ಅಜ್ಜಿ....

ಒಂದು ವರ್ಷವಾಯ್ತಂತೆ ನೋಡು ಎಂದು ಪುಟ ತಿರುಗಿಸಿದ ಕ್ಯಾಲೆಂಡರ್ ನೆನಪಿಸುತ್ತಿದೆ. ಒಂದೇ ವರ್ಷವಾ ಎಂದು ಮತ್ತೆ ಮತ್ತೆ ಕೇಳಿಕೊಳ್ಳುತ್ತಿದ್ದೇನೆ. ಒಂದು ವರ್ಷಕ್ಕೆ ಇಷ್ಟು ದಿನಗಳಾ ಇಷ್ಟು ಅಂತರವಾ ಎಂದರೆ ಕ್ಯಾಲೆಂಡರ್ ಉತ್ತರಿಸುವುದಿಲ್ಲ, ಉತ್ತರಿಸುವ ಮನಸ್ಸಿಗೆ ಕಿವಿಯಾಗಲು ಧೈರ್ಯ ಸಾಲುವುದಿಲ್ಲ ನೋಡು. ಒಂದು ಬದುಕಿನಷ್ಟು, ಒಂದು ತಲೆಮಾರಿನಷ್ಟು ಅಂತರವನ್ನು ಆ ಹನ್ನೆರಡು ಪುಟಗಳ ಕ್ಯಾಲೆಂಡರ್ ಹೇಳುವುದಾದರೂ ಹೇಗೆ ಹೇಳು?

ಪ್ರತಿ ದಿನ ದೇವರ ದೀಪ ಹಚ್ಚುವಾಗ ಬತ್ತಿ ಸರಿಸುವಾಗ ಜಗತ್ತಿನ ಅತಿ ದೊಡ್ಡ ಜಿಪುಣಿ ನಾನೇ ಅನ್ನಿಸುತ್ತೆ ನೋಡು. ಮೊದಲೆಲ್ಲಾ ಹೊತ್ತಿಗೊಮ್ಮೆ ದೀಪ ಹಚ್ಚುವಾಗ ಹಳೆಯ ಬತ್ತಿಯನ್ನು ತೆಗೆದು ಬಿಸಾಕಿ ಹೊಸತು ಹಾಕಿ ಉರಿಸುತ್ತಿದ್ದ ನಾನೆಂಬ ನಾನು ಈಗ ಒಂದೇ ಬತ್ತಿಯನ್ನು ಎಷ್ಟು ದಿನ ಉರಿಸಬಹುದು ಎಂದು ಇಷ್ಟಿಷ್ಟೇ ಮುಂದೂಡಿ ಹಚ್ಚುತ್ತೇನೆ. ಅದನ್ನು ಮುಂದಕ್ಕೆ ಮಾಡುವಾಗ ಬತ್ತಿ ಮುಗಿದು ಹೋದರೆ ಅಂತ  ಅದೆಷ್ಟು ಸಂಕಟ ಗೊತ್ತೇನೇ. ಖಾಲಿಯಾದರೆ ಅನ್ನುವ ಭಯ. ಮತ್ತೆ ಮಾಡಿಕೊಡಲು, ಹೊರಡುವಾಗ ತಂದು ಬ್ಯಾಗ್ ಗೆ ಹಾಕಲು ನೀನು ಇಲ್ಲ ಅನ್ನುವ ಸತ್ಯ ನೆನಪಾಗಿ ಬತ್ತಿಯನ್ನು ಮುಂದಕ್ಕೆ ಮಾಡುವ ಕೈ ಹಿಂದಕ್ಕೆ ಬರುತ್ತದೆ. ಕಡ್ಡಿ ಗೀರುವಾಗ ನಡುಗುತ್ತದೆ.

ಅಗ್ನಿ ಪ್ರತ್ಯಕ್ಷ ದೈವ, ನಾವು ಮಾಡುವ ಹೋಮವನ್ನು, ಪ್ರಾರ್ಥನೆಯನ್ನು ಆಯಾ ದೇವರಿಗೆ ತಲುಪಿಸುವವ ಕೂಡಾ ಅಂತ ಪುರೋಹಿತರು ಹೇಳುವಾಗಲೆಲ್ಲ ಬೆರಗು ಕಣ್ಣಿನಿಂದ ನೋಡುತ್ತಾ, ಇನ್ನಷ್ಟು ಭಕ್ತಿಯಿಂದ ಕೈ ಮುಗಿಯುತ್ತಾ ಬೆಳೆದವಳು ನೋಡು. ಪ್ರತಿದಿನ ದೀಪ ಬೆಳಗುವಾಗ ನಿನ್ನ ಹೀಗೆ ನೆನಸಿಕೊಳ್ಳುತ್ತೇನಲ್ಲ ಹಚ್ಚಿದ ದೀಪದ ಬೆಳಕು, ಉರಿಯುವ ಅಗ್ನಿ ನಿನಗೆ ನನ್ನ ನೆನಪನ್ನು ದುಃಖವನ್ನು ತಲುಪಿಸುತ್ತಾನೇನೆ? ಸಂಕಟದ ಬೇಗೆ ನಿಂಗೆ ಗೊತ್ತಾಗುತ್ತೇನೆ? ಉರಿಯುವ ದೀಪವನ್ನು ದಿಟ್ಟಿಸುವ ಕಣ್ಣು ಮಂಜಾಗುವುದು ಯಾಕೆ ಮಾರಾಯ್ತಿ....

ರಜೆ ಬರುವ ಮುನ್ನವೇ ಅಮ್ಮಾ ಊರಿಗೆ ಹೋಗೋಣ ಅನ್ನುವ ಮಗಳು ಮುತ್ತಜ್ಜಿ ನೋಡ್ಬೇಕು ಎಂದು ಹೇಳುವಾಗಲೆಲ್ಲ ಊರಿಗೆ ಹೋಗಲು ಎಷ್ಟು ನೆಪ ಅನ್ನಿಸುತಿತ್ತು. ಏನು ತೆಗೆದುಕೊಂಡು ಬರಬೇಕು ಅನ್ನುವ ಪಟ್ಟಿ ತಯಾರಾಗುತ್ತಿತ್ತು. ಜಗುಲಿಯ ಮಂಚದ ಮೇಲೆ ಒಂದು ಕಾಲು ಮಡಚಿಕೊಂಡು  ನೀನು ಗಂಟೆ ಗಟ್ಟಲೆ ಅದು ಹೇಗೆ ಒಬ್ಬಳೇ ಮಾತಿಲ್ಲದೆ ಕೂರುತಿದ್ದೆ ಮಾರಾಯ್ತಿ. ಒಂದು ಅರ್ಧ ದಿನ ಮಾತಿಲ್ಲದೆ, ಏನೂ ಓದದೆ , ಬರೆಯದೆ ಇದ್ದ ದಿನ ಪ್ರಪಂಚವೇ ತಲೆಯ ಮೇಲೆ ಬಿದ್ದ ಹಾಗೆ ಒದ್ದಾಡುವ ನನಗೆ ಆಗ ನಿನ್ನ ಮೌನ ಅರ್ಥವಾಗಿರಲೇ ಇಲ್ಲ ನೋಡು. ಮುತ್ತಜ್ಜಿ ಇದ್ದಿದ್ದರೆ ದಿಂಡಿನಕಾಯಿ ಗೊಜ್ಜು ಮಾಡಿ ಕಳುಹಿಸ್ತಾ ಇದ್ಲು ಅಂತ ಮಗಳು ಫ್ರಿಡ್ಜ್  ಬಾಗಿಲು ತೆಗೆದು ಸಣ್ಣ ಸ್ವರದಲ್ಲಿ ಹೇಳುವಾಗ, ದೇವರ ದೀಪ ಹಚ್ಚುವಾಗ, ಕಾಕಿ ಕುಡಿ ತಂದು ಹುರಿಯುವಾಗ, ಅನ್ನಕ್ಕೆ ಅಕ್ಕಿ ಹಾಕುವಾಗ ಎಲ್ಲೆಲ್ಲೂ ನೀನೆ ಇದ್ಯಲ್ಲ ಮಾರಾಯ್ತಿ. ನೀನು ಈ ಪರಿ ಆವರಿಸಿಕೊಂಡಿದ್ದಿ ಅನ್ನೋದು ಈಗೀಗ ಅರ್ಥವಾಗುತ್ತಿದೆ... ಹೇಳೋಣವೆಂದರೆ ನಿನ್ನ ಅನುಪಸ್ಥಿತಿ ಕಾಡುತ್ತಿದೆ.

ದಿಂಡಿನ ರಸವನ್ನು ಬಾಟಲಿಗೆ ತುಂಬಿ ಗಟ್ಟಿಯಾಗಿ ಮುಚ್ಚಳ ಹಾಕಿ ಅದಕ್ಕೊಂದು ಪಂಚೆ ಹೊದಿಸಿ ಗಟ್ಟಿಯಾಗಿ ಕಟ್ಟಿ ಅಟ್ಟದ ಮೇಲಿನ ಕತ್ತಲಲ್ಲಿ ಬೆಚ್ಚಗೆ ಇಡುತ್ತಿದ್ದೆಯಲ್ಲ, ಗೊಜ್ಜು ಮಾಡಿದ ದಿನ ಅದನ್ನು ಬೆರಳ ತುದಿಯಲ್ಲಿ ಅದ್ದಿ ನಾಲಿಗೆಗೆ ಇಟ್ಟರೆ ಅದರ ಬೆಚ್ಚಗಿನ ಬಿಸುಪು ತಾಗಿ ಖಾರ ನಾಲಿಗೆಗೆ ಇಳಿದು ಗಂಟಲಿನಿಂದ ಒಳಕ್ಕೆ ಇಳಿಯುವಾಗ ಬೆವರು ಹರಿದು ತಟ್ಟೆ ಪೂರಾ ಖಾಲಿ ಆಗಿ ಒಂದು ತಂಪಿನ ಭಾವ ತುಂಬುತ್ತಿತ್ತು ನೋಡು... ಬಾಗಿಲು ತೆರೆದರೆ ಕತ್ತಲ ಎದೆಯ ಸೀಳಿ ಕಣ್ಣು ಚುಚ್ಚುವ ಬೆಳಕು ತೋರುವ ಕೊರೆಯುವ ಫ್ರಿಜ್ ನಿಂದ ತೆಗೆದ ಗೊಜ್ಜು ನಾಲಿಗೆಯ ಮೇಲೆ ಇಟ್ಟರೂ, ತಿಂದರೂ ಬೆಚ್ಚಗಾಗುವ ವೇಳೆಯ ಒಳಗೆ ಕರುಳ ಒಳಗೆ ಹೋಗಿ ಸೇರಿ ಬಿಟ್ಟಿರುತ್ತದೆ. ಇನ್ನು ಬೆವರುವುದು ಎಲ್ಲಿಂದ, ತಂಪಾಗುವುದು ಎಲ್ಲಿಂದ ಎಂದು ಯೋಚಿಸುವಾಗೆಲ್ಲ ನಿನ್ನ ತಲೆಮಾರಿಗೂ, ನನ್ನ ತಲೆಮಾರಿಗೂ ಇರುವ ವ್ಯತ್ಯಾಸ ಅರ್ಥವಾಗಿ ಬೆಚ್ಚಿ ಬೀಳುತ್ತೇನೆ......

ಹೀಗೆ ಹೆಜ್ಜೆ ಇಟ್ಟಲೆಲ್ಲಾ ನೆನಪಾಗುವ ನಿನ್ನ ನೋಡೋಣ ಎಂದು ಹೊರಗೆ ಹೋಗಿ ತಲೆಯೆತ್ತಿದರೆ ನಗರದ ಮೇಲ್ವಾಸಿನಲ್ಲಿ ಅಲ್ಲೆಲ್ಲೋ ಕಂಡು ಕಾಣದ ಹಾಗೆ ಒಂದೋ ಎರಡೋ ನಕ್ಷತ್ರ ಕಾಣಿಸುತ್ತೆ ನೋಡು ಆಗ ಮಾತ್ರ ಭಯವಾಗುತ್ತೆ. ಅಮ್ಮಾ ಊರಲ್ಲಿ ಹೋದರೆ ಅಷ್ಟೊಂದು ನಕ್ಷತ್ರ ಕಾಣುತ್ತೆ ಇಲ್ಲಿ ಯಾಕೆ ಕಾಣೋಲ್ಲ ಅಂತ ಮಗಳು ಕೇಳುವಾಗ ಬದುಕಿದ್ದಾಗಲೇ ಇಲ್ಲಿಗೆ ಬರಲು ಹಿಂದೆ ಮುಂದೆ ಯೋಚಿಸುತ್ತಿದ್ದ ನೂರಾರು ನೆವ ಹೇಳುತ್ತಿದ್ದ ನೀನು ಅಲ್ಲೇ ಇರಬಹುದು ಹಾಗಾಗಿ ಇಲ್ಲಿ ಕಾಣಿಸುತ್ತಿಲ್ಲ ಎಂದು ಸಮಾಧಾನ ಮಾಡಿಕೊಳ್ಳುವ ಹೊತ್ತಿಗೆ ಊರಿಗೆ ಹೋಗಬೇಕು ಅನ್ನುವ ಆಸೆಯೊಂದು ಗೂಡು ಕಟ್ಟುತ್ತದೆ. ನಿನ್ನನ್ನೇನೋ ಅಲ್ಲಿ ಹೋಗಿ ಅಂಗಳದ ಮಧ್ಯೆದಲ್ಲಿ ನಿಂತು ಕಾಣುವ ಸಾವಿರಾರು ನಕ್ಷತ್ರಗಳ ನಡುವೆ ಹುಡುಕಬಹುದು ಆದರೆ ಅಪ್ಪನನ್ನು ಎಲ್ಲಿ ಹುಡುಕಲಿ ಮಾರಾಯ್ತಿ... ಅಲ್ಲೆಲ್ಲೋ ಇರುವ ಅವನನ್ನು ಹುಡುಕಿ ನನಗೋಸ್ಕರ ಎಳೆದು ತಂದು ಒಮ್ಮೆ ನೀವಿಬ್ಬರೂ ಕತ್ತಲ ರಾತ್ರಿಯಲಿ ಒಂಟಿಯಾಗಿ ನಿಂತಿರುವ ನನ್ನ ಕಂಡು ಒಮ್ಮೆ ಪಕ್ಕನೆ ಮಿನುಗಬಹುದೇನೆ... ಎದೆಯಲ್ಲಿ ಆ ಬೆಳಕು ಕಾಪಿಟ್ಟುಕೊಳ್ಳುತ್ತೇನೆ... ನೆನಪುಗಳು ಕತ್ತಲಲ್ಲಿ ತಡವರಿಸಿ ಬೀಳದಂತೆ, ಬದುಕು ಬಿಸುಪು ಕಳೆದುಕೊಳ್ಳದಂತೆ ಕಾಯುತ್ತೇನೆ.. ಇದನ್ನಾದರೂ ಮಾಡ್ತಿಯೇನೇ.....


Comments

Popular posts from this blog

ಮಾತಂಗ ಪರ್ವತ

ರಂಜದ ಹೂ

ಬರಿದೆ ಆಡುವ ಮಾತಿಗರ್ಥವಿಲ್ಲ...