ಡೆಲ್ಲಿಯಲ್ಲಿ ಆರು ಡಿಗ್ರಿ ಯಾರು ಬರ್ತೀರಿ ಅಂತ ಅಣ್ಣ ಫ್ಯಾಮಿಲಿ ಗ್ರೂಪ್ ಅಲ್ಲಿ ಕೊಟ್ಟಿದ್ದ ಎಕ್ಸೈಟಿಂಗ್ ಆಫರ್ ನೋಡಿ ತಮ್ಮನಿಗೆ ಹೋಗೋಣವೇನೋ ಎಂದು ಕೇಳಿದೆ. ಮೊದ್ಲು ಮನೆಯಿಂದ ಹೊರಗೆ ಬಾ ಆಮೇಲೆ ಡೆಲ್ಲಿ ಕತೆ ಎಂದು ಹಲ್ಲು ಕಿಸಿದ ಎಮೋಜಿ ಹಾಕಿದ. ಥತ್  ಇಲ್ಲಿಗೆ ಬಂದು ಪರಿಸ್ಥಿತಿ ಎಂದು ಒಬ್ಬಳೇ ಗೊಣಗಿಕೊಂಡು ಸುಮ್ಮನಾದೆ.

ಅದೇನು ಮನೆ ಮನೆ ಅಂತ ಇಲ್ಲೇ ಇರ್ತಿ ಮಾರಾಯ್ತಿ, ನಿಂಗೆ ಹೊರಗೆ ಹೋಗಬೇಕು, ಆರಾಮಾಗಿ ಇರಬೇಕು, ಓಡಾಡಬೇಕು ಅನ್ನಿಸೋದೇ ಇಲ್ವಾ, ಇನ್ನು ಹೋಗೋ ಹೊತ್ತಿಗೆ ಮನೆ ಹೊತ್ತಿಕೊಂಡು ಹೋಗುವ ಹಾಗಿದ್ರೆ ಅದೇನು ಮಾಡ್ತಿದ್ಯೋ ನನ್ನ ಕೈಯಲ್ಲಿ ಅಂತೂ ಹೀಗೆ ಇರೋಕೆ ಆಗೋಲ್ಲ ನೋಡು ಒಂದು ನಾಲ್ಕು ದಿನ ಬರಬಾರದ ಎಂದು ಬೈಯುತ್ತಿದ್ದರೆ ಬಿಸಿ ಪ್ರಾಯದ ಮೊಮ್ಮಗಳ ನೋಡಿ ನಕ್ಕು ಸುಮ್ಮನಾಗುತ್ತಿದ್ದಳು. ನಿಂಗೆ ಬುದ್ಧಿ ಬರೋಲ್ಲ ಬಿಡು ಎಂದು ಗುರುಗುಡುತ್ತಲೇ ಹೊರಡುತ್ತಿದ್ದೆ.  ಮನೆಯೇ ಮಠ ಕೆರೆಯೇ ತೀರ್ಥ ಮಗುವೇ ಎಂದು ದೂರ್ವೆ ಕೊಯ್ಯುವಾಗ ಹೇಳುತ್ತಿದ್ದ ಜಯತ್ತೆಯ ಮಾತು ನೆನಪಾಗಿ ಸಣ್ಣ ನಗು. 

ಮಗಳು ಹುಟ್ಟಿದ ಮೇಲೆ ಕೊಂಚ  ಕಾಲಿಗೆ ಬ್ರೇಕ್ ಹಾಕಿದ ಹಾಗಾದರೂ ಓಡಾಟವೇನು ಕಡಿಮೆಯಾಗಿರಲಿಲ್ಲ. ಗಾಡಿ ಓಡಿಸಲು ಕಲಿತ ಮೇಲಂತೂ ಮನಸ್ಸು ಗರಿ ಬಿಚ್ಚಿದ ಹಕ್ಕಿ. ಯಾರಿಗೂ, ಯಾರನ್ನು ಕಾಯಬೇಕಾದ ಮರ್ಜಿ ಇಲ್ಲದೆ ಬೇಕೆಂದ ಕಡೆಗೆ ಹೋಗಬಹುದಾದ ಅವಕಾಶ. ಸರಾಗವಾಗಿ ಹರಿಯುತ್ತಿದ್ದ ನದಿಗೂ  ಬಂತಲ್ಲ ಲಾಕ್ ಡೌನ್ ಎಂಬ  ಒಡ್ಡು ಆಗ ಮಾತ್ರ ಅಷ್ಟು ದಿನ ಒಳಗೆ ಇರೋಕೆ ಆಗುತ್ತಾ ತೀರಾ ಆವಶ್ಯಕತೆಯ ವಸ್ತುಗಳನ್ನು ತರೋಕೆ ಹೋಗೋಕೆ ಆಗೋಲ್ಲ ಅಂದ್ರೆ ಹೇಗೆ ಇರೋದು ಎನ್ನುವ ಸಂಕಟ ಶುರುವಾಗಿತ್ತು. ಎಲ್ಲೋ ಒಂದು ಸ್ವಲ್ಪ ದಿನ ಬಿಡು ಊರಿಗೆ ಹೋಗಿ ಬಂದರೆ ಆಯ್ತು ಎಂದು ಹೊರಟವರು ಬರೋಬ್ಬರಿ ನಾಲ್ಕು ತಿಂಗಳು ಅಲ್ಲೇ ಉಳಿಯುವ ಹಾಗಾಗಿತ್ತು.

ಗದ್ದೆ, ತೋಟ, ಊರು ಮನೆ ಅಂತ ಓಡಾಡಲು ಯಾವ ನಿರ್ಬಂಧವೂ ಇರದಿದ್ದರೂ ದಿನ ಕಳೆದ ಹಾಗೆ ಸುತ್ತಲೊಂದು ಗಡಿ ನಿರ್ಮಾಣ ಆಗುತ್ತಿದ್ದದ್ದು ಗೊತ್ತೇ ಆಗಿರಲಿಲ್ಲ. ಅಂಗಳದ ತುದಿಯ ಮಾವಿನ ಮರದ ಕೆಳಗೊಂದು ಟ್ರೀ ಹೌಸ್ ಕಟ್ಟಿದ ಮೇಲಂತೂ ಅಷ್ಟೇ ಪ್ರಪಂಚ ಅನ್ನುವ ಹಾಗಾಗಿದ್ದು ಸುಳ್ಳಲ್ಲ. ತಡರಾತ್ರಿಯವರೆಗಿನ ಹರಟೆ, ಫೋನ್ ಸಿಗ್ನಲ್ ಗಾಗಿ ಹುಡುಕಾಟ, ಮಕ್ಕಳ ಜೊತೆ ಮಣ್ಣಿನ ಆಟ  ಬೇಸರವಾದರೆ ತೂಗು ಹಾಕಿದ ಜೋಕಾಲಿಯಲ್ಲಿ ಜೀಕಾಟ. ದೇಹ ಮನಸ್ಸು ಇದಕ್ಕೆ ಒಗ್ಗುತ್ತಾ ಹೋದ ಹಾಗೆ ಬದುಕು ಬದಲಾಗುತ್ತಾ ಹೋಗಿತ್ತು. ಯಾರೋ ಪೇಟೆಗೆ ಹೋಗುವವರು ತಮ್ಮ ಪಾಡಿಗೆ ತಾವು ಹೋಗದೆ ಯಾರಿಗೆ ಏನು ಬೇಕು ಎಂದು ಕೇಳಿ ಹೋಗುವ ಸಂಪ್ರದಾಯ ಇನ್ನೂ ಉಳಿದಿರುವುದರಿಂದ ಬೇಕಾದ ಪದಾರ್ಥಗಳು ಮನೆಗೆ ಯಾವ ತೊಂದರೆಯಿಲ್ಲದೆ ಬರುತ್ತಿದ್ದವು. 

ಅಲ್ಲಿಂದ ಬೆಂಗಳೂರಿಗೆ ಹೊರಡುವಾಗ ಕರೋನಾ ಏರುಗತಿಯಲ್ಲಿ ಸಂಚರಿಸುತಿತ್ತು. ಏನು ಬೇಕಾದರೂ ಆನ್ಲೈನ್ ಅಲ್ಲಿ ಆರ್ಡರ್ ಮಾಡು, ಸಿಗಲಿಲ್ಲ ಅಂದ್ರೆ ನಾನು ಆಫೀಸ್ ನಿಂದ ಬರುವಾಗ ತರ್ತೀನಿ ಅಮ್ಮ ಮಗಳು ಒಂದು ಸ್ವಲ್ಪ ದಿನ ಹೊರಗೆ ಹೋಗೋದು ಬೇಡಾ ಗಂಡ ಬರುವಾಗಲೇ ಹೇಳಿಬಿಟ್ಟಿದ್ದ.   ಒಂದು ಲಕ್ಷ್ಮಣ ರೇಖೆ ಎಳೆದುಬಿಡು ಚಾಕ್ಪೀಸ್ ಕೊಡ್ತೀನಿ ಎಂದು ರೇಗಿಸಿದ್ದೆ.  ಕಸ ಬಾಗಿಲ ಹೊರಗೆ ಇಟ್ಟುಬಿಡು ನೀನು ಬರೋಕೆ ಹೋಗಬೇಡಾ ನಾನು ತಿಂಡಿ ತಗೊಂಡು ಹೋಗೋಕೆ ಬಂದವನು ತಗೊಂಡು ಹೋಗ್ತೀನಿ ಸೆಕ್ಯೂರಿಟಿ ಆಜ್ಞೆ" ಯಾವುದೇ ಪಾರ್ಸೆಲ್ ಬಂದರು ಕೆಳಗೆ ಇಟ್ಟು  ಒಂದು ದಿನ ಆದಮೇಲೆ ತಂದುಕೊಟ್ಟು ಈಗ ಓಪನ್ ಮಾಡ್ಕೋ  ಎಂದು ಹೇಳಿ ಹೋಗುತ್ತಿದ್ದರು. ಮೊದಲ ದಿನ ಮೌನ ಅಳುವೇ ತುಟಿಗೆ ಬಂದಂತೆ." ನಿಧಾನಕ್ಕೆ ಮಕ್ಕಳು ಟೆರೇಸ್ ಅಲ್ಲಿ ಆಡಲು ಶುರುಮಾಡಿ ಎರಡನೇ ವಾರಕ್ಕೆ ಕೊಂಚ ನಗು ಮೂರನೇ ವಾರ ಆಗುವ ಹೊತ್ತಿಗೆ ಎಲ್ಲವೂ ಮಾಮೂಲು.... ತಿಂಗಳುಗಳು ಕಳೆಯುವ ಹೊತ್ತಿಗೆ ಇದ್ದಿದ್ದೇ ಹೀಗೆ ಅನ್ನಿಸುವಷ್ಟು ಬದುಕು ಸಹಜ ಸುಂದರ. ಇಲ್ಲ ಹೀಗಿರಲಿಲ್ಲ ಎನ್ನುವುದು ತಿಳಿಸಿದ್ದು ತಮ್ಮನ ಮೆಸೇಜ್.... 

ಈ ದಿನಗಳು ಹೀಗೆ ಇರುವುದಿಲ್ಲ ಎನ್ನುವುದು ಗೊತ್ತು. ಯಾವುದೇ ಆಗಲಿ ಅದು ಹೀಗೆ ಇರಬೇಕು ಎನ್ನುವುದು ಭಾವ ಅಷ್ಟೇ, ಕೆಲವೊಮ್ಮೆ ಪ್ಯಾಶನ್. ಅದರ ಹೊರತಾಗಿ ಹೀಗಿರದಿದ್ದರೆ ಬದುಕೇ ಇಲ್ಲ ಎನ್ನುವುದು ಕೇವಲ ಭ್ರಮೆ ಅಷ್ಟೇ. ದೇಹ ಹಾಗು ಮನಸ್ಸು ಅಭ್ಯಾಸ ಮಾಡಿಸಿದ ಹಾಗೆ ಅನಿವಾರ್ಯತೆಗೆ ತಕ್ಕ ಹಾಗೆ ಹೊಂದಿಕೊಳ್ಳುತ್ತ ಹೋಗಿ ಅದೇ ಸಹಜವೇನೋ ಎಂಬಂತೆ ಬದಲಾಗಿ ಬಿಡುತ್ತವೆ. ಎಷ್ಟು ಸರಳವಾಗಿಯೂ ಬದುಕಬಹುದು, ಬೇಕಾದಷ್ಟು ಕ್ಲಿಷ್ಟವೂ ಮಾಡಿಕೊಳ್ಳಬಹುದು ಎನ್ನುವುದು ವಾಸ್ತವ. ಆದರೆ ಬದುಕಿಗೆ ಭ್ರಮೆಯಲ್ಲಿಯೇ ಆಸಕ್ತಿ. ಅಜ್ಜಿಯ ಮೌನದ ನಗುವಿನ ಅರ್ಥವಾಗಿ ಸಣ್ಣ ನಾಚಿಕೆ ಆವರಿಸುವ ಹೊತ್ತಿಗೆ ಈ ತಿಂಗಳ ಕೊನೆಗೆ ಎಲ್ಲಾ ಬರ್ತೀವಿ ಕಣೆ ಎನ್ನುವ ಅಣ್ಣನ ಫೋನ್...

ಜನವರಿಯ ಹೊತ್ತಿಗೆ ಮತ್ತದೇ ಹಳೆಯ ಪ್ರಶ್ನೆ ಯಾರಿಗೆ ಕೇಳಬಹುದು ನಾನು ಅನ್ನಿಸಿ ಒಬ್ಬಳೇ ನಗುತ್ತಿದ್ದೇನೆ....

Comments

  1. ಬದುಕಿನ ವಾಸ್ತವತೆ ತುಂಬಾ ಮಾರ್ಮಿಕವಾಗಿ ನಿಮ್ಮ ಬರಹದ ಮೂಲಕ ಬಂದಿದೆ....
    ಕೊನೆಯಲ್ಲಿ ಭ್ರಮೆಯಲ್ಲಿ ಬದುಕುತ್ತಿದ್ದೇವಾ..

    ಸಹಜವಾಗಿ ಇರುವ ಜೀವನವನ್ನು .ಸರಳವಾಗಿ,ಇಲ್ಲಾ ಕ್ಲಿಷ್ಟಕರವಾಗಿ ಮಾಡಿಕೊಂಡು ಬದುಕುವುದು ನಮ್ಮ ಕೈಯಲ್ಲಿ ಇದೆ ಎಂದು ಸೂಕ್ಷ್ಮವಾಗಿ ಹೇಳಿದ್ದಕ್ಕೆ🙏🙏🙏💐💐

    ReplyDelete

Post a Comment

Popular posts from this blog

ಮಾತಂಗ ಪರ್ವತ

ರಂಜದ ಹೂ

ಬರಿದೆ ಆಡುವ ಮಾತಿಗರ್ಥವಿಲ್ಲ...