ಬಿಸಿ ಬೇಳೆ ಬಾತ್

 ನಿಮ್ಮ ಕಡೆ ಬಿಸಿಬೇಳೆ ಬಾತ್ ತುಂಬಾ ಫೇಮಸ್ ಅಲ್ವ, ಮನೆಯ ಹಿಂದಿನ ಹಿತ್ತಿಲಿನ ಕಲ್ಲು ಬೆಂಚಿನ ಮೇಲೆ ಕುಳಿತು ಅವರು ಕೇಳುತ್ತಿದ್ದರು. ಅದು ಆಂಧ್ರದ ಒಂದು ಪುಟ್ಟ ಊರು. ಕೃಷ್ಣಾ ನದಿಯ ದಂಡೆಯ ಮೇಲಿದ್ದ ಕುಗ್ರಾಮ. ಆ ರಸ್ತೆಯ ಕೊನೆಗೆ ಇದ್ದ ಊರದು. ಬಾಗಿ ಹರಿಯುತ್ತಿದ್ದ ನದಿಯ ದಂಡೇ, ಈ ಕಡೆ ದಟ್ಟ ಕಾಡು. ನಕ್ಸಲರ ತಂಗುದಾಣ ಎಂದೇ ಪ್ರಸಿದ್ಧಿ ಆಗಿತ್ತು. ತೆಲುಗು ಬಿಟ್ಟು ಬೇರೆ ಯಾವ ಭಾಷೆಯೂ ಉಪಯೋಗಕ್ಕೆ ಬಾರದ ಸ್ಥಿತಿಯಲ್ಲಿ ಇದ್ದ ನಾವು ಆಗಷ್ಟೇ ಭಾಷೆ ಮಾತ್ರವಲ್ಲ ಆ ರಾಜ್ಯದ ಸಂಸ್ಕೃತಿ, ಸಂಪ್ರದಾಯ ಎಲ್ಲವನ್ನೂ ಕಲಿಯುತ್ತಿದ್ದೆವು. ಆಗ ಆಹಾರದ ವಿಷಯ ಮಾತಾಡುವಾಗ ಈ ಪ್ರಶ್ನೆ ಕೇಳಿದ್ದರು. ಒಂದು ಕ್ಷಣ ಮೌನವಾಗಿ ಕುಳಿತುಬಿಟ್ಟಿದ್ದೆ.

ತವರು ಮನೆಯಲ್ಲಿ ಮನೆ ತುಂಬಾ ಮಕ್ಕಳು, ಸಣ್ಣ ದೇವಸ್ಥಾನದ ಪೂಜೆ, ಸ್ವಲ್ಪೇ ಸ್ವಲ್ಪ ಜಮೀನು. ಜೊತೆಗೆ ಸ್ವಾತಂತ್ರ್ಯ ಹೋರಾಟದ ದಿನಗಳು ಅವು. ಹಾಗಾಗಿ ಎಲ್ಲರ ಮನೆಯ ಹಾಗೆ ಅವರ ಮನೆಯ್ಲಲೂ ಬಡತನ. ಇದ್ದಿದ್ದರಲ್ಲೇ ಅಚ್ಚುಕಟ್ಟು ಮಾಡಿ ತಿನ್ನುವ ಅಭ್ಯಾಸ ಎಳವೆಯಲ್ಲಿ ಹಾಗಾಗಿ ಅವಳಿಗೆ ಅಭ್ಯಾಸ ಆಗಿ ಹೋಗಿತ್ತು. ಮದುವೆ  ಆಗಿ ಬಂದ ಮೇಲೆ ಗಂಡ ದುಡಿದರೂ ಇಸ್ಪೀಟು ಆಟದಲ್ಲಿ ಎಲ್ಲವನ್ನೂ ಕಳೆದುಕೊಂಡೆ ಮನೆಗೆ ಬರುತ್ತಿದ್ದದ್ದು. ಇದ್ದ ಸ್ವಲ್ಪ ಜಮೀನಿನ ಉತ್ಪನ್ನವೇ ಬದುಕಿಗೆ ಆಧಾರ. ಆದರೂ ಅವಳೇನು ಧೃತಿ ಗೆಟ್ಟವಳಲ್ಲ. ಬಹು ಅಚ್ಚುಕಟ್ಟು. ವಾಸ್ತವ ಅರ್ಥಮಾಡಿಕೊಂಡವಳು. ಹಾಗಾಗಿ ಯಾವುದಕ್ಕೂ ಆಸೆ ಪಡದೆ ಇದ್ದಿದ್ದರಲ್ಲಿ ಹೇಗೆ ಮಿತವಾಗಿ ಹಿತವಾಗಿ ಬಾಳಬೇಕು ಎಂದು ಪ್ರತಿಕ್ಷಣ ಕಲಿತವಳು ಅವಳು. ಅಂತವಳಿಗೆ ಇದ್ದದ್ದು ಒಂದೇ ಆಸೆ. ಅದು ಬಿಸಿಬೇಳೆ ಬಾತ್ ನದು.

ಅದೂ ಬಿಸಿಬೇಳೆ ಬಾತ್ ಎಂದರೆ ಈಗಿನ ಹಾಗೆ ಕ್ಯಾರಟ್, ಬೀನ್ಸ್, ಬಟಾಣಿ ಮುಂತಾದ ಬಣ್ಣ ಬಣ್ಣದ ತರಕಾರಿ ಹಾಕಿ ಮಾಡುವುದೇನಲ್ಲ. ಆ ಕಾಲದಲ್ಲಿ ಅವೆಲ್ಲಾ ಶ್ರೀಮಂತರ ತರಕಾರಿಗಳು. ಮನೆಯಲ್ಲಿ ಬೆಳೆದ ಸುತ್ತಮುತ್ತ ದೊರಕಿದ ತರಕಾರಿಗಳನ್ನೇ ಉಪಯೋಗಿಸುತಿದ್ದ, ಅಂಗಡಿಯಿಂದ ಎಲ್ಲೋ ಅಪರೂಪಕ್ಕೆ ತರಕಾರಿ ತರುತ್ತಿದ್ದ ಕಾಲವದು. ಹಾಗಾಗಿ ಬರೀ ಬೇಳೆ ಹಾಕಿ ಮಾಡಿದ ಹುಳಿ ಅನ್ನ ಅನ್ನುವುದೇ ಅದಕ್ಕೆ ಸೂಕ್ತವಾಗಿತ್ತು. ಅದೇ ಅವಳ ಪಾಲಿನ ಬಿಸಿಬೇಳೆ ಬಾತ್. ಅಪರೂಪಕ್ಕೊಮ್ಮೆ ಬೇಳೆ ಹಾಕಿ ಹುಳಿ ಮಾಡಿದರೆ ಹಬ್ಬ ಎಂದುಕೊಳ್ಳುವ ಪರಿಸ್ಥಿತಿ ಇದ್ದ ಅವಳಿಗೆ ಇದು ಕೊಂಚ ದುಬಾರಿಯೇ. ಹಾಗಾಗಿ ಇದನ್ನು ಮಾಡಿಕೊಳ್ಳಲು ಅವಳು ಬಹುಕಾಲ ಕಾಯಬೇಕಿತ್ತು. ಪೇಟೆಯಿಂದ ಬೇಳೆ ತರಬೇಕಿತ್ತು. ನೋಡಿ ಮಾಡು ಎಂದು ಹೇಳುವ ಗಂಡನ ಕಾಯಬೇಕಿತ್ತು.

ಕೆಲವರ ಬದುಕೇ ಹೀಗಾ ಅನ್ನಿಸುತ್ತದೆ ಈಗ ನೆನಪುಗಳ ಹರಡಿಕೊಂಡು ನೋಡಿದಾಗ. ಇನ್ನೂ ಚಿಕ್ಕವಳು ನಾನು. ಮನೆಯಲ್ಲಿ ಯಾರೂ ಇರಲಿಲ್ಲ ನಾವೇ ಇಬ್ಬರು. ಅದೇನೋ ಅವತ್ತು ಅವಳಿಗೆ ಬಿಸಿಬೇಳೆ ಬಾತ್ ಮಾಡುವ ಹುಕಿ ಬಂದು ಬಿಟ್ಟಿತ್ತು. ಅರ್ಧ ಪಾವು ಅಕ್ಕಿ ಹಾಕಿ ಮಾಡಿದರೂ ಅವಳಿಗೆ ಪುಕು ಪುಕು. ಅದ್ಯಾಕೆ ಅಷ್ಟು ಹೆದರುತ್ತಿದ್ದಳು ಇವತ್ತಿಗೂ ಅರ್ಥವಾಗುತ್ತಿಲ್ಲ. ಯಾರಿಗೂ ಹೇಳಬೇಡಾ ಪುಟ್ಟಿ ಎಂದು ಪುಸಲಾಯಿಸಿ ಬಿಸಿ ಬಾತಿಗೆ ತುಪ್ಪ ಸುರಿದು ತಿನ್ನಿಸಿದ್ದಳು. ಹೂ ಅನ್ನುತ್ತಲೇ ತಿನ್ನಿಸಿಕೊಂಡಿದ್ದೆ. ಅವತ್ತು ಅದನ್ನು ತಿನ್ನುವಾಗ ಎಂದೂ ಇಲ್ಲದ ಕಾಂತಿ ಅವಳ ಕಣ್ಣಲ್ಲಿ. ಮುಖದಲ್ಲಿ ಸಂಭ್ರಮ. ಸಂಜೆಯಾಗುತ್ತಿದ್ದ ಹಾಗೆ ಸೈಕಲ್ಲಿನ ಬೆಲ್ ಕೇಳಿದವಳು ಉಣುಗೋಲಿನ ಬಳಿಗೆ ಓಡಿ  ಹೋಗಿ ಸೈಕಲ್ ಹತ್ತಿ ಮಾವನ ಬಳಿ ಮಧ್ಯಾಹ್ನ ತಿಂದಿದ್ದು ಹೇಳಿ ಬಿಟ್ಟಿದ್ದೆ. ಒಳಗೆ ಬಂದು ನೋಡಿದರೆ ಅವಳ ಮುಖ ಕಳಾಹೀನ ಆಗಿತ್ತು. 

ಊರು ಬಿಟ್ಟು ಬೇರೆ ಊರಿಗೆ ಬಂದು ಬದುಕು ನೆಲೆಯಾಗಿ, ಪರಿಸ್ಥಿತಿ ಬದಲಾದರೂ ಈ ವಿಷಯದಲ್ಲಿ ಅವಳು ಸ್ಥಿತಿ ಏನೂ ಬದಲಾಗಿರಲಿಲ್ಲ. ನಾವೂ ನಮ್ಮ ನಮ್ಮ ದಾರಿಯಲ್ಲಿ ಸಾಗಿ ಬದುಕು ಕಟ್ಟಿಕೊಂಡು ಬೇಕನ್ನಿಸಿದ್ದು ಮಾಡಿಕೊಂಡು, ಅಥವಾ ಕೊಂಡುಕೊಂಡು ತಿನ್ನುವಾಗ ಈ ವಿಷಯ ಮರೆತು ಹೋದ ಹಾಗೆ ಅನ್ನಿಸಿಬಿಟ್ಟಿತ್ತು. ಒಮ್ಮೆ ಯಾವುದೋ ಕಾರ್ಯಕ್ರಮಕ್ಕೆ ಬಂದವಳು ಕಾಲು ಜಾರಿ ಬಿದ್ದು ತಲೆಗೆ ಪೆಟ್ಟು ಮಾಡಿಕೊಂಡು ಉಳಿಯುವ ಹಾಗಾಗಿತ್ತು. ಬೆಳಿಗ್ಗೆ ತಿಂಡಿ ತೆಗೆದುಕೊಂಡು ಹೋಗಿ ಕೊಟ್ಟರೆ ಚಪಾತಿನಾ ಅರ್ಧ ಸಾಕು ಕಣೆ ಎಂದಿದ್ದಳು. ಎಷ್ಟು ಸೇರುತ್ತೋ ಅಷ್ಟು ತಿನ್ನು ಉಳಿದಿದ್ದು ಬಿಡು ಮಾರಾಯ್ತಿ ಪರ್ವಾಗಿಲ್ಲ ಎಂದರೆ ಯಾಕೆ ವೇಸ್ಟ್ ಮಾಡೋದು ಎಂದು ಮುಖ ಸಣ್ಣ ಮಾಡಿದವಳ ನೋಡಿ ತಣ್ಣಗಿನ ವಿಷಾದ ಕರುಳ ಆಳದಲ್ಲಿ  ಮುರಿದಿತ್ತು.

ಚೂರು ಬಾಯಿಗೆ ಹಾಕಿಕೊಂಡವಳು ಇದು ಎಂತ ಪುಟ್ಟಿ ಎಷ್ಟು ಮೆತ್ತಗಿದೆ ಚೆಂದವಿದೆ ಇನ್ನೊಂದು ತಂದು ಕೊಡ್ತೀಯಾ, ಯಾವತ್ತ್ತು ತಿಂದಿಲ್ಲ ಎಂದಾಗ ಮಾತ್ರ ಸಂಕಟ ಉಕ್ಕಿ ಅಳು ಧುಮ್ಮಿಕ್ಕಿತ್ತು. ಇದು ಪರೋಟ ಕಣೆ ತರ್ತೀನಿ ಇರು ಎಂದು ಕಣ್ಣು ಒರೆಸಿಕೊಂಡು ಬಂದು ಚಿಕ್ಕಿಗೆ ಹೇಳಿದರೆ ಅವಳ ಕಣ್ಣಲ್ಲೂ ನೀರು.  ಬೇಕಿದ್ದು, ಬೇಡದ್ದು ಎಲ್ಲವನ್ನೂ ನೋಡಿ ಬೇಕೆನಿಸಿದ ಕೂಡಲೇ ತರಿಸಿ ತಿನ್ನುವ ನಾವು ಯಾವುದಾದರೂ ತಿಂಡಿಯನ್ನು ಇಷ್ಟು ಇಷ್ಟಪಟ್ಟು, ಶ್ರದ್ಧೆಯಿಂದ ತಿಂದಿದ್ದೆವಾ ಅನ್ನಿಸಿ ನಾಚಿಕೆಯಾಯಿತು. ತನ್ನಿಡೀ ಎಂಟು ದಶಕಗಳ ಬದುಕನ್ನು ಒಂದು ಬಿಸಿಬೇಳೆಬಾತ್ ಬಿಟ್ಟು ಇನ್ಯಾವುದಕ್ಕೂ ಇಷ್ಟ ಪಡದ, ಅವಕಾಶ ಇದ್ದಾಗಲೂ ಬೇಕು ಅನ್ನದ, ಕೊಟ್ಟರೂ ತೆಗೆದುಕೊಳ್ಳದ ಅವಳ ಸಂಯಮ ಈಗ ಅಚ್ಚರಿ ಅನ್ನಿಸುತ್ತದೆ. ತನ್ನಿಷ್ಟದ ತಿಂಡಿಯನ್ನೂ ಯಾವಾಗಲೋ ಒಮ್ಮೆ ಮಾಡಿಕೊಂಡು ತಿನ್ನುತ್ತಿದ್ದ ಅವಳ ದೃಢತೆ ಮೈ ಝಂ ಅನ್ನುವ ಹಾಗೆ ಮಾಡುತ್ತದೆ.

ನೀವ್ಯಾಕೆ ಮಾಡೋಲ್ಲ ನಿಮಗೆ ಇಷ್ಟವಿಲ್ವಾ ಎಂದು ಅವರು ಮಾತು ಮುಂದುವರಿಸಿದ್ದರು. ಅದನ್ನು ನೋಡಿದಾಗ ಅಜ್ಜಿಯ ನೆನಪಾಗುತ್ತದೆ ಎಂದರೆ ಅವರಿಗೆ ನಗು ಬರಬಹುದಾ ಎಂದು ಸುಮ್ಮನೆ ಅವರನ್ನು ನೋಡಿ ನಕ್ಕಿದ್ದೆ. ಒಹ್ ತೆಲುಗಲು ಚೆಪ್ಪಡಾನಿಕಿ ರಾವಟ್ಲೆದಾ ಎಂದು ನಕ್ಕರು. ಇಷ್ಟ ಅಂತ ಕಷ್ಟ ಮರೆಯೋಕೆ ಆಗುತ್ತೇನೆ ಎಂದವಳ ನೆನಪಾಯಿತು. ಒಂದು ಜನರೇಶನ್ ಬದುಕಿದ್ದೇ ಹಾಗಲ್ಲವಾ ತಮ್ಮ ಆಸೆ, ಆಕಾಂಕ್ಷೆಗಳನ್ನು ಕುಟುಂಬದ ಏಳಿಗೆಯ ಸಲುವಾಗಿ ಮರೆತು ಅನ್ನಿಸಿತು. ಬೇಕನಿಸಿದ್ದು ಬೇಕಾದಾಗ ಸಿಕ್ಕಿದರೆ ಪ್ರೀತಿ ಇರಲ್ಲ ಕಣೆ ಬೇಜಾರು ಹುಟ್ಟುತ್ತೆ ಎನ್ನುತ್ತಿದ್ದಳು. ಅದು ಬಿಸಿಬೇಳೆ ಬಾತ್ ಸಲುವಾಗಿ ಹೇಳಿದ್ದು ಎಂದು ಎಷ್ಟೋ ವರುಷಗಳವರೆಗೆ  ನಂಬಿ ಬಿಟ್ಟಿದ್ದೆ. 

Comments

Popular posts from this blog

ಮಾತಂಗ ಪರ್ವತ

ರಂಜದ ಹೂ

ಬರಿದೆ ಆಡುವ ಮಾತಿಗರ್ಥವಿಲ್ಲ...