ಸಹಜವಾಗಿ ಎಲ್ಲಾ ರಾಜರಿಗೂ ಒಂದು ರಾಜಧಾನಿ ಇದ್ದರೆ ಚಾಲುಕ್ಯ ಸಾಮ್ರಾಜ್ಯಕ್ಕೆ ಮೂರು ರಾಜಧಾನಿಗಳು. ಮೊದಲು ಮೆಟ್ಟಿಲು ಐಹೊಳೆ ಆದರೆ ಸ್ವಲ್ಪ ಪ್ರವರ್ಧಮಾನಕ್ಕೆ ಬರುತ್ತಿದ್ದ ಹಾಗೆ ಅವರು ತಮ್ಮ ಕಾರ್ಯಕ್ಷೇತ್ರವನ್ನಾಗಿಸಿ ಕೊಂಡಿದ್ದು ಬಾದಾಮಿಯನ್ನು. ನಂತರ ಐಹೊಳೆ ಶಿಕ್ಷಣ ಕ್ಷೇತ್ರವಾಗಿ ಪ್ರಸಿದ್ದಿ ಹೊಂದಿತು. ಬಾದಾಮಿಯ ಮೂಲ ಹೆಸರು ವಾತಾಪಿ ಪುರ. ವಾತಾಪಿ ಎಂಬ ರಾಕ್ಷಸನನ್ನು ಅಗಸ್ತ್ಯರು ಜೀರ್ಣಿಸಿಕೊಂಡ ಸ್ಥಳವಿದು ಅನ್ನೋದು ಪುರಾಣದಲ್ಲಿ ಉಲ್ಲೇಖ. ಹಾಗಾಗಿಯೇ ಇಂದಿಗೂ ಅಲ್ಲಿರುವ ಕೊಳ ಅಗಸ್ತ್ಯ ತೀರ್ಥವೆಂದೇ ಪ್ರಸಿದ್ಧಿ.

ಪ್ರಕೃತಿ ನಿರ್ಮಿತ ಧೀಮಂತ ಬೆಟ್ಟಗಳು ಇಲ್ಲಿಯ ವಿಶೇಷ. ಇಲ್ಲಿಯ ಬೆಟ್ಟಗಳು ಬಾದಾಮಿಯ ಬಣ್ಣದಲ್ಲಿ ಇರುವುದರಿಂದ ಇದಕ್ಕೆ ಬಾದಾಮಿ ಅನ್ನೋ ಹೆಸರು ಬಂತಂತೆ. ಹಸಿರಿನ ನಡುವೆ ಕಂದು ಬಣ್ಣದ ಈ ಬೆಟ್ಟಗಳು ತಲೆಯೆತ್ತಿ ನಿಂತು ಊರಿಗೆ ಶೋಭೆತಂದುಕೊಟ್ಟಿವೆ. ಇದು ಚಾಲುಕ್ಯರ ಮಾಧ್ಯಮಿಕ ಹಂತ. ಇದು ವಾಣಿಜ್ಯನಗರವಾಗಿ ಪ್ರಮುಖಪಾತ್ರ ವಹಿಸಿತ್ತು. ಹಬ್ಬಿದ್ದ ನೈಸರ್ಗಿಕ ಬಂಡೆಗಳ ನಡುವೆ ಸಹಜವಾಗಿ ನಿರ್ಮಿತವಾದ ಗುಹೆಯನ್ನು ನೋಡಿದ ವಿನಯಾದಿತ್ಯ ಅಣ್ಣ ವಿಕ್ರಮಾದಿತ್ಯನ ಪಟ್ಟಾಭಿಷೇಕದ ನಂತರ ಅವನಿಗೆ ಬಹುಮಾನವಾಗಿ ಕೊಡಲು ಈ ಗುಹಾಂತರ ದೇವಾಲಯಗಳನ್ನು ನಿರ್ಮಿಸಿದನಂತೆ. 18 ವರ್ಷಗಲ್ಲಿ ನಿರ್ಮಾಣವಾದ ಈ ನಾಲ್ಕು ಗುಹಾಂತರ ದೇವಾಲಯಗಳಲ್ಲಿ ಮೊದಲನೆಯದು ಶೈವ ಗುಹೆ, ಎರಡು ಮತ್ತು ಮೂರೂ ವೈಷ್ಣವ ಗುಹೆ ಹಾಗು ನಾಲ್ಕನೆಯದು ಜೈನ ಗುಹೆ.

ಎಲ್ಲವೂ ಏಕಶಿಲಾ ದೇಗುಲಗಳು. ಇವುಗಳನ್ನು ವಾಸ್ತುಶಿಲ್ಪದ ತೊಟ್ಟಿಲುಗಳು ಅನ್ನಬಹುದು. ಇವರು ಹಾಕಿಕೊಟ್ಟ ಅಡಿಪಾಯದ ಮೇಲೆಯೇ ನಂತರ ಬಂದ ಎಲ್ಲಾ ರಾಜವಂಶಗಳ ಕೊಡುಗೆ ಅಭಿವೃದ್ಧಿಗೊಂಡು ನಿರ್ಮಾಣಗೊಂಡಿವೆ. ಮೊದಲನೆಯ ಗುಹೆ ನಿರ್ಮಾಣ ಮಾಡಿದ ಶಿಲ್ಪಿಗಳ ಹೆಸರು ಅಚ್ಚಯ್ಯ ಸ್ವಾಮಿ ಹಾಗೂ ಶ್ರೀ ಕಲ್ಲುಟ್ಟಿ. ಎಷ್ಟು ಜನ ಶಿಲ್ಪಿಗಳು ಕಾರ್ಯ ನಿರ್ವಹಿಸಿದ್ದಾರೆ ಅನ್ನೋದರ ಅಧಿಕೃತ ದಾಖಲೆಗಳು ಇಲ್ಲದಿದ್ದರೂ ಆಗ attendance ಪದ್ಧತಿ ಜಾರಿಯಲ್ಲಿತ್ತು ಅನ್ನುವುದಕ್ಕೆ ಹೊರಬಾಗದ ಬಂಡೆಗಳ ಮೇಲೆ ಎಳೆದ ಗೆರೆಗಳು ಪುರಾವೆ ಒದಗಿಸುತ್ತದೆ. ಉದ್ದ ಗೀಟು ಪೂರ್ಣ ದಿನ, ಅರ್ಧ ಎಳೆದ ಗೀಟು ಅರ್ಧದಿನ ಕೆಲಸ ಮಾಡಿದ್ದಾರ ಗುರುತಾಗಿ ಇಂದಿಗೂ ಇದೆ. ಅದನ್ನು ನೋಡುತ್ತಿದ್ದಂತೆ ಯಾವುದೂ ಹೊಸತಲ್ಲ ಅನ್ನೋ ಸತ್ಯದ ಅರಿವಾಗುತ್ತೆ.

ಇಲ್ಲಿ ಸೂರ್ಯನ ಬೆಳಕು ನೇರವಾಗಿ ಬೀಳುವುದಿಲ್ಲ. ಹಾಗಾಗಿ ಒಳಗೆ ಹೋಗುತ್ತಿದ್ದಂತೆ ಬೆಳಕು ಮಂದವಾಗುತ್ತಾ ಹೋಗುತ್ತೆ. ಮನುಷ್ಯ ತನ್ನನ್ನು ಅರ್ಥಮಾಡಿಕೊಳ್ಳುವುದು ಕತ್ತಲಲ್ಲಿ ಮಾತ್ರವಾ....  ಹೋಗುತ್ತಿದ್ದ ಹಾಗೆ ಸ್ವಾಗತಿಸುವುದು ನಟರಾಜನ ವಿಗ್ರಹ. ಇಡಿ ಜಗತ್ತಿನಲ್ಲೇ ಇನ್ನೊಂದು ಇಂಥಹ ವಿಗ್ರಹ ಇಲ್ಲವಂತೆ. 18 ಕೈಗಳನ್ನು ಹೊಂದಿರುವ ಈ ವಿಗ್ರಹ ಎಡ ಭಾಗದ ಒಂದು ಕೈಯನ್ನು ತೆಗೆದು ಕೊಂಡು ಬಲಬಾಗದ ಇನ್ನೊಂದು ಕೈಯಿಗೆ ಹೋಲಿಸಿ ನೋಡಿದಾಗ ಭರತನಾಟ್ಯದ ಭಂಗಿ ಕಾಣಿಸುತ್ತದೆ. ಹೀಗೆ ಒಂದೊಂದೇ ಕೈಯನ್ನು ಇನ್ನೊಂದು ಭಾಗದ ಒಂದೊದೆ ಕೈಯಿಗೆ ಹೋಲಿಸುತ್ತಾ ಹೋದರೆ ಇದು ಭರತನಾಟ್ಯದ 81 ಭಂಗಿಗಳನ್ನು ಪ್ರದರ್ಶಿಸುತ್ತದೆ. ಶಿವನ ಈ ನೃತ್ಯದಿಂದ ಪುಳಕಗೊಂಡ ಗಣೇಶ ಕೂಡಾ ನರ್ತಿಸುತ್ತಿರುವುದು, ಅವರಿವರ ನೃತ್ಯಕ್ಕೆ ತಂದು ಎಂಬ ಸಂಗೀತಗಾರ ವಾದ್ಯವನ್ನು ನುದಿಸುತ್ತಿರುವುದು ಕಾಣಿಸುತ್ತದೆ. ಶಿಲ್ಪಿಯ ಕಲಾವಂತಿಕೆ, ಒಂದೇ ವಿಗ್ರಹದಲ್ಲಿ ಇಷ್ಟೊಂದು ವಿಷಯವನ್ನು ತಿಳಿಸುವ ಚಾಕಚಕ್ಯತೆಯ ಬಗ್ಗೆ ಹೆಮ್ಮೆ, ಗೌರವ ಎರಡೂ ಉಕ್ಕಿ ತಲೆ ತಂತಾನೇ ಬಾಗುತ್ತದೆ ಕೈ ಜೋಡಿಸುತ್ತದೆ.

ಮಹಿಷಾಸುರ ಮರ್ಧಿನಿಯ ವಿಗ್ರಹ, ಆಳೆತ್ತರದ ಅರ್ಧನಾರಿಶ್ವರ ವಿಗ್ರಹ ಮುಂದಿನ ಭಾಗದಲ್ಲಿ ಸ್ವಾಗತಿಸುತ್ತದೆ. ಚಾಲುಕ್ಯರ ಕಾಲದಲ್ಲಿ ಸ್ತ್ರೀ ಪುರುಷರು ಸಮಾನರೇ ಹೊರತು ಯಾರೂ ಹೆಚ್ಚಲ್ಲ, ಯಾರೂ ಕಡಿಮೆಯಲ್ಲ ಅನ್ನೋದು ಈ ಚಿತ್ರ ಬಿಂಬಿಸುತ್ತೆ ಅನ್ನುತ್ತಿದ್ದರು ಗೈಡ್. ಸ್ತ್ರೀ ಪುರುಷ ಸಮಾನತೆಯ ಕೂಗು ಈಗಿನದಲ್ಲ ಅಂತ ನಗುಬಂತು. ಗಂಡು ಮತ್ತು ಹೆಣ್ಣು ಎರಡು ವಿಭಿನ್ನ ಸೃಷ್ಟಿ ಅದನ್ನು ಇಬ್ಬರು ಒಂದೇ ಅಂದರೆ ಸೃಷ್ಟಿಗೆ ವಿರುದ್ಧವಾಗಿ ನಡೆದಂತೆ ಅವರಿಬ್ಬರ ವಿಭಿನ್ನತೆಯನ್ನು ಗೌರವಿಸಿಬೇಕೆ ವಿನಃ ಒಂದು ಮಾಡಿ ಅಕಾರ, ಉದ್ದೇಶವನ್ನೇ ಹಾಳು ಮಾಡಿದ ಹಾಗಲ್ವಾ ಅನ್ನೋ ಆಲೋಚನೆಯೂ ಬಂತು. ಯಾಕ್ ಬೇಕು ಕೋಲು ಕೊಟ್ಟು ಹೊಡೆಸಿಕೊಳ್ಳುವ ಕೆಲಸ ಅಂತ ಅಲ್ಲೇ ಪೂರ್ಣವಿರಾಮ ಕೊಟ್ಟು ಮುಂದೆ ಹೋದೆ.

ಈ ಗುಹೆಯ ಇನ್ನೊಂದು ಆಕರ್ಷಣೆ ಅಂದರೆ ಗಜವೃಷಭ ಶಿಲ್ಪಿ. ಎರಡು ಪ್ರಾಣಿಗಳ ದೇಹಕ್ಕೆ ಒಂದೇ ಮುಖವಿದೆ. ಒಂದರ ದೇಹವನ್ನು ಮುಚ್ಚಿದರೆ ಆನೆಯ ಆಕಾರ, ಇನ್ನೊಂದರ ದೇಹವನ್ನು ಮುಚ್ಚಿದರೆ ನಂದಿಯ ಆಕಾರ ಕಾಣುತ್ತದೆ. ಎಷ್ಟು intelligent ಅಮ್ಮಾ ಆ ಶಿಲ್ಪಿಗಳು ಅಂದ್ಲು ಅಹಿ. ಹೂ ಕಣೆ ಪ್ರಾಣಿಗಳಿಗೆ ಒಂದೇ ಮುಖ ಕೊಡಬಹುದು ಮನುಷ್ಯರಿಗಾದರೆ ಒಂದು ದೇಹಕ್ಕೆ ಅದೆಷ್ಟು ಮುಖಗಳೋ ನೋಡು ಅದಕ್ಕೆ ಎಲ್ಲೂ ಈ ತರಹದ ಕೆತ್ತನೆಗಳಲ್ಲಿ ಮನುಷ್ಯರ ವಾಸನೆಯಿಲ್ಲ ಅನ್ನುವವಳು ಸುಮ್ಮನಾಗಿ  ನಕ್ಕು ವಾತಾಪಿ ಪುರಾಧಿಶ್ವರ ವಾತಾಪಿಯನ್ನು ನೋಡಲು ಹೋದೆ.

ಹೊಟ್ಟೆಗೆ ಹಾವಿಲ್ಲದ ಸಪಾಟು ಉದರದ, ಕಿರೀಟವನ್ನೂ ಧರಿಸದ ಸರಳ ಸುಂದರ ಎರಡು ಕೈಯಗಳ ಗಣಪ ನಗುತ್ತಾ ಕುಳಿತಿದ್ದ. ಅವನನ್ನು ನೋಡಿದ ಮೇಲೆ ಏನೋ ಸಮಾಧಾನ. ಗುಹೆಗೆ ಅಲಂಕಾರಪ್ರಾಯವಾಗಿ ನಾಲ್ಕು ಕಂಬಗಳಿವೆ. ಹೊರಗೆ ಧಗೆಯಿದ್ದರೂ ಒಳಗೆ ತಂಪಿದೆ. ಅರೆಬೆಳಕು ಆವರಿಸಿರುತ್ತದೆ. ಅತ್ತ ಕತ್ತಲೂ ಅಲ್ಲದ ಇತ್ತ ಪೂರಾ ಬೆಳಕು ಇಲ್ಲದ ಲೋಕ ಅರಸಲು, ಅಭಿವ್ಯಕ್ತಿಸಲು ಪ್ರಶಸ್ತವಾದ ಜಾಗ ಅನ್ನಿಸಿದ್ದು ಸುಳ್ಳಲ್ಲ. ವಾಸ್ತುಶಿಲ್ಪಕ್ಕೆ ಬುನಾದಿಯನ್ನು ಹಾಕಿಕೊಟ್ಟ ಚಾಲುಕ್ಯರಿಗೂ ನಂತರ ಅದು ಏರುವ ಎತ್ತರ ಗೊತ್ತಿತ್ತೋ ಇಲ್ಲವೋ..  ಬಹುಶಃ ಬೆಳಕು ಹೆಚ್ಚಾಗಿ ಇಂದಿನ ನಾಗರಿಕತೆ ಕಣ್ಣು ಕೌಶಲ್ಯ ಎರಡೂ ಮಂಕಾಗಿದೆಯೋ ಅದೂ ಗೊತ್ತಿಲ್ಲ..

ಇಲ್ಲೊಂದು ಇಂಟರೆಸ್ಟಿಂಗ್ ಆದ ಕೆತ್ತನೆಯಿದೆ. ಶಿವ ಮತ್ತು ಪಾರ್ವತಿ ನಂದಿಯ ಮೇಲೆ ಕುಳಿತು ಹೋಗುವ ದೃಶ್ಯ. ಪಾರ್ವತಿ ಕುಳಿತಿರುವ ಭಂಗಿಯನ್ನೊಮ್ಮೆ ಗಮನಿಸಿ ಶಿವನ ತೊಡೆಯ ಮೇಲೆ ಕೈಯಿಟ್ಟು ಕುಳಿತಿರುವ ದೃಶ್ಯ ಈಗಿನ ಟೂ ವೀಲರ್ ಅಲ್ಲಿ ಹೋಗುವ ರೀತಿಯನ್ನು ಪ್ರತಿಬಿಂಬಿಸುವ ಹಾಗಿದೆ. ಹಾಗಾದರೆ ನಮ್ಮ ಅನ್ವೇಷಣೆಯೇನು ಅನ್ನುವ ಪ್ರಶ್ನೆ ಹಾಕಿಕೊಂಡರೆ ಇಲ್ಲಿ ಯಾವುದೂ ಹೊಸತಲ್ಲ, ಯಾವುದೂ ಕಂಡುಹಿಡಿದಿದ್ದದ್ದೂ ಅಲ್ಲ. ಎಲ್ಲವೂ ಇಲ್ಲಿ ಇದ್ದದ್ದೇ... ಅನ್ನುವ ಬದುಕಿನ ನಗ್ನ ಸತ್ಯ ಎದುರಾಗುತ್ತದೆ. ಮುಂದೆ ಹೋದಂತೆ ಇದಕ್ಕೆ ಮತ್ತಷ್ಟು ಉದಾಹರಣೆಗಳೂ ಸಿಕ್ಕಿ ಸ್ಪಷ್ಟವಾಗುತ್ತಾ ಹೋಗುತ್ತದೆ. ಪ್ರವಾಸ ಹೊಸ ವಿಷಯವನ್ನಷ್ಟೇ ಕಲಿಸುವುದಿಲ್ಲ ಹಮ್ಮನ್ನೂ ಇಳಿಸುತ್ತೆ.

Comments

Popular posts from this blog

ಮಾತಂಗ ಪರ್ವತ

ರಂಜದ ಹೂ

ಬರಿದೆ ಆಡುವ ಮಾತಿಗರ್ಥವಿಲ್ಲ...