ಗರಿಕೆ....

ಇದ್ದ ಜಾಗವನ್ನು ವರಾಹಿಗೆ ಒಪ್ಪಿಸಿ ಹೊಸ ಜಾಗಕ್ಕೆ ಮನಸ್ಸಿಲ್ಲದ ಮನಸ್ಸಿನಿಂದ ಬರುವಾಗ ಇದ್ದಿದ್ದು ನಮ್ಮನೆ ಮಾತ್ರವಲ್ಲ, ಆಚೆಮನೆ ಹಾಗೂ ಪುಟ್ಟ ಗಣಪತಿಯ ದೇವಸ್ಥಾನ. ಬೆರಗು ಕಣ್ಣಿಂದ ನೋಡುತ್ತಾ ಬಂದವಳಿಗೆ ಅವೆರಡೂ ಬದುಕಲ್ಲಿ ಪ್ರಮುಖ ಪಾತ್ರ ವಹಿಸುತ್ತೆ, ಉಸಿರಿನೊಂದಿಗೆ ಮಿಳಿತವಾಗುತ್ತೆ ಅನ್ನೋ ಕಲ್ಪನೆ ಕನಸಲ್ಲೂ  ಇರಲಿಲ್ಲ.

ಹಾಗಂತ ಆಚೆಮನೆಯವರೇನೂ ಅಪರಿಚಿತರಾಗಿರಲಿಲ್ಲ. ಪರಿಚಿತರೆಲ್ಲಾ ಅತ್ಮಿಯರಾಗಬೇಕೂ ಅಂದೇನಿಲ್ಲವಲ್ಲ. ಯಾರೂ ಮಕ್ಕಳಿಲ್ಲದ ಆ ಮನೆಯ ಬಗ್ಗೆ ಅಂತಹ ಆಸಕ್ತಿ ಯಾಕಾದ್ರೂ ಇರುತ್ತೆ. ಅಲ್ಲಿ ಆಡೋಕೆ ಯಾರೂ ಇಲ್ವಾ ಅಂತ ಚಿಕ್ಕಿಯ ಬಳಿಗೆ ಹೇಳಿ ಮಂಕಾದವಳಿಗೆ ಜೀವನದಲ್ಲಿ ಬೆಳಕು ತುಂಬಿದ್ದು ನಂತರ ಅದೇ ಮನೆ.

ಪ್ರತಿದಿನ ಗರಿಕೆಯನ್ನು ಕೂಯ್ದು ಮಾಲೆ ಕಟ್ಟಿ ಗಣಪತಿಗೆ ಹಾಕುವುದು ಜಯತ್ತೆಯ ದೈನಂದಿನ ಕಾಯಕಗಳಲ್ಲಿ ಒಂದು. ಸಮಯ ಬದಲಾದರೂ ಕೆಲಸ ಮಾತ್ರ ಬದಲಾಗುತ್ತಿರಲಿಲ್ಲ. ಅದನ್ನೊಂದು ವ್ರತದಂತೆ ಶ್ರದ್ಧೆಯಿಂದ ಪಾಲಿಸುತ್ತಿದ್ದರು. ಎಲ್ಲೆಲ್ಲೋ ಹುಡುಕಿ ಕೊನೆಗೆ ಒಂದು ಮುಷ್ಟಿಯಷ್ಟಾದರೂ  ಗರಿಕೆ ಕುಯಿದು ಸಂತೃಪ್ತಿಯಿಂದ ಮನೆಯ ಕಡೆ ನಡೆಯುತ್ತಿದ್ದರು. ಕೆಲವೊಮ್ಮೆ ಅವರ ಜೊತೆ ನಾವೂ ಹೋಗುತ್ತಿದ್ದೆವು.. 

ತೀರಾ ಬೇಸಿಗೆಯಲ್ಲಿ ನೀರಿಲ್ಲದೆ ಗರಿಕೆಯೂ ಒರಟಾಗುತ್ತಿತ್ತು. ಒಂದು ದಿನ ಹೀಗೆ ಗರಿಕೆಯನ್ನು ಕಟ್ಟುತ್ತಿರುವಾಗ ಪಾಪ ಎಷ್ಟೊಂದು ಬಿರುಸಾಗಿದೆ ಚುಚ್ಚುತ್ತೋ ಏನೋ ಗಣಪತಿಗೆ ಒಂದು ಮಳೆಯಾದರೂ ಬರಬಾರದ ಅನ್ನುತ್ತಾ ಅವರು ಕಟ್ಟುವುದರಲ್ಲಿ ಮಗ್ನರಾಗಿದ್ದರೆ ನಾವು ಮುಸಿ ಮುಸಿ ನಗುತ್ತಾ ಹೌದೌದು ಎನ್ನುತ್ತಿದ್ದೆವು. ಮಗುವೆ ಗಣಪತಿಗೆ 21 ದೂರ್ವೆ ಕುಯಿದು ಹಾಕು ಈ ಸಲ ಕ್ಲಾಸ್ಗೆ ಫಸ್ಟ್ ಬರ್ತಿ ನೋಡು ಅಂತ ಹೇಳುತ್ತಿದ್ದ ಜಯತ್ತೆಗೆ ಈಗಲೂ ನಾನೇ ಫಸ್ಟ್ ಅಂತ ನಕ್ಕು ಮುಂದೆ ಹೋಗುತ್ತಿದ್ದೆ.

ಇದು ಗದ್ದೆಯಲ್ಲಿ, ತೆಂಗಿನ ಮರದ ಬುಡದಲ್ಲಿ, ಬಂಜರು ಭೂಮಿಯಲ್ಲಿ ಎಲ್ಲಿ ಬೇಕಾದರೂ ಹುಟ್ಟುತ್ತದೆ. ಒಮ್ಮೆ ಹುಟ್ಟಿದ ಮೇಲೆ ಇದು ಹಬ್ಬುತ್ತಾ ಹೋಗುತ್ತದೆ. ನಿವಾರಣೆ ಕಷ್ಟ. ಹುಲ್ಲಾದರೂ ಅದಕ್ಕೆ ದೃಢತೆ ತುಂಬಾ. ತುಳಿದಷ್ಟೂ, ತಿಂದಷ್ಟು, ಕಿತ್ತಷ್ಟೂ ಅದು ಚಿಗುರುತ್ತದೆ. ಸೊಂಪಾಗಿ ಹಬ್ಬುತ್ತದೆ. ಹಾಗಾಗಿಯೇ ಹೆಣ್ಣುಮಕ್ಕಳು ತವರು ಗರಿಕೆಯ ಹಾಗಿರಲಿ ಎನ್ನುತ್ತಿದ್ದದ್ದು. ಇದಕ್ಕೆ ರಕ್ತವನ್ನು ಶುಧ್ಹಿಕರಿಸುವ ಗುಣ ಇದೆ ಅಂತಾರೆ. ಚಿಕ್ಕ ಹುಲ್ಲು ಅದೆಷ್ಟು ಶಕ್ತಿ ಇದಕ್ಕೆ ಎಂದು ಯೋಚಿಸುವಾಗಲೆಲ್ಲ ಹುಲ್ಲಾಗು ಬೆಟ್ಟದಡಿ ಎಂದು ಡಿ.ವಿ.ಜಿ ಹೇಳಿದ್ದು ಇದನ್ನು ನೋಡಿಯೇ ಇರಬಹುದಾ ಎಂದೂ ಅನ್ನಿಸುತಿತ್ತು. ಸಿಕ್ಕ ಚಿಕ್ಕ ಅವಕಾಶದಲ್ಲಿ ಬೇರೂರಿ ಹಬ್ಬುವುದನ್ನ ಗರಿಕೆಯನ್ನು ನೋಡಿ ಕಲಿಯಬೇಕು.

ಯಾವ ದೇವರು ಅಂತನೂ ನೋಡದೆ ಕೈ ಮುಗಿಯುತ್ತಿದ್ದ ನನ್ನನ್ನು ಗಣಪತಿ ಸೆಳೆದಿದ್ದು ಯಾವಾಗ ಗೊತ್ತಿಲ್ಲ. ಆಮೇಲಾಮೇಲೆ ಗಣಪತಿ ಬದುಕಿನ ಅವಿಭಾಜ್ಯ ಅಂಗವಾಗಿ ಹೋಗುವುದರಲ್ಲಿ ಜಯತ್ತೆಯ ಪಾತ್ರ ಬಹಳ ದೊಡ್ಡದು. ಭಕ್ತಿಯಿಂದ 21 ದೂರ್ವೆ ಕೂಯ್ದು ಗಣಪತಿ ಕಾಪಾಡು ಅಂತ ನಮಸ್ಕಾರ ಮಾಡು ಎಲ್ಲಾ ಚೆಂದಮಾಡಿ ಮಾಡಿಸಿಕೊಡ್ತಾನೆ ಗಣಪತಿ ಅನ್ನುತ್ತಿದ್ದ ಜಯತ್ತೆ ಅರಿವಿಲ್ಲದಂತೆ ನನಗೊಂದು ಹೆಗಲನ್ನು ದಯಪಾಲಿಸಿದ್ದರು.

ಆಮೇಲಾಮೇಲೆ ಗಣಪತಿ ದೇವರಾ, ಗೆಳೆಯನಾ, ಗುರುವಾ, ಜೊತೆಗಾರನಾ ಉಹೂ ಗೊತ್ತಿಲ್ಲ ಎಲ್ಲವೂ ಅವನೇ. ಮೊದಮೊದಲು ಬೇಡಿಕೆ ಸಲ್ಲಿಸುತ್ತಿದ್ದ ಅವನಿಗೆ ನಂತರ ಅಪ್ಪಣೆ ಮಾಡುವ ಸಲಿಗೆ ಬಂದಿದ್ದು ಯಾವಾಗ ಅರಿವಿಲ್ಲ. ಬೆಳಿಗ್ಗೆ ಗಡಿಬಿಡಿಯಲ್ಲಿ ಶಾಲೆಗೇ ಓಡುವಾಗ ಪಕ್ಕನೆ ಮಾಡದ ಹೋಂವರ್ಕ್ ನೆನಪಾಗಿ ನೋಡು ಗಣಪತಿ ಇವತ್ತು ಗೋವಿಂದಪ್ಪ ಮೇಷ್ಟ್ರಿಗೆ ಕೇಳೋಕೆ ನೆನಪಾಗಬಾರದು ಸಂಜೆ ಬಂದು ದೂರ್ವೆ ಕೂಯ್ತಿನಿ ಅಂತ ಆರ್ಡರ್ ಮಾಡುವುದರಿಂದ ಹಿಡಿದು ನನ್ನೆಲ್ಲಾ ಸಂಕಟ, ನೋವು ನಲಿವುಗಳಿಗೆ ಅವನೇ ಕಿವಿ. ಕಲ್ಲನ್ನೂ ಮಾತಾಡಿಸುತ್ತೆ ಇದು ಎಂದು ಎಲ್ಲರಿಂದ ಹೊಗಳಿಸಿ (?) ಕೊಳ್ಳುತ್ತಿದ್ದ ನಾನು ನನ್ನ ಮಾತು ಕೇಳಿ ಕೇಳಿಯೇ ಗಣಪತಿ ನಿನ್ನ ಕಿವಿ ದೊಡ್ಡದಾಗಿದ್ದು ನೋಡು ಅಂತ ಅಣಕಿಸುತ್ತಿದ್ದೆ.

ನನ್ನ ಪ್ರತಿ ಮಾತುಗಳನ್ನೂ ತಾಳ್ಮೆಯಿಂದ ಕೇಳಿಸಿಕೊಳ್ಳುತ್ತಿದ್ದ ಗೆಳೆಯ ಅವನು. ಅವನೆದರು ನಿರ್ಭಿತಿಯಿಂದ, ಸಂಕೋಚವಿಲ್ಲದೆ ಎಲ್ಲವನ್ನೂ ಹೇಳಿಕೊಳ್ಳಬಹುದಿತ್ತು. ಜೊತೆಯಿದ್ದಾಗ ಸ್ನೇಹಿತರು ನಂತರ ನಾವು ಎಲ್ಲಾ ದೌರ್ಬಲ್ಯಗಳಿರೋ ಸಹಜ ಮಾನವರು ಅನ್ನೋ ತರಹವಲ್ಲ ಅವನು. ಎಲ್ಲವನ್ನೂ ಕೇಳಿ ಒಂದು ನಂಬಿಕೆಯನ್ನು ಹುಟ್ಟಿಸಿ, ಹೆಮ್ಮರವಾಗಿಸಿ ಯಾವುದೋ ಕ್ಷಣದಲ್ಲಿ ಬೇರೆಯಾಗುತ್ತಿದ್ದ ಹಾಗೆ ನಂಬಿಕೆಗೆ ಕೊಳ್ಳಿಇಟ್ಟು ಬೆಂಕಿ ಹಚ್ಚಿ ಚಳಿ  ಕಾಯಿಸಿಕೊಳ್ಳುವ ಮನುಷ್ಯರಿಗಿಂತ ಏನೂ ಮಾತಾಡದೇ ಎಲ್ಲವನ್ನೂ ಕೇಳಿಸಿಕೊಂಡು ಮುಗುಳುನಗುವ ಅವನು ದಿನದಿನಕ್ಕೂ ಇಷ್ಟವಾಗುತ್ತಿದ್ದ. ಅವನೊಂದಿಗೆ ಮಾತಾಡಿ ಹೊರಬರುವಾಗ ಭಾರವನ್ನೆಲ್ಲಾ ಅವನಿಗೆ ವರ್ಗಾಯಿಸಿ ನಿರಾಳವಾಗಿ ಹಕ್ಕಿಯಂತೆ ಹಗುರಾಗಿಸುತ್ತಿದ್ದ. ಬದುಕಿಗೊಂದು ನಂಬಿಗಸ್ತ ಕಿವಿ ಬೇಕು. ಹೇಳಿ ಹಗುರಾಗಲು, ಭಾರ ಇಳಿಸಿಕೊಳ್ಳಲು. ದೊಡ್ಡ ಕಿವಿಯ ಗಣಪ ಅದನ್ನೇ ಹೇಳ್ತಾ ಇದ್ನಾ... ಹೇಳುವ ಭರದಲ್ಲಿ ಗಮನಿಸೋರು ಯಾರು...

ಈ ಸಲ ಪರೀಕ್ಷೆ ಕಷ್ಟ ಇತ್ತು ಕಣೆ ಅಂತ ಪಿ.ಯು.ಸಿ  ಮುಗಿಸಿ ಬಂದ ಅಣ್ಣ ಹೇಳುವಾಗ  ನೆನಪಾಗುತ್ತಿದ್ದದ್ದು ಅವನೇ. ನೋಡು ಇವತ್ತಿನಿಂದ ರಿಸಲ್ಟ್ ಬರೋ ತನಕ ರಾತ್ರಿ ಊಟ ಮಾಡೋಲ್ಲ ದಿನಾ ದೂರ್ವೆ ಕೂಯ್ತಿನಿ ಅವನನ್ನು ಪಾಸು ಮಾಡು ಅಂತ ಆರ್ಡರ್ ಮಾಡಿ ಜಯತ್ತೆಯ ಹಿಂದೆ ಹೊರಟಿದ್ದೆ. ಮಧ್ಯಾನ ಆಂಟಿ ಕೈತುತ್ತು ಕಲೆಸಿ ಮಗುವೆ ತಿನ್ನು ಅಂದಾಗ ಹರಕೆ ನೆನಪಾಗಿ ನೋಡು ಇದು ಸಂಜೆ ರಾತ್ರಿ ಅಲ್ಲಾ ಹಾಗಾಗಿ ಕೈತುತ್ತು ಓಕೇ ಅಂತ ಅಗ್ರಿಮೆಂಟ್ ಬದಲಾಯಿಸಿ ಇಟ್ಟಾಗಲೂ ಅವನದು ಅದೇ ನಗು. ಬದುಕಿನ ದಾರಿಯ ಅಚಾನಕ್ ತಿರುವುಗಳಲ್ಲಿ, ಯಾವ ದಾರಿಯಲ್ಲಿ ಹೋಗಬೇಕು ಅಂತ ತಿಳಿಯದೆ ಬೆಪ್ಪಾಗಿ ನಿಂತ ಸರ್ಕಲ್ಗಳಲ್ಲಿ ಕತ್ತಲು ಆವರಿಸಿತಾ ಅನ್ನೋ ಭಯದಲ್ಲಿ ಬೆಳಕಾಗಿದ್ದು, ನಡೆಸಿದ್ದು ಗಣಪತಿ ಇದಾನೆ ಬಿಡು ಅನ್ನೋ ಜಯತ್ತೆ ಮಾತು ಇಪ್ಪತ್ತೊಂದು ದೂರ್ವೆ ಹಾಗೂ ಗಣಪತಿ.

ಅದಾಗಿ ಎಷ್ಟೋ ವರ್ಷಗಳೇ ಕಳೆದಿವೆ. ಜಯತ್ತೆ ಕೂಡಾ ಒಂದೂ ಸುದ್ದಿ ಕೊಡದೆ ಹೊರಟು ಹೋಗಿದ್ದಾರೆ. ಆದರೆ ಕ್ರಮ ಉಹೂ ಅದು ಮಾತ್ರ ಬದಲಾಗಿಲ್ಲ. ಅವರ ಜಾಗಕ್ಕೆ ಆಂಟಿ ಬಂದಿದ್ದಾರೆ. ಏನೂ ಯೋಚನೆ ಮಾಡಬೇಡ ಗಣಪತಿ ಇದಾನೆ ಎಂದು ಆತ್ಮವಿಶ್ವಾಸದಿಂದ ಹೇಳುತ್ತಾರೆ. ಒಂದೂ ದಿನ ತಪ್ಪದಂತೆ ಗರಿಕೆ ಕೊಯ್ದು ಅವನಿಗೆ ಮಾಲೆ ಮಾಡಿ ಹಾಕುತ್ತಾರೆ. ಇತಿಹಾಸ ಮರುಕಳಿಸುತ್ತೆ ವಿನಃ ಮಾಯವಾಗುವುದಿಲ್ಲ. ಅದರಲ್ಲೂ ಸಂಸ್ಕಾರ, ಸಂಸ್ಕೃತಿ ಉಹೂ ಸಾದ್ಯವೇ ಇಲ್ಲ.

ಊರಿಗೆ ಹೋದಾಗ ಅಹಿಯ ಮುಖ್ಯ ಗೆಳೆಯ ಅಂದರೆ  ಪಾಂಡು. ಈ ಮನೆಯಿಂದ ಆಚೆಮನೆಗೆ ಹೊತ್ತು ಗೊತ್ತಿಲ್ಲದೇ, ಬಿಸಿಲು ಮಳೆಯೆನ್ನದೆ ಗದ್ದೆಯಲ್ಲಿ ರಸ್ತೆಯಲ್ಲಿ ತಿರುಗುವ ಅವಳಿಗೆ ಅವನೇ ಜೊತೆಗಾರ. ಅವಳು ಊರಲ್ಲಿ ಇದ್ದಷ್ಟು ದಿನ ಅವನನ್ನು ಕಟ್ಟಿ ಹಾಕುವ ಕೆಲಸವೇ ಇಲ್ಲ. ಅವಳು ಓಡಿದರೆ ಅವನೂ ಓಡುತ್ತಾ, ನಡೆದರೆ ನಡೆಯುತ್ತಾ ಅವಳಿಗೆ ಮಾತ್ರ ಮುಂದೆ ಹೋಗಲು ಬಿಡದೆ ಸುತ್ತೆಲ್ಲಾ ಗಮನಿಸಿ ಅವಳನ್ನು ಜಾಗೃತೆಯಾಗಿ ಕರೆದೊಯ್ದು ಅವಳು ಬರುವ ತನಕ ಅವಳನ್ನು ಕಾದುಕೊಂಡು ಇರುವ ಅವನನ್ನು ನೋಡಿದ ಮೇಲೆ ಜವಾಬ್ದಾರಿ ಕಳೆದು ಕೊಂಡು ನಾನೂ ಅರಾಮಾಗಿದ್ದೆ. ಒಮ್ಮೆ ಹೀಗೆ ಆಚೆಮನೆಗೆ ಹೋಗುವಾಗ  ಅವನಿಗೆ  ಯಾವುದೋ ನಾಯಿ ಕಚ್ಚಿ ಗಾಯವಾಗಿತ್ತು. ಅಷ್ಟಾದರೂ ಅವಳನ್ನು ಕರೆದುಕೊಂಡು ಬರುವವರೆಗೂ ಸುಮ್ಮನಿದ್ದ ಅವನು ಮನೆಗೆ ಬಂದ ಕೂಡಲೇ ಕುಯ್ ಗುಡಲು ಶುರುಮಾಡಿದ್ದ. ಹೆಜ್ಜೆ ಊರಲೂ ಕಷ್ಟ ಪಡುತ್ತಿದ್ದ. ಔಷಧಿ ಹಾಕಲು ಹೋದರೆ ತನ್ನೆಲ್ಲಾ ಹಲ್ಲು ತೋರಿಸಿ ಕೆಂಗಣ್ಣು ಬಿಟ್ಟು ಗುರ್ರ್ ಅನ್ನುತ್ತಿದ್ದ.

ಅವನು ಕುಂಟುವುದನ್ನೇ ಸಂಕಟದಿಂದ ನೋಡುತ್ತಿದ್ದ ಅವಳು ಗದ್ದೆಯಲ್ಲಿ ಆಂಟಿಯನ್ನು ನೋಡಿದವಳೇ ಅಲ್ಲಿಗೆ ಓಡಿದ್ದಳು. ಅವರ ಜೊತೆ ಮಾತಾಡುತ್ತಾ ದೂರ್ವೆ ಕೊಯ್ಯುತ್ತಿದ್ದ ಅವಳನ್ನೇ ಗಮನಿಸುತ್ತಾ ಕುಳಿತವಳಿಗೆ ಕಣ್ಮುಂದೆ ಬಂದಿದ್ದು ಜಯತ್ತೆ ಮತ್ತು ನಾನು.  ಬಾಲ್ಯ ಮರಳಲಾರದು ಅನ್ನೋ ಭ್ರಮೆ ಅಲ್ಲಿಗೆ ಹರಿದಿತ್ತು. ಓಡಾಡಿದ ಜಾಗದಲ್ಲಿ, ಬೆಳೆದ ಜನರೊಂದಿಗೆ ಮಕ್ಕಳನ್ನು ಕೊಂಡೊಯ್ದು ಬಿಟ್ಟರೆ ಸಾಕು ಅವರು ಬಾಲ್ಯವನ್ನು ಮರುಕಳಿಸುವ ಹಾಗೆ ಮಾಡುತ್ತಾರೆ. ಚಲಚಿತ್ರದಂತೆ ನೋಡಿ ಆನಂದಿಸುವುದಷ್ಟೇ ನಮಗೆ ಬಿಟ್ಟದ್ದು.

ರಾತ್ರಿ ಮಲಗುವ ಮುನ್ನ ಅಹಿ ಪಾಂಡುವಿಗೆ ಅನತಿ ದೂರದಲ್ಲಿ ಕುಳಿತು ಪಾಂಡು ಇವತ್ತು 21ದೂರ್ವೆ ಕೊಯ್ದು ಆಂಟಿ ಹತ್ರ ಕೊಟ್ಟಿದೀನಿ. ಗಣೇಶ ಮಾಮಿಗೆ ಹೇಳಿದೀನಿ, ಪಾಂಡು ಕಾಲು ವಾಸಿ ಮಾಡು ಅಂತ. ಬೆಳಿಗ್ಗೆ ಕೇಶು ಮಾಮ ಪೂಜೆ ಮಾಡಿ ಅವನಿಗೆ ಏರಿಸುವಷ್ಟು ಹೊತ್ತಿಗೆ ನಿಂಗೆ ವಾಸಿ ಆಗಿರುತ್ತೆ ಕಣೋ, ಇವತ್ತೊಂದು ದಿನ ಎಲ್ಲೂ ಹೋಗದೆ ಮಲ್ಕೋ ಆಯ್ತಾ ಅಂತ ಸಮಾಧಾನ ಮಾಡುತ್ತಿದ್ದಳು.  ಬೇರೆಲ್ಲರಿಗೂ ಹೆದರಿಸುವ ಅವನು ಮೌನವಾಗಿ ಅವಳು ಹೇಳುವುದನ್ನೇ ಕೇಳುತ್ತಿದ್ದ.

ಬೆಳಿಗ್ಗೆ ಎದ್ದು ಸಂಸ್ಕೃತಿ ಹೀಗೆ ಸಹಜವಾಗಿ ತಲೆಯಿಂದ ತಲೆಗೆ ನೀರಿನಂತೆ ಹರಿದು ಬರಬೇಕೇ  ವಿನಃ ಹೇರಿಯೋ ಬಲವಂತವಾಗಿಯೋ  ಬರಲಾರದು ಅಂದುಕೊಳ್ಳುತ್ತಾ ಕಾಫಿ ಕುಡಿಯುತ್ತಾ ಹೊರಗೆ ದೃಷ್ಟಿ ಹರಿಸಿದರೆ ಪಾಂಡು ಏನನ್ನೋ ಅಟ್ಟಿಸಿಕೊಂಡು ರಸ್ತೆಯಲ್ಲಿ ಓಡುತ್ತಿತ್ತು. ಹರಡಿದ್ದು ಬೆಳಕಾ, ಅಹಿಯ ಮುಖದ ನಗುವಾ ಅನ್ನೋ ಕನ್ಫ್ಯೂಷನ್ ನಲ್ಲಿ ಕಾಫಿ ಗುಟುಕರಿಸುತ್ತಿರುವಾಗ   ಇಬ್ಬನಿಯಲ್ಲಿ ತೊಯ್ದ ಗರಿಕೆಯಲ್ಲಿ ಗಣಪತಿ ಇದಾನೆ ಬಿಡು ಅನ್ನೋ ಜಯತ್ತೆಯ ಧ್ವನಿ ಪ್ರತಿಧ್ವನಿಸಿದಂತಾಯಿತು. ಬೆಚ್ಚಿ ತಲೆ ಎತ್ತಿದರೆ ಪೂಜೆ ಮುಗಿಸಿ ಬರುತ್ತಿದ್ದ ಕೇಶುವಣ್ಣ  ಕಾಣಿಸಿದರು.

Comments

Popular posts from this blog

ಮಾತಂಗ ಪರ್ವತ

ರಂಜದ ಹೂ

ಬರಿದೆ ಆಡುವ ಮಾತಿಗರ್ಥವಿಲ್ಲ...