ಇಳಿ ಸಂಜೆಯ ಹೊತ್ತಿನಲ್ಲಿ ಮಹಡಿಯಿಂದ ಮಹಡಿಗೆ ಹಾರುತ್ತಾ ಆ ಕಡೆ ಈ ಕಡೆ ಸ್ವಲ್ಪ ಹೆದರಿಕೆಯಿಂದಲೇ ಗಮನಿಸುತ್ತಾ ಪಾಟ್ ನ ಬುಡ ಕೆದರುತ್ತಾ, ಎಲೆ ಎಲೆಯ ಮಧ್ಯದಲ್ಲೂ ಏನಾದರೂ ಸಿಗಬಹುದಾ ಎಂದು ಹುಡುಕುವ ಮಂಗ ಮತ್ತದರ ಮರಿಯನ್ನು ನೋಡಿದಾಗ ಸಂಕಟವಾಗಿತ್ತು. ಹೊಟ್ಟೆ ಎನ್ನುವುದು ಇಲ್ಲದಿದ್ದರೆ ಜಗತ್ತು ನೆಮ್ಮದಿಯಾಗಿರುತಿತ್ತಾ ಅನ್ನಿಸಿದ್ದೂ ಹೌದು.

ಚೇಷ್ಟೆ ಮಾಡಿದಾಗಲೆಲ್ಲ ಕಪಿಬುದ್ಧಿ ಎಂದು ಅಜ್ಜಿ ಬೈಯುವುದು ಕೇಳಿದಾಗಲೆಲ್ಲ ನಗು, ಕುತೂಹಲ ಎರಡೂ. ನಿಧಾನಕ್ಕೆ ಶಹರದ ಬದುಕಿಗೆ ಒಗ್ಗಿದ, ಮನುಷ್ಯರಿಗೆ ಅಭ್ಯಾಸವಾದ ಮಂಗಗಳು ತಮ್ಮ ಅಸಲು ರೂಪ ತೋರಿಸಲು ಶುರುಮಾಡಿದ್ದವು. ಮೊದಮೊದಲು ಪೂರ್ಣ ಕತ್ತಲಾದ ಮೇಲೆ ಜನರು ಬಾಗಿಲು ಮುಚ್ಚಿ ಒಳಗೆ ಸೇರಿದ ಮೇಲೆ ನಿಧಾನಕ್ಕೆ ಇಳಿದು ಬಂದು ಮೊದಮೊದಲು ತಮಗೆ ಬೇಕಾದ್ದನ್ನು ಅರಸಿ ಸಿಗದೇ ಇದ್ದಾಗ ಪೆಚ್ಚು ಮುಖ ಮಾಡಿಕೊಂಡು ಹೋಗುತ್ತಿದ್ದ ಅವುಗಳು ಈಗ ಗಿಡವನ್ನು ಕಿತ್ತು ಎರಡು ಭಾಗ ಮಾಡಿ ಎಸೆಯುವುದು, ಮೊಗ್ಗು ಕಿತ್ತು ಅವುಗಳ ದಳಗಳನ್ನು ಉದುರಿಸಿ ಎಸೆಯುವುದು, ತರಕಾರಿಗಳನ್ನು ತಿಂದು ನೋಡಿ ಇಷ್ಟವಾಗದಿದ್ದರೂ ಎಲ್ಲವನ್ನೂ ಕಿತ್ತು ಬಿಸಾಡುವುದು, ಎಲೆಗಳನ್ನೆಲ್ಲಾ ಚಿಪ್ಪಳಿಸಿ ಹರಡುವುದು ಶುರುಮಾಡಿದ್ದವು. ಬೆಳಿಗ್ಗೆ ಎದ್ದು ಬಾಗಿಲು ತೆಗೆದರೆ ಕೈ ತೋಟ ಎನ್ನುವುದು ಅಕ್ಷರಶಃ ಯುದ್ಧ ಮುಗಿದ ರಣಾಂಗಣ. ಗಿಡಗಳು ಕೈ ಕಾಲು ಕಳೆದುಕೊಂಡು ಹಿಡಿ ಜೀವ ಉಳಿಸಿಕೊಂಡು ಬಿದ್ದಿರುವ ಸೈನಿಕರ ತರಹ.

ಅಲ್ಲಿಗೆ ಸಂಕಟದ ಜಾಗದಲ್ಲಿ ನಿಧಾನಕ್ಕೆ ಕೋಪವು ಜೊತೆಯಾಗ ತೊಡಗಿತು. ದಿನ ಕಳೆದಂತೆ ಒಗ್ಗಿಕೊಳ್ಳುತ್ತಾ, ಬೇರು ಬಿಡುತ್ತಾ ಹೋಗುವುದು ಕೇವಲ ಮನುಷ್ಯ ಸಹಜ ಸ್ವಭಾವ ಮಾತ್ರವಲ್ಲ ಪ್ರಾಣಿಗಳದ್ದೂ ಕೂಡ. ಆಮೇಲೆ ಹಗಲು ಹೊತ್ತಿನಲ್ಲೂ ಬರಲು ಶುರುಮಾಡಿದ ಅವುಗಳು ನಿಧಾನಕ್ಕೆ ಹೆದರಿಸಲು ಶುರು ಮಾಡಿ ವ್ಯಾಪಾರಕ್ಕೆ ಬಂದ ಬ್ರಿಟಿಷರು ದೇಶ ನಮ್ಮದು ಎಂದತೆ ಇವು ತಮ್ಮ ಜಾಗ ಎಂದು ಅಧಿಕಾರ ಚಲಾಯಿಸಲು ಶುರುಮಾಡಿದವು. ತಮ್ಮ ಮಾತು ಕೇಳದೆ ಇದ್ದವರ ಮೇಲೆ ಧಾಳಿ ಮಾಡಿದ ಅವರಂತೆ ಇವೂ ಕೂಡಾ ಆಕ್ರಮಣ ಮಾಡಿ ಅದರಲ್ಲೂ ಸ್ವಲ್ಪ ಹೆದರುವ ಮಕ್ಕಳು ಹಾಗೂ ಹೆಂಗಸರ ಮೇಲೆ ಅಟ್ಟಿಸಿಕೊಂಡು ಬರಲು ಶುರುಮಾಡಿ ಅವಿದ್ದರೆ ಹೊರಗೆ ಹೋಗದ ವಾತಾವರಣ.

ಮಂಗನಿಂದ ಮಾನವ ಅನ್ನುತ್ತೆ ವಿಜ್ಞಾನ. ನೋಡುತ್ತಾ ಹೋದರೆ ಬಹಳಷ್ಟು ಗುಣಗಳು ಹೌದು ಎನ್ನಿಸುವ ಹಾಗೆಯಿದೆ. ಇವು ಕೂಡಾ ಮನುಷ್ಯರ ಹಾಗೆ ಒಮ್ಮೆ ಸೋಮಾರಿತನಕ್ಕೆ, ಹೆದರಿಸಿ ತಿನ್ನುವುದಕ್ಕೆ, ಹಾಳುಮಾಡುವುದಕ್ಕೆ ಅಭ್ಯಾಸವಾದರೆ ಮತ್ತೆ ಕಷ್ಟವಾದರೂ ಬಿಡದೆ ಅದನ್ನೇ ಮುಂದುವರಿಸಿಕೊಂಡು ಹೋಗುತ್ತವೆ. ಇದು ಅನೇಕ ಪ್ರವಾಸಿ ಸ್ಥಳಗಳಲ್ಲಿ ಅನುಭವಕ್ಕೂ ಬರುತ್ತದೆ. ಅದಕ್ಕಿಂತ ಹೆಚ್ಚಾಗಿ ಇದು ಅನುಭವಕ್ಕೆ ಬರುವುದು ಹಳ್ಳಿಗಳಲ್ಲಿ. ಊರ ಮಂಗಗಳ ಕಾಟ ತಡೆಯಲಾರದೆ ಹಿಡಿದು ಕಾಡಿಗೆ ಬಿಟ್ಟಾಗ ಅವು ಅಲ್ಲಿಯ ಬದುಕಿಗೆ ಒಗ್ಗಿಕೊಳ್ಳದೇ ಮತ್ತೆ ಊರಿಗೆ ಹಿಂದಿರುಗುತ್ತವೆ.

ಮೊದಲೆಲ್ಲಾ ಅಡಿಕೆ ಕಾಯಿ ತಿನ್ನದ, ಮನೆಯ ಬಳಿ ಸುಳಿಯದ ಅವು ಈಗ ಅಲ್ಲಿಯೇ ಹೋಗಿ ತಿನ್ನಲು ಬರದಿದ್ದರೂ ಎಲ್ಲವನ್ನೂ ಕಿತ್ತು ಕೆಳಕ್ಕೆ ಎಸೆಯುತ್ತವೆ. ಮನೆಯ ಹತ್ತಿರ ಹಾಕಿದ ತರಕಾರಿಯನ್ನೂ ಬಿಡದೆ ನಾಶ ಮಾಡುತ್ತವೆ. ಕೃಷಿ ಮಾಡುವುದಕ್ಕಿಂತ ಸುಮ್ಮನಿರುವುದೇ ಮೇಲು ಅನ್ನಿಸುವ ಪರಿಸ್ತಿತಿ ನಿರ್ಮಾಣವಾಗಿದೆ. ಇವುಗಳನ್ನು ಹೊಡೆಯಲು ಅಂಜನೇಯ ಕುಲದವರು ಅನ್ನುವ ಮಮಕಾರ. ಭಯವಿಲ್ಲದಿದ್ದರೆ ಇವೂ ಮನುಷ್ಯನ ತರವೇ. ಏನು ಬೇಕಾದರೂ ಮಾಡಿ ಮತ್ತೆ ಅವರನ್ನೇ ಹೆದರಿಸಿ ಹೋಗುತ್ತವೆ. ಈಗ ಅವೂ ಸಹ ಮನುಷ್ಯನ ಆಹಾರ ಪದ್ದತಿಗೆ ಒಗ್ಗಿಕೊಂಡು ತಮ್ಮತನ ಮರೆಯುವ ಹಂತಕ್ಕೆ ಬಂದಿವೆ.

ಪ್ರಕೃತಿಯ ಸಹಜ ಚಲನೆಯಲ್ಲಿ ನಾವು ಮಾಡುವ ಒಂದು ಚಿಕ್ಕ ತಪ್ಪು ಕೂಡಾ ಏನೆಲ್ಲಾ ದೊಡ್ಡ ಪರಿಣಾಮಗಳಿಗೆ ಕಾರಣವಾಗುತ್ತದೆ ಎಂದು ಗಮನಿಸಿದರೆ ನಾವು ಅದರ ಮೇಲೆ ಮುಂದುವರಿಸಿರುವ ದೌರ್ಜನ್ಯ ಅವಲೋಕಿಸಿದರೆ ಅಪಾಯ ಬೇರೆಲ್ಲೋ ಇಲ್ಲ ನಮ್ಮ ಮನೆಯಂಗಳದಲ್ಲೇ ಇದೆ ಎನ್ನುವುದು ಅರ್ಥವಾಗುತ್ತದೆ. ಅವುಗಳಿಗೆ ಮನುಷ್ಯನ ಹಾಗೆ ಪ್ರಜ್ಞಾಪೂರ್ವಕವಾಗಿ ಮಾಡುವ ಶಕ್ತಿಯಿಲ್ಲ. ಅದಿರುವ ಮನುಷ್ಯನಿಗೆ ಪ್ರಜ್ಞೆಯೇ ಇಲ್ಲ...

ಇವತ್ತು ಮಂಗಗಳ ದಿನವಂತೆ. ಅದರ ಬಗ್ಗೆ ಮರುಕ ಪಡಬೇಕೋ, ಇಲ್ಲಾ ಹೊರಗೆ ಕಾಲಿಡಲೂ ಆಗದಂತೆ ಮಾಡಿದ ಅವುಗಳ ಬಗ್ಗೆ ಕೋಪ ಪಡಬೇಕೋ ಗೊತ್ತಾಗದ ಗೊಂದಲ. ಒಂದು ಕೊಂಡಿ, ಒಂದು ತಪ್ಪು ಅಂದ್ಕೊತಿವಿ... ಉಹೂ ಇಲ್ಲಿ ಎಲ್ಲವೂ ಒಂದಕ್ಕೊಂದು ಸಂಬಂಧ ಪಟ್ಟಿದೆ ಅನ್ನೋದು ಮರತೇ ಬಿಡ್ತಿವಿ.

Comments

Popular posts from this blog

ಮಾತಂಗ ಪರ್ವತ

ರಂಜದ ಹೂ

ಬರಿದೆ ಆಡುವ ಮಾತಿಗರ್ಥವಿಲ್ಲ...