ಗೋ ಪೂಜೆ

ಪುಟ್ಟ ವಾಮನ ಬಲಿ ಚಕ್ರವರ್ತಿಯ ಬಳಿಗೆ ಬಂದು ಮೂರು ಪಾದಗಳನ್ನು ಊರುವಷ್ಟು ಜಾಗ ಬೇಕೆಂದು ಕೇಳಿದಾಗ ನಕ್ಕ ಬಲಿ ಮತ್ತೇನಾದರೂ ಕೇಳು ಎಂದನಂತೆ. ಕೇಳುವವರು ಬಂದಾಗ ಕೊಡುವವರಿಗೊಂದು ಹಮ್ಮು ಇರುತ್ತದೆಯಂತೆ. ಅದರಲ್ಲೂ ಚಕ್ರವರ್ತಿ, ಮೂರು ಲೋಕಗಳೂ ಅವನ ವಶವರ್ತಿಯಾಗಿರುವಾಗ, ಕೊಡುಗೈ ದಾನಿ ಅನ್ನೋ ಬಿರುದು ಇರುವಾಗ ಆ ಹಮ್ಮು ಇನ್ನಷ್ಟು ಬೆಳೆಯುತ್ತದೆ. ಅಹಂಕಾರದ ಪೊರೆ ಕೇವಲ ನೋಡುವ ನೋಟವನ್ನು ಮಂಜಾಗಿಸುವುದು ಮಾತ್ರವಲ್ಲ ಆಲೋಚಿಸುವ ಬುದ್ಧಿಯನ್ನೂ ಮಂಕಾಗಿಸುತ್ತದೆ.

ಕೇಳುವವನಿಗೆ ತಾನು ಏನು ಕೇಳುತ್ತಿದ್ದೇನೆ ಎನ್ನುವ ಅರಿವಿರುತ್ತದೆ. ತನಗಷ್ಟೇ ಸಾಕು ಎಂದ ಬಾಲಕ. ಇನ್ನೇನು ಕೇಳಿದರೂ ಅವನಿಗೆ ಕೊಡಲು ಉಳಿದ್ದದರೂ ಏನು? ಕೊಡುವವನು ನೋಯಬಾರದು ಎನ್ನುವ ಸೂಕ್ಷ್ಮ ಆ ಬಾಲಕನಿಗಿತ್ತು. ಕೊಡುಗೈ ದಾನಿ ಅನ್ನುವ ಹೆಸರು ಚಿರಸ್ಥಾಯಿಯಾಗಿರಬೇಕು ಅದು ನಾಶವಾಗಬಾರದು ಎನ್ನುವ ಎಚ್ಚರಿಕೆಯೂ ಜೊತೆಗಿತ್ತು. ಎಷ್ಟೆಂದರೂ ಕರುಣಾಮಯಿಯಲ್ಲವೇ ಅವನು. ಎರಡು ಪಾದಗಳಲ್ಲಿ ಪಾತಾಳದಿಂದ ಹಿಡಿದು ಆಕಾಶವನ್ನು ಅಳೆದುನಿಂತವನ ಮೂರನೇ ಪಾದಕ್ಕೆ ಜಾಗಬೇಕು. ಬೇಡಿದವನಿಗೆ ನಿರಾಸೆಯಗಬಾರದು, ಕೊಟ್ಟ ಮಾತು ತಪ್ಪಬಾರದು ಅನ್ನೋದು ಬಲಿಯ ಯೋಚನೆ. ಅಬ್ಬಾ ಕೊಡು ಕೊಳ್ಳುವಲ್ಲೂ ಎಂಥಾ ಸಾಮರಸ್ಯ. ಎಂಥಾ ಉದಾತ್ತತೆ. ಇನ್ನೆಲ್ಲಿ ಜಾಗ. ತಲೆ ಬಾಗಿದ. ತಲೆಯೊಂದಿಗೆ ಅಹಂಕಾರವೂ ಬಾಗಿತು. ಅಲ್ಲಿಗೆ ಎಲ್ಲವೂ ಬಾಗಿದಂತೆ. ಅವನ ಪದಕಮಲಗಳಿಗೆ ಶರಣಾದಂತೆ. ಶರಣಾಗತ ವತ್ಸಲ ಅವನು ವತ್ಸ ಇವನು. ಮಗನನ್ನು ಬರಿಗೈ ಮಾಡಿ ತಳ್ಳಿದ ತಂದೆ ಜಗತ್ತಿನಲ್ಲಿ ಇಲ್ಲ ಹಾಗಾಗಿ ಅವನನ್ನು ಪಾತಾಳ ಲೋಕದ ರಾಜನಾಗಿ ಮಾಡಿ ಕಳುಹಿಸಿದನಂತೆ ವಾಮನ.

ಹುಟ್ಟಿ ಬೆಳೆದ, ಬದುಕು ಕಟ್ಟಿಕೊಂಡ ಜಾಗದ ವ್ಯಾಮೋಹ ಇಲ್ಲದವರು ಯಾರು. ಬಲಿಯೂ ಅದಕ್ಕೆ ಹೊರತಾಗಿರಲಿಲ್ಲ. ದೇವನೂ ಅದಕ್ಕೆ ಕರಗದೇ ಇರಲಿಲ್ಲ. ಹಾಗಾಗಿ ವರುಷಕ್ಕೊಮ್ಮೆ ನೀನು ಬಂದು ಹೋಗಬಹುದು ಎನ್ನುವ ವರ ಸಿಕ್ಕಿತಂತೆ. ಹಾಗೆ ಬಲಿ ಭೂಲೋಕಕ್ಕೆ ಬಂದು ಹೋಗುವ ದಿನವೇ ಬಲಿಪಾಡ್ಯಮಿ ಅಂತ ಅಜ್ಜ ಹೇಳುವಾಗ ಬಿಟ್ಟ ಕಣ್ಣು ಬಿಟ್ಟ ಬಾಯಿಯಿಂದ ಕತೆ ಕೇಳುತ್ತಿದ್ದ ನಮಗೆ ಆಮೇಲೆ ಬಲಿಂದ್ರನ ಕಾಯುವ ಸಡಗರ. ಉಳಿದವರಿಗೆ ಅವನನ್ನು ಸ್ವಾಗತಿಸುವ ಸಿದ್ದತೆಯ ಗಡಿಬಿಡಿ. ಬಿಟ್ಟು ಹೋದ ಮನೆ ಇದ್ದ ಹಾಗೆ ಇದ್ದರೆ ಬಂದವರಿಗೂ ನೆಮ್ಮದಿ. ಹಾಗಾಗಿ ವ್ಯವಸ್ಥೆಗಳು ನಡೆಯಬೇಕಲ್ಲ.

ಹಿಂದಿನ ದಿನವೇ ಕೊಟ್ಟಿಗೆಯ ಗೊಬ್ಬರ ತೆಗೆದು, ಕರು ಹಾಕಿದ ದನಗಳಲ್ಲಿ ಹೆದರದ ಸ್ವಲ್ಪ ಮೆದು ಸ್ವಭಾವದ ದನವನ್ನು ಆರಿಸಿ ನಾಳೆ ಪೂಜೆಗೆ ಇದುವೇ ಎಂದು ನಿರ್ಧರಿಸಿಕೊಳ್ಳುವುದು ಮೊದಲ ಹಂತ. ಆಮೇಲೆ ಅವುಗಳ ಕೊರಳಿಗೆ ಹಾರ ತಯಾರಿಸಬೇಕು. ಅದಕ್ಕಾಗಿ ಸಾಮಾಗ್ರಿಗಳನ್ನು ತಯಾರು ಮಾಡಿಕೊಳ್ಳಬೇಕು. ಬಾಳೆಪಟ್ಟೆಯನ್ನು ನೀರಲ್ಲಿ ನೆನಸಿಡಬೇಕು. ಚೆನ್ನಾಗಿ ನೆಂದರೆ ಮಾತ್ರ ತೆಳುವಾದ ಆದರೆ ಗಟ್ಟಿಯಾದ ದಾರ ತೆಗೆಯಲು ಸಾಧ್ಯ. ಆಮೇಲೆ ಗೋಟು ಅಡಿಕೆ, ಪಚ್ಚೆ ತೆನೆ, ಕಸ್ತೂರಿ ತುಳಸಿ, ವಿಳ್ಳೆದೆಲೆ, ಸಿಂಗಾರ, ಬಾಳೆಹಣ್ಣು, ಹೂವು, ಉಗಣೆ ಕಾಯಿ, ಎಲ್ಲವನ್ನೂ ಒಟ್ಟು ಹಾಕಿ ಮನೆಯಲ್ಲಿರುವ ಬಾಲಗಳು ಎಷ್ಟು ಎಂದು ನೋಡಿ (ದನಗಳನ್ನು ಎಣಿಸಬಾರದು ಅಂತ ಸಂದರ್ಭ ಬಂದರೆ ಬಾಲ ಎಣಿಸಬೇಕು ಅನ್ನೋದು ಹಿಂದಿನಿಂದ ಬಂದ ನಂಬಿಕೆ) ಚಿಕ್ಕವೆಷ್ಟು ದೊಡ್ಡವು ಎಷ್ಟು ವಿಂಗಡಿಸಿ ಆಮೇಲೆ ಹಾರ ಮಾಡುವ ಭರಾಟೆ ಶುರುವಾಗುತ್ತಿತ್ತು. ನಾನು ಕೆಂಪಿಗೆ ಇವರು ಬೆಳ್ಳಿಗೆ ಅವರು ಚಂದ್ರಿಗೆ ಹೀಗೆ ಯಾರು ಯಾವುದಕ್ಕೆ ಕಟ್ಟುವುದು ಎಂದೂ ಆಗಲೇ ನಿರ್ಧಾರವಾಗುತಿತ್ತು. ಹಾರ ಕಟ್ಟಿದ ಮೇಲೆ ಅದನ್ನು ಒಳಗೆ ಇಡುತ್ತಿರಲಿಲ್ಲ. ಪಚ್ಚೆತೆನೆಯ ಸುವಾಸನೆಗೆ ಹಾವುಗಳು ಬರುವ ಎಲ್ಲಾ ಸಾಧ್ಯತೆಗಳೂ ಇರುತಿತ್ತು. ಮೊದಲೇ ಹಳ್ಳಿ, ಕಾಡು. ಮನುಷ್ಯರಷ್ಟೇ ಕೆಲವೊಮ್ಮೆ ಅವರಿಗಿಂತ ಜಾಸ್ತಿ ಉರಗಗಳೂ ಇರುತ್ತಿದ್ದರಿಂದ ಅದರ ವಾಸನೆ ಹಿಡಿದು ಬರುತ್ತಿದ್ದರಿಂದ ಅದನ್ನು ಅಂಗಳದಲ್ಲೋ ಜಗುಲಿಯಲ್ಲಿದ್ದ ಪತ್ತಾಸ್ ಮೇಲೋ ಒಂದು ಬಾಳೆಎಲೆಯಲ್ಲಿ ಸುತ್ತಿ ಇಟ್ಟರೆ ಅವತ್ತಿನ ಕೆಲಸ ಮುಗಿದಂತೆ.

ನಸುಕು ಹರಿಯುವ ಮೊದಲೇ ಎಲ್ಲರೂ ಏಳುತಿದ್ದರು. ಏಳುವಾಗಲೇ ಹಂಡೆಯಲ್ಲಿ ನೀರು ಮರಳುವ ಸದ್ದು ಕೇಳಿಸುತಿತ್ತು. ಅವತ್ತು ಎಲ್ಲಾ ದನಕರುಗಳಿಗೂ ಅಭ್ಯಂಜನ. ಅವುಗಳ ಮೈಯಿಗೆ ಎಣ್ಣೆ ಹಚ್ಚುವುದು ಅಷ್ಟು ಸುಲಭದ ಕೆಲಸವಲ್ಲವಾದ್ದರಿಂದ ಕೋಡುಗಳಿಗೆ ಹಣೆಗೆ ಎಣ್ಣೆ ಹಚ್ಚಿ ಒಂದೊಂದನ್ನೇ ಕರೆದುಕೊಂಡು ಹೋಗಿ ಗೊಬ್ಬರದ ಗುಂಡಿಯ ಬಳಿ ಇರುವ  ಮರಕ್ಕೆ ಕಟ್ಟಿ ಹಾಕಿ ಸ್ನಾನ ಮಾಡಿಸುವ ಕೆಲಸ ದೊಡ್ದವರದಾದರೆ ನಮಗೆ ಅವುಗಳಿಗೆ ಬಿಸಿ ನೀರು ತಣ್ಣೀರು ಸರಬರಾಜು ಮಾಡುವ ಕೆಲಸ. ಕರುಗಳಿಗೆ ನಾವು ಮಾಡಿಸುತ್ತೇವೆ ಎಂದು ಹಠ ಹಿಡಿದು ಅವುಗಳ ಜೊತೆಗೆ ನಮ್ಮ ಸ್ನಾನವೂ ಸಾಂಗವಾಗಿ ಜರುಗುತ್ತಿತ್ತು. ಸ್ನಾನ ಮುಗಿಸಿದ ನಂತರ ತಟ್ಟೆಯಲ್ಲಿ ಕದರಿಟ್ಟ ಜೇಡಿ ಮಣ್ಣು ಹಾಗೂ ಕೆಂಪು ಮಣ್ಣುಗಳ ಮಿಶ್ರಣದಲ್ಲಿ ಒಂದು ದೊಡ್ಡ ಲೋಟವನ್ನು ಅದ್ದಿ ದನಗಳ ಮೈಗೆ ಹಂಡುಂಡು ಹೊಡೆಯುವ ಕೆಲಸ ಜರುಗುತ್ತಿತ್ತು. ಅವುಗಳ ಮೈ ಬಣ್ಣದ ಅನುಸಾರವಾಗಿ ಅದು ಎದ್ದು ಕಾಣುತ್ತಿದ್ದವು. ನಂತರ ಒಂದೊಂದಕ್ಕೆ ಹಾರ ಕಟ್ಟುವ ವೇಳೆಗೆ ಅಜ್ಜನೋ , ಮಾವನೂ ಅನುಕೂಲದ ತಟ್ಟೆ (ಪೂಜಾ ಸಾಮಾಗ್ರಿಗಳನ್ನು ಜೋಡಿಸಿದ) ಹಿಡಿದು ಬರುತ್ತಿದ್ದರು.

ವರ್ಷ ವರ್ಷ ಅಭ್ಯಾಸವಾಗಿದ್ದರೂ ಅವುಗಳು ಕೊಸರುವುದು, ಹಗ್ಗ ಜಗ್ಗುವುದು ನಡೆಯುತ್ತಿತ್ತು. ಅಷ್ಟರೊಳಗೆ ಅಡುಗೆಮನೆಯಿಂದ ಬರುತಿದ್ದ ವಾಸನೆ ಅವುಗಳ ಮೂಗಿನ ಒಳಗೆ ಹೋಗಿ ಇಷ್ಟಗಲ ಮೂಗು ಹೊರಳಿಸಿ ನಮ್ಮ ಹಾಗೆ ಯಾವಾಗ ಪೂಜೆ ಮುಗಿಯುವುದೋ ನೈವೇದ್ಯ ಸಿಗುವುದೋ ಎಂದು ಕಾಯುತ್ತಿದ್ದವು. ಪೂಜೆ ನಿಧಾನವಾದರೆ ಅವುಗಳ ಅವಸರ ಹೆಚ್ಚುತ್ತಿತ್ತು. ಇನ್ನೂ ನಿಧಾನವಾದರೆ ಕೊರಳಿಗೆ ಕಟ್ಟಿದ ಮಾಲೆಯನ್ನೇ ಜಗ್ಗಿ ತಿನ್ನಲು ಶುರು ಮಾಡುತ್ತಿದ್ದವು. ಮಂಗಳಾರತಿ ಮುಗಿಯುವ ಹೊತ್ತಿಗೆ ಅವುಗಳಿಗೆ ಸೌತೆಕಾಯಿ ಬೆಲ್ಲ  ಹಾಕಿ ಮಾಡಿದ ಗಂಜಿ, ದೋಸೆ ತಯಾರಾಗಿರುತಿತ್ತು. ತಂದು ಇಟ್ಟರೆ ಗಬಗಬನೆ ತಿಂದು ಪಕ್ಕದವರ ಪಾತ್ರೆಗೆ ಬಾಯಿ ಹಾಕಲು ಹೋಗುತ್ತಿದ್ದವು. ಇವಕ್ಕೂ ನಮಗೂ ಎಷ್ಟು ಸಾಮ್ಯ ಎನ್ನಿಸಿ ನಗು ಬಂದರೂ ಅವುಗಳಿಗೆ ಗದರಿಸುತಿದ್ದೆವು. ಆಮೇಲೆ ಅವುಗಳ ಕತ್ತಿಗೆ ಗಂಟೆಯನ್ನು ಕಟ್ಟಿ ಮೇಯಲು ಬಿಟ್ಟರೆ  ಇಡೀ ವಾತಾವರಣದಲ್ಲಿ ಕಿಂಕಿಣಿ ನಾದ ತುಂಬಿ ಹಚ್ಚಿಟ್ಟ ಧೂಪ, ಅಗರಬತ್ತಿಗಳ ಸುವಾಸನೆ ಹರಡಿ ಅವ್ಯಕ್ತ ಆನಂದ ಆವರಿಸುತಿತ್ತು. ಧನ್ಯತೆ ತುಂಬಿಕೊಳ್ಳುತಿತ್ತು.

ಅಲ್ಲಿಂದ ಬರುತಿದ್ದ ಹಾಗೆ ವ್ಯವಸಾಯ ಸಾಮಾಗ್ರಿಗಳಿಗೂ ಪೂಜೆ ಸಲ್ಲುತಿತ್ತು. ತೊಳೆದಿಟ್ಟ ನೇಗಿಲು, ಹಾರೆ, ಸಬ್ಬಲ್ಲು, ಕತ್ತಿ, ಕೊಡಲಿ ಹೀಗೆ ದೈನಂದಿನ ಕೆಲಸಕ್ಕೆ ಉಪಯೋಗಿಸುತ್ತಿದ್ದ ಎಲ್ಲಾ ಸಲಕರಣೆಗಳನ್ನೂ ತೊಳೆದು ಸ್ವಚ್ಛವಾಗಿಸಿ ಅವುಗಳಿಗೆ ಅರಿಸಿನ ಕುಂಕುಮ ಹೂ ಏರಿಸಿ ಧೂಪ ದೀಪಗಳಿಂದ ಪೂಜಿಸಿ ಗೌರವ ಸಲ್ಲಿಸಲಾಗುತಿತ್ತು. ಬದುಕು ಸಾಗಲು ಹಲವರ ಕೊಡುಗೆಯಿರುತ್ತದೆ. ಅವುಗಳನ್ನು ಸ್ಮರಿಸಿಕೊಳ್ಳಬೇಕಾಗಿದ್ದು, ತಕ್ಕ ಗೌರವ ಕೊಡಬೇಕಾಗಿದ್ದು ನಮ್ಮ ಕರ್ತವ್ಯ. ಪ್ರಕೃತಿಯಲ್ಲಿ ಯಾರೂ ಒಂಟಿಯಲ್ಲ, ಒಂಟಿಯಾಗಿ ಬದುಕಲು ಸಾಧ್ಯವೂ ಇಲ್ಲ. ಹೊಂದಿಕೆಯ ಬದುಕು. ಹಾಗಾಗಿ ಪಡೆದುಕೊಳ್ಳುವ ಹಾಗೆ ಬಿಟ್ಟು ಕೊಡುವುದೂ ಕಲಿಯಬೇಕು. ಅರಿಯಬೇಕು.

ಮಧ್ಯಾನ ಹಬ್ಬದ ಊಟ ಉಂಡು ತುಸು  ವಿಶ್ರಮಿಸಿ  ಹಬೆಯಾಡುವ ಕಾಫಿ ಲೋಟ ಕೈಯಲ್ಲಿ ಹಿಡಿಯುವ ವೇಳೆಗೆ ಇಳಿ ಸಂಜೆ ನಸು ಕೆಂಪಾಗಿ ಅಡಿಯಿಟ್ಟು ಬರುತಿತ್ತು. ಆಮೇಲೆ ದೊಂದಿ, ದೀಪದ ಕೋಲು ಮಾಡುವ ಕೆಲಸ. ಅಡಿಕೆ ದಬ್ಬೆಯನ್ನು ತೆಳುವಾಗಿ ಸೀಳಿ, ಹರಿದಿಟ್ಟ ಬಿಳಿ ಪಂಚೆಯ ತುಂಡನ್ನು ಎಣ್ಣೆಯಲ್ಲಿ ಮುಳುಗಿಸಿ ಆ ಕೋಲಿಗೆ ಸುತ್ತಿದರೆ ದೀಪದ ಕೋಲು ರೆಡಿ. ಗದ್ದೆಗೆ, ತೋಟಕ್ಕೆ, ಊರ ದೇವರ ಮುಂದೆ, ದೇವಸ್ಥಾನದ ಎದುರು, ಕಣದ ಅಂಚಿಗೆ, ಚೌಡಿಗೆ, ಬ್ರಹ್ಮನಿಗೆ ಹೀಗೆ ಹೊರಗಿನ  ಎಲ್ಲರಿಗೂ ದೀಪಾರಾಧನೆ ಮಾಡಲು ಗಂಡಸರು ತಯಾರಾಗಿ ಹೊರಟರೆ ಹೆಂಗಸರು ತೊಳೆದು ಒಣಗಿಸಿ ಇಟ್ಟ ಹಣತೆಗೆ ಬತ್ತಿ ಹಾಕಿ ಎಣ್ಣೆ ತುಂಬುತಿದ್ದರು. ಕೆಲವೊಮ್ಮೆ ಆಗಷ್ಟೇ ಸುಲಿದ ಹಸಿಯಾದ ಅಡಿಕೆ ಸಿಪ್ಪೆಯೂ ಜೊತೆ ಕೊಡುತ್ತಿತ್ತು. ಮುಗಿಲು ಕೆಂಪಾಗುವ ಹೊತ್ತಿಗೆ ತಾವೂ ಕೆಂಪಾಗಿ ಬರುತಿದ್ದ ಹಸುಗಳನ್ನು ಕೊಟ್ಟಿಗೆಯಲ್ಲಿ ಕಟ್ಟಿ ಅವುಗಳಿಗೆ ಆರತಿ ಬೆಳಗಿ ಮನೆಯ ತುಂಬಾ ಹಣತೆ ಹಚ್ಚಿ ಬರುವ ಹೊತ್ತಿಗೆ ದೀಪ್ ದೀಪೊಳಿಗೆ ಎಂದು ಕೂಗುತ್ತಾ ಅಲ್ಲಲ್ಲಿ ದೀಪದ ಕೋಲು ಊರುವ ಜನರು ಕಾಣಿಸುತ್ತಿದ್ದರು. ಎಲ್ಲಿ ನೋಡಿದರೂ ದೀಪದ ಮಂದ ಬೆಳಕು ಇಡೀ ಭುವಿಗೆ ಮಂಗಳಾರತಿ ಮಾಡಿದ ಹಾಗೆ ದೀಪಾರಾಧನೆ ಮಾಡಿದ ಹಾಗೆ ಕಾಣಿಸುತ್ತಿತ್ತು.

ತೆನೆ ತುಂಬಿ ತೂಗುವ ಪೈರು ಸಂಗೀತ ಹಾಡುವ ಹಾಗೆ,  ಗಾಳಿ ಶ್ರುತಿ ಹಿಡಿದ ಹಾಗೆ, ಹಾರಾಡುವ ಕೀಟ ಸಂಕುಲ ಬಂದ ಜನಜಂಗುಳಿಯ ಹಾಗೆ, ಅಲ್ಲಲ್ಲಿ ದೀಪವನ್ನು ಹಿಡಿದು ಹೋಗುವವರು ಉತ್ಸವ ಮೂರ್ತಿಯ ಮೆರವಣಿಗೆಯ ಮುಂದೆ ಪಂಜು ಹಿಡಿದ ಹಾಗೆ, ಬೆಳಗುವ ದೀಪಗಳು ದೇವರೆದುರಿನ ನಂದಾದೀಪದ ಹಾಗೆ, ದನಗಳ ಕೊರಳ ಕಿಂಕಿಣಿ ಗಂಟೆ ಬಾರಿಸಿದ ಹಾಗೆ, ಅಲ್ಲಲ್ಲಿ ಹಾಡುವ ಹಾಡು ಮಂತ್ರ ಘೋಷದ ಹಾಗೆ ಕೇಳಿಸಿ, ಕಾಣಿಸಿ ಇಡೀ ವಾತಾವರಣವೇ ಪೂಜಾ ಮಂದಿರವಾಗಿ ಕಣ್ಣು ತುಂಬಿ ಕೈ ತಂತಾನೇ ಮುಗಿಯುವ ಹಾಗಾಗುತಿತ್ತು. ಅಂತ ಸಮಯದಲ್ಲಿ ಮೇಲೆದ್ದು ಬಂದ ಬಲಿ ಇದನ್ನು ನೋಡಿ ಧನ್ಯನಾಗುತ್ತಿದ್ದನಂತೆ. ಭಾವಪೂರ್ಣನಾಗಿ ಹಿಂದಿರುಗುತ್ತಿದ್ದನಂತೆ. ಇಲ್ಲಿಯ ಬೆಳಕು ನೋಡಿ ಅಗಸವೂ ತಾನೇನು ಕಡಿಮೆ ಎಂದು ಮುಗಿಲ ತುಂಬಾ ನಕ್ಷತ್ರಗಳ ದೀಪ ಹಚ್ಚಿಡುತಿತ್ತು. ಎಲ್ಲಿ ನೋಡಿದರೂ ಬೆಳಕು..

ಅದು ಎಂತಾ ಬೆಳಕು... ಕತ್ತಲೆಯ ಪರದೆಯ ತುಸುವೇ ಸರಿಸಿದ ಮಂದ ಬೆಳಕು. ಕಣ್ಣು ಚುಚ್ಚದ ಬೆಳಕು. ಬೇಕಾದುದನ್ನು ಬೇಕಾದಷ್ಟೇ ತೋರಿಸುವ ಬೆಳಕು. ಎಲ್ಲವನ್ನೂ ಬಿಚ್ಚಿಡದ ಯಾವುದನ್ನೂ ಮುಚ್ಚಿಡದ ಬೆಳಕು, ಕತ್ತಲನ್ನು ಓಡಿಸಬಲ್ಲೆ ಎನ್ನುವ ಹಮ್ಮಿಲ್ಲದ ಬೆಳಕನಷ್ಟೇ ನೀಡಬಲ್ಲೆ ಎನ್ನುವ  ವಿನೀತ ಭಾವದ ಬೆಳಕು. ಕತ್ತಲೂ ಬದುಕಿಗೆ ಅನಿವಾರ್ಯ ಎಂದು ಒಪ್ಪಿಕೊಂಡ ಬೆಳಕು, ಬದುಕಿನ ಇರುಳಿನಲ್ಲಿ ಜೊತೆಯಾಗಿರುವೆ ಎಂದು ಪಿಸುಗುಡವ ಬೆಳಕು. ಕತ್ತಲಿದ್ದರೆ ಬೆಳಕಿಗೆ, ಬೆಳಕಿದ್ದರೆ ಕತ್ತಲಿಗೆ ಅಸ್ತಿತ್ವ ಎಂದು ತಿಳಿದ ಬೆಳಕು, ತಾನು ಉರಿದು ಸುತ್ತಲೂ ದಿವ್ಯತೆ ತುಂಬವ ಬೆಳಕು,  ಕೊಡುತ್ತೇನೆ ಎನ್ನುವ ಹಮ್ಮಿಲ್ಲದ ಬೆಳಕು, ಅರಿಯುವ ಬೆಳಕು, ಅರ್ಥಮಾಡಿಸುವ ಬೆಳಕು.

ಬಲಿ ಚಕ್ರವರ್ತಿಯ ರಾಜ್ಯದಲ್ಲಿ ಅನುದಿನವೂ ದೀಪಾವಳಿಯಂತೆ. ಹಾಗಾಗಿ ಇಲ್ಲಿ ಅನುದಿನ ನಡೆಯದಿದ್ದರೂ ಅವನು ಬರುವ ದಿನವಾದರೂ ದೀಪಾವಳಿ ನಡೆಯಲಿ ಎನ್ನುವ ಆಶಯವಂತೆ. ಹಾಗಾದರೆ ದೀಪಾವಳಿ ಎನ್ನುವುದು ಆಗ ಆಚರಣೆಯಾಗಿತ್ತಾ ಎಂದರೆ ಉಹೂ ಅದು ಬದುಕಿನ ಭಾಗವಾಗಿತ್ತು. ಬದುಕಿಗೆ ಕಾರ್ಗತ್ತಲು ಕವಿಯದಂತೆ ಬೆಳಕು ಮೂಡಿಸಿಕೊಳ್ಳುವ ಪ್ರಕ್ರಿಯೆಯಾಗಿತ್ತು. ಜೊತೆಯಾದ ಎಲ್ಲರಿಗೂ ಎಲ್ಲವಕ್ಕೂ ಗೌರವ ಸಲ್ಲಿಸುತ್ತಲೇ ಜೊತೆ ಜೊತೆಗೆ ಹೆಜ್ಜೆ ಹಾಕುವ, ಹೆಗಲಾಗುವ ಸಹಜ ಸಂಗತಿಯಾಗಿತ್ತು. ಬೆಳಕು ಸಂಕೇತ. ಒಬ್ಬೊಬ್ಬರ ಬದುಕೂ ಒಂದು ದೀಪವಾಗಬೇಕು ಅನ್ನುವುದರ ಕುರುಹು. ಹಾಗಾಗಿ ಹಚ್ಚೋಣ ಹಣತೆ.. ಬೆಳಗೋಣ, ಬೆಳಕಾಗೋಣ ಅನ್ನೋದು ಆಗ ಬದುಕಿನ ಭಾಗವಾಗಿತ್ತೇನೋ... ಅದನ್ನು ನೋಡಲೆಂದು ಬರುತ್ತಾನಾ ಬಲಿ ಚಕ್ರವರ್ತಿ ಅಥವಾ ನೆನಪಿಸಲೆಂದು ಬರುತ್ತಾನಾ....

ಅದನ್ನು ನಾವಷ್ಟೇ ನಮಗೆ ಉತ್ತರಿಸಿಕೊಳ್ಳಬೇಕು... ದೀಪ ಹಚ್ಚಬೇಕು ಹೊರಗಿನದು ಒಳಗಿನದೂ.....


Comments

Popular posts from this blog

ಮಾತಂಗ ಪರ್ವತ

ರಂಜದ ಹೂ

ಬರಿದೆ ಆಡುವ ಮಾತಿಗರ್ಥವಿಲ್ಲ...