ಗೌರಿ ಹಬ್ಬ.

ಶ್ರಾವಣ ಮುಗಿದು ಭಾದ್ರಪದ ಬರುವ ಹೊತ್ತಿಗೆ ಬೇಸಾಯದ ಬಹುತೇಕ ಕೆಲಸಗಳು ಮುಗಿದಿರುತ್ತದೆ. ಒಂದೇ ಸಮನೆ ಶ್ರುತಿ ಹಿಡಿದು ಹಾಡುತ್ತಿದ್ದ ಮಳೆಗೂ ಬೇಸರ ಬಂದು ಆಗಾಗ ನಿಲ್ಲಿಸಿ ಸುಮ್ಮನಾಗುತ್ತಿರುತ್ತದೆ. ಸೂರ್ಯನೂ ಸಣ್ಣಗೆ ನಗೆ ಬೀರುವ ಹೊತ್ತಿನಲ್ಲಿ ಕಾಮನಬಿಲ್ಲಿನ ಬಣ್ಣಗಳನ್ನೂ ಮೀರಿಸಿದ ವರ್ಣಗಳ ಬಳೆಗಳನ್ನು ಹೊತ್ತು ಬಳೆಗಾರರು ಹೊರಡುವ ಸಮಯವದು.

ಸಸಿ, ನೆಟ್ಟಿ, ಕಳೆ ಅಂತ ಗದ್ದೆ ಕೆಲಸದಲ್ಲಿ ವ್ಯಸ್ತರಾಗಿದ್ದ ಜನಗಳಿಗೆ, ಮಳೆಗೆ, ಗಾಳಿಗೆ ಎಲ್ಲರಿಗೂ  ಕೊಂಚ ವಿಶ್ರಾಂತಿ ಸಮಯ. ಸ್ವಲ್ಪ ನಿರಾಳವಾಗುತ್ತಿದ್ದಂತೆ ಹೆಣ್ಮಕ್ಕಳಿಗೆ ತವರಿನ ನೆನಪು ಬಿಟ್ಟು ಬಿಟ್ಟು ಸುರಿಯೋ ಮಳೆಯಂತೆ ಸಹಜ. ಶ್ರಾವಣದ ಹಬ್ಬ ಹರಿದಿನಗಳ ಸಂಭ್ರಮದಲ್ಲಿ ಅಮ್ಮಂದಿರಿಗೆ, ಅಜ್ಜಿಯರಿಗೆ ಗೆಜ್ಜೆವಸ್ತ್ರ ಮಾಡುವ ಕೆಲಸ. ಮನೆಯಂಗಳದಲ್ಲಿ ಬೆಳೆದ ಹತ್ತಿಯನ್ನು ಬಿಡಿಸಿ ಬೆಚ್ಚಗೆ ಡಬ್ಬಿಯಲ್ಲಿ ತುಂಬಿ ತಂಡಿಯಾಗದಂತೆ ಅಟ್ಟದಲ್ಲಿಟ್ಟದ್ದನ್ನು ಕೆಳಗಿಸಿ ಅದಕ್ಕೆ ಮುಕ್ತಿ ಕೊಡುವ ಭರಾಟೆ. ಮಧ್ಯಾನದ ಹೊತ್ತಿನಲ್ಲಿ ಅದನ್ನು ಮೆದುವಾಗಿ ಬಿಡಿಸಿ, ಹಿಂಜಿ ಅದನ್ನು ಶುಭ್ರಗೊಳಿಸಲು ತಾಳ್ಮೆ ಬೇಕು. ಅನಂತರ ಹೂ ಬತ್ತಿ, ಗೆಜ್ಜೆವಸ್ತ್ರ ಮಾಡುವುದು ಒಂದು ರೀತಿಯಾದರೆ ಗೌರಿ, ಗಣೇಶನಿಗೆ ಮಾಡೋ ಗೆಜ್ಜೆವಸ್ತ್ರದ ತಯಾರಿಯೇ ಬೇರೆ.

ತವರಿನ ಮೋಹ ದೇವಾನುದೇವತೆಗಳನ್ನೇ ಬಿಟ್ಟಿಲ್ಲವಂತೆ. ಕೆಲಸದಿಂದ ಹಗುರವಾಗುವ ಹೊತ್ತಿನಲ್ಲಿ ಗೌರಿಗೂ ತವರಿನ ಬಯಕೆ. ತವರಲ್ಲಿ ಮಗಳನ್ನು ಸ್ವಾಗತಿಸುವ ಸಂಭ್ರಮ. ಹಾಗಾಗಿ ಬಣ್ಣ ಬಣ್ಣದ, ಚೆಂದದ ವಿನ್ಯಾಸದ ಗೆಜ್ಜೆವಸ್ತ್ರವನ್ನು ತಯಾರಿಸಿ ಅರಿಸಿನ, ಕುಂಕುಮ, ಹೂ, ಹಣ್ಣುಗಳ ಜೊತೆಗೆ ಮದುವೆಯಾಗಿ ಹೋದ ಮಗಳಿಗೆ ಕೊಟ್ಟು ಆಶೀರ್ವದಿಸಿ ಬರುವ ಹೊತ್ತು.  ಶ್ರಾವಣ ಮುಗಿಯುತ್ತಾ ಬಂದ ಹಾಗೆ ಹೆಣ್ಮಕ್ಕಳು ಕಣ್ಣು ಪದೇ ಪದೇ ದಾರಿಯತ್ತಲೇ ನೆಟ್ಟು, ನಿರೀಕ್ಷೆಯ ನೂರು ಪ್ರಣತಿಗಳಿಂದ ಕಾಯುತ್ತಿರುತ್ತದೆ. ಅಪ್ಪನೋ,  ಅಣ್ಣನೋ ಹೊತ್ತು ತರುವ ಬಾಗಿನಕ್ಕಿಂತ ಅವರನ್ನು ನೋಡುವ ಖುಷಿ, ಅವರ ಅಪ್ಯಾಯತೆಯಲ್ಲಿ ನೆನೆಯುವ ತವಕ.

ಅವರೂ ಅಷ್ಟೇ ಅಮ್ಮನೋ, ಅಜ್ಜಿಯೋ ಎಲ್ಲವನ್ನು ಜೋಡಿಸಿ ಕೊಟ್ಟ ಬಾಗಿನವನ್ನು ಅಷ್ಟೇ ಜೋಪಾನವಾಗಿ ಹೊತ್ತು ತಂದು ಮನೆಯ ಬಾಗಿಲಲ್ಲಿ ಕಾಲಿಡುತ್ತಿದ್ದಂತೆ ಅಲ್ಲೊಂದು ಸಂತಸದ ಹೊನಲು ತಂತಾನೇ ಆವರಿಸುತ್ತದೆ. ನಿರೀಕ್ಷೆಯ ಸಾಲಿನಲ್ಲಿ ನಿಂತ ನೂರಾರು ಪ್ರಣತಿಗಳು ಧಿಗ್ಗನೆ ಬೆಳಗುತ್ತಿದ್ದವು. ಸುತ್ತೆಲ್ಲಾ ಬೆಳಕು ಚೆಲ್ಲಾಡುತಿತ್ತು. ಹೊರಡುವ ಮುನ್ನ ಕರುಳ ಬಳ್ಳಿಯ ತಲೆ ನೇವರಿಸಿ ಜೇಬಲ್ಲಿ ಜೋಪಾನವಾಗಿ ಮಡಿಚಿಟ್ಟ ದುಡ್ಡು ಕೊಟ್ಟು ಬಳೆ ಇಟ್ಕೋ ಮಗಳೇ ಅನ್ನೋ ಮಾತು, ಆ ನೇವರಿಕೆಯಲ್ಲಿನ ವಾತ್ಸಲ್ಯ, ಕಾಳಜಿ, ಬಿಟ್ಟು ಹೊರಡುವ ವಿಷಾದ, ಅದೆಲ್ಲದರ ಹಿಂದಿನ ಪ್ರೀತಿ  ಇವೆಲ್ಲವೂ ಕಣ್ಣಂಚಿನಲ್ಲಿ  ಮಳೆ ಸುರಿಸುತ್ತಲೇ ಹೊಮ್ಮುವ ತುಟಿಯಂಚಿನ ಸಣ್ಣ ನಗು, ಹೊರಗೆ ಮೂಡುವ ಕಾಮನಬಿಲ್ಲು....

ಇಂಥ ಕಾಮನಬಿಲ್ಲು ಮಾಯವಾಗುವ ಮುನ್ನವೇ ಬಳೆಗಾರರ ಆಗಮನ. ಹಳ್ಳಿಗೆ ಹಳ್ಳಿಯೇ ಅವನ ಸ್ವಾಗತಕ್ಕೆ, ಅವನ ಬರುವಿಕೆಗೆ ಚಾತಕ ಪಕ್ಷಿಯಂತೆ ಕಾಯುತ್ತಿರುತ್ತದೆ. ಕಾಯುವಿಕೆಯ ಹಿತ, ಕಾತುರ, ಬಂದಾಗ ಆಗುವ ಸಂತಸ ಎಲ್ಲವೂ ಅಮೂಲ್ಯವೇ. ಸುಲಭವಾಗಿ ದಕ್ಕಿದ್ದು ಅನುಭೂತಿ ನೀಡುವುದಿಲ್ಲ. ರೋಚಕತೆ ಇರುವುದಿಲ್ಲ. ಮನೆ ಮಂದಿಯೆಲ್ಲಾ ಅವನನ್ನು ಸುತ್ತುವರಿದು ಬಳೆಗಳನ್ನು ಆರಿಸಿ ಅದನ್ನು ತೊಡಿಸಿಕೊಳ್ಳುವ ಕ್ಷಣಗಳು ಬದುಕಿನ ಅದ್ಭುತ ಗಳಿಗೆಗಳು. ಸಾಕು ಸಾಕು ಜಾಸ್ತಿ ದುಡ್ಡಿಲ್ಲ ಅಂತ ಸಣ್ಣಗೆ ಗುಡುಗುವ ಮನೆಯ ಯಜಮಾನನ ದ್ವನಿಯನ್ನೂ ಧಿಕ್ಕರಿಸಿ ಇನ್ನಷ್ಟು ಬಳೆಗಳನ್ನು ತೊಟ್ಟುಕೊಳ್ಳುವ ಧೈರ್ಯ, ಹೆಮ್ಮೆ ಕೊಡುವುದು ಅಪ್ಪ ಕೊಟ್ಟ ಅವನ ಬೆವರಿನ, ಅಮ್ಮ ಜೋಪಾನವಾಗಿ ಎತ್ತಿಟ್ಟ ಅಡುಗೆಮನೆಯ  ಡಬ್ಬಿಯ ಘಮದ ಆ ದುಡ್ಡು. ಕೈತುಂಬಾ ಧರಿಸಿದ ಬಳೆಗಳು ಸಂಗೀತ ಹಾಡಿದಾಗಲೆಲ್ಲಾ ಹರಡುವ ತವರಿನ ಪ್ರೀತಿಯ ತರಂಗಗಳು.
ಅದನ್ನೊಮ್ಮೆ ಮೆತ್ತಗೆ ನೇವರಿಸಿ ಕೆನ್ನೆಗೆ ಒತ್ತಿಕೊಂಡರೆ ಮತ್ತೆ ತವರಿನ ಅಂಗಳದಲ್ಲಿ ಆಡಿದಂತೆ. ಅದರ ಪ್ರತಿ ಸದ್ದಿಗೂ ತವರು ಹಸಿರಾಗಿರಲಿ ಅನ್ನೋ ಹಾರೈಕೆ.

ಹಾಗೆ ಇಡಿಸಿಕೊಂಡ ಬಣ್ಣ ಬಣ್ಣದ ಬಳೆಗಳು ಹಬ್ಬ ಬರುವ ಮೊದಲೇ ನನ್ನ ತುಂಟಾಟ ತಾಳಲಾಗದೆ ಮರಳಿ ಮಣ್ಣಿಗೆ ವಾಪಾಸ್ ಆಗುತ್ತಿದ್ದವು. ಇದರ ಕೈಯಲ್ಲಿ ಏನೂ ಉಳಿಯೋಲ್ಲ ಕಬ್ಬಿಣದ ಬಳೆ ಮಾಡಿಸಿ ಹಾಕ್ಬೇಕು ಅಂತ ಮಾವ ಗುಡುಗುತ್ತಿದ್ದರೆ ಕಣ್ಣಲ್ಲಿ ಮಳೆ ಹನಿಯುತ್ತಿತ್ತು. ಹನಿಯುತ್ತಲೇ ಹೋಗುವವಳನ್ನು ಶೋಭಣ್ಣ ಅನ್ನುವ ಕರೆ ಹಿಡಿದು ನಿಲ್ಲಿಸುತ್ತಿತ್ತು. ತಿರುಗಿ ನೋಡಿದರೆ ಕೈಯಲ್ಲಿ ದುಡ್ಡು ಹಿಡಿದು ನಿಂತಿರುತಿದ್ದ ಅಪ್ಪಾ ಕಾಣಿಸುತ್ತಿದ್ದ. ತಗೋ ಬಳೆ ಇಟ್ಕೋ ಅಂತ ಜೇಬಿಂದ ತೆಗೆದು ದುಡ್ಡು ಕೊಡುತಿದ್ದರೆ ಮಳೆ ನಿಂತು ಕಾಮನಬಿಲ್ಲು ಕುಣಿಯುತಿತ್ತು. ತೊಟ್ಟ ಬಳೆಗಳ ಸದ್ದಿನ ಜೊತೆಗೆ ಸಂಭ್ರಮ ನರ್ತಿಸುತಿತ್ತು. ಮೋಡ ಸರಿದು ಸೂರ್ಯ ಖಿಲ್ಲನೆ ನಗುತಿದ್ದ. ಎತ್ತ ನೋಡಿದರೂ ಹಸಿರೇ ಹಸಿರು, ಉಸಿರಿಗೂ ನವಿಲಿನ ನರ್ತನ.

ಇದ್ದಕ್ಕಿದ್ದಂತೆ ಹೇಳದೆ ಕೇಳದೆ ಗೊತ್ತೇ ಆಗದಂತೆ ಅಪ್ಪ ಕೈ ಬಿಡಿಸಿಕೊಂಡು ನಡೆದಾಗ ಗೌರಿ ಹಬ್ಬವೆಂದರೆ ಮೋಡಕವಿದ ಆಕಾಶ. ಅತ್ತ ಮಳೆಯೂ ಸುರಿಯದ, ಇತ್ತ ಬಿಸಿಲು ಬಾರದ ಕಪ್ಪನೆಯ ಮೇಘಗಳು ಸುತ್ತುವರೆದು ಬದುಕಿಗೆ ಕತ್ತಲೆ ತುಂಬಿಬಿಡುತ್ತಿದ್ದವು. ನಿರೀಕ್ಷೆಯ ಮಳೆ ಸುರಿದು ಅಪ್ಪನೆಂಬ ಸೂರ್ಯ ಬರಲಾರನೆಂಬ ಸತ್ಯ ಅರಿವಾದ ಮೇಲೆ ಕೈಯಲ್ಲಿ ಕಾಮನಬಿಲ್ಲು ಮೂಡಿಸುವ ಆಸಕ್ತಿ ಸತ್ತು ಅದಕ್ಕೊಂದು ಸಂಸ್ಕಾರ ಮಾಡಿ ಬೋಳು ಕೈಯಿಂದ ಅಲಂಕರಿಸಿ ಮನಸ್ಸಿಗೊಂದು ಬಂಡೆಮುಚ್ಚಿ ಮೌನವಾಗಿದ್ದೆ. ಮಗಳು ಹುಟ್ಟಿದ ಮೇಲೆ ಒಂದು ವರ್ಷವೂ ತಪ್ಪದೆ ಅವಳಪ್ಪ ಬಳೆ ತಂದು ತೊಡಿಸಿ ಸಂಭ್ರಮಿಸುವುದನ್ನ ನೋಡಿ ತೃಪ್ತಿಯಾದರೂ ಒಳಗೆ ಅಪ್ಪ ಕಾಡುತ್ತಲೇ ಇರುತ್ತಿದ್ದ. ಮತ್ತೆ ಮತ್ತೆ ಬಾಗಿಲ ಕಡೆಗೆ ಹರಿಯುವ ಕಣ್ಣಿಗೆ ಅಂಕುಶ ಹಾಕಲು ಸೋತು ಬಿಟ್ಟು ಬಿಟ್ಟಿದ್ದೇನೆ.

ಬೆಳಿಗ್ಗೆ ಇದ್ದಕ್ಕಿಂದಂತೆ ಸತ್ತ ಭೂತವನ್ನೆತ್ತಿ ತಂದು ಹಾಕಿದ ನೆನಪೆಂಬ ಹದ್ದು ಕುಕ್ಕಿ ಕುಕ್ಕಿ ಕೊಲ್ಲುತಿತ್ತು. ಅದರ ಕಬಂಧ ಬಾಹುಗಳಿಂದ ತಪ್ಪಿಸಿಕೊಳ್ಳಲು ಅಹಿಗೆ ಡ್ರೆಸ್ ತರಲು ಹೊರಟರೆ ಮೋಡಗಟ್ಟಿದ ಆಕಾಶ ದಿಟ್ಟಿಸಿ ನೋಡುತ್ತಿತ್ತು. ಶಾಪಿಂಗ್ ಮುಗಿಸಿ ಹೊರಬರುತ್ತಿದ್ದಂತೆ ಅಣ್ಣನ ಫೋನ್ ಪುಟ್ಟಿ ಅಕೌಂಟ್ ಗೆ ದುಡ್ಡು ಹಾಕಿದೀನಿ. ಗೌರಿ ಹಬ್ಬಕ್ಕೆ ನಿಂಗೆ ಮತ್ತು ಅಹಿಗೆ, ಇಬ್ರೂ ಸಮವಾಗಿ ಹಂಚ್ಕೊಳ್ಳಿ. ಯುದ್ಧ ಶುರುವಾದರೆ ಸಂಧಾನ ಮಾಡೋಕೆ ಬರಲು ರಜೆಯಿಲ್ಲ  ಅಂದ. ಸ್ಕೂಟಿ ಸ್ಟಾರ್ಟ್ ಮಾಡುವಾಗ ಸಣ್ಣಗೆ ಹನಿಯಲು ಶುರುವಾದ ಮಳೆ ಮನೆಗೆ ಬರುವ ವೇಳಗೆ ಸಣ್ಣ ಬಿಸಿಲು ಹರಡಿತ್ತು. ಕತ್ತೆತ್ತಿ ನೋಡಿದರೆ ಕಾಮನಬಿಲ್ಲು....

ಗೌರಿ ಹಬ್ಬದ ಶುಭಾಶಯಗಳು.

Comments

Popular posts from this blog

ಮಾತಂಗ ಪರ್ವತ

ರಂಜದ ಹೂ

ಬರಿದೆ ಆಡುವ ಮಾತಿಗರ್ಥವಿಲ್ಲ...