ಮಹಾಕೂಟ
ಬೆಳಿಗ್ಗೆಯೆದ್ದು ರೆಡಿ ಆಗಿ ತಿಂಡಿ ತಿಂದು ಹೊರಬರುವ ವೇಳೆಗೆ ಸಾರಥಿ ತನ್ನ ರಥದೊಂದಿಗೆ ಕಾಯುತ್ತಿದ್ದ. ನಾವೂ ತಡಮಾಡದೆ ಆರೋಹಣ ಮಾಡಿದ ಕೂಡಲೇ ಅದಕ್ಕೆ ವಾಯುವೇಗ. ಚಿಕ್ಕ ವಯಸ್ಸಿನ ಹುಡುಗ ಆದರೆ ವೇಗ ಮಾತ್ರ ತುಸು ಜಾಸ್ತಿ ಅನ್ನಿಸುವಷ್ಟೇ ಇತ್ತು. ಮಹಾಕೂಟದವರೆಗಿನ ರಸ್ತೆಯೂ ಅಷ್ಟೇ ಚೆನ್ನಾಗಿದೆ. ದಕ್ಷಿಣದ ಮಹಾಕಾಶಿ ಅಂತ ಕರೆಸಿಕೊಳ್ಳುವ ಅದನ್ನು ನೋಡಲು ಕುತೂಹಲ ಸ್ವಲ್ಪ ಜಾಸ್ತಿಯೇ ಇತ್ತು. ಹೀಗಿರಬಹುದು ಹಾಗಿರಬಹ್ದು ಅನ್ನೋ ಕಲ್ಪನೆಗಳೂ ಸಹ.
ಹೋಗಿ ಇಳಿಯುತ್ತಿದ್ದಂತೆ ಅಲ್ಲಿದ್ದ ಆಲದಮರದ ಬಿಳಲುಗಳನ್ನ ಹಿಡಿದು ಜೋಕಾಲಿಯಾಡುತ್ತಿದ್ದವರನ್ನು ನೋಡಿದ ಕೂಡಲೇ ಅಹಿಯ ಕಣ್ಣುಗಳಲ್ಲಿ ಆಸೆ ನರ್ತಿಸುತ್ತಿತ್ತು. ಮೊದ್ಲು ದೇವರಿಗೆ ನಮಸ್ಕಾರ ಮಾಡಿ ಬರೋಣ ಬಾ ಅಂತ ಅವಳನ್ನು ಆಲ್ಮೋಸ್ಟ್ ಎಳೆದುಕೊಂಡು ಒಳಗೆ ಕಾಲಿಟ್ಟರೆ ನನ್ನೆಲ್ಲಾ ಕಲ್ಪನೆಗಳು ಅಲ್ಲೇ ಬಿದ್ದು ವಿಲವಿಲಒದ್ದಾಡಿದವು. ಮನುಷ್ಯನ ಸ್ವಭಾವವೇ ಹೀಗೇನೋ. ಅರಿಯುವ ಮೊದಲೇ ಅದಕ್ಕೊಂದು ನಮ್ಮದೇ ಕಲ್ಪನೆಯಲ್ಲಿ ರೂಪುಕೊಟ್ಟುಬಿಡುವುದು. ಆಮೇಲೆ ಅಯ್ಯೋ ನಾವಂದುಕೊಂಡ ಹಾಗೇನು ಇಲ್ಲಾ ಅಂತ ಕೊರಗೋದು.
ಪುರಾತನ ದೇವಸ್ಥಾನ, ಅದರಲ್ಲೂ ದಕ್ಷಿಣದ ಕಾಶಿ ಎಂದೇ ಪ್ರಸಿದ್ದಿಯಾಗಿರೋ ಶಕ್ತಿಪೀಠ ಕಾಶಿಗೆ ಯಾವುದರಲ್ಲೂ ಕಡಿಮೆಯಿಲ್ಲವೆಂದು ನಾರುತ್ತಿದ್ದ ವಾಸನೆಯೇ ಹೇಳುತ್ತಿತ್ತು. ಅಲ್ಲೇ ಇದ್ದ ಪುಷ್ಕರಣಿಯಲ್ಲಿ ಮಿಂದು ಬಂದವರ ಮೈಯಿಂದ ಇಳಿಯುತ್ತಿದ್ದ ನೀರು, ಹೊರಗಿನಿಂದ ಹೋದವರ ಕಾಲಿನಲ್ಲಿದ್ದ ಮಣ್ಣು, ಮರಳಿನೊಂದಿಗೆ ಸಮ್ಮಿಳಿತಗೊಂಡು ದೇವಸ್ಥಾನದ ಆವರಣ ಮಳೆಗಾಲದ ಜಗುಲಿಯಂತಾಗಿತ್ತು. ಅಲ್ಲೇ ಪ್ರಾಕಾರದಲ್ಲಿ ಕೆಲವರು ಅಡುಗೆ ಮಾಡಿ ಅಲ್ಲೇ ಪಾತ್ರೆತೊಳೆಯುತ್ತಿದ್ದರೆ ಇನ್ನು ಕೆಲವರು ಕೈಯನ್ನೇ ದಿಂಬಾಗಿಸಿಕೊಂಡು ದೇಗುಲದ ಕಡೆ ಕಾಲುಚಾಚಿ ವಿಶ್ರಾಂತಿ ತೆಗೆದುಕೊಳ್ಳುತ್ತಿದ್ದರು.
ಅಂತೂ ಇಂತೂ ಮುಂದೆ ಹೋದರೆ ಪಕ್ಕದ ಪುಷ್ಕರಣಿಯಲ್ಲಿ ಗದ್ದಲ ಜೋರಿತ್ತು. ಭಕ್ತಿಯಿಂದ ಮೀಯುವವರು ಕೆಲವರು, ಸ್ವಿಮ್ಮಿಂಗ್ ಪೂಲ್ ಏನೋ ಅನ್ನೋ ಭಾವದಲ್ಲಿ ಈಜುವವರು ಹಲವರು, ಜಲಕ್ರೀಡೆಯಲ್ಲಿ ಮಗ್ನರಾದ ಇನ್ನಷ್ಟು ಮಂದಿ. ಭೂತಕನ್ನಡಿ ಹುಡುಕಿದರೂ ಪವಿತ್ರಭಾವ ಎಲ್ಲೂ ಕಾಣಿಸಲಿಲ್ಲ. ಕೊಂಚ ಬೇಸರದಿಂದಲೇ ಮುಂದೆ ಬಂದರೆ ಅಲ್ಲಲ್ಲಿ ಎಸೆದಿದ್ದ ಒದ್ದೆ ಬಟ್ಟೆಗಳು, ಪ್ಲಾಸ್ಟಿಕ್ ಕವರ್ ಗಳು, ಕಸಕಡ್ಡಿಗಳು, ಪಾನ್ಪರಾಗ್ ಸ್ಯಾಚೆಟ್ ಗಳು ಶಿವ ನಿನಗೆ ಸ್ಮಶಾನವೇ ಸರಿಯಾದ ಜಾಗ ನೋಡು, ನಿಜವಾಗಲೂ ಇನ್ನೂ ಇಲ್ಲಿ ಉಸಿರಾಡುತ್ತಿದ್ದೆಯಾ ಅಂತ ಕೇಳೋಣವೆಂದು ಒಳಗೆ ಕಾಲಿಟ್ಟೆ.
ಫೋಟೋ ತೆಗೆಯಬಾರದು ಅನ್ನೋ ಸಹಾಯಕರ ಮಾತಿಗೆ ಕ್ಯಾರೆ ಅನ್ನದೆ ಕ್ಲಿಕ್ಕ್ಕಿಸುವುದರಲ್ಲೇ ಬಹಳಷ್ಟು ಮಂದಿ ಮಗ್ನರಾಗಿದ್ದರೆ, ದೇವರಿಗೆ ಬೆನ್ನುಹಾಕಿ ನಿಂತು ಸೆಲ್ಫಿ ತೆಗೆದುಕೊಳ್ಳುವುದರಲ್ಲಿ ಇನ್ನು ಕೆಲವರು ಏಕಾಗ್ರತೆ ವಹಿಸಿದ್ದರು. ಬಂದಿದ್ದು ಎಲ್ಲಿಗೆ, ಯಾಕೆ, ಆ ಜಾಗದ ಮಹತ್ವವೇನು ಅನ್ನೋ ಸಣ್ಣ ಭಾವ ಕೂಡಾ ಯಾರನ್ನೂ ಕಾಡಿದ್ದು ಕಾಣಿಸ್ಲಿಲ್ಲ. ದೇವಸ್ಥಾನಗಳಲ್ಲಿ ಹೇಗೆ behave ಮಾಡಬೇಕು ಅನ್ನೋದು ಮೊದಲು ಕಲಿಸಬೇಕು ಇಲ್ಲಾ ನಿಯಮಗಳನ್ನು ಜಾರಿಗೆ ತರಬೇಕು ಎಂದು ಗೊಣಗುತ್ತಲೇ ವಾಪಾಸ್ ತಿರುಗಿದರೆ....
ಆಗಷ್ಟೇ ಸ್ನಾನ ಮುಗಿಸಿ ಕುತ್ತಿಗೆಗೊಂದು ಟವೆಲ್ ಕಟ್ಟಿಕೊಂಡು ಸಣ್ಣಗೆ ನಡುಗುತ್ತಲೇ ತನ್ನ ಪುಟ್ಟ ಕೈಯಿಂದ ದೇವರ ಮುಂದಿದ್ದ ವಿಭೂತಿ ಗಟ್ಟಿಯ ಮೇಲೆ ಬೆರಳಾಡಿಸಿ ಮುಖಕ್ಕೆ, ಮೈಯಿಗೆ, ಏಕಾಗ್ರಚಿತ್ತದಿಂದ ಬಳಿದುಕೊಳ್ಳುತ್ತಿದ್ದ ಬಾಲಶಿವ ಕಾಣಿಸಿದ. ಮುದ್ದು ಉಕ್ಕಿ ಬಂದು ಒಂದು ಫೋಟೋ ತೆಗೆದುಕೊಳ್ಳಲಾ ದೇವರೇ ಅಂತ ಕೇಳಿದೆ. ಅಲ್ಲೇ ಪಕ್ಕದಲ್ಲಿದ್ದ ಕಂಬದ ಹಿಂಬಾಗಕ್ಕೆ ಬಂದು ನಿಂತು ಪೋಸ್ ಕೊಟ್ಟಿತು. ಹಿಡಿದು ಮುದ್ದಿಸಬೇಕು ಅನ್ನೋ ಆಸೆಯನ್ನು ಬಲವಂತವಾಗಿ ಹತ್ತಿಕ್ಕಿ ತುಂಬು ಕಣ್ಣಿಂದಲೇ ಅವನನ್ನು ನೋಡಿ ಹೊರಬಂದೆ..
ದೇವರನ್ನು ಮುಟ್ಟಿ ಮೈಲಿಗೆ ಮಾಡಬಾರದು..... ಚಿತ್ತಕ್ಕೆ ಭಂಗ ತರಬಾರದು..
Comments
Post a Comment