ಚೆಸ್
ನಾನಾಗ ನಾಲ್ಕನೇ ಕ್ಲಾಸ್... ಹೊರಗಡೆಯ ಆಟಗಳಲ್ಲೇ ಮುಳುಗಿ ಹೋಗಿರುತಿದ್ದ ನಮಗೆ ಒಳಾಂಗಣದ ಆಟದ ಬಗ್ಗೆ ಆಸಕ್ತಿ ಲವಲೇಶವೂ ಇಲ್ಲದಿದ್ದರೂ ಅದಾಗಲೇ ಹಾಸಿಗೆ ಹಿಡಿದು ದಿನ ಎಣಿಸುತಿದ್ದ ಅಜ್ಜನ ಬಲವಂತಕ್ಕೆ ಪಗಡೆ ಆಡಲು ಕೂರುತಿದ್ದೆವು. ಅವರಿಗೋ ಸಮಯ ಕಳೆಯಲು ನಾವೇ ಜೊತೆಗಾರರು ಆದ್ದರಿಂದ ಪಾಪ ಬೇರೇನೂ ಮಾಡಲು ತೋಚದೆ, ಮಲಗಲೂ ಆಗದೆ ನೋವು ಮರೆಯಲು ಆಡಲು ಕರೆಯುತ್ತಿದ್ದರು. ಅದನ್ನೆಲ್ಲಾ ಅರ್ಥ ಮಾಡಿಕೊಳ್ಳುವ ವಯಸ್ಸು ನಮ್ಮದು ಆಗಿರದ ಕಾರಣ ನಾವು ಬೈದುಕೊಳ್ಳುತ್ತಲೇ ಸಿಟ್ಟು ಮಾಡಿಕೊಳ್ಳುತ್ತಲೇ ಆಟಕ್ಕೆ ಬರುತಿದ್ದೆವು. ಇಂಥ ಸಂಧಿಗ್ಧ ಸಮಯದಲ್ಲಿ ಕೇಶುವಣ್ಣ ಚೆಸ್ ತಂದಿದ್ದು, ನಮಗೆ ತಪ್ಪಿಸಿಕೊಳ್ಳಲು ಮಾರ್ಗ ಸಿಕ್ಕಿದ್ದು. ಆಚೆಮನೆಯಲ್ಲಿ ಏನೇ ತಂದರೂ ಅದನ್ನು ಬಳಸುತಿದ್ದದ್ದು ಮಾತ್ರ ನಾನು ಅಣ್ಣನೇ. ಅವರಿಗೆ ತಂದಿದ್ದ ತೃಪ್ತಿ ಅವರಿಗೆ ಬಿಟ್ಟರೆ ಸಿಗುತಿದ್ದದ್ದು ಮಾತ್ರ ಎಲ್ಲೋ ಅಪರೂಪಕ್ಕೆ. ಕಪ್ಪು ಬಿಳಿಯ ಬಣ್ಣ ಹೊಂದಿದ ಚೌಕಾಕಾರದ ಆ ಬೋರ್ಡ್, ತರೇವಾರಿ ಆಕೃತಿಗಳನ್ನು ಮುಚ್ಚಿಟ್ಟುಕೊಂಡ ಬಾಕ್ಸ್ ಅದೆಷ್ಟು ಸೆಳೆದಿತ್ತು ಎಂದರೆ ಊಟ ತಿಂಡಿ ನಿದ್ದೆಯ ಪರಿವು ಇಲ್ಲದೆ ಅದನ್ನು ಕಲಿಯುವವರೆಗೆ ಅದೇ ಉಸಿರು, ಅದೇ ಕನಸು ಮತ್ತು ಅದೇ ಬದುಕು. ಪಾಪ ಕೆಶುವಣ್ಣ ಕೂಡ ತಾಳ್ಮೆಯಿಂದಲೇ ನಮಗೆ ಆಟ ಕಲಿಸಿಕೊಟ್ಟಿದ್ದರು. ಅದೇ ಅವರು ಮಾಡಿದ ಬಹು ದೊಡ್ಡ ತಪ್ಪು ಎಂದು ಅರ್ಥವಾಗಿದ್ದು ಆ ಬೋರ್ಡ್ ಅವರ ಕೈಗೂ ಸಿಕ್ಕದೆ ನಾವು ಎತ್ತಿಕೊಂಡು ಬಂದಾಗಲೇ. ಅಲ್ಲಿಯವರೆಗೆ...