ಮಹಾಕೂಟ ಮುಗಿಸಿ ಐಹೊಳೆಗೆ ಹೋಗುವಾಗ ಯಾವುದೇ ಕಲ್ಪನೆಗಳನ್ನ ಇಟ್ಟುಕೊಳ್ಳಬಾರದು ಅಂತ ನಿರ್ಧರಿಸಿಯೇ ಕಾರು ಹತ್ತಿದ್ದೆ. ಅರ್ಧ ಮುಗಿದ ರಸ್ತೆಗಳು, ಹೊಂಡಗಳು ಕಚ್ಚಾ ದಾರಿಗಳ ನಡುವೆ ಪ್ರಯಾಣ ಸಾಗಿತ್ತು. ಆಗೊಮ್ಮೆ ಈಗೊಮ್ಮೆ ಎದುರಾಗುವ ವಾಹನ ಬಿಟ್ಟರೆ ಇಡಿ ರಸ್ತೆ ನಿರ್ಜನವಾಗಿತ್ತು. ರಸ್ತೆಯ ಬದಿಯಲ್ಲಿ ಜೋಳ ತಲೆದೂಗುತ್ತಿದ್ದರೆ ಸೂರ್ಯಕಾಂತಿ ನಗುತ್ತಿತ್ತು. ಅಮ್ಮಾ ಒಂದು ವೆಹಿಕಲ್ ಇಲ್ವಲ್ಲೇ ನನ್ನ ಸೈಕಲ್ ತಂದಿದ್ದಾರೆ ಆರಾಮಾಗಿ ಓಡಿಸಬಹುದಿತ್ತು ಅಂತ ಬಿಟ್ಟ ಕಣ್ಣುಗಳಿಂದ ರಸ್ತೆಯನ್ನು ಗಮನಿಸಿ ಅಹಿ ಥ್ರಿಲ್ ಆಗುತಿದ್ದಳು.

ದೂರದಲ್ಲಿ ಬಂಡೆಯ ನಡುವಿನಲ್ಲಿ ಒಂದು ಪುಟ್ಟ ಮನೆ ಕಾಣಿಸಿ ಅದೆಷ್ಟು ಇಷ್ಟವಾಯಿತು ಅಂದ್ರೆ ಕಾರನ್ನು ಅಲ್ಲಿ ತಿರುಗಿಸಲು ಹೇಳಿ ಅದನ್ನೇ ನೋಡುತ್ತಿದ್ದೆವು.ಸದ್ದೇ ಇಲ್ಲದ, ಜನರೂ ಇಲ್ಲದ ಏಕಾಂತ ಜಾಗದಲ್ಲಿ ತಲೆಯೆತ್ತಿ ನಿಂತ ಅದು ಬಸದಿ ಅಂತ ಅರಿವಾಗಿದ್ದು ಒಳಗೆ ಕಾಲಿಟ್ಟಾಗಲೇ. ನಿಶಬ್ದದಲ್ಲೇ ಒಳಗಿನ ಸದ್ದು ಸ್ಪಷ್ಟವಾಗಿ ಕೇಳೋದು ಅಂತ ಇಂಥ ಜಾಗದಲ್ಲಿ ಬಸದಿ ಕಟ್ಟಿ ವಾಸಿಸುತ್ತಿದ್ದರಾ ಅನ್ನಿಸಿತು ಒಂದು ಕ್ಷಣ. ಮೋಡಕಟ್ಟಿದ ವಾತಾವರಣದಲ್ಲಿ ವಿವರಿಸಲಾಗದ ಒಂದು ಧಗೆ ಆವರಿಸಿರುತ್ತೆ. ಅಂತಹ ಬೇಗುದಿಯಿಂದ ತಪ್ಪಿಸಿಕೊಂಡು ಒಳಗೆ ಕಾಲಿಟ್ಟರೆ ಶಾಂತ ನಿಶಬ್ದ ಜಗತ್ತು ಎದುರಾಗಿ ಮೌನ ತಬ್ಬಿಕೊಳ್ಳುತ್ತೆ. ನಾವು ಅರ್ಥವಾಗೋದು ಮೌನದಲ್ಲೇ ಆದರೆ ಆ ಮೌನವನ್ನು ಜೀರ್ಣಿಸಿಕೊಳ್ಳುವ ಸಂಕಲ್ಪಶಕ್ತಿ ಇಲ್ಲದಿದ್ದರೆ ಆ ಮೌನ ಭಯವನ್ನೂ ಹುಟ್ಟಿಸುತ್ತೆ. ಅಲ್ಲೇ ಬಂಡೆಗೆ ಒರಗಿ ಒಂದಷ್ಟು ಹೊತ್ತು ಕುಳಿತರೆ ಮಾತೇ ಬೇಡವೆನಿಸಿಬಿಟ್ಟಿತ್ತು.

ಆಸೆಯಿದ್ದರೂ ಹೆಚ್ಚು ಹೊತ್ತು ಕೂರುವ ಸಮಯವಿರಲಿಲ್ಲ. ಐಹೊಳೆ ಕೈಬೀಸಿ ಕರೆಯುತ್ತಿತ್ತು. ಅಲ್ಲಿಂದ ಮುಂದೆ ಇದ್ದಿದ್ದು ದಾರಿಯಾ, ಓಣಿಯಾ, ಮನೆಯ ಮುಂದಿನ ಅಂಗಳವಾ ಯಾವುದನ್ನೂ ನಿರ್ದರಿಸಲಾಗದೆ ಸುಮ್ಮನೆ ನೋಡುತ್ತಿದ್ದೆ. ಎರಡೂ ಬದಿಗಳಲ್ಲಿ ಸಾಲಾಗಿದ್ದ ಮನೆಗಳು, ತೆರೆದ ಚರಂಡಿ, ಮನೆಯ ಮುಂಬಾಗಿಲಲ್ಲಿ ಬಟ್ಟೆ ಒಗೆಯುವ, ಪಾತ್ರೆ ತೊಳೆಯುವ ದೃಶ್ಯ, ಆ ನೀರು ಹರಿದು ರಸ್ತೆಯೆಂಬ ಓಣಿಗೆ ಬಂದು ಸೇರುತ್ತಿದ್ದರೆ ಅದನ್ನೇ ದಾಟಿಕೊಂಡು ಸಾಗುವ ಪಶು,ಪ್ರಾಣಿ ಮಾನವರು ಮತ್ತವರ ವಾಹನಗಳು. ತಲೆಯೆತ್ತಿ ನೋಡಿದರೆ ದೇವಸ್ಥಾನಗಳ ಪಾರ್ಶ್ವಗಳನ್ನೇ ಮನೆಯನ್ನಾಗಿಸಿಕೊಂಡು ಅಲ್ಲಿದ್ದ ಕಲ್ಲುಗಳನ್ನೇ ಎಲ್ಲವಕ್ಕೂ ಬಳಸಿಕೊಂಡಿದ್ದರು. ಹಳೆಯದು ಎಂದರೆ ಬೇಡದ್ದು ಅನ್ನೋ ಅರ್ಥವಾ ಎಂದು ಪ್ರಶ್ನಿಸಿಕೊಂಡೆ. ಉತ್ತರ ಹುಡುಕುವ ಧೈರ್ಯವಾಗಲಿಲ್ಲ.

ಐಹೊಳೆ ಚಾಲುಕ್ಯರ ಮೊದಲ ರಾಜಧಾನಿ ಹಾಗೂ ಕಾರ್ಯಕ್ಷೇತ್ರ. ಸ್ವಲ್ಪ ಪ್ರವರ್ಧಮಾನಕ್ಕೆ ಬಂದ ಕೂಡಲೇ ಅವರು ಶಿಲ್ಪಕಲೆಗೆ ಪ್ರೋತ್ಸಾಹ ಕೊಡಲು ಆರಂಭಿಸಿ ದೇವಾಲಯಗಳನ್ನು ಕಟ್ಟಲು ಶುರುಮಾಡಿದಾಗ ಆರಿಸ್ಕೊಂಡ ಜಾಗ ಐಹೊಳೆ. ಹಾಗಾಗಿ ಇದು ಚಾಲುಕ್ಯರ ವಾಸ್ತುಶಿಲ್ಪದ ತೊಟ್ಟಿಲು. ಸುಮಾರು 150ಕ್ಕೂ ಹೆಚ್ಚಿನ ದೇವಾಲಯಗಳನ್ನು ಇಲ್ಲಿ ಕಟ್ಟಿಸಿದ್ದರಂತೆ. ಈಗ ಉಳಿದಿರೋದು ಬೆರಳೆಣಿಕೆಯಷ್ಟು ಮಾತ್ರ. ನಿರ್ಲಕ್ಷಕ್ಕೆ ಸಂಪೂರ್ಣ ತುತ್ತಾಗಿರೋ ಐಹೊಳೆಯಲ್ಲಿ ಒಬ್ಬ ಗೈಡ್ ಸಹ ಸಿಗುವುದಿಲ್ಲ. ಬಹಳಷ್ಟು ದೇವಾಲಯಗಳು ಈಗ ಮನುಷ್ಯರ ನಿವಾಸ, ಕೊಟ್ಟಿಗೆಗಳಾಗಿದೆ. ರಕ್ಷಣೆಗೆ ಒಳಪಟ್ಟ ಕೆಲವೇ ದೇವಾಲಯಗಳಲ್ಲಿ ದುರ್ಗಾ ದೇವಾಲಯ ಹಾಗೂ ಅದರ ಪ್ರಾಕಾರದಲ್ಲಿರುವ ಕೆಲವು ಪುಟ್ಟ ದೇವಾಲಯಗಳು ಮಾತ್ರ.

ಬೆಳೆಯುತ್ತಾ ಬಂದಂತೆ ತೊಟ್ಟಿಲು ಮೂಲೆಸೇರುವುದು ಸಹಜವಲ್ಲವೇ... ಹೊಸತನ ಹುಡುಕುವ ಭರಾಟೆಯಲ್ಲಿ ಹಳೆಯದು ಅಪ್ರಸ್ತುತವಾಗುತ್ತಾ ಹೋಗುವುದು ಪ್ರಕೃತಿಯ ನಿಯಮವಾ ಅನ್ನುವ ಆಲೋಚನೆ ಮುಗಿಯುವುದರೊಳಗೆ ನಾಳೆ ನಾನೂ ಹಳಬಳೆ ಅನ್ನೋ ಸತ್ಯ ನಡುಕ ಹುಟ್ಟಿಸಿತು.

Comments

Popular posts from this blog

ಮೇಲುಸುಂಕ.

ಮಾತಂಗ ಪರ್ವತ

ಕೇಪಿನ ಡಬ್ಬಿ.