ವಿಷಮ ಭಿನ್ನರಾಶಿ
"ಅಪಸ್ವರ ಅನ್ನೋದು ಬರೀ ಸಂಗೀತದಲ್ಲಿಯಷ್ಟೇ ಇರಲ್ಲ, ಬದುಕಲ್ಲೂ ಇರುತ್ತೆ." ಇದೊಂದು ಕತೆಗಳ ಸಂಗ್ರಹ ಅನ್ನಿಸಲೇ ಇಲ್ಲಾ. ಎದುರಿಗೆ ಕೂತು ಆತ್ಮೀಯರೊಬ್ಬರು ಮಾತಾಡುತ್ತಿದ್ದಾರೆನೋ ಅನ್ನಿಸಿ ಗದ್ದಕ್ಕೆ ಕೈಕೊಟ್ಟು ಮೈಯೆಲ್ಲಾ ಕಿವಿಯಾಗಿ ಆಲಿಸುವ ಹಾಗಿನ ಭಾವವೊಂದು ಮೊದಲಿನಿಂದ ಕೊನೆಯವರೆಗೂ ಕಾಡಿತು. ಮಾತುಕತೆ ಎಂದರೆ ಕಡಲಿನಂತೆ. ಉಬ್ಬರ, ಇಳಿತ, ಭೋರ್ಗೆರೆತ, ಕಚಗುಳಿ, ನೇವರಿಕೆ, ಕಾಲಬೆರಳ ಸಂದಿನಿಂದ ಮರುಳು ಸರಿಯುವಂತೆ ಜಾರುವಿಕೆ, ತೊಯ್ಯುವಿಕೆ, ಅಂಟುವಿಕೆ. ಏನಿದೆ? ಏನಿಲ್ಲ? ಕಡಲನ್ನು ಅರಿತವರಾರು. ಹಾಗೆ ಮನಸ್ಸನ್ನು ತಿಳಿದವರಾರು.. ಹೇಳಿಕೊಳ್ಳುವುದು ಸುಲಭವಾ... ಉಹೂ ಅದರಷ್ಟು ಕಷ್ಟ ಇನ್ನೊಂದಿಲ್ಲ. ಯಾವುದನ್ನೂ ಮುಚ್ಚಿಡದೆ ನಿರ್ವಿಕಾರವಾಗಿ ಅಷ್ಟೇ ಸಹಜವಾಗಿ ಪ್ರಾಮಾಣಿಕವಾಗಿ ಹೇಳುವುದಕ್ಕೆ ಧೀ ಶಕ್ತಿ ಬೇಕು. ಯಾರು ಏನು ಅಂದು ಕೊಳ್ಳುತ್ತಾರೋ ಅನ್ನೋ ಅಂಜಿಕೆಯಲ್ಲಿ ಬಣ್ಣ ಹಚ್ಚುವುದನ್ನ ಬಿಟ್ಟು ಇದ್ದ ಹಾಗೆ ಹೇಳಬೇಕು. ಹಾಗೆ ಹೇಳುವಾಗ ದನಿಯಲ್ಲಿನ ಪ್ರಾಮಾಣಿಕತೆ ಎದುರಿನ ವ್ಯಕ್ತಿಯನ್ನು ತಾಗಬೇಕು. ಹಗುರಾಗಬೇಕೆ ವಿನಃ ಹೊಸತೊಂದು ಭಾರ ಕಟ್ಟಿ ಕೊಳ್ಳುವ ಹಾಗಿರಬಾರದು. ಅಪಸ್ವರ ಅರ್ಥವಾಗೋಕೆ ಸಂಗೀತ ಗೊತ್ತಿರಲೇ ಬೇಕು ಅಂತೇನಿಲ್ಲ, ಮಗ್ನವಾಗಿ ಕಿವಿಗೊಟ್ಟು ಆಲಿಸಿದರೆ ಸಾಕಾಗುತ್ತದೆ. ಬದುಕಿನ ಸಂಗೀತದಲ್ಲೂ ಹಾಗೆಯೇ..ಧ್ಯಾನಿಸಿದರೆ, ಒಂಚೂರು ಏಕಾಗ್ರವಾಗಿ ಗಮನಿಸಿದರೆ ಅರ್ಥವಾಗುತ್ತದೆ. ಶ್ರುತಿ ತಪ್ಪದ ಬದುಕು ಉಂಟೇ.. ಎ...