ಈ ಹೋಗೋದು, ಬರೋದೂ ಟ್ರಾಫಿಕ್ ನಲ್ಲಿ ಅರ್ಧ ಜೀವನ ಕಳೆದುಹೋಗುತ್ತೆ, ಅಂತ ಅವನೂ, ಈ ಕೆಮಿಕಲ್, ಧೂಳು ಹೊಗೆ ಕುಡ್ಕೊಂಡ್ ಬದುಕುವುದು ಬೇಕಾ ಅಂತ ನಾನೂ ಊರಿಗೆ ಹೋಗಲು ನೆಪಗಳನ್ನು ಹುಡುಕಿಕೊಳ್ಳುತ್ತಾ ಇನ್ನೊಂದು ವರ್ಷ ಇನ್ನೊಂದು ಚೂರು ಆರ್ಥಿಕವಾಗಿ ಗಟ್ಟಿಯಾಗಿ ಹೊರಟುಬಿಡೋಣ ಎಂದು ಸಮಾಧಾನ ಮಾಡಿಕೊಳ್ಳುತ್ತಲೇ, ಮಗಳಿಗೆ ಏನೋ ಹೊಸತೊಂದು ಲೋಕವನ್ನೇ ಸೃಷ್ಟಿಸುವ ಹಮ್ಮಿನಲ್ಲಿ ಊರಿನ ಕನಸು ಕಾಣುತ್ತಿರುತ್ತೇವೆ. ಹುಟ್ಟಿದ್ದು, ಬೆಳೆದಿದ್ದು ಅಲ್ಲಿಯೇ, ಬೇರು ಅಲ್ಲಿಯೇ ಕನವರಿಕೆ ಸಹಜ. ಹೀಗೆಲ್ಲಾ ಮಾತಾಡಿಕೊಳ್ಳುವಾಗ ಮೊದಲು ಸುಮ್ಮನಿರುತ್ತಿದ್ದ, ತನ್ನ ಪಾಡಿಗೆ ತಾನು ಆಡುತ್ತಿದ್ದ ಮಗಳು ಈಗ ಗುರ್ರ್ ಅನ್ನುತ್ತಾಳೆ. ನೀವು ಬೇಕಾದರೆ ಹೋಗಿ ನಾನು ಬರೋಲ್ಲ ಅನ್ನುವಾಗ ರಜೆ ಬರುವುದಕ್ಕೆ ಮೊದಲೇ ಊರು ಎಂದು ಕನವರಿಸುವ ಅವಳ ಈ ವರ್ತನೆ ಅಚ್ಚರಿ ಹುಟ್ಟಿಸಿತ್ತು. ಅದು ನಿಮ್ಮ ಊರಾದರೆ ಇದು ನನ್ನದು ಎನ್ನುವ ಅವಳ ಮಾತು ಕೇಳಿ ಹಾರುತ್ತಿದ್ದ ಬಲೂನು ಅರ್ಧಕ್ಕೆ ಇಳಿದಿತ್ತು. ನಡುವಯಸ್ಸಿನವರಿಗೆ ಇದೊಂದು ಕಾರಣವೂ ಹೌದು ಆತಂಕವೂ ಹೌದು.

ಹಳ್ಳಿಗಳಲ್ಲಿ ಒಳ್ಳೆಯ ಶಾಲೆಗಳಿಲ್ಲ, ಸ್ಪರ್ಧಾತ್ಮಕ ಯುಗದಲ್ಲಿ ಒಳ್ಳೆಯ ಶಿಕ್ಷಣವಿಲ್ಲದೆ ಬದುಕುವುದು ಹೇಗೆ? ಅಲ್ಲಲ್ಲಿ ನಿಲ್ಲುತ್ತಾ ಮಧ್ಯೆ ಮಧ್ಯೆ ಸಿಕ್ಕಿಹಾಕಿಕೊಳ್ಳುತ್ತಾ ಅರ್ಧ ಗಂಟೆಯಲ್ಲಿ ಆರು ಕಿ.ಮಿ ಚಲಿಸುವ ಹೊತ್ತಿನಲ್ಲಿ ಅಲ್ಲಿ 20 ಕಿ.ಮಿ ಚಲಿಸಲು ಸಾಧ್ಯವಿದೆ ಎನ್ನುವುದು ಮರೆತುಹೋಗುತ್ತದೆ. ಎಲ್ಲರಂತೆ ನಮ್ಮ ಮಕ್ಕಳೂ ಓದಿ ವಿದ್ಯಾವಂತರಾಗಿ ಒಳ್ಳೆಯ ಕೆಲಸ ಸಿಕ್ಕು ಬದುಕಿನ ಗುರಿಯೇ ಅದಾಗಿರುವಾಗ ಮರಳಿ ಮಣ್ಣಿಗೆ ಹೋಗುವುದು ಹೇಗೆ? ಸಾಮಾನ್ಯನಾಗಿ ಇರುವ ಭೂಮಿಯಲ್ಲಿ ಕೃಷಿ ಮಾಡಿಕೊಂಡು ನೆಮ್ಮದಿಯಾಗಿ ಬದುಕಲಿ ಅಂತ ಬಯಸುವ ಧೈರ್ಯ ನಮಗಿದೆಯೇ...

ಇದೊಂದೇ ಕಾರಣವಾ... ಉಹೂ ಪ್ರಶ್ನೆ ಕೇಳಿಕೊಳ್ಳುವ, ಅದಕ್ಕೆ ಉತ್ತರ ಹುಡುಕುವ ಧೈರ್ಯವಿಲ್ಲದ್ದೆ ಮೂಲ ಕಾರಣ ಅನ್ನಿಸುತ್ತೆ. ಊರು ಕಾಡುವಿಕೆ ಹೌದು, ಬೇಕು ಅನ್ನಿಸುವುದೂ ಹೌದು ಹಾಗಿದ್ದಕ್ಕೆ ಹುಟ್ಟಿದ ಊರನೂ ಬಿಟ್ಟು ಬಂದಾ ಮೇಲೆ ಎನ್ನುವ ಸಾಲು ಕೇಳುವಾಗ ಕಣ್ಣು ತುಂಬುತ್ತದೆ, ಮನಸ್ಸು ಭಾರವಾಗುತ್ತದೆ, ಮತ್ತೆ ಮರಳುವ ಆಸೆಗೆ ಇನ್ನೊಂದು ರೆಕ್ಕೆ ಹುಟ್ಟುತ್ತದೆ. ಆಗ ಬಿಟ್ಟು ಬಂದ ಊರು ಹಾಗೆ ಇದೆಯೇ ಎನ್ನುವ ವಾಸ್ತವ ದುತ್ತೆಂದು ಎದುರಿಗೆ ಬಂದಾಗ ಮಾತ್ರ ಮನಸ್ಸು ತಡವರಿಸುತ್ತದೆ. ಕನಸೇ ಹಿತವೆನಿಸುತ್ತದೆ.

ಅನಿವಾರ್ಯಕ್ಕೋ, ಅಗತ್ಯಕ್ಕೋ ಮತ್ಯಾವುದಕ್ಕೋ ಊರು ಬಿಟ್ಟು ಬರುವ ಪ್ರತಿಯೊಬ್ಬನ ಕನಸೂ ಮತ್ತೆ ಅಲ್ಲಿಗೆ ಮರಳುವುದು. ಆದರೆ ದುಡಿಮೆ ಎನ್ನುವ ಚಕ್ರವ್ಯೂಹಕ್ಕೆ ಒಮ್ಮೆ ಸಿಕ್ಕಿ ಬಿದ್ದ ಮೇಲೆ ಬಹುತೇಕರು ಅಭಿಮನ್ಯುಗಳೇ.. ಎಲ್ಲೋ ಒಂದಿಬ್ಬರು ಅರ್ಜುನ, ಕೃಷ್ಣನಂತಹವರ ಕಂಡಾಗ ಮನಸ್ಸು ಮತ್ತೆ ಮೋಹಕ್ಕೆ ಬೀಳುತ್ತದೆ. ಕಳುಹಿಸಿದವರಿಗೆ ಮಕ್ಕಳು ಆಗಾಗ ಬರಲಿ ಎನ್ನುವ ಕನಸು. ಇಲ್ಲೇ ಇದ್ದರೆ ಭವಿಷ್ಯದ ಭಯ. ನಡು ವಯಸ್ಸಿಗೆ ಬಂದಾಗ ಆರೋಗ್ಯದ ಭಯ, ಹರೆಯದ ಮಕ್ಕಳಿಗೆ ಮದುವೆಯಾಗಲು ಯೋಗ್ಯ ವರ, ವಧು ಸಿಗದ ಭಯ, ಅನಿಶ್ಚಿತೆಗಳ ನಡುವೆ ಬದುಕುವ ಭಯ, ವರ್ಷಕ್ಕೊಮ್ಮೆ ಸಿಗುವ ಆದಾಯ ಸಿಗದೇ ಹೋದರೆ ಹೇಗೆ ಬದುಕುವುದು ಎಂಬ ಭಯ, ನಾಲ್ಕು ಜನರ ನಡುವೆ ತಲೆಯೆತ್ತಿ ಬದುಕಲು ಸಾಧ್ಯವಾಗದೆ ಹೋದರೆ ಎನ್ನುವ ಭಯ, ಇವೆಲ್ಲದರ ಜೊತೆ ಜೊತೆಗೆ ಕಾಡುವುದು ಪ್ರೈವಸಿ ಸಿಗದೇ ಹೋಗುವ ಭಯ.

ಹಳ್ಳಿಯೆಂದರೆ ತೆರೆದ ಬಾಗಿಲು.. ಪಟ್ಟಣ ಹಾಗಲ್ಲ. ಅಲ್ಲಿ ಸುತ್ತ ಗೋಡೆಯಿದೆ. ಯಾರೋ ಗಮನಿಸುತ್ತಾರೆ, ಇವರಿಗೆ ಎಲ್ಲಾ ಗೊತ್ತಿದೆ ಎನ್ನುವ ಭಯವಿಲ್ಲ. ಅಲ್ಲಿ ಹಾಗಲ್ಲ. ನಾವು ಪರಿಚಿತರಾಗುತ್ತಲೇ ಅಪರಿಚಿತರಾಗಿ ಉಳಿಯಬಯಸುವವರು. ಅಯ್ಯೋ ಅವರು ಗೊತ್ತಿಲ್ವಾ ಎನ್ನುವುದು ಎದುರಿಸುವ ಭಯ ಕೂಡಾ ಇದೆ. ನಿಮಗೇನು ಬಿಡಿ ಈ ಸಲ ಅಡಿಕೆ ಆಗಿಲ್ಲ ಅಂದ್ರೂ ಮಗ ಅಲ್ಲಿಂದ ಕಳಿಸ್ತಾನೆ ಅನ್ನುವ ಪರಿಚಿತರ ಮಾತು ಅಲ್ಲಿ ಹೋಗುವ ದಾರಿಯಲ್ಲಿ ಒಂದು ಗೋಡೆ. ನಾವೇನೋ ಕಷ್ಟ ಪಟ್ವಿ ಅಂತ ನೀವೂ ಪಡೋದು ಬೇಡಾ ಅಲ್ಲೇ ಇರಿ ಏನಿಲ್ಲಾ ಅಂದ್ರೂ ತಿಂಗಳಿಗೆ ಸಂಬಳ ಬರುತ್ತೆ ಅನ್ನುವ ನೆಮ್ಮದಿಯಾದರೂ ಇರುತ್ತೆ ಅನ್ನುವ ವಯಸ್ಸಾದ ಅಪ್ಪ ಅಮ್ಮನ ಕಣ್ಣಲ್ಲಿ  ಕಂಡೂ ಕಾಣದ ಹಾಗಿನ ನಿರೀಕ್ಷೆ ಇನ್ನೊಂದು ರೆಕ್ಕೆ ಮುರಿಯುತ್ತದೆ. ಆರ್ಥಿಕವಾಗಿ ಚೆನ್ನಾಗಿ ಆಗಬೇಕು ಎನ್ನುವ ಆಸೆ ಮತ್ತು ಚೆನ್ನಾಗಿ ಅಂದರೆ ಎಷ್ಟು ಎನ್ನುವ ಲೆಕ್ಕ ಹೇಳದ ದುಡಿಮೆ ಕಾಲು ಕೆಸರಿನಲ್ಲಿಯೇ ಸಿಕ್ಕಿ ಹಾಕಿಕೊಳ್ಳುವ ಹಾಗೆ ಮಾಡುತ್ತದೆ.

ಹೀಗೆ ಒಂದೊಂದೇ ಸುತ್ತು ಚಕ್ರವ್ಯೂಹವನ್ನು ಅಭೇಧ್ಯಗೊಳಿಸುತ್ತಾ ಹೋದಂತೆ ನಮ್ಮದು ತ್ರಿಶಂಕು ಸ್ಥಿತಿ. ಇಲ್ಲಿ ಇರಲಾರೆವು, ಅಲ್ಲಿಗೆ ಹೋಗಲಾರೆವು. ಇಲ್ಲಿಂದ ಹೋದರೆ ಅದನ್ನು ಕಳೆದುಕೊಳ್ಳುವ ಭಯವೂ ಅವ್ಯಕ್ತವಾಗಿರುತ್ತದೆ. ಇಲ್ಲಿರುವಾಗ ಅಲ್ಲೊಂದು ಮನೆಯಿದೆ ಎನ್ನುವ ನೆಮ್ಮದಿಯೇ ಹೋರಾಡುವ ಶಕ್ತಿ ಕೊಡುತ್ತದೆ. ಉತ್ತರ ಇಲ್ಲವಾ ಎಂದರೆ ಧೈರ್ಯ ಇಲ್ಲ ಅನ್ನೋದಷ್ಟೇ ಕಾಣಿಸುತ್ತದೆ. ಅಭಿಮನ್ಯು ಆಗಬಹುದು.. ಕೃಷ್ಣನಾಗುವುದು ಅಷ್ಟು ಸುಲಭವಿಲ್ಲ... ಆ ಮನಸ್ಥೈರ್ಯ ಕಳೆದುಕೊಂಡಿದ್ದೇವಾ, ಬೆಳಸಿಕೊಂಡಿಲ್ಲವಾ ಅನ್ನುವ ಪ್ರಶ್ನೆಗೆ ಉತ್ತರ ಸಿಕ್ಕಿದ ದಿನ ಊರಿಗೆ ಹೋಗುವ ದಾರಿ ಸ್ಪಷ್ಟವಾಗಬಹುದೇನೋ...

Comments

Popular posts from this blog

ಮಾತಂಗ ಪರ್ವತ

ರಂಜದ ಹೂ

ಬರಿದೆ ಆಡುವ ಮಾತಿಗರ್ಥವಿಲ್ಲ...