆ. ಅಂಗಳವನ್ನು ಹೆರೆದು, ಚಪ್ಪರದ ಹಾಕಿ ಸಗಣಿ ಹೊಡೆದರೆ ಅಲ್ಲಿಗೆ ಕೊಯ್ಲಿಗೆ ಶುಭಾರಂಭ. ಕೊಟ್ಟಿಗೆಯ ಅಟ್ಟದ ಮೇಲೆ ಬಟ್ಟೆಯಲ್ಲಿ ಸುತ್ತಿಟ್ಟ ಅಡಿಕೆ ಕತ್ತಿಯನ್ನು ಕೆಳಗೆ ತಂದು ಅದನ್ನು ಬಿಳಚುಕಲ್ಲಿನ ಜೊತೆಗೆ ಮಸೆದು ಹರಿತ ಮಾಡಿ ಜೋಡಿಸಿಟ್ಟ ಮಣೆಗೆ ಹೊಡಿದು ಅಲುಗಾಡದಂತೆ ಹೊಡೆದು ಜೋಡಿಸಿ ಇಟ್ಟರೆ ಯುದ್ಧಕ್ಕೆ ಶಸ್ತ್ರಾಸ್ತಗಳು ತಯಾರಾದಂತೆ. ಇನ್ನು ಸೈನಿಕರು ಬರುವುದು ಒಂದು ಬಾಕಿ ಅಷ್ಟೇ.

ಮೊದಲು ಕೊನೆ ತೆಗೆಯುವವನ ಪುರುಸೊತ್ತು ನೋಡಿಕೊಳ್ಳಬೇಕು. ಹಾಳೂರಿಗೆ ಉಳಿದವನೆ ಗೌಡ ಅನ್ನೋ ಹಾಗೆ ಇಡೀ ಊರಿಗೆ ಒಬ್ಬರೋ ಇಬ್ಬರೋ ಕೊನೆ ತೆಗೆಯುವವರು ಇದ್ದರೆ ಹೆಚ್ಚು. ಸಪೂರ ಹಾಗೂ ಉದ್ದಕ್ಕೆ ಇರುವ ಅಡಿಕೆ ಮರವನ್ನು ಹತ್ತಲು ಕೊನೆತೆಗೆಯಲು ಗುಂಡಿಗೆ ಗಟ್ಟಿ ಇರಬೇಕು. ಹಾಗಾಗಿ ಈ ಕೆಲಸ ಮನೆತನದಿಂದ ಬರುವುದು ಜಾಸ್ತಿಯೇ ಹೊರತು ಯಾರೋ ಕಲಿತು ಮಾಡುವುದು ಕಡಿಮೆ. ಹಾಗಾಗಿ ಕೊಯ್ಲಿನ ಸಮಯ ಶುರುವಾದರೆ ಎಲ್ಲರಿಗೂ ಗಡಿಬಿಡಿಯೇ. ತಮ್ಮ ಮನೆಯದು ಮೊದಲು ತೆಗೆಯಲಿ ಎಂಬ ಆತುರವೇ. ಪಾಪ ಅವನೂ ಯಾರಿಗೂ ಇಲ್ಲವೆನ್ನಲಾಗದೆ ಎಲ್ಲರ ಮನೆಯದೂ ಸ್ವಲ್ಪ ಸ್ವಲ್ಪ ತೆಗೆದು ಹಾಕುತಿದ್ದ. ಇನ್ನು ಯಾವಾಗ ಬರ್ತಾನೋ ಎಂದು ಕಣ್ಣಿಗೆ ಎಣ್ಣೆ ಬಿಟ್ಟುಕೊಂಡು ಕಾಯುವ ಹಾಗೆ ಮಾಡುತಿದ್ದ. ಪಾಪ ಅವನಾದರೂ ಏನು ಮಾಡಿಯಾನೋ ಬೆಳಬೆಳಗ್ಗೆ ಏಳುವ ಮೊದಲೇ ಬಂದು ಕಾಯುವ ಜನರಿರುವಾಗ.

ಕೊನೆ ತೆಗೆಯಲು ಬರುವು ದಿನ ಗಡಿಬಿಡಿಯೇ. ಅವರಿಗೆ ತಿಂಡಿ, ಕಾಫಿ ಎಲ್ಲವೂ ಆಗಬೇಕು. ಕೊನೆ ಹೊರುವ ಹೆಡಿಗೆ ಎತ್ತಿ ಇಡಬೇಕು. ಕೊನೆ ತೆಗೆಯುವ ನೇಣು ಎಲ್ಲಿದೆ ನೋಡಿ ತಂದಿರಸಬೇಕು. ಸೊಂಟಕ್ಕೆ ಕಟ್ಟಿದ ಹಗ್ಗಕ್ಕೆ ಒಂದು ಕತ್ತಿಯನ್ನು ಸಿಗಿಸಿಕೊಂಡು, ಹೆಗಲ ಮೇಲೆ ಉದ್ದದ ದೋಟಿಯನ್ನು ಹೊತ್ತುಕೊಂಡು ಮೆಲ್ಲಗೆ ಬರುತಿದ್ದ ಅವನು ಸಾಕ್ಷಾತ್ ದೇವರ ಹಾಗೆಯೇ ಕಾಣಿಸುತಿದ್ದ. ಹಾಗಾಗಿ ಬರುತಿದ್ದ ಹಾಗೆ ಬಿಸಿ ಬಿಸಿ ಕಾಫಿ, ಎಲೆ ಅಡಿಕೆ ಕೊಟ್ಟರೆ ಅವನೂ ಸಂಪ್ರೀತನಾಗಿ ತೋಟದ ಕಡೆ ಹೊರಡುತಿದ್ದ. ಅಲ್ಲಿಯವರೆಗೆ ಎಲ್ಲವೂ ಚೆಂದವಾಗಿ ಕಾಣಿಸುತಿದ್ದ ಪರಿಸರ ಆಮೇಲೆ ಮಾತ್ರ ಇಷ್ಟವಾಗುತ್ತಿರಲಿಲ್ಲ. ದೊಡ್ಡವರು ಕೊನೆ ಹಿಡಿಯಲು, ಹೊರಲು ಹೊರಟರೆ ಚಿಕ್ಕ ಮಕ್ಕಳಿಗೆ ಬಿದ್ದ ಉದುರು ಆರಿಸುವ ಕೆಲಸ. ಅತಿ ರೇಜಿಗೆಯ ಕೆಲಸ ಅಂದ್ರೆ ಅದೇ.

ಸೊಂಟಕ್ಕೆ ಉದ್ದದ ಹಗ್ಗವನ್ನು ಕಟ್ಟಿಕೊಂಡು ಹನುಮಂತನಂತೆ ಅವನು ಮರಹತ್ತಿ ಒಂದು ಕಾಯಿಯನ್ನು ದೋಟಿಯಿಂದ ಉದುರಿಸಿದರೆ ಕೆಳಗೆ ಇದ್ದವರು ಅದನ್ನು ಕಚ್ಚಿ ನೋಡಿ ಬೆಳದಿದೆಯಾ ಇಲ್ಲವಾ ಹೇಳುತ್ತಿದ್ದರು. ಈ ನೇಣು ಬರುವ ಮುಂಚೆ ಗೋಣಿಯಲ್ಲಿ ಹಿಡಿಯುತಿದ್ದರು. ಒಂದು ಮರ ಹತ್ತಿ ಕುಳಿತುಕೊಂಡು ದೊಟಿಯಿಂದ ಅವನು ಸುತ್ತಲಿದ್ದ ಮರದ ಗೊನೆ ತೆಗೆದರೆ ಅದು ಎಲ್ಲಿ ಬೀಳುತ್ತದೆ ಎಂದು ಅಂದಾಜಿಸಿ ಅಲ್ಲಿ ಹೋಗಿ ನಿಂತು ಗೋಣಿ ಹಾರಿಸಿ ಕೊನೆ ಹಿಡಿಯುತ್ತಿದ್ದರು. ಇವರೆಲ್ಲಾ ಕ್ರಿಕೆಟ್ ಆಡಲು ಹೋದರೆ ಒಂದೂ ಬಾಲ್ ಕೂಡಾ ತಪ್ಪದೆ ಹಿಡಿಯುತ್ತಾರೆ ಅನ್ನಿಸುತಿತ್ತು. ಅಷ್ಟು ನಿಖರತೆ. ಕೊನೆ ಬೀಳುವ ವೇಗ, ಅದು ಕೆಳಕ್ಕೆ ಬೀಳಲು ಬೇಕಾದ ಸಮಯ, ಗೋಣಿ ಹಾರಿಸಬೇಕಾದ ದಿಕ್ಕು, ಉಪಯೋಗಿಸಬೇಕಾದ ರಟ್ಟೆಯ ಬಲ ಎಲ್ಲವನ್ನೂ ಅದೆಷ್ಟು ಸರಿಯಾಗಿ ಯೋಚಿಸಿ ಮಾಡುತ್ತಿದ್ದರು ಎಂದು ಯೋಚಿಸಿದರೆ ಈಗಲೂ ಮೈ ಒಮ್ಮೆ ಝುಂ ಅನ್ನುತ್ತದೆ. ಹಾಗೆ ಹಿಡಿದರೆ ನಮಗೂ ಖುಷಿ. ಉದುರು ಹೆಚ್ಚು ಬೀಳುವುದಿಲ್ಲ, ಬಿದ್ದದ್ದೂ ಅಲ್ಲೇ ಇರುತ್ತದೆ. ಆದರೆ ಕೊನೆ ತೆಗೆಯುವವನ ವೇಗ, ದಿಕ್ಕು ಹಾಗೂ ಹಿಡಿಯುವವರ ನಡುವೆ ಕೆಲವೊಮ್ಮೆ ಈ ಗಂಡ ಹೆಂಡಿರ ನಡುವಿನ ಬಿರುಕಿನಂತೆ ಹದ ತಪ್ಪಿತೋ ಅಲ್ಲಿಗೆ ಗೋಣಿ ಒಂದು ಕಡೆ ಕೊನೆ ಒಂದು ಕಡೆ.

ಅಷ್ಟು ಮೇಲಿನಿಂದ ಬೀಳುವ ರಭಸಕ್ಕೆ ಕೊನೆ ನೆಲಕ್ಕೆ ಹೊಡೆದು ಕಾಯಿಗಳೆಲ್ಲಾ ಅಷ್ಟೇ ವೇಗದಲ್ಲಿ ದಶದಿಕ್ಕುಗಳಲ್ಲೂ ಚೆಲ್ಲಾಪಿಲ್ಲಿಯಾಗಿ ಕಣ್ಣು ಮುಚ್ಚಾಲೆ ಆಡುತ್ತಿದ್ದವು. ಅವನ್ನು ಹುಡುಕುವ ಕೆಲಸ ನಮ್ಮದು. ಒಂದನ್ನೂ ಬಿಡದಂತೆ ಆರಿಸಿ ತಂದು ಬುಟ್ಟಿಗೋ ಚೀಲಕ್ಕೋ ತುಂಬಬೇಕಿತ್ತು. ಈ ಹುಡುಕುವ ಕೆಲಸವೇ ಸಿಟ್ಟು ತರಿಸುತ್ತಿದ್ದದ್ದು. ಕಲ್ಲು ಮುಳ್ಳುಗಳಿಂದ ತರಚಿಸಿ ಕೊಳ್ಳುತ್ತಾ, ಕಪ್ಪಿನ ನಡುವೆ ಬ್ಯಾಲೆನ್ಸ್ ಮಾಡಲು ಹೋಗಿ ಮಕಾಡೆ ಬೀಳುತ್ತಾ, ಉರಿ ಬಿಸಿಲಿಗೆ ಕಾಯುತ್ತಾ ಒಂದೊಂದೇ ಹುಡುಕಿ ಬುಟ್ಟಿಗೆ ತುಂಬುವುದು ಯಾರಿಗೆ ತಾನೇ ಪ್ರಿಯವಾದಿತು. ಆದರೂ ಅವರ ಮಾತುಕತೆ, ಆಗಾಗ ಸಿಗುವ ಕಾಫಿ, ಮಜ್ಜಿಗೆ ತಣ್ಣಗಾಗಿಸುತ್ತಿದ್ದದ್ದು ಮಾತ್ರ ಹೌದು. ಉದುರು ಆರಿಸಿ ಬಿಸಿಲಿಗೆ ಕೆಂಪು ಕೆಂಪಾಗಿ ಮನೆಗೆ ಬಂದರೆ ಬಿಸಿ ಬಿಸಿ ಊಟ ತಯಾರಾಗಿರುತಿತ್ತು. ಆಮೇಲೆ ಜಗುಲಿಯಲ್ಲಿ ಕುಳಿತು ಕೊನೆ ಹೊತ್ತು ತಂದು ಕುತ್ತರಿ ಹಾಕುವುದನ್ನೇ ನೋಡುವ ಕೆಲಸ. ಹಣ್ಣು ಕೊನೆಗಳನ್ನ ಒಂದು ಕಡೆ, ಉಳಿದದ್ದನ್ನು ಇನ್ನೊಂದು ಕಡೆ ಕುತ್ತರಿ ಹಾಕಿ ಉದುರನ್ನು ಬುಟ್ಟಿಗೆ ತುಂಬಿಟ್ಟರೆ ಅಲ್ಲಿಗೆ ಅಂಗಳವೆನ್ನುವುದು ಯುದ್ಧಕ್ಕೆ ಸಿದ್ಧವಾಗಿ ವ್ಯೂಹವನ್ನು ರಚಿಸಿಕೊಂಡು ನಿಂತ ರಣಾಂಗಣ.

ಸೂರ್ಯ ಮನೆಗೆ ಹೋಗಿ ಕಾಫಿ ಕುಡಿಯುವಾಗ ಕತ್ತಲು ಸದ್ದಿಲ್ಲದಂತೆ ಅಡಿಯಿಡುವಾಗ ಗ್ಯಾಸ್ ಲೈಟ್ ಹಚ್ಚುವ ಕೆಲಸ ಶುರುವಾಗುತ್ತಿತ್ತು. ಕರೆಂಟ್ ಇನ್ನೂ ಬಂದಿರದ ಆ ಕಾಲದಲ್ಲಿ ಗ್ಯಾಸ್ ಲೈಟ್ ದೊಡ್ಡ ಬೆಳಕು. ಈಗ  ಕರೆಂಟ್ ಬಂದರೂ ಹಳ್ಳಿಗಳಿಗೆ ವೋಲ್ಟೇಜ್ ವ್ಯರ್ಥ ಅನ್ನುವ ಆಳುವ ಅರಸರ ನಿರ್ಧಾರದಿಂದ ಚಿಮಣಿ ದೀಪದ ಹಾಗೆ ಬೆಳಗುವ ಬಲ್ಬ್ ಗಳನ್ನೂ ಚಪ್ಪರಕ್ಕೆ ಕಟ್ಟುತಿದ್ದರು. ಬೆಳಕು ಆವರಿಸಿಕೊಳ್ಳುವ ಸಮಯದಲ್ಲೇ ಒಬ್ಬೊಬ್ಬರಾಗಿ ಅಡಿಕೆ ಸುಲಿಯಲು ಜನ ಬರುತ್ತಿದ್ದರು. ಮೊದಲು ಬಂದವರು ಒಂದು ಕತ್ತಿಯನ್ನು ಆರಿಸಿಕೊಂಡು ಒಳ್ಳೆಯ ಕೊನೆ ರಾಶಿಹಾಕಿಕೊಂಡು ಕುಳಿತು ಅದು ಆಮೇಲೆ ಜಗಳಕ್ಕೆ ತಿರುಗುವ ಸನ್ನಿವೇಶಗಳೂ ಇರುತಿತ್ತು. ಮೊದಲ ದಿನ ಯಾವ ಕತ್ತಿ ತೆಗೆದುಕೊಳ್ಳುತ್ತಾರೋ ಅದು ಕೊನೆಯ ದಿನದವರೆಗೆ ಅವರದೇ. ಮತ್ಯಾರಿಗೂ ಅದನ್ನು ಉಪಯೋಗಿಸುವುದು ಇರಲಿ ಮುಟ್ಟುವ ಹಕ್ಕೂ ಇರಲಿಲ್ಲ. ಅಸ್ಪೃಶ್ಯತೆ ಅನ್ನುವುದು ಕತ್ತಿಗಳಿಗೂ ಇರುತ್ತೆ ಅಂತ ಆಗಲೇ ನಮಗೆ ಗೊತ್ತಾಗುತ್ತಿದ್ದದ್ದು. ಅದಕ್ಕಾಗಿ ಘನಘೋರ ಜಗಳಗಳೂ ಜರುಗುತ್ತಿದ್ದವು.

ಮೆಟ್ಟುಕತ್ತಿ ತೆಗೆದುಕೊಂಡು ಆಸೀನರಾಗುತ್ತಿದ್ದಂತೆ ಅವರಿಗೆ ಬುಟ್ಟಿ, ಕೊನೆ ಒದಗಿಸುವ ಸಹಾಯಕರ ಪಾತ್ರ ನಮ್ಮದು. ಒಳಗಿನ ಕೋಣೆಯಲ್ಲಿದ್ದ ಟೇಪ್ ರೆಕಾರ್ಡರ್ ಆಗ ಹೊರಗೆ ಬರುತಿತ್ತು. ಗುರುರಾಜಲು ನಾಯ್ದು ಅವರ ಹರಿಕತೆಯ ಕ್ಯಾಸೆಟ್ ಗಳು ಪಕ್ಕದಲ್ಲಿ ಗಂಭಿರವಾಗಿ ಆಸೀನರಾಗುತ್ತಿದ್ದವು. ಅದು ಬೇಡ ಇದು ಹಾಕಿ ಅಂತ ಒಂದು ಸಣ್ಣ ಚರ್ಚೆ ಮುಗಿದು ಯಾವುದೋ ಒಂದು ಒಳಗೆ ಹೋಗಿ ಶುರುವಾದಾಗ ಎಲ್ಲಾ ಸದ್ದುಗಳು ಅಡಗಿ ಸುಲಿಯುವ ಶಬ್ದ ಮಾತ್ರ ಕೇಳಿಸುತಿತ್ತು. ಮಧ್ಯೆ ಮಧ್ಯೆ ಬರುವ ಉಪಕತೆಗಳಂತೆ ಅಯ್ಯೋ ಅನ್ನುವ ಸದ್ದು, ಸೊರಬರ ಎಂದು ಮೂಗು ಕಣ್ಣು ಒರೆಸಿಕೊಳ್ಳುವ ಸದ್ದು, ಸಣ್ಣಗಿನ ಬೈಗುಳ ಎಲ್ಲವೂ ಹಿಮ್ಮೇಳ ಕೊಡುತಿದ್ದವು. ಒಂದು ಕಡೆ ಮುಗಿಯುತ್ತಿದ್ದಂತೆ ಕಾಫಿ ಬರುತಿತ್ತು. ಕಾಫಿ ಮುಗಿಯುವ ವೇಳೆಗೆ ಊರು, ಮನೆ, ಪೇಟೆ ಹೀಗೆ ಜಗತ್ತಿನ ಸುದ್ದಿಗಳೆಲ್ಲಾ ಬಂದು ಹೋಗುತಿತ್ತು. ಯಾವ ನ್ಯೂಸ್ ಚಾನೆಲ್ ಗೂ ಕಡಿಮೆಯಿಲ್ಲದಂತೆ ವಿಶ್ಲೇಷಣೆ, ವಿಷಯ ಎಲ್ಲವೂ ಪ್ರಸಾರವಾಗುತಿತ್ತು. ಅದು ಶುರುವಾಗುತ್ತಿದ್ದ ಹಾಗೆ ಕಾಫಿ ಕೊಡಲು ಬಂದವರೂ ಅಲ್ಲೇ ಕುಳಿತು ಜೊತೆಯಾಗುತ್ತಿದ್ದರು.

ಆಮೇಲೆ ಮತ್ತೆ ಹರಿಕತೆ, ಉಪಕತೆ, ಮಧ್ಯೆ ತಿಂಡಿ ಇವೆಲ್ಲಗಳ ನಡುವೆ ಸುಲಿತ ಮಾತ್ರ ಚುರುಕಾಗಿ ಸಾಗಿ ಹನ್ನೊಂದು ಗಂಟೆಯ ಹೊತ್ತಿಗೆ ಕಣ್ಣುಗಳು  ಇನ್ನು ಸಾಧ್ಯವಿಲ್ಲ  ಎಂದು ಮುಷ್ಕರ ಹೂಡುವಾಗ ಎಲ್ಲರೂ ಎದ್ದು ಹೊರಡುತ್ತಿದ್ದರು. ಆ ಚಳಿಯಲ್ಲಿ ಮಾರು ದೂರ, ಮೈಲಿ ದೂರ ನಡೆದು ಹೋಗುವಾಗಲೂ ಮಾತು, ಉತ್ಸಾಹ ಕಡಿಮೆಯಾಗುತ್ತಿರಲಿಲ್ಲ. ರಾತ್ರಿಯೆಲ್ಲಾ ಹೀಗೆ ಕೆಲಸ ಮಾಡಿದರೂ ಮುಂಜಾನೆ ಬೇಗ ಏಳುವುದು ಅನಿವಾರ್ಯ. ಅವರು ಅತ್ತ ಹೋಗುತ್ತಿದ್ದಂತೆ ಇತ್ತ ಸುಲಿದಿಟ್ಟ ಅಡಿಕೆಯನ್ನು ಹಂಡೆಗೆ ತುಂಬಿ ಒಲೆಗೆ ಕಟ್ಟಿಗೆ ಜೋಡಿಸಿ ಮಲಗುವಾಗ ಮಧ್ಯರಾತ್ರಿ. ಹಾಸಿಗೆಗೆ ಬೆನ್ನು ಕೊಟ್ಟ ಕೂಡಲೇ ಗಡದ್ದು ನಿದ್ದೆ. ಮೊದಲೇ ಮಾಗಿಯ ಚಳಿ, ಅದರಲ್ಲೂ ಮಲೆನಾಡಿನ ಚಳಿಯ ಗಮ್ಮತ್ತೆ ಬೇರೆ. ಕಂಬಳಿ ಹೊದ್ದು ಮಲಗಿದರೆ ಮುಗಿಯಿತು ಅಂತಿಲ್ಲ. ಬೆಳಗಿನ ಜಾವ ನಾಲ್ಕು ಗಂಟೆಗೆ ಏಳಬೇಕು ಎದ್ದು ಅಡಿಕೆ ಒಲೆಗೆ ಉರಿ ಹಾಕಬೇಕು. ಅಡಿಕೆ ಬೇಯಿಸಬೇಕು.

ಬೆಳಗು ಮತ್ತು ನಾವು ಕಣ್ಣು ಬಿಟ್ಟು ಏಳುವ ವೇಳೆಗೆ ಅಡಿಕೆ ಬೆಂದು ಹಬೆಯಾಡುತ್ತಿರುತಿತ್ತು. ಚೊಗರಿನಲ್ಲಿ ಬೆಂದ ಅದನ್ನು ಬುಟ್ಟಿಗೆ ಹಾಕಿದರೆ ಚೊಗರು ಒಂದು ಪಾತ್ರೆಗೆ ಇಳಿದು ಬರೀ ಅಡಿಕೆ ಉಳಿಯುತ್ತಿತ್ತು. ತಲೆಯ ಮೇಲೆ ಹೊತ್ತುಕೊಂಡು ಚಪ್ಪರ ಹತ್ತಿ ತಟ್ಟಿಗೆ ಹರಡುವ ವೇಳೆಗೆ ಎಳೆಬಿಸಿಲು ಇಳಿದು ಬರುತಿತ್ತು. ನಾವೂ ಕೆಳಗೆ ಇಳಿದು ಬಂದು ರಾತ್ರಿಯೆಲ್ಲಾ ಸುಲಿದಿದ್ದ ಅಡಿಕೆ ಸಿಪ್ಪೆಯನ್ನು ಬುಟ್ಟಿಗೆ ತುಂಬುತ್ತಾ ಅಲ್ಲಲ್ಲಿ ಬಿದ್ದಿದ್ದ ಅಡಿಕೆ ಚೂರು ಆಯ್ದಿಡುತ್ತಿದ್ದೆವು. ಸಿಪ್ಪೆಯನ್ನು ತೆಗೆದುಕೊಂಡು ಹೋಗಿ ಕಣದಲ್ಲಿ ಒಣಗಲು ಹಾಕಿ ಕೊನಮೊಟ್ಟೆಯನ್ನು ಬೇರೆ ಹಾಕಿದರೆ ಅದು ಬಿಸಿಲಲ್ಲಿ ಒಣಗಿ ಬಚ್ಚಲ ಒಲೆಗೆ ಹೋಗಲು ಸಮಯ ಕಾಯುತ್ತಿದ್ದವು.

ಇಷ್ಟಾದರೆ ಮುಗಿಯಿತಾ ಎಂದರೆ ಉಹೂ ಇಲ್ಲ. ಆಗಾಗ ಹೊರಗೆ ಬಂದು ಮಳೆ ಬರುವ ಹಾಗಿದೆಯಾ ನೋಡಬೇಕು. ಮಳೆಗೆ ನೆಂದರೆ ಅಡಿಕೆ ಬೂಸಲು ಬರುತ್ತದೆ. ಅಲ್ಲಿಗೆ ಶ್ರಮವೆಲ್ಲಾ ವ್ಯರ್ಥ. ಸಂಜೆಯಾಗುತ್ತಿದ್ದ ಹಾಗೆ ಅಡಿಕೆಯನ್ನು ತಟ್ಟಿಯಲ್ಲಿ ಒಟ್ಟುಮಾಡಿ ತಟ್ಟಿಯನ್ನು ಸುರಳಿ ಮಾಡಿ ಇಡುತ್ತಿದ್ದರು. ಏಳು ದಿನ ಒಣಗಿದ ಮೇಲೆ ಅದನ್ನು ಕೆಳಗೆ ಆರಿಸಿ ಬೆಟ್ಟೆ, ಹಸ, ಗೊರಬಲು ಎಂದು ವಿಂಗಡಿಸಿ  ಚೀಲದಲ್ಲಿ ತುಂಬಿ ಕಟ್ಟಿ ಪತ್ತಾಸಿನ ಕೋಣೆಯಲ್ಲಿ ಇಟ್ಟರೆ ಅಲ್ಲಿಗೆ ಅದು ತಯಾರಾದ ವಧುವಿನಂತೆ. ಇನ್ನು ಮಂಡಿಗೆ ಕಳಿಸುವುದೊಂದೇ ಬಾಕಿ. ಜಾತಿ ಅನ್ನೋದು ಕೇವಲ ಮನುಷ್ಯರಲ್ಲಿ ಮಾತ್ರವಲ್ಲ ಅಡಿಕೆಯಲ್ಲೂ ಉಂಟು, ಇಲ್ಲೂ ಮುಖ ನೋಡಿ ಅಲ್ಲ ಅಡಿಕೆ ನೋಡಿ ರೇಟ್ ಮಾಡ್ತಾರೆ ಅಂತ ನಕ್ಕು ಚೀಲವನ್ನು ನೇವರಿಸುತ್ತಿದ್ದೆವು.

ಹೀಗೆ ನವರಾತ್ರಿಗೆ ಶುರುವಾದರೆ ಶಿವರಾತ್ರಿಯವರೆಗೆ ಇದೇ ಬಿಡುವಿಲ್ಲದ ದಿನಚರಿ. ಚಳಿಗೆ ಮೈ ಒಡೆಯುವುದರ ಜೊತೆಗೆ ಅಡಿಕೆ ಚೊಗರಿಗೂ ಮೈ ಕೈ ಇನ್ನಷ್ಟು ಒಡೆದು ಬೇಸಿಗೆ ಬರಡು ನೆಲದಂತೆ ಬಿರುಕು ಬಿಡುತಿತ್ತು. ನಿದ್ದೆ ಎನ್ನುವುದು ಕನಿಷ್ಠ ಮಟ್ಟಕ್ಕೆ ಇಳಿದು ಶ್ರಮ ಗರಿಷ್ಠ ಮಟ್ಟವನ್ನು ಮುಟ್ಟುತಿತ್ತು. ಎಲ್ಲರ ಮನೆಯ ಹಣೆಬರಹವೂ ಇದೇ ಆಗಿದ್ದರೂ, ಇದರ ಜೊತೆ ಜೊತೆಗೆ ಗದ್ದೆ ಕೊಯ್ಲು ಬಂದರೂ ಬೇಸರಿಸಿಕೊಳ್ಳದೇ, ಸೋಮಾರಿತನ ಮಾಡದೆ ಜನ ಅಡಿಕೆ ಸುಲಿಯಲು ಬರುತ್ತಿದ್ದರು. ಒಬ್ಬರ ಮನೆ ಮುಗಿದರೆ ಇನ್ನೊಬ್ಬರ ಮನೆ ಹೀಗೆ ಸಹಬಾಳ್ವೆ ಅನ್ನೋದು ಅಡಿಕೆ ಕೊಯ್ಲಿನ ಸಮಯದಲ್ಲಿ ತುಂಬಾ ಚೆಂದವಾಗಿ ಅರಿವಿಗೆ ಬರುತಿತ್ತು. ಔಷಧಿ ಹೊಡೆದ ಅಡಿಕೆ ಕೊನೆಗೂ ಮೈ ಬಣ್ಣಕ್ಕೂ ವ್ಯತ್ಯಾಸವೇ ಕಾಣದೆ ಅಡಿಕೆ ಕೊಯ್ಲಿನ ಉದ್ದಕ್ಕೂ ಎಲ್ಲವೂ ಒಂದೇ.. ಏಕೀ ಭಾವ. ವರ್ಷದ ಒಂದು ಬೆಳೆ, ಅದರಲ್ಲೂ ದುಡ್ಡು ಎಂದು ಕಾಣುವುದೇ ಆ ಬೆಳೆಯಲ್ಲಿ. ಮೈ ಮನಸ್ಸುಗಳನ್ನು ಹಿಂಡಿ ಹಾಕಿದರು ಅಲ್ಲೊಂದು ನೆಮ್ಮದಿಯಿರುತಿತ್ತು. ಹಾಗಾಗಿಯೇ ಕೊನೆಯ ದಿನ ಕಡೆಗಟ್ಲು ಎಂದು ಮಾಡುತ್ತಿದ್ದರು.

ಅಡಿಕೆ ಸುಲಿತದ ಕೊನೆಯದಿನ, ಬಿಡುವಿಲ್ಲದ ಕೆಲಸಕ್ಕೂ ವಿರಾಮ ಇಡುವ ದಿನ. ಹಾಗಾಗಿ ಅದು ಕಡೆಗಟ್ಲು ಎಂದೇ ಪ್ರಸಿದ್ಧಿ. ಅವತ್ತು ಮಾತ್ರ ಎಲ್ಲರೂ ಅಡಿಕೆ ಸುಲಿಯಲು ಬರುತ್ತಿದ್ದರು. ಅಡುಗೆಮನೆಯಲ್ಲಿ ಸಿಹಿ ತಿಂಡಿ ತಯಾರಾಗುತ್ತಿತ್ತು. ಅವತ್ತು ಎಲ್ಲಾ ಸುಲಿದ ಮೇಲೆ ಒಂದೆರೆಡು ಬಗೆಯ ತಿಂಡಿಯೂ, ಸಿಹಿಯೂ ಎಲ್ಲರೂ ಸೇರಿ ತಿಂದು ಕೊಯ್ಲಿಗೆ ಮಂಗಳ ಹಾಡುತ್ತಿದ್ದರು. ಆರಂಭ ಮಾತ್ರವಲ್ಲ ಅಂತ್ಯಕ್ಕೂ ಒಂದು ಗೌರವ ಇರಬೇಕು ನೋಡಿ. ಹಾಗಾದಾಗ ಮಾತ್ರ ಬದುಕು ಸಂಪನ್ನವಾಗುತ್ತದೆ.

ಈಗ ಹಳ್ಳಿಯ ಜನರೆಲ್ಲಾ ಪಟ್ಟಣ ಸೇರಿದ ಮೇಲೆ ಜಾತ್ರೆಯ ವೈಭವ ಕಳೆಗುಂದಿದೆ. ಚಪ್ಪರ ಅಂಗಳದಿಂದ ಮಾಯವಾಗಿ ಈಗ ಅಡಿಕೆ ಒಣಗಿಸಲು ಕಬ್ಬಿಣದ ಜಾಲರಿಗಳು ಬಂದಿವೆ. ತಟ್ಟಿ ವಯಸ್ಸಾದ ಅಜ್ಜನಂತೆ ಮರೆಯಾಗಿ ಹೋಗಿದೆ. ಸುಲಿಯುವ ಕಷ್ಟ ಯಾರಿಗೂ ಬೇಡವಾಗಿದೆ. ಹಾಗಾಗಿ ಮೆಷಿನ್ ಬಂದಾಗಿದೆ. ಊರು ಮನೆಯವರೆಲ್ಲಾ ಗುಂಪು ಕಟ್ಟಿಕೊಂಡು ಸುಲಿಯುತಿದ್ದ ಅಡಿಕೆ ಈಗ ಇಬ್ಬರು ಎರಡು ಗಂಟೆ ವ್ಯಯಿಸಿದರೆ ಮೆಷಿನ್ ಸುಲಿದು ಹಾಕುತ್ತದೆ. ಮಾತಿನ ಸದ್ದಿನ ಬದಲು ಕರ್ಕಶ ಸದ್ದನ್ನು ಮೆಷಿನ್ ಹೊರಡಿಸುತ್ತದೆ. ಮನೆಯ ಉಳಿದವರು ಸೀರಿಯಲ್ ನೋಡುವುದರಲ್ಲಿ ವ್ಯಸ್ತರಾಗಿ ಹೋಗಿದ್ದಾರೆ. ಮೆಟ್ಟು ಕಟ್ಟಿ ತುಕ್ಕು ಹಿಡಿದು ಯಾವ ಕಾಲವಾಗಿದೆ ಎಂದು ಯಾರಿಗೆ ಗೊತ್ತು. ತುಕ್ಕು ಹಿಡಿದದ್ದು ಅದಕ್ಕಾ ನಮಗಾ ಎಂದು ಕೇಳಿಕೊಳ್ಳಲು ಭಯವಾಗಿ, ಆ ಮೌನ ಕಿರಿಕಿರಿಯಾಗಿ ಮೆಷಿನ್ ಬಳಿ ಹೋಗಿ ಕೂರುತ್ತೇನೆ. ಅಲ್ಲಿ ಗುರುರಾಜಲು ನಾಯ್ಡುವಿನ ಹರಿಕತೆ ಕೇಳಬಹುದಾ ಎಂದು ಆಲಿಸುತ್ತೇನೆ.

ಇವರ ಮನೆ ಕಾಯ್ವಾಗ... ಮತ್ತೆ ಕರೆಂಟ್ ತೆಗೆದರೋ ಅಂತಲೋ, ವೋಲ್ಟೇಜ್ ಇಲ್ಲಾ ಎಂದೋ ಕೆ ಇ ಬಿ ಯಿಂದ ಹಿಡಿದು ಸರ್ಕಾರದ ತನಕ ಎಲ್ಲರನ್ನೂ ಬೈಯುವ, ಹಿಂಗಾದರೆ ನಾಳೆ ಅಡಿಕೆ ಬೇಯಿಸಿದ ಹಾಗೆ ಎಂದು ಗೊಣಗುವ ಶ್ರೀಧರನ ದ್ವನಿಯೊಂದೇ ಕೇಳಿ ಅಲ್ಲಿ ಕುಳಿತರೆ ಕಷ್ಟ ಎಂದು ಎದ್ದು ಬರುತ್ತೇನೆ. ಒಂದೊಮ್ಮೆ ಪ್ರಿಯವಾಗಿದ್ದು ಮತ್ತೆಂದೋ ರೇಜಿಗೆ ಹುಟ್ಟಿಸುವುದು ಹೀಗೆನಾ.... ಬದಲಾಗಿದ್ದು ಕಾಲವಾ, ಬದುಕಾ, ಆಲೋಚನೆಯಾ.... ಯಾರನ್ನು ಕೇಳೋದು....


Comments

Popular posts from this blog

ಮಾತಂಗ ಪರ್ವತ

ರಂಜದ ಹೂ

ಬರಿದೆ ಆಡುವ ಮಾತಿಗರ್ಥವಿಲ್ಲ...