ವಯಸ್ಸಾದಂತೆ ಮಕ್ಕಳ ಹಾಗೆ ಆಗ್ತಾರೆ ಅನ್ನೋದು ಕೇಳಿ ಅಪನಂಬಿಕೆಯಲ್ಲಿ ನಕ್ಕಿದ್ದ ನನ್ನನ್ನು ಕಂಡು ಹಾಗಲ್ಲ ಪುಟ್ಟಿ ಅರವತ್ತು ವರ್ಷಕ್ಕೆ ದೇಹದೊಳಗೆ ಬದಲಾವಣೆ ಆಗುತ್ತೆ, ಅದೊಂತರ ಸಂಧಿಕಾಲ, ಹಾಗಾಗಿಯೇ ಅರವತ್ತು ವರ್ಷಕ್ಕೆ ಶಾಂತಿ ಮಾಡೋದು ಅಂತ ಅಣ್ಣ ಹೇಳಿದಾಗ ತಲೆಯಾಡಿಸಿದ ನಂಗೆ ನಿನ್ನ ನೋಡಿದ ಕೂಡಲೇ ನಿಜವೆನ್ನಿಸಿತ್ತು ನೋಡು. ದೇಹವೂ ಕುಗ್ಗಿ ಪುಟ್ಟ ಮಗುವಿನ ಹಾಗೆ ಕಾಣುತಿದ್ದೆ. ಎತ್ತಿಕೊಂಡು ಹೋಗಬಹುದು ನಿನ್ನನ್ನ ಅಂದರೆ ನಗುತ್ತಾ ವಯಸ್ಸಾಯ್ತಲ್ಲೇ ಅಂತ ಬೊಚ್ಚು ಬಾಯಿ ಬಿಟ್ಟು ನಗುವಾಗಲೆಲ್ಲ ಮಗು ನಕ್ಕಂತೆ ಅನ್ನಿಸುತಿತ್ತು ನೋಡು.

ಮೈಕೈ ಎಲ್ಲಾ ನೋವು ಕಣೆ ಅಂತ ನೀನು ಕಾಲು ಚಾಚಿದರೆ ಪುಟ್ಟ ಸವೆದ ಪಾದಗಳು, ಚರ್ಮದ ನೆರಿಗೆಗಳು ನೀನು ಸವೆಸಿದ ದೂರವನ್ನು ಸರಿಯಾಗಿ ಹೇಳುತ್ತಿದ್ದವೇನೋ. ನೀನು ಮರೆತರೂ ಅವು ಮರೆತಿರಲಿಲ್ಲ ನೋಡು. ನಿನ್ನ ಬದುಕಿನ ದಾರಿಯಾದರೂ  ಅಷ್ಟು ಸುಲಭವಿತ್ತೆ ಮರೆಯಲು. ಅದೇಗೆ ನಡೆದು ತಲುಪಿದೆಯೋ ಅಂತ ಯೋಚಿಸಿದರೆ ಈಗಲೂ ಕಣ್ಣಲ್ಲಿ ಅಚ್ಚರಿ ಹಾಗೂ ಅಣೆಕಟ್ಟು ಎರಡೂ ತುಂಬಿ ಹರಿಯುತ್ತೆ ನೋಡು. ಬರೆದರೆ ಮಹಾಗ್ರಂಥವಾಗುತಿತ್ತೇನೋ ಅಷ್ಟನ್ನು ಎದೆಯೊಳಗೆ ಅಡಗಿಸಿಟ್ಟು ಕೊಂಡಿದ್ದೆಯಲ್ಲ ಅದು ಹೇಗೆ ಮಾರಾಯ್ತಿ?

ನೀನು ಅನುಭವಿಸಿದ ಅವಮಾನ, ಕೇಳಿದ ಮಾತು, ಹಲ್ಲು ಕಚ್ಚಿ ಸಹಿಸಿದ ಪರಿಸ್ಥಿತಿ ಅದು ಹೇಗೆ ಒಡಲೊಳಗೆ ಕಿಚ್ಹಾಗಿತ್ತು ಅನ್ನೋದು ಅರ್ಥವಾಗಿದ್ದು ಮರುದಿನ ಬೆಂಕಿದೂಡಲು ಹೋದಾಗಲೇ ನೋಡು. ಒಂದು ಚೂರು ಕಟ್ಟಿಗೆಯೂ ದೊರಕದೆ ಉರಿದು ಬೂದಿಯಾಗಿದ್ದೆಯಲ್ಲೇ. ದಹಿಸಿದ್ದು ಹೊರಗಿನ ಬೆಂಕಿಯಾ ಒಳಗಿನ ಕಿಚ್ಚಾ.. ನಿನ್ನ ಒಡಲ ಕಾವಿನ ಮುಂದೆ ಈ ಬೆಂಕಿಯೂ ಶರಣಾಗಿತ್ತು ಅನ್ನೋದಕ್ಕೆ ಸಾಕ್ಷಿ ಹಾಗೂ ನಿನ್ನ ಬೂದಿಯಾಗಿಸಿದ್ದು ಯಾರು ಅನ್ನೋದಕ್ಕೆ ಮೂರನೇ ದಿನ ಉತ್ತರ ಕೊಟ್ಟೇಬಿಟ್ಟೆ ನೋಡು. ನೀನು ಯಾವತ್ತೂ ಯಾವ ಪ್ರಶ್ನೆಯನ್ನೂ ಹಾಗೆ ಉಳಿಸಿದವಳೇ ಅಲ್ಲ.

ಎಂದೂ ಇಲ್ಲದ ಸೂರ್ಯ ಅವತ್ತು ಧಗಧಗಿಸುತಿದ್ದ. ಅಳಿದುಳಿದ ನಿನ್ನ ಅಸ್ಥಿ ಸಂಚಯನಕ್ಕಾಗಿ ನಿನ್ನ ಮಕ್ಕಳು ಅವನ ಅಡಿಯಲ್ಲಿ ಕುಳಿತಿದ್ದರು. ಅದೆಷ್ಟು ನೀರು ಸುರಿದರೂ ಕಾವು ಮೇಲಕ್ಕೇಳುತ್ತಲೇ ಇತ್ತಲ್ಲೇ. ಅದೆಷ್ಟು ಕಿಚ್ಚು ಒಳಗಿತ್ತೇ ಮಹರಾಯ್ತಿ, ಶಾಸ್ತ್ರಕ್ಕೆ ಎಂಬಂತೆ ಉಳಿದಿದ್ದ ನಿನ್ನ ಅಸ್ತಿಯನ್ನು ಆರಿಸಿದ ನಿನ್ನ ಮಕ್ಕಳ ಕೈ ಚರ್ಮ ಆ ಕಾವಿನ ಲೆಕ್ಕ ಕೊಟ್ಟಿತ್ತು ನೋಡು. ಒಂದು ಕ್ಷಣವೂ ಅಲ್ಲಿ ನಿಲ್ಲಲಾರದೆ ನಾನು ಬಂದರೆ ಇಡೀ ಜೀವನದುದ್ದಕ್ಕೂ ಅದನ್ನು ಹೊತ್ತು ಅದ್ಹೇಗೆ ಶಾಂತಳಾಗಿದ್ದಿ ಅನ್ನೋದನ್ನ ಯೋಚಿಸಿದರೆ ಆ ಪುಟ್ಟ ದೇಹದಲ್ಲಿದ್ದ ಆ ದೊಡ್ಡ ಧೀ ಶಕ್ತಿಗೆ ನಮಸ್ಕರಿಸಬೇಕೆನಿಸಿತು. ಎಲ್ಲಿಗೆ ನಮಸ್ಕಾರ ಮಾಡಲೇ...

ಬದುಕಿನುದ್ದಕ್ಕೂ ಅದರೊಟ್ಟಿಗೆ ಬಡಿದಾಡುತ್ತಲೇ ಬಂದವಳು ನೀನು. ಆ ಬದುಕೂ ಸೋತು ಮಂಡಿಯುರಿತೇನೋ ನೋಡು ಹಾಗಾಗಿ ಅನಾಯಾಸೇನ ಮರಣಂ ಅನ್ನೋದಕ್ಕೆ ಅನ್ವರ್ಥಕವಾಗಿ ಒಂದು ಸುಳಿವೂ ಕೊಡದೆ ನಿದ್ದೆಯಲ್ಲೇ ನಡೆದುಬಿಟ್ಟೆಯಲ್ಲೇ.. ಒಂದು ಕ್ಷಣ ಕೂರಲೂ ಮನಸ್ಸು ಮಾಡದವಳ ಕಂಡು ಸಾವಿಗೂ ಈ ಒಂದು ವಿಷ್ಯದಲಾದರೂ ನಿನ್ನ ಸತಾಯಿಸುವುದು ಬೇಡವೆನಿಸಿತೇನೋ.. ಬದುಕು ಅಷ್ಟರ ಮಟ್ಟಿಗೆ ನಿನ್ನ ವಿಷಯದಲ್ಲಿ ದಯಾಳು ನೋಡು.

ಶ್ರೀ ರಾಮ ಜಯರಾಮ ಜಯಜಯ ರಾಮ ಅನ್ನೋದು ನಿಂಗೆ ಗೊತ್ತಿದ್ದ ಒಂದೇ ಮಂತ್ರ ನೋಡು. ಬದುಕಿನುದ್ದಕ್ಕೂ ಅದನ್ನೇ ಜಪಸಿದವಳು ನೀನು. ಅಷ್ಟೂ ಪುಣ್ಯವನ್ನು ಸಾವಿಗಾಗಿ ಗಂಟು ಕಟ್ಟಿ ಇಟ್ಟಿದ್ದೆಯೇನೋ ಅನ್ನುವಹಾಗಾಯ್ತು ನೋಡು. ಸದ್ದೇ ಇಲ್ಲದಂತೆ ಎದ್ದು ಹೊರಟುಬಿಟ್ಟೆ. ಬಡತನ ನಿನಗೆಷ್ಟು ಅಚ್ಚುಕಟ್ಟು ಕಲಿಸಿತ್ತು ಅನ್ನೋದು ನಿನ್ನ ಪೆಟ್ಟಿಗೆ ತೆರೆದಾಗಲೇ ಗೊತ್ತಾಗಿದ್ದು. ಸುಕ್ಕು ನಿನ್ನ ಚರ್ಮದಲ್ಲಿ ಇದ್ದಿದ್ದು ಬಿಟ್ಟರೆ ಬದುಕಲ್ಲಿ ಒಂದೂ ಸುಕ್ಕು ಇಲ್ಲದಂತೆ ಕಳೆದೆಯಲ್ಲ, ಈ ಅಚ್ಚುಕಟ್ಟುತನವನ್ನಾದರೂ ಬಿಟ್ಟು ಹೋಗಬಾರದಿತ್ತಾ...

ಅಜ್ಜಿ ಸಾಕಿದ ಮಕ್ಕಳು ಬೊಜ್ಜಕ್ಕೂ ಬಾರಾ ಅನ್ನೋ ಹಾಗೆ ಆಗಬಾರದು ಕಣೆ ಅಂತ ಬೈಯುತ್ತಲೇ ಕೆಲಸ ಕಲಿಸಿದವಳು ನೀನು. ಇವತ್ತು ಇದು ಬರೋಲ್ಲ ಅನ್ನುವ ಸಂಕೋಚ ಹಿಂಜರಿಕೆ ನನ್ನ ಬಳಿ ಸುಳಿಯಲೇ ಇಲ್ಲ ನೋಡು. ನಾನು ಗಟ್ಟಿಯಿರಬೇಕಾದರೆ ನಿಂದೊಂದು ಬಾಣಂತನ ಮುಗಿಸ್ತೀನಿ ಏನೂ ತಲೆಹರಟೆ ಮಾಡಬೇಡ ಅಂತ ಗದರಿ ಬಂದವಳಿಗೆ ನನ್ನ ಮಗಳದ್ದೂ ನೀನೆ ಮಾಡ್ತಿ ನೋಡು ಅಂತ ನಕ್ಕಿದ್ದೆ. ಮನೆಗೆ ಬರುತ್ತಿದ್ದ ಹಾಗೆ ಡಾಕ್ಟರ್ ಕೊಟ್ಟ ಮೆಡಿಸಿನ್ ಕಸಕ್ಕೆ ಎಸೆದವಳೇ ನಿನ್ನ ಗಂಟನ್ನು ಬಿಚ್ಹಿದ್ದೆ, ಹಾಗಾಗಿಯೇ ಏನೋ ನೋಡು ಇವತ್ತಿಗೂ ಗಟ್ಟಿಯಾಗಿದ್ದೇನೆ.  ಏನಾದರೂ ಬದುಕಬಲ್ಲೆ ಅನ್ನೋ ಆತ್ಮವಿಶ್ವಾಸ ಕಲಿಸಿದವಳು ಎಲ್ಲರೂ ಗಟ್ಟಿಯಾಗಿ ನೆಲೆನಿಂತರು ಅನ್ನೋದು ಕನ್ಫರ್ಮ್ ಆದ ಕೂಡಲೇ  ಒಂದು ಮಾತೂ ಹೇಳದೆ ಹೊರಟೇ ಹೋದೆಯಲ್ಲೇ..

ತಂದರೆ ಆಗೊಲ್ಲವೇನೆ ಯಾಕೆ ಅಷ್ಟು ಕಷ್ಟಪಟ್ಟು ಬತ್ತಿ ಮಾಡ್ತಿ ಅಂದ್ರೆ  ಬತ್ತಿ ಬಳುಕಬಾರದು ಕಣೆ, ಗಟ್ಟಿಯಾಗಿ ಉರಿಯಬೇಕು, ಉರಿಯುವುದು ಬರೀ ದೀಪವಲ್ಲ ನನ್ನ ಬದುಕು ಅನ್ನೋದು ಬೆರಳಿನ ಬಿಸುಪಿನ ಮೂಲಕ ಅವನಿಗೆ ತಲುಪಬೇಕು, ಇಷ್ಟೂ ಮಾಡದಿದ್ದರೆ ಅವನಿಗೆ ಅರ್ಥವಾಗುವುದಾದರೂ ಹೇಗೆ ಅಂತ ನಗುತ್ತಿದ್ದವಳು ಬದುಕಲ್ಲೂ ಬಳುಕಬಾರದು ಅನ್ನೋ ಪಾಠ ಹೇಳುತಿದ್ದೆ ನೋಡು ಅದು ಈಗ ಅರ್ಥವಾಗುತ್ತಿದೆ. ದೇವರ ಮನೆಯಲ್ಲಿಟ್ಟ ಬತ್ತಿ ಕೈಗೆತ್ತಿ ಕೊಂಡರೆ ನಿನ್ನ ಕೈ ಬಿಸುಪು ತಾಗುತ್ತದೆ ನೋಡು.
ಬರುವಾಗ ಬೆಳದಿಂಗಳ ನೀರವ ರಾತ್ರಿಯಲ್ಲಿ ಇಳಿದು ಅಲ್ಲೆಲ್ಲಾದರೂ ಇರಬಹುದಾದ ನಿನ್ನ ಹೆಜ್ಜೆಯ ಗುರುತನ್ನು ಆಯ್ದು ತರಬೇಕು ಅನ್ನೋ ಆಸೆಯನ್ನು ಬಲವಂತವಾಗಿ ಅದುಮಿ ಅದ್ಹೇಗೆ ಬಂದೆ ಅನ್ನೋದು ಈ ಕ್ಷಣಕ್ಕೂ ಅರ್ಥವಾಗಿಲ್ಲ ನೋಡು. ಎತ್ತ ತಿರುಗಿದರೂ, ಏನೂ ನೋಡಿದರೂ ಅಲ್ಲೆಲ್ಲಾ ನಿನ್ನ ಗುರುತುಗಳೇ, ಹಚ್ಚಿಟ್ಟ ನೆನಪುಗಳೇ. ಎಲ್ಲವುಗಳಲ್ಲೂ ನೀನಿದ್ದಿ ಆದರೆ ಇಲ್ಲ.ಬರೆದಷ್ಟೂ ಮುಗಿಯದ ನಿನ್ನ ನೆನಪುಗಳ ನಡುವೆಯೂ ಒಂದು ಕೊಂಡಿ ಕಳಚಿಕೊಂಡಿದೆ. ಒಂದು ತಲೆಮಾರಿಗೆ ಕೊಂಡಿಯಾಗಿ ಬೆಸೆದವಳು ಇವತ್ತು ಕಳಚಿಕೊಂಡಿದ್ದೆ. ನಿನ್ನೊಂದಿಗೆ ಕಳೆದು ಹೋಗುವುದು, ಮರೆತು ಹೋಗುವುದು ಇನ್ನೆಷ್ಟೋ...

ಒಂದು ಸಾವು ಅದೆಷ್ಟು ಸಾವುಗಳ ಮುನ್ನುಡಿ ಮಾರಾಯ್ತಿ...  ನಿನ್ನಿಂದ ಪಡೆದಿದ್ದು ಬಹಳಷ್ಟು ಈಗ ಕಳೆದು ಕೊಂಡಿರುವುದು ಲೆಕ್ಕಕ್ಕೆ ನಿಲುಕದಷ್ಟು. ಆದರೂ ನೀನು ಎದ್ದು ಹೋದ ರೀತಿಯೇ ನೀನು ಬದುಕಿದ್ದ ಪರಿಗೆ ಉದಾಹರಣೆ. ಇದೊಂದು ವಿಷಯದಲ್ಲಾದರೂ ನಿನ್ನ ಮೊಮ್ಮಗಳು ಹೀಗೆ ಆಗಲಿ ಅಂತ ಅಲ್ಲಿಂದಲೇ ಆಶೀರ್ವಾದ ಮಾಡ್ತಿಯಲ್ಲ... 

Comments

Popular posts from this blog

ಮಾತಂಗ ಪರ್ವತ

ರಂಜದ ಹೂ

ಬರಿದೆ ಆಡುವ ಮಾತಿಗರ್ಥವಿಲ್ಲ...