ಕಾಕಿ ಹಣ್ಣು.

ಸಮಯ ಇದ್ದಾಗಲೋ ಇಲ್ಲಾ ರಜೆ ಬಂದಾಗಲೋ ಮರದ ಸಂಕವನ್ನು ದಾಟಿಕೊಂಡು, ಮುಳ್ಳುಗಳನ್ನು ಚುಚ್ಚಿಸಿಕೊಂಡು ಹಳು ಬೆಳೆದ ತೋಟಕ್ಕೆ ಹೋಗುವ ಆಕರ್ಷಣೆಯಿರುತಿದ್ದದ್ದು ಕೇವಲ ಪೇರಳೆಮರಕ್ಕೆ ಮಾತ್ರವಲ್ಲ, ಕಾಕಿ ಹಣ್ಣಿನ ಗಿಡಕ್ಕೂ ಕೂಡಾ. ಬೆಳೆದ ಹಳುಗಳ ನಡುವೆ ಹಸಿರು ಹುಲ್ಲಿನ ನಡುವೆ ಯಾವುದೋ ಮರದ ಬುಡದಲ್ಲೋ, ಕಪ್ಪಿನ ಕೊನೆಯಲ್ಲ್ಲೋ ಸುಮ್ಮನೆ ಬೆಳೆದು ನಿಂತಿರುತಿದ್ದ ಈ ಗಿಡ ಮೇಲ್ನೋಟಕ್ಕೆ ಕಣ್ಣಿಗೆ ಬೀಳುತ್ತಿರಲಿಲ್ಲ. ಹಸಿರಾಗಿ ರೆಂಬೆಗಳನ್ನು ಹರಡಿಕೊಂಡು ನಿಂತಿರುತಿದ್ದ ಈ ಗಿಡ ಹುಲ್ಲಿನಷ್ಟೇ ಮೃದು. ಮುಟ್ಟಿದರೆ ಮುರಿಯುವುದೇನೋ ಎನ್ನುವಷ್ಟು ನಾಜೂಕು. ಈ ಗಿಡಕ್ಕೆ ಮೂರರ ಮೇಲೆ ಮೋಹವೇನೋ ಎಂಬಂತೆ ಪ್ರತಿ ಚಿಗುರಿನಲ್ಲೂ ಮೂರು ಎಲೆಗಳನ್ನು ಬಿಟ್ಟು ಕಂಗೊಳಿಸುತ್ತಿತ್ತು.

ಎರಡು ಮೂರು ಅಡಿಯಷ್ಟು ಎತ್ತರ ಬೆಳೆಯುವ, ಹರಡಿಕೊಂಡು ನಗುವ ಇದನ್ನು ಯಾರೂ ಬೆಳಸಬೇಕು ಎಂದೇನಿಲ್ಲ. ತನ್ನಷ್ಟಕ್ಕೆ ತಾನು ಹಿತ್ತಿಲಲ್ಲೋ, ತೋಟದಲ್ಲೋ ಕಳೆಯ ಮಧ್ಯೆ ಬೆಳೆಯುತ್ತಿತ್ತು. ಕೆಲವೊಮ್ಮೆ ಹಳು ಸವರುವಾಗ ಅದೂ ಹುಲ್ಲಿನ ಜೊತೆ ಸೇರಿ ದನಗಳಿಗೆ ಆಹಾರವಾಗುತಿತ್ತು. ಹೀಗೆ ತನ್ನ ಪಾಡಿಗೆ ತಾನು ಯಾರ ಆರೈಕೆಯಿಲ್ಲದೆ, ಗಮನ ಬೇಡದೆ ಬೆಳೆದರೂ ಉಳಿದವರ ಆರೈಕೆ ಮಾತ್ರ ತುಂಬಾ ಚೆನ್ನಾಗಿ ಮಾಡುತಿತ್ತು. ಹಾಗಾಗಿ ಯಾವ ನೀರಿಕ್ಷೆಯಿಲ್ಲದೆ ಬೆಳೆದು ಹಿತವನ್ನೇ ಮಾಡುವ ಈ ಗಿಡವನ್ನು ಕಂಡರೆ ಎಲ್ಲರಿಗೂ ವಿಶೇಷ ಪ್ರೀತಿ.  ಅದರಲ್ಲೂ ಮಕ್ಕಳಿಗೆ ಹಾಗೂ ಹೆಂಗಸರಿಗೆ ತುಸು ಹೆಚ್ಚೇ ಅನ್ನಿಸುವಷ್ಟು ಪ್ರೀತಿ.

ತಿಳಿ ಹಸಿರು, ಕೆಲವೊಮ್ಮೆ ಗಾಢ ಹಸಿರು ಬಣ್ಣ ಹೊಂದಿದ ಇದರ ಎಲೆಗಳು ಎಷ್ಟು ಮೋಹಕವೋ ಅಷ್ಟೇ ಮೃದು. ಪುಟ್ಟ ಗಿಡವಾದರೂ ಅದರ ಔಷಧಿಯ ಗುಣಗಳು ಹಿರಿದು. ಪುಟ್ಟ ಗಿಡ ಹತ್ತಾರು ಕಾಯಿಲೆಗಳನ್ನು ಗುಣಪಡಿಸುವಷ್ಟು ದೊಡ್ಡತನ ಹೊಂದಿದೆ. ಬಾಯಿ ಹುಣ್ಣು ಆದಾಗ, ಅಥವಾ ಬಿರು ಬೇಸಿಗೆಯಲ್ಲಿ, ಯಾರಿಗಾದರೂ ಉಷ್ಣ ಆಗಿದೆ ಅನ್ನಿಸಿದಾಗ ಅಜ್ಜಿ ತೋಟಕ್ಕೆ ಹೋಗಿ ಅದರ ಚಿಗುರು ಎಲೆಗಳನ್ನು ಕಿತ್ತು ತಂದು ಚೂರು ತುಪ್ಪ ಹಾಕಿ ಹುರಿದು ಎರಡೇ ಎರಡು ಕಾಳುಮೆಣಸು, ಜೀರಿಗೆ ಸೇರಿಸಿ ನುಣ್ಣಗೆ ರುಬ್ಬಿ ಮೊಸರು ಸೇರಿಸಿ ತಂಬುಳಿ ಮಾಡಿ ಬಡಿಸುತ್ತಿದ್ದಳು. ಅವತ್ತು ದಿನಕ್ಕಿಂತ ಒಂದೆರೆಡು ತುತ್ತು ಜಾಸ್ತಿಯೇ ಅನ್ನ ಹೊಟ್ಟೆಗೆ ಇಳಿಯುವುದು ಮಾತ್ರವಲ್ಲ ಉಷ್ಣವೆಂಬುದು ಮರುದಿನ ಹೊರಗೆ ಹೋಗಿ ದೇಹ ತಂಪಾಗುತಿತ್ತು.

ಗಿಡ ಪೂರ್ತಿ ಹಚ್ಹ ಹಸಿರಾದರೂ ಹೂ ಮಾತ್ರ ಅಚ್ಹ ಬಿಳಿ ಬಣ್ಣ. ಹಸಿರ ನಡುವೆ ನಕ್ಷತ್ರಾಕಾರದ ಪುಟ್ಟ ಬಿಳಿ ಹೂಗಳು ಕಪ್ಪು ಆಗಸದಲ್ಲಿ ಮಿನುಗುವ ನಕ್ಷತ್ರಗಳಂತೆ ಕಾಣುತ್ತವೆ. ಗೊಂಚಲು ಗೊಂಚಾಲಾಗಿ ಬಿಡುವ ಹೂ ನಂತರ ಹಚ್ಹ ಹಸಿರು ಕಾಯಿಯಾಗಿ ಎಲೆಗೂ ಕಾಯಿಗೂ ಹತ್ತಿರ ಹೋಗುವವರೆಗೂ ವ್ಯತ್ಯಾಸವೇ ಕಾಣದಂತೆ ಎಲ್ಲವೂ ಒಂದಾಗಿ ಅಥವಾ ಒಂದೇ ಎನ್ನುವ ಹಾಗೆ ಅನ್ನಿಸುತಿತ್ತು. ಹಣ್ಣಾದ ಮೇಲೆ ಮಾತ್ರ ಅಚ್ಹ ನೇರಳೆ ಹಣ್ಣಿನ ಬಣ್ಣ. ಕಡಲೆಕಾಳು ಗಾತ್ರದ ಈ ಪುಟ್ಟ ಕಪ್ಪು ಬಣ್ಣದ ಹಣ್ಣು ಗೊಂಚಲು ಗೊಂಚಲಾಗಿ ದೀಪಾವಳಿಗೆ ತೂಗು ಬಿಟ್ಟ ದೀಪದ ಗೂಡಿನಂತೆ, ತೋರಣದ ನಡುವೆ ತೂಗು ಬಿಟ್ಟ ಅಲಂಕಾರದ ವಸ್ತುವಿನಂತೆ ಕಾಣಿಸುತ್ತದೆ.

ನೋಡಲು ಪುಟ್ಟದಾದರೂ ಈ ಹಣ್ಣಿಗೆ ವಿಶಿಷ್ಟ ರುಚಿ. ಚಿಕ್ಕವರು ದೊಡ್ಡವರು ಎನ್ನದೆ ಎಲ್ಲರನ್ನೂ ಆಕರ್ಷಿಸುವ ಗುಣ ಇದಕ್ಕೆ. ಬಿಡಿಸಿ ಬಾಯಲ್ಲಿ ಇಟ್ಟುಕೊಂಡರೆ ಸಿಹಿ, ಒಗರು, ಹುಳಿ ಸೇರಿದ ರುಚಿಯೊಂದು ನಾಲಿಗೆಯಲ್ಲಿ ಇಳಿದು ಮತ್ತಷ್ಟು ತಿನ್ನಲು ಪ್ರೇರೇಪಿಸುತಿತ್ತು. ನೇರಳೆ ಹಣ್ಣಿನಂತೆ ತಿಂದ ಮೇಲೆ ನಾಲಿಗೆಯ ಮೇಲೆ ಕಡುನೀಲಿಯ ವರ್ಣವೊಂದನ್ನು ತನ್ನ ನೆನಪಾಗಿ ಬಿಟ್ಟು ಹೋಗುತಿತ್ತು. ಚಿಕ್ಕ ಮಕ್ಕಳ ಶೀತ ಕಫವನ್ನು ಇದು ಕರಗಿಸುತ್ತಿದ್ದರಿಂದ ಎಷ್ಟು ತಿಂದರೂ ಯಾರೂ ಬೈಯುತ್ತಿರಲಿಲ್ಲ. ರುಚಿ, ಆರೋಗ್ಯ ಎರಡನ್ನೂ ಒಳಗಿಸಿಕೊಂಡ ಈ ಪುಟ್ಟ ಹಣ್ಣಿನ ಅಂತಸತ್ವದ ಬಗ್ಗೆ ಇವತ್ತಿಗೂ ಬೆರಗೂ ಆಕರ್ಷಣೆ ಎರಡೂ  ಹಾಗೆ ಉಳಿದಿದೆ.

ದೇಹದ ಉಷ್ಣತೆ ನಿವಾರಿಸುವುದರ ಜೊತೆಗೆ ಇದು ಮಲಬದ್ಧತೆಯನ್ನೂ ಉಪಶಮನ ಮಾಡುತ್ತದೆ. ಬಾಯಿ ಹುಣ್ಣಿಗಂತೂ ಇದು ರಾಮಬಾಣ. ಔಷಧಿಯುಕ್ತವಾದರೂ ನಾಲಿಗೆಗೂ ಹಿತ ಬಯಸುವ ಗುಣ. ಇದರ ಸೊಪ್ಪು ಅರೆದು ಎಣ್ಣೆಯಲ್ಲಿ ಕುದಿಸಿ ಹಚ್ಚಿದರೆ ಮಕ್ಕಳಲ್ಲಿ ಕಾಣುವ ಚರ್ಮದ ತುರಿಕೆ, ಕಜ್ಜಿಗಳು ಮಾಯವಾಗಿ ಮೃದು ಚರ್ಮ ಬರುತ್ತದೆ ಅನ್ನೋದು ಹಳ್ಳಿಗಳಲ್ಲಿ ಇರುವ ನಂಬಿಕೆ. ಮತ್ತದು ಸತ್ಯವೂ ಕೂಡ. ಕೊಯ್ದಷ್ಟೂ ಚಿಗುರುವ, ಹಬ್ಬಿ ನಗುವ ಇದು ತನ್ನ ಮೃದುತನವನ್ನಷ್ಟೇ ಹಂಚುತ್ತದೆ. ಅಗಿದು ತಿಂದರೂ ಕರುಳಿನ ಸಮಸ್ಯೆಗಳನ್ನು ದೂರ ಮಾಡುತ್ತದೆ. ಪ್ರತಿ ಬಾರಿ ಊರಿಗೆ ಹೋದಾಗ ಏನು ಅಡಿಗೆ ಮಾಡ್ಲಿ ಅಂತ ಅಜ್ಜಿ ಕೇಳುತ್ತಲೇ ಅಂಗಳದ ತುದಿಯಲ್ಲಿರುತಿದ್ದ ಈ ಗಿಡದ ಬಳಿಗೆ ಹೋಗಿ ಚಿಗುರು ಕೊಯ್ದು ತಂದು ತಂಬುಳಿ ಮಾಡುತ್ತಿದ್ದಳು. ಪ್ರತಿಯೊಂದಕ್ಕೂ ಹದ ಹೇಳುತಿದ್ದ ಅಹಿಯೂ ಸದ್ದಿಲ್ಲದೇ ಒಂದೆರೆಡು ತುತ್ತು ಜಾಸ್ತಿಯೇ ತಿಂದು ಎದ್ದು ಹೋಗುತ್ತಿದ್ದಳು.

ಬೆಂಗಳೂರಿಗೆ ಬಂದ ಮೇಲೆ ಊರಿಗೆ ಹೋದಾಗ ಮಾತ್ರ ಸಿಗುತಿದ್ದ ಇದು ಮತ್ತೆ ನೆನಪಾದರೆ ಊರಿಗೆ ಹೋಗುವವರೆಗೂ ಕಾಯಬೇಕಿತ್ತು. ಅಜ್ಜಿ ನೆನಪಾದಾಗಲೆಲ್ಲ ಇದೂ ನೆನಪಾಗಿ ಕಾಡುತಿತ್ತು. ಬಿಸಿಲು ಏರಿದಾಗ ಇದರ ತಂಪು ಬೇಕೆನಿಸುತಿತ್ತು. ಮೊನ್ನೆ ಪಾಟ್ ನ ಮಣ್ಣು ಕೆದರಿ ಮೆಣಸಿನ ಬೀಜ ಹಾಕಿ ಹದಿನೈದು ದಿನವಾದರೂ ಒಂದೂ ಗಿಡ ಹುಟ್ಟಿರಲಿಲ್ಲ. ಆಸೆ ಬಿಟ್ಟಿರಲಿಲ್ಲ. ನನ್ನ ನಿರಾಸೆಗೊಳಿಸಬಾರದು ಎನ್ನುವ ಉದ್ದೆಶದಿಂದಲೋ ಎಂಬಂತೆ ಒಂದು ಗಿಡ ಸಣ್ಣಗೆ ತಲೆಯೆತ್ತಿತ್ತು. ಸದ್ಯ ಒಂದಾದರೂ ಹುಟ್ಟಿತಲ್ಲ ಅನ್ನೋ ನಿರಾಳತೆಯಲ್ಲಿ ದಿನವೂ ಹನಿ ಹನಿಯಾಗಿ ನೀರು ಹನಿಸುತ್ತಿರುವಾಗಲೇ ಪಕ್ಕದಲ್ಲೊಂದು ಬಸಳೆಯೂ ಹುಟ್ಟಿ ಇಷ್ಟಗಲ ಹರಡಿಕೊಂಡು ಈ ಗಿಡ ಮರೆಯಲ್ಲಿ ಅಡಗಿ ಹೋಗಿತ್ತು.

ವಾರದ ಬಳಿಕ ಅದನ್ನು ಸರಿಸಿ ಇದು ಹೇಗಿದೆ ಎಂದು ನೋಡಿದರೆ ಯಾಕೋ ಸಣ್ಣ ಗೊಂದಲ. ಪಕ್ಕದಲ್ಲಿ ಕುಳಿತು ಹುಡುಕಿದರೆ ಹಬ್ಬಿದ ಎಲೆಗಳ ನಡುವೆ ಪುಟ್ಟ ಹಸಿರು ಗೊಂಚಲು. ಇಷ್ಟಗಲ ಕಣ್ಣು ಬಿಟ್ಟು ನೋಡುವಾಗ ಬಾಯಲ್ಲಿ ಉದ್ಗಾರ ಹೊರಟಿತ್ತು. ಅಜ್ಜಿಯ ನೆನಪು ಮರಳಿಸಲೋ ಎಂಬಂತೆ ಪುಟ್ಟ ಕಾಕಿ ಗಿಡ ಬೆಂಗಳೂರೆಂಬ ಮಹಾನಗರಿಗೆ ಕಾಲಿಟ್ಟಿದ್ದು ಮಾತ್ರವಲ್ಲ ಸೊಂಪಾಗಿ ಬೆಳೆದು ಬೇರೂರಿದೆ. ಇದ್ಯಾವ ಮಾಯೆಯೋ ತಂದೆ ಎಂದುಕೊಂಡು ಅದನ್ನು ಸವರಿದಾರೆ ಮೈ ಮನಸ್ಸು ತಂಪು ತಂಪು. ಕೇವಲ ದೇಹವನ್ನಷ್ಟೇ ಅಲ್ಲ ಕಣೆ ಸುಂದ್ರಿ ಮನಸ್ಸೂ ತಂಪುಗೊಳಿಸಿದೆಯಲ್ಲೇ ಎಂದು ಪಿಸುಗುಟ್ಟಿ ಬಂದಿನ್ನೂ ದಿನವೆರಡು ಕಳೆಯುವ ಮುನ್ನ ಮೈತುಂಬಾ ಹಣ್ಣು ಬಿಟ್ಟು ನಗುತ್ತಿದ್ದಾಳೆ. ಅರೆ ಕಾಕಿ ಹಣ್ಣು ಇಲ್ಲಿ ಎಂದು ಬಾಯಿ ಇಷ್ಟಗಲ ತೆರೆದ ಮಗಳು ಒಂದೊಂದೇ ಹಣ್ಣು ಬಿಡಿಸಿ ತಿನ್ನುತ್ತಿದ್ದಾಳೆ..

ಬಾಯಿಯಷ್ಟೇ ಅಲ್ಲ ಬದುಕೂ ಅದೆಷ್ಟು ವರ್ಣರಂಜಿತ ಅಂತ ವಿವರಿಸಿ ಹೇಳೋದು ಹೇಗೆ?

Comments

Popular posts from this blog

ಮಾತಂಗ ಪರ್ವತ

ರಂಜದ ಹೂ

ಬರಿದೆ ಆಡುವ ಮಾತಿಗರ್ಥವಿಲ್ಲ...