ಅವರು ಬುದ್ಧಿಸಂ ಬಗ್ಗೆ ಪಾಠ ಮಾಡೋವಾಗ ಅದೇ ಒಳ್ಳೆಯದು ಅನ್ಸುತ್ತೆ, ಜೈನಿಸಂ ಬಗ್ಗೆ ಹೇಳೋವಾಗ ಇದೆ ಬೆಟರ್ ಅನ್ಸುತ್ತೆ, ಹಿಂದೂ ಧರ್ಮದ ಬಗ್ಗೆ ಕೇಳುವಾಗ ಇದಕ್ಕಿಂತ ಒಳ್ಳೆಯದು ಜಗತ್ತಿನಲ್ಲಿ ಬೇರೆ ಯಾವುದಿದೆ ಅನ್ಸುತ್ತೆ. ಯಾವುದು ಸತ್ಯ ಅಂತ ನಮ್ಮಲ್ಲಿ ಚರ್ಚೆ ನಡೆಯುತಿತ್ತು. ಅವರು ಪಾಠ ಮಾಡುತ್ತಿದ್ದದ್ದೇ ಹಾಗೆ. ಇತಿಹಾಸ ಬರೀ ಇಸವಿ, ಘಟನೆಗಳು ಆಗದೆ ಕಣ್ಣೆದೆರು ನಡೆದ ಹಾಗೆ. ಮತ್ತೆ ಅದನ್ನು ಓದಬೇಕು ಅನ್ನುವ ಪರಿಸ್ಥಿತಿಯೇ ಇಲ್ಲ. ಹಿಸ್ಟರಿ ಯಲ್ಲಿ ಫೇಲ್ ಆಗುವುದಿರಲಿ ಜಸ್ಟ್ ಪಾಸ್ ಅನ್ನುವ ಸುದ್ದಿಯೇ ಇರುತ್ತಿರಲಿಲ್ಲ. ಹೇಳುವ ಪ್ರತಿ ವಿಷಯವನ್ನು ಅಷ್ಟು ಶ್ರದ್ಧೆಯಿಂದ ಅಧ್ಯಯನ ಮಾಡಿ ಹೇಳುತ್ತಿದ್ದರು.

ಜಗತ್ತು ಇನ್ನೂ ಅರ್ಥವಾಗದ ವಯಸ್ಸು. ಅವರಿಗೆ ನಾನು ಅಂದ್ರೆ ತುಂಬಾ ಇಷ್ಟ ಗೊತ್ತಾ ಅಣ್ಣನ ಬಳಿ ಕೊಚ್ಚಿ ಕೊಳ್ಳುತಿದ್ದೆ. ಕೇಳುವವನ ಮುಖದಲ್ಲಿ ಸಣ್ಣ ನಗು. ನಿಂಗೆ ಹೊಟ್ಟೆಕಿಚ್ಚು ಅಷ್ಟೇ ನಂಗೊತ್ತು ಅವರಿಗೆ ನಾನು ಅಂದ್ರೆ ತುಂಬಾ ಇಷ್ಟ ಅಂತ ಕೋಪ ಉಕ್ಕುತಿತ್ತು. ಅಯ್ಯೋ ಅವರಿಗೆ ನಿನ್ನ ಕಂಡ್ರೆ ಇಷ್ಟ ಇಲ್ಲ ಅಂತ ನಾನೆಲ್ಲಿ ಹೇಳಿದೆ ಇಷ್ಟ ಹೌದು ಆದರೆ ನೀನು ಮಾತ್ರವೇ ಇಷ್ಟ ಅಲ್ಲ. ಅವರು ನನ್ನ ಜೊತೆಯೂ ಹಾಗೆ ಇರ್ತಾರೆ, ಮತ್ತೊಬ್ಬರ ಜೊತೆಗೂ ಹಾಗೆ ಇರ್ತಾರೆ. ಅವರು ನಮ್ಮ ಜೊತೆಗೆ ಇರುವಷ್ಟು ಹೊತ್ತು ಅವರಿಗೆ ನಮ್ಮನ್ನು ಕಂಡ್ರೆ ಮಾತ್ರ ಇಷ್ಟ, ನಮ್ಮ ಜೊತೆ ಮಾತ್ರ ಇಷ್ಟು ಆತ್ಮೀಯವಾಗಿ ಇರ್ತಾರೆ ಅನ್ನೋ ಭಾವ ಮೂಡಿಸುವಹಾಗೆ ಬೇರೆಯವರ ಜೊತೆಗೆ ಇದ್ದಾಗ ಅವರಿಗೂ ಹಾಗೆ ಅನ್ನಿಸುತ್ತೆ ಎಂದು ಹೇಳುತ್ತಾ ಇನ್ನಷ್ಟು ಜೋರಾಗಿ ನಕ್ಕಿದ್ದ. ಸತ್ಯ ಅರ್ಥಮಾಡಿಕೊಳ್ಳಲು ಇಷ್ಟವಿಲ್ಲದೆ ಸಂಕಟವಾಗಿತ್ತು.

ಮಗುವೇ ಯಾರಾದ್ರೂ ನಮ್ಮ ಬಗ್ಗೆ ತುಂಬಾ ಆತ್ಮೀಯವಾಗಿ ವರ್ತಿಸ್ತಾ ಇದಾರೆ ಅಂತ ಗೊತ್ತಾದ್ರೆ ಅದಕ್ಕೆ ಪ್ರತಿಕ್ರಿಯಿಸೋ ಮೊದಲು ಯಾಕೆ ಹಾಗೆ ಮಾಡ್ತಿದಾರೆ ಅನ್ನೋ ಕಾರಣ ಹುಡುಕಬೇಕು, ಪ್ರಪಂಚ ಕೆಟ್ಟಿಲ್ಲ ಹೌದು ಆದ್ರೆ ನಾವು ಅಂದುಕೊಂಡಷ್ಟು ಒಳ್ಳೆಯದಾಗು ಇಲ್ಲ ನಮ್ಮ ಎಚ್ಚರಿಕೆಲಿ ನಾವಿರಬೇಕು ಅಷ್ಟೇ, ಹದಿಹರೆಯಕ್ಕೆ ಕಾಲಿಡುತ್ತಿದ್ದವಳನ್ನು ಪಕ್ಕದಲ್ಲಿ ಕೂರಿಸಿಕೊಂಡು ಹೇಳಿದ್ದರು ಕೇಶುವಣ್ಣ. ಗೊಂದಲದ ಮನಸ್ಸಿಗೆ ಎಲ್ಲೋ ಸಣ್ಣ ದಾರಿ ತೋರಿದ ಹಾಗಿತ್ತು ಅವತ್ತು.

ಮನಸ್ಸೇ ಹಾಗೆ. ಅದು ಗೊಂದಲಕ್ಕೆ ಬೀಳುವುದು, ನಂಬುವುದು, ಕಳೆದುಕೊಳ್ಳುವುದು  ಕೊರಗುವುದು,  ಎಲ್ಲವೂ ತುಸು ಬೇಗವೇ.  ಕೊಂಚ ಭರವಸೆ ಮೂಡುವ ಹೊತ್ತಿಗೆಲ್ಲಾ  ಅಂಗಳಕ್ಕೆ ಬಿಟ್ಟು ಕೊಂಡು ಒಳಗೆ ಕರೆದು ಬಿಡುತ್ತದೆ. ಒಮ್ಮೆ ಒಳಮನೆಗೆ ಬಂದಮೇಲೆ ಇನ್ನೇನಿದೆ ಎಲ್ಲವೂ ಕಣ್ಣೆದೆರು ನಿಚ್ಚಳವಾಗಿ ಕಾಣಿಸುತ್ತದೆ, ತಿಳಿಯುತ್ತದೆ. ಆದರೆ ಹಾಗೆ ಬಂದ ವ್ಯಕ್ತಿಯೂ ಅಷ್ಟೇ ನಂಬಿಕಸ್ಥನಾ .... ಸಂಭ್ರಮದಲ್ಲಿ  ಕೇಳಲು ಮರೆತುಬಿಡುತ್ತೇವೆ. ಕೆಲವೊಮ್ಮೆ ಆಗ ನಂಬಿಕೆಯಿಂದ ಇದ್ದರು ಅದೇ ನಂಬಿಕೆ ಕೊನೆಯವರೆಗೂ ಉಳಿಯುತ್ತದಾ, ಅಹಂ ಘಾಸಿಯಾಗದ ಹಾಗೆ ಇರುತ್ತದಾ ಅದು ಕಾಲ, ಪರಿಸ್ಥಿತಿ, ಮನಸ್ಥಿತಿ ಎಲ್ಲವನ್ನು ಅವಲಂಬಿಸಿರುತ್ತದೆ. 

ಅವರ ಜೊತೆ ಹುಷಾರಾಗಿರಿ, ನಿಮಗೆ ಕ್ಲೋಸ್ ಅನ್ನುವ ಹಾಗೆ ಇರ್ತಾರೆ , ಆದರೆ ನಿಮಗಷ್ಟೇ ಅಲ್ಲ ಎಂದು ಒಬ್ಬರು ಎಚ್ಚರಿಸಿದ್ದರು. ನಾನು ಯಾರನ್ನೂ ಅಷ್ಟು ಸುಲಭವಾಗಿ ಒಳಗೆ ಬಿಟ್ಟುಕೊಳ್ಳುವುದಿಲ್ಲ ಬಿಟ್ಟು ಕೊಂಡರು ಒಂದು ಅಂತರ ಸದಾ ಕಾಯ್ದುಕೊಳ್ತೀನಿ ಅಂದಿದ್ದೆ. ನಾನು ಕಲಿಬೇಕು ಇದನ್ನು ನೋಡಿ ಎಂದು ಅವರು ನಿಟ್ಟುಸಿರಾಗಿದ್ದರು. ಎಷ್ಟೇ ಪ್ರೀತಿ, ಆತ್ಮೀಯತೆ,  ಸಲಿಗೆ, ನಂಬಿಕೆ  ಇದ್ದರು ನಡುವೆ ಒಂದು ಅಂತರ ಇರಲೇ ಬೇಕು. ಅದು ವ್ಯಕ್ತಿಯಿಂದ ವ್ಯಕ್ತಿಗೆ ಬೇರೆಯಾಗಬಹುದು ಆದರೆ ಅಂತರವಿಲ್ಲದ ಯಾವ ಸಂಬಂಧವು ಬಹುಕಾಲ ಉಳಿಯುವುದಿಲ್ಲ, ಆರೋಗ್ಯಕರವಾಗಿರುವುದಿಲ್ಲ. ಸಂಬಂಧಗಳು ಉಸಿರುತಾಕುವಷ್ಟು ಹತ್ತಿರವಿರಬೇಕು ನಿಜ ಮಗು ಆದರೆ ಉಸಿರುಗಟ್ಟಿಸದಷ್ಟು ದೂರವು ಇರಬೇಕು ಎಂದಿದ್ದರು ಭಾರತಿ ರಮಣಾಚಾರ್ ತಾತ. ಅವತ್ತು ಈ ಅಂತರದ ಪ್ರಾಮುಖ್ಯತೆ ಅನಿವಾರ್ಯತೆ ಅರ್ಥವಾಗಿತ್ತು.

ಎಲ್ಲವನ್ನೂ ಅನುಮಾನದಲ್ಲೇ ನೋಡಬೇಕಾ ಎನ್ನುವುದು ಆ ವಯಸ್ಸಿನಲ್ಲಿ ತುಸು ಗೊಂದಲ ಹುಟ್ಟಿಸುತಿತ್ತು. ಇದು ಸರಿಯಾ ಎನ್ನುವ ಪ್ರಶ್ನೆ ಮೂಡುತಿತ್ತು,   ಅನುಮಾನ ಪಡಬೇಕು ಅಂತಿಲ್ಲ ಆದರೆ ಎಚ್ಚರಿಕೆ ಇರಬೇಕು ಎನ್ನುವುದು ವಯಸ್ಸು ಬಹು ಬೇಗ ಕಲಿಸಿತು. ಅಂಗಳಕ್ಕೆ, ಒಳಮನೆಗೆ ಯಾರೇ ಬಂದರು ನಮ್ಮದೊಂದು ಕೋಣೆ ಇರಬೇಕು ಮತ್ತದು ನಮಗಷ್ಟೇ ಇರಬೇಕು. ಒಂದು ಸುರಕ್ಷಿತ ಅಂತರ ಕೇವಲ ಮೆಟ್ರೋ ದಲ್ಲಿ ಮಾತ್ರವಲ್ಲ ಬದುಕಲ್ಲಿಯೂ ಬೇಕು. ಹಾಗಿದ್ದಾಗ ಮಾತ್ರ ಒಂದು ಆರೋಗ್ಯಕರ ಸಂಬಂಧ ಬೆಳೆಯುತ್ತದೆ. ನೋಡುಗರಿಗೆ, ಬೆಳಸಿದವರಿಗೆ ಎಲ್ಲರಿಗು ಮೋಹಕವಾಗಿ ಕಾಣಿಸುತ್ತದೆ. ಭ್ರಮೆಗಳು ಕಡಿಮೆಯಾಗುತ್ತದೆ ಅನ್ನಿಸುವಾಗಲೇ ತಾತ ಮತ್ತಷ್ಟು ಎದೆಯೊಳಗೆ ಇಳಿಯುತ್ತಾರೆ. ದಾರಿ ಸ್ಪಷ್ಟವಾಗುತ್ತದೆ.  

Comments

Popular posts from this blog

ಮಾತಂಗ ಪರ್ವತ

ರಂಜದ ಹೂ

ಬರಿದೆ ಆಡುವ ಮಾತಿಗರ್ಥವಿಲ್ಲ...