ಬದಾಮಿಗೆ ಹೋಗುವ ಯೋಚನೆ ಮಾಡಿದಾಗ ಅಲ್ಲಿ ಎಲ್ಲೆಲ್ಲಿಗೆ ಹೋಗಬೇಕು ಅನ್ನುವ ಲಿಸ್ಟ್ ನಲ್ಲಿ ದೇವಸ್ಥಾನದ ಹೆಸರು ಇರಲಿಲ್ಲ. ಮೊದಲಿಂದಲೂ ವಿಪರಿತ ಜನಜಂಗುಳಿ, ನೂಕು ನುಗ್ಗಲು ಇರುವ ಜಾಗಗಳೆಂದರೆ ಸ್ವಲ್ಪ ಅಂತರವನ್ನು ಕಾಯ್ದುಕೊಳ್ಳುತ್ತೇನೆ. ಇರುವ ಪುಟ್ಟ ಬದುಕು ಆದಷ್ಟು ನಿರಾಳವಾಗಿರಬೇಕೆ ವಿನಃ ಉಸಿರುಗಟ್ಟಿಸುವಂತಿರಬಾರದು. ನಾಲ್ಕೈದು ದಿನಗಳ ಸಾಲು ರಜೆ ಬಹುತೇಕರಿಗೆ ಮರಳಿ ಊರಿಗೆ ಹೋಗುವ ತುಡಿತ. ಬೆಂಗಳೂರು ಬದುಕು ಕೊಟ್ಟರೂ, ಏನೇ ಐಷಾರಾಮಿ ಸವಲತ್ತು ಕೊಟ್ಟರೂ  ಒಂದೆರೆಡು ರಜೆ ಬಂದ ತಕ್ಷಣ ಊರು ಕೈಬೀಸಿ ಕರೆಯುತ್ತದೆ. ಊರಿನ ಮೋಹದಿಂದ ಕಳಚಿಕೊಳ್ಳುವುದು ಅಷ್ಟು ಸುಲಭವಲ್ಲ. ಹಾಗಾಗಿ ಟ್ರಾಫಿಕ್ ಮಹಾಸಾಗರ ದಾಟಲು ಬಹಳಷ್ಟು ಸಮಯ ಹಿಡಿದಿದ್ದರಿಂದ ಬದಾಮಿ ತಲುಪುವ ವೇಳೆಗೆ ಗಂಟೆ ಹತ್ತಾಗಿತ್ತು. ಸುಸ್ತು ಆವರಿಸಿತ್ತು.

ರೂಂ ತಲುಪಿ ಅದಾಗಲೇ ಗೋಳಾಡುತ್ತಿದ್ದ ಹೊಟ್ಟೆಗೆ ಸಮಾಧಾನ ಮಾಡಿ ಫ್ರೆಶ್ ಆಗುವುದರೊಳಗೆ ಸೂರ್ಯ ನಡುನೆತ್ತಿಗೆ ಬಂದಾಗಿತ್ತು. ಅಲ್ಲೂ ಮೋಡಕವಿದ ವಾತಾವರಣವಿದ್ದರೂ ಧಗೆ ಸಣ್ಣಗೆ ಹೊಗೆಯಾಡುತ್ತಿತ್ತು. ಹಾಗಾಗಿ ವಿಶ್ರಾಂತಿ ತೆಗೆದುಕೊಂಡು ಇಳಿ ಸಂಜೆಯ ತಣ್ಣನೆಯ ವೇಳೆಯಲ್ಲಿ ಕಾಫಿ ಕುಡಿಯುತ್ತಿರುವಾಗ ಬಂದ ಮ್ಯಾನೇಜರ್ ಇಷ್ಟೊತ್ತಿಗೆ ರಶ್ ಇರೋಲ್ಲ, ಒಂದು ಆಟೋಗೆ ಹೇಳ್ತೀನಿ ದೇವಸ್ಥಾನಕ್ಕೆ ಹೋಗಿಬನ್ನಿ ಅಂದ್ರು. ಅಹಿಯ ಮುಖವನ್ನೇ ದಿಟ್ಟಿಸಿದೆ ರೆಡಿ ಅಮ್ಮಾ ಅಂದ್ಲು. ಸರಿ ಅಂತ ಹೊರಟಿದ್ದಾಯ್ತು.

ನನಗೋ ಈ ಆಟೋದವರ ಮುಖ ನೋಡಿ ಅವರು ಮಾತುಗಾರರು ಅನ್ನಿಸಿದರೆ ಮಾತಾಡೋ ಚಟ. ಚಿಕ್ಕ ವಯಸ್ಸಿನ ಹುಡುಗ ಮಾತಾಡ್ತಾ  ಕುಡಿಯೋ ನೀರಿಗೆ ತೊಂದರೆ ಇಲ್ಲಾ ಆದ್ರೆ ಬೆಳೆಯೋ ಪೈರಿಗೆ ಕಷ್ಟ. ನಾಲ್ಕು ವರ್ಷ ಆಯ್ತು. ಸರಿಯಾಗಿ ಮಳೆ ಬಾರದೇ. ಈ ಮಹದಾಯಿ ನೀರು ದೊರಕಿದರೆ ಸ್ವಲ್ಪ ನೆಮ್ಮದಿ ಆದ್ರೆ ಇವ್ರು ಮುಂದೆ ಹೋದರೆ ಅವರಿಗೆ ಹೆಸರು ಬರುತ್ತೆ ಇವರಿಗೆ ಅವರಿಗೆ ಹೆಸರು ಬರುತ್ತೆ ಅನ್ನೋ ರಾಜಕೀಯ ಮೇಲಾಟದಲ್ಲಿ ನಾವು ಒಣಗುತ್ತಿದ್ದೇವೆ ಅಷ್ಟೇ ಅಂದ. ಕೆಂಪು ಮಣ್ಣಿನ ಫಲವತ್ತಾದ ನೆಲ, ದುಡಿಯುವ ಕೈಗಳು, ಇಂಚು ಭೂಮಿಯನ್ನೂ ಬಿಡದೆ ಉಪಯೋಗಿಸಿಕೊಳ್ಳುವ ಅಚ್ಚುಕಟ್ಟುತನ ಎಲ್ಲವೂ ಇದೆ. ಇಲ್ಲದಿರುವುದು ನೀರು ಮಾತ್ರ. ಭೂಮಿ ಉಟ್ಟಿದ್ದು ಉಸಿರುಗಟ್ಟಿಸುವ ಧೂಳಿನ ಸೀರೆ..

ಹತ್ತಿರ ಹತ್ತಿರ ನಾಲ್ಕು ಲಕ್ಷ ಜನ ಸೇರುತ್ತೆ ಇಲ್ಲಿ ಜಾತ್ರೆ ನಡೆದರೆ ಹಾಗಾಗಿ ಈ ರಸ್ತೆಗೆ ಮಾತ್ರ ವರ್ಷ ವರ್ಷ ತೇಪೆ ಹಾಕ್ತಾರೆ ಅನ್ನುತ್ತಲೇ ಹಾರುವ ವೇಗದಲ್ಲಿ ಓಡಿಸುತ್ತಾ ದೇವಸ್ಥಾನದ ಎದುರು ನಿಲ್ಲಿಸಿ ಆಮೇಲೆ ಕಾಲ್ ಮಾಡಿ ಬರ್ತೀನಿ ಇಲ್ಲಿ ನಿಲ್ಲಿಸೋ ಹಾಗಿಲ್ಲ ಅಂತ ತಕ್ಷಣ ಮರೆಯಾದ.  ಇದು ತಗೋಳಿ ಅದು ತಗೋಳಿ ಅಂತ ಕಾಡಿಸಲು ಯಾರೂ ಇಲ್ಲದ ಕಾರಣ ಒಂದು ಕ್ಷಣ ಅಚ್ಚರಿಯಾದರೂ ನೆಮ್ಮದಿಯಾಗಿ ಒಳಗೆ ಸಾಗಿದರೆ ಜನಜಂಗುಳಿಯಿಲ್ಲದೆ ದೇವಸ್ಥಾನ ಪ್ರಶಾಂತವಾಗಿತ್ತು. ಅಲ್ಲೇ ಕಾಲು ತೊಳೆದು ಆಫೀಸ್ ಒಳಗೆ ಪ್ರವೇಶಿ ಸೇವೆಯ ಚೀಟಿಯುವಾಗ ಯಾವ ಸೇವೆಯಿದೆ ಅನ್ನೋ ಗೊಂದಲದಲ್ಲಿ ಅವರನ್ನೇ ಕೇಳಿದೆ. ಅಭಿಷೇಕ ಮಾಡಿಸೋ ಮನಸ್ಸಿದ್ದರೆ ನಾಳೆ ಮಾಡಿಸಿ ಈಗ ಕುಂಕುಮಾರ್ಚನೆ ಮಾಡಿಸಬಹುದು ಅಂದ್ರು. ನಾಳೆ ಬರೋಕೆ ಆಗುತ್ತೋ ಇಲ್ವೋ ಬಿಡಿ ಅಂದು ಕುಂಕುಮಾರ್ಚನೆ ಚೀಟಿ  ಪಡೆದು ನೆಮ್ಮದಿಯಾಗಿ ಒಳಕ್ಕೆ ಹೋದರೆ ಬನಶಂಕರಿ ಸಣ್ಣಗೆ ನಗುತ್ತಿದ್ದಳು.

ಅಲಂಕಾರ ಯಾರಿಗಾದರೂ ಚೆಂದವೇ. ಆದರೆ ಒಮ್ಮೆ ಸರ್ವಾಲಂಕಾರ ಭೂಷಿತೆಯಾದ ಅಮ್ಮನನ್ನು ಗಮನಿಸಿ. ಅಲ್ಲಿ ಹುಚ್ಚೆಬ್ಬಿಸುವ, ಕೆರಳಿಸುವ ಆರ್ಭಟವಿರುವುದಿಲ್ಲ. ನಮ್ಮೆಲ್ಲಾ ದುಗುಡ, ದುಮ್ಮಾನ, ಚಿಂತೆಗಳನ್ನು ಮರೆಸುವ ಸಮ್ಮೋಹಕ ಚೆಲುವಿರುತ್ತದೆ. ಮನಸ್ಸಿಗೆ ನೆಮ್ಮದಿ ಕೊಡುವ ಅನುಭೂತಿ ಹುಟ್ಟುತ್ತದೆ.ಸಣ್ಣ ನಗು ಮೈ ಮನಸ್ಸನ್ನು ಆವರಿಸಿ ಹೇ ಬದುಕೇ ನೀನ್ಯಾವ ಲೆಕ್ಕ ಅನ್ನೋ ಹುಮ್ಮಸ್ಸು, ಒಂದು ನಿರಾಳತೆ ತುಂಬಿಕೊಳ್ಳುತ್ತಾ ಹೋಗುತ್ತೆ. ನಮ್ಮೆಲ್ಲಾ ಅಹಂ, ಆಲೋಚನೆ, ಹುಂಬತನ ಎಲ್ಲವನ್ನೂ ಮರೆತು ಕೆಲವೊಮ್ಮೆ ನಮ್ಮನ್ನು ನಾವೂ ಮರೆತು ಕಳೆದು ಹೋಗುವ, ಹಾಗೆ ಕಳೆದುಹೋಗುತ್ತಲೇ ತುಂಬಿಕೊಳ್ಳುತ್ತಾ ಸಾಗುವ ಪ್ರಕ್ರಿಯೆ ಅರಿವಿಲ್ಲದಂತೆ ಕ್ಷಣಮಾತ್ರದಲ್ಲೇ ನಡೆದು ಹೋಗುತ್ತದೆ. ಸಣ್ಣ ದನಿಯಲ್ಲಿ ಮಂತ್ರ ಪಠಿಸುತ್ತಾ ಅರ್ಚಕರು ಮಂಗಳಾರತಿ ಮಾಡುತ್ತಿದ್ದಾರೆ ಅವಳ ಮಿನುಗುವ ಕಣ್ಣುಗಳನ್ನೇ ನೋಡುತ್ತಾ ಕಳೆದುಹೋಗುತ್ತಿದ್ದರೆ ಬರೋಲ್ಲ ಅಂತಿದ್ಯಾ ಅಂತ ಅವಳು ನಗುತ್ತಲೇ ಛೇಡಿಸುತ್ತಿದಳು.

ಹೊರಗೆ ಯಾಗ ಮಂಟಪದಲ್ಲಿ ಚೀಟಿ ತೋರಿಸಿ ಅಂದ್ರು ಅರ್ಚಕರು. ಪ್ರಸಾದ ಕೊಡಬಹುದು ಅಂತ ಬಂದರೆ ಕೂರಿಸಿ ಸಂಕಲ್ಪ ಮಾಡಿಸಿ ನಮ್ಮ ಕೈಯಲ್ಲಿ ಅಲ್ಲಿದ್ದ ದೇವಿಯ ಪುಟ್ಟ ವಿಗ್ರಹಕ್ಕೆ ಅಷ್ಟೋತ್ತರ ಹೇಳುತ್ತಾ ಅರ್ಚನೆ ಮಾಡಿಸಿ ಅದೇ ಕುಂಕುಮವನ್ನು ಪೊಟ್ಟಣ ಕಟ್ಟಿಕೊಟ್ಟರು. ಹೊರಬರುವಾಗ ಏನೋ ಸಂತಸ, ನೆಮ್ಮದಿ. ಮಗಳು ಇಷ್ಟಗಲ ಕುಂಕುಮ ಹಣೆಗಿಟ್ಟುಕೊಂಡು ಸಂಭ್ರಮಿಸುತ್ತಿದ್ದಳು. ಸೂರ್ಯ, ಆಕಾಶ ಎಲ್ಲವೂ ನಿಧಾನಕ್ಕೆ ಕೆಂಪಾಗುತ್ತಿತ್ತು.

ಹೊರಗೆ ಕಾಲಿಡುತ್ತಿದ್ದಂತೆ ದೊಪ್ಪನೆ ಯಾರೋ ಎತ್ತಿ ಎಸೆದಂತ ಭಾವ. ಸೆಲ್ಫಿ, ಫೋಟೋ ತೆಗೆದುಕೊಳ್ಳುವ ಗಲಾಟೆಯಲ್ಲಿ, ತಳ್ಳಾಟದಲ್ಲಿ ಜನಜಂಗುಳಿ ವ್ಯಸ್ತವಾಗಿತ್ತು. ದೇವಸ್ಥಾನವೆಂದರೆ ಮೌನವಾಗಿ ಕುಳಿತು ಶಕ್ತಿ ಸಂಚಯನ ಮಾಡಿಕೊಳ್ಳುವ ಸ್ಥಳ ಅನ್ನುವುದು ಮಾಯವಾಗಿ ಈಗ ಸೆಲ್ಫಿ ತೆಗೆದುಕೊಳ್ಳುವ ಜಾಗದಂತಾಗಿದೆ.  ನಿನ್ನ ನೋಡುವುದಕ್ಕಿಂತ  ಬಂದಿದ್ದೇವೆ ಅನ್ನುವುದನ್ನು ಜಗತ್ತಿಗೆ ಸಾರಿಕೊಳ್ಳುವ ಮನೋಭಾವಷ್ಟೇ ಎದ್ದು ಕಾಣುತ್ತಲ್ಲೇ ಬನಶಂಕರಿ ಮತ್ತೆ ಬರ್ತಿನೋ ಇಲ್ವೋ ನಿನ್ನ ನಗುವನ್ನು ನಂಗೂ ಚೂರು ದಯಪಾಲಿಸೇ ಅನ್ನುತ್ತಲೇ ವಾಪಾಸಾದೆವು. ಸೋಮವಾರ ಬದಾಮಿಯ ಸುತ್ತಾಟವೆಲ್ಲಾ ಮುಗಿದು ಹೊರಡೋಣವಾ ಅಹಿ ಅಂದೇ ಅಮ್ಮಾ ಇನ್ನೂ ಟೈಮ್ ಇದೆಯಲ್ಲ ದೇವಸ್ಥಾನಕ್ಕೆ ಹೋಗೋಣ ನಂಗೆ ಅರ್ಚನೆ ಮಾಡ್ಬೇಕು ಅನ್ನಿಸ್ತಾ ಇದೆ ಅಂದ್ಲು.

ಮತ್ತೆ ಬಂದು ಚೀಟಿ ಪಡೆದು ದರ್ಶನ ಮಾಡಿದರೆ ಮತ್ತೆ ಬರೋಲ್ಲಾ ಅಂದೆಯಲ್ಲೇ ಅಂತ ನಸುನಗುತ್ತಿದ್ದಳು. ನಕ್ಕು ಅವಳನ್ನೇ ತೃಪ್ತಿಯಾಗುವವರೆಗೂ ನೋಡಿ ಬಂದು ಅರ್ಚನೆ ಮುಗಿಸಿ ಇದೇನು ಮಾಯೆ ತಾಯಿ ನಿಂದು ಅಂದೇ.
ಅವಳು ನಗುತ್ತಲೇ ಇದ್ದಳು...  ಕೈಯಲ್ಲಿ ಕುಂಕುಮದ ಪೊಟ್ಟಣವನ್ನು ಗಟ್ಟಿಯಾಗಿ ಹಿಡಿದು ಅರ್ಥಮಾಡಿಕೊಳ್ಳಲು ಹೆಣಗುತ್ತಲೇ ಇದ್ದೇನೆ ನಾನು .



Comments

Popular posts from this blog

ಮಾತಂಗ ಪರ್ವತ

ರಂಜದ ಹೂ

ಬರಿದೆ ಆಡುವ ಮಾತಿಗರ್ಥವಿಲ್ಲ...