ಯೋಳ್ತೀನಿ ಕೇಳಿ

ನೆಟ್ವರ್ಕ್ ಇಲ್ಲದ ಜಾಗಕ್ಕೆ ಹೋಗಬೇಕು ಎಲ್ಲಿದೆ ಹೇಳಿ ಅಂತ ಜಾಗ ?

ಕುಸುಮ್  ಗೆ  ಹಾ.ಮಾ.ನಾ ಪ್ರಶಸ್ತಿ ಬಂದ ಸಂಭ್ರಮಕ್ಕೆ ತಕ್ಷಣ ತೋಚಿದ್ದು ಯೋಳ್ತೀನಿ ಕೇಳಿ ಅನ್ನೋ ಮಾತಿಗೆ ಕಣ್ಣಾಗುವ, ಕಿವಿಯಾಗುವ ಆಸೆ. ಮೊದಲಿಂದಲೂ ಅವರ ಬರಹದ ಕಡೆಗೆ ನನ್ನದು ಸಣ್ಣ ಹೊಟ್ಟೆಕಿಚ್ಚೇ.  ಅವರ ನೋಟ ಸೂಕ್ಷ್ಮ ಮಾತ್ರವಲ್ಲ ಹಾಗೆ ಕಂಡಿದ್ದನ್ನ ದಾಟಿಸುವ ಕಲೆಯಿದೆಯಲ್ಲ ಅದು ಸೀದಾ ಎದೆಯೊಳಕ್ಕೆ ಇಳಿಯುತ್ತದೆ. ಇಳಿಯುತ್ತಾ ಇಳಿಯುತ್ತಾ ಅಗೆಯುತ್ತದೆ. ಬೀಜ ಬಿತ್ತುವ ಮುನ್ನ ಹೊಲವನ್ನು ಅಗೆದು ಸಿದ್ದಗೊಳಿಸುವ ಹಾಗೇ.

ಅವರು ಮತ್ತಷ್ಟು ಆಪ್ತ ಅನ್ನಿಸೋದು ಬಹುಶಃ ಅವರು ಊರಿನ ಬಗ್ಗೆ ಮಾತಾಡುವುದಕ್ಕೆನೋ.. ಊರು ಸೆಳೆದಷ್ಟು, ಇಳಿದಷ್ಟು, ಒದ್ದೆಯಾಗಿಸುವಷ್ಟು ಇನ್ಯಾವುದು ಮಾಡಬಲ್ಲದು. ಆಗೆಲ್ಲಾ ಈ ಸಾಲು ನೆನಪಾಗುತ್ತೆ. " ಮೇಲೆ ಹಾರಿ ನಿನ್ನ ಸೆಳೆತ ಮೀರಿ" ಉಹೂ ಎಷ್ಟು ಮೇಲಕ್ಕೆ ಏರಿದರೂ, ದೂರ ಹೋದರೂ ಊರಿನ ಸೆಳೆತ ಜಗ್ಗುತ್ತಿರುತ್ತದೆ. ಹಾಗೆ ಜಗ್ಗುವುದು ನಿಂತ ಕ್ಷಣ ಉಸಿರೂ ನಿಂತಿರುತ್ತದೆ. ಇಲ್ಲಿ ಕೇವಲ ಊರಿನ ಬಗ್ಗೆ ಕೇವಲ  ಭಾವುಕತೆಯಿಲ್ಲ,  ಸಣ್ಣ ಸಣ್ಣ ಘಟನೆಗಳನ್ನ ಬಿಡಿಸಿಡುತ್ತಾ, ಆ ಸಣ್ಣ ಘಟನೆಯೂ ಮತ್ಯಾವುದೋ ದೊಡ್ಡ ಘಟನೆಗೆ ಕೊಂಡಿಯಾಗಬಹುದು ಅನ್ನೋದನ್ನ ಬಿಡಿಸಿಡುತ್ತಾರೆ.

ಬೆಂಗಳೂರಿನ ಮೋಹ, ಇಂಗ್ಲಿಷ್ ಭಾಷೆಯ ಮೇಲಿನ ವ್ಯಾಮೋಹ, ಸುಲಭವಾದ್ದು ಬೇಕು ಎಂದು ಹೊಸತನಕ್ಕೆ ಮಾರು ಹೋಗಿ ಕಳೆದುಕೊಳ್ಳುತ್ತಿರುವ ಸಂಗತಿಗಳು,  ಉದಾಸೀನ ಹಾಗೂ ನಿರ್ಲಕ್ಷ್ಯ, ಮುಂದೆ ಸಾಗಿದ್ದೇವೆ ಅನ್ನೋ ಹಮ್ಮಿನಲ್ಲಿ ಹಿಂದಿರಿಗೆ ನೋಡಿದರೆ ಮತ್ತದೇ ಅಪ್ಡೇಟ್ ಆದ ಮೌಡ್ಯಗಳ ನೆರಳು, ಜಾತಿಯ ಅಹಂ, ಓದಿನ ಕಿರೀಟದ ಭಾರದಲ್ಲಿ ಬಗ್ಗದ ತಲೆ, ಮಾನವೀಯತೆ ಹೆಸರಿನಲ್ಲಿನ ಅಮಾನುವೀಯತೆ, ಇರುವುದೆಲ್ಲವ ಬಿಟ್ಟು ಇನ್ನೆನ್ನಕ್ಕೋ ತುಡಿಯುವ ಬದುಕು, ಇತ್ತಲೂ ಇರಲಾಗದೆ ಅತ್ತಲೂ ಹೋಗಲಾಗದ ತ್ರಿಶಂಕು ಸ್ಥಿತಿ, ಇನ್ಯಾರೋ ಬಂದು ಮಾಡಬೇಕು ಅನ್ನೋ ಮನಸ್ಥಿತಿ...... ಹೀಗೆ ಹತ್ತು ಹಲವು ಬದುಕಿನ, ಮನಸಿನ ಮುಖಗಳನ್ನು ಬಿಡಿಸಿಡುತ್ತಾ ಹೋಗಿದ್ದಾರೆ.

ಹಾಗೆ ಬಿಡಿಸಿಡುವಲ್ಲಿ ಉದ್ವೇಗವಿಲ್ಲ, ಆವೇಶವಿಲ್ಲ. ಇದ್ದದ್ದು ಇದ್ದ ಹಾಗೆ ಹೇಳುತ್ತಾ ಹೋಗಿದ್ದಾರೆ. ಹೀಗೆ ಬಿಡಿಸಿಡುವ ಹತ್ತು ಹಲವು ಮುಖಗಳಲ್ಲಿ ಆಗಾಗ ನಮ್ಮ ಮುಖವೂ ಕಂಡು ಬೆಚ್ಚಿ ಬೀಳುವ ಹಾಗಾಗುತ್ತದೆ. ಆ ಕನ್ನಡಿಯಲ್ಲಿ ನೋಡಿಕೊಳ್ಳುತ್ತಾ ಒಂದಷ್ಟು ಸರಿ ಮಾಡಿಕೊಳ್ಳುವ ಪ್ರಕ್ರಿಯೆ ಕೂಡಾ ಅರಿವಿಲ್ಲದೆ ಓದಿನ ಜೊತೆ ಜೊತೆಗೆ ನಡೆಯುತ್ತಾ ಹೋಗುತ್ತದೆ. ಸಮಸ್ಯೆಯನ್ನಷ್ಟೇ ಹೇಳದೆ ಅದರ ಅನೇಕ ಮಗ್ಗುಲುಗಳ ಅನಾವರಣ ಮಾಡುತ್ತಾ ಉತ್ತರ ಹುಡುಕುವುದನ್ನ ಮಾತ್ರ ನಮಗೆ ಬಿಟ್ಟಿದ್ದಾರೆ. ಅವರವರ ಅನುಭವ, ಆಳಕ್ಕೆ ದಕ್ಕಿದಂತೆ ಇದೂ ತೆರೆದುಕೊಳ್ಳುತ್ತಾ ಹೋಗುತ್ತದೆ.

ಸಮಯದ ಉಳಿತಾಯಕ್ಕೆ ಆವಿಷ್ಕಾರವಾದ ಯಂತ್ರಗಳು ಬಂದರೂ ಉಳಿದ ಸಮಯ ಹೇಗೆ ಉಪಯೋಗಿಸಿಕೊಳ್ಳುತ್ತಿದ್ದಿವಿ ಅನ್ನೋದನ್ನ ಬಿಡಿಸಿದುತ್ತಲೇ ಆಸ್ಪತ್ರೆ ಅನ್ನೋದು ಹೇಗೆ ಉದ್ಯಮವಾಗಿ ಬೆಳೆದಿದೆ ಅನ್ನೋ ಕರಾಳ ಸತ್ಯವನ್ನು ಬಿಡಿಸಿಡುತ್ತಾ ಹೋಗಿ ವಿಭಿನ್ನವಾದ ಪ್ರದೇಶಗಳು ಏಕವಾದಾಗ ಆಗುವ ಅನಾಹುತದ ಕಡೆ ಬೆಳಕು ಚೆಲ್ಲಿದ್ದಾರೆ. ನಮ್ಮದೇ ಕಸುಬು ಬರುಬರುತ್ತಾ ಹೇಗೆ ನಮ್ಮಿಂದ ಕಳಚಿಕೊಂಡು ವ್ಯರ್ಥ ಅನ್ನಿಸಿಕೊಂಡಿದ್ದು ಇನ್ಯಾವುದೋ ಸುಂದರ ಪ್ಯಾಕ್ ಆಗಿ ಬಂದಾಗ ಅದನ್ನು ಅಪ್ಪುವ ನಮ್ಮ ಮೂರ್ಖತನ, ಒಂದು ಕಾಲದಲ್ಲಿ ಹೀಯಾಳಿಕೆಗೆ ಗುರಿಯಾಗಿದ್ದ ಬಟ್ಟೆ ಇನ್ಯಾವುದೋ ಹೆಸರಿನಲ್ಲಿ ರೂಪಾಂತರಗೊಂಡು ಬಂದಾಗ ಇಡೀ ಸಮೂಹವೇ ಅದರ ಸನ್ನಿಯನ್ನು ಅವಾಹಿಸಿಕೊಂಡು ಮೆರೆಯುವ ಮರೆಗುಳಿತನ ಹಾಗಾದರೆ ಯಾವುದು ಹೊಸತು ಯಾವುದು ಹಳತು ಎಂದು ಕೇಳುತ್ತಲೇ ಒಂದು ಕಾಲಕ್ಕೆ ಅವಮಾನವಾಗಿದ್ದು ಇನ್ನೊಂದು ಕಾಲಕ್ಕೆ ಸಮ್ಮಾನವಾಗಿ ಹೆಮ್ಮೆಯಾಗಿ ಬದಲಾಗುವುದನ್ನ ಹೇಳುತ್ತಾ ಬದಲಾಗಿದ್ದು ಕಾಲವಾ ಅಥವಾ ಮನಸ್ಥಿತಿಯಾ ಅನ್ನೋ ಪ್ರಶ್ನೆ ಕಾಡುವ ಹಾಗೆ ಮಾಡಿಬಿಡುತ್ತಾರೆ.

ಏನೇ ಆದರೂ, ಎಷ್ಟೇ ಬೆಳೆದರೂ. ಮತ್ತೇನೆ ಗಳಿಸಿದರೂ  ಬಡತನ, ಕೌಟುಂಬಿಕ ಹಿನ್ನಲೆ, ಜಾತಿ, ಇತ್ಯಾದಿ ಇತ್ಯಾದಿ ಹೇಗೆ ಹೋದ ಕಡೆಯಲೆಲ್ಲಾ ಹಿಂಬಾಲಿಸಿ ನಮ್ಮನ್ನು ಕಾಡಿಬಿಡುತ್ತವೆ, ಕಪಿ ಮುಷ್ಟಿಯಲ್ಲಿ ಬಂಧಿಸಿ ಆಟವಾಡಿಸುತ್ತದೆ ಅನ್ನುವುದನ್ನ ಹೇಳುವ ಕುಸುಮಾ ನೆಟ್ವರ್ಕ್ ಇಲ್ಲದ ಜಾಗಕ್ಕೆ ಹೋಗಬೇಕು ಎಲ್ಲಿದೆ ಹೇಳಿ ಅಂತ ಜಾಗ ? ಅಂತ ಪ್ರಶ್ನಿಸಿ ಸುಮ್ಮನಾಗುತ್ತಾರೆ.
ಹುಡುಕುವ ಉತ್ತರಿಸುವ ಜವಾಬ್ದಾರಿ ನಮ್ಮ ಮೇಲೆ ಬಿಟ್ಟು.....  ಯೋಳ್ತೀನಿ ಕೇಳಿ ಅಂತ ಅಷ್ಟೊತ್ತು ಆಪ್ತವಾಗಿ ಎದುರಿಗೆ ಕೂತು ಮಾತಾಡಿದ ಕುಸುಮ್ ಎಷ್ಟು ದೊಡ್ಡ ಪ್ರಶ್ನೆಯನ್ನು ಬಿಟ್ಟು ಹೋಗಿದ್ದಾರೆ ಅಂತ ಅರ್ಥವಾಗೋದು ಅವರು ಎದ್ದು ಹೋದ ಮೇಲೆ ಉಳಿದ ಮೌನದಲ್ಲಿ...

ಮೌನಕ್ಕೆ ವ್ಯಾಖ್ಯೆ ಎಲ್ಲಿದೆ........

Comments

Popular posts from this blog

ಮಾತಂಗ ಪರ್ವತ

ರಂಜದ ಹೂ

ಬರಿದೆ ಆಡುವ ಮಾತಿಗರ್ಥವಿಲ್ಲ...