ಜೋಗಿಮಟ್ಟಿ

ಹೋದಸಲ ಹೋದಾಗ ಜೋಗಿಮಟ್ಟಿಗೆ ಹೋಗಲು ಆಗದೇ ಇದ್ದ ಕಾರಣ ಈ ಬಾರಿ ಅದಕ್ಕೆ ಮೊದಲು ಹೋಗಿ ಬರುವುದು ಎಂದು ತೀರ್ಮಾನವಾಗಿತ್ತು. ಬೆಳ್ಬೆಳಿಗ್ಗೆ ಎದ್ದು ತಿಂಡಿ ಮುಗಿಸಿ ಹೊರಟರೆ ಅರೆ ಹತ್ತು ಕಿ.ಮಿ ಹೋಗುವುದಕ್ಕೆ ಅರ್ಧಗಂಟೆ ಯಾಕೆ ಬೇಕು ಅನ್ನಿಸಿದ್ದು ನಿಜವಾದರೂ ಹೋಗುತ್ತಾ ಹೋಗುತ್ತಾ ಅರಿವಿಗೆ ಬಂದಿತ್ತು.  ಪುಟ್ಟ ಮಗುವೊಂದು ಹಾಳೆಯಲ್ಲಿ ಗೀಚಿಬಿಟ್ಟ ಗೆರೆಯ ಹಾಗಿನ ರಸ್ತೆ, ಬಿಸಿಲಿನ ಝಳಕ್ಕೆ ಅದಾಗಲೇ ಅರ್ಧ ಒಣಗಿ ನಿಂತ ಗಿಡಗಂಟಿಗಳು. ಎಂದೋ ಕಟ್ಟಿದ ಮನೆಯೊಂದಕ್ಕೆ ಸುಣ್ಣಬಳಿದಾಗ ಸುಣ್ಣಕ್ಕಿಂತ ಮಣ್ಣೇ ಜಾಸ್ತಿಕಾಣುವ ಹಾಗಿನ ಟಾರ್... ಉಳಿದರ್ಧ ಹಸಿರಿದ್ದರೂ ವಯಸ್ಸಾದ ಅಜ್ಜನ ಮುಖದ ಸುಕ್ಕುಗಟ್ಟಿದ ಪೇಲವ ಚರ್ಮದಂತೆ ಕಾಣುವ ಎಲೆಗಳು ಬಿಸಿಲಿನ ಜೊತೆಗೆ ಏರುತ್ತಾ ಸಾಗಿದ್ದ ನಮ್ಮ ಪಯಣ.

ಮಲೆನಾಡಿನ ನಮಗೆ ಈ ಗುಡ್ಡ, ಅಂಕು ಡೊಂಕು ತಿರುವು, ಮಣ್ಣ ರಸ್ತೆ ಯಾವುದೂ ಹೊಸತೆನಿಸದಿದ್ದರೂ ಪ್ರತಿ ಬಾರಿ ಪ್ರಕೃತಿ ಬೆರಗು ಅಚ್ಚರಿ ಹುಟ್ಟಿಸುವುದು ಸುಳ್ಳಲ್ಲ. ಅವಳು ನಿತ್ಯ ನೂತನೆ. ನಿಧಾನಕ್ಕೆ ವಾಹನ ಅದರಲ್ಲಿರುವ ನಮ್ಮ ಪರಿವೆಯೇ ಇಲ್ಲದಂತೆ ಅಸಲಿಗೆ ನಮ್ಮ ಅಸ್ತಿತ್ವವೇ ಗುರುತಿಸದಂತೆ ಮೆಲ್ಲಗೆ ಬಿಂಕವಾಗಿ ನಡೆದು ಹೋಗುವ ನವಿಲು, ಚಟಪಟನೆ ರೆಕ್ಕೆ ಪಟಪಟಿಸಿ ಹಾರುವ ಪುಟ್ಟಹಕ್ಕಿಯ ಮೈ ಮೇಲಿನ ಬಣ್ಣಗಳು ಗಾಳಿಗೆ ಚೆದುರಿ ಅಲ್ಲೆಲ್ಲಾ ಹರಡಿದ ಹಾಗೆ ಅನ್ನಿಸಿ ಆ ವರ್ಣ ವೈವಿಧ್ಯ ನಮ್ಮನ್ನೂ ಅವರಿಸಲಿ ಎಂಬಂತೆ ಮುಖ ಹೊರಗೆ ಹಾಕಿ ಕುಳಿತ ಮಗಳು, ಬಿಸಿಲಿನ ತಾಪಕ್ಕೆ ಅದ್ಯಾವುದೋ ಮರದ ಬುಡದಲ್ಲಿ ಸುಮ್ಮನೆ ಧ್ಯಾನಸ್ಥವಾದ ಗುರುತಿಲ್ಲದ ಹಕ್ಕಿ, ಇಡೀ ವಾತಾವರಣದ ನಿಶಭ್ದ ಭೇಧಿಸಿ ಕೇಕೆ ಹಾಕುತ್ತಿದ್ದ ಮಕ್ಕಳು, ಭರ್ರೆಂದು ಹೋಗುವ ಇನ್ಯಾವುದೋ ವಾಹನ ಹೀಗೆ ಬಿಟ್ಟ ಕಣ್ಣು ಬಿಟ್ಟ ಹಾಗೆ ನೋಡುತ್ತಾ ಹೋದಷ್ಟು ಮನಸ್ಸಿನ ಉಗ್ರಾಣ ತುಂಬುವ ದೃಶ್ಯ ಕಾವ್ಯ.

ಅಂತೂ ಇಂತೂ ತುತ್ತ ತುದಿಗೆ ಏರಿ ಉಸ್ಸೆಂದು ಕೆಳಗಿಳಿದರೆ ಮೇಲಿದ್ದ ಗೋಪುರವೊಂದು ಕಾಣಿಸಿ ಅರೆ ಹೋಗುವ ಎಂದು ದಿಟ್ಟಿಸಿದರೆ ಬಿಸಿಲಿಗೆ ಮೈಯೊಡ್ಡಿ ಮಲಗಿದ್ದ ಮೆಟ್ಟಿಲುಗಳು ಒಮ್ಮೆ ಯೋಚಿಸುವ ಹಾಗೆ ಮಾಡಿದವು. ಏರುವುದು ಪ್ರಯಾಸ ಹೌದಾದರೂ ಏರಿದ ಮೇಲಿನ ನೋಟ ಅದ್ಭುತ ಅನ್ನುವ ಅರಿವಿದ್ದರಿಂದ ನಿಧಾನಕ್ಕೆ ಒಂದೊಂದೇ ಮೆಟ್ಟಿಲು ಏರುತ್ತಾ ನಡುವೆ ವಿಶ್ರಮಿಸಬೇಕು ಎನ್ನಿಸುವಾಗ ಹಿಂದಿಕ್ಕಿ ಹೋಗುವ ಜನಗಳ ನೋಡಿ ಉರಿದುಕೊಳ್ಳುತ್ತಾ, ಇರೋಬರೋ ಶಕ್ತಿಯೆಲ್ಲಾ ಒಗ್ಗೂಡಿಸಿ ಮತ್ತೆ ಹತ್ತುತ್ತಾ ಕೆಂಪಾಗಿ ಹೋದರೆ ತಣ್ಣಗೆ ಬೀಸುವ ಗಾಳಿ ಒಮ್ಮೆ ಮೈ ಸವರಿ ಕುಶಲ ವಿಚಾರಿಸುವಾಗ ಮನಸ್ಸೂ ತಂಪಾಗಿ ಅಲ್ಲೇ ಕುಳಿತು ಬಿಡಬೇಕು ಎನ್ನಿಸುತ್ತದೆ.

ಕೆಳಗೆ ಕಾಣುವ ಪ್ರಪಾತ, ಒಮ್ಮೆಗೆ ಜಾರದಂತೆ ಅಲ್ಲಲ್ಲಿ ಚೂಪಾಗಿ, ಕೆಲವು ಕಡೆ ಹರಡಿಕೊಂಡು, ನಿಂತುಕೊಂಡಿರುವ ಕಲ್ಲುಗಳ ಸಮೂಹ. ಕೆಂಪು ಬಣ್ಣದ ಭೂದೇವಿ ಹಸಿರು ಪತ್ತಲ ಉಟ್ಟು ಅದೂ ಅಲ್ಲಲ್ಲಿ ಕೆಂಪಾಗಿ ಕಾಣುತಿತ್ತು. ಹತ್ತಿಬಂದ ಆಯಾಸದ ಜೊತೆಗೆ ದಿಟ್ಟಿಸುತ್ತಾ ಕುಳಿತರೆ ಆ ವಿಶಾಲತೆಯಲ್ಲಿ ಕಳೆದುಹೋಗುವ ಭಾವ. ಮಾತು, ಯೋಚನೆ ಯಾವುದೂ ಬೇಡದೆ ಸುಮ್ಮನೆ ದಿಟ್ಟಿಸುತ್ತಾ ಕುಳಿತು ಬಿಡಬೇಕು ಅನ್ನಿಸುವ ಹಾಗಿನ ನೋಟ, ಬಿರುಬಿಸಿಲಿನಲ್ಲೂ ತಂಪಾಗಿಸುವ ಗಾಳಿಯ ಅಪ್ಯಾಯಮಾನವಾದ ಸ್ಪರ್ಶ. ಬಯಲು ಭಯ ಹುಟ್ಟಿಸುತ್ತಲೇ ಇಂಚಿಂಚಾಗಿ ಕರಗಿಸಿ ನಮ್ಮನ್ನೂ ಬಯಲಾಗಿಸಿ ಕೊನೆಗೆ ಒಂದಾಗಿಸಿ ಬೆಟ್ಟವೂ ನಿನ್ನದೇ ಬಯಲು ನಿನ್ನದೇ ಕೊನೆಗೆ ಎಲ್ಲವೂ ಒಂದೇ ಆಗಿಸಿ ಬಿಡುತ್ತದೆ. ಏಕತೆಯನ್ನು ಕಲಿಸಲು ಪ್ರಕೃತಿಗೆ ಮಾತ್ರ ಸಾಧ್ಯ. ಮಾತಿಲ್ಲದೆ, ಏನನ್ನೂ ಹೇರದೆ ಏನನ್ನೂ ಬಯಸದೆ ಗೊತ್ತೇ ಆಗದೆ ಕಳೆದು ಹೋಗಲು, ಕಳೆದುಹೋಗುತ್ತಲೇ ಒಂದಾಗಲು ಪ್ರಕೃತಿಗಿಂತ ಒಳ್ಳೆಯ ಗುರು ಮತ್ತಿನ್ಯಾರು ಇದ್ದಾರೆ?

ಇದಕ್ಕೆ ಏನೋ ಸಾಧಕರು ಇಂಥಹ ಜಾಗ ಹುಡುಕಿಕೊಂಡು ಹೋಗುತ್ತಿದ್ದದ್ದು ಎಂದು ಯೋಚಿಸುತ್ತಾ ದಿಟ್ಟಿಸುವಾಗಲೇ ಹಕ್ಕಿಯೊಂದು ರೆಕ್ಕೆಯನ್ನು ಪಟಪಟಿಸದೇ ಸ್ತಭ್ದವಾಗಿ ನಿಲ್ಲಲು ಪ್ರಯತ್ನ ಮಾಡುತ್ತಿತ್ತು. ಇದು ಭ್ರಮೆಯೋ ನಿಜವೋ ಎಂದು ಕಣ್ಣುಜ್ಜಿ ನೋಡುವ ಹೊತ್ತಿಗೆ ಒಂದು ಕ್ಷಣದಲ್ಲಿ ಹಾಗಾಗದೆ ಮತ್ತೆ ಸ್ವಲ್ಪ ದೂರ ಹೋಗಿ ಪ್ರಯತ್ನ ಪಡುತ್ತಲೇ ಇತ್ತು. ಹತ್ತು ನಿಮಿಷಗಳ ಕಾಲ ಅದನ್ನೇ ದಿಟ್ಟಿಸಿನೋಡುತ್ತಿದ್ದವಳಿಗೆ ಸಾಧನೆ ಕೇವಲ ಮನುಷ್ಯರ ಸೊತ್ತು ಎನ್ನುವ ಅಹಂ ಕರಗಿ ಬೆವರಿನ ಜೊತೆಗೆ ಹರಿದು ಹೋಗಿತ್ತು. ಅದನ್ನೇ ನೋಡುತ್ತಿದ್ದವಳಿಗೆ ರೋಮಾಂಚನವಾಗಿ ಹೋಗಿತ್ತು. ಅಮ್ಮಾ ಆ ಹಕ್ಕಿ ನೋಡೇ ಎಂದು ಅಹಿಯೂ ಜೋರಾಗಿ ಕೂಗಿ ಬೆರಗಾಗಿ ನಿಂತಿದ್ದಳು.

ಇಳಿಯುವುದು ಸುಲಭವಾ ಉಹೂ ಖಂಡಿತ ಅಲ್ಲ. ಇಳಿಯುವುದು ಯಾರಿಗೂ ಇಷ್ಟವಿಲ್ಲದ ಸಂಗತಿಯಾದ್ದರಿಂದ ಕಾಲು ನಡುಗಿ ತನ್ನ ಪ್ರತಿರೋಧ ವ್ಯಕ್ತಪಡಿಸುತ್ತದೆ. ಅದನ್ನು ಸಮಾಧಾನ ಪಡಿಸುತ್ತಲೇ ಇಳಿದು ಬರಬೇಕು. ಹತ್ತುವುದು ಪ್ರಯಾಸವಾದರೂ ಅದೇ ಸುಲಭವೆನ್ನಿಸುತ್ತದೆ. ಅಂತೂ ಇಳಿದು ಬಂದು ಅಲ್ಲಿದ್ದ ಕಲ್ಲಿನ ಮೇಲೆ ಹಾಗೆ ಮೈ ಚೆಲ್ಲಿದರೆ ಬಾಚಿ ತಬ್ಬುವಂತೆ ಬಾಗುವ ಆಕಾಶ ಮನಸ್ಸಿಗೆ ತುಂಬುವ ಶಕ್ತಿ ಅಗಾಧ. ನೆರಳಿನ ಜೊತೆಗೆ ಚಾಮರ ಬೀಸಿದಂತೆ ಗಾಳಿ ಬೀಸಿ ಎಲೆಗಳು ಲಾಲಿ ಹಾಡುವಾಗ ರೆಪ್ಪೆಗಳು ಹಾಗೆ ಮುಚ್ಚಿಕೊಂಡು ಕಳೆದೇಹೊಗುವಂತ ಅಸಲಿಗೆ ಬದುಕಿದ್ದೇವೆ ಎನ್ನುವುದೂ ಗೊತ್ತಾಗದ ನಿದ್ದೆ ಆವರಿಸಿ ಕೇವಲ ಮೈಯನ್ನ ಮಾತ್ರವಲ್ಲ ಮನಸ್ಸನ್ನು ಹಗುರಗೊಳಿಸಿ ಹೊಸದಾಗಿಸಿ ನವಚೈತನ್ಯ ತುಂಬಿ ಕಳಿಸುತ್ತದೆ.

ಯಾರಿದ್ದರೇನು ಬಿಟ್ಟರೇನು ನನ್ನ ದಾರಿ ನಾನೇ ಸಾಗಬೇಕು ಎಂದು ಸಾಗುವ ಝರಿ ಹುಳು, ತಮ್ಮಷ್ಟಕ್ಕೆ ಯಾವ ಹಂಗಿಲ್ಲದೆ ಹಾಡಿಕೊಳ್ಳುವ ಹಕ್ಕಿಗಳು, ಸುಳಿದಾಡುವ ಗಾಳಿ, ಪಿಸುಗುಡುವ ಮರಗಿಡಗಳು, ಅಷ್ಟಿದ್ದರೂ ಸುತ್ತೆಲ್ಲಾ ಆವರಿಸುವ ನಿಶಭ್ದ, ಆ ನಿಶಭ್ದದಲ್ಲೂ ಕೇಳಿಸುವ ಹೊಸ ಶಭ್ದ, ಭಿನ್ನವಾಗಿರುತ್ತಲೇ, ಸ್ವತಂತ್ರ ಅಸ್ತಿತ್ವ ಉಳಿಸಿಕೊಳ್ಳುತ್ತಲೇ ಎಲ್ಲವೂ ಒಂದಾಗಿ, ಏಕತೆಯಲ್ಲಿಯೇ ಭಿನ್ನವಾಗಿ ಆಲಯ ಬಯಲಿನೊಳಗೋ, ಬಯಲು ಆಲಯದೊಳಗೊ ಎನ್ನುವ ವಾತಾವರಣ. ಅರೆ ಬಯಲಾಗುವುದು ಇಷ್ಟು ಸುಲಭವಾ ಎಂದು ಕೊಳ್ಳುವಾಗಲೇ ಬಂಧನ ಕೈ ಬೀಸಿ ಕರೆಯುತ್ತದೆ. ಹುಲುಮಾನವರು ನಾವು ಧಾವಿಸಿ ಮತ್ತಲ್ಲಿಗೆ ಬಂದು ನಿಟ್ಟುಸಿರು ಬಿಡುತ್ತೇವೆ.

ಬಯಲಾಗುವುದು ಸುಲಭವಲ್ಲ... ಬಂಧನ ಬಿಡಿಸಿಕೊಳ್ಳುವುದು ಉಹೂ ಸುಲಭವಲ್ಲವೇ ಅಲ್ಲ.. ಬಯಲಿನಲ್ಲಿ ಬಂಧನವನ್ನೂ ಬಂಧನದಲ್ಲಿ ಬಯಲನ್ನೂ ಕನವರಿಸುವ ನಾವು ಯಾವತ್ತೂ ಇರದುದರೆಡೆಗೆ ತುಡಿಯುತ್ತಲೇ ಇರುತ್ತೇವೆ.. 

Comments

Popular posts from this blog

ಮಾತಂಗ ಪರ್ವತ

ರಂಜದ ಹೂ

ಬರಿದೆ ಆಡುವ ಮಾತಿಗರ್ಥವಿಲ್ಲ...