ನಮಗೆ ಸೈನಿಕರಿಗೆ ಗೊತ್ತಿರೋದು ಟಾರ್ಗೆಟ್ ಮಾತ್ರ, ನಮ್ಮ ಪೂರ್ಣ ಗಮನ ಇರೋದು ಅದನ್ನು ತಲುಪವಲ್ಲಿ. ಕಾರ್ಗಿಲ್ ಯುದ್ಧದ ನಂತರ ತುಂಬಾ ಜನ ನನ್ನನ್ನು ಕೇಳಿದ್ರು ನಿಮಗೆ ಭಯವಾಗಲಿಲ್ಲವಾ, ಹೇಗೆ ಸಾದ್ಯ ಆಯ್ತು ಅಂತ. ಅಲ್ಲಿನ ಸಂದರ್ಭ ಹೇಗಿತ್ತು ಅಂದ್ರೆ,
ಕಾರ್ಗಿಲ್ ನಲ್ಲಿ ದ್ರೋಹದಿಂದ ಪಾಕಿಸ್ತಾನ ಸೈನಿಕರು ಆಕ್ರಮಿಸಿಕೊಂಡಾಗ ಶ್ರೀನಗರದಲ್ಲಿ ಯಾವುದೇ ಆರ್ಮಿ ವೆಹಿಕಲ್ ಕಂಡರೂ ಬಾಂಬಿಂಗ್ ಆಗ್ತಾ ಇತ್ತು. ಇಡೀ ವಿಶ್ವ ಸಮುದಾಯ ಭಾರತ ಯುದ್ದ ಆರಂಭಿಸುವ ಮೊದಲೇ ಸೋತಿದೆ ಅಂತ ಭಾವಿಸಿತ್ತು. ಆಗ ಮೊದಲ ಬ್ಯಾಚ್ ಹೊರಟಿದ್ದು ಕ್ಯಾಪ್ಟನ್ ಸೌರಬ್ ಖಾಲಿಯಾ ನೇತೃತ್ವದಲ್ಲಿ.
ಒಂದು ನಾಲ್ಕೈದು ಜನರರಿರಬಹುದು ಎಂದು ಹೊರಟಿದ್ದ ಆ ತಂಡಕ್ಕೆ ಅಲ್ಲಿಗೆ ಹೋದಮೇಲೆ ಅರಿವಾಗಿದ್ದು ಅಧಿಕ ಸಂಖ್ಯೆಯಲ್ಲಿ ಇದ್ದಾರೆಂದು. ಅವರನ್ನು ವಶಪಡಿಸಿಕೊಂಡ ಪಾಕಿಗಳು ಅವರ ದೇಹದಲ್ಲಿ ಯಾವೊಂದು ಭಾಗವನ್ನೂ ಬಿಡದೆ ಚಿತ್ರಹಿಂಸೆಗೆ ಗುರಿಪಡಿಸಿ ನಂತರ ಕೊಂದು ಕಳುಹಿಸಿತು. ಆ ಪರಿಸ್ಥಿತಿಯನ್ನು ನೋಡಿದ ನಮಗೆ ಆದದ್ದು ಭಯ, ಹೆದರಿಕೆ ಅಲ್ಲಾ , ಕಣ್ಣೆದೆರು ಬಂದಿದ್ದು ನಮ್ಮ ಫ್ಯಾಮಿಲಿಯಲ್ಲ, ಅಷ್ಟು ಚಿತ್ರಹಿಂಸೆ ಕೊಟ್ಟು ಅವರನ್ನು ಕೊಂದು ಕಳುಸಿದ ಶತ್ರುಗಳ ವಿರುದ್ಧದ ಸೇಡು ಅಷ್ಟೇ.
ರೇಡಿಯೋ ರೂಂ ನಲ್ಲಿ ಕುಳಿತಿದ್ದ ನಮಗೆ ಮೊದಲ ಸಿಗ್ನಲ್ ಬಂದಿದ್ದು ಕ್ಯಾಪ್ಟನ್ ಸಂಜೀವ್ ಸಿಂಗ್ ಅವರಿಂದ ಹೋ ಯಾಯಾ ಅಂತ. ನಂತರ ಬಂದಿದ್ದು ಕ್ಯಾಪ್ಶನ್ ವಿಕ್ರಂ ಬಾತ್ರ ಅವರ ಯೇ ದಿಲ್ ಮಾಂಗೆ ಮೋರ್. ನಂತರ ನಡೆದಿದ್ದು .4875 ಟಾಸ್ಕ್. ಅತೀ ಕ್ಲಿಷ್ಟಕರವಾದ ಟಾಸ್ಕ್, ಕಾರ್ಗಿಲ್ ಯುದ್ದದಲ್ಲಿ ಕೊಡಲ್ಪಟ್ಟ 4 ಪರಮವೀರ ಚಕ್ರಗಳಲ್ಲಿ 2 ಚಕ್ರ ಇಲ್ಲಿ ಹೋರಾಡಿದವರಿಗೆ ಕೊಡಲಾಗಿದೆ.
ಆಗಲೂ ನನ್ನ ಸೆಲೆಕ್ಟ್ ಮಾಡಿರಲಿಲ್ಲ. ಇಂಜಿನಿಯರ್ ಮುಗಿಸಿದರೂ ನನ್ನ ಸೆಳೆದಿದ್ದು ಸೈನ್ಯ. ಸುಮ್ಮನೆ ಕೂರಲು ನನ್ನ ಮನಸ್ಸು ಒಪ್ಪಲಿಲ್ಲ. ಧೈರ್ಯ ಮಾಡಿ ನನ್ನ ಹಿರಿಯ ಅಧಿಕಾರಿಗಳ ಜೊತೆ ಮಾತನಾಡಿ ಅವರನ್ನು ಒಪ್ಪಿಸಿ ನಾನು ಯುದ್ದಕ್ಕೆ ಹೊರಟೆ.
ನನ್ನ ಬ್ಯಾಚ್ ಹೊರಟಿದ್ದು ಜುಲೈ ನಾಲ್ಕರಂದು, ಜ್ವರದಿಂದ ಬಳಲುತ್ತಿದ್ದ ನನ್ನ ಬಡಿ ಶ್ಯಾಮ್ ಸಿಂಗ್ ಅವರನ್ನು ರೆಸ್ಟ್ ತೆಗೆದುಕೊಳ್ಳಲು ಹೇಳಿದ್ದೆ. ಆದರೆ ಅವ್ರು ಸರ್ ಈ ಸಮಯದಲ್ಲಿ ನಾನು ನಿಮ್ಮ ಜೊತೆ ಇರಲಿಲ್ಲ ಅಂದ್ರೆ ಜನರಿಗೆ ನಾನು ಹೇಗೆ ಮುಖ ತೋರಿಸಲಿ ಅದಕ್ಕಿಂತ ಹೆಚ್ಚಾಗಿ ಕನ್ನಡಿಯಲ್ಲಿ ನನ್ನ ಮುಖ ನಾನೇ ಹೇಗೆ ನೋಡಿ ಕೊಳ್ಳಲಿ ಎಂದು ಕೇಳಿದರು. ಸರಿ ಬನ್ನಿ ಎಂದು ಅವರನ್ನೂ ಕರೆದುಕೊಂಡು ಹೊರಟೆ.
ಒಂದೊಂದೇ ಬಂಕರ್ಗಳನ್ನೂ ಕ್ಲಿಯರ್ ಮಾಡುತ್ತಾ ಹೋಗಬೇಕು, ರಾತ್ರಿಯೆಲ್ಲಾ ಹೋರಾಟಮಾಡಿ 3-4 ಬಂಕರ್ಗಳನ್ನೂ ಕ್ಲಿಯರ್ ಮಾಡುವಾ ಬೆಳಕು ಹರಿದಿತ್ತು.ತಿರುಗಿ ನೋಡಿದೆ, ಯಾರೋ ಮಲಗಿದ ಹಾಗೆ ಕಾಣಿಸಿತು, ಆದರೆ ಭಂಗಿ ಅಸಹಜವಾಗಿತ್ತು. ಬುದ್ಧಿ ಹೇಳ್ತಾ ಇತ್ತು ಅವರು ಬದುಕಿಲ್ಲ ಅಂತ, ಆದರೆ ಹೃದಯ...
ಅವರು ನಿದ್ದೆ ಮಾಡ್ತಾ ಇದಾರೆ ಅಂತ ನಂಬಿಸುತ್ತಿತ್ತು. ಹತ್ತಿರ ಹೋದೆ, ಸೂರ್ಯನ ಕಿರಣಗಳು ಅವರ ಮೇಲೆ ಪ್ರತಿಫಲಿಸುತ್ತಿತ್ತು. ಹತ್ತಿರ ಹೋಗಿ ಮುಖ ತಿರುಗಿಸಿನೋಡಿದೆ ಅದು ಶ್ಯಾಮ್ ಸಿಂಗ್.
ಅವರ ಜೇಬಲ್ಲಿ ಒಂದು ಚೀಟಿಬರೆದಿಟ್ಟು ಕೊಂಡಿದ್ದ್ದರು.
ಯೇ ಜಿನ್ದಗಿ ಭೀ ಕ್ಯಾ ಜಿನ್ದಗಿ
ದುಶ್ಮನ್ ಕೋ ಮಾರೇ ಬಿನಾ
ಯೇ ಜಿನ್ದಗಿ ಭೀ ಕ್ಯಾ ಜಿನ್ದಗಿ
ಮೋತ್ ಕಿ ಬಿನಾ....
ಅವತ್ತು ಬೆಳಿಗ್ಗೆ, ರಾತ್ರಿ, ನಂತರದ ಬೆಳಗು ಮತ್ತು ರಾತ್ರಿ ಹೀಗೆ ನಮ್ಮ ಹೋರಾಟ ಮುಂದುವರೆದಿತ್ತು. ನೀರು ಬೇಕೆಂದರೆ ಅಲ್ಲೇ ಇದ್ದ ಮಂಜುಗಡ್ಡೆಯನ್ನೇ ಉಪಯೋಗಿಸಬೇಕಿತ್ತು. ಆಹಾರವೆಂದರೆ ಚಾಕಲೇಟ್ ಅಷ್ಟೇ. 7 ರ ಮುಂಜಾನೆ ಮಲಗಿಕೊಂಡು ಮುಂದುವರೆಯುತ್ತಿದ್ದ ನನ್ನ ಎದುರಿಗೆ ಒಂದು ಗ್ರನೆಡ್ ಬಂದು ಬಿತ್ತು. ಅದು ಬ್ಲಾಸ್ಟ್ ಆಗೋಕೆ ಇರುವ ಸಮಯ 4 ಸೆಕೆಂಡ್ಗಳು ಮಾತ್ರ. ಅದನ್ನು ವಾಪಾಸ್ ಎಸೆಯೋಣವೆಂದರೆ ನನ್ನೆದರು ಬಂಡೆಯಿತ್ತು. ಅದು ಬ್ಲಾಸ್ಟ್ ಆಸರೆ 10 ಮಿ. ಸುತ್ತಳತೆಯಲ್ಲಿರುವ ಎಲ್ಲವೂ ಚಿಂದಿ ಚಿಂದಿಯಾಗುತ್ತದೆ.
ನಾನು ಹೀಗೆ ಇದ್ದರೆ ನನ್ನ ದೇಶ ಚಿಂದಿ ಚಿಂದಿಯಾಗುತ್ತದೆ, ನನ್ನ ದೇಹದ ಪಾರ್ಟ್ಗಳನ್ನೂ ಒಂದು ಕವರ್ನಲ್ಲಿ ಹಾಕಿ ಮನೆಗೆ ಕಳಿಸ್ತಾರೆ, ಕೊನೆಪಕ್ಷ ನನ್ನ ದೇಹದ ಮೇಲಿನ ಭಾಗವಾದರೂ ಅವರಿಗೆ ಸಿಗಲಿ ಎಂದು ಪಕ್ಕಕ್ಕೆ ಉರುಳಿದೆ. ನನ್ನ ಜೋತೆಗಾರರಿಬ್ಬರನ್ನು ಕೇಳಿದೆ ಹೇಗಿದ್ದೀರಿ, ಅವ್ರು ಸೇಫ್ ಅಂದ್ರು. ನಂತರವೇ ನಾನು ನನ್ನನ್ನು ನೋಡಿಕೊಂಡಿದ್ದು.
ಆಗ ಅಲ್ಲಿಗೆ ಬಂದ ಕ್ಯಾಪ್ಟನ್ ವಿಕ್ರಂ ಬಾತ್ರಾ ನೀನು ಇಲ್ಲಿಂದ ಹೋಗಲೇಬೇಕು ಇಲ್ಲದಿದ್ದರೆ ಜೀವಕ್ಕೆ ಅಪಾಯ ಎಂದು ಹೇಳಿದರು. ಅದೇ ಸ್ಥಿತಿಯಲ್ಲಿ ನಾನು ತೆವಳಿಕೊಂಡು ಅಲ್ಲಿಂದ 100 ಮಿ ಕೆಳಕ್ಕೆ ಬಂದೆ. ಬಂದ ಮೇಲೆ ಕಾಲು ನೋಡಿಕೊಳ್ಳುವ ಎಂದು ನನ್ನ ವಿಂಟರ್ ಶೂ ತೆಗೆದೇ, ಅದು ತುಂಬಿ ಹರಿದುಬಂದ ರಕ್ತ ಅಲ್ಲಿನ ಮಂಜುಗಡ್ಡೆಯನ್ನೆಲ್ಲಾ ಕೆಂಪಾಗಿಸಿತು.
ಒಬ್ಬರು ಬಂದು ನನ್ನನ್ನು ಹೆಗಲ ಮೇಲೆ ಹೊತ್ತು ಬಂಡೆಯಿಂದ ಬಂಡೆಗೆ ಜಿಗಿಯುತ್ತಾ ಹೊತ್ತೊಯ್ಯುತ್ತಿದ್ದರೆ ನನ್ನ ಕಣ್ಣೆಲ್ಲಾ ಕಾಲಿನ ಮೇಲೆಯೇ, ಎಲ್ಲಿ ಕಾಲು ಕಳಚಿ ಕೆಳಗೆ ಬಿಳುತ್ತೋ, ಅದನ್ನು ಎತ್ತಿಕೊಂಡು ಹೋಗಿ ಡಾಕ್ಟರ ಗೆ ಕೊಟ್ರೆ ಏನಾದರೂ ಮಾಡ್ತಾರೆನೋ ಅನ್ನೋ ಆಸೆ. ಬೆಳಿಗ್ಗೆ ಪೆಟ್ಟು ತಿಂದ ನನ್ನನ್ನು ಕ್ಯಾಂಪ್ಗೆ ಕರೆದುಕೊಂಡು ಬರುವಾಗ ಸಂಜೆಯಾಗಿತ್ತು. ಪ್ರಜ್ಞೆ ನನ್ನ ಜೊತೆ ಕಣ್ಣಾಮುಚ್ಚಾಲೆಯಾಡುತ್ತಿತ್ತು.
ಕ್ಯಾಂಪ್ಗೆ ತಂದು sedative ಕೊಟ್ಟು ನನ್ನನ್ನು ಮಲಗಿಸಿ ಅಲ್ಲಿಂದ ಶ್ರೀನಗರಕ್ಕೆ ಸಾಗಿಸಲು ಹೆಲಿಕ್ಯಾಪ್ಟರ್ ಗೆ ಕಾಯಲಾಗುತ್ತಿತ್ತು. ಮರುದಿನ ಮುಂಜಾನೆ ಬಂತು. ತೀರಾ ಎತ್ತರದಲ್ಲಿ ಹಾರುವ ಹಾಗೂ ಇರಲಿಲ್ಲ ಎಲ್ಲಿ ಶತ್ರುಗಳು ಶೂಟ್ ಮಾಡ್ತಾರೋ ಅನ್ನೋ ಭಯ. ಅಲ್ಲಿಂದ ನನ್ನನ್ನು ಕರೆದುಕೊಂಡು ಬರುವಾಗ ನನ್ನ ಸಹಾಯಕ ಹೇಳಿದ, ಸಾಬ್ ನೋಡಿ .4875 ಮೇಲೆ ನಮ್ಮ ಧ್ವಜ ಹಾರಾಡುತ್ತಿದೆ. ಅದೇ ಸ್ಥಿತಿಯಲ್ಲಿ ಎದ್ದ ನಾನು ಸೆಲ್ಯೂಟ್ ಮಾಡಿ ಇನ್ನು ನನ್ನ ಜೀವ ಹೋದರೂ ಪರವಾಗಿಲ್ಲ ಎಂದುಕೊಂಡು ನಿರಾಳವಾಗಿ ಮಲಗಿದೆ.
ನಂತರ ಅನೇಕ ತಿಂಗಳುಗಳ ಕಾಲ ಆಸ್ಪತ್ರೆಯಲ್ಲಿದ್ದೆ. ಈ ಕಾರ್ಗಿಲ್ ಯುದ್ದದಲ್ಲಿ ಮಾಡಿದವರಲ್ಲಿ ಬಹಳಷ್ಟು ಜನ ಯುವಕರು. ನನ್ನ ಗೆಳೆಯನೊಬ್ಬ ವೀರಮರಣವನ್ನಪ್ಪಿದ್ದ. ಅವರ ತಾಯಿ ನನ್ನ ನೋಡಲೆಂದು ಬಂದಾಗ ತಡೆಯಲಾರದೆ ಅಮ್ಮ ಸಾರೀ ಅಂದೇ.. ಅವರು ಮಗು ತಾಯ್ನಾಡಿಗಾಗಿ ಜೀವತೆತ್ತು, ತ್ರಿವರ್ಣಧ್ವಜವನ್ನು ಹೊದ್ದು ಬರುವ ಮಗನಿಗಿಂತ ಶ್ರೇಷ್ಠವಾದ ಉಡುಗೊರೆ ಈ ಜಗತ್ತಿನಲ್ಲಿ ಬೇರೇನಿದೆ ಎಂದರು.
ಇದು ಈ ದೇಶದ ಸೈನಿಕ, ಇದು ಈ ನೆಲದ ತಾಯಿ ಮನಸ್ಸು. ಸೈನಿಕರ ಬಗ್ಗೆ ದೇಶದ ಬಗ್ಗೆ ಒಂದು ಕ್ಷಣದ ಭಾವಾವೇಶದಿಂದ ಕಣ್ಣಿರು ಸುರಿಸಿ ಮರೆಯೋಲ್ಲ ನಾವು. ನಮ್ಮ ಬಾಯಲ್ಲಿ ಸದಾ ಹೊಮ್ಮುವುದು ನೇತಾಜಿ ಅವರ ವಾಕ್ಯ
ಕದಂ ಕದಂಬಡಾಯೇ ಜಾ....
ಖುಷಿ ಕೀ ಗೀತ್ ಗಾಯಿ ಜಾ....

Comments

Popular posts from this blog

ಮಾತಂಗ ಪರ್ವತ

ರಂಜದ ಹೂ

ಬರಿದೆ ಆಡುವ ಮಾತಿಗರ್ಥವಿಲ್ಲ...