ಅವನು ನನಗಿಂತ ಮೂರೋ ನಾಲ್ಕು ವರ್ಷ ದೊಡ್ಡವನು. ಸಂಜೆ ಶಾಲೆಯಲ್ಲಿ ಆಟಕ್ಕೆ ಬಿಟ್ಟಾಗ ಅದ್ಯಾವ ಕಾರಣವೋ  ಏನೋ ಆಟದ ಮಧ್ಯದಲ್ಲಿ  ಅಣ್ಣನಿಗೆ ಹೊಡೆದಿದ್ದ. ಇವನೋ ಮೃದು ಸ್ವಭಾವ. ತಿರುಗಿ ಬೈಯುವುದು ಇರಲಿ ನೋವಾಗುತ್ತಿದ್ದರೂ  ಅತ್ತರೆ ರೌಡಿ ತಂಗಿಗೆ ಗೊತ್ತಾಗಿ ಏನು ಅವಾಂತರ ಆಗುತ್ತದೋ ಎಂದು ಅಳು ನುಂಗಿ ಮನೆಯ ಕಡೆ ನಡೆದಿದ್ದ. ಗುಂಪಾಗಿ ಹೋಗುವಾಗ, ಶಾಲೆಯಲ್ಲಿ ಇರುವಾಗ ಎಲ್ಲವು ಓಪನ್ ಸೀಕ್ರೆಟ್ ಅಷ್ಟೇ. ಅದರಲ್ಲೂ ಇಂತಹ ವಿಷ್ಯಗಳು ಹಬ್ಬುವ ವೇಗ ಗಾಳಿಯ ವೇಗಕ್ಕೂ ಜಾಸ್ತಿಯೇ. ಅಂತೂ ವಿಷಯ ಗೊತ್ತಾಗುವಾಗ ಶಾಲೆ ಬಿಟ್ಟು ಮನೆಯ ಅರ್ಧ ದಾರಿ ತಲುಪಿಯಾಗಿತ್ತು.

ಚಿಕ್ಕಂದಿನಿಂದಲೂ ತುಸು ತಾಳ್ಮೆ ಕಡಿಮೆಯೇ. ಅದರಲ್ಲೂ ತಪ್ಪಿಲ್ಲದಿದ್ದರೆ ಮುಗಿದೇ ಹೋಯಿತು. ಅದು ಯಾರಾದರೂ ಸರಿ ಸುಮ್ಮನೆ ಒಪ್ಪಿಕೊಳ್ಳುವುದು ಗೊತ್ತೇ ಇರಲಿಲ್ಲ. ಒಮ್ಮೆ ನನ್ನವರು ಅಂದುಕೊಂಡರೆ ಮುಗಿದು ಹೋಯಿತು. ಅವರಿಗೆ ಏನಾದರೂ ಅದು ನನಗೆ ಆದ ಹಾಗೆ. ಹಾಗಾಗಿ ಕುದಿಕುದಿಯುತ್ತಲೇ ಮನೆಗೆ ಹೋಗಿದ್ದೆ. ಮುಖ ನೋಡಿದ ಅಜ್ಜಿಗೆ ಏನೋ ಆಗಿದೆ ಎಂದು ಅರ್ಥವಾದರೂ ಏನಾಯಿತು ಎಂದು ತಿಳಿದಿರಲಿಲ್ಲ. ನಿನ್ನಪ್ಪನದೇ ಬುದ್ಧಿ ಇರಬೇಕು, ತಾಳ್ಮೆ ಕಲಿ, ಎಲ್ಲದಕ್ಕೂ ಮುಂದೆ ಹೋಗ್ತಿ ಆಮೇಲೆ ನಿಷ್ಠುರ ಆಗ್ತಿ ಎಂದು ಗೊಣಗುತ್ತಲೇ ಊಟ ಬಡಿಸಿದ್ದಳು. ಎಷ್ಟೇ ಉಪದೇಶ ಮಾಡಿದರು ಅದು ಗೋರ್ಕಲ್ಲ ಮೇಲೆ ಮಳೆ ಹೊಯ್ದ ಹಾಗೆ ಎಂದು ಗೊತ್ತಿದ್ದರೂ ಅವಳು ಹೇಳುವುದು ಬಿಡುತ್ತಿರಲಿಲ್ಲ ನಾನು ಮಾಡುವುದು ನಿಲ್ಲಿಸುತ್ತಿರಲಿಲ್ಲ.

ಯಾವುದನ್ನು ಸುಮ್ಮನೆ ತಗೊಂಡು ಗೊತ್ತೇ ಇರದ ಕಾಲ. ವಾಪಸ್ ಕೊಡುವ ತನಕ ಸಮಾಧಾನವಿಲ್ಲದ ವಯಸ್ಸು. ಬೆಳಿಗ್ಗೆ ಎದ್ದು ಶಾಲೆಗೆ ಹೋಗುವಾಗ ಅಣ್ಣನಿಗೆ ಭಯ. ಇನ್ನೇನು ರಸ್ತೆ ದಾಟಿ ಶಾಲೆಯ ಗೇಟಿನ ಸಮೀಪ ಹೋಗಬೇಕು ಹೆಗಲಿಗೆ ಚೀಲ ಹಾಕಿಕೊಂಡು ಬರುವ ಆವ ಕಾಣಿಸಿದ. ಅದು ನಡುರಸ್ತೆ ಅನ್ನುವುದೂ  ಮರೆತು ನಿಲ್ಲಿಸಿಕೊಂಡು ಕೆನ್ನೆಗೆ ಎರಡು ಬಿಟ್ಟಿದ್ದೆ. ಇನ್ನೊಂದು ಸಲ ಅವನ ಸುದ್ದಿಗೆ ಹೋದರೆ ಹುಷಾರ್ ಎಂದು ಎಚ್ಚರಿಸಿ ತಣ್ಣಗೆ ನಡೆದು ಕ್ಲಾಸ್ ಗೆ ಹೋಗಿ ಕೂತಿದ್ದೆ. ಅವನ ತಂಗಿ ನನ್ನ ಗೆಳತೀ ಅವಳಿಗೆ ಅವತ್ತಿಡೀ ಆಶ್ಚರ್ಯ. ಮೊದಲೇ ರೌಡಿಸಂ ಅಲ್ಲಿ ಆಕ್ಟಿವ್ ಇದ್ದ ಕುಟುಂಬ ಅದು. ಅವಳಿಗೆ ಅವತ್ತಿಡೀ ನಾನೇನೋ ದೊಡ್ಡ ಹೀರೋಯಿನ್ ತರಹ ಕಂಡು ಬಿಟ್ಟಿದ್ದೆ. ಮತ್ತೆ ಮತ್ತೆ ನನ್ನ ಕೈ ಸವರಿ ಮುಖ ದಿಟ್ಟಿಸುತ್ತಿದ್ದಳು.

ನಿಂಗೆ ಯಾಕೆ ಊರ ಉಸಾಬರಿ ನಿಂದೆಷ್ಟೋ ಅಷ್ಟು ನೋಡಿಕೊಂಡು ಸುಮ್ಮನಿರಬಾರದ ಎಂದು ಅಜ್ಜಿ, ಆಂಟಿ ಎಲ್ಲಾ ಹೇಳಿ ಸೋತಿದ್ದರು. ಅವರ ಕಾಳಜಿ ಅರ್ಥವಾದರೂ ಜೊತೆ ಅಂತ ನಿಂತ ಮೇಲೆ ಸುಮ್ಮನಿರೋದು ಹೇಗೆ ಅನ್ನೋದು ಯಾವತ್ತಿಗೂ ನನ್ನ ಮೌನವಾಗಿರಲು ಬಿಡಲೇ ಇಲ್ಲ. ಎಷ್ಟೋ ಸಲ ಜೊತೆಗಿರುವವರಿಗೆ ತೊಂದರೆ ಏನು ಅನ್ನೋದು ಅರ್ಥವಾಗುವ ಮೊದಲೇ ಮುಂದೆ ಹೋಗಿ ನಿಂತಿದ್ದು ನಿಷ್ಠುರ ಕಟ್ಟಿಕೊಂಡಿದ್ದು  ಬಹಳ ಸಲ ಆದರೂ ರಕ್ತದಲ್ಲಿ ಬಂದಿದ್ದ ಈ ಸ್ವಭಾವ ಮಾತ್ರ ಬದಲಾಗಲೇ ಇಲ್ಲ. ಇದು ರಿಪೇರಿ ಆಗದ ಪ್ರಾಣಿ ಎಂದು ಅರ್ಥವಾಗಿದ್ದರಿಂದ ಗಂಡ ನನಗೆ ತಿಳಿಯದ ಹಾಗೆ ತೊಂದರೆ ಆಗದ ಹಾಗೆ ಎಚ್ಚರವಹಿಸುತ್ತಿದ್ದ. ಅಪರೂಪಕ್ಕೆ ನೋಡು ಎಂದು ದುಃಖ ಹಂಚಿಕೊಳ್ಳುವಾಗ ನಂಗೆ ಗೊತ್ತಿತ್ತು ಹೀಗೆ ಆಗುತ್ತೆ ಅಂತ ನಗುತಿದ್ದ. ಅಷ್ಟೇ ಮರುಕ್ಷಣ ಮತ್ತದೇ ಸ್ವಭಾವ.

ಮೊನ್ನೆ ಆಟ ಮುಗಿಸಿ  ಮಗಳು ಧುಮುಗುಡುತ್ತಲೇ ಬಂದಳು. ನೋಡು ಸುಮ್ನೆ ಸುಮ್ನೆ ಅವನ ಮೇಲೆ ಜಗಳಕ್ಕೆ ಬರ್ತಾಳೆ ನಾನು ಬಿಡ್ತೀನಾ ಸರಿಯಾಗಿ ಹೇಳಿದೆ ಹೆಂಗೆ ಮಾಡ್ತಾರೆ ನೋಡು ಎಂದಳು. ಮಾತು ನಿಂತರು ಧುಮುಗುಡುವಿಕೆ ನಿಂತಿರಲಿಲ್ಲ. ಅವನು ಏನು ಮಾಡ್ತಾ ಇದ್ನೇ ಅಂದೇ. ಪಾಪ ಸುಮ್ನೆ ನಿಂತಿದ್ದ ಅಂದಳು. ಯಾಕೋ ನನ್ನದೇ ಪ್ರತಿಬಿಂಬ ಕಂಡ ಹಾಗೆ ಆಯಿತು. ಬಿಸಿಯಲ್ಲಿ ಇರುವಾಗ ಏನಾದರೂ ಹೇಳಿದರೆ ಏನಾಗಬಹುದು ಎಂದು ಗೊತ್ತಿದ್ದರಿಂದ ನಾನು ರಿಯಾಕ್ಟ್ ಮಾಡುತ್ತಿದ್ದದ್ದು ನೆನಪಾದ್ದರಿಂದ ನಕ್ಕು ಸುಮ್ಮನಾದೆ.

ಕಾಲ್ ಮಾಡ್ಲಾ ಎನ್ನುವ ಮೆಸೇಜ್ ಬಂದು ಬಿದ್ದಿತು. ಹೂ ಎಂದು ಟೈಪಿಸುವುದರೊಳಗೆ ಕಾಲ್.  ಹೀಗಾಗಿದೆ ಏನು ಮಾಡಬೇಕು ತಿಳಿತಿಲ್ಲ. ಗಟ್ಟಿಯಾಗಿ ನಿಲ್ಲಬೇಕಾದವರು ನಿಲ್ತಾ ಇಲ್ಲ. ದನಿಯಲ್ಲಿನ  ಪ್ರಾಮಾಣಿಕತೆ ತಾಕುತಿತ್ತು. ಮಾತಾಡಿ ಕೇಳಿ ಆದ ನಂತರ ನೋಡು ಅವರವರ ಸಮಸ್ಯೆ ಅವರವರೇ ಬಗೆಹರಿಸಿಕೊಳ್ಳಬೇಕು. ಸುಮ್ನೆ ಮಧ್ಯೆ ಹೋಗಿ ನಿಷ್ಠುರ ಆಗೋದು ಯಾಕೆ. ನಾವು ಗಟ್ಟಿಯಾಗಿ ನಿಂತರೆ ತಾನೇ ಇನ್ನೊಬ್ಬರನ್ನು ಮೇಲಕ್ಕೆ ಎತ್ತೊಕೆ ಆಗೋದು. ನಿಲ್ಲಬೇಕಾದವರು ಗಟ್ಟಿಯಾಗಿ ನಿಲ್ಲದೆ ಹೋದರೆ, ಯುದ್ಧದಲ್ಲಿ ಹಿಂದುಳಿದರೆ ಬಲಿ ಆಗೋದು ಮುಂದೆ ನಿಂತಿರೋರು. ನಿಂಗೆ ಯಾವುದು ಸರಿ ಅನ್ಸುತ್ತೋ ಹಾಗೆ ಮಾಡು. ಮುಂದಕ್ಕೆ ನುಗ್ಗುವಾಗ ನಿನ್ನ  ರಕ್ಷಣೆ ಎಷ್ಟು ಮಾಡಿಕೊಳ್ಳಬಹುದು ಅನ್ಸುತ್ತೋ ಅಷ್ಟು ಮಾತ್ರ ಮುಂದಕ್ಕೆ ಹೋಗು, ಯಾರೋ ರಕ್ಷಣೆ ಮಾಡ್ತಾರೆ ಅಂತ ಮಾತ್ರ ಹೋಗಬೇಡ . ವಿಷಯ ಅಷ್ಟೇ ಮುಖ್ಯವಾಗಿರಲಿ ಯಾವ ಗುಂಪು ಅನ್ನೋದು ಅಲ್ಲ ಅಂದೇ 

ಹಾಗೆ ಮಾಡೋಕೆ ಅಷ್ಟು ನಿರ್ಲಿಪ್ತವಾಗಿ ಇರೋಕೆ ಆಗುತ್ತೇನೆ ಅಂದ. ಈ ಕ್ಷಣಕ್ಕೆ ಒಂದು ಗುಂಪಿಗೆ ನಾವು ಬೇಡದವರು ಆಗಬಹುದು, ಆದರೆ ನಮಗೆ ನೆಮ್ಮದಿ ಇರುತ್ತೆ, ಬಲಿಯಾಗೋದು ತಪ್ಪುತ್ತೆ ಎಂದೇ. ಅಮ್ಮಾ ಹಾಗಿದ್ರೆ ಫ್ರೆಂಡ್ಶಿಪ್ ಎಂದಳು ಮಗಳು ಅವಳಿಗೂ ಅನ್ವಯಿಸಿಕೊಂಡು. ಅವರು ರಿಯಾಕ್ಟ್ ಮಾಡದೆ ಕೇಳದೆ ನೀನು ಮುಂದಕ್ಕೆ ಹೋಗೋದು ಒಳ್ಳೆಯದಲ್ಲ ಮಗಳೇ... ನಿನ್ನ ಬಲ, ಲಿಮಿಟ್ ಅರ್ಥ ಮಾಡಿಕೊಂಡು ಎಷ್ಟು ಮುಂದಕ್ಕೆ ಹೋಗಬಹುದು ಅನ್ನಿಸುತ್ತೋ ಅಷ್ಟು ಮಾತ್ರ ಅಗತ್ಯ ಅನ್ನಿಸಿದರೆ  ಹೋಗಬೇಕು ನೋಡು ಅಂದೇ. ಯಾರೋ ನಕ್ಕ ಹಾಗಾಯಿತು.... 

ಅವತ್ತು ನಾನು ಹೇಳಿದ್ರೆ ಮೈ ಮೇಲೆ ಬಂದಿಯಲ್ಲೇ  ಎಂದು ಅವಳಲ್ಲದೆ ಇನ್ಯಾರು ಹೇಳಿ ನಗಲು ಸಾಧ್ಯ ಅನ್ನಿಸುವ ಹೊತ್ತಿಗೆ ವಯಸ್ಸಾದ ಮೇಲೆ ನಾನು ಯಾಕೆ ಹೇಳಿದ್ದು ಅನ್ನೋದು ಅರ್ಥವಾಗುತ್ತೆ ನಿಂಗೆ ಆಗ ನಾನಿರೋಲ್ಲ ಎಂದಿದ್ದು ನೆನಪಾಯಿತು. 

ಅವಳಿಲ್ಲ ನಿಜ... 

ವಯಸ್ಸಾಯ್ತಾ.......

Comments

Popular posts from this blog

ಮಾತಂಗ ಪರ್ವತ

ರಂಜದ ಹೂ

ಬರಿದೆ ಆಡುವ ಮಾತಿಗರ್ಥವಿಲ್ಲ...