ಅಮ್ಮಾ ಬುಕ್ ಓದ್ಬೇಡಾ, ಮೊಬೈಲ್ನೂ ನೋಡ್ಬೇಡ, ನನ್ನೇ ನೋಡು ಅಂತ ಕೈಯಲ್ಲಿದ್ದ ಬುಕ್ ಕಿತ್ತಿಟ್ಟು ರಾಜ್ಕುಮಾರಿ ಸ್ಕೇಟ್ ಮಾಡಲು ಹೊರಟಳು. ಸ್ಕೇಟ್ ಮಾಡುವ ಮುನ್ನ ಗ್ರೌಂಡ್ ಸುತ್ತಾ 10 ರೌಂಡ್ ಓಡಿ ಆಮೇಲೆ ಸ್ವಲ್ಪ exercise ಮಾಡಿಸ್ತಾರೆ ಅವಳ ಸರ್. ಸರ್ ಆ ಕಡೆ ತುದಿಯಲ್ಲಿದ್ದರೆ ಈ ಕಡೆಯ ತುದಿಯ ಕಟ್ಟೆಯಲ್ಲಿ ಎಲ್ಲಾ ಅಮ್ಮಂದಿರು. ರನ್ ಅಂದ ಕೂಡಲೇ ಅವುಗಳಿಗೆ ಯಾರು ಓಡ್ತಾರೆ ಅನ್ನೋ ಸೋಮಾರಿತನ. ನೋಡಿ ಎಷ್ಟು ನಾಟಕ ಮಾಡ್ತಾವೆ ಅಂತ ಅಮ್ಮಂದಿರಿಗೂ ಹೆಮ್ಮೆ ತುಂಬಿದ ನಗು.

 ಹಾಗಾಗಿ ಅರ್ಧ ರೌಂಡ್ ಮುಗಿಸುವ ಒಳಗೆ ಕುಳಿತಿದ್ದ ಅಮ್ಮಂದಿರ ಹತ್ತಿರ ಬಂದು ಹೊಟ್ಟೆನೋವು ಅನ್ನೋರು, ಕಾಲು ನೋವು ಅಂತ ಅಳುವವರು, ಅರ್ಧ ಓಡಿ ಆಮೇಲೆ ನಡೆಯುವವರು, ಗೆರೆಯ ಒಳಗೆ ಹೋಗಿ ದೂರ ಕಡಿಮೆ ಮಾಡಿ ಕೊಳ್ಳುವವರು, ಸರ್ ನೋಡಿದಾಗ, ಹತ್ತಿರ ಬಂದಾಗ ಮಾತ್ರ ಓಡುತ್ತಿರುವವರ ಹಾಗೆ ನಟಿಸಿ ಆಮೇಲೆ ಮಾತಾಡುತ್ತಾ ನಡೆಯುವವರು ಅಬ್ಬಾ ಓಡುವುದರಲ್ಲೂ ಎಷ್ಟೊಂದು ವೈವಿಧ್ಯ ಅನ್ನುತ್ತಾ ಅಹಿಯನ್ನೇ ಗಮನಿಸುತ್ತಿದ್ದೆ. ಜಗತ್ತು ಏನೇ ಅಪ್ಡೇಟ್ ಆದರೂ, ಮಕ್ಕಳು ಎಷ್ಟೇ ನಮಗಿಂತ ಫಾಸ್ಟ್ ಅನ್ನಿಸಿದರೂ ಈ ಹೊಟ್ಟೆನೋವು ಅನ್ನೋ ಕಾಯಿಲೆಯಿಂದ ಮಾತ್ರ ಅಪ್ಡೇಟ್ ಆಗಿಲ್ಲ ಅಂತ ಪಕ್ಕನೆ ನಗುಬಂತು. ಮತ್ತೆ ಗಮನಿಸಲು ಶುರು ಮಾಡಿದೆ, ಸರ್  ನೋಡ್ತಾರೆ ಅನ್ನೋ ಅವಸರಕ್ಕೆ ಗೆರೆಯ ಒಳಗೆ ನುಗ್ಗಿ ಮುಂದೆ ಹೋಗುವವರಿಗೆ ಸರಿದು ಜಾಗ ಮಾಡಿ ಕೊಡುತ್ತಾ, ನಿಂತು ಮಾತಾಡುವವರ ಪಕ್ಕದಿಂದ ಆಗಾಗ ಅಮ್ಮಾ ನೋಡ್ತಾ ಇದಾಳ ಅನ್ನೋದನ್ನ ಕಿರುಗನ್ನಿನಿಂದ ಗಮನಿಸುತ್ತಾ ಅಹಿ  ತನ್ನ ಪಾಡಿಗೆ ತಾನು ಗೆರೆಯ ಹೊರಗೆ  ಓಡುತ್ತಿದ್ದಳು.

exercise ಮಾಡುವ ಸಮಯದಲ್ಲೂ ಇದೇ ಕತೆ. ಸರ್ ಆಕಡೆ ತಿರುಗುತ್ತಿದ್ದಂತೆ ಈ ಕಡೆ ಎದ್ದು ನಿಂತ ಆ ಕಡೆ ಈಕಡೆ ನೋಡುತ್ತಾ ನಿಲ್ಲುವ ಮಕ್ಕಳು, ಅರೆ ಮೋಸ ಮಾಡುವುದು ಸುಲಭವಾ, ಮೋಸ ಹೋಗುವುದು ಸುಲಭವಾ ಆಲೋಚಿಸುತ್ತಿದ್ದೆ. ಬಹಳಷ್ಟು ಮಕ್ಕಳು ಆರಾಮಾಗಿ ನಗುತ್ತಾ ನಿಂತಿದ್ದರೆ ಇದೊಂದೇ ಬೆವರು ಒರೆಸಿಕೊಂಡು, ಕೈಕಾಲು ನೋವುತ್ತಿದ್ದರೆ ಕಣ್ಣಂಚಿನಲ್ಲಿ ನೀರು ತಡೆ ಹಿಡಿದು ತನ್ನ ಪಾಡಿಗೆ ತಾನು ಸರ್ ಹೇಳಿದಷ್ಟೂ ಮಾಡುತಿತ್ತು. ಅವರಿಗೂ ಈ ಕಳ್ಳಾಟ ಗೊತ್ತಾಗಿ ಚಿಕ್ಕ ಚಿಕ್ಕ ಗುಂಪು ಮಾಡಿ ಇನ್ನೊಂದು ಸಲ 5 ರೌಂಡ್ ರನ್ ಮಾಡ್ಬೇಕು, ಗೆರೆ ಒಳಗೆ ಬರೋ ಹಾಗಿಲ್ಲ , ನಿಲ್ಲೋ ಹಾಗಿಲ್ಲ, ಯಾರು ಲಾಸ್ಟ ಬರ್ತಾರೋ ಅವ್ರಿಗೆ ಒಂದು ಪೆಟ್ಟು ಅಂದ್ರು. ರೇಸ್ ಶುರುವಾಯ್ತು. ಗೆರೆ ಒಳಗೆ ನುಗ್ಗಿ ಹೋದವರಿಗೆ ಇವ್ಳು ಜಾಗ ಬಿಟ್ಟು ಮತ್ತೆ ತನ್ನ ಪಾಡಿಗೆ ತಾನು ಓಡಿ 3ನೇಯವಳಾಗಿ ಬಂದ್ಲು. ಆ ಕಡೆ ನಿಂತಿದ್ದ ಸರ್ ಕಡೆ ಹೋಗಿ ಕೈ ಮುಂದೆ ಮಾಡಿ ನಿಂತ್ಳು. ಅವ್ರು ಯಾಕೆ ನೀನು ಲಾಸ್ಟ ಅಲ್ಲಾ ಅಂದ್ರೂ ಫಸ್ಟ್ ಬಂದಿಲ್ಲ ಅದಕ್ಕೆ ಅಂತ ಮತ್ತೂ ಕೈನೀಡಿ ನಿಂತಿದ್ಲು.

1.30 ನಿಮಿಷದ ಅವಧಿಯಲ್ಲಿ ಸರ್ ಹೇಗೆ ಹೇಳ್ತಾರೋ ಹಾಗೆ ಅವ್ರು ನೋಡ್ತಾರೋ ಇಲ್ವೋ, ಉಳಿದವರು brake ಮಾಡಿದರೂ ತಾನು ಮಾತ್ರ ಕಷ್ಟವಾದರೂ ನೋವಾದರೂ, ಲಾಸ್ಟ್ ಆದರೂ ಉಹೂ ಅವಳ ಭಾವ ಬದಲಾಗಲಿಲ್ಲ. ನಿಯಮ ತಪ್ಪಲಿಲ್ಲ. ಪಕ್ಕದಲ್ಲಿ ಕುಳಿತವರು ಏನ್ರೀ ನಿಮ್ಮ ಮಗಳು ಇಷ್ಟು ಪ್ರಾಂಪ್ಟ್ ಆದರೆ ಬದುಕೋದು ಕಷ್ಟ ಕಣ್ರೀ ಅಂದ್ರು. ನಕ್ಕು ಸುಮ್ಮನಾದರೂ ಒಳಗೊಳಗೇ ಗೊಂದಲ.. ಪ್ರಾಮಾಣಿಕವಾಗಿರು ಅಂತ ಹೇಳಿ ತಪ್ಪು ಮಾಡಿದ್ನಾ, ವೇಗದ ಯುಗದಲ್ಲಿ ಅವ್ಳು ಹಿಂದೆ ಉಳಿತಾಳ, ಅದರಿಂದ ಅವಳಿಗೆ ಮಾನಸಿಕವಾಗಿ ಹಿಂಸೆ ಅನ್ನಿಸಬಹುದಾ ಅನ್ನೋ ಫೀಲ್ ಕಾಡುತ್ತಲೇ ಇತ್ತು. ಮಾರುದ್ದದ ಟ್ರಾಫಿಕ್ ನಲ್ಲಿ ಎದುರಿನಿಂದ ಬರುವ ವಾಹನಕ್ಕೆ ಜಾಗವಾಗಲಿ ಅಂತ ಕಾಯುತ್ತಿದ್ದರೆ ಮಾಡಲು ಕೆಲಸವಿಲ್ಲವೇನೋ ಅಂತ ಒಂದು ವ್ಯಂಗ್ಯ ನಗು ನಕ್ಕು ಭರ್ರೆಂದು ಮುಂದೆ ಹೋಗುವ ವೆಹಿಕಲ್ ಸವಾರರನ್ನು ನೋಡುವಾಗ ಮನಸಲ್ಲಿ ಛೆ ನಾನೊಬ್ಬಳು ಯಾಕೆ ರೂಲ್ಸ್ ಅಂತ ಪರದಾಡಬೇಕು ಅಂತ ಅನ್ಸುತ್ತಲ್ಲ ಹಾಗೆ ಅವಳಿಗೂ ಅನ್ನಿಸಿ ಅಮ್ಮನಿಗಾಗಿ ಸುಮ್ಮನಾಗಬಹುದಾ...  ಯಾಕೋ ಸಣ್ಣಗೆ ಶುರುವಾದ ವಿಷಾದ ಮೆಲ್ಲಗೆ ಗಾಢವಾಗಿ ಆವರಿಸಿ ಉಸಿರುಕಟ್ಟುವ ಹಾಗಾಗುತಿತ್ತು.

ಕ್ಲಾಸ್ ಮುಗಿಸಿ ಎಂದಿನಂತೆ ಮಾತಾಡದೆ ಮೌನವಾಗಿಯೇ ಅವಳ ಶೂ ಬಿಚ್ಚಿ ಎದ್ದು ಹೊರಟವಳನ್ನು ಅವಳೂ ಮೌನವಾಗಿಯೇ ಹಿಂಬಾಲಿಸಿದಾಗ ಮತ್ತಷ್ಟು ನೋವು ಶ್ರುತಿ ಹಿಡಿಯಿತು. ಸಂಕಟವೋ, ವಿಷಾದವೋ, ಬೇಸರವೋ ಒಂದೂ ಅರಿಯದ ಭಾವ. ಮೌನವಾಗಿಯೇ ಇಬ್ಬರೂ ಮನೆಗೆ ಬಂದೆವು. ಈ ಮೌನದಿಂದ ಪಾರಾಗಬೇಕಾದರೆ ಸದ್ದು ಬೇಕು. ಸದ್ಯಕ್ಕೆ ಇಬ್ಬರೂ ಮಾತಾಡುವ ಮನಸ್ಥಿತಿಯಲ್ಲಿ ಇಲ್ಲದಿದ್ದರಿಂದ ಅರ್ಧಕ್ಕೆ ನಿಲ್ಲಿಸಿಹೋಗಿದ್ದ ವೀಡಿಯೊದ ಪ್ಲೇ ಬಟನ್ ಒತ್ತಿದೆ. ನಮ್ಮ ಶ್ರದ್ಧೆ, ಶಕ್ತಿ ಎಲ್ಲವೂ ಗೆಲ್ಲುವುದರ ಕಡೆಗೆ ಇರಬೇಕೆ ಹೊರತು ಇನ್ನೊಬ್ಬರನ್ನು ಸೋಲಿಸುವ ಕಡೆಗಲ್ಲ ಅನ್ನೋ ಅರ್ಥದ ಸದ್ಗುರುವಿನ ಮಾತು ಮೂಡಿ ಬರುತಿತ್ತು. ಅರೆ ಹೌದಲ್ವಾ ಇನ್ನೊಬ್ಬರನ್ನು ಸೋಲಿಸುವುದರಿಂದ ಗೆಲವು ಸಾಧ್ಯವಿಲ್ಲ, ಆ ಭಾವ ಬಂದಾಗ ಗಮನ ಗೆಲ್ಲುವುದರ ಕಡೆಗಿಂತ ಅವರನ್ನು ಸೋಲಿಸುವ ಕಡೆಗಿರುತ್ತದೆ. ಒಂದರ್ಥದಲ್ಲಿ ಇದು ನಮ್ಮ ಸೋಲೂ ಕೂಡಾ ಅಲ್ವಾ ಅನ್ನಿಸಿ ಅಹಿಯ ಕಡೆಗೆ ತಿರುಗಿದೆ. ಮೌನವಾಗಿ ಕೇಳಿಸಿಕೊಳ್ಳುತ್ತಿದ್ದ ಅವಳೂ ನನ್ನ ಮುಖ ನೋಡಿದಳು.

ಮರುಕ್ಷಣದಲ್ಲಿ  ಇಬ್ಬರೂ ಒಬ್ಬರೊಬ್ಬನ್ನೊಬ್ಬರು ಅಪ್ಪಿಕೊಂಡು ಮನೆಯೇ ಅಲ್ಲಾಡುವಷ್ಟು ಗಟ್ಟಿಯಾಗಿ ನಗುತ್ತಿದ್ದೆವು. ಅಲ್ಲಿಯವರೆಗೂ ಕಾರ್ಮೋಡ ಕವಿದಿದ್ದ ಆಕಾಶ ಮೆಲ್ಲಗೆ ಹನಿಯುದರಿಸಿ ಮಾಯವಾಗಿತ್ತು. ಸೂರ್ಯ ಮತ್ತೆ ಗೆದ್ದಿದ್ದ. ಬೆಳಕು, ನಗು ಒಂದಕ್ಕೊಂದು ಜಿದ್ದಿಗೆ ಬಿದ್ದಂತೆ ಚೆಲ್ಲಾಡುತ್ತಿದ್ದವು.

  

Comments

Popular posts from this blog

ಮಾತಂಗ ಪರ್ವತ

ರಂಜದ ಹೂ

ಬರಿದೆ ಆಡುವ ಮಾತಿಗರ್ಥವಿಲ್ಲ...