ನಾನು ದೊಡ್ಡವಳು ಆದ್ಮೇಲೆ ಅದಾಗ್ತಿನಿ ಇದಾಗ್ತಿನಿ ಅನ್ನೋದು  ಆಗಾಗ ಬದಲಾಗುವ ಮಗಳ ಕನಸು ಮೊದಮೊದಲಿಗೆ ಶಾಕ್, ಬೇಜಾರು, ಹೆದರಿಕೆ ಎಲ್ಲಾ ಆದ್ರೂ ಈಗೀಗ ಅಭ್ಯಾಸವಾಗಿ ಹೋಗಿದೆ. ಇದ್ದಕ್ಕಿದ್ದಂತೆ ಒಂದು ದಿನ ಶಾಲೆಯಿಂದ ಬರ್ತಾ ಇದ್ದ ಹಾಗೆ ನಾನು ಬಿಸಿನೆಸ್ವಿಮೆನ್ ಆಗ್ತೀನಿ. ಲಂಡನ್ ಗೆ ಹೋಗಿ ಅವರು ಹೇಗೆ ನಮ್ಮನ್ನು ಆಳಿದ್ರೋ ಹಾಗೆ ನಾನು ಅವರನ್ನ ಆಳ್ತಿನಿ ಅಂದಾಗ ಮೊದ್ಲು ಪಾಸ್ಪೋರ್ಟ್ ಮಾಡಿಸ್ಕೋ ಅಂತ ಸಲಹೆ ಕೊಟ್ಟು ಮರೆತೂ ಬಿಟ್ಟಿದ್ದೆ.

ಮೊನ್ನೆ ನಾನು judge ಆಗ್ತೀನಿ ಅಂದವಳನ್ನೇ ನೋಡಿದೆ. ತಪ್ಪು ಮಾಡಿದವರಿಗೆಲ್ಲಾ ಪಟಾಪಟ್ ಅಂತ ಶಿಕ್ಷೆ ಕೊಡ್ತೀನಿ, ಲೇಟ್ ಮಾಡೋಲ್ಲ. ಸುಮ್ನೆ ಎಷ್ಟೊಂದು ಟೈಮ್ ವೇಸ್ಟ್ ಮಾಡ್ತಾರೆ, ಜನಕ್ಕೆ ಒಂಚೂರು ಭಯನೆ ಇಲ್ಲ ಅಂದ್ಲು. ಬೇಡಾ ಮಗಳೇ judge ಆದ್ರೆ ಪರ್ಸನಲ್ ಲೈಫ್ ಇರೋಲ್ಲ ಕಣೇ, ಹಗಲು ರಾತ್ರಿ ಅನ್ನದೆ ಎದ್ದು ಕೂತು ಕತೆ ಕೇಳಬೇಕು, ಹೇಗೆ ವಾದ ಮಾಡ್ತಾರೋ ಅದನ್ನು ನೋಡಿ ತೀರ್ಪು ಬರೀಬೇಕು, ಎಲ್ಲೂ ಆರಾಮಾಗಿ ಹೋಗೋಕೆ ಆಗೋಲ್ಲ ಬರೋಕೆ ಆಗೋಲ್ಲ ಅದಕ್ಕೆ ನಿಮ್ಮಪ್ಪನಿಗೂ ಎಕ್ಸಾಮ್ ಬರೆಯೋಕೆ ಬಿಡ್ಲಿಲ್ಲ, ಇದೊಂದು ಮಾತ್ರ ಬೇಡಾ ಕಣೆ ಅಂದೇ..

ಮುಖ ಸಣ್ಣ ಮಾಡಿಕೊಂಡು ಸುಮ್ಮನಾಗಿದ್ದ ಮಗಳ ಮುಖ ನೋಡಿ ಬೇಜಾರಾದರೂ ಆಮೇಲೆ ಮರೆತೂ ಹೋಗಿತ್ತು. ನಿನ್ನೆ ಬಂದವಳು ಅಮ್ಮಾ ನಾನು IAS ಮಾಡ್ತೀನಿ ಅಂದ್ಲು. ಅರೆ ಇದರ ಬಗ್ಗೆ ಇವಳಿಗೆ ಹೇಗೆ ಗೊತ್ತಾಯ್ತು ಅಂತ ಆಶ್ಚರ್ಯ ಆದರೂ ನಾಳೆ ಇನ್ನೇನಾದರೂ ಆಗಬಹುದು ಬಿಡು ಅಂತ ತೀರಾ ಖುಷಿಪಡಲು ಹೋಗದೆ ಸಮಾಧಾನ ಮಾಡಿಕೊಳ್ಳುವಾಗಲೇ ಯಾಕೆ ಅಂತ ಕೇಳಲೇ ಇಲ್ಲ್ವಲ್ಲಮ್ಮ ಅಂದ್ಲು.

ಖುಷಿಯಲ್ಲಿ ಮರೆತೇ ಬಿಟ್ಟಿದ್ದೆ ನೋಡು ಅಂತ ಯಾಕೆ ಅಂತ ಅವಳ ಮುಖ ನೋಡಿದ್ರೆ ನೋಡು IAS ಮಾಡಿ ಸ್ಟ್ರಿಕ್ಟ್ ಆಫೀಸರ್ ಆದ್ರೆ (ನಾನು ಆಗ್ತೀನಿ ಬಿಡು ಅದು ಬೇರೆ ಪ್ರಶ್ನೆ) ಮೋದಿ ನನ್ನ ಗಮನಿಸಿ ಅವರ ಟೀಂ ಗೆ ಸೆಲೆಕ್ಟ್ ಮಾಡ್ತಾರೆ. ಆಗ ಅವರ ಜೊತೆ ಕೆಲಸ ಮಾಡಬಹುದು ಅಲ್ವಾ. ಫಾಸ್ಟ್ ಫಾಸ್ಟ್ ಆಗಿ ಕೆಲಸ ಮಾಡಿ ಅವರತ್ರ ಭೇಷ್ ಅನ್ನಿಸ್ಕೋಬೇಕು ನಾನು. ಬೇರೆ ಏನೇ ಮಾಡಿದರೂ ತಕ್ಷಣಕ್ಕೆ ಅವರ ಟೀಂ ಗೆ ಜಾಯಿನ್ ಆಗೋಕೆ ಆಗೋಲ್ಲ ಹಾಗಾಗೆ IAS ಮಾಡ್ತೀನಿ ಎಕ್ಸಾಮ್ ಯಾವಾಗ ಇದೆ ಕೇಳಿ ಹೇಳು ಅಮ್ಮಾ ಅಂತ ಒಳಗೆ ಹೋದ್ಲು. ನಾನು ಶಾಕ್ ನಿಂದ ಸುಧಾರಿಸಿಕೊಳ್ಳಲು ಅಲ್ಲೇ ಸೋಫಾ ಮೇಲೆ ಕುಳಿತೇ.

ಬಹುಶಃ ಇಂದಿರಾಗಾಂಧಿ ನಂತರ ಪ್ರಧಾನ ಮಂತ್ರಿಯ ಹೆಸರು ಜನರ ಬಾಯಲ್ಲಿ ನಲಿದಾಡ್ತಾ ಇದ್ದರೇ ಅದು ಮೋದಿಯದು ಮಾತ್ರ. ಎಲ್ಲಕ್ಕಿಂತ ಅಚ್ಚರಿ ಅಂದ್ರೆ ಚಿಕ್ಕ ಮಕ್ಕಳೂ ಮೋದಿ ಮೋದಿ ಅಂತ ಅವರ ಫ್ಯಾನ್ ಆಗಿರೋದು. ದೊಡ್ಡವರಾದರೆ ಅವರದೇ ಆದ ತಿಳುವಳಿಕೆ, ಲೆಕ್ಕಾಚಾರ, ಸಿದ್ಧಾಂತ ಮಣ್ಣು ಮಸಿ ಅಂತ ಕಾರಣ ಕೊಡಬಹುದು. ಆದರೆ ಚಿಕ್ಕ ಮಕ್ಕಳು ಅವೆಲ್ಲಾ ತಿಳಿಯದ ವಯಸ್ಸು, ಅರಿಯದ ಮನಸ್ಸು ಅವರ ಬಾಯಲ್ಲೂ ಮೋದಿ ಅಂದರೆ ಅದು ಅವರ ಸಾಧನೆ.

ಈ ಸಲದ ಎಲೆಕ್ಷನ್ ಟೈಮ್  ಕ್ಯಾನ್ವಾಸ್ ಗೆ ಬಂದವರು ಕಾಂಗ್ರೆಸ್ ಗೆ ವೋಟ್ ಹಾಕಿ ಅಂತ ಹೇಳುವಾಗ ಅಲ್ಲೇ ಇದ್ದ ಮೈದುನನ ನಾಲ್ಕೂವರೆ ವರ್ಷದ ಮಗಳು ಹಾಕೋಲ್ಲ ಅಂತ ಅತ್ತ ತಿರುಗದೇ ಹೇಳಿದ್ಲು. ಅವಳನ್ನು ಕಿಚಾಯಿಸಲು ಯಾಕೆ ಪುಟ್ಟಿ ಮತ್ತೆ ಯಾವುದಕ್ಕೆ ಹಾಕ್ತಿ ಅಂತ ಕೇಳಿದ್ರೆ ತಕ್ಷಣ ಬಿಜೆಪಿ ಅಂತ ಗುಂಡು ಹೊಡೆದಂತೆ ಉತ್ತರ ಬಂತು. ಅವ್ರು ಯಾಕೆ ಅಂದ್ರೆ ಮೋದಿ ಇದಾನೆ ಅದಕ್ಕೆ ಅಂದ್ಲು. ತನಗೆ ಪರಿಚಯವಿರುವ ಎಲ್ಲರಿಗೂ ಮಗಳು ಮೋದಿಗೆ ವೋಟ್ ಹಾಕಿ ಎಂದು ಹೇಳುವಾಗ ಯಾರೂ ಹೇಳದೇ, ಅವರೆದರು ಏನನ್ನೂ ಮಾತಾಡದೇ ಇದ್ದರೂ ಆ ಮನುಷ್ಯನ ಬಗೆಗಿನ ಮಕ್ಕಳ ಪ್ರೀತಿ, ಗೌರವ ಅಚ್ಚರಿ ಮೂಡಿಸಿದ್ದಂತೂ ಹೌದು.

ಪ್ರಾಮಾಣಿಕತೆಗೆ, ಶಿಸ್ತಿನ ಕೆಲಸಕ್ಕೆ, ಹಿಡಿದ ಕೆಲಸವನ್ನು ಶ್ರದ್ಧೆಯಿಂದ ಮಾಡುವ ಛಲಕ್ಕೆ ಗೌರವವಿದೆ ಅಂತ ಅರ್ಥವಾದ ದಿನ, ಅದಕ್ಕೆ ಬೆಲೆ ಸಿಕ್ಕಿದ ದಿನ ಈ ದೇಶದ ಬಹುತೇಕ ಸಮಸ್ಯೆಗಳು ಅರ್ಧ ಪರಿಹಾರವಾದಂತೆ. ಮಕ್ಕಳ ಮನಸ್ಸಿನಲ್ಲಿ ಒಳ್ಳೆಯದಕ್ಕೆ ಸಪೋರ್ಟ್ ಮಾಡಬೇಕು ಅನ್ನಿಸಿದ ದಿನ ಹೊಸ ಬೆಳಕೊಂದು ಮೂಡಿದಂತೆ. ಸಮರ್ಥ ನಾಯಕನೊಬ್ಬ ಇದ್ದಾನೆ ಅವನ ಕೈ ಬಲಪಡಿಸ ಬೇಕು ಎಂದು ಅನ್ನಿಸಿದ ದಿನ ಅಚ್ಚೇ ದಿನ್ ಬಂದಂತೆ. ಆ ಅಚ್ಚೆ ದಿನಕ್ಕಾಗಿ ನಾವು ಮಾಡಬೇಕಾಗಿದ್ದು ತುಂಬಾ ಸಿಂಪಲ್. .ವೋಟ್ ಅಷ್ಟೇ . ಅಹಿಯ ಕನಸು ನೆರವೇರಲಿ ಅಂತ ದೇವರಿಗೆ ದೀಪ ಬೆಳಗಿದೆ. ಮೋದಿ ಮತ್ತೆ ಪ್ರಧಾನಿಯಾಗಲಿ ಅಂತ ದೇವರನ್ನು ಬೇಡಿಕೊಂಡೆ. ಮತ್ತೆ  ನೀವು......

Comments

Popular posts from this blog

ಮಾತಂಗ ಪರ್ವತ

ಮೃಗವಧೆ

ನನ್ನಿ