ಸಿನಿಕತೆ (ಹೊಸದಿಗಂತ)

ಜೊಮೊಟೋ ದ ನೌಕರನೊಬ್ಬ ಆಹಾರವನ್ನು ಕದ್ದು ತಿನ್ನುವ ವೀಡಿಯೊ ಒಂದು ವೈರಲ್ ಆಯಿತು. ಅದಾಗುತ್ತಿದ್ದ ಹಾಗೆ ಅದಕ್ಕಷ್ಟು ಪರ ವಿರೋಧ ಚರ್ಚೆಗಳು, ಹೇಳಿಕೆಗಳು ಅದಕ್ಕಿಂತ ಜೋರಾಗಿ ನಡೆಯಿತು. ಹಸಿವನ್ನು ವೈಭವಿಕರಿಸುವ, ಹಸಿವಿಗಾಗಿ ಏನು ಮಾಡಿದರೂ ಸರಿ ಎನ್ನುವ ವಾದಗಳನ್ನು ಹರಿದವು. ಸಮರ್ಥಿಸುವ ಭರದಲ್ಲಿ, ವಿಭಿನ್ನ ದೃಷ್ಟಿಕೋನದ ಆಸೆಯಲ್ಲಿ ನೈತಿಕತೆ ಅನ್ನುವುದು ಕೆಳಕ್ಕೆ ಬಿದ್ದು ಉಸಿರುಗಟ್ಟಿತ್ತು.

ಇದಕ್ಕೂ ಮೊದಲು ದಸರೆಯ ಸಮಯದಲ್ಲಿ ತಾಯಿ ಮಗು ಇಬ್ಬರೂ ಅರಮನೆಯ ದೀಪಾಲಂಕಾರ ನೋಡುವ ಫೋಟೋ ಇಷ್ಟೇ ಸದ್ದು, ಸುದ್ಧಿ, ಎರಡೂ ಮಾಡಿತ್ತು. ಅದನ್ನುಬಳಸಿಕೊಂಡು ಕತೆ, ಕವನಗಳ ಲೇಖನಗಳ ಪ್ರವಾಹವೂ ಹರಿದುಬಂದು ಅನುಕಂಪದ ಹೊಳೆಯೇ ಹರಿಯಿತು. ಬಡವರು ಮಾತ್ರ ಮನಸ್ಸು ಹೃದಯ ಉಳ್ಳವರು ಉಳಿದವರು ಮಾನವೀಯತೆ ಮರೆತ ದಾನವರೋ ಎಂದು ಫೀಲ್ ಆಗುವಷ್ಟು ಪ್ರವಾಹ ಉಕ್ಕಿ ಹರಿಯಿತು. ಪ್ರವಾಹದಲ್ಲಿ ಕೊಚ್ಚಿಹೊಗುವಂತೆ ದಸರೆ ಅದರ ಮಹತ್ವ ಎಲ್ಲವೂ ಮಂಕಾಗಿ ಆ ಫೋಟೋವೇ ಜಾಲತಾಣದಲ್ಲಿ ಮುಂಚೂಣಿಯಲ್ಲಿ ನಿಂತಿತು.

ಇನ್ನು ಮೊನ್ನೆ ಮೊನ್ನೆ ಹೆಸರಾಂತ ಸಾಹಿತಿಯೊಬ್ಬರು ಅದರಲ್ಲೂ ಸೂಕ್ಷ್ಮ ಸಂವೇದಿ ಎಂದು ಗುರುತಿಸಿಕೊಂಡವರು ಫೇಸ್ಬುಕ್ ನಲ್ಲಿ ಅಡುಗೆಯ ಫೋಟೋ ಹಾಕಿದವರ ಬಗ್ಗೆ ಅಕ್ರೋಶ ಹೊರಹಾಕಿ ಹಸಿದವನ ಎದುರು ತಿಂದ ಹಾಗೆ ಇದು ಇಮ್ಮಾರಲ್ ಎಂದು ದುಃಖ ಪಡುತ್ತಿದ್ದರು. ಲಕ್ಷಾಂತರ ಜನ ಹಸಿವಿನಿಂದ ಊಟವಿಲ್ಲದೇ ಒದ್ದಾಡುವಾಗ ಬಗೆ ಬಗೆಯ ಊಟದ ಫೋಟೋ ಹಾಕುವುದು ಕ್ರೌರ್ಯ ಎನ್ನುವುದು ಅವರ ಅಭಿಪ್ರಾಯವಾಗಿತ್ತು. ನಾನು ನಾನು ಅನ್ನುವುದೊಂದೇ ಉಳಿದು ನರಕದಲ್ಲಿ ಸಿಕ್ಕಿಹಾಕಿಕೊಂಡು ಬಿಟ್ಟೆದ್ದೇವೆ ಎಂದು ಶರಾ ಬರೆದರು. ಅವರು ನನ್ನತನ ಅನ್ನೋದು ಬಿಟ್ಟು ಬೇರೆಯವರಿಗಾಗಿಯೇ ಬದುಕುತ್ತಿದ್ದಾರ.....  ಹೊಟ್ಟೆಗೆ ಹಿಟ್ಟಿಲ್ಲದವನೂ ನೆಟ್ ಹಾಕಿಸುತ್ತಾನಾ... ನೋಡಿ ಸಂಕಟಪಡುತ್ತಾನ.. ಅವರೇ ಹೇಳಬೇಕು.

ಸುಮ್ಮನೆ ಗಮನಿಸುತ್ತಾ ಹೋದಾಗ ಇಂಥ ಸಾವಿರ ಸಾವಿರ ಉದಾಹರಣೆಗಳು ಸಿಗುತ್ತಾ ಹೋಗುತ್ತದೆ. ಪ್ರತಿ ಸಂಭ್ರಮದಲ್ಲೂ ಏನೋ ನೋವು ಹುಡುಕಿ ಸಂತೋಷಿಸಿದ್ದೆ ತಪ್ಪು ಎನ್ನುವ ಭಾವ ಹುಟ್ಟುವ ಹಾಗೆ ಮಾಡುವ ಮಾತುಗಳು, ಹೇಳಿಕೆಗಳು. ತಪ್ಪನ್ನೂ ಸಮರ್ಥಿಸುವ ವ್ಯಕ್ತಿತ್ವಗಳು. ಇವುಗಳನ್ನು ನೀಡುವುದು ಗುರುತಿಸಿಕೊಂಡಿರುವ, ಹೆಸರು ಮಾಡಿರುವ ಒಂದಷ್ಟು ಅಭಿಮಾನಿಗಳನ್ನು ಹೊಂದಿರುವಂತವರೆ. ಜನ ಮೆಚ್ಚಿ ಆರಾಧಿಸುವ ಸೆಲೆಬ್ರಿಟಿ ಪಟ್ಟ ಹೊಂದಿದವರೇ.  ಮಳೆಯ ಬಗ್ಗೆ ಖುಷಿ ಪಡಿ ಅವರು ನೀರು ನಿಂತು ಕಷ್ಟಪಡುವವರ ಬಗ್ಗೆ ಬರೆದು ನಿಮಗೆ ಮಾನವಿಯತೆಯೇ ಇಲ್ಲವೆನ್ನುತ್ತಾರೆ.  ಹಬ್ಬದ ಬಗ್ಗೆ ಹೇಳಿದರೆ ಅಡುಗೆ ಮಾಡಿ ಸುಸ್ತಾಗಿರುವ ಅಮ್ಮನನ್ನು ನೋಡಿ ಹಬ್ಬ ಎಷ್ಟು ಕಷ್ಟವೆಂದು ತಿಳಿಯುತ್ತೆ ಅನ್ನುತ್ತಾರೆ. ಚೆಂದವಾಗಿ ಡ್ರೆಸ್ ಮಾಡಿಕೊಳ್ಳಿ ಬಟ್ಟೆಯಿಲ್ಲದವರ ಬಗ್ಗೆ ಮಾತಾಡುತ್ತಾರೆ. ಏನೂ ಬೇಡಾ ಸುಮ್ಮನೆ ಸಂತೋಷವಾಗಿದ್ದರೂ ಸಾಕು ನೊಂದವರ ಬಗ್ಗೆ ಕಣ್ಣೀರೂ ಮರುಗುವ ಹಾಗೆ ಕವನ ಬರೆಯುತ್ತಾರೆ. ಖುಷಿಯ ಬಲೂನಿಗೆ ಒಂದು ಸಣ್ಣ ಸೂಜಿ ಚುಚ್ಚಿಬಿಡುತ್ತಾರೆ.

ಅಸಲಿಗೆ ಅವರು ಹಾಗೆಯೇ ಬದುಕುತ್ತಾರ? ದೇಶದಲ್ಲಿ ಲಕ್ಷಾಂತರ ಜನ ಹಸಿವಿನಿಂದ ಬಳಲುತ್ತಾರೆ ಎಂದು ಮರುಗುವ ಇವರು ಅವರಿಗಾಗಿ ಏನು ಮಾಡಿದ್ದಾರೆ ಕೇಳಿ ನೋಡಿ. ಉತ್ತರವಿರುವುದಿಲ್ಲ. ಕೊನೆಯ ಪಕ್ಷ ಇವರ ಒಂದು ಹೊತ್ತಿನ ಊಟವನ್ನು ಅವರಿಗಾಗಿ ತ್ಯಾಗ ಮಾಡುತ್ತಾರ..  ಸೂರಿಲ್ಲದೆ ಇರುವ ಜನಗಳು ನೋಯುತ್ತಾರೆ ಎಂದು ಮನೆ ಕಟ್ಟುವುದು ಬಿಟ್ಟಿದ್ದಾರ? ಬಟ್ಟೆ ಹಾಕುವುದು, ನಿದ್ದೆ ಮಾಡುವುದು, ತಿರುಗಾಡುವುದು, ತಿನ್ನುವುದು,  ಸಿನೆಮಾ ನೋಡುವುದು ಯಾವುದನ್ನು ತ್ಯಾಗ ಮಾಡಿದ್ದಾರೆ ಎಂದರೆ ಉತ್ತರ ಶೂನ್ಯ ಅಷ್ಟೇ. ಅವರು ಯಾವುದನ್ನೂ ಕಳೆದುಕೊಂಡಿರುವುದಿಲ್ಲ... ಕಳೆದುಕೊಳ್ಳುವ ಬಗ್ಗೆ ಕನಸಿನಲ್ಲೂ ಯೋಚಿಸುವುದಿಲ್ಲ. ಎಲ್ಲವನ್ನೂ ಗಳಿಸಿಕೊಂಡು, ಹೊಟ್ಟೆ ತುಂಬಿಸಿಕೊಂಡು ಹಸಿವಿನ ಬಗ್ಗೆ ಮಾತಾಡುತ್ತಾರೆ ಅಷ್ಟೇ..

ಎಲ್ಲರದ್ದೂ ಒಂದು ದಾರಿ ಆದ್ರೆ ಎಡವಟ್ಟನದ್ದೇ ಒಂದು ದಾರಿ ಅನ್ನೋದು ತುಂಬಾ ಹಿಂದಿನಿಂದಲೂ ಬಳಕೆಯಲ್ಲಿರುವ ಗಾದೆ. ಪ್ರಸ್ತುತಕ್ಕೆ ಬಹು ಹೊಂದಿಕೆಯಾಗುವಂತ ಗಾದೆ. ವಿಭಿನ್ನವಾಗಿ ಯೋಚಿಸುವುದು ಬೇರೆ ಭಿನ್ನನಾಗಿ ನಿಲ್ಲುವುದೇ ಬೇರೆ. ಗುರುತಿಸಿಕೊಳ್ಳುವಿಕೆಯ ಹಪಾಹಪಿಗೆ ಬಿದ್ದಾಗ ಇಂಥ ದಾರಿಗಳು ಸುಲಭ ಹಾಗೂ ಅಪ್ಯಾಯಮಾನವಾಗುತ್ತದೇನೋ.. ಪ್ರತಿಯೊಂದು ವಿಷಯಕ್ಕೂ ಹೇಗೆ ಸಮರ್ಥನೆಗಳು ಇರುತ್ತದೋ ಹಾಗೆಯೇ ವಿರೋಧಗಳೂ ಇದ್ದೇ ಇರುತ್ತದೆ. ನಮ್ಮ ತರ್ಕಕ್ಕೆ, ಬುದ್ಧಿವಂತಿಕೆಗೆ ತಕ್ಕಂತೆ ಅವು ಸಿಗುತ್ತಾ ಹೋಗುತ್ತದೆ. ಫೇಸ್ಬುಕ್ ಅಲ್ಲಿ ಅಡುಗೆಯ ಫೋಟೋ ಹಾಕುವುದು ಹಸಿದವರಿಗೆ ಮಾಡುವ ಅವಮಾನವಾದರೆ ದಾರಿ ಬದಿಯ ಅಂಗಡಿ, ಹೋಟೆಲ್ ಗಳಲ್ಲಿ ಆಹಾರ ಇಡುವುದು ಕೂಡಾ ಕ್ರೌರ್ಯವೇ ಅಲ್ಲವೇ. ಬಡವರಿಗೆ ಅಲ್ಲಿಗೆ ಹೋಗಿ ತಿನ್ನಲು ಸಾಧ್ಯವೇ?

ಚಲನಚಿತ್ರಗಳಿಗೆ ಬರೆಯುವ ಪ್ರೇಮಗೀತೆಗಳಿಂದ ಭಗ್ನ ಪ್ರೇಮಿಗಳು ನೋಯುವುದಿಲ್ಲವೇ, ಮನೆ ಕಟ್ಟಿಕೊಂಡರೆ ಸೂರಿಲ್ಲದವರು ನೋಯುವುದಿಲ್ಲವೇ? ಪಂಚತಾರ ಹೋಟೆಲ್ ಗಳ ಬದಲು, ವಿಮಾನಗಳ ಬದಲು, ಐಶಾರಾಮಿ ವಾಹನಗಳ ಬದಲು ಬಡವರಿಗೆ ಸಹಾಯ ಮಾಡಬಹುದಲ್ಲವೇ. ಶ್ರೀಮಂತರ ಬದುಕಿನ ರೀತಿ ಹೋಗಲಿ ಮಧ್ಯಮ ವರ್ಗದವರ ಬದುಕು ಕೂಡಾ ಅವರಿಗೆ ನೋವು ತರುವುದಿಲ್ಲವೇ? ನಾವು ದಿನಾಲು ತಿನ್ನುವ ತರೇವಹಾರಿ ತಿಂಡಿಗಳು ತಯಾರಿಸುವುದೇ ತಪ್ಪಲ್ಲವೇ? ಕುಡಿಯಲೂ ನೀರೂ ಇಲ್ಲದೆ ಪರದಾಡುವಾಗ ಬಿಯರ್ ಮಾರುವುದು ಕ್ರೌರ್ಯವಲ್ಲವೇ.. ಕೆಲಸವಿಲ್ಲದೇ, ಸಂಬಳ ದೊರಕದೆ ಜನ ನರಳುವಾಗ ಲಕ್ಷಾಂತರ ರುಪಾಯಿ ವರಮಾನ ಪಡೆಯುವುದು ಅಮಾನುವೀಯ ಅಲ್ಲವೇ.. ಓದಲು ಬರೆಯಲೂ ಬಾರದ ಜನಗಳು ಇರುವಾಗ ಪುಸ್ತಕಗಳನ್ನು ಬರೆಯುವುದು ಪ್ರಕಟಣೆ ಮಾಡುವುದು ಅವರಿಗೆ ಮಾಡುವ ಅವಹೇಳನವಲ್ಲವಾ... ಅದೊಂದೇ ಅಲ್ಲ ಯಾರೋ ಕೆಲವರ ಬರೆಯುವ ಪ್ರತಿಭೆಗೆ ಅದೆಷ್ಟು ಮರಗಳು ನಾಶವಾಗಿ ಕಾಗದವಾಗಬೇಕು? ಅದೆಷ್ಟು ಪ್ರೋಸೆಸ್ ನಡೆದು ಎಷ್ಟು ಜನರ ಶ್ರಮ, ಸಮಯ ವ್ಯರ್ಥವಾಗಬೇಕು?

ಸಮಸ್ಯೆಗಳು ಅಂದೂ ಇಂದೂ ಮುಂದೂ ಇದ್ದೇ ಇರುತ್ತವೆ. ಅದನ್ನು ನಮ್ಮ ಕೈಲಾದಷ್ಟು ಪರಿಹರಿಸುವ ಪ್ರಯತ್ನ ಖಂಡಿತವಾಗಿಯೂ ಬೇಕು. ಬದುಕಲು ಧನಾತ್ಮಕ ಚಿಂತನೆ ಅತ್ಯಗತ್ಯವಾಗಿ ಬೇಕು. ಆದರೆ ಅತ್ತೆ ಮೇಲಿನ ಸಿಟ್ಟು ಕೊತ್ತಿಯ ಮೇಲೆ ಅಂದಹಾಗೆ ಸಮಸ್ಯೆ ನಿವಾರಿಸುವುದರ ಬದಲು ಇರುವ ಧನಾತ್ಮಕತೆಯನ್ನು ಹಾಳುಗೆಡುವುದು ಎಷ್ಟು ಸರಿ? ಹಬ್ಬ ಬೇಡ, ಅಡುಗೆ ಬೇಡ, ಸಂಭ್ರಮ ಬೇಡ, ಖುಷಿ ಬೇಡಾ, ಸಾಧನೆ ಬೇಡಾ  ಎಲ್ಲಾ ಬೇಡಗಳ ನಡುವೆ ಬದುಕು ಸಾಗುವುದಾದರೂ ಹೇಗೆ? ಎಲ್ಲಿಗೆ? ಬದುಕಿಗೆ ಎಲ್ಲಾ ಬಣ್ಣಗಳೂ ಬೇಕು. ಎಷ್ಟೇ ಇಷ್ಟ ಪಟ್ಟ ಬಣ್ಣವಾದರೂ ಅದೊಂದೇ ಆದರೆ ಮೊದಲ ದಿನ ಖುಷಿ ಅನ್ನಿಸಬಹುದು, ಎರಡನೇ ದಿನ ಮೂರನೆ ದಿನ ಅನ್ನುವ ಹೊತ್ತಿಗೆ ಅದು ಬೇಸರ ತರಲು ಶುರುವಾಗುತ್ತದೆ. ಏಕತಾನತೆ ರೇಜಿಗೆ ಹುಟ್ಟಿಸುತ್ತದೆ.

ಈಗಾಗಲೇ ನಮ್ಮ ಆಚರಣೆಗಳನ್ನು ಖಂಡಿಸಿ, ಅದನ್ನು ಅನರ್ಥ ಎಂದು ಬಿಂಬಿಸುವುದರ ಮೂಲಕ ಬದುಕಿನ ಹಸಿತನವನ್ನು ನಿಧಾನಕ್ಕೆ ಬತ್ತಿಸುತ್ತಾ ಬಂದಿದ್ದೇವೆ. ಹಿಂದಿನ ದಿನಗಳಿಗೆ ಹೋಲಿಸಿದರೆ ನಾವೀಗ ಸುಖವಾಗಿದ್ದೇವೆ, ಶ್ರಮ ಕಡಿಮೆಯಾಗಿದೆ. ಆದರೆ ಸಂತೋಷವಾಗಿದ್ದೇವಾ? ಒಂದೊಂದೇ ಬಣ್ಣವನ್ನು ನಿರಾಕರಿಸುತ್ತಾ, ಇಲ್ಲವಾಗಿಸುತ್ತಾ ಬಂದರೆ ಬದುಕು ಬರಡಾಗುತ್ತದೆ. ಹೋಗಲಿ ಹಾಗೆ ಹೇಳುವ, ಉಪದೇಶ ಮಾಡುವವರು ಹಾಗೆಯೇ ಬದುಕುತ್ತಿದ್ದಾರ ಎಂದರೆ ಉಹೂ ಉಪದೇಶ ಕೊಡಲು ಮಾತ್ರ ಎನ್ನುವ ಸತ್ಯ ಅವರಿಗೆ ಅರಿವಿರುತ್ತದೆ. ಎಲ್ಲಾ ಬಣ್ಣಗಳನ್ನೂ ತುಂಬಿಕೊಂಡು ಅವರು ಪೂರ್ಣವಾಗಿ ಬದುಕುತ್ತಿರುತ್ತಾರೆ. ಅಭಿಮಾನಿಗಳು ಮಾತ್ರ ಹೇಳುವುದೆಲ್ಲಾ ನಿಜ ಎಂದು ಭ್ರಮಿಸಿ ತಾವು ಬೆನ್ನು ಬಿದ್ದಿರುವುದು ಮರೀಚಿಕೆಯ ಹಿಂದೆ ಎನ್ನುವುದು ಮರೆಯುತ್ತಾರೆ. ಅರಿವಾಗುವಾಗ ಮರಳುಗಾಡಿನ ಮಧ್ಯದಲ್ಲಿ ದಿಕ್ಕುಗಾಣದೆ ನಿಂತಿರುತ್ತಾರೆ ಅಷ್ಟೇ.

ಬದುಕು ನಮಗೆ ಸಿಗುವ ಅಪೂರ್ವ ಅವಕಾಶ ಅದನ್ನು ಆದಷ್ಟು ತೀವ್ರವಾಗಿ, ಪೂರ್ಣವಾಗಿ ಬಂದದ್ದು ಬಂದ ಹಾಗೆ ಅನುಭವಿಸುತ್ತಾ, ಉತ್ತಮಗೊಳಿಸಿಕೊಳ್ಳುತ್ತಾ ಹೋಗಬೇಕೆ ಹೊರತು ಎಲ್ಲವನ್ನೂ ನಿರಾಕರಿಸುತ್ತಾ, ಋಣಾತ್ಮಕ ಚಿಂತನೆಗಳನ್ನೂ ಅಳವಡಿಸಿಕೊಳ್ಳುತ್ತಾ ಕುಗ್ಗುತ್ತಾ ಹೋಗುವುದಲ್ಲ. ನನ್ನತನ ಇಲ್ಲದ ಬದುಕು ಬದುಕಲು ಸಾಧ್ಯವಾ...  ಪ್ರತಿಯೊಂದು ನೆಲಕ್ಕೂ ತನ್ನದೇ ಆದ ಸಂಸ್ಕೃತಿ ಇದೆ, ಆಚರಣೆ ಇದೆ. ಸತ್ವವಿದೆ. ಅದನ್ನು ಉಳಿಸಿಕೊಂಡು ಹೋದಾಗ ಮಾತ್ರ ಅಲ್ಲಿ ಹಸಿರು ಚಿಗುರುತ್ತದೆ, ಬದುಕಿಗೆ ನೆರಳು ದೊರೆಯುತ್ತದೆ. ಇಲ್ಲವಾದಲ್ಲಿ ಕಾಡೊಂದು ಬೆಂಗಾಡು ಆಗುವುದರಲ್ಲಿ ಸಂದೇಹವಿಲ್ಲ. ಎಲ್ಲವನ್ನೂ ನಿರಾಕರಿಸುತ್ತಾ ಬಣ್ಣ ಕಳೆದುಕೊಳ್ಳುತ್ತಾ ಹೋದರೆ ನಾಳೆ ಬದುಕೂ ಬೇಡವೆನಿಸುತ್ತದೆ. ದಿನನಿತ್ಯ ಸಾವಿರಾರು ಜನರು ಸಾಯುವಾಗ ನಾವು ಬದುಕುವುದೂ ಕ್ರೌರ್ಯವಾಗಬಾರದಲ್ಲವಾ...  ಎಲ್ಲವನ್ನೂ ಕಳೆದುಕೊಂಡು ಬದುಕುವುದಾದರೂ ಯಾವ ಪುರುಷಾರ್ಥಕ್ಕೆ....

ಸಿನಿಕತೆ ಕೇಳುವುದಕ್ಕೆ ಮಾತ್ರ ಚೆಂದ ಅನುಸರಿಸುವುದಕ್ಕಲ್ಲ....







Comments

Popular posts from this blog

ಮಾತಂಗ ಪರ್ವತ

ರಂಜದ ಹೂ

ಬರಿದೆ ಆಡುವ ಮಾತಿಗರ್ಥವಿಲ್ಲ...