ಚೆಸ್

ನಾನಾಗ ನಾಲ್ಕನೇ ಕ್ಲಾಸ್... ಹೊರಗಡೆಯ ಆಟಗಳಲ್ಲೇ ಮುಳುಗಿ ಹೋಗಿರುತಿದ್ದ ನಮಗೆ ಒಳಾಂಗಣದ ಆಟದ ಬಗ್ಗೆ ಆಸಕ್ತಿ ಲವಲೇಶವೂ ಇಲ್ಲದಿದ್ದರೂ ಅದಾಗಲೇ ಹಾಸಿಗೆ ಹಿಡಿದು ದಿನ ಎಣಿಸುತಿದ್ದ ಅಜ್ಜನ ಬಲವಂತಕ್ಕೆ ಪಗಡೆ ಆಡಲು ಕೂರುತಿದ್ದೆವು. ಅವರಿಗೋ ಸಮಯ ಕಳೆಯಲು ನಾವೇ ಜೊತೆಗಾರರು ಆದ್ದರಿಂದ ಪಾಪ ಬೇರೇನೂ ಮಾಡಲು ತೋಚದೆ, ಮಲಗಲೂ ಆಗದೆ ನೋವು ಮರೆಯಲು ಆಡಲು ಕರೆಯುತ್ತಿದ್ದರು. ಅದನ್ನೆಲ್ಲಾ ಅರ್ಥ ಮಾಡಿಕೊಳ್ಳುವ ವಯಸ್ಸು ನಮ್ಮದು ಆಗಿರದ ಕಾರಣ ನಾವು ಬೈದುಕೊಳ್ಳುತ್ತಲೇ ಸಿಟ್ಟು ಮಾಡಿಕೊಳ್ಳುತ್ತಲೇ ಆಟಕ್ಕೆ ಬರುತಿದ್ದೆವು. ಇಂಥ ಸಂಧಿಗ್ಧ ಸಮಯದಲ್ಲಿ ಕೇಶುವಣ್ಣ ಚೆಸ್ ತಂದಿದ್ದು, ನಮಗೆ ತಪ್ಪಿಸಿಕೊಳ್ಳಲು ಮಾರ್ಗ ಸಿಕ್ಕಿದ್ದು.

ಆಚೆಮನೆಯಲ್ಲಿ ಏನೇ ತಂದರೂ ಅದನ್ನು ಬಳಸುತಿದ್ದದ್ದು ಮಾತ್ರ ನಾನು ಅಣ್ಣನೇ. ಅವರಿಗೆ ತಂದಿದ್ದ ತೃಪ್ತಿ ಅವರಿಗೆ ಬಿಟ್ಟರೆ ಸಿಗುತಿದ್ದದ್ದು ಮಾತ್ರ ಎಲ್ಲೋ ಅಪರೂಪಕ್ಕೆ. ಕಪ್ಪು ಬಿಳಿಯ ಬಣ್ಣ ಹೊಂದಿದ ಚೌಕಾಕಾರದ ಆ ಬೋರ್ಡ್, ತರೇವಾರಿ ಆಕೃತಿಗಳನ್ನು ಮುಚ್ಚಿಟ್ಟುಕೊಂಡ ಬಾಕ್ಸ್ ಅದೆಷ್ಟು ಸೆಳೆದಿತ್ತು ಎಂದರೆ ಊಟ ತಿಂಡಿ ನಿದ್ದೆಯ ಪರಿವು ಇಲ್ಲದೆ ಅದನ್ನು ಕಲಿಯುವವರೆಗೆ ಅದೇ ಉಸಿರು, ಅದೇ ಕನಸು ಮತ್ತು ಅದೇ ಬದುಕು. ಪಾಪ ಕೆಶುವಣ್ಣ ಕೂಡ ತಾಳ್ಮೆಯಿಂದಲೇ ನಮಗೆ ಆಟ ಕಲಿಸಿಕೊಟ್ಟಿದ್ದರು. ಅದೇ ಅವರು ಮಾಡಿದ ಬಹು ದೊಡ್ಡ ತಪ್ಪು ಎಂದು ಅರ್ಥವಾಗಿದ್ದು ಆ ಬೋರ್ಡ್ ಅವರ ಕೈಗೂ ಸಿಕ್ಕದೆ ನಾವು ಎತ್ತಿಕೊಂಡು ಬಂದಾಗಲೇ.

ಅಲ್ಲಿಯವರೆಗೆ ಸಿಟ್ಟು ಮಾಡಿಕೊಂಡೋ, ಬೈಯುತ್ತಲೋ ಆಟಕ್ಕೆ ಬರುತ್ತಿದ್ದ ನಾವು ಆಮೇಲೆ ಚೆಸ್ ಅಲ್ಲಿ ಮುಳುಗಿ ಹೋಗಿ ಆಟಕ್ಕೆ ಬರದಿದ್ದನ್ನು ಕಂಡು ಅಜ್ಜನಿಗೂ ಸಿಟ್ಟು ನೆತ್ತಿಗೇರಿ, ಜೊತೆಗೆ ಅಸಹಾಯಕತೆಯೂ ಕಾಡಿ ಏನು ಮಾಡುವುದು ಎಂದು ಆಲೋಚಿಸಿದಾಗ ಅವರಿಗೆ ಕಂಡಿದ್ದು ಒಂದೇ ದಾರಿ ಅದನ್ನು ಬಚ್ಚಿಡುವುದು. ಅದು ಸಿಗದೇ ಹೋದಾಗ ಮಾತ್ರ ನಾವು ಬರ್ತಿವಿ ಅನ್ನೋದು ಅರಿತ ಅವರು ಆಮೇಲೆ ಮಾತ್ರ ಥೇಟ್ ಪುಟ್ಟ ಮಕ್ಕಳಂತೆ ಅದನ್ನು ಮುಚ್ಚಿಡುವುದು ನಾವದನ್ನು ಹುಡುಕಿ ಹೈರಾಣಾಗುವಾಗ ಪಗಡೆಗೆ ಕರೆಯುವುದು, ನಾವು ಮತ್ತಷ್ಟು ಸಿಟ್ಟಿನಲ್ಲಿ ಅದನ್ನು ಹುಡುಕಿ ಅವರೆದುರು ಆಡುವುದು ನಮ್ಮ ಜಗಳ, ದೊಂಬಿ ನೋಡಿ ಅಜ್ಜಿ ಬೈಯುವುದು ನಿತ್ಯಕರ್ಮವೇ ಆಗಿ ಹೋಗಿತ್ತು.

ಅಲ್ಲಿಯವರೆಗೆ ಕೇವಲ ನಮ್ಮ ಯೋಚನೆ ನಡೆ ಮಾತ್ರ ಆಲೋಚಿಸುತಿದ್ದ ಎದುರಿನವರ ಬಗ್ಗೆಯೂ ಯೋಚಿಸಬೇಕು ಎಂದು ಗೊತ್ತಿರದ ನಮಗೆ ಹೊಸಪಾಠ ಕಲಿಸಿತ್ತು ಚೆಸ್. ಆಡುತ್ತಾ ಆಡುತ್ತ ಉಳಿದ ನಡೆಯ ಬಗ್ಗೆ ಯೋಚಿಸುತ್ತಾ, ಜಾಗರೂಕರಾಗಿರುತ್ತಾ ಚೆಸ್ ಮತ್ತು ಬದುಕು ಎರಡು ಒಂದೇ ಅನ್ನಿಸುವ ಮಟ್ಟಿಗೆ, ಬದುಕಿನಲ್ಲಿ ನಿಜವಾದ ಬಣ್ಣಗಳು ಎರಡೇ ಎಂದು ಭಾವಿಸುವ ಮಟ್ಟಿಗೆ  ಒಬ್ಬರು ಸೋತರೆ ಇನ್ನೊಬ್ಬರನ್ನು ಸೋಲಿಸುವವರೆಗೂ ನಿಲ್ಲದ ಜಿದ್ದಿಗೆ ಬೀಳುತ್ತಾ ಅಬ್ಬಾ ಎಷ್ಟು ಚೆನ್ನಾಗಿ ಚೆಸ್ ಆಡ್ತಾವೆ ಈ ಮಕ್ಕಳು ಎನ್ನುವ ಮಾತಿಗೆ ಉಬ್ಬುತ್ತಾ ಸಾಗಿದ್ದ ನಮಗೆ ಅಜ್ಜನ ಕಂಗಳ ನೋವು ಕಾಣಿಸಿರಲೇ ಇಲ್ಲ. ದೇಹ, ಆರೋಗ್ಯ ಕುಗ್ಗಿದಂತೆ ಅವರ ಮನಸ್ಸು ಕುಗ್ಗಿ ದಿನದಿನಕ್ಕೂ ಅವರು ಕ್ಷೀಣಿಸುತ್ತಿತ್ತು. ಒಂದು ದಿನ ಎಲ್ಲೋ ಹೋಗಿದ್ದ ಅಣ್ಣ ಆಡಲು ಸಿಗದೇ ಹೋದಾಗ ಆಡುವ ಮನಸ್ಸು ಕಾಡಿದಾಗಲೇ ಅದು ಅರ್ಥವಾಗಿದ್ದು. ಚೆಸ್ ಮೋಹವನ್ನು ಕಡಿಮೆ ಮಾಡಿಕೊಂಡು ಅಜ್ಜನ ಕಡೆಗೆ ಮುಖ ಮಾಡಿದ್ದು.

ಆಮೇಲೆ ಕಾಲೇಜ್ ಮೆಟ್ಟಿಲು ಹತ್ತುವವರೆಗೂ ಈ ಮೋಹ ನಿರಂತರವಾಗಿ ಕಾಡಿದ್ದು ಅದ್ಯಾವ ಗಳಿಗೆಯಲ್ಲಿ ನೇಫಥ್ಯಕ್ಕೆ ಸರಿದಿತ್ತೋ ಗೊತ್ತೇ ಆಗಿರಲಿಲ್ಲ. ಅಣ್ಣ ಮಾತ್ರ ಇಂದಿನವರೆಗೂ ಅದೇ ಮೋಹವನ್ನು ಕಾಪಾಡಿಕೊಂಡು ಬಂದರೂ ನನ್ನಿಂದ ಮಾತ್ರ ಸಂಪೂರ್ಣವಾಗಿ ದೂರವಾಗಿತ್ತು. ನಿನ್ನೆ ಬಂದ ಪವನ್ ಅಹಿಗೆ ಅವರ ಚೆಕ್ ಚಿತ್ರದಲ್ಲಿ ಬಳಸಿದ ಚೆಸ್ ಬೋರ್ಡ್ ತಂದು ಕೊಟ್ಟಾಗ ಮಾತ್ರ ಹಳೆಯದೆಲ್ಲ ಪಕ್ಕನೆ ನೆನಪಾಗಿ ಹೋಗಿತ್ತು. ಪ್ರತಿಯೊಬ್ಬರಿಗೂ ತಮ್ಮ ಮೊದಲ ಸಾಧನೆಯ ಪ್ರತಿ ಘಳಿಗೆ, ಪ್ರತಿ ವಸ್ತುವಿನ ಬಗ್ಗೆ ಅಭಿಮಾನ, ಅಪ್ಯಾಯತೆ ಇದ್ದೇ ಇರುತ್ತದೆ. ಅಂತಹುದರಲ್ಲಿ ಅಹಿಗೆ ಅದನ್ನು ತಂದುಕೊಟ್ಟದ್ದು ನೋಡಿ, ಅದು ಅದೇ ಬೋರ್ಡ್ ಅಂತ ಗೊತ್ತಾಗಿ ಕಣ್ಣಂಚು ಒದ್ದೆಯಾಗಿತ್ತು. ಅರೆ ನಂಗೆ ಚೆಸ್ ಸಿಕ್ಕಿದ್ದು ನಾನು ನಾಲ್ಕನೇ ಕ್ಲಾಸ್ ಅಲ್ಲಿ ಇದ್ದಾಗ ಅಹಿಗೆ ಸಿಕ್ಕಿದ್ದೂ ಈಗಲೇ ಅನ್ನೋ ವಿಷ್ಯ ಇನ್ನಷ್ಟು ಮನಸ್ಸನ್ನು ಆರ್ದ್ರಗೊಳಿಸಿದ್ದು ಹೌದು.

ತಂದು ಕೊಟ್ಟಿದ್ದಲ್ಲದೆ ಅವಳಿಗೆ ಅದನ್ನು ಹೇಳಿಕೊಟ್ಟು ನೀನು ಕಲಿತ ಮೇಲೆ ನಾನು ಬಂದು ನಿನ್ನ ಜೊತೆ ಆಡ್ತೀನಿ ಅಂದವರ ಪ್ರೀತಿ ಕಂಡು ಅಹಿಯಂತೂ ಎಕ್ಸೈಟ್ ಆಗಿ ಹೋಗಿದ್ದಳು. ಅವಳಿಗ ಆಗಿನ ನನ್ನ ಹಾಗೆ ಅದನ್ನು ಕಲಿಯುವ ಜಿದ್ದಿಗೆ ಬಿದ್ದಿದ್ದಾಳೆ. ಬಹುಶ ನನಗಿಂತ ಚೆನ್ನಾಗಿ ಚೆಸ್ ಬದುಕು ಎರಡೂ ಅರ್ಥಮಾಡಿಕೊಳ್ಳುವ ಜಾಣ್ಮೆಯೂ ಚುರುಕುತನವೂ ಅವಳಿಗಿದೆ. ಆದರೆ ಅವಳಿಗೀಗ ನೀನು ಗೆಲ್ಲುವುದು ಮುಖ್ಯವೇ ಹೊರತು ಎದುರಿನವರನ್ನು ಸೋಲಿಸುವುದಲ್ಲ ಎನ್ನುವುದನ್ನ ಮಾತ್ರ ಹೇಳಿಕೊಡಬೇಕಾಗಿದೆ ಅಷ್ಟೇ. ಗೆಲುವಿನ ಕಡೆ ಗಮನ ಕೊಟ್ಟಾಗ ನಮ್ಮ ಪೂರ್ಣ ಪರಿಶ್ರಮ, ಆಲೋಚನೆ, ಮನಸ್ಸು ಆ ಕಡೆಗೆ ಹರಿಯುತ್ತದೆ. ಏಕಾಗ್ರವಾಗುತ್ತದೆ. ಅಲ್ಲಿ ಗೆಲ್ಲುವುದರ ವಿನಃ ಉಳಿದ ಭಾವಗಳಿಗೆ ಅವಕಾಶವಿಲ್ಲ. ಇನ್ನೊಬ್ಬರನ್ನು ಸೋಲಿಸಲು ಹೊರಟಾಗ ಮಾತ್ರ ನಮ್ಮ ಗಮನ ಅವರಕಡೆಗೆ ಹರಿಯುತ್ತದೆ. ಅರಿಷಡ್ವರ್ಗಗಳು ಇನ್ನಿಲ್ಲದಂತೆ ಕಾಡುತ್ತದೆ. ಮನಸ್ಸಿನ ಏಕಾಗ್ರತೆ ಹದ ತಪ್ಪುತ್ತದೆ.

ನಮ್ಮನ್ನೇ ನಾವು ಗಮನಿಸಿಕೊಳ್ಳುವುದನ್ನು ಬಿಟ್ಟರೆ ಇನ್ಯಾರು ಗಮನಿಸುತ್ತಾರೆ...

Comments

Popular posts from this blog

ಮಾತಂಗ ಪರ್ವತ

ರಂಜದ ಹೂ

ಬರಿದೆ ಆಡುವ ಮಾತಿಗರ್ಥವಿಲ್ಲ...