ಮನಸ್ಸಿಗೊಂದು ಕೋಣೆ ಬೇಕು

ಪ್ಯಾಸೇಜ್ ನ ಕೊನೆಯಲ್ಲಿ ಅದೊಂದು ಪುಟ್ಟ ರೂಮ್. ಪುಟ್ಟದು ಎಂದರೆ ನಾಲ್ಕು ಜನ ಹೋದರೆ ಇನ್ನೊಬ್ಬರು ಹೋಗಲು ಯೋಚಿಸುವ ಹಾಗಿದ್ದ ರೂಮ್. ಅಲ್ಲೊಂದು ಆಳೆತ್ತರದ ಕನ್ನಡಿ. ಭರತನಾಟ್ಯಮ್  ಕ್ಲಾಸ್ ಗೆ ಹೋಗುವ ಮುನ್ನ ಯುನಿಫಾರ್ಮ್ ಸೀರೆ ಉಡಲು ಆ ರೂಮ್ ಎಂದು ಬಿಡಲಾಗಿತ್ತು. ಅದಕ್ಕೊಂದು ಕಿಟಕಿ ತೆರೆದರೆ ಪಕ್ಕದ ರಸ್ತೆ ನಿಚ್ಚಳವಾಗಿ ಕಾಣಿಸುತಿತ್ತು. ಬೆಳಿಗ್ಗೆ ಕ್ಲಾಸ್ ಗೆ ಹೋಗುವ ಮುನ್ನ ಏನೂ ಗೊತ್ತಾಗದಿದ್ದರೂ ಕ್ಲಾಸ್ ಮುಗಿಸಿ ಇಳಿಯುವ ಬೆವರನ್ನು ಒರೆಸಿಕೊಳ್ಳುತ್ತಾ, ಅಲೊಸ್ಟ್ ನೆಂದಿರುತ್ತಿದ್ದ  ಡ್ರೆಸ್ ಬದಲಾಯಿಸುವಾಗ ಮಾತ್ರ ಘಮ್ಮನೆ ವಾಸನೆ. ಕಿಟಕಿ ಬಾಗಿಲು ಇದ್ದರೂ ತೆಗೆಯುವ ಹಾಗಿಲ್ಲದ ಮುಚ್ಚಿದ ಪ್ರಪಂಚ.

ಹಾಗೆ ಮುಚ್ಚಿದ ಪ್ರಪಂಚದಲ್ಲಿ ಕುಳಿತು ಗೆಳತಿಯರ ಲೋಕ ಬಿಚ್ಚಿಕೊಳ್ಳುತಿತ್ತು. ಐದು ನಿಮಿಷ ಸಿಕ್ಕಿದರೂ ಇನ್ನೊಂದು ಕ್ಲಾಸ್ ಶುರುವಾಗುವ ಎರಡು ನಿಮಿಷ ಇದ್ದರೂ ನಾವೆಲ್ಲರೂ ಅಲ್ಲಿಯೇ ಸೇರುತ್ತಿದ್ದೆವು. ಅಲ್ಲಿ ಸೇರಿ ಬಾಗಿಲು ಹಾಕಿಕೊಂಡರೆ ನಮ್ಮದೇ  ಲೋಕ ತೆರೆದುಕೊಳ್ಳುತ್ತಿತ್ತು. ಯಾವ ಮಾತು, ಯಾವ ವಿಷಯ ಉಹು ಅದ್ಯಾವುದಕ್ಕೂ ಗೋಡೆ, ಬಾಗಿಲು ಇರುತ್ತಿರಲಿಲ್ಲ. ಖುಲ್ಲಂ ಖುಲ್ಲಂ ಬಯಲು. ನಮ್ಮ ನಗು ಕೇಕೆ ಹೊರಗೆ ಹೋಗಲಾರದು ಎನ್ನುವ ನಂಬಿಕೆ. ಹೊರಗೆಲ್ಲೂ  ಆಡಲಾಗದ ಮಾತುಗಳಿಗೆ ಅಲ್ಲಿ ಪ್ರಸವದ ಸುಖ. ಕಿಟಕಿಯನ್ನು ಕೊಂಚವೇ ತೆರೆದಿಟ್ಟು  ಕುಳಿತರೆ ಇಡೀ ಲೋಕಕ್ಕೆ ಬೆನ್ನಾಗಿ ನಮ್ಮದೇ ಲೋಕ ಸೃಷ್ಟಿಸಿಕೊಂಡು ಸುಖಿಸುತ್ತಿದ್ದೆವು.

ಬರೀ ನಗು ಮಾತ್ರವಲ್ಲ, ಕೋಪ, ವಿಷಾದ, ಅಸೂಯೆ, ತಲ್ಲಣ, ಪ್ರೇಮ, ಜೋಕ್ ಎಲ್ಲವೂ ಅಲ್ಲಿ ಸರಾಗವಾಗಿ ಹರಿದ ಹಾಗೆ ಇನ್ನೆಲ್ಲೂ  ಹರಿಯುತ್ತಿರಲಿಲ್ಲ.ಹೊರ ಪ್ರಪಂಚದ ಎದುರಿಗೆ ಬೇಕಾದ ಯಾವ ಮುಖವಾಡಗಳು, ಸಜ್ಜನಿಕೆಯ ನಡುವಳಿಕೆಗಳನ್ನು ಆ ರೂಮ್ ಬಯಸುತ್ತಿರಲಿಲ್ಲ. ಅದೊಂದು ಹೊರ ಹರಿವು. ನೀರು ನಿಲ್ಲದಂತೆ ಪಾಚಿ ಕಟ್ಟದಂತೆ ನೋಡಿಕೊಳ್ಳುವ ಕ್ರಸ್ಟ್ ಗೇಟ್. ಎಲ್ಲಾ ರಹಸ್ಯಗಳು ಮೊದಲು ಬಿಚ್ಚಿಕೊಳ್ಳುತ್ತಿದ್ದದ್ದೇ ಅಲ್ಲಿ. ಉಟ್ಟ  ಮೊತ್ತ ಮೊದಲು ಬಾರಿಗೆ ಸ್ಟ್ರೈಕ್ ಮಾಡಬೇಕು, ಸಿಸ್ಟೆರ್ ವಿರುದ್ಧ ಸಿಡಿದೇಳಬೇಕು ಎಂಬ ಕ್ರಾಂತಿಕಾರಿ ಯೋಚನೆ ಹುಟ್ಟಿದ್ದು ಅಲ್ಲೇ. ಹಾಗಾಗಿ ಅದು ಸಕಲ ಭಾವಗಳ ಸೃಷ್ಟಿ ಕೇಂದ್ರ. ಬಾಗಿಲು ಮುಚ್ಚಿದರೆ ಮತ್ಯಾರು ಅಲ್ಲಿಗೆ ಬರುವ ಹಾಗಿಲ್ಲದ ಕಾರಣವೂ ಆ ನಿರಾಳತೆಗೆ ಕಾರಣವಾಗಿತ್ತು. 

ಅದೇನು ಮಾಡ್ತೀರಿ ಅಷ್ಟೊಂದು ಜನ ಆ ಇಕ್ಕಟ್ಟಿನಲ್ಲಿ ಕುಳಿತು ಎಂದು ಕೇಳುವ ಟೀಚರ್ಸ್ ಗಳಿಗೇನೂ ಕಡಿಮೆಯಿರಲಿಲ್ಲವಾದರೂ ಅವರಿಗೆ ಉತ್ತರ ಮಾತ್ರ ಸಿಗುತ್ತಿರಲಿಲ್ಲ. ಯಾರಾದರೂ ಬಂದು ಬಾಗಿಲಿಗೆ ಕಿವಿ ಒಡ್ಡಿದರೂ ನಮಗದು ಗೊತ್ತಾಗಿ ಬಿಡುತಿತ್ತು. ತಕ್ಷಣವೇ ಅಲ್ಲೊಂದು ನಿಶಬ್ದವೋ ಇಲ್ಲ ಅರ್ಥವಿಲ್ಲದ ಮಾತುಗಳು ಹುಟ್ಟಿ ಬಂದ ದಾರಿಗೆ ಸುಂಕವಿಲ್ಲವೆಂದು ಹಿಂದಿರುಗುತ್ತಿದ್ದರು. ಅಲ್ಲಿ ಆಡಿದ ಯಾವ ಮಾತುಗಳು ಆ ಬಾಗಿಲನ್ನು ದಾಟಿ ಬಂದ ಉದಾಹರಣೆಯೇ ಇಲ್ಲವಾದ್ದರಿಂದ ಡಿಗ್ರಿಯ ಮೂರೂ ವರ್ಷಗಳು ಆ ಕೋಣೆಯೆಂದರೆ ಆಪ್ತಭಾವ. ಕೊನೆಯ ದಿನ ಆ ಕೋಣೆಯಲ್ಲೆಯೇ ಕುಳಿತು ಪ್ರತಿವರ್ಷ ಒಂದು ದಿನ ಭೇಟಿ ಆಗಲೇಬೇಕು ಎನ್ನುವ ಪ್ರತಿಜ್ಞೆ ಮಾಡಿ ಹೊರಗೆ ಬರುವಾಗ ಕಾಲೇಜು ಬಿಡುವ ದುಃಖಕ್ಕಿಂತ ಆ ಕೋಣೆಗೆ ವಿದಾಯ ಹೇಳುವುದೇ ಬದುಕಿನ ಅತಿ ದೊಡ್ಡ ಕಷ್ಟ ಅನ್ನಿಸಿತ್ತು.


ಬದುಕಿನಲ್ಲಿ ನಟಿಸುವ ಅನಿವಾರ್ಯತೆ ಇದ್ದೆ ಇರುತ್ತದೆ. ಮುಖವಾಡ ಧರಿಸದೇ ಇರುವ ಮನುಷ್ಯರು ಇಲ್ಲವೇ ಇಲ್ಲ ಎನ್ನುವಷ್ಟು ವಿರಳ. ಹಾಗಾಗಿ ಮುಖವಾಡ ಕಳಚಲು ಒಂದು ಕೋಣೆಯ ಅಗತ್ಯವಿದೆ. ಅದನ್ನು ಸೃಷ್ಟಿಸಿಕೊಳ್ಳದೆ ಹೋದರೆ ನಮಗೆ ನಾವೇ ಅಪರಿಚಿತರಾಗುವ ಸಂದರ್ಭ ಬರಬಹುದು ಅಥವಾ ನಟನೆಯೇ ಬದುಕಾಗಿಬಿಡಬಹದು. ಯಾವುದೇ ಆದರೂ ಕಳೆದುಕೊಳ್ಳುವುದು ನಾವೇ. ಅದನ್ನು ತುಂಬಿಕೊಳ್ಳಬೇಕಾದವರು ನಾವೇ. ಹಾಗಾಗಿ ಒಂದು ಪುಟ್ಟ ರೂಮ್ ಅನ್ನು ಸೃಷ್ಟಿಸಿಕೊಳ್ಳಲೇ ಬೇಕು. ಅದೊಂದು ಜಾಗದಲ್ಲಿ ಯಾವುದೇ ರೀತಿ ಹಿಂಜರಿಕೆ ಇಲ್ಲದೆ ಬಯಲಾಗುವ ಸ್ವಾತಂತ್ರ್ಯ ಇರಬೇಕು. ಬಾಗಿಲು ಯಾರಿಗೆ ತೆರೆಯಬೇಕು ಎನ್ನುವುದು ಗೊತ್ತಿರಬೇಕು. 

ಯಾವಾಗಲಾದರೂ ಬೇಸರ ಕಾಡಿದಾಗ, ಅರ್ಥವಾಗದ ಮೌನ ಆವರಿಸಿದಾಗ, ಭಾರ ಅನ್ನಿಸಿದಾಗ ತಟ್ಟನೆ ಆ ಕೋಣೆಯನ್ನು ನೆನಪಿಸಿಕೊಳ್ಳುತ್ತೇನೆ. ಮುಖದಲ್ಲಿ ಪಕ್ಕನೆ ಮಿಂಚಿನ ನಗು ಮೂಡಿ ಮನಸ್ಸು ತಿಳಿಯಾಗ ತೊಡಗುತ್ತದೆ. ಬದುಕಿನ ಇಷ್ಟು ವರ್ಷಗಳ ನಂತರವೂ ಆ ಕೋಣೆ  ಕಾಡುತ್ತದೆ. ಒಮ್ಮೆ ಮತ್ತೆ ಅಲ್ಲಿ ಹೋಗಿ ಹಾಗೆ ಕುಳಿತು ಹರಟಬೇಕು ಅನ್ನಿಸುತ್ತದೆ. ಕಳೆದ ವರ್ಷ  ಕಾಲೇಜ್ ಗೆ ಹೋಗಿಬಂದ ಗೆಳತೀ ಒಬ್ಬಳು  ಈಗ ಡ್ರೆಸ್ಸಿಂಗ್ ರೂಮ್ ಬೇರೆ ಮಾಡಿದ್ದಾರೆ ಎಂದಾಗ ಒಂದು ಕ್ಷಣ ಪಿಚ್ ಅನ್ನಿಸಿದರೂ, ಈ ಸಲವಾದರೂ ಎಲ್ಲರೂ ಸಿಗಬೇಕು ಹಾಗೂ ಆ ರೂಮ್ ನಲ್ಲಿ ಕುಳಿತು ಹರಟಬೇಕು ಎನ್ನುವ ನಮ್ಮ ಪ್ರತಿಜ್ಞೆ ಮಾತ್ರ ಪ್ರತಿ ವರ್ಷವೂ renew  ಆಗುತ್ತಲೇ ಇರುತ್ತದೆ. ಆ ರೂಮ್ ಇರುವಷ್ಟು ದಿನವೂ ಈ ಪ್ರತಿಜ್ಞೆಯೂ ಇರುತ್ತೇನೋ ಅನ್ನಿಸಿ ನಗು ಬರುತ್ತದೆ. ಮನಸ್ಸಿಗೊಂದು ಕೋಣೆ  ಎಷ್ಟು ಅಗತ್ಯವಲ್ಲವಾ ......

Comments

Popular posts from this blog

ಮಾತಂಗ ಪರ್ವತ

ರಂಜದ ಹೂ

ಬರಿದೆ ಆಡುವ ಮಾತಿಗರ್ಥವಿಲ್ಲ...